ಶುಕ್ರವಾರ, ಸೆಪ್ಟೆಂಬರ್ 25, 2020
24 °C

ಸಂಘರ್ಷಗಳ ಬದುಕಿನ ಸಂಜೆ ನೋಟ

ಅರವಿಂದ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

Prajavani

ಕೃತಿ: ಕಾಗೆ ಮುಟ್ಟಿದ ನೀರು
ಲೇ: ಡಾ. ಪುರುಷೋತ್ತಮ‌ ಬಿಳಿಮಲೆ
ಪ್ರ: ಅಹರ್ನಿಶಿ ಪ್ರಕಾಶನ, ಶಿವಮೊಗ್ಗ
ಪು: 304 ಬೆಲೆ: ₹300

‘ನನ್ನ ಅಪ್ಪ, ಅವರ ಅಪ್ಪನ ಮೊದಲನೇ ಹೆಂಡತಿಯ ಮಗ. ಅಪ್ಪನನ್ನು ಹೆರಲು ಪರಮಲೆಯಲ್ಲಿರುವ ತನ್ನ ತೌರುಮನೆಗೆ ಹೋದ ಅಜ್ಜಿಯು ಸುರಿವ ಭಾರೀ ಮಳೆಯಿಂದಾಗಿ, ನಿಗದಿಪಡಿಸಿದ ದಿನದಂದು ಗಂಡನ ಮನೆಗೆ ಹಿಂದಿರುಗದಾದಳು...’

ಪುರುಷೋತ್ತಮ‌ ಬಿಳಿಮಲೆಯವರ ಆತ್ಮಕಥೆ, ‘ಕಾಗೆ ಮುಟ್ಟಿದ ನೀರು’ ಕೃತಿಯ ಈ ಪ್ರಾರಂಭವೇ ಒಂದು ನಿಗೂಢ ಲೋಕವನ್ನು ಹೊಕ್ಕ ಅನುಭವವನ್ನು ಕೊಡುತ್ತದೆ. 65 ವರ್ಷಗಳ ಹಿಂದೆ ಹೋಗಿ ನಿಂತು, ಅದಕ್ಕಿಂತ ಹಿಂದಿನ ಸಂಗತಿಗಳನ್ನು ನೋಡುವ ವ್ಯಕ್ತಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಪಂಜ ಮತ್ತು ಅದರ ಸುತ್ತಲಿನ ಪ್ರದೇಶದ ಸ್ಥಿತಿಗತಿಗಳು ಕಾಣುವ ರೀತಿ ಸೋಜಿಗ ಮೂಡಿಸುತ್ತದೆ. 

ಈ ಕೃತಿಯು ಹಣ, ಅಧಿಕಾರ, ವಿದ್ಯೆ, ಪ್ರತಿಷ್ಠೆಗಳ ಹಿನ್ನೆಲೆ ಇಲ್ಲದ ಒಂದು ಕುಟುಂಬದ ರೋಯಿತ ಎಂಬ ಹುಡುಗ ಪುರುಷೋತ್ತಮ ಬಿಳಿಮಲೆಯಾಗಿ ಅಮೆರಿಕ, ಇಸ್ರೇಲ್, ಜಪಾನ್‌ನಲ್ಲೆಲ್ಲ ಸಂಚರಿಸಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿದ ಬಗೆಯನ್ನು ಕಾಣಿಸುತ್ತದೆ. ಆತ್ಮವಿಶ್ವಾಸದ ಶಕ್ತಿ ಇಲ್ಲದ ಎಲ್ಲರಿಗೂ ಇದು ಸ್ಫೂರ್ತಿಯಾಗುತ್ತದೆ. ಆದರೆ, ಸ್ಥಾಪಿತ ಶ್ರೇಷ್ಠತೆಯ ವ್ಯಸನವನ್ನು ದಾಟುವ ಎಲ್ಲ ಪ್ರಯತ್ನಗಳೂ ಕೊನೆಗೆ ಸ್ಥಾಪಿತ ಶ್ರೇಷ್ಠತೆಯ ಪ್ರಜ್ಞೆಯ ಪರಿಕಲ್ಪನೆಯಲ್ಲಿಯೇ ಬಂದಿಯಾಗುವ ಅ‍ಪಾಯ ಇರುತ್ತದೆ. ದಾರಿ ಬೇರೆಯೇ ಆದರೂ ಗಮ್ಯ ಒಂದೇ ಆಗಿ ಉಳಿಯುತ್ತದೆ. ಆದ್ದರಿಂದ ಬೇರೆಯದೇ ನೆಲೆಯಲ್ಲಿ ಕೃತಿಯು ಹೇಳುವ ಸಂಗತಿಗಳು ಮುಖ್ಯವಾಗುತ್ತವೆ.

ಹಂಪಿ ವಿಶ್ವವಿದ್ಯಾಲಯದ ಪ್ರಾರಂಭದಲ್ಲಿ ಅದರೊಂದಿಗಿದ್ದ ಬಿಳಿಮಲೆಯವರು ಅನೇಕ ಕಹಿಗಳನ್ನು ಆ ಹಿಂದೆಯೂ ಆ ನಂತರವೂ ಅನುಭವಿಸಿದ್ದಾರೆ. ಆದರೆ, ಕಹಿಗಳನ್ನು ಸೇಡಾಗಿ ಮಾಡಿಕೊಳ್ಳಲಿಲ್ಲ. ಕಹಿಯನ್ನು ಸೇಡಾಗಿ ಮಾಡಿಕೊಳ್ಳದೇ ಇರುವುದರಲ್ಲಿ ಅವರ ಬಾಲ್ಯದ ಬದುಕಿನ ಮುಗ್ಧತೆ, ಮೀನು, ಏಡಿ, ಹಕ್ಕಿ, ಹಾವು, ಭೂತಪ್ರೇತಗಳೆಲ್ಲವೂ ರೂಪಿಸಿದ ಮನೋಭೂಮಿಕೆಯ ಪಾತ್ರವಿದೆ.

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾದ ನಂತರವೂ ಅವರು ಹಳ್ಳಿಯ ಸಣ್ಣ ಶಾಲೆಗೆ ಹೋಗಿ ಮಕ್ಕಳನ್ನು ಮಾತನಾಡಿಸಬಲ್ಲರು. ದೆಹಲಿಯಲ್ಲಿ ಇದ್ದುಕೊಂಡೇ ತನ್ನೂರಿನ ಜನರೊಂದಿಗೆ ನಿರಂತರ ಒಡನಾಟ ಇರಿಸಿಕೊಳ್ಳಬಲ್ಲರು. ಇದ್ದ ವೃತ್ತಿಯನ್ನು ಮಧ್ಯ ವಯಸ್ಸಿನಲ್ಲಿ ಕೈಬಿಟ್ಟು ಹೊಸ ವೃತ್ತಿಯನ್ನು ಕೈಗೊಳ್ಳುವ ಛಲವನ್ನು ಸಾಧಿಸಬಲ್ಲರು. ‘ಕಾಗೆ ಮತ್ತು ನೀರಿನ ಬಗ್ಗೆ ನನಗೆ ಇನ್ನಿಲ್ಲದ ಮೋಹ’ ಎನ್ನುವ ಬಿಳಿಮಲೆಯವರು, ಕಾಗೆ ಒಳಗೊಳ್ಳುವ ಎಲ್ಲ ಸಾಂಸ್ಕೃತಿಕ ನೆಲೆಗಳನ್ನೂ ಒಳಗೊಂಡು ಹೇಳಬಲ್ಲರು.

ಕಾಗೆ ಮುಟ್ಟಿದ ನೀರು ಒಂದು ರೂಪಕವಾಗಿ ಹಲವು ರೀತಿಯಲ್ಲಿ ಕೃತಿಯನ್ನು ವ್ಯಾಪಿಸಿಕೊಳ್ಳುತ್ತದೆ. ಕಾಗೆ ಮೈಲಿಗೆ ಎಂದು ಲೆಕ್ಕ. ಆದರೆ ಪಿತೃಗಳಿಗೆ ಪಿಂಡವನ್ನು ತಲುಪಿಸುವುದು ಕಾಗೆ ಎಂದು ನಂಬಿಕೆ. ಮೂಲನಿವಾಸಿಗಳ ನಂಬಿಕೆಯ ಪ್ರಕಾರ, ಕಾಗೆಯು ಭೂಮಿ ಮತ್ತು ಮನಸ್ಸನ್ನು ಸ್ವಚ್ಛಗೊಳಿಸುವ ಹಕ್ಕಿ. ಒಗ್ಗಟ್ಟಿಗೆ ಕಾಗೆಯೇ ಪ್ರತಿನಿಧಿ. ಹೀಗೆ ಕಾಗೆಯ ಹಲವು ಗುಣ ಸ್ವಭಾವಗಳು ಕೃತಿಯ ವಿವರಗಳನ್ನು ರೂಪಕಾತ್ಮಕವಾಗಿ ಬೆಳೆಸುತ್ತವೆ.

ಆರೂವರೆ ದಶಕಗಳ ಹಿಂದಿನ ಪಂಜದಲ್ಲಿ ಬದುಕು ಆರಂಭವಾಗುತ್ತದೆ. ಅಲ್ಲಿನ ಸಾಮುದಾಯಿಕ ಬದುಕು, ಕ್ಷೌರಿಕ, ಬ್ಯಾರಿ, ಜ್ಯೋತಿಷಿ, ಯಕ್ಷಗಾನ, ಕರಿಮಲೆ, ಬಿರುಮಳೆ, ಏಡಿ- ಇವೆಲ್ಲ ಸಮೃದ್ಧ ಅನುಭವಗಳ, ಒಂದು ಕಾಲಮಾನದ ಗ್ರಾಮ ಬದುಕಿನ ಚಿತ್ರಣವನ್ನು‌ ನೀಡುತ್ತವೆ. ಬಹುಶಃ ಮುಂದಿನ ದಿನಗಳಿಗೆ ಇವು ಐತಿಹಾಸಿಕ ದಾಖಲೆಗಳೇ ಆಗಬಹುದೇನೊ.

ಬಿಳಿಮಲೆಯವರ ವಿದ್ವತ್ ಅನುಭವಗಳು, ಜನಪದದ ಕುರಿತ ಅವರ ವ್ಯಾಪಕ ಅಧ್ಯಯನ, ಮೆಕೆಂಜಿಯ ಕೈಫಿಯತ್‌ಗಳು ಮುಂತಾದ ಸಂಶೋಧನೆ, ಪಂಜದ ಕಾಡಿನ‌ ಮೂಲೆಯಲ್ಲಿ ಜನಿಸಿ ಅಂತರರಾಷ್ಟ್ರೀಯ ವಿದ್ವತ್ ಸಭೆಯ ಪಾಲುದಾರನಾಗಿ ಬೆಳೆದ ವೈಚಾರಿಕ ಬದುಕು ಕೃತಿಯ ಮತ್ತೊಂದು ಮಗ್ಗುಲಾಗಿದೆ. ಈ ವಿವರಗಳು ವಿವರಗಳಾಗಿ ಮಹತ್ವದವಲ್ಲ. ಆದರೆ ಬಿಳಿಮಲೆಯವರು ಆ ವಿವರಗಳನ್ನು‌ ನಿರ್ವಹಿಸುವ ವಿಧಾನದಲ್ಲಿ‌ ಮಹತ್ವವನ್ನು ಪಡೆಯುತ್ತವೆ.

ಬಿಳಿಮಲೆಯವರ ಸಂಘರ್ಷಗಳದು ಇನ್ನೊಂದು ಆಯಾಮ. ಐತಾಳರ ‘ಬ್ರಾಹ್ಮಣ ಬಂಡಾಯ’ ಕೃತಿಯ ವಿರುದ್ಧದ ಬಿಳಿಮಲೆಯವರ ಹೋರಾಟ ಬರುತ್ತದೆ. ಐತಾಳರು ಬಂಧನಕ್ಕೊಳಗಾದಾಗ ಬಿಳಿಮಲೆಯವರೇ ನ್ಯಾಯಾಲಯದಲ್ಲಿ, ‘ಇದು ಕಾನೂನಿನಿಂದ ತೀರ್ಮಾನ ಆಗಬೇಕಾದ ವಿಷಯವಲ್ಲ’ ಎಂದು ಸಾಕ್ಷಿ ಹೇಳುವುದು ಮತ್ತು ಮೊಕದ್ದಮೆ ಬಿದ್ದು ಹೋಗುವುದು ಒಂದು ಕಾಲಮಾನಕ್ಕೆ ಎಡಪಂಥೀಯ ವೈಚಾರಿಕತೆಗೆ ಇದ್ದ ಶಕ್ತಿಯನ್ನು ಹೇಳುತ್ತದೆ. ‘ಹೇಗಾದರೂ ಹಣಿಯಬೇಕು, ದೋಷ ಇಲ್ಲದಿದ್ದರೆ ಹುಡುಕಿ ಅಥವಾ ಸೃಷ್ಟಿಸಿಯಾದರೂ ಚಚ್ಚಬೇಕು’ ಎಂದು ಬದಲಾಗಿರುವ ವರ್ತಮಾನದ ವೈಚಾರಿಕತೆಯನ್ನು ಕೂಡ ಇದು ಅಣಕಿಸುತ್ತದೆ.

‘ವಿವೇಕಾನಂದ ಕಾಲೇಜಿನಲ್ಲಿದ್ದಾಗ ನನಗೆ ಪ್ರೀತಿಸಲು ಯಾರೂ ಸಿಗಲಿಲ್ಲ’ ಎನ್ನುವಲ್ಲಿನ ತುಂಟತನದ ಗಮ್ಮತ್ತು, ಶೋಭನಾ ಅವರನ್ನು ಪ್ರೀತಿಸಿದ ವಿವರ ಬಂದಾಗ ‘ಯಬ್ಬ, ಕಡೆಗೂ ಇವರಿಗೊಂದು ವ್ಯವಸ್ಥೆ ಆಯಿತಲ್ಲ’ ಎಂಬ ಸಮಾಧಾನವನ್ನು ಓದುಗರಿಗೆ ಕೊಡುತ್ತದೆ. ಬಿಳಿಮಲೆ ಆ ಕಾಲಕ್ಕೇ ಬ್ರಾಹ್ಮಣ ಯುವತಿಯನ್ನು ಪ್ರೀತಿಸಿ ಮದುವೆಯಾದವರು. ಮದುವೆ ಮಾಡಿಸಲು ಅಲ್ಲೊಬ್ಬರು ಕಮ್ಯುನಿಸ್ಟ್ ಭಟ್ರು ಬರುತ್ತಾರೆ. ಕಮ್ಯುನಿಸ್ಟಾದರೂ ಭಟ್ರು. ಭಟ್ರಾದರೂ ಕಮ್ಯುನಿಸ್ಟರು. ಈ ಎರಡೂ ಹೇಳಿಕೆಗಳು ಒಂದಾಗುವಲ್ಲಿ ಸೃಷ್ಟಿಯಾಗುವ ಸೌಂದರ್ಯ ಅದ್ಭುತ!

ಮದುವೆಯ ನಂತರ ಯುವತಿಯ ಅಜ್ಜಿ ಬಂದು ದಂಪತಿಯನ್ನು ಮನೆಗೆ ಕರೆದೊಯ್ದು ಸಮಸ್ಯೆ ಪರಿಹರಿಸುವುದು, ಬಿಳಿಮಲೆಯವರ ತಂದೆ ‘ಸಣ್ಣ ಸೊಸೆ ಡೆಲ್ಲಿಯಿಂದ ಬಂದಿದ್ದಾಳೆ’ ಎಂದು ಬರೆದಿಡುವುದು ಇವೆಲ್ಲ ತಲೆಮಾರುಗಳ ಜೀವನ ಧರ್ಮವನ್ನು ಅರ್ಥ ಮಾಡಿಸುತ್ತವೆ. ಇವತ್ತು ಬಿಳಿಮಲೆಯವರ ಕೆಲಸ ಮಾಡುವ ಕಿಡ್ನಿ ಅವರ ಪತ್ನಿಯದು. ಪ್ರೇಮ ವಿವಾಹ ವಿಫಲವಾಗುತ್ತದೆ ಎಂಬ ನಂಬಿಕೆಗೆ ಅವರು ಒಂದು ಚಾಲೆಂಜ್. ಪ್ರೇಮ ವಿವಾಹ ಯಾವ ಎತ್ತರಕ್ಕೆ ಏರಬಲ್ಲದು ಎನ್ನುವುದಕ್ಕೆ ಬಿಳಿಮಲೆಯವರ, ‘ಅಂದು ನನಗೆ ಹೃದಯವನ್ನು ಕೊಟ್ಟಳು. ಇಂದು ಕಿಡ್ನಿ ಕೊಟ್ಟಳು’ ಎನ್ನುವ ಹೇಳಿಕೆ ಪ್ರಾತಿನಿಧಿಕವಾಗಿ ನಿಲ್ಲುತ್ತದೆ.

ಕೃತಿಯ ಉದ್ದಕ್ಕೂ ಖುಷಿ ಕೊಡುವ ಭಾಷಾ ಲಾಲಿತ್ಯ, ಕೊನೆಯಲ್ಲಿ ಮನುಷ್ಯ ಜೀವನವನ್ನು ಮರು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ. ಅನಾರೋಗ್ಯದ ವಿವರವನ್ನು ಪಡೆಯಲು ಬರುವ ವ್ಯಕ್ತಿಯೊಂದಿಗೆ ಸಂವಾದಿಸುತ್ತಾ  ಬಿಳಿಮಲೆಯವರು ಕೃತಿಯನ್ನು ಕೊನೆಗೊಳಿಸುವುದು ಹೀಗೆ:

‘...ಕಣ್ಣು ಸರಿಯಿಲ್ಲ. ಎಡದ ಕಣ್ಣು ಕಾಣೋದಿಲ್ಲ. ಎರಡು ಸ್ಟೆಂಟ್ ಹಾಕಲಾಗಿದೆ. ನಲವತ್ತು ವರ್ಷಗಳಿಂದ ಡಯಾಬೆಟಿಕ್. ಅಂಗಾಲು ಬಿಸಿಯಾಗ್ತದೆ. ನ್ಯೂರೋಪಥಿ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಆಗಿದೆ’.

ಅವನು ತಲೆಯೆತ್ತಿ ನನ್ನ ಕಡೆ ನೋಡಿದ. ಭರ್ತಿ ಮಾಡಿಕೊಳ್ಳಲು ಅವನಲ್ಲಿ ಕಾಲಂಗಳೇ ಉಳಿದಿರಲಿಲ್ಲ. ನಾನು ನಿಧಾನವಾಗಿ ಹೇಳಿದೆ: ನೀನು ಬರೆದುಕೊಳ್ಳಬೇಕಾದ ಮುಖ್ಯ ಟಿಪ್ಪಣಿ ಎಂದರೆ, ಇಷ್ಟೆಲ್ಲ ಕಾಯಿಲೆಗಳ ನಡುವೆ ಇಷ್ಟು ವರ್ಷದವರೆಗೆ ಹೇಗೆ ಬದುಕಿದ ಅಂತ. ಅವನು ಮುಗುಳ್ನಕ್ಕ. ದೇಹವನ್ನು ಕೊಂಡೊಯ್ಯುವ ವಾಹನ ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಹಾಗಂತ ನಾನೇನೂ ಅದಕ್ಕೆ ಕಾದು ಕುಳಿತಿಲ್ಲ. ಮಾಡಬೇಕಾದ ಕೆಲಸಗಳು ಹಲವಿವೆ. ಬರೆಯಬೇಕಾದ ಪುಸ್ತಕಗಳೂ ಕೆಲವಿವೆ.

ಬಹುಶಃ ಕೃತಿಯ ಈ ಕೊನೆಯ ಸಾಲುಗಳು ‘ನಿಮ್ಮೊಡನಿದ್ದೂ ನಿಮ್ಮಂತಲ್ಲದ’ ಒಂದು ಸಾರ್ಥಕ ಬದುಕಿನ ಅನ್ವೇಷಣೆಯ ಮಾರ್ಗದರ್ಶಿಯಾಗಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.