ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಟ್ಟಿನ ಕುರಿತು ಮುಕ್ತ ಮಾತು

Last Updated 21 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಮುಟ್ಟು – ಏನಿದರ ಒಳಗುಟ್ಟು
ಸಂ: ಜ್ಯೋತಿ ಇ. ಹಿಟ್ನಾಳ್‌
ಪ್ರ: ಅಂಗಳ ಪ್ರಕಾಶನ, ಕೊಪ್ಪಳ
ಮೊ: 96635 06731
ಬೆಲೆ: ₹ 250 ಪುಟಗಳು: 250

‘ಮುಟ್ಟು’ ಎಂದರೆ ಯಾರನ್ನಾದರೂ ಏನನ್ನಾದರೂ ಮುಟ್ಟಬೇಕು ಎಂಬ ಸೀಮಿತ ಅರ್ಥವ್ಯಾಪ್ತಿಯಲ್ಲಿ ವ್ಯವಹರಿಸುವ ಸಮಾಜಕ್ಕೆ ‘ಮುಟ್ಟು’ ಎಂಬ ಶಬ್ದವೇ ಮೈಲಿಗೆಯಾಗಿ ಕೇಳುತ್ತದೆ. ಭಾರತದಲ್ಲಂತೂ ಸಂಪ್ರದಾಯ, ಆಚರಣೆ, ಅಂಧಾನುಕರಣೆಗಳ ಕಟ್ಟುಪಾಡಿನ ಸಂಕೋಲೆಗಳಲ್ಲಿ ಮಹಿಳೆಯರನ್ನು ಅನಾಗರಿಕವಾಗಿ ನಡೆಸಿಕೊಂಡು ಬಂದಿರುವ ಪರಂಪರೆಯಿದೆ. ಸ್ಯಾನಿಟರಿ ನ್ಯಾಪ್ಕಿನ್ ಜಾಹೀರಾತುಗಳು ಟಿವಿ ಪರದೆಯ ಮೇಲೆ ರಾರಾಜಿಸುತ್ತಿದ್ದರೂ ಈ ಕುರಿತು ಬಹಿರಂಗವಾಗಿ ಮಾತನಾಡುವ, ಬರೆಯುವ ವಿಚಾರಗಳಿಗೆ ಮುಕ್ತ ವೇದಿಕೆಗಳಿಲ್ಲ.

ಡಾ.ಅನುಪಮಾ ನಿರಂಜನ ಅವರು ಬರೆದಿರುವ ‘ಕೇಳು ಕಿಶೋರಿ’, ಮುಟ್ಟಿನ ಬಗ್ಗೆ ವೈದ್ಯಕೀಯ ಹಿನ್ನೆಲೆಯಲ್ಲಿ ಡಾ.ಎಚ್.ಎಸ್. ಅನುಪಮಾ ಅವರ ಬರೆದಿರುವ ಪುಸ್ತಕಗಳ ಸಾಲಿಗೆ ಹೊಸ ಕೊಡುಗೆಯಾಗಿ ಬಂದಿರುವ ಪುಸ್ತಕ ‘ಮುಟ್ಟು- ಏನಿದರ ಒಳಗುಟ್ಟು’. ಸಂಶೋಧನಾ ವಿದ್ಯಾರ್ಥಿನಿ ಜ್ಯೋತಿ ಇ. ಹಿಟ್ನಾಳ್ ಸಂಪಾದಿಸಿರುವ ಈ ಪುಸ್ತಕದಲ್ಲಿ ವೈದ್ಯಕೀಯ ವಿಶ್ಲೇಷಣೆಗಳಿಲ್ಲ. ವಿವಿಧ ಸಾಂಸ್ಕೃತಿಕ, ಸಾಮಾಜಿಕ ಹಿನ್ನೆಲೆಯಿಂದ ಬಂದ ಬರಹಗಾರರು ಕಟ್ಟಿಕೊಟ್ಟಿರುವ ವಿಶಿಷ್ಟ ಅನುಭವಗಳ ಗುಚ್ಛವೇ ಇದೆ.

ಮುಟ್ಟಿನ ಕುರಿತು ಮಾತನಾಡುವುದು, ಬರೆಯುವುದು ನಿಷೇಧಿಸಿದ ವಿಚಾರದಂತಾಗಿದೆ. ಆದರೆ, ಜ್ಯೋತಿ ಇಂಥದ್ದೊಂದು ಸಂವಹನಕ್ಕೆ ಬಾಗಿಲು ತೆರೆದಿದ್ದಾರೆ. ಅವರು ಉತ್ತರ ಕರ್ನಾಟಕದ ಕೊಪ್ಪಳದಿಂದ ಬಂದವರು. ಮುಟ್ಟನ್ನು ಮೈಲಿಗೆ, ಸೂತಕ, ಅಸ್ಪೃಶ್ಯ, ಅಸಹ್ಯ ಎಂಬ ಭಾವ ಮೂಡಿಸುವ ಸಮಾಜದ ಬಗ್ಗೆ ಪದೇ ಪದೇ ಪ್ರಶ್ನೆಗಳನ್ನು ಕೇಳುತ್ತಾ, ಪುರುಷ ಪ್ರಧಾನ ಮೌಲ್ಯಗಳನ್ನು ಪ್ರಶ್ನಿಸುತ್ತ ಬಂದವರು, ಅದರೊಟ್ಟಿಗೆ ಬೆಳೆದವರು.

‘ಮುಟ್ಟು ಏನಿದರ ಗುಟ್ಟು?’ ಪುಸ್ತಕ ವಿಶೇಷವಾಗುವುದು ಮುಟ್ಟಿನ ಹೆಸರಿನಲ್ಲಿ ಮಹಿಳೆಯ ಮೇಲೆ ನಡೆದ ನಡೆಯುತ್ತಿರುವ ಶೋಷಣೆಯನ್ನು ಹಲವು ತಲೆಮಾರಿನ ಬರಹಗಾರರು ಅನಾವರಣ ಮಾಡಿದ ರೀತಿಯಿಂದ. ದೇಹದ ಒಂದು ಅಂಗಕ್ಕೆ ಗುಪ್ತಾಂಗ ಎಂಬ ಹೆಸರನ್ನಿಟ್ಟ ಸಮಾಜ, ಆ ಅಂಗಕ್ಕೆ ಸಂಬಂಧಿಸಿದಂತೆ ಕೇವಲ ಲೈಂಗಿಕ ವಿಚಾರಗಳಿಗೆ, ಅಶ್ಲೀಲ ತಮಾಷೆಗಳಿಗೆ ಮಾತ್ರ ಸೀಮಿತವಾಗಿ ಯೋನಿಯ ಕುರಿತ ಮಾತುಗಳನ್ನು ಪರದೆಯ ಹಿಂದೆ ಚಪ್ಪರಿಸುತ್ತಿದೆ.

ಬಣ್ಣ, ಲಿಂಗ, ಜಾತಿ, ಆರ್ಥಿಕ ಸ್ಥಾನಮಾನಗಳ ಹಿನ್ನೆಲೆಗಳೂ ದೇಹದ ಕುರಿತು ತಳೆಯುವ ಧೋರಣೆಗಳ ಮೇಲೆ ಪ್ರಭಾವ ಬೀರುತ್ತಿವೆ. ಲೈಂಗಿಕ ಶಿಕ್ಷಣದ ಕುರಿತು ಪಾಠ ಮಾಡಬೇಕಾದಾಗ ಶಿಕ್ಷಕರು ಕೂಡ ಮಕ್ಕಳಿಗೆ ‘ಈ ಪಾಠವನ್ನು ನೀವೇ ಓದಿಕೊಳ್ಳಿ’ ಎಂದು ಮುಂದಿನ ಪಾಠಕ್ಕೆ ಜಿಗಿಯುವ ವಿಪರ್ಯಾಸ ಸೃಷ್ಟಿಯಾಗಿದೆ.

ಈ ಪುಸ್ತಕ ಮುಖ್ಯವಾಗುವುದು ಅನೇಕ ಸತ್ಯಗಳನ್ನು ನಿರ್ಭಿಡೆಯಿಂದ ಬಹಿರಂಗ ಮಾಡುವ ಪ್ರಯತ್ನದಿಂದ. ವಿವಿಧ ಕಾಲಮಾನದ ಲೇಖಕರು ಈ ಪುಸ್ತಕದಲ್ಲಿ ಮುಕ್ತವಾಗಿ ಚರ್ಚಿಸಿದ್ದಾರೆ. ಗಂಡು-ಹೆಣ್ಣು ಇಬ್ಬರೂ ಮಾನಸಿಕ ಗೋಡೆಗಳನ್ನು ಒಡೆದು ಮುಕ್ತಮನಸ್ಸಿನಿಂದ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಹಿರಿಯ ಸಾಹಿತಿ ಪುರುಷೋತ್ತಮ ಬಿಳಿಮಲೆ ಅವರಿಂದ ಹಿಡಿದು ಇತ್ತೀಚಿನ ತಲೆಮಾರಿನ ಅನೇಕ ಯುವಕ-ಯುವತಿಯರವರೆಗೆ ಹಲವರು ಮುಟ್ಟಿನ ಬಗ್ಗೆ ತಮ್ಮ ವೈಯಕ್ತಿಕ ಅನುಭವಗಳನ್ನು, ತಾವು ಕಂಡ ಸತ್ಯಗಳನ್ನು ಮನಮುಟ್ಟುವಂತೆ ತೆರೆದಿಟ್ಟಿದ್ದಾರೆ. ಬಿಳಿಮಲೆಯವರ ಬಾಲ್ಯದ ಕಟುವಾಸ್ತವದ ವಿವರಗಳು ಮನಕಲಕುವಂತಿವೆ.

ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ, ತಮಗೆ ವಿವಾಹವಾಗಿ ಸಹಧರ್ಮಿಣಿ ಮನೆಗೆ ಬಂದಾಗಲೇ ಮುಟ್ಟಿನ ವಿಷಯ ಅರಿವಿಗೆ ಬಂದದ್ದು ಎಂದು ಹೇಳಿದಾಗ, ಸ್ನಾತಕೋತ್ತರ ಪದವೀಧರನಾದರೂ ಈ ಬಗ್ಗೆ ಸುಶಿಕ್ಷಿತ ಗಂಡಿಗೂ ಗೊತ್ತಾಗದ ರೀತಿಯಲ್ಲಿ ಗೋಪ್ಯವಾಗಿ ಈ ವಿಚಾರವನ್ನು ಗಂಡು ಲೋಕದಿಂದ ಹೆಣ್ಣುಮಕ್ಕಳು ಮುಚ್ಚಿಟ್ಟಿದ್ದ ಅನಿವಾರ್ಯತೆ ಕ್ರೂರವಾಗಿ ರಾಚುತ್ತದೆ.

ಆ ಮೂರು ದಿವಸಗಳಲ್ಲಿ ಹೆಂಡತಿಯನ್ನು ಪ್ರಾಣಿಗಿಂತ ನಿಕೃಷ್ಟವಾಗಿ ಕಾಣುವ, ಹೀಗಳೆಯುತ್ತಾ ಕ್ರೂರವಾಗಿ ವರ್ತಿಸುವ, ಕಾರಣವಿಲ್ಲದೆ ಜಗಳವಾಡುತ್ತಾ, ವರಾತ ಹಚ್ಚಿ ಕುಟುಂಬದಲ್ಲಿ ಕಿರಿಕಿರಿ ಸೃಷ್ಟಿಸುವ ಗಂಡುಕುಲದ ದೌರ್ಜನ್ಯ ಕೃತಿಯಲ್ಲಿ ಎದ್ದು ಕಾಣುತ್ತದೆ. ಬಹುತೇಕ ಪುರುಷ ಬರಹಗಾರರ ಮನೆಯಲ್ಲಿ ತಾಯಿ ಸಹೋದರಿಯರು ಇದ್ದರೂ ಎಂದಿಗೂ ಅವರ ಮುಟ್ಟಿನ ಬಟ್ಟೆಯನ್ನಾಗಲಿ, ಆ ದಿನಗಳ ರಕ್ತಸ್ರಾವವನ್ನಾಗಲಿ ಅವರ ಗಮನಕ್ಕೆ ಬರದಂತೆ ಕಾಪಾಡಿಕೊಂಡ ರಹಸ್ಯದ ಬಗ್ಗೆ ಬರೆಯುತ್ತಾ ಆಗಿನ ಹೆಂಗಳೆಯರ ಮನಃಸ್ಥಿತಿ ಹೇಗೆ ಇರಬಹುದಿತ್ತು ಎಂದು ಮರುಕ ಪಟ್ಟಿದ್ದಾರೆ.

ಶಾಲೆಯಲ್ಲಿ ಆದ ಮೊದಲ ಮುಟ್ಟು, ಮುಟ್ಟಿನ ರಕ್ತದ ಕಲೆಯಿಂದ ಅನುಭವಿಸುವ ಮುಜುಗರ, ನಗೆಪಾಟಲುಗಳನ್ನು ಅನೇಕರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿಯೂ ಬೇರೂರಿರುವ ಲಿಂಗ ತಾರತಮ್ಯದ ಕರಾಳ ರೂಪ ಇದರಿಂದ ನಿಚ್ಚಳವಾಗುತ್ತದೆ.

ಪತ್ರಕರ್ತ ನವೀನ್ ಸೂರಿಂಜೆ ಜೈಲಿನಲ್ಲಿ ಸರಳುಗಳ ಹಿಂದೆ ಮಹಿಳಾ ಕೈದಿಗಳು ಅನುಭವಿಸುವ ಯಾತನಾಮಯ ಲೋಕವನ್ನು ತೆರೆದಿಟ್ಟಿದ್ದಾರೆ. ಸ್ಯಾನಿಟರಿ ನ್ಯಾಪ್ಕಿನ್ ಅನ್ನು ಸೆರೆಯಾಳುಗಳಿಗೆ ಕೊಡುವ ವ್ಯವಸ್ಥೆ ಇದ್ದರೂ ಅದನ್ನು ನೀಡಲಾಗುತ್ತಿಲ್ಲ. ಹೀಗಾಗಿ ನವೀನ್, ಮಹಿಳಾ ಕೈದಿಗಳಿಗೆ ಮುಟ್ಟಿನ ಕಪ್ ನೀಡಬೇಕು ಎಂದು ಸಲಹೆ ಮಾಡಿದ್ದಾರೆ. ನವೀನರ ಈ ನವೀನ ಯೋಚನೆಗೆ ಖುಷಿಯಾಗುತ್ತದೆ.

ಪ್ರೀತಿ ನಾಗರಾಜ್, ಚೇತನಾ ತೀರ್ಥಹಳ್ಳಿ, ಆಧುನಿಕ ಮಹಿಳೆ ಅನುಭವಿಸುವ ಹೊಸ ಒತ್ತಡಗಳ ಹಿನ್ನೆಲೆಯಲ್ಲಿ ಮುಟ್ಟು ಬರೀ ದೈಹಿಕವಲ್ಲ, ಅದನ್ನು ಮೀರಿ ಆಗುವ ಪ್ರಕ್ರಿಯೆ ಎನ್ನುತ್ತಾರೆ. ಮುಟ್ಟು ಸಹಜ ನೈಸರ್ಗಿಕ ಕ್ರಿಯೆ ಎಂಬುದು ಮನದಟ್ಟಾದರೆ, ಅದರ ಸುತ್ತ ಇರುವ ನೋವು, ಹತಾಶೆಗಳ ಆವರಣವನ್ನು ಮೀರಬಹುದು ಎಂಬ ಆಶಾವಾದ ಮೂಡಿಸಿದ್ದಾರೆ.

ವಸುಂಧರಾ ಭೂಪತಿ, ಬಾನು ಮುಷ್ತಾಕ್, ಕೆ. ಶರೀಫಾ, ವಿನಯಾ ವಕ್ಕುಂದ, ಸುನಂದಾ ಕಡಮೆಯಂಥವರ ಸಶಕ್ತ ಬರವಣಿಗೆ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದೆ. ಆಶಾದೇವಿ ಅವರು ಮಗನಿಗೆ ಈ ಬಗ್ಗೆ ಹೇಳಿ ಕೊಟ್ಟಿದ್ದೇನೆ ಎಂದು ಹೇಳುವ ಮಾತು ಮಹತ್ವದ್ದು ಅನಿಸುತ್ತದೆ. ಗಂಡುಮಕ್ಕಳನ್ನು ಈ ಬಗ್ಗೆ ಸೂಕ್ಷ್ಮಮತಿಗಳನ್ನಾಗಿ ಮಾಡುವ ಅಗತ್ಯ ಮನೆಯಿಂದ ತಾನೇ ಮೊದಲು ಶುರುವಾಗಬೇಕು?

ಹೆಣ್ಣಿಗೆ ಅವಳ ದೇಹದ ಬಗ್ಗೆಯೇ ಒಂದು ರೀತಿಯ ಕೀಳರಿಮೆ ಮೂಡಿಸುವ, ನಾಚಿಕೆ ಪಟ್ಟುಕೊಳ್ಳುವಂತೆ ಮಾಡುವ, ಏನೋ ನನ್ನಿಂದೇ ತಪ್ಪಾಗಿದೆ ಎನ್ನುವ ಅಪರಾಧಿ ಮನೋಭಾವವನ್ನು ಹುಟ್ಟುಹಾಕುವ, ಮುಟ್ಟನ್ನು ಕುಕೃತ್ಯದ ರಹಸ್ಯವೊಂದನ್ನು ಕಾಪಾಡುವಂತೆ ಮುಚ್ಚಿಟ್ಟುಕೊಳ್ಳುವ ಸೆರೆಮನೆಯಿಂದ ಬಿಡುಗಡೆ ಮಾಡಬೇಕಾದ ಜರೂರು ಯಾವತ್ತಿಗಿಂತಲೂ ಈಗ ಹೆಚ್ಚಾಗಿದೆ.

ದೇಶವನ್ನು ಅಭಿವೃದ್ಧಿ ಪಥದ ಕಡೆ ಕರೆದೊಯ್ಯುತ್ತೇವೆ ಎಂದು ಸಚಿವ ಸಂಪುಟದ ಬಹುಪಾಲು ಮಂದಿ ವಿದೇಶಿ ಪ್ರಯಾಣ ಮಾಡುತ್ತಾರೆ. ವಿದೇಶದ ಬಸ್ಸು, ರೈಲು ನಿಲ್ದಾಣಗಳಲ್ಲಿ, ಶೌಚಾಲಯಗಳಲ್ಲಿ, ಸ್ಯಾನಿಟರಿ ಪ್ಯಾಡ್‌ಗಳು, ಕಾಂಡೋಮ್‌ಗಳು ದೊರಕುವ ವೆಂಡಿಂಗ್ ಮಿಷನ್‌ಗಳನ್ನು ಇಲ್ಲಿಯೂ ಶಾಲೆಗಳ, ಕಾಲೇಜುಗಳ ಹೆಣ್ಣುಮಕ್ಕಳ ಶೌಚಾಲಯದಲ್ಲಿ ವ್ಯವಸ್ಥೆ ಮಾಡಿದರೆ ಅದೇ ದೊಡ್ಡ ಉಪಕಾರ.

ಮುಟ್ಟಿನ ದಿನಗಳಲ್ಲಿ ಸೈಕಲ್ ತುಳಿದು, ಬೆಟ್ಟ ಏರುವ ಯುವತಿಯರನ್ನು ಜಗಮಗಿಸುತ್ತಾ ಜಾಹೀರಾತಿನಲ್ಲಿ ಬಿತ್ತರ ಮಾಡುವ, ಜಾಹೀರಾತಿಗೆ ಅಷ್ಟೊಂದು ಹಣ ವ್ಯಯಿಸುವ ಬದಲು ಸ್ಯಾನಿಟರಿ ಪ್ಯಾಡ್ ತಯಾರಕ ಕಂಪನಿಗಳು ಈ ರೀತಿಯ ಬದಲಾವಣೆಯ ದಾರಿಗಳನ್ನು ತುಳಿಯಬಹುದು. ಸರ್ಕಾರವೂ ಸ್ಯಾನಿಟರಿ ನ್ಯಾಪ್ಕಿನ್ ಮೇಲೆ ಹಾಕುವ ತೆರಿಗೆಯನ್ನು ನಾಚಿಕೆಗೇಡು ಎಂದು ತಿಳಿದುಕೊಂಡರೆ ಸಾಕು. ಸರ್ಕಾರವು ಹೆಣ್ಣುಮಕ್ಕಳ ಸ್ವಾತಂತ್ರ್ಯಕ್ಕೆ ಪುಷ್ಟಿ ನೀಡುವಂತೆ ಜನೌಷಧ ಅಂಗಡಿಗಳಲ್ಲಿ ಒಂದು ರೂಪಾಯಿಗೆ ಸ್ಯಾನಿಟರಿ ನ್ಯಾಪ್ಕಿನ್ ಸಿಗುವ ವ್ಯವಸ್ಥೆ ಮಾಡಿರುವುದು ಸ್ವಾಗತಾರ್ಹ.

ಮುಟ್ಟು ಏನಿದರ ಒಳಗುಟ್ಟು? ಪುಸ್ತಕ ಹೇಳುವುದಿಷ್ಟೆ. ಮುಟ್ಟು ಯಾವತ್ತೂ, ಎಲ್ಲಿಯೂ ಗುಟ್ಟಾಗಬಾರದು.

ನೈಸರ್ಗಿಕ ಕ್ರಿಯೆಗೆ ಯಾವುದೇ ನೋವು, ಕೀಳರಿಮೆಯ ಬಣ್ಣ ಹಚ್ಚಬಾರದು. ಆರೋಗ್ಯಕರ ಮನಃಸ್ಥಿತಿಯ ಸಹ ಸಮಾಜ ಕಟ್ಟುವಲ್ಲಿ ಗಂಡು-ಹೆಣ್ಣಿನ ಸಂವಾದದ ತಿಳಿವಳಿಕೆಯ ಅಗತ್ಯವನ್ನು ಸಶಕ್ತವಾಗಿ ಬಿಂಬಿಸಿರುವ, ಇಷ್ಟೊಂದು ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸಿರುವ ಜ್ಯೋತಿ ಹಿಟ್ನಾಳ್ ಅವರ ಪ್ರಯತ್ನ ಶ್ಲಾಘನೀಯ.

ಪ್ರೌಢಶಾಲೆಯ, ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಬದಲಾವಣೆಯನ್ನು ಬಯಸುವ ಎಲ್ಲರೂ ಓದಲೇಬೇಕಾದ ಪುಸ್ತಕ ಎಂದು ಹೇಳುವುದಕ್ಕೆ ಯಾವ ಮುಲಾಜನ್ನೂ ಇಟ್ಟುಕೊಳ್ಳಬೇಕಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT