ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಕ ಪೃಥ್ವಿಗೆ ಮಾತುಕೊಟ್ಟ ಕಿಶೋರಿ

Last Updated 30 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಹದಿನೈದು ವರ್ಷದ ಹುಡುಗಿ ಒಬ್ಬಂಟಿಯಾಗಿ ಧರಣಿ ಕುಳಿತಳು. ಅವಳ ಮುಷ್ಕರವನ್ನು ಬೆಂಬಲಿಸಿ 130 ರಾಷ್ಟ್ರಗಳಲ್ಲಿ ಎಳೆಯರು ಬೀದಿಗೆ ಬಂದರು. ಬಹುತೇಕ ಮೂಕಿಯಾಗಿದ್ದ ಇವಳು ಬ್ರಿಟನ್‌, ಫ್ರಾನ್ಸ್‌ ಸಂಸತ್ತಿನಲ್ಲಿ ಮಾತನಾಡಿದಳು. ಟೈಮ್‌ ಪತ್ರಿಕೆಯ ಮುಖಪುಟಕ್ಕೆ ಬಂದಳು. ಮಕ್ಕಳ ಕ್ಲೈಮೇಟ್‌ ಪ್ರಶಸ್ತಿ ಪಡೆದಳು. ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದಳು. ಗೌರವ ಡಾಕ್ಟರೇಟ್‌ ಪಡೆದಳು. ಕೊನೆಗೆ ನೊಬೆಲ್‌ ಪ್ರಶಸ್ತಿಗೆ ನಾಮಾಂಕಿತಗೊಂಡಳು. ಈಗ ಬದಲೀ ನೊಬೆಲ್‌ ಪ್ರಶಸ್ತಿ ಪಡೆಯುತ್ತಿದ್ದಾಳೆ.

ಅವಳೇ ಗ್ರೇತಾ ಥನ್‌ಬರ್ಗ್‌.

ಗ್ರೇತಾಳ ಜೀವನಗಾಥೆಯನ್ನೂ ಅವಳು ಹುಟ್ಟುಹಾಕಿದ ಹೋರಾಟದ ಕಥೆಯನ್ನೂ ನಾಗೇಶ ಹೆಗಡೆ ಅವರು ಅಷ್ಟೇ ಸೊಗಸಾಗಿ ಕನ್ನಡಿಗರಿಗೆ ಕೊಟ್ಟ ಕಾಣಿಕೆಯೇ ‘ಗ್ರೇತಾ ಥನ್‌ಬರ್ಗ್‌’ ಕೃತಿ.

ಆಸೆಯೇ ದುಃಖಕ್ಕೆ ಕಾರಣ ಎಂಬ ಪ್ರಸಿದ್ಧ ಮಾತಿದೆ. ಇದು ಬುದ್ಧನ ನುಡಿ. ಪಾಳಿ ಭಾಷೆಯಲ್ಲಿ ಆಸೆ ಎನ್ನುವುದಕ್ಕೆ ‘ತನ್ಹಾ’ ಎಂದಿದೆ. ಸಂಸ್ಕೃತದಲ್ಲಿ ‘ತೃಷ್ಣೆ’ ಎಂದಿದೆ. ಇಂಗ್ಲಿಷ್‍ನಲ್ಲಿ ಕ್ರೇವಿಂಗ್ ಎಂದಿದೆ. ಇದನ್ನು ನೋಡಿದಾಗ ‘ಆಸೆ’ ಪದ ಸಾಲದು ಅನ್ನಿಸುತ್ತದೆ. ಇದಕ್ಕೆ ಹತ್ತಿರದ ಪದ ಹುಡುಕುತ್ತ ಕಂಡದ್ದು- ‘ದಾಹ’. ‘ದಾಹ’ ಅಂದರೆ ‘ದಹಿಸುವುದು’ ಎಂದೂ ಅರ್ಥವಂತೆ. ಸದ್ಯಕ್ಕೆ ದಾಹವೇ ದುಃಖಕ್ಕೆ ಕಾರಣ- ಎಂದಿಟ್ಟುಕೊಳ್ಳಬಹುದೇನೊ.

ಇಂದು ಭೂಮಿಯೇ ಮನುಷ್ಯನ ದಾಹಕ್ಕೆ ಸಿಲುಕಿ ದಹಿಸುತ್ತಿದೆ. ಭೂಮಿ ಬಾಯಾರಿಕೆಯನ್ನು ನೀಗಿಸಬಹುದು, ದಾಹವನ್ನಲ್ಲ. ಇಂದಿನ ಮನುಷ್ಯನ ದಾಹದಿಂದಾಗಿ ತಾಪಮಾನ ಹೆಚ್ಚಾಗಿ- ಹಿಮಗಡ್ಡೆ ಕರಗುತ್ತಿವೆ. ಸಮುದ್ರದ ಮಟ್ಟ ಏರುತ್ತಿದೆ. ಸೈಕ್ಲೋನ್‍ಗಳು ಅಪ್ಪಳಿಸುತಿವೆ. ಹುಚ್ಚು ಮಳೆ ಬರುತ್ತಿದೆ. ಭೂಮಿ ಕುಸಿಯುತ್ತಿದೆ. ಎಲ್ಲವೂ ಕೊಚ್ಚಿಹೋಗುತ್ತಿದೆ. ವಿಪರ್ಯಾಸವೆಂದರೆ ಒಂದು ಕಡೆ ಪ್ರವಾಹ. ಅದರ ಪಕ್ಕದಲ್ಲೆ ನೀರಿಲ್ಲದ ಬರ. ಬದುಕುವುದೆಂತು?

ಈಗ, ಪುಣ್ಯಕ್ಕೆ ಭೂಮಿತಾಯಿಯೇ ಸ್ವೀಡನ್‍ನ ಹದಿನಾರು ವರ್ಷದ ಬಾಲೆ ಗ್ರೇತಾ ಥನ್‍ಬರ್ಗ್‌ಳ ಮೈಮೇಲೆ ಬಂದು ನುಡಿಸಿದಂತೆ ಗ್ರೇತಾ ನುಡಿಯುತ್ತಿದ್ದಾಳೆ. ಇಂದಿನ ಹವಾಮಾನ ಸಂಕಷ್ಟಕ್ಕೆ ಕಾರಣರಾದ ಜಗತ್ತಿನ ನಾಯಕರಿಗೆ ‘ಹೌ ಡೇರ್ ಯೂ?’ ಎಂದು ಕೇಳುತ್ತಿದ್ದಾಳೆ. ಹೀಗೆ ಕೇಳುತ್ತಾ ಮೂಕ ಪೃಥ್ವಿಗೆ ಮಾತು ಕೊಟ್ಟ ಈ ಹುಡುಗಿಗೆ ಇಡೀ ಭೂಮಿಯೇ ತನ್ನ ಮನೆ ಎಂಬ ಭಾವನೆ ಇದೆ ಎಂದು ಲೇಖಕರು ಗುರುತಿಸುತ್ತಾರೆ.

ನಿಜ, ತನ್ನೊಳಗೇನೆ ಸಕಲ ಜೀವಸಂಕುಲವನ್ನು ಧರಿಸಿರುವಂತೆ ಈ ಬಾಲೆ ಕಾಣುತ್ತಾಳೆ. ಆಶ್ಚರ್ಯವೆಂದರೆ, ಕೆನಡಾದ ಸೆವರ್ನ್ ಸುಝಕಿ ಕೂಡ ‘ನಮ್ಮದು ಐದು ನೂರು ಕೋಟಿ ಜನ, ಮೂರು ಕೋಟಿ ಜೀವ ಪ್ರಬೇಧಗಳ ಒಂದು ದೊಡ್ಡ ಕುಟುಂಬ. ರಾಷ್ಟ್ರದ ಗಡಿಗಳು ಎಷ್ಟೇ ಇದ್ದರೂ ಈ ಕುಟುಂಬ ಮಾತ್ರ ಒಂದೇ. ಅದನ್ನು ಬದಲಿಸಲು ಸಾಧ್ಯವಿಲ್ಲ. ಭೂಮಿಗೆ ಸಂಕಷ್ಟ ಬಂದರೆ ನಮಗೆಲ್ಲರಿಗೂ ಬಂದ ಹಾಗೇ. ನಮಗೆಲ್ಲರಿಗೂ ಒಂದೇ ಬಗೆಯ ನಾಳೆಗಳು ಕಾದಿವೆ. ನಾವೆಲ್ಲ ಒಂದಾದರೆ ಮಾತ್ರ ನಾಡಿನ ಭೂಮಿ ಜೀವಂತವಿರಲು ಸಾಧ್ಯ’ ಎನ್ನುತ್ತಾಳೆ. ಭಾರತ ಮೂಲದ ಅಂಜಲಿ ಅಪ್ಪಾದುರೈ ಕೂಡ ಹೀಗೆಯೇ ಮಾತಾಡುತ್ತಿದ್ದಾಳೆ. ಬಾಲ್ಯಕ್ಕೆ ಮಾತ್ರ ಇಂತಹ ಧಾರಣಾಶಕ್ತಿ ಇದೆಯೆ?

ಇಂದು ಗ್ರೇತಾ ನುಡಿಗಳು ನಡೆಗಳಾಗುತ್ತಿವೆ. ಅಮೆರಿಕಾದ ರೆಡ್ ಇಂಡಿಯನ್ ಮೂಲನಿವಾಸಿಗಳು ತಮ್ಮ ಸಂಪ್ರದಾಯದಂತೆ ಗ್ರೇತಾಗೆ ಹೊಸ ಹೆಸರು ಇಡುವಾಗ ‘ಜಗತ್ತನ್ನು ನಿದ್ದೆಯಿಂದ ಎಬ್ಬಿಸಲೆಂದೇ ಧರೆಗಿಳಿದು ಬಂದಿದ್ದೀಯಾ. ನೀನು ‘ಧರೆಗಿಳಿದ ದೇವತೆ’ ಎಂದು ಆ ಮೂಲನಿವಾಸಿಗಳ ಅಧ್ಯಾತ್ಮ ಗುರು ಅವಳಿಗೆ ತಲೆ ಬಾಗುತ್ತಾನೆ. ಭಾರತದ ಮೂಲನಿವಾಸಿ ಕಪ್ಪು ಇಂಡಿಯನ್ನಾದ ನಾನೂ ತಲೆ ಬಾಗುತ್ತೇನೆ.

ಹೀಗೆಲ್ಲಾ ನುಡಿಯಬಹುದಾದ ನಡೆಯಬಹುದಾದ ಬಾಲಕ-ಬಾಲಕಿಯರು ಇಲ್ಲೂ ಇರಬಹುದು. ಎಲ್ಲೆಲ್ಲೂ ಇರಬಹುದು. ಅವರೀಗ ಮಾತಾಡಬೇಕಾಗಿದೆ. ಯಾಕೆಂದರೆ ಅವರು ಉಳಿಯಬೇಕಾಗಿದೆ. ಇಂದು ಕತ್ತಲ ದಾರಿಯಲ್ಲಿ ನಡೆಯುತ್ತಿರುವ ನಮಗೆ ಹೆಗಡೆ ಅವರ ಈ ಪುಟ್ಟ ಪುಸ್ತಕ ಕೈದೀವಿಗೆಯಂತೆ ಬೆಳಕು ಚೆಲ್ಲುತ್ತದೆ.

(ಬೆಂಗಳೂರಿನ ಗ್ರೀನ್‌ಪಾಥ್‌ನಲ್ಲಿ ಡಿ. 1ರಂದು ಬೆಳಿಗ್ಗೆ 11ಕ್ಕೆ ಈ ಪುಸ್ತಕದ ಲೋಕಾರ್ಪಣೆ ಸಮಾರಂಭ ನಡೆಯಲಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT