ಬುಧವಾರ, ಜೂನ್ 29, 2022
24 °C

ಪುಸ್ತಕ ವಿಮರ್ಶೆ: ಲೆಬನಾನಿನವನ ನೆನಪುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ರೇವಿನ ಸಮೀಪ ನಾನೊಂದು ಹೊಸ ಪಟ್ಟಣವನ್ನು ಕಟ್ಟುತ್ತೇನೆ, ಸಮೀಪದ ಒಂದು ದ್ವೀಪದಲ್ಲಿ ಒಂದು ವಿಗ್ರಹ ಪ್ರತಿಷ್ಠಾಪಿಸುತ್ತೇನೆ, ಸ್ವಾತಂತ್ರ್ಯದ ವಿಗ್ರಹವಲ್ಲ, ಸೌಂದರ್ಯದ ವಿಗ್ರಹ. ಏಕೆಂದರೆ ಸ್ವಾತಂತ್ರ್ಯದ ವಿಗ್ರಹದಡಿಯಲ್ಲಿ ಜನ ನಿರಂತರವಾಗಿ ಯುದ್ಧಗಳನ್ನೇ ಮಾಡಿದ್ದಾರೆ. ಆದರೆ, ಸೌಂದರ್ಯದ ವಿಗ್ರಹವಿದ್ದರೆ ಆ ಮುಖದೆದುರಿನಲ್ಲಿ ಜನ ಮಿಕ್ಕೆಲ್ಲರೆಡೆಗೆ ಭಾತೃತ್ವದ ಕೈಚಾಚುತ್ತಾರೆ’ ಎಂದು ಬರೆದವನು ದಾರ್ಶನಿಕ, ಲೇಖಕ, ಚಿತ್ರಕಲಾವಿದ ಖಲೀಲ್‌ ಗಿಬ್ರಾನ್‌. ಲೆಬನಾನಿನಲ್ಲಿ ಜನಿಸಿ, ಫ್ರಾನ್ಸ್‌ನಲ್ಲಿ ಕಲಾಭ್ಯಾಸ ಮಾಡಿ, ಅಮೆರಿಕದಲ್ಲಿ ನೆಲೆನಿಂತ ಖಲೀಲ್‌ ಬರೆದ ‘ದ ಪ್ರಾಫೆಟ್‌’ ಎಂಬ ಕೃತಿ ಜಗತ್ತಿನ ನೂರಕ್ಕೂ ಅಧಿಕ ಭಾಷೆಗಳಿಗೆ ಅನುವಾದಗೊಂಡಿದೆ. ಇಂದಿಗೂ ಅಸಂಖ್ಯಾತರ ಎದೆಯಲ್ಲಿ ಖಲೀಲ್‌ ಬರೆದ ಅಕ್ಷರಗಳು ರಿಂಗಣಿಸುತ್ತಿವೆ. ಜನರ ಮನಸ್ಸಿನ ಗಾಯಗಳಿಗೆ ಮದ್ದಾಗಿ ಒದಗಿಬರುತ್ತಿದೆ. 

ಬರಹವನ್ನೇ ಬದುಕುಕಬೇಕು, ಆಡಿದ ಮಾತಿನಲ್ಲಿ ಮೂಡಿದ ಆದರ್ಶ, ಕ್ರಿಯೆಯಲ್ಲಿಯೇ ಸಾರ್ಥಕವಾಗುವುದು ಎಂದು ನಂಬಿ ಬದುಕಿದ್ದ ಖಲೀಲ್‌ ಗಿಬ್ರಾನ್‌ ಕುರಿತು ಹಲವು ಪುಸ್ತಕಗಳು ಬಂದಿವೆ. ಅವುಗಳಲ್ಲಿ ‘ದಿಸ್‌ ಮ್ಯಾನ್ ಫ್ರಮ್‌ ಲೆಬನಾನ್’ ವಿಶೇಷವಾದದ್ದು. ಈ ಪುಸ್ತಕಕ್ಕಿರುವ ವೈಶಿಷ್ಟ್ಯ ಅದರ ಲೇಖಕಿಯ ಜೊತೆಗೇ ಅಂಟಿಕೊಂಡಿದೆ. ಬಾರ್ಬರಾ ಯಂಗ್ ಎನ್ನುವ ಕಾವ್ಯನಾಮದಿಂದ ಪರಿಚಿತರಾಗಿರುವ ಹೆನ್ರಿಯೆಟಾ ಬ್ರೆಕನ್‌ ರಿಜ್‌ ಬಾಟನ್‌ ಸ್ವತಃ ಕವಯತ್ರಿ ಮತ್ತು ಕಲಾ ವಿಮರ್ಶಕಿ. ಚರ್ಚೊಂದರಲ್ಲಿ ಗಿಬ್ರಾನನ ‘ದ ಪ್ರಾಫೆಟ್‌’ ಪುಸ್ತಕದ ಪಠಣ ಕೇಳಿದ ಅವರು, ಅದರಿಂದ ಆಕರ್ಷಿತರಾಗಿ ಈ ಬರಹಗಾರನನ್ನು ಭೇಟಿಯಾಗಲೇಬೇಕು ಎಂದು ಗಿಬ್ರಾನನನ್ನು ಸಂಪರ್ಕಿಸುತ್ತಾರೆ. ಹಾಗೆ ಶುರುವಾದ ಅವರ ಸ್ನೇಹ, ಮುಂದಿನ ಏಳು ವರ್ಷಗಳವರೆಗೆ, ಗಿಬ್ರಾನ್‌ ತೀರಿಹೋಗುವವರೆಗೂ ಮುಂದುವರಿಯುತ್ತದೆ. ಗೆಳತಿಯಾಗಿಯಷ್ಟೇ ಅಲ್ಲ, ಗಿಬ್ರಾನನ ಸೃಜನಶೀಲ ಸೃಷ್ಟಿಕ್ರಿಯೆಯಲ್ಲಿಯೂ ಬಾರ್ಬರಾ ಅವರ ಪಾಲಿದೆ. ಅವರು ಗಿಬ್ರಾನನಿಗೆ ಲಿಪಿಕಾರ್ತಿಯಾಗಿದ್ದರು. ಅವನು ಆಡಿದ ಅಕ್ಷರಗಳ ಬರಹಗಾರ್ತಿಯಷ್ಟೇ ಅಲ್ಲ; ಅವನ ಮನಸ್ಸಿನಾಳದ ಕುದಿಜ್ವಾಲೆಯನ್ನು ಅನುವಾದಕಿಯೂ ಆಗಿದ್ದರು. 

ಗಿಬ್ರಾನನ ಜೊತೆಗಿನ ಏಳು ವರ್ಷಗಳ ತನ್ನ ಒಡನಾಟದಲ್ಲಿ ತಾನು ಕಂಡುಕೊಂಡ ವ್ಯಕ್ತಿತ್ವದ ಚಿತ್ರಣವನ್ನು ಆಧರಿಸಿ ಅವರು ‘ದಿಸ್‌ ಮ್ಯಾನ್ ಫ್ರಮ್‌ ಲೆಬನಾನ್’ ಬರೆದಿದ್ದಾರೆ. ಇದು ಗಿಬ್ರಾನನ ಜೀವನಚರಿತ್ರೆ ಅಲ್ಲ ಅಥವಾ ಅವನ ಸಾಧನಾ ಚಿತ್ರಣವಷ್ಟೆ ಕೂಡ ಅಲ್ಲ. ಬದಲಿಗೆ ತನ್ನ ಕಣ್ಣಿಗೆ ಕಂಡ ಹಾಗೆ ಅವನ ಕೃತಿ ಮತ್ತು ವ್ಯಕ್ತಿತ್ವ ಎರಡನ್ನೂ ಬೆರೆಸಿ, ತನ್ನ ಒಳನೋಟಗಳನ್ನು ಸೇರಿಸಿ ಹೆಣೆದ ವಿಶಿಷ್ಟ ಪುಸ್ತಕ. ಹಾಗಾಗಿ ಇಲ್ಲಿ ಗಿಬ್ರಾನನ ಕೃತಿಗಳ ಉಲ್ಲೇಖಗಳಿವೆ, ಹಾಗೆಯೇ ಅವನ ವ್ಯಕ್ತಿತ್ವವನ್ನು ಸೂಚಿಸುವ ಹಲವು ಅಪರೂಪದ ಘಟನೆಗಳೂ ಇವೆ. ಅವನ ಚಿತ್ರಗಳ ಕುರಿತು ಉಲ್ಲೇಖವಿದೆ. ಅವನ ಕೃತಿರಚನೆಯ ಹಂತಗಳ ವಿವರಣೆ ಇದೆ. ಈ ಎಲ್ಲವೂ ಸೇರಿ ಒಂದು ವಿಶಿಷ್ಟ ಕೃತಿಯಾಗಿ ಹೊಮ್ಮಿದೆ. 

ಈ ಕೃತಿಯನ್ನು ಎನ್‌. ಸಂಧ್ಯಾರಾಣಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಖಲೀಲ್‌ ಕನ್ನಡದ ಮನಸ್ಸುಗಳಲ್ಲಿಯೂ ಸುಲಲಿತವಾಗಿ ಇಳಿಯುವಂತೆ ಮಾಡಿದ ಅನುವಾದದ ಶ್ರಮ ಎದ್ದು ಕಾಣಿಸುತ್ತದೆ. ಗಿಬ್ರಾನ್‌ನ ಮೇಲಿನ ಪ್ರೀತಿ ಮತ್ತು ಆ ಪ್ರೀತಿಯನ್ನು ಇತರರೊಂದಿಗೆ ಹಂಚಿಕೊಳ್ಳುವ ಹಂಬಲ ಈ ಅನುವಾದದ ಹಿಂದೆ ಕೆಲಸ ಮಾಡಿದೆ.  

ಕೃತಿ: ಇವ... ಲೆಬನಾನಿನವ

ಮೂಲ: ಬಾರ್ಬರಾ ಯಂಗ್

ಅನುವಾದ: ಎನ್‌. ಸಂಧ್ಯಾರಾಣಿ

ಪು: 196 ಬೆ: ₹ 200

ಪ್ರಕಾಶನ: ನುಡಿ ಪುಸ್ತಕ ದೂ: 8073321430

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು