ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಕ್ಕು ಹಿಡಿದ ವಿಚಾರಗಳಿಗೆ ಕನ್ನಡಿ

Last Updated 7 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

‘ಹೆಣ್ಣಿಗೂ ಒಂದು ದೇಹ ಇದೆ. ಅದಕ್ಕೆ ವ್ಯಾಯಾಮ ಕೊಡಿ. ಮೆದುಳಿದೆ ಅದಕ್ಕೆ ಜ್ಞಾನ ಕೊಡಿ. ಹೃದಯವಿದೆ ಅದಕ್ಕೆ ಅನುಭವ ಕೊಡಿ’ ಎನ್ನುತ್ತಾ ಬದುಕಿನುದ್ದಕ್ಕೂ ಕಾಡಿದ ಗಂಡು-ಹೆಣ್ಣಿನ, ಮನುಷ್ಯ ಸಂಬಂಧಗಳ ಸಂಕೀರ್ಣತೆ ಮತ್ತು ಚಾಲ್ತಿಯಲ್ಲಿದ್ದ ಗೊಡ್ಡು ಆಚರಣೆಗಳಿಗೆ, ಜಾತಿ ವ್ಯವಸ್ಥೆಯ ವಿರುದ್ಧ ಕರ್ಮಠ ಬ್ರಾಹ್ಮಣ್ಯದ ತುಕ್ಕು ಹಿಡಿದ ವಿಚಾರಗಳಿಗೆ ತೊಂಬತ್ತು ವರ್ಷಗಳ ಹಿಂದೆಯೇ ಚಾಟಿಯೇಟು ಕೊಟ್ಟ ಲೇಖಕ ಗುಡಿಪಾಟಿ ವೆಂಕಟಾಚಲಂ.

‘ಚಲಂ’ ಮಹಿಳೆಯರ ವ್ಯಕ್ತಿ ಸ್ವಾತಂತ್ರ್ಯ, ಅಸ್ಮಿತೆಗಳಿಗಾಗಿಯೇ ಹೋರಾಡಿದ ಒಬ್ಬ ಹೆಂಗರುಳಿನ ಲೇಖಕ. ಸಮಾಜವು ಮಹಿಳೆಯರಿಗೆ ಕೊಡದೇ ಬೀಗ ಜಡಿದಿಟ್ಟುಕೊಂಡ ಎಲ್ಲ ಸ್ವಾತಂತ್ರ್ಯವನ್ನೂ ಎಲ್ಲ ಹಕ್ಕುಗಳನ್ನೂ ತಾನು ಕೊಡಿಸಿಯೇ ತೀರುತ್ತೇನೆ ಎಂದು ಪಣ ತೊಟ್ಟವರಂತೆ ಕೊನೆಯ ಉಸಿರಿನವರೆಗೂ ಅವರು ಬರೆದರು. ಬಹುಶಃ ಆ ಕಾರಣಕ್ಕಾಗಿಯೇ ‘ಹೆಣ್ಣುಮಕ್ಕಳನ್ನು ತಪ್ಪುದಾರಿಗೆ ಎಳೆಯುತ್ತಿದ್ದಾನೆ’ ಎಂದು ಕರ್ಮಠರ ಕೆಂಗಣ್ಣಿಗೆ ಗುರಿಯಾದವರು. ಈ ಕಾದಂಬರಿಗೆ ಪ್ರತಿಕ್ರಿಯೆಯಾಗಿ ಆ ಭಾಷೆಯಲ್ಲಿ ನಾಲ್ಕು ಕಾದಂಬರಿ ಬರುತ್ತವೆ ಅಂದರೆ ಆ ಕೃತಿಯ ಪರಿಣಾಮವನ್ನು ಅರಿಯಬೇಕು.

ಚಲಂ ‘ಮೈದಾನಂ’ ರಚಿಸಿದ್ದು ಸ್ವಾತಂತ್ರ್ಯಪೂರ್ವದ 1925ರಲ್ಲಿ. ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದ ಒಬ್ಬ ಗೃಹಿಣಿ ಸಂಸಾರದ ಎಲ್ಲ ಸುಖಸೌಕರ್ಯಗಳಿದ್ದೂ ವಕೀಲ ಗಂಡನನ್ನು, ಕುಟುಂಬವನ್ನು, ತಾನು ಬದುಕಿದ ಸಮಾಜವನ್ನು ತೊರೆದು ಸಮಾಜದಲ್ಲಿ ಗೌರವಿಸಲ್ಪಡಬೇಕಾದ ಯಾವ ಅರ್ಹತೆಗಳೂ ಇರದ ಅಮೀರ್ ಎನ್ನುವ ನಿರ್ಗತಿಕ ಮುಸ್ಲಿಮರ ಹುಡುಗನೊಂದಿಗೆ ಪುರುಷ ಸಮಾಜದ ಪರಿಭಾಷೆಯಲ್ಲಿ ‘ಓಡಿ ಹೋಗಿದ್ದಾಳೆ’ ಈ ವಾಕ್ಯದೊಂದಿಗೆ ಕಾದಂಬರಿ ಶುರುವಾಗುತ್ತದೆ. ಹೀಗೆ ಓಡಿಹೋದ ರಾಜೇಶ್ವರಿ ತಾನು ‘ಅಮೀರ್’ನೊಂದಿಗೆ ಅನುಭವಿಸಿದ ಪ್ರೀತಿ, ಸವಿದ ಶೃಂಗಾರದ ರಸನಿಮಿಷಗಳನ್ನು ತತ್ಪರಿಣಾಮವಾಗಿ ಎದುರಿಸಿದ ಕಾರ್ಪಣ್ಯಗಳ ಕಟುವಾಸ್ತವವನ್ನು ಗೆಳತಿಯೊಬ್ಬಳಿಗೆ ನಿವೇದಿಸಿಕೊಳ್ಳುತ್ತಾ ಹೋಗುವ ಕಥನವೇ ಈ ಕಾದಂಬರಿಯ ವಸ್ತು.

ಜಯಪ್ರಭ ಎಂಬ ತೆಲುಗು ಬರಹಗಾರ್ತಿ, ಕವಯತ್ರಿ ಮೈದಾನಂ ಕೃತಿಯ ಕುರಿತು ಮುನ್ನುಡಿಯಲ್ಲಿ ಹೇಳಿದ ವಾಕ್ಯಗಳು ಅತ್ಯಂತ ಮನೋಜ್ಞವಾಗಿವೆ. ಅವರು ಹೇಳುತ್ತಾರೆ: ‘ಕೇವಲ ಸನಾತನ ಧರ್ಮವನ್ನು ಅದರೊಳಗಿನ ಸ್ತ್ರೀಯರ ಅತಂತ್ರ ಬದುಕನ್ನು ವಿವರಿಸಲೆಂದು ಚಲಂ ಮೈದಾನಂ ಬರೆಯಲಿಲ್ಲ. ಒಂದು ಆದರ್ಶ ಇಕ್ಕಟ್ಟಿನ ಕೋಣೆಯ ಅಧಮ ಶೃಂಗಾರದಲ್ಲಿ ಅಸಮ ಸಂಬಂಧಗಳ ಮಧ್ಯೆ ಸ್ತ್ರೀ ಪುರುಷರೊಳಗೆ ಕೊಳೆತುಹೋಗುತ್ತಿರುವ ಪ್ರೇಮ ಬಂಧನವನ್ನು ಬಲಪಡಿಸಲು ಚಲಂ ಮೈದಾನಂ ಬರೆದರು. ಮನುಷ್ಯನಿಗೆ ಪ್ರಕೃತಿಯೊಂದಿಗೆ ಇರಬೇಕಾದ ಸಾಮಿಪ್ಯವನ್ನು ಸೂಚಿಸಿದರು.‌’

‘ಚಲಂ ಮೈದಾನದೊಳಗೆ ಬರೆದ ‘ಪ್ರೀತಿ’ ಸ್ತ್ರೀ ಉಪಯೋಗಕ್ಕೆ ಬರುವ ಅನುಭವವಲ್ಲ. ಸ್ತ್ರೀ ಸ್ವೇಚ್ಛೆ-ಸ್ವಾತಂತ್ರ್ಯಕ್ಕೆ ಕೀಲಿಕೈ ಕೊಟ್ಟು ಬಾಗಿಲು ಮುಚ್ಚಿದ ರಚನೆ. ವಿವಾಹ ವ್ಯವಸ್ಥೆಯನ್ನು ದಾಟಿ ಬಂದು ಇಷ್ಟಪಟ್ಟವನೊಂದಿಗೆ ಬೆರೆತು ಬದುಕುವುದಕ್ಕೋಸ್ಕರ ಬಿಡುಗಡೆಯತ್ತ ಮೊದಲ ಹೆಜ್ಜೆಯನ್ನಿಟ್ಟ ರಾಜೇಶ್ವರಿಗೆ ನಿಜಕ್ಕೂ ಸ್ವಾತಂತ್ರ್ಯ ಸಿಕ್ಕಿತಾ? ರಾಜೇಶ್ವರಿಗೆ ಬಿಡುಗಡೆ ಇಲ್ಲ’ ಎನ್ನುವ ಜಯಪ್ರಭಾ ಅವರ ಮಾತು ಸಾರ್ವಕಾಲಿಕ ಸತ್ಯವೆನಿಸುತ್ತದೆ.
ರಾಜೇಶ್ವರಿ ತಾನು ಆಮೀರ್ ಹಿಂದೆ ಹೋದದ್ದು ಬರಿ ಕಾಮಕ್ಕಾಗಿ ಅಲ್ಲ, ಅದಕ್ಕೂ ಮೀರಿದ ಪ್ರೇಮಕ್ಕಾಗಿ ಎಂಬುದನ್ನು ಒತ್ತಿ ಒತ್ತಿ ಹೇಳುತ್ತಾಳೆ. ಬರೀ ಕಾಮಕ್ಕಾಗಿ ಆಗಿದ್ದರೆ ಅದು ಮನೆಯಲ್ಲಿಯೇ ಅವಿರೋಧವಾಗಿ ಸಿಕ್ಕುತ್ತಿತ್ತಲ್ಲಾ, ಅದಕ್ಕಾಗಿ ಓಡಿಹೋಗಿ ಕುಲಭ್ರಷ್ಟೆ ಆಗುವ ಅಗತ್ಯವೇನಿತ್ತು? ಆಮೀರನೊಂದಿಗೆ ಕಾಮ ತೀರಿಸಿಕೊಳ್ಳುವುದಕ್ಕಲ್ಲ, ಆತನ ಮುಖ ನೋಡ್ತಾ ಆತನನ್ನು ಪೂಜಿಸಲು, ಆಮೀರ್ ಕಣ್ಣಲ್ಲಿನ ಆರಾಧನೆಯನ್ನು ನೋಡಲು, ಆತನೊಂದಿಗೆ ಮಾತಾಡಿ ಆತನೆಡೆಗೆ ನೋಡುವ ಅದೃಷ್ಟಕ್ಕಾಗಿ ಹೋದೆ ಎನ್ನುವ ರಾಜೇಶ್ವರಿಯ ಭಾವುಕಪ್ರೀತಿ ಹೃದಯವನ್ನು ಕಲಕುತ್ತದೆ.

‘ಮೈದಾನಂ’ ಚಲಂ ಅವರಿಗೆ ಎಷ್ಟು ಸಮಾಧಾನಕೊಟ್ಟಿತೋ ಗೊತ್ತಿಲ್ಲ. ಆದರೆ, ಆಗಿನ ಸಾಮಾಜಿಕ ಸಂದರ್ಭದಲ್ಲಿ ಕೂಡ ಚಲಂನನ್ನು ಕಾಡಿದ ರೊಚ್ಚಿಗೆಬ್ಬಿಸಿದ ಸಂಗತಿಗಳು ಇವತ್ತಿಗೂ ಜೀವಂತವಾಗಿವೆ. ಅದರ ಸ್ವರೂಪ ಮಾತ್ರ ಭಿನ್ನವಾಗಿದೆ. ಅವತ್ತು ‘ಓಡಿ ಹೋದ’ ರಾಜಿ, ಇವತ್ತಿನ ‘ಲಿವ್ ಇನ್ ಟುಗೆದರ್’ನಲ್ಲಿಯೋ ಅಥವಾ ವಿವಾಹೇತರ ಸಂಬಂದಲ್ಲಿಯೋ ಸಿಲುಕಿ ಪ್ರೀತಿಯನ್ನು ಹುಡುಕಿದ್ದರೂ ಆಕೆಗೆ ಅಂದು ಆದ ಅನುಭವವೇ ಇಂದೂ ಆಗುತ್ತಿತ್ತು.

ಚಲಂ ರಾಜೇಶ್ವರಿಗೆ ದಕ್ಕಿಸಬೇಕು ಎಂದುಕೊಂಡ ಪ್ರೇಮ-ಸ್ವಾತಂತ್ರ್ಯ ಅವಳಿಗೆ ಯಾವ ಸುಖವನ್ನೂ ತರದೇ ಬದುಕನ್ನು ಅಂಚಿಗೆ ದೂಡುತ್ತದೆ. ತಬ್ಬಿ ಸಂತೈಸಬೇಕಿದ್ದ ‘ಪ್ರೀತಿ’ ಅವಳನ್ನು ಬಲಹೀನಳನ್ನಾಗಿಸಿ ಪಡಬಾರದ ಕಷ್ಟಗಳಿಗೆ ನೂಕುತ್ತದೆ. ಹೆಣ್ಣಿನ ವಿಷಯದಲ್ಲಿ ಎಲ್ಲಾ ಗಂಡಸರು ಒಂದೇ ಎನ್ನುವ ಅಭಿಪ್ರಾಯವನ್ನು ಮೂಡಿಸುವಾಗ ರಾಜೇಶ್ವರಿ ಮತ್ತೆ ಒಂಟಿ ಎನಿಸುತ್ತಾಳೆ.

ಕನ್ನಡದ ಓದುಗರಿಗೆ ಓದಿಸಲೇಬೇಕೆಂಬ ಅತ್ಯಾಸೆಯಿಂದ ‘ಮೈದಾನಂ’ ಅನ್ನು ಅನುವಾದಿಸಿ ನಮಗೆಲ್ಲ ಓದಿಸಿದ ನಮ್ಮ ನಡುವಿನ ಗೇಯಕವಿ ರಮೇಶ್ ಅರೋಲಿ ಅಭಿನಾಂದನಾರ್ಹರು. ತೆಲುಗಿನಿಂದ ಕನ್ನಡಕ್ಕೆ ಅನುವಾದಗೊಂಡರೂ ಮೂಲ ಕನ್ನಡದ್ದೇ ಎನ್ನುವಷ್ಟು ಭಾಷೆಗೆ ಸೊಗಡಿದೆ, ಲಾಲಿತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT