ಶುಕ್ರವಾರ, ಏಪ್ರಿಲ್ 23, 2021
31 °C

‘ಧಾರ್ಮಿಕ-ರಾಜಕೀಯ ವ್ಯವಸ್ಥೆಗಳ ಕಟು ವಿಡಂಬನೆ’

ಸಿ.ಎನ್.ರಾಮಚಂದ್ರನ್ Updated:

ಅಕ್ಷರ ಗಾತ್ರ : | |

Prajavani

ಕುಂವೀ ಅವರ ಎಲ್ಲಾ ಕೃತಿಗಳಲ್ಲಿಯೂ ವಿಡಂಬನೆ ಪ್ರಮುಖವಾಗಿರುತ್ತಾದರೂ ಅವರ ಪ್ರಸಿದ್ಧ ಕಾದಂಬರಿ ‘ಅರಮನೆ’ಯ ನಂತರ ಬಂದ ಕಾದಂಬರಿಗಳಲ್ಲಿ ವಿಡಂಬನೆ ವ್ಯಾಪಕವಾಗುತ್ತಾ ಬಂದು, ಆವರ ಇತ್ತೀಚಿನ ಮೂರೂ ಕಾದಂಬರಿಗಳು (ಶ್ವಾನಾವಲಂಬನಕರಿ, ಕತ್ತೆಗೊಂದು ಕಾಲ, ಜೈ ಭಜರಂಗಬಲಿ) ಸಂಪೂರ್ಣ ವಿಡಂಬನೆಗಳಾಗಿವೆ. ಪ್ರಾಯಶಃ, ಸಮಕಾಲೀನ ವ್ಯವಸ್ಥೆಗಳನ್ನು ಕುರಿತ ಅವರ ಅತೃಪ್ತಿ ತೀವ್ರವಾಗುತ್ತಾ ಬಂದಿರುವುದು ಇದಕ್ಕೆ ಕಾರಣವಿರಬಹುದು.

ಜೈ ಭಜರಂಗಬಲಿ ಎಂಬ ಕುಂವೀ ಅವರ 20ನೆಯ ಕಾದಂಬರಿಯಲ್ಲಿ ಎರಡು ಭಾಗಗಳಿದ್ದು, ‘ಸಂಕಲನ’ ಎಂಬ ಮೊದಲನೆಯ ಭಾಗ ಹನುಮನ ಕಿಂಡಿ ಎಂಬ ಅಗ್ರಹಾರದ ವರ್ಣನೆಯಿಂದ ಪ್ರಾರಂಭವಾಗುತ್ತದೆ. ಈ ಗ್ರಾಮದಲ್ಲಿ ವೃದ್ಧ, ಧರ್ಮಭೀರು ಹಾಗೂ ಮಾರುತಿಯ ಪರಮಭಕ್ತರಾದ ಹುಲಿಕುಂಟಾಚಾರ್ಯರು ಗ್ರಾಮದೇವತೆ ನೆಟ್ಟಕಂಟಯ್ಯ ಸ್ವಾಮಿಯನ್ನೇ ಮಾರುತಿಯ ಒಂದು ರೂಪವೆಂದು ಬಗೆದು ಅಹರ್ನಿಶಿ ಪೂಜಿಸುತ್ತಿರುತ್ತಾರೆ. ಒಮ್ಮೆ ಆಕಸ್ಮಿಕವಾಗಿ ಆಚಾರ್ಯರ ಆರತಿಯ ತಟ್ಟೆಗೆ ಒಂದು ಕಪಿಯ ಮರಿ ಬೀಳುತ್ತದೆ. ಎಲ್ಲಿಯೂ ಕಪಿಸಂತತಿಯೇ ಇಲ್ಲದ ಆ ಅಗ್ರಹಾರದಲ್ಲಿ ಈ ಘಟನೆ ಒಂದು ಪವಾಡವೆಂದು, ಆ ಕಪಿ ತ್ರೇತಾಯುಗದ ಮಾರುತಿಯೇ ಎಂದು ಎಲ್ಲರೂ ನಂಬತೊಡಗುತ್ತಾರೆ. ಕ್ರಮೇಣ ಈ ಪವಾಡವು ಕಿವಿಯಿಂದ ಕಿವಿಗೆ ಹರಡಿ, ಭಕ್ತರು ಆ ಮರ್ಕಟ ಶಿಶುವಿನ ದರ್ಶನ ಮಾಡಲು ಕಿಂಡಿಗೆ ಬರತೊಡಗುತ್ತಾರೆ. ಭಕ್ತ ಗಣ ಹೆಚ್ಚಾದಂತೆ, ಆ ಮರಿಕಪಿ ಆಂಜನೇಯನಾಗಿ, ಅದಕ್ಕೊಂದು ಗುಡಿಯಾಗಿ, ಕ್ರಮಬದ್ಧ ಪೂಜೆ-ಪುನಸ್ಕಾರಗಳು ನಡೆಯಲಾರಂಭಿಸಿ, ಸ್ವಲ್ಪ ಕಾಲದ ನಂತರ ಅದು ಭಜರಂಗಬಲಿಯ ಹೆಸರು ಪಡೆದು, ಅದಕ್ಕೆ ಶಾಸ್ತ್ರೋಕ್ತ ಉಪನಯನವಾಗಿ, ಕೊನೆಗೆ ಅದು ಆಚಾರ್ಯ ಭಜರಂಗಬಲಿಯೆಂದು ಪೂಜಿಸಲ್ಪಡುತ್ತದೆ. ವಯಸ್ಸಿಗೆ ಬಂದಾಗ ಅದಕ್ಕೆ ಯೋಗ್ಯ ವಧುವನ್ನು ಹುಡುಕಿ ತಂದು ಮದುವೆ ಮಾಡಲು ಭಕ್ತರು ಯೋಜಿಸುತ್ತಾರೆ. ಆದರೆ ಮದುವೆಯಾಗುವುದಕ್ಕೆ ಮೊದಲೇ ವಧು-ವರರು ಅಲ್ಲಿಂದ ಮಾಯವಾಗುತ್ತಾರೆ. ಇಲ್ಲಿಂದ ‘ವ್ಯವಕಲನ’ ಎಂಬ ಎರಡನೆಯ ಭಾಗ ಶುರುವಾಗುತ್ತದೆ. ಕೆಲಕಾಲಾನಂತರ ಮತ್ತೆ ಕಿಂಡಿಗೆ ತಮ್ಮ ಮಗುವಿನೊಡನೆ ಬರುವ ಆಚಾರ್ಯ ದಂಪತಿಗಳು ಅನತಿ ಕಾಲದಲ್ಲಿಯೇ ಅವರ ಅಸಂಖ್ಯಾತ ಬಂಧು-ಬಾಂಧವರನ್ನೂ ಅಲ್ಲಿಗೆ ಕರೆತಂದಾಗ, ಊರಿನಲ್ಲಿ ಕೋತಿಗಳನ್ನು ಹೊರತುಪಡಿಸಿ ಬೇರೆ ಯಾರೂ ಬದುಕುವುದೇ ಅಸಾಧ್ಯವಾಗುತ್ತದೆ. ಒಮ್ಮೆ ಅಲ್ಲಿಗೆ ಗ್ರಾಮವಾಸ್ತವ್ಯಕ್ಕೆ ಬರುವ ಮುಖ್ಯಮಂತ್ರಿ ಅಲ್ಲಿಯ ವಾನರರ ಕಾಟ ತಡೆಯಲಾರದೆ ಹೇಗಾದರೂ ಅವುಗಳನ್ನು ಊರಿನಿಂದ ಹೊರಗೋಡಿಸಲು ಆಜ್ಞೆಮಾಡುತ್ತಾನೆ; ಆದರೆ ಅಧಿಕಾರಿಗಳ ಎಲ್ಲಾ ಯೋಜನೆಗಳೂ ನಿಷ್ಫಲವಾಗುತ್ತವೆ. ಕೆಲ ದಿನಗಳನಂತರ ಇದ್ದಕ್ಕಿದ್ದಂತೆಯೇ ತಂಬೂರಿ ಮೀಟುವವನೊಬ್ಬನನ್ನು ಹಿಂಬಾಲಿಸುತ್ತಾ ಎಲ್ಲಾ ಕೋತಿಗಳೂ ಊರಿನಿಂದ ಹೊರಹೋಗುತ್ತವೆ.

ಈ ಕಥನ-ಚೌಕಟ್ಟಿನ ಮೂಲಕ ಸಮಕಾಲೀನ ಧಾರ್ಮಿಕ-ರಾಜಕೀಯ-ಸಾಮಾಜಿಕ ಹಾಗೂ ಸಮೂಹ ಮಾಧ್ಯಮಗಳಲ್ಲಿ ಇಂದು ವಿಜೃಂಭಿಸುತ್ತಿರುವ ಅಧಿಕಾರ ಲಾಲಸೆ, ಧನದಾಹ, ಕ್ರೌರ್ಯ, ಸುಳ್ಳು, ಇತ್ಯಾದಿಗಳನ್ನು ಕುಂವೀ ಕಟುವಾಗಿ ವಿಡಂಬಿಸುತ್ತಾರೆ. ಈ ಎಲ್ಲಾ ವ್ಯವಸ್ಥೆಗಳೂ ಕಾದಂಬರಿಯಲ್ಲಿ ಎರಡು ಬಾರಿ ಒಂದೇ ಸ್ಥಳದಲ್ಲಿ ಸಂಧಿಸುತ್ತವೆ: ಆಚಾರ್ಯ ಭಜರಂಗಬಲಿಯವರ ವಿವಾಹ ಸಂದರ್ಭದಲ್ಲಿ ಹಾಗೂ ಮುಖ್ಯಮಂತ್ರಿ ಗ್ರಾಮವಾಸ್ತವ್ಯದ ಸಂದರ್ಭದಲ್ಲಿ. ಈ ಕಾದಂಬರಿಯುದ್ದಕ್ಕೂ ಕ್ರಿಯಾಶೀಲವಾಗಿರುವ ಕುಂವೀ ಅವರ ವಿಡಂಬನೆಯ ಸ್ವರೂಪವನ್ನು ಪರಿಚಯಿಸಲು, ಪ್ರಾತಿನಿಧಿಕವಾಗಿ ‘ವಿವಾಹ ಮಹೋತ್ಸವ’ದ ಸಂದರ್ಭವನ್ನು ಗಮನಿಸಬಹುದು.

ಆಚಾರ್ಯ ಶ್ರೀಭಜರಂಗಬಲಿಯವರು ಪ್ರೌಢರಾದೊಡನೆ ಎಲ್ಲರ ಮುಂದೆ ಲೈಂಗಿಕ ಚೇಷ್ಟೆಗಳನ್ನು ಮಾಡಲು ಪ್ರಾರಂಭಿಸುತ್ತಾರೆ; ಇಂತಹ ದೃಶ್ಯಗಳಿಗಾಗಿಯೇ ಅಹೋರಾತ್ರಿ ಕಾಯುತ್ತಿದ್ದ ವಾರ್ತಾ ವಾಹಿನಿಗಳು ಗ್ರಾಫಿಕ್ಸ್ ಮೂಲಕ ಅವುಗಳನ್ನು ರೋಚಕಗೊಳಿಸಿ, ಹಗಲು-ರಾತ್ರಿ ಅವುಗಳನ್ನು ಪ್ರಸಾರ ಮಾಡಿ, ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳುತ್ತವೆ. ಆಡಳಿತ ಮಂಡಳಿಯ ಸದಸ್ಯರೊಬ್ಬರಿಂದ ಶ್ರೀಗಳಿಗೆ ವಿವಾಹವನ್ನು ಮಾಡುವ ಪ್ರಸ್ತಾಪ ಬಂದು ಹೆಚ್ಚಿನ ಸದಸ್ಯರು ಆ ಸೂಚನೆಯನ್ನು ಒಪ್ಪಿದರೆ, ಭಿನ್ನಮತೀಯರು ತ್ರೇತಾಯುಗದ ಆಂಜನೇಯ ಆಜನ್ಮ ಬ್ರಹ್ಮಚಾರಿಯಾಗಿದ್ದ ಕಾರಣ ಕೊಟ್ಟು ಅದನ್ನು ವಿರೋಧಿಸುತ್ತಾರೆ. ಈ ವಿಷಯವು ಸುದ್ದಿ ಮಾಧ್ಯಮಗಳಲ್ಲಿ, ವಿಶ್ವವಿದ್ಯಾನಿಲಯಗಳ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಭಯಂಕರವಾಗಿ ಚರ್ಚಿಸಲ್ಪಡುತ್ತದೆ –ಯಾವ ತೀರ್ಮಾನಕ್ಕೂ ಬರಲಾಗದೆ.

ಆ ರಾಜ್ಯದ ಮುಖ್ಯಮಂತ್ರಿ ಏಕಾಂಬರ ಮುಂಬರುವ ಚುನಾವಣೆಯಲ್ಲಿ ಸೋಲನ್ನು ನಿರೀಕ್ಷಿಸಿ ನಿರಾಶರಾಗಿದ್ದಾಗ, ಮಂತ್ರಿಗಳಲ್ಲೊಬ್ಬರು ಅವರು ಭಜರಂಗಬಲಿಯವರ ವಿವಾಹಕ್ಕೆ ಬೆಂಬಲ ವ್ಯಕ್ತಪಡಿಸಿ, ಆ ಕಾರ್ಯಕ್ರಮವನ್ನು ನಡೆಸಲು ಕಿಂಡಿಯಲ್ಲಿ ಯೇ ಕೆಲಕಾಲವಿದ್ದರೆ ಅವರಿಗೆ ಜನಬೆಂಬಲ ಹೆಚ್ಚುತ್ತದೆ ಎಂದು ಸಲಹೆ ಕೊಡುತ್ತಾರೆ. ಅದನ್ನು ಮೆಚ್ಚಿದ ಮುಖ್ಯಮಂತ್ರಿ ತಮ್ಮ ಪರಿವಾರ ಹಾಗೂ ಕಛೇರಿಯೊಡನೆ ಕಿಂಡಿಯಲ್ಲಿಯೇ ತಿಂಗಳುಗಳ ಕಾಲ ವಾಸ್ತವ್ಯ ಹೂಡುತ್ತಾರೆ, ಮತ್ತು ಆಡಳಿತ ಮಂಡಳಿಯನ್ನೂ ವಿವಾಹಕ್ಕೆ ಒಪ್ಪಿಸುತ್ತಾರೆ. ಆದರೆ, ಶ್ರೀಗಳ ವಿವಾಹವಾರ್ತೆ ರಾಜ್ಯದ ಗಡಿ ದಾಟಿದೊಡನೆ, ಅಯೋಧ್ಯೆಯಲ್ಲಿನ ‘ಆಂಜನೇಯ ಭಗವಾನ್ ಹಿತ ರಕ್ಷಕ್ ಮಂಡಲ್’ ಕೆರಳಿ ಕೆಂಡವಾಗಿ, ‘ಪೂಜ್ಯ ಹನುಮಾನ್ ಆಜನ್ಮ ಬ್ರಹ್ಮಚಾರಿಗಳು, ಅವರಿಗೆ ವಿವಾಹವನ್ನು ನಡೆಸುವುದು ಅಕ್ಷಮ್ಯ ಅಪರಾಧ’ ಎಂದು ಕಿಂಡಿಯ ಆಡಳಿತ ಮಂಡಳಿಗೆ ಕೋರ್ಟ್ ನೋಟೀಸ್ ಕಳಿಸುತ್ತದೆ; ಅಯೋಧ್ಯೆಯಲ್ಲಿರುವ ‘ಹನುಮದ್ವಿಕಾಸ್ ಮಂಡಳ್,’ ‘ಹಿಂದು ಸುರತ್ರಾಣ ಪರಿಷದ್,’ ಇತ್ಯಾದಿ ಅನೇಕ ಸಂಸ್ಥೆಗಳು ಈ ವಿವಾಹವನ್ನು ಖಂಡಿಸಿ ಹೇಳಿಕೆ ನೀಡುತ್ತವೆ; ಅವುಗಳ ಸದಸ್ಯರು ‘ರಕ್ತವನ್ನು ಹರಿಸುತ್ತೇವೆ, ಪೂಜ್ಯ ಮರ್ಕಟಾಚಾರ್ಯರ ಬ್ರಹ್ಮಚರ್ಯೆಯನ್ನು ರಕ್ಷಿಸುತ್ತೇವೆ’ ಎಂದು ಶಪಥ ಮಾಡುತ್ತಾರೆ. ಆದರೂ ಏಕಾಂಬರಂ ವಿಚಲಿತರಾಗದೆ, ಕಿಂಡಿಯುದ್ದಕ್ಕೂ ಪೊಲೀಸ್ ಪಡೆಯನ್ನು ನಿಯೋಜಿಸಿ, ವಿವಾಹ ಕಾರ್ಯಕ್ರಮವನ್ನು ಮುಂದುವರೆಸುತ್ತಾರೆ.

ಮುಖ್ಯಮಂತ್ರಿಗೆ ಸನಾತನ ಧರ್ಮದಲ್ಲಿ ನಂಬಿಕೆ ಇದೆ ಎನ್ನುವ ಕಾರಣಕ್ಕೆ ಬಲ ಪಂಥೀಯರು ಮುಖ್ಯಮಂತ್ರಿಯನ್ನು ಸಮರ್ಥಿಸಿದರೆ, ಅವರು ಸಮರ್ಥಿಸುತ್ತಾರೆ ಎಂಬ ಒಂದೇ ಕಾರಣಕ್ಕೆ ಎಡಪಂಥೀಯರು ವಿವಾಹವನ್ನು ವಿರೋಧಿಸುತ್ತಾರೆ. ‘ಪ್ರಾಣಿದಯಾ ಸಂಘ’ದವರು ಮೂಕ ಪ್ರಾಣಿಯನ್ನು ಗುಡಿಯಲ್ಲಿ ಕೂಡಿಟ್ಟು ಅದನ್ನು ಹಿಂಸಿಸುತ್ತಿದ್ದಾರೆ ಎಂದು ಅದರ ಬಿಡುಗಡೆಗಾಗಿ ಉಗ್ರ ಹೋರಾಟವನ್ನು ಪ್ರಾರಂಭಿಸುತ್ತಾರೆ. ಆದರೆ ಆಡಳಿತ ಮಂಡಳಿಯವರು ಮುಖ್ಯಮಂತ್ರಿಯ ಉತ್ತೇಜನದಿಂದ ಶ್ರೀಗಳಿಗೆ ಒಪ್ಪುವ ಲಾವಣ್ಯ ಎಂಬ ಮಹಿಳಾ ಮರ್ಕಟವನ್ನು ಹುಡುಕಿ ತಂದು, ವಿವಾಹದ ದಿನವನ್ನು ನಿಶ್ಚಯಿಸುತ್ತಾರೆ. ವಿವಾಹದ ದಿನ ಹತ್ತಿರವಾದಂತೆ, ಒಂದು ದಿನ ಇದ್ದಕ್ಕಿದ್ದಂತೆ ವಧೂವರರು ಕಾಣೆಯಾಗುತ್ತಾರೆ. ಇದು ರಾಷ್ಟ್ರದಾದ್ಯಂತ ಸುದ್ದಿಯಾಗಿ, ಅವರನ್ನು ಅಪಹರಿಸಿರುವವರನ್ನು ಬಂಧಿಸಲೇಬೇಕು ಎಂಬ ಚಳವಳಿ ಪ್ರಾರಂಭವಾಗುತ್ತದೆ; ತಮ್ಮ ಸ್ಥಾನ-ಮಾನಗಳ ರಕ್ಷಣೆಗಾಗಿ ಪೊಲೀಸರು ಖಾದರ್ ಎಂಬ ಅಮಾಯಕನನ್ನು ಸೆರೆ ಹಿಡಿಯುತ್ತಾರೆ. ಹೀಗೆ ಸಾಗುತ್ತದೆ ಕುಂವೀ ಅವರ ವಿಡಂಬನೆ.

ವಿಡಂಬನೆಗಳು ಸಾಹಿತ್ಯಕ್ಕೇನೂ ಹೊಸತಲ್ಲ. ಇಂಗ್ಲಿಷ್‍ಭಾಷೆಯ ‘ದ ಔಲ್ ಅಂಡ್ ದ ನೈಟಿಂಗೇಲ್’, ‘ಗಲಿವರ್ಸ್ ಟ್ರಾವೆಲ್ಸ್’, ‘ಅನಿಮಲ್ ಫಾರ್ಮ್’, ಕನ್ನಡದ ‘ರಾಮಧಾನ್ಯ ಚರಿತೆ’, ಹಿಂದಿಯ ‘ಏಕ್ ಗಧೆಕೀ ಆತ್ಮಕಥಾ’ ಇತ್ಯಾದಿ ಅನ್ಯೋಕ್ತಿಯ ಮೂಲಕ ಸಮಕಾಲೀನ ಧಾರ್ಮಿಕ-ರಾಜಕೀಯ-ಸಾಮಾಜಿಕ ವ್ಯವಸ್ಥೆಗಳನ್ನು ವಿಡಂಬಿಸುತ್ತವೆ. ಇಲ್ಲಿ ಏಳುವ ಪ್ರಶ್ನೆಯೆಂದರೆ, ಲೇಖಕನು ನೇರವಾಗಿ ಹೇಳದೆ ಪ್ರಾಣಿಗಳ ಮುಖಾಂತರ ಮಾನವ ವ್ಯವಸ್ಥೆಗಳನ್ನು ಏಕೆ ಪರೋಕ್ಷವಾಗಿ ವಿಡಂಬಿಸುತ್ತಾನೆ? ಒಂದು ಸಾಧ್ಯ ಉತ್ತರವೆಂದರೆ, ನೇರವಾಗಿ ಪ್ರಭುತ್ವವನ್ನು ಟೀಕಿಸಿದರೆ, ಅದರ ವಿಚಾರಗಳನ್ನು ವಿರೋಧಿಸಿದರೆ, ಪ್ರಭುತ್ವದ ಕ್ರೌರ್ಯವನ್ನು ಎದುರಿಸಬೇಕಾಗುತ್ತದೆ; ಆದುದರಿಂದ ಯಾವಾಗಲೂ ವಿಡಂಬನೆ ಪರೋಕ್ಷವಾಗಿರುತ್ತದೆ. ಅರ್ಥಾತ್, ಎಲ್ಲಿಯವರೆಗೆ ಪ್ರಭುತ್ವವು ತನ್ನ ಉಳಿವಿಗಾಗಿ ‘ಅನ್ಯ’ರನ್ನು ಸೃಷ್ಟಿಸಿ ಅವರನ್ನು ದ್ವೇಷಿಸುವುದರ ಮೂಲಕ ತನ್ನ ಅಧಿಕಾರವನ್ನು ಬಲಪಡಿಸಿಕೊಳ್ಳುತ್ತಿರುತ್ತದೋ ಅಲ್ಲಿಯವರೆಗೆ ಸಾಹಿತಿಯು ಅನ್ಯೋಕ್ತಿ, ವ್ಯಂಗ್ಯ-ವಿಡಂಬನೆಗಳನ್ನು ಆಶ್ರಯಿಸುವುದು ಅನಿವಾರ್ಯ ಎಂದು ತೋರುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು