ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಆರ್ಥಿಕ ದಾರ್ಶನಿಕನ ಅರ್ಥವತ್ತಾದ ಬದುಕು

Last Updated 20 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಭಿನ್ನ ಅಭಿಪ್ರಾಯ
ಲೇ: ವೈ.ವಿ. ರೆಡ್ಡಿ
ಪ್ರ: ಕನ್ನಡ ನಿರೂಪಣೆ: ಎಂ.ಎಸ್‌. ಶ್ರೀರಾಮ್‌
ಪ್ರ: ಅಕ್ಷರ ಪ್ರಕಾಶನ
ಸಂ: 08183-295645

ಯಾಗಾ ವೇಣುಗೋಪಾಲ್‌ (ವೈ.ವಿ.) ರೆಡ್ಡಿ – ಭಾರತೀಯ ಅರ್ಥ ಜಗತ್ತಿನಲ್ಲಿ ಬಹುದೊಡ್ಡ ಹೆಸರು. ಕೇಂದ್ರ ಸರ್ಕಾರದ ವಿತ್ತ ಅಧಿಕಾರಿಯಾಗಿ, ಭಾರತೀಯ ರಿಸರ್ವ್‌ ಬ್ಯಾಂಕಿನ ಉಪ ಗವರ್ನರ್‌, ಗವರ್ನರ್‌ ಆಗಿ, 14ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ದೇಶದ ಆರ್ಥಿಕ ನೀತಿಗಳ ನಿರೂಪಣೆಯಲ್ಲಿ ಅವರ ಪಾತ್ರ ಬಲು ಹಿರಿದು. ಜನಸಾಮಾನ್ಯರ ಒಳಿತನ್ನೇ ತಮ್ಮ ಧ್ಯೇಯವನ್ನಾಗಿ ಹೊಂದಿ ಕೆಲಸ ಮಾಡಿದವರು ಅವರು.

ದೇಶವನ್ನು 1991ರ ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಿದ ತೆರೆಯ ಹಿಂದಿನ ಸೂತ್ರಧಾರರಲ್ಲಿ ರೆಡ್ಡಿ ಪ್ರಮುಖರು. ಹಾಗೆಯೇ 2008ರಲ್ಲಿ ಜಗತ್ತನ್ನೇ ಕಾಡಿದ ಆರ್ಥಿಕ ಬಿಕ್ಕಟ್ಟು ಭಾರತಕ್ಕೆ ತಟ್ಟದಂತೆ ತಡೆಯುವಲ್ಲಿ ಚಾಣಾಕ್ಷ ತಂತ್ರಗಳನ್ನು ಹೆಣೆದವರು ಕೂಡ ಅವರೇ. ಇಂತಹ ಶ್ರೇಷ್ಠ ಕೇಂದ್ರೀಯ ಬ್ಯಾಂಕರ್‌, ಅಸಾಮಾನ್ಯ ಆರ್ಥಿಕ ತಜ್ಞನ ಆತ್ಮಕಥೆ ‘ಭಿನ್ನ ಅಭಿಪ್ರಾಯ’.

ರೆಡ್ಡಿಯವರು ತೆಲುಗಿನಲ್ಲಿ ‘ನಾ ಜ್ಞಾಪಕಾಲು’ (ನನ್ನ ನೆನಪುಗಳು) ಎಂದೂ ಇಂಗ್ಲಿಷ್‌ನಲ್ಲಿ ‘Advice and Dissent’ ಎಂದೂ ತಮ್ಮ ಆತ್ಮಕಥೆಯನ್ನು ಪ್ರಕಟಿಸಿದ್ದಾರೆ. ತೆಲುಗಿನ ಕೃತಿ, ಸಾರ್ವಜನಿಕ ನೀತಿಯಲ್ಲಿ ದೀರ್ಘಕಾಲ ಸಾಗಿದ ಅವರ ಜೀವನದ ಅನುಭವ ಸಾರವನ್ನು ಗ್ರಹಿಸಿದರೆ, ಇಂಗ್ಲಿಷ್‌ ಕೃತಿ, ಆರ್ಥಿಕ ತಜ್ಞನಾಗಿ ಅವರು ಮಾಡಿದ ಕೆಲಸಗಳ ಕುರಿತು ಹೆಚ್ಚು ಮಾತನಾಡುತ್ತದೆ. ಅವರ ಆತ್ಮಕಥೆಯನ್ನು ಕನ್ನಡದಲ್ಲಿ ನಿರೂಪಿಸುವಾಗ ಎಂ.ಎಸ್‌. ಶ್ರೀರಾಮ್‌ ಅವರು ಎರಡೂ ಕೃತಿಗಳ ಅಪರೂಪದ ಎಲ್ಲ ವಿವರಗಳನ್ನೂ ಹೆಕ್ಕಿ ತಂದಿದ್ದಾರೆ. ಹೀಗಾಗಿ ಇದು ಕನ್ನಡದ್ದೇ ಹೊಸ ಕೃತಿಯಾಗಿದೆ.

ಮೂರು ಮುಖ್ಯ ಆಯಾಮಗಳಲ್ಲಿ ಇಲ್ಲಿನ ವಿವರಗಳನ್ನು ನೋಡಬಹುದು. ಅವುಗಳೆಂದರೆ – ಐಎಎಸ್ ಅಧಿಕಾರಿಯಾಗಿ ಆಂಧ್ರ ಪ್ರದೇಶದಲ್ಲಿ ರೆಡ್ಡಿಯವರು ಜನರಿಗಾಗಿ ಮಾಡಿದ ಕೆಲಸ, ವೃತ್ತಿ ಬದುಕು ಶುರುವಾದ ಮೇಲೂ ಅಧ್ಯಯನಕ್ಕೆ ಅವರು ಕೊಟ್ಟ ಮಹತ್ವ ಹಾಗೂ ಆರ್ಥಿಕ ತಜ್ಞನಾಗಿ ಅವರು ದೇಶಕ್ಕೆ ನೀಡಿದ ಕೊಡುಗೆ.

ರಾಯಲಸೀಮೆಗೆ ಸೇರಿದ ಕಡಪ ಜಿಲ್ಲೆಯ ಪಾಟೂರು ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಹುಡುಗ, ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿ ಬೆಳೆದ ಕಥೆ ಅನನ್ಯವಾದುದು. ಹಿಂದುಳಿದ ಪ್ರದೇಶದ, ಅದರಲ್ಲೂ ಬಡತನದ ಬಿಸಿ ಅನುಭವಿಸಿದವರಿಗೆಲ್ಲ ಪ್ರೇರಣೆ ನೀಡುವಂಥದ್ದು.

ಭಾಷಾವಾರು ರಾಜ್ಯಗಳು ರಚನೆಯಾದ ಹೊಸತರಲ್ಲಿ ಐಎಎಸ್‌ ಅಧಿಕಾರಿಯಾದ ರೆಡ್ಡಿಯವರು ಆಂಧ್ರದ ಯೋಜನಾ ಆಯೋಗದ ಕಾರ್ಯದರ್ಶಿಯಾಗಿ ಸಿದ್ಧಪಡಿಸಿದ ಯೋಜನೆಗಳು ಜನರ ಕಣ್ಣೀರನ್ನು ಒರೆಸಲು ನೆರವಾದವು. ಅವರು ರೂಪಿಸಿದ ಯೋಜನೆ ‘ರಾಯಲಸೀಮೆ ಮಾಡೆಲ್‌’ ಎಂದು ಹೆಸರಾಗಿ, ವಿಶ್ವಬ್ಯಾಂಕ್‌ ಕೂಡ ಈ ಮಾದರಿಯನ್ನು ಅಧ್ಯಯನ ಮಾಡಿ, ಜಗತ್ತಿನ ಹಲವೆಡೆ ಅನುಷ್ಠಾನಕ್ಕೆ ತರಲು ಶಿಫಾರಸು ಮಾಡಿತು.

ನೆರೆಯನ್ನೂ ಬರವನ್ನೂ ಬಡತನವನ್ನೂ ಹತ್ತಿರದಿಂದ ಕಂಡವರು ಅವರು. ನೆರೆ, ಬರದಿಂದ ನೊಂದವರ ನೋವು ಕಡಿಮೆ ಮಾಡಲು ಈ ಅಧಿಕಾರಿ ಮಾತೃ ಹೃದಯದಿಂದ ಕೆಲಸ ಮಾಡಿದ್ದು ಈಗ ಇತಿಹಾಸ.

ಎನ್‌.ಟಿ. ರಾಮರಾವ್‌ ಅವರ ವಿಲಕ್ಷಣ ವ್ಯಕ್ತಿತ್ವದ ಕುರಿತು ಕಥಾನಾಯಕನೊಂದಿಗೆ ಕಾರ್ಯ ನಿರ್ವಹಣೆ ಎಂಬ ಅಧ್ಯಾಯವನ್ನೇ ರೆಡ್ಡಿಯವರು ಬರೆದಿದ್ದಾರೆ. ‘ನಾನೊಬ್ಬ ಅದ್ಭುತ ವ್ಯಕ್ತಿಯಲ್ಲವೇ’ ಎಂದು ಪದೇ ಪದೇ ಕೇಳುತ್ತಿದ್ದ, ಇಂದಿರಾ ಗಾಂಧಿ ಅವರ ವಿರೋಧ ಕಟ್ಟಿಕೊಂಡಿದ್ದ ಎನ್‌ಟಿಆರ್‌ ಕಾರ್ಯವೈಖರಿ ಕುರಿತು ಅವರು ಸುದೀರ್ಘವಾಗಿ ಚರ್ಚಿಸಿದ್ದಾರೆ.

ಕೃತಿಯುದ್ದಕ್ಕೂ ಎದ್ದು ಕಾಣುವುದು ರೆಡ್ಡಿಯವರ ಜ್ಞಾನದ ಹಸಿವು. ತಂದೆಯ ಒತ್ತಾಸೆಗೆ ಕಟ್ಟುಬಿದ್ದು ಐಎಎಸ್‌ ಮಾಡುವ ಅವರು, ಐಎಎಸ್‌ ಅಧಿಕಾರಿಯಾದ ಮೇಲೂ ಅಧ್ಯಯನಕ್ಕೆ ಮರಳಿ ತಮ್ಮ ಪ್ರೀತಿಯ ಅರ್ಥಶಾಸ್ತ್ರದ ವಿಷಯದಲ್ಲಿ ಪಿಎಚ್‌.ಡಿ ಮಾಡುತ್ತಾರೆ.ನೆದರ್ಲೆಂಡ್ಸ್‌ನ ಇನ್‌ಸ್ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸ್ಟಡೀಸ್‌ನಲ್ಲಿ ಉನ್ನತ ಅಧ್ಯಯನಕ್ಕೂ ತೆರಳುತ್ತಾರೆ. ಅಲ್ಲಿ ಅವರಿಗೆ ಗುರುಗಳಾಗಿ ಸಿಕ್ಕವರು ಅರ್ಥಶಾಸ್ತ್ರದಲ್ಲಿ ಮೊದಲ ನೊಬೆಲ್‌ ಬಹುಮಾನ ಪಡೆದ ಜಾನ್‌ ಟಿನ್‌ಬರ್ಗನ್‌.

ವೃತ್ತಿ ಮಧ್ಯೆ ಬಿಡುವು ಪಡೆದು ಉಸ್ಮಾನಿಯಾ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಅವರು ಕೆಲಸ ಮಾಡುತ್ತಾರೆ. ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಆ್ಯಂಡ್‌ ಪೊಲಿಟಿಕಲ್‌ ಸೈನ್ಸ್‌ನಲ್ಲಿ ಓದಬೇಕೆಂಬ ಆಸೆಯನ್ನೂ ಅವರು ಈಡೇರಿಸಿಕೊಳ್ಳುತ್ತಾರೆ. ಆರ್‌ಬಿಐ ಗವರ್ನರ್‌ ಆಗಿದ್ದಾಗ ಅಧ್ಯಯನದ ಸಣ್ಣ ಅವಕಾಶವನ್ನೂ ಅವರು ಬಿಟ್ಟುಕೊಡುವುದಿಲ್ಲ. ಜತೆಗಿದ್ದವರನ್ನೂ ಅವರು ಅಧ್ಯಯನದಲ್ಲಿ ತೊಡಗುವಂತೆ ಹುರಿದುಂಬಿಸುತ್ತಾರೆ. ಗವರ್ನರ್‌ ಹುದ್ದೆಯಿಂದ ಅವರು ನಿರ್ಗಮಿಸುವಾಗ ಡಾಕ್ಟರೇಟ್‌ ಪಡೆದ 64 ಹಾಗೂ ಎಂಬಿಎ ಪದವಿ ಪೂರೈಸಿದ 171 ಸಿಬ್ಬಂದಿ ಆರ್‌ಬಿಐನಲ್ಲಿದ್ದರು!

ತುರ್ತು ಪರಿಸ್ಥಿತಿ ಸಮಯದಲ್ಲಿ ಹೈದರಾಬಾದ್‌ ಜಿಲ್ಲಾಧಿಕಾರಿಯಾಗಿದ್ದ ರೆಡ್ಡಿಯವರು, ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿಲ್ಲದ ಸಂಜಯ್‌ ಗಾಂಧಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಬೇಕು ಎಂಬ ಪ್ರೋಟೊಕಾಲ್‌ ಸಂದೇಶ ಬಂದಾಗ ರಜೆ ಮೇಲೆ ತೆರಳುತ್ತಾರೆ.

ಕೇಂದ್ರ ಸರ್ಕಾರದ ಸೇವೆಗೆ ತೆರಳಿದ ಮೇಲೆ ಅವರು ದೇಶಕ್ಕೆ ನೀಡಿದ ಸೇವೆ ಅನುಪಮವಾದುದು. ಹಲವು ಪ್ರಧಾನಿಗಳು ಹಾಗೂ ವಿತ್ತ ಸಚಿವರ ಜತೆ ನಿಕಟವಾಗಿ ಕೆಲಸ ಮಾಡಿದವರು ಅವರು. ಇಂದಿರಾ, ರಾಜೀವ್‌ ಗಾಂಧಿ, ಪಿ.ವಿ.ನರಸಿಂಹರಾವ್‌, ಮನಮೋಹನ್‌ ಸಿಂಗ್‌, ಅಟಲ್‌ ಬಿಹಾರಿ ವಾಜಪೇಯಿ ಅಂಥವರಲ್ಲಿ ಪ್ರಮುಖರು.

ಪಿವಿಎನ್‌ ಕಾರ್ಯವೈಖರಿ ಕುರಿತು ರೆಡ್ಡಿಯವರ ವಿವರಣೆ ನಗೆ ಉಕ್ಕಿಸುತ್ತದೆ. ‘ಅವರತ್ತ ಹೋದ ಯಾವ ಕಡತವೂ ವಾಪಸ್‌ ಬರುವುದಿಲ್ಲ. ಯಾವುದರ ಮೇಲೂ ಹಸ್ತಾಕ್ಷರ ಹಾಕುವುದಿಲ್ಲ ಎಂಬ ಮಾತಿತ್ತು. ಒಂದು ಕಡತದಲ್ಲಿ ಒಮ್ಮೆ ಪ್ರಸ್ತಾವದ ಪರವಾಗಿ ಒಂದು ಪ್ಯಾರಾ, ವಿರುದ್ಧವಾಗಿ ಒಂದು ಪ್ಯಾರಾ ಬರೆದು ಅರ್ಧ ದಸ್ಕತ್ತು ಹಾಕಿದ್ದರು. ಅದನ್ನೇನು ಮಾಡಬೇಕೆಂದು ತಿಳಿಯದೇ ಕೂದಲು ಕಿತ್ತುಕೊಳ್ಳಬೇಕಾಯಿತು!’

ವಿ.ಪಿ. ಸಿಂಗ್‌ ಪ್ರಧಾನಿಯಾಗಿದ್ದಾಗ 67 ಟನ್‌ ಚಿನ್ನವನ್ನು ಲಂಡನ್‌ ಬ್ಯಾಂಕುಗಳಲ್ಲಿ ಕಾಪಿಟ್ಟು, 407 ದಶಲಕ್ಷ ಡಾಲರ್ ಸಾಲವನ್ನು ತರುವ ಹೊಣೆಯನ್ನು ಇವರೇ ಹೊರಬೇಕಾಗಿತ್ತು. ನಡುರಾತ್ರಿಯಲ್ಲಿ ಗುಟ್ಟಾಗಿ ವಿಮಾನ ನಿಲ್ದಾಣಕ್ಕೆ ಟ್ರಕ್‌ ಮೂಲಕ ಚಿನ್ನ ಸಾಗಿಸುತ್ತಿದ್ದಾಗ ಟೈರು ಪಂಕ್ಚರ್‌ ಆಗಿ, ಭದ್ರತಾ ಪಡೆಗಳು ಟ್ರಕ್‌ ಸುತ್ತ ನಿಂತಿದ್ದರಿಂದ ವಿಷಯ ಜಗಜ್ಜಾಹೀರಾಯಿತು. ಹಾಗೆ ದೇಶದ ಜನತೆಗೆ ಸಂಕಷ್ಟದ ವಿಷಯ ಗೊತ್ತಾಗಿದ್ದು ಒಳ್ಳೆಯದೇ ಆಯಿತು. ಅವರಿಂದ ಆರ್ಥಿಕ ಸುಧಾರಣೆಗೆ ಬೆಂಬಲ ಸಿಕ್ಕಿತು ಎನ್ನುತ್ತಾರೆ ರೆಡ್ಡಿ.

ಕೃತಿಗೇಕೆ ‘ಭಿನ್ನ ಅಭಿಪ್ರಾಯ’ ಎಂಬ ಹೆಸರು ಕಾಡುವುದಲ್ಲವೇ? ರೆಡ್ಡಿಯವರು ವೃತ್ತಿಜೀವನದುದ್ದಕ್ಕೂ ನೀತಿ ನಿರೂಪಿಸುವಾಗ ಯಾರ ಮರ್ಜಿಗೂ ಒಳಗಾಗದೆ ಜನಸಾಮಾನ್ಯರ ಒಳಿತನ್ನೇ ಪ್ರತಿಪಾದಿಸುತ್ತಾ ಬಂದವರು. ಸರ್ಕಾರದ ಧೋರಣೆಗಳು ಬೇರೆಯಿದ್ದಾಗ ತಮ್ಮ ಭಿನ್ನ ಅಭಿಪ್ರಾಯಗಳನ್ನು ಮಂಡಿಸುತ್ತಲೇ ಹೋದವರು. ಆರ್‌ಬಿಐ ಗವರ್ನರ್‌ ಆಗಿದ್ದಾಗ ವಿತ್ತ ಸಚಿವರ ಜತೆ, ಅದರಲ್ಲೂ ಚಿದಂಬರಂ ಅವರೊಡನೆ ನಡೆದ ತಿಕ್ಕಾಟಗಳಿಗೆ ಲೆಕ್ಕವೇ ಇಲ್ಲ. ಅಂತಹ ತಮ್ಮ ಸೃಜನಾತ್ಮಕ ತಲ್ಲಣಗಳನ್ನೂ ಅವರು ದಾಖಲಿಸಿದ್ದಾರೆ.
ಕೇಂದ್ರೀಯ ಬ್ಯಾಂಕ್‌ ಆಗಿರುವ ಆರ್‌ಬಿಐ ಕುರಿತು ಜನಸಾಮಾನ್ಯರಿಗೆ ಅಷ್ಟಾಗಿ ಗೊತ್ತಿಲ್ಲ. ಏಕೆಂದರೆ, ನಿತ್ಯದ ವ್ಯವಹಾರಗಳಿಗೆ ಅವರ ಒಡನಾಟದ ಬ್ಯಾಂಕುಗಳೇ ಬೇರೆ. ದೇಶದ ಎಲ್ಲ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ನಿಯಂತ್ರಣ ಹೊಂದಿದೆ. ಸಮತೋಲನದ ಜತೆ ಬೆಲೆಗಳನ್ನು ಹದ್ದುಬಸ್ತಿನಲ್ಲಿಟ್ಟು, ದುಡ್ಡಿನ ಮೌಲ್ಯ ಕುಸಿಯದಂತೆ ಕಾಪಾಡುವುದು, ಅರ್ಥವ್ಯವಸ್ಥೆಗೆ ತಕ್ಕಂತೆ ದುಡ್ಡಿನ ಸರಬರಾಜು ಆಗುವಂತೆ ನೋಡಿಕೊಂಡು ಉದ್ಯೋಗ ಸೃಷ್ಟಿಗೆ ಕಾರಣವಾಗುವುದು ಆರ್‌ಬಿಐನ ಬಹುಮುಖ್ಯವಾದ ಕೆಲಸ. ಅದನ್ನು ಯಶಸ್ವಿಯಾಗಿ ಮಾಡಿದವರು ಗವರ್ನರ್‌ ರೆಡ್ಡಿ.

ಗೃಹಸಾಲಗಳಿಗೆ ರೆಡ್ಡಿಯವರು ಕಠಿಣ ಷರತ್ತುಗಳನ್ನು ಜಾರಿಗೆ ತಂದಾಗ ವಿರೋಧಿಸಿದವರೇ ಎಲ್ಲ. ಆದರೆ, 2008ರಲ್ಲಿ ಗೃಹಸಾಲಗಳಿಂದ ಅಮೆರಿಕ ಬ್ಯಾಂಕ್‌ಗಳು ದಿವಾಳಿ ಎದ್ದಾಗ ಭಾರತೀಯ ಬ್ಯಾಂಕರ್‌ಗಳೆಲ್ಲ ರೆಡ್ಡಿಯವರ ದೂರದರ್ಶಿತ್ವವನ್ನು ಕೊಂಡಾಡಿದ್ದರು. ‘ನನ್ನ ದೇಶ ದೊಡ್ಡದು. ನಮ್ಮಲ್ಲಿ ಆರ್ಥಿಕ ಬಿಕ್ಕಟ್ಟಾದರೆ ಭೌಗೋಳಿಕ ಹಾಗೂ ರಾಜಕೀಯವಾಗಿ ನಮ್ಮನ್ನು ಕಾಪಾಡಲು ಯಾರೂ ಬರುವುದಿಲ್ಲ’ ಎಂಬ ಎಚ್ಚರಿಕೆ ಅವರ ಎಲ್ಲ ನೀತಿಗಳ ಹಿಂದೆ ಕೆಲಸ ಮಾಡುತ್ತಿತ್ತು.

ಈ ಕೃತಿ ಓದುವುದೆಂದರೆ ಸ್ವಾತಂತ್ರ್ಯೋತ್ತರ ಭಾರತದ ಆರ್ಥಿಕ ಚರಿತ್ರೆಯನ್ನೂ ಪ್ರಧಾನಿಗಳ ಪ್ರಮುಖ ಕಾರ್ಯವಿಧಾನವನ್ನೂ ವಿತ್ತ ಸಚಿವರ ಆದ್ಯತೆಗಳನ್ನೂ ಅಧಿಕಾರಿಗಳ ಮನೋಧರ್ಮವನ್ನೂ ಒಟ್ಟಾಗಿ ಅಧ್ಯಯನ ಮಾಡಿದಂತೆ. ದೇಶದ ಆರ್ಥಿಕ ಏರಿಳಿತದ ಎಲ್ಲ ಪ್ರಮುಖ ಘಟ್ಟಗಳೂ ಇಲ್ಲಿ ದಾಖಲಾಗಿವೆ. ಮುನ್ನೂರು ವರ್ಷಗಳ ಹಿಂದೆ ಪ್ರಪಂಚದ ಆದಾಯದಲ್ಲಿ ನಮ್ಮ ದೇಶದ ಪಾಲು ಶೇ 25ರಷ್ಟು ಇರುತ್ತಿತ್ತು. ಅದೇ ಇನ್ನೂರು ವರ್ಷಗಳ ಹಿಂದೆ ಶೇ 5ಕ್ಕಿಂತ ಕಡಿಮೆಗೆ ಕುಸಿಯಿತು. ಅಂದರೆ ಎರಡು ಶತಮಾನಗಳಲ್ಲಿ ಜಗತ್ತು ಬೆಳೆಯುತ್ತಾ ಹೋದರೆ, ನಾವು ಹಿಂದಡಿ ಇಟ್ಟೆವು. 1900ರಿಂದ ಹೆಚ್ಚು–ಕಡಿಮೆ ತೊಂಬತ್ತು ವರ್ಷ ಹೆಚ್ಚಿನ ಬೆಳವಣಿಗೆ ಕಾಣದ ಭಾರತ, ನಂತರ ಅಭಿವೃದ್ಧಿಯ ಹಾದಿ ಹಿಡಿದಿದೆ. ಅದರಲ್ಲಿ ರೆಡ್ಡಿ, ರಂಗರಾಜನ್‌ ಅವರಂತಹ ಆರ್ಥಿಕ ತಜ್ಞರ ಪಾತ್ರ ತುಂಬಾ ದೊಡ್ಡದಿದೆ.

ಘನವಾದ ವ್ಯಕ್ತಿತ್ವದ ರೆಡ್ಡಿ ಅವರದು ಸಂಯಮದ ನಡೆ. ವೃತ್ತಿಯ ಸವಾಲುಗಳನ್ನು ಹೇಳುವ ಆಸೆಯೇ ಹೊರತು ತೆರೆಮರೆಯ ರಾಮಾಯಣವನ್ನಲ್ಲ. ಯಾರಿಗೂ ನೋವುಂಟು ಮಾಡಬಾರದು ಎಂಬ ಉದ್ದೇಶದಿಂದ ಕೆಲವು ಕುತೂಹಲದ ಅಂಶಗಳನ್ನು ಬಿಟ್ಟಿದ್ದೇನೆ, ಇನ್ನು ಸರ್ಕಾರದ ಗುಪ್ತ ವಿಷಯಗಳನ್ನು ಬಹಿರಂಗಗೊಳಿಸುವುದು ಸಾಧ್ಯವೇ ಇಲ್ಲ ಎನ್ನುವ ರೆಡ್ಡಿ, ಬರೆಯದೇ ಉಳಿದಿರುವ ವಿಷಯಗಳ ಕುರಿತು ಕುತೂಹಲವನ್ನು ಹೆಚ್ಚಿಸುತ್ತಾರೆ. ನೋಟುಬಂದಿ ಹಾಗೂ ಜಿಎಸ್‌ಟಿ ಜಾರಿಯಂತಹ ಕಾಲದಲ್ಲಿ ಅವರು ಅಧಿಕಾರದಲ್ಲಿದ್ದಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆಯೂ ಹಾಗೇ ಉಳಿಯುತ್ತದೆ.

ಕ್ಲಿಷ್ಟವಾದ ಆರ್ಥಿಕ ವಿಚಾರಗಳ ಚರ್ಚೆಯೇ ಈ ಕೃತಿಯ ಜೀವಾಳವಾದರೂ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಆರ್ಥಿಕ ವಿದ್ಯಾರ್ಥಿಗಳಿಗೆ, ಆಡಳಿತದ ಹೊಣೆಹೊತ್ತ ಅಧಿಕಾರಿಗಳಿಗೆ, ಬ್ಯಾಂಕರ್‌ಗಳಿಗೆ ಇದು ಉತ್ತಮ ಪಠ್ಯ. ಕನ್ನಡದಲ್ಲಿ ಇರಲೇಬೇಕಾದ ಇಂತಹ ಅಪರೂಪದ ಕೃತಿಯನ್ನು ಕನ್ನಡಿಗರಿಗೆ ಕೊಟ್ಟ ಶ್ರೀರಾಮ್‌ ಅವರಿಗೆ ಅಭಿನಂದನೆಗಳು ಸಲ್ಲಲೇಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT