ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ತಂಬಾಕಿನ ತೀವ್ರ ಘಾಟು ನೆಲಮೂಲದ್ದೇ ಘಮಲು

Last Updated 24 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ತಂಬಾಕಿನ ಘಾಟಿನಷ್ಟೇ ತೀವ್ರತೆಯುಳ್ಳದ್ದು ಅದರ ಸುತ್ತಮುತ್ತ ಕೆಲಸ ಮಾಡುವವರು, ಅದರ ಅವಲಂಬಿತರ ಬದುಕು. ತಂಬಾಕು ಉತ್ಪಾದಕರ, ಗೋದಾಮು ಮಾಲೀಕರ ದರ್ಪ, ಶೋಷಣೆ, ಗತ್ತುಗಾರಿಕೆಗಳು ಇದೇ ಘಾಟನ್ನು ಹೊಂದಿದ್ದರೆ, ಅದರ ಸುತ್ತಮುತ್ತಲಿನ ಕಾರ್ಮಿಕರದ್ದು ಇನ್ನೊಂದು ಬಗೆಯ ತೀವ್ರತೆಯ ಘಾಟು. ಅಲ್ಲಿ ಅಸಹನೆ, ಆಕ್ರೋಶ, ನೋವು, ಕಣ್ಣೀರು, ಹಸಿವು ಎಲ್ಲವೂ ಇವೆ.

ಈ ಜನರ ಬದುಕನ್ನು ಅತ್ಯಂತ ಹತ್ತಿರದಲ್ಲಿ ಕಂಡುಂಡ ಅನುಭವ ಆಧರಿಸಿಯೇ ಚೌಗಲೆ ಅವರು ಈ ನಾಟಕ ರಚಿಸಿದ್ದಾರೆ. ವಖಾರಿ ಅಂದರೆ ತಂಬಾಕನ್ನು ಶುಚಿಗೊಳಿಸುವ ಗೋದಾಮು. ಧೂಸ ಎಂದರೆ ಅಲ್ಲಿನ ದೂಳು. ಇಲ್ಲಿ ಹೊರಹೊಮ್ಮುವ ದೂಳಿನಲ್ಲಿ ತಂಬಾಕಿನ ಜರ್ದಾದ ಘಾಟು ಇದ್ದೇ ಇದೆ. ಅದನ್ನೊಂದು ರೂಪಕವಾಗಿ ಬಳಸಿ ಜನರ ದನಿಯನ್ನು ರಂಗಕೃತಿಯಲ್ಲಿ ಎತ್ತಿ ಹಿಡಿದಿದ್ದಾರೆ.

ತಂಬಾಕು ಕಾರ್ಮಿಕರ ಹೋರಾಟ ಜೋರಾಗಿಯೇ ನಡೆದಿರುತ್ತದೆ. ಅದಕ್ಕೆ ಪ್ರತಿಯಾಗಿ ಮಾಲೀಕರ ವರ್ಗ ಪ್ರತಿರೋಧ ಒಡ್ಡುತ್ತಲೇ ಇರುತ್ತದೆ. ಕಾರ್ಮಿಕ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕುವ ಮಾಲೀಕವರ್ಗ, ಅದನ್ನು ದಿಟ್ಟವಾಗಿ ಎದುರಿಸುವ ಕಾರ್ಮಿಕರು, ಆದಾಗ್ಯೂ ಆ ಶೋಷಣೆಯ ಬಲೆಯೊಳಗೆ ಬೀಳುವ ಮುಗ್ಧೆಯರು... ಈ ಶೋಷಣೆ ತಡೆಯಲು ಮುಂದಾದ ಬೀಡಿ ವ್ಯಾಪಾರಿ ಮಹಮದ್‌ನ ಕೊಲೆ... ಇಂಥ ಹಲವಾರು ಘಟನೆಗಳು ನಾಟಕವನ್ನು ಆವರಿಸಿವೆ. ನಾಟಕಕ್ಕೆ ಹಿನ್ನೆಲೆಯಾಗಿ ಸಂಗ್ಯಾ ಬಾಳ್ಯಾ ನಾಟಕದ ತಾಲೀಮು ಸಮಾನಾಂತರ ಕಥೆಯಾಗಿ ಕಾಣುತ್ತದೆ. ಕೆಲವು ದೃಶ್ಯಗಳು ಸಂಗ್ಯಾ ಬಾಳ್ಯಾ ನಾಟಕದ ತಾಲೀಮಿನ ತುಣುಕಿನೊಂದಿಗೆ ಅಂತ್ಯಗೊಳ್ಳುತ್ತವೆ.

ತೀವ್ರಗೊಂಡ ಹೋರಾಟವನ್ನು ವ್ಯವಸ್ಥಿತವಾಗಿ ಹಣಿಯುವ ಪ್ರಯತ್ನ ನಡೆಯುತ್ತದೆ. ಅದೂ ಕೊನೆಗೆ ಪ್ರಧಾನ ಪಾತ್ರದ ಭೀಮವ್ವ ಸಂಗ್ಯಾಬಾಳ್ಯಾ ನಾಟಕದ ವೇದಿಕೆಯಲ್ಲೇ ಕೊಲೆಯಾಗುವುದರೊಂದಿಗೆ ಅಂತ್ಯಗೊಳ್ಳುತ್ತದೆ. ಹೆಚ್ಚು ಕಡಿಮೆ ಸಂಗ್ಯಾ ಬಾಳ್ಯಾದ ಅಂತ್ಯದಲ್ಲಿ ಕಂಡು ಬರುವ ರೀತಿಯ ಘಟನೆಯೇ ಇಲ್ಲಿದೆ. ಎಲ್ಲ ಮುಗಿದ ಮೇಲೆ ಸಾಹುಕಾರರ ಅಂಗವಿಕಲ, ಮಂದಬುದ್ಧಿಯ ಮಗ ಬಾಹುಬಲಿಯು ನಾಟಕದ ಕೊನೆಯಲ್ಲಿ ‘ಹಂ ಹೋಂಗೇ ಕಾಮ್‌ಯಾಬ್‌’ ಎಂದು ಹೇಳುತ್ತಾ ಬರುವುದು ವೈರುಧ್ಯ ಮತ್ತು ಪ್ರತಿರೋಧದ ಧ್ವನಿಗಳಿಗೆ ತಿರುಗಿ ಹೇಳುವ ವ್ಯಂಗ್ಯದಂತೆಯೂ ಭಾಸವಾಗುತ್ತದೆ.

ತಂಬಾಕು ಕಾರ್ಮಿಕರ ಆಂದೋಲನವನ್ನು ಹಣಿಯಲು ಹುಟ್ಟಿಕೊಳ್ಳುವ ಮಾರುಕಟ್ಟೆ ಶಕ್ತಿಗಳು (ಪೂಲಚಂದ್‌, ಪೋರವಾಲ), ಅವುಗಳ ಒಳಸಂಚು, ಒಳಗೆ ಅಡಗಿರುವ ತಣ್ಣನೆಯ ಕ್ರೌರ್ಯ ಇಲ್ಲಿ ಅನಾವರಣಗೊಂಡಿದೆ. ಹೋರಾಟದ ಹಿಂದಿರುವ ರಾಜಕೀಯ, ಬೆಂಬಲ ಕೊಟ್ಟೂ ಕೊಡದಂತಿರುವ ಧಾರ್ಮಿಕ ಮುಖಂಡರು ಎಲ್ಲರ ಮುಖವನ್ನೂ ನಾಟಕ ತೆರೆದಿಟ್ಟಿದೆ.

ಹಳೇ ಮೈಸೂರು, ಹುಣಸೂರು, ಪಿರಿಯಾಪಟ್ಟಣ ಪ್ರದೇಶಗಳ ಹಳ್ಳಿ ಸೊಗಡಿನ ಭಾಷೆ ಬಳಸಿರುವುದು ವಸ್ತುವನ್ನು ಇನ್ನಷ್ಟು ಹತ್ತಿರವಾಗಿಸಿದೆ. ಆ ಪದಗಳ ಅರ್ಥಗಳೂ, ಮೊದಲ ಪ್ರದರ್ಶನದ ವಿವರಗಳೂ ಪುಸ್ತಕದ ಕೊನೆಯಲ್ಲಿ ಇವೆ. ನೆಲಮೂಲದ ಜನರ ಪ್ರತಿರೋಧದ ದನಿಯಾಗಿ ಈ ಕೃತಿ ಅವರ ಭಾಷೆಯಲ್ಲೇ ಮೂಡಿಬಂದಿದೆ.

***

ಕೃತಿ: ವಖಾರಿಧೂಸ (ನಾಟಕ)
ಲೇ: ಡಿ.ಎಸ್‌. ಚೌಗಲೆ
ಪ್ರ: ಸ್ವಪ್ನ ಬುಕ್‌ ಹೌಸ್‌ ಬೆಂಗಳೂರು
ಪುಟಗಳು: 104
ಬೆಲೆ: ₹ 100
ಸಂಪರ್ಕ: 080 40114455

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT