ಶನಿವಾರ, ಅಕ್ಟೋಬರ್ 24, 2020
25 °C

ಚಂದಮಾಮ ಮತ್ತು ಶಂಕರ ತಾತ!

ಪಿನಾಕ Updated:

ಅಕ್ಷರ ಗಾತ್ರ : | |

ಬಾಲ್ಯದಲ್ಲಿ ಪ್ರತೀ ತಿಂಗಳು ತಪ್ಪದೇ ಪ್ರತ್ಯಕ್ಷವಾಗುತ್ತಿದ್ದ ಆ ಚಿತ್ರ ಮನದಂಗಳದಲ್ಲಿ ಎಂದೆಂದಿಗೂ ಹಸಿರು. ಬಲಗೈಯಲ್ಲಿ ಖಡ್ಗ ಹಿಡಿದು, ಎಡ ಹೆಗಲ ಮೇಲೆ ಬೇತಾಳವನ್ನು ಜೋತು ಬೀಳಿಸಿಕೊಂಡು, ಯಾವುದೇ ಭಯವಿಲ್ಲದೆ ಕಾಡಿನಲ್ಲಿ ನಡೆದು ಹೋಗುತ್ತಿದ್ದ ರಾಜಾ ವಿಕ್ರಮನ ಆ ನೋಟವನ್ನು ಮರೆಯುವುದಾದರೂ ಹೇಗೆ? ಬೆನ್ನಿಗೇರಿದ ಬೇತಾಳವು ಸ್ವಾರಸ್ಯಕರ ಕಥೆ ಹೇಳಿ, ಕೊನೆಗೊಂದು ಪ್ರಶ್ನೆಯನ್ನೂ ಮುಂದಿಡುತ್ತಿತ್ತು. ಉತ್ತರ ಕೊಡದಿದ್ದರೆ ‘ನಿನ್ನ ತಲೆಯೊಡೆದು ಸಹಸ್ರ ಹೋಳಾಗುತ್ತದೆ’ ಎಂಬ ಧಮಕಿಯನ್ನು ಬೇರೆ ಹಾಕುತ್ತಿತ್ತು. ನಮಗೋ ಎಲ್ಲಿ ರಾಜನ ತಲೆಯೊಡೆದು ಹೋಗುವುದೋ ಎನ್ನುವ ಆತಂಕ. ಆದರೆ, ಬುದ್ಧಿವಂತ ರಾಜ ಸಮರ್ಪಕ ಉತ್ತರ ನೀಡುತ್ತಿದ್ದಂತೆ ಬೇತಾಳ ಮರದ ಮೇಲೆ ಹಾರಿಹೋಗುತ್ತಿತ್ತು.

‘ಚಂದಮಾಮ’ ಮಕ್ಕಳ ಪತ್ರಿಕೆಯಲ್ಲಿ ಬರುತ್ತಿದ್ದ ಈ ಕಥಾಸರಣಿಯಷ್ಟೇ ರೋಚಕವಾಗಿದ್ದುದು ಕಥೆಯನ್ನು ಕಟ್ಟಿಕೊಡುತ್ತಿದ್ದ ಆ ಅಮರ ಚಿತ್ರಗಳು. ಮಕ್ಕಳ ಭಾವಕೋಶವನ್ನು ಇನ್ನಿಲ್ಲದಂತೆ ವಿಸ್ತರಿಸಿದ ಚಿತ್ರಗಳು ಅವು. ಎಳೆಯರ ಕಲ್ಪನೆಗಳಿಗೆ ಗರಿ ಮೂಡಿಸಿ, ಬಣ್ಣಗಳನ್ನೂ ತುಂಬಿದ್ದವು. ಅಂದಹಾಗೆ, ಆ ಚಿತ್ರಗಳನ್ನು ರಚಿಸಿದವರು ಕರಥೊಳುವು ಚಂದ್ರಶೇಖರನ್‌ ಶಿವಶಂಕರನ್‌. ‘ಚಂದಮಾಮದ ಶಂಕರ’ ಎಂದೇ ಪ್ರಸಿದ್ಧರಾಗಿದ್ದ ಈ ಅಕ್ಕರೆಯ ತಾತ, ತಮ್ಮ 96ನೇ ವಯಸ್ಸಿನಲ್ಲಿ ಮೊನ್ನೆಯಷ್ಟೇ ಕೊನೆಯುಸಿರು ಎಳೆದರು. ಬಾಲ್ಯದಲ್ಲಿ ಚಂದಮಾಮನನ್ನು ಓದಿ, ಬೆಳೆದವರೆಲ್ಲ ತಾತನ ಅಗಲಿಕೆಗೆ ಕಣ್ಣೀರಾದರು.

ದೇಶದ ಬಹುತೇಕ ಗ್ರಂಥಾಲಯಗಳ ಕಾಯಂ ಸದಸ್ಯನಾಗಿರುತ್ತಿದ್ದ ‘ಚಂದಮಾಮ’ನ ದರ್ಶನಕ್ಕೆ ಇನ್ನಿಲ್ಲದಂತಹ ಪೈಪೋಟಿ. ತಿಂಗಳು ಮುಗಿಯುತ್ತಾ ಬಂದರೂ ‘ಚಂದಮಾಮ’ನನ್ನು ಹಿಡಿಯಲು ಹರಸಾಹಸವೇ ಮಾಡಬೇಕಾಗುತ್ತಿತ್ತು. ಅದಕ್ಕೆ ಕಾರಣ, ಅದರಲ್ಲಿ ಇರುತ್ತಿದ್ದ ಕಥೆಗಳು ಮತ್ತು ಆ ಕಥೆಗಳಿಗೆ ಶಂಕರ ತಾತ ಅವರು ರೂಪಿಸಿರುತ್ತಿದ್ದ ಚಿತ್ರಗಳು. ಆ ಕಲಾವಿದನ ಕುಂಚ ದೇಶದ ಯುವ ಪೀಳಿಗೆಯ ಮೇಲೆ ಮಾಡಿದ ಮೋಡಿ ಅಂತಹದ್ದು.. ಶಂಕರ ಅವರಿಗೆ ಆ ಪರಿಯ ಕಲಾಸಕ್ತಿ ಬಾಲ್ಯದಲ್ಲೇ ಇತ್ತಂತೆ. ಇತಿಹಾಸದ ಪರೀಕ್ಷೆಯಲ್ಲಿ ಉತ್ತರ ಬರೆಯುವಾಗ ಐತಿಹಾಸಿಕ ಘಟನೆಗಳ ಚಿತ್ರಗಳನ್ನೇ ಅವರು ಬಿಡಿಸಿ ಬಂದಿದ್ದರಂತೆ!

ವಿಕ್ರಮ ಮತ್ತು ಬೇತಾಳದ ಕಥೆಗಳಷ್ಟೇ ಅಲ್ಲದೆ ರಾಮಾಯಣ, ಮಹಾಭಾರತದ ಕಥಾ ಪ್ರಸಂಗಗಳೂ ಅವರ ಕುಂಚದಲ್ಲಿ ಜೀವತಾಳಿ ಆ್ಯನಿಮೇಟೆಡ್‌ ಮೂವಿಗಳಂತೆ ಕಣ್ಮುಂದೆ ಮೆರವಣಿಗೆ ಹೋಗುತ್ತಿದ್ದವು. ಕಥಾ ಪ್ರಸಂಗದ ಪಾತ್ರಗಳೆಲ್ಲ ನಿರ್ಜೀವ ಕಾಗದದಿಂದ ಎದ್ದುಬಂದು ಪುಟಾಣಿ ಹೃದಯಗಳೊಳಗೆ ಇಳಿದುಬಿಡುತ್ತಿದ್ದವು. ಆಗ ಇಡೀ ಕಥೆ ಒಂದು ಭವ್ಯ ಶಿಲ್ಪದಂತೆ ಮೂರ್ತರೂಪ ಪಡೆದು ಎಳೆಯ ಮನಸ್ಸುಗಳ ಬುದ್ಧಿ–ಭಾವಗಳಿಗೆ ಚಿನ್ನದ ಹೊಳಪನ್ನು ತುಂಬುತ್ತಿತ್ತು.

ಹದಿಮೂರು ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದ ‘ಚಂದಮಾಮ’ 2012ರಲ್ಲಿ ಸ್ಥಗಿತಗೊಂಡಿತು. ಆದರೆ, ಮಕ್ಕಳ ಸಾಹಿತ್ಯ ಇರುವಷ್ಟು ಕಾಲವೂ ಚಂದಮಾಮನ ಸಾಹಿತ್ಯ, ಶಂಕರರ ಚಿತ್ರಲೋಕ ಎರಡೂ ಅಮರ. ನಾವು ಎಳೆಯರಾಗಿ ಚಂದಮಾಮ ಓದುವಾಗ ಶಂಕರ ತಾತನ ಬಗೆಗೆ ಅಷ್ಟಾಗಿ ಗೊತ್ತಿರಲಿಲ್ಲ. ಚಿತ್ರಗಳನ್ನು ಕಣ್ತುಂಬಿಕೊಳ್ಳುವಲ್ಲಿ ಕಾತರರಾದವರಿಗೆ ಅದರ ಅಗತ್ಯವೂ ಕಾಡಿರಲಿಲ್ಲವೇನೋ! ಚಿತ್ರದ ಮೂಲೆಯಲ್ಲಿ ‘ಶಂಕರ’ ಎಂಬ ಗುರುತು ಹಾಕಿರುವುದಷ್ಟೇ ನಮಗೆ ಗೊತ್ತಿದ್ದುದು. ಚಿತ್ರಗಳ ಮೂಲಕ ಎಲ್ಲರನ್ನೂ ಬಹುವಾಗಿ ಕಾಡಿದವರು ಆ ತಾತ. ಹೌದು, ಅವರು ಈಗಿಲ್ಲ. ಚಂದಮಾಮನ ಕಥೆಗಳಂತೆ ತಾತನೂ ಈಗ ಬರೀ ನೆನಪು.

ಚಿತ್ರಕೃಪೆ: ಚಂದಮಾಮ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.