ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ್ ಸಿಹಿಮೊಗೆ ಬರೆದ ಕಥೆ: ಕೆಂಪು ಷರಾಬು

Last Updated 31 ಜುಲೈ 2021, 19:30 IST
ಅಕ್ಷರ ಗಾತ್ರ

‘ನಿನ್ನ್ ಬಾಯಿಗೆ ನನ್ನ್ ಹಾಟ್ ಹುಯ್ಯ,

ನನ್ನ್ ನಾಟ್ಕಳ ಮುಂಡೆ ಮಗನೆ,

ಯಾವಾಗ್ಲೂ ಹೆಂಡ್ರು ಸೆರ್ಗು ಇಟ್ಕಂಡೆ ಓಡಾಡ್ತಿಯಲ್ಲೋ,

ನಾವೇನ್ ನಿನ್ನ ಸಾಕಿಲ್ವ?

ಓದುಸ್ಲಿಲ್ವ?

ಯಾಕ್ ನಮ್ ಹೊಟ್ಟೆ ಉರಿಸ್ತಿಯೋ?’

ಹಿಂಗೆ ಸಣ್ಣವ್ವ, ಕೊನೆ ಮಗ ಡಾಕುಟ್ರು ಓದಿದವ್ನು ಅನ್ನೋದು ತಿಳ್ಕಳ್ದೆ ಒಂದೇ ಸಮನೇ ಬಯ್ತಾ ಮನೆ ಮುಂದಿನ ಜಲ್ಲಿ ಕಲ್ಲಿನ ಮೇಲೆ ಕುಂತಿದ್ಲು. ಸಣ್ಣವ್ವನಿಗೆ ಐದ್ ಜನ ಮಕ್ಳು, ಎರಡು ಗಂಡು ಮೂರು ಹೆಣ್ಣು. ಮೊದಲನೆಯ ಮಗಳನ್ನು ಭದ್ರಾವತಿಯ ಬೀರಪ್ಪನಿಗೆ ಧಾರೆ ಎರೆದು ಕೊಟ್ಟಿದ್ಳು, ಎರಡನೆಯವಳನ್ನು ಶಿಕಾರಿಪುರದ ಹೊಳಲೂರು ಗ್ರಾಮದ ಜವರೇಗೌಡನಿಗೆ ಮದುವೆ ಮಾಡಿಕೊಟ್ಟಿದ್ದಳು. ಇನ್ನೂ ಮೂರನೆಯ ಮಗಳನ್ನು ‘ಜಾತಿ ಕುಲ ಅಂತಾ ನೋಡ್ಕಂಡ್ ಕುಂತ್ರೆ ಇವ್ಳ ಬದ್ಕು ನಾನ್ ಸತ್ ಮೇಲೆ ಮೂರಬಟ್ಟೆ ಆಗೋದಂತು ಗ್ಯಾರಂಟಿ, ಯಾವ್ ಜಾತಿನೋ ಯಾವ ಕುಲನೋ ಅದೆಲ್ಲಾ ನಂಗ್ ಬೇಡ ರಾಮಣ್ಣ ಒಳ್ಳೆ ಹುಡ್ಗ ಆಗಿದ್ರೆ ಸಾಕು ಹೆಂಗಾದ್ರು ಮಾಡ್ಸಿ ಇವ್ಳಿಗೊಂದು ಕಂಕ್ಣ ಕಟ್ಟಿಸ್ಬಿಡು ಮತ್ತೆ ಅಂತಾ ಊರಿನ ಹಿರಿಕನನ್ನು ಕಂಡು ಬೇಡಿ ಕೊಂಡಿದ್ದಳು’ ಎರಡು ಮದುವೆ ಮಾಡಿ ಇದ್ದ ಬಂಗಾರ, ಕಾಸು, ಅವರಪ್ಪ ಕೊಟ್ಟಿದ್ದ ಬೆಳ್ಳಿ ಸಾಮಾನು ಎಲ್ಲಾ ಕಳ್ಕೊಂಡಿದ್ಲು, ಇನ್ನೂ ಅವತ್ತಿಂದು ಅವತ್ತಿಗಷ್ಟೇ ನೋಡ್ಕಂಡ್ ತಿನ್ನೋಕೆ ಗೌಡ್ರು ಮನೆ ಕೆಲಸ ಇಲ್ಲ ಸುಣ್ಣ ಬಳಿಯಾಕೆ ಹೋಗಿ ದುಡಿತ್ತಿದ್ದ ಎಪ್ಪತ್ತು ರೂಪಾಯಿನೇ ವಾರಗಳ ಕಾಲದ ಹಸಿವಿಗೆ ಕೈ ಹಿಡಿತ್ತಿತ್ತು. ನಾಲ್ಕನೇಯ ಮಗ ಭೀಮಣ್ಣ ಅಕ್ಷರ ತಲೆಗೆ ಹತ್ದೆ ಎತ್ತಿನ ಗಾಡಿ ಓಡಿಸ್ಕೊಂಡು ಸೇಂದಿ ಕುಡ್ಕೊಂಡು, ಹೊಟ್ಟೆ ಹಸಿವಿಗೆ ಸಿಮೆಂಟ್ ಮೂಟೆ ಹೊತ್ತಿ ಬಂದ ಕಾಸಲ್ಲಿ ಹೋಟೆಲ್ನಾಗ ತಿಂದು ದಾಹ ನೀಗಿಸಿಕೊಳ್ತ ಊರೂರು ಅಲಿತಿದ್ದ.

ಇದ್ದದ್ದರಲ್ಲಿ ಸಣ್ಣವ್ವನ ಕೊನೆಯ ಮಗ ತಿಮ್ಮೇಶಿನೇ ಹಂಗೂ ಹಿಂಗೂ ಬರ್ತಾ ಇದ್ದ ಸ್ಕಾಲರ್ಶಿಪ್ ಬಳಸಿ ಅವ್ರ ಇವ್ರ ಕಾಲ್ ಹಿಡ್ದು ಪಿಯುಸಿ ಮುಗ್ಸಿದ್ದ. ನಂತರ ಅವರ ಸಂಬಂಧಿಕನೊಬ್ಬ ನಾನು ಓದಿಸ್ತಿನಿ ನಿನ್ ಕೂಸ್ನ, ನೀನು ಏನು ಹೆದ್ರು ಬೇಡವ್ವ ಅಂತಾ ತಿಮ್ಮೇಶಿನಾ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ. ಹಣಕಾಸಿನ ವಿಷಯದಲ್ಲಿ ದೊಡ್ಡ ಆಸಾಮಿಯಾಗಿದ್ದ ಸಣ್ಣವ್ವನ ಸಂಬಂಧಿಕ ರುದ್ರಪ್ಪ ಗೌಡರಿಗೆ, ಮನೆಯಲ್ಲಿ ನೆಮ್ಮದಿ ಇರಲಿಲ್ಲ. ಮೊದಲನೆಯ ಹೆಂಡತಿ ಮದುವೆಯಾದ ಎರಡು ವರ್ಷಗಳಲ್ಲಿಯೇ ಹಡಿವಾಗ ಮಗು ಮತ್ತು ಅವಳು ಇಬ್ಬರು ತೀರಿ ಕೊಂಡಿದ್ದರು. ರುದ್ರಪ್ಪ ಅದೇ ಯೋಚನೆಯಲ್ಲಿ ಎರಡು ವರ್ಷಗಳ ಕಾಲ ಮತ್ತೊಂದು ಮದುವೆಯಾಗಿರಲಿಲ್. ಕೊನೆಗೆ ಸಣ್ಣವ್ವಳನ್ನು ಸೇರಿಸಿದಂತೆ, ಸಂಬಂಧಿಕರು ಊರಿನ ಹಿರಿಕರೆಲ್ಲಾ ಒತ್ತಾಯ ಮಾಡಿ ನೀವೊಂದು ಮದುವೆ ಆಗ್ಲೆ ಬೇಕು ಧಣಿಯಾರ ಅಂತಾ ಹೇಳಿದಕ್ಕೆ ದುರ್ಗದ ಗಿರಿಜವ್ವಳನ್ನು ಮದುವೆ ಮಾಡಿಕೊಂಡು ಬಂದಿದ್ದರು. ರುದ್ರಪ್ಪನಿಗೂ ಗಿರಿಜವ್ವಳಿಗೂ ಸರಿಯಾಗಿ ಏಳೆಂಟು ವರ್ಷಗಳ ವ್ಯತ್ಯಾಸ, ಅಷ್ಟಕ್ಕೇ ಗಿರಿಜವ್ವ ರುದ್ರಪ್ಪನನ್ನ ಕಂಡರೆ ಸಾಕು ಗುರ್ ಅನ್ನೋಳು.

‘ಬರಗೆಟ್ಟವ್ರು ನಮ್ಮ ಮನೆಯವ್ರು, ನಂಗೆ ಇಷ್ಟ ಇಲ್ಲ ಹುಡುಗ ನಂಗಿಂತ ಎಂಟು ವರ್ಷ ದೊಡ್ಡವ್ನು, ನಾನು ಮದುವೆ ಆಗಲ್ಲ ಅಂದ್ರು, ಹಂಗೆಲ್ಲಾ ಹೇಳ್ಬಾರ್ದು ಕಣವ್ವ ಹುಡುಗನಿಗೆ ಆಸ್ತಿ ಇದೆ, ನಿನ್ನ ಜೀವನ ಮುಂದೆ ಸುಖವಾಗಿರ್ಬೇಕು ಅಂದ್ರೆ ನೀನು ಅವನನ್ನೇ ಮದುವೆಯಾಗ್ಬೇಕು ಅಂತಾ ಈ ನರಪೇತ್ಲ ನಾರಾಯಣನಿಗೆ ಗಂಟು ಹಾಕಿದ್ರು’ ಅಂತಾ ಮನೆಗೆ ಬಂದು ಹೋಗೋರ ಮುಂದೆ ಎಲ್ಲಾ ಗಂಡ ಅನ್ನೋ ಪೀರುತಿ ಇರ್ಲಿ ಕನಿಷ್ಠ ಮರ್ವಾದೇನು ಇಲ್ದೆ ಗಿರಿಜವ್ವ ಸಾರೋಳು.

ಬೆಂಗಳೂರಿಗೆ ಕರೆದುಕೊಂಡು ಬಂದ ನಂತರ ತಿಮ್ಮೇಶಿನಾ ತಮ್ಮ ಮನೆಯಲ್ಲಿಯೆ ಹಿಟ್ಟಾಕ್ಕೊಂಡು ಜೊತೆಗೆ ಮೆಡಿಕಲ್ ಸೀಟು ಕೊಡ್ಸಿ ಪೀರುತಿಯಿಂದ ಸಾಕಂಡಿದ್ರು ರುದ್ರಪ್ಪನವರು, ಗಿರಿಜವ್ವನಿಗೆ ಮಕ್ಕಳು ಆಗದೆ ಇದ್ರು ತಿಮ್ಮೇಶಿನಾ ಕಂಡ್ರೆ ಅಷ್ಟಕ್ಕೇ ಅಷ್ಟೇ ‘ಅಯ್ಯೋ ಬೇರೆ ರಕುತಕ್ಕೆ ಹುಟ್ಟಿದವಕ್ಕೆ ನಾವ್ ಯಾಕೆ ಸಾಕ್ಬೇಕು ಅಂತೀನಿ, ಅವ್ರೇನು ನಮ್ಮ ಮುಪ್ಪಿನಾಗ ಆದಾರ?’ ಅಂತಾ ಊರಿನ ಗೌಡ್ತಿ ಕೆಂಪವ್ವನ ಬಳಿ ಹೇಳೋಳು. ಹಿಂಗೆ ಹಿಂದೆ ತಿಮ್ಮೇಶಿನಾ ಜರಿದುಕೊಂಡು ಮಾತಾಡ್ತಿದ್ರು ಒಂದು ದಿನ ಕೂಡ ಅವನ ಮನಸ್ಸಿಗೆ ಬೇಸರ ಆಗೋ ಹಾಗೆ ಅವನ ಎದುರಿಗೆ ಮಾತಾಡಿರಲಿಲ್ಲ ಗಿರಿಜವ್ವ, ನಮ್ಮ ಸಂಬಂಧಿಕನೊಬ್ಬ ಡಾಕುಟ್ರು ಓದ್ತಾವ್ನೆ ಅನ್ನೋ ಖುಷಿ ಊರಿನ ಸರಿಕರ ಮುಂದೆ ಹೇಳಿಕೊಳ್ಳುವಾಗ ಗಿರಿಜವ್ವನಿಗೆ ವಿಚಿತ್ರವಾದ ಖುಷಿ ಸಿಕ್ತಾ ಇತ್ತು, ಹಿಂಗಾಗಿ ಸುಮ್ನಿದ್ಲು.

ಮೊದಲ ದಿನ ಮೆಡಿಕಲ್ ಕಾಲೇಜಿಗೆ ಬಂದ ತಿಮ್ಮೇಶಿಗೆ ‘ಥೋ ಯಾಕಾದ್ರು ನಾನು ಬೆಂಗಳೂರಿಗೆ ಬಂದ್ನೋ, ಇಲ್ಲಿ ಎಲ್ಲಾ ಹುಡುಗ್ರು ಟಸ್ಸು ಪುಸ್ಸು ಅಂತಾ ಬರಿ ಇಂಗ್ಲಿಷ್ನಾಗೆ ಮಾತಾಡ್ತಾವೆ, ಹೊಳ್ಳೂರು ಆಂಜನೇಯ ನೀನೇ ನನ್ನ ಕಾಪಾಡ್ಬೇಕು ಕಣಪ ಅಂತಾ ಆಗಾಗ ಮನೆ ದೇವ್ರನ್ನ ಬೇಡಿಕೊಳ್ಳೋನು’. ಪಿಯುಸಿಯನ್ನು ವಿಜ್ಞಾನ ವಿಷಯದಲ್ಲಿ ಓದಿದ್ರು ವಿಷಯ ಚೆನ್ನಾಗಿ ತಿಳಿದುಕೊಂಡಿದ್ದ ತಿಮ್ಮೇಶಿಗೆ ಇಂಗ್ಲಿಷ್ ಅಷ್ಟಾಗಿ ಬರುತ್ತಿರಲಿಲ್ಲ. ಊರಲ್ಲಿ ಎಲ್ಲಾ ಗೆಳೆಯರು ಕನ್ನಡದಲ್ಲಿಯೆ ಮಾತಾಡೋರು, ಹಿಂಗಿರುವಾಗ ಪಾಪ ಅವ್ನಿಗೆ ಬೆಂಗಳೂರಿನ ಇಂಗ್ಲಿಷ್ ಹೇಗೆ ಬಂದಾತು?

‘ಐದ್ ವರ್ಷ ಮೆಡಿಕಲ್ ಓದ್ಸಾದು, ಊಟ ಬಟ್ಟೆ ನೋಡಿಕೊಳ್ಳೋದು ಅಂದ್ರೆ ಸುಮ್ನೇನಾ, ಏನೇ ಆಗಿರ್ಲಿ ನಿನ್ ಮಗ ತಿಮ್ಮೇಶಿ ಬೋ ಅದೃಷ್ಟ ಮಾಡಿ ಹುಟ್ಟವ್ನೆ ಬಿಡೆ ಸಣ್ಣಿ’ ಅಂತಾ ಅವಳ ಗೆಳತಿ ನರಸವ್ವ ಸಿಕ್ಕಾಗೆಲ್ಲಾ ಅದನ್ನೇ ಹೇಳೋಳು. ಇದುನ್ನ ಕೇಳಿ ಕೇಳಿ ಸಾಕಾಗೋಗಿದ್ದ ಸಣ್ಣಿಗೆ ‘ಹೇ ಬಿಡತ್ತಾಗೆ ಅದೇನು ಸಿಕ್ಕಾಗೆಲ್ಲ ಹೇಳುದ್ನೇ ಹೇಳಿ ಹೇಳಿ ನನ್ ಕಿವಿ ಯಾಕ್ ಕುಯ್ದಿಯಾ, ಅವ್ನು ಐದ್ ವರ್ಷ ಓದಿ ಮುಗ್ಸೋ ಹೊತ್ಗೆ ಯಾರ್ ಇರ್ತಾರೋ ಯಾರ್ ಬಿಡ್ತಾರೋ. ಸತ್ ಮುಕ್ಳಿ ಯಾವ್ ಮೂಲೆಗೋ ಈಗಿಂದು ಹೇಳೇ ನರ್ಸಿ’ ಅನ್ನೋಳು. ಉತ್ತ್ರ ಕೊಡೋಕಾಗದ ನರ್ಸಿ ಹು ಅಂತಾ ತಲೆ ಆಡ್ಸಿ, ಬರ್ತಿನ್ ಕಣೆ ವತ್ತಾರೆ ಬೇಗ ಎದ್ದು ಹೊಲುದ್ ಕಡೀಕೆ ಹೋಗ್ಬೇಕು ಅಂತಾ ಅಲ್ಲಿಂದ ಕಾಲು ಕೀಳೋಳು.

ಹಿಂಗೆ ಊರಿನ್ ತುಂಬಾ ಸಣ್ಣವ್ವ ಎಲ್ಲಿ ಕಣ್ರು ಸಾಕು ಬರೀ ಈ ತಿಮ್ಮೇಶಿ ವಿಚಾರನೇ ಮಾತಾಡೋರು ಜನ. ಇದುನ್ನ ಕೇಳಿ ಕೇಳಿ ರೋಸಿ ಹೋಗಿದ್ಲು ಸಣ್ಣವ್ವ, ಅಲ್ಲಾ ಈ ಮುಂಡೇಮಗ ಒಂದ್ ರೂಪಾಯಿ ದುಡುದ್ ಕೊಡ್ಲಿಲ್ಲ ಇನ್ನೂ ಓದ್ತಾವ್ನೆ, ನಾನು ಸುಣ್ಣ ಬಳಿಯೋದು ತಪ್ಪಿಲ್ಲ, ಕೆಲ್ಸಿಲ್ಲದ ಜನ ಮಾತ್ರ ಒಂದ್ ಪೈಸೆ ಉಪಯೋಗಕ್ಕೆ ಬಾರ್ದ ಮಾತಾಡ್ತಾವೆ. ಜನುಕ್ಕೆ ತಲೆ ಸರಿ ಇಲ್ಲ ಬುಡು ಅಂತಾ ಒಳಗೊಳಗೆ ಮಾತಾಡಿಕೊಳ್ಳೋಳು. ಸಣ್ಣವ್ವಳಿಗೆ ಈ ಹೊಗಳಿಕೆಯಿಂದ ಹೊಟ್ಟೆ ತುಂಬೋದಿಲ್ಲ ಅನ್ನೋದು ಬಹಳ ಚೆನ್ನಾಗಿ ತಿಳಿದಿತ್ತು. ಯಾವ್ ಭ್ರಮೆನು ಅವಳು ತಲೆಗೆ ಹಚ್ಚಿಕೊಂಡಿರಲಿಲ್ಲ, ತನಗೆ ಇಷ್ಟ ಬಂದಂತೇನೇ ಬದುಕೋಳು, ಈ ಗಟ್ಟಿಗಿತ್ತಿ ಹೆಣ್ಣು.

**
ಇತ್ತ ತಿಮ್ಮೇಶಿ ಬೆಂಗ್ಳೂರಿಗೆ ಬಂದು ಮೂರು ವರ್ಷಗಳಾಗಿತ್ತು, ಮೊದ ಮೊದಲು ಬೆಂಗ್ಳೂರು ನಮ್ಮಂತವರಿಗಲ್ಲಾ ಅಂತಿದ್ದವನು, ಈಗ ಬೆಂಗ್ಳೂರು ಇರೋದೆ ನಮ್ಮಂತವರಿಗೆ ಅಂತಾ ಗೆಳೆಯರ ಜೊತೆ ಹೇಳಿ ಕೊಳ್ತಿದ್ದ, ಮಾತನಾಡೋಕು ಹೆದರುತ್ತಿದ್ದವನು ಇಂಗ್ಲಿಷ್ ಸರಾಗವಾಗಿ ಮಾತನಾಡೋದು ಕಲಿತ, ಅವನ ವೇಷಭೂಷಣ ಬದಲಾಗಿತ್ತು, ಒಟ್ನಲ್ಲಿ ಅವನು ಶಿವಮೊಗ್ಗದ ಹಳ್ಳಿಯೊಂದರ ಹುಡುಗ ಅನ್ನಬಹುದಾದ ಯಾವ ಲಕ್ಷಣವನ್ನು ಉಳಿಸಿಕೊಂಡಿರಲಿಲ್ಲ, ವಾತಾವರಣ ಮತ್ತು ಕಾಲದ ಕಬಂಧ ಬಾಹುಗಳಿಗೆ ಸಿಕ್ಕು ರೂಪಾಂತರವಾಗಿದ್ದ, ಇನ್ನೂ ಕೆಲವು ವಿಷಯಗಳಲ್ಲಿ ತನ್ನನ್ನು ತಾನೇ ಬಹಳಷ್ಟು ಬದಲಾಯಿಸಿಕೊಂಡಿದ್ದ.

ಈ ಕಳೆದ ಮೂರು ವರ್ಷಗಳಲ್ಲಿ ಊರ ಕಡೆ ಹೆಚ್ಚೆಂದರೆ ಎರಡು ಬಾರಿ ಹೋಗಿ ಬಂದವನಿಗೆ ಊರು ಯಾಕೋ ಸಪ್ಪೆ ಅನಿಸತೊಡಗಿತ್ತು. ಇಲ್ಲಿ ಅವನಿಗೆ ಊಟ, ಬಟ್ಟೆ, ಬೀಸಿನೀರು ಎಲ್ಲವೂ ಕೂತ ಜಾಗದಲ್ಲಿಯೇ ಸಿಗುವಾಗ ಊರಿನ ನೆನಪು ಹೇಗಾದರೂ ಆದೀತು. ಅವ್ವನ ಬಗ್ಗೆ ಮಮಕಾರವಿದ್ದರೂ ಅಲ್ಲಿನ ಬಡತನದ ಬಗ್ಗೆ ವಿಪರೀತ ಎನಿಸುವಷ್ಟು ಅಸಮಾಧಾನವಿತ್ತು. ಬೆಂಗ್ಳೂರು ತಿಮ್ಮೇಶಿಯ ಆಲೋಚನಾ ಲಹರಿಯನ್ನೇ ಬದಲಾಯಿಸಿಬಿಟ್ಟಿತ್ತು. ಹೀಗೆ ಬೆಂಗಳೂರಿನ ಜೀವನ ಚೆನ್ನಾಗಿ ನಡೆದುಕೊಂಡು ಹೋಗುವ ಸಮಯದಲ್ಲಿ ಊಹಿಸಲು ಕೂಡ ಸಾಧ್ಯವಾಗದ ದಿನ ಬಂದೇ ಬಿಡ್ತು. ದೂರದ ಚೀನಾದಲ್ಲಿ ಆರಂಭಿಸಿ ವಿಶ್ವದಾದ್ಯಂತ ಹರಡಲು ಶುರುವಾಗಿದ್ದ ಕೊರೊನಾ ಬೆಂಗಳೂರಿಗೆ ಕಾಲಿಟ್ಟಿತ್ತು. ಕೊನೆಯ ವರ್ಷ ಮತ್ತು ನಾಲ್ಕನೇಯ ವರ್ಷದ ಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಅವರ ಜೊತೆ ಕೈ ಜೋಡಿಸಲು ಮನವಿ ಮಾಡಿತ್ತು ಸರಕಾರ. ಅಂತೆಯೇ ತಿಮ್ಮೇಶಿ, ಸರಕಾರದ ಇಲಾಖೆಯೊಂದಿಗೆ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಲು ಶುರು ಮಾಡಿದ್ದ. ಸೋಂಕು ತಗುಲಿದ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಜನರ ಆರೋಗ್ಯ ತಪಾಸಣೆ ಮಾಡಲು ಡಾಕ್ಟರುಗಳಿಗೆ ಸಹಾಯ ಮಾಡುವುದು ಆತನಿಗೆ ವಹಿಸಿದ್ದ ಮುಖ್ಯಕರ್ತವ್ಯವಾಗಿತ್ತು.

ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸರಕಾರ ಬಹಳಷ್ಟು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿರುವಾಗಲೇ, ನಗರದಲ್ಲಿ ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿತ್ತು. ಬಹುತೇಕರು ಬಹಳ ಬೇಗ ಗುಣಮುಖರಾಗಿ ಮನೆಯನ್ನು ಸೇರಿದ್ದರು. ಈ ನಡುವೆ ರುದ್ರಪ್ಪ ಗೌಡರಿಗೂ ಸೋಂಕು ತಗುಲಿರುವುದು ತಿಳಿದಾಗ ತಿಮ್ಮೇಶಿಗೆ ಭೂಮಿಯೇ ಕುಸಿದಂತೆ ಭಾಸವಾಗಿತ್ತು. ಕಾರಣ ರುದ್ರಪ್ಪ ಗೌಡರನ್ನು ಈ ಮೊದಲೇ ಅಸ್ತಮಾ ಮತ್ತು ಸಕ್ಕರೆ ಕಾಯಿಲೆ ಬಹಳಷ್ಟು ಸೊರಗಿಸಿದ್ದವು. ಒಂದು ಕ್ಷಣ ತಿಮ್ಮೇಶಿಗೆ ರುದ್ರಪ್ಪ ಗೌಡರು ಇಲ್ಲದೆ ಹೋದರೆ ಆತನ ಮುಂದಿನ ಜೀವನ ಓದು ಏನಾಗಬಹುದೆಂದು ದೃಶ್ಯ ಕಣ್ಣ ಮುಂದೆ ಬಂದತ್ತಿತ್ತು.

ಸೋಂಕು ತಗುಲಿದ ಮೂರನೇಯ ದಿನಕ್ಕೆ ರುದ್ರಪ್ಪ ಗೌಡರು ಇಹಲೋಕವನ್ನು ತ್ಯಜಿಸಿದ್ದರು. ಹೊರಗೆ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ ತಿಮ್ಮೇಶಿ ಒಂದು ತಿಂಗಳಿನಿಂದ ಸರಕಾರ ವ್ಯವಸ್ಥೆ ಮಾಡಿದ್ದ ಸ್ಥಳದಲ್ಲಿ ಉಳಿದುಕೊಂಡಿದ್ದ, ಹೀಗಾಗಿ ತಿಂಗಳಿನಿಂದ ರುದ್ರಪ್ಪ ಗೌಡರ ಮುಖವನ್ನು ನೋಡಲು ಸಾಧ್ಯವಾಗದವನಿಗೆ ಕೊನೆಗೆ ಅಂತಿಮ ದಿನದ ನೋವಿನಲ್ಲಿಯು ಸಹ ಅವರ ಮುಖ ನೋಡಲು ಸಾಧ್ಯವಾಗಲೇ ಇಲ್ಲ. ಕಾರಣ ಸರಕಾರದವರು ಮನೆಯವರಿಗೂ ದೇಹವನ್ನು ಕೊಡದೆ ಖುದ್ದು ತಾವೇ ಅಂತಿಮ ವಿಧಿ ವಿಧಾನಗಳನ್ನು ಮುಗಿಸಿದ್ದರು. ರುದ್ರಪ್ಪ ಗೌಡರೆಂಬ ಅಂತಃಕರಣ ತುಂಬಿದ ವ್ಯಕ್ತಿಯ ಬದುಕು ಅಲ್ಲಿ ಹೀಗೆ ಕೊನೆಯಾಗಿತ್ತು.

ಸಣ್ಣವ್ವನಿಗೆ ರುದ್ರಪ್ಪ ಗೌಡರ ಸಾವಿನ ಸುದ್ದಿ ಮುಟ್ಟುತ್ತಲೇ ಎದೆ ಬಡಿದುಕೊಂಡು ಕೇರಿಯವರೆಲ್ಲಾ ಏನಾಯ್ತೋ ಎಂದು ಅವಳ ಮನೆ ಮುಂದೆ ಬರುವಂತೆ ಕಿರುಚಿ ಗೋಳಾಡಿ ರಂಪ ಮಾಡಿದ್ದಳು.

‘ನಮ್ ಧಣಿಯಾರು ಹೋಗ್ಬಿಟ್ರಂತೆ,

ಈ ಹಾಳಾದ್ದು ರೋಗ ನನ್ನಾದ್ರು ತಗೊಂಡು ಹೋಗ್ಬಾರದಿತ್ತ?

ದೇವ್ರಂತ ಮನುಷ್ಯ ರುದ್ರಪ್ಪ ಗೌಡರೇ ಬೇಕಾಗಿತ್ತ!

ದೇವ್ರೆ ನಿನ್ ಬಾಯಿಗೆ ಮಣ್ಣಾಕ

ನೀನ್ ಇರೋದು ದಿಟಾನ, ಇಲ್ಲ ಇಲ್ಲ ನೀನಿಲ್ಲ’

ಅಂತಾ ಊರ್ ಜನರ ಮುಂದೆ ರಾತ್ರಿ ಎಲ್ಲಾ ನಿದ್ದೆ ಬಿಟ್ಟು ಅಳ್ಕಂಡೆ ಕೂತಿದ್ಲು.

ಮನೆಯಲ್ಲಿ ಈಗ ಗಿರಿಜವ್ವ ಒಬ್ಬಂಟಿ, ಇದ್ದಾಗ ಗೋಳು ಹೊಯ್ದು ಕೊಳ್ಳೋಳು, ಊರವರ ಮುಂದೆ ಅಣಕಿಸಿ ಮಾತನಾಡೋಳು, ಈಗ ಯಾರನ್ನು ಅಂತಾ ಅಣಕಿಸ್ತಾಳೆ? ಮನೆಯಲ್ಲಿ ಸ್ಮಶಾನ ಮೌನ!

ರುದ್ರಪ್ಪ ಗೌಡರ ಬೆಲೆ ಅವಳಿಗೆ ಈಗ ಅರಿವಾಗತೊಡಗಿತ್ತು. ತುಂಬಿದ್ದ ಅವಳ ವಯಸ್ಸು ಅದೆಷ್ಟು ದಿನಗಳ ಕಾಲ ಬಯಕೆಗಳ ಪ್ರವಾಹವನ್ನು ತಡೆದುಕೊಂಡೀತು? ಹೀಗೆ ದಿನಗಳು ಕಳೆಯಿತು, ಎರಡು ವರುಷಗಳು ಆಡಿಕೊಂಡು ಹೋಗಿ ಬಿಟ್ಟವು, ಕ್ರಮೇಣ ತಿಮ್ಮೇಶಿಯ ಮೇಲೆ ಗಿರಿಜವ್ವಳಿಗೆ ವಿಶೇಷವೆನಿಸುವಷ್ಟು ಮೋಹ ಆರಂಭವಾಗಿತ್ತು, ಈಗ ಅವಳ ಮನೆಯಲ್ಲಿ ಹೇಳುವವರು ಇಲ್ಲ, ಕೇಳುವವರು ಇಲ್ಲ, ಇತ್ತ ತಿಮ್ಮೇಶಿಗೂ ಬೇರೆ ಗತಿ ಇಲ್ಲ!

***

ಜಗತ್ತಿನಲ್ಲಿ ಯಾರು ಯಾರ ಮಾತನ್ನು ಕೇಳದೆ ಹೋದರು, ಕಾಮದ ಮಾತನ್ನು ಕೇಳದೆ ಇರುವವರು ಸಿಕ್ಕಾರೆ? ಅದರ ಪ್ರತಾಪಕ್ಕೆ ಸಿಲುಕಿ ನಲುಗಿ ಅದರ ಮುಂದೆ ತಲೆ ತಗ್ಗಿಸಿದವರ ಕುರುಹು ಎಲ್ಲಾದರು ಇದ್ದೀತೆ? ಕಾಮ ತಣಿಸಿ, ಕೂರಿಸಿ, ಬಗ್ಗಿಸಿ, ಹಿಗ್ಗಿಸಿ ಮತ್ತು ಬೇಕೆಂದಾಗ ಕುಗ್ಗಿಸಿ ಮನುಷ್ಯನೊಬ್ಬನನ್ನು ಬಗ್ಗು ಬಡಿಯಬಲ್ಲ ಏಕೈಕ ಸಾಧನ. ಗಂಡಿನ ಮೇಲೆ ಹೆಣ್ಣಿಗೆ ಮೋಹದಂತೆ ಸದಾಕಾಲವೂ ಹೆಣ್ಣಿನ ಸಾಗಂತ್ಯ ಬಯಸುವ ಗಂಡು, ಹೆಣ್ಣು ಹೆಣ್ಣುಗಳ ನಡುವಿನ ಪ್ರೇಮ ಅಥವಾ ಗಂಡು ಗಂಡುಗಳ ನಡುವಿನ ಸೆಳೆತದ ಭಾವ ತೀವ್ರತೆ, ಗಂಡೊಬ್ಬನಿಗೆ ಅಥವಾ ಹೆಣ್ಣೊಬ್ಬಳಿಗೆ ಸಹಜವಾಗಿ ಗಂಡು ಮತ್ತು ಹೆಣ್ಣುಗಳಿಬ್ಬರ ಮೇಲೆ ಉಂಟಾಗುವ ಆಕರ್ಷಣೆ, ಅಬ್ಬಾ, ಈ ಕಾಮದ ರೂಪಾಂತರಕ್ಕೆ ಎಲ್ಲೆಯುಂಟೇ!

ಯವ್ವೌನದ ತುಂಬು ಹೊಳೆಯಲ್ಲಿ ಈಜುತ್ತಿದ್ದ ಮೀನಿನಂತಾಗಿದ್ದಳು ಗಿರಿಜವ್ವ, ಆಕೆಗೀಗ ಕಾಮ ಪ್ರೇಮದ ಆಸರೆ ಬೇಕಾಗಿತ್ತು. ತಿಮ್ಮೇಶಿ ಅವಳಿಗೆ ಆ ಗಮ್ಯ ತಲುಪುವ ಸುಲಭದ ಹಾದಿಯಂತಾಗಿದ್ದ. ತಿಮ್ಮೇಶಿಗೆ ಆಕೆಯ ಮೇಲೂ ಸಹಜ ಸೆಳೆತದ ಜೊತೆಗೆ ಅನಿವಾರ್ಯತೆ ಕೂಡ ಇತ್ತು. ಆದರೂ ಅವನಿಗೆ ಒಳಗೊಳಗೆ ಜಿಗುಪ್ಸೆ ಅನ್ನಿಸಿಬಿಡೋದು,

‘ಛೇ ನನ್ನ ಕರೆದುಕೊಂಡು ಬಂದು ಅನ್ನ, ಬಟ್ಟೆ ಕೊಟ್ಟ ಧಣಿಯವರ ಹೆಂಡತಿಯ ಜೊತೆಗೆ ಸಂಬಂಧಾನ’ ಅಂತಾ ಅಂದುಕೊಳ್ಳೋನು.

ಮತ್ತೊಂದು ಸಲ..

‘ಅಯ್ಯೋ ಇದರಲ್ಲಿ ನನ್ನ ತಪ್ಪು ಏನಂದರೆ ಏನೂ ಇಲ್ಲ, ಗಿರಿಜವ್ವಾನೇ ಒತ್ತಾಯ ಮಾಡಿದ್ದು, ಅವರು ಹೇಳಿದಂತೆ ನಾನು ನಡೆದುಕೊಂಡೆ ಅಷ್ಟೇ’ ಎಂದು ತನ್ನಷ್ಟಕ್ಕೇ ತಾನೇ ಸ್ವಗತ ಹೇಳಿಕೊಂಡು ಕಿವುಚಿ ಹುಣಸೆಯ ಹುಳಿ ಹುಳಿಯಂತಾಗಿದ್ದ ಮನಸ್ಸನ್ನು ಹತೋಟಿಗೆ ತಂದುಕೊಳ್ಳೋನು.

ಊರಿನೊಳಗೆ ಇವರಿಬ್ಬರ ಸಂಬಂಧದ ಬಗ್ಗೆ ಗಾಳಿ ಸುದ್ದಿ ಹಬ್ಬತೊಡಗಿತ್ತು. ಗಿರಿಜವ್ವ ಬಾಯಿ ಬಡುಕಿ ಯಾರ ಮಾತಿಗೂ ಕ್ಯಾರೆ ಅನ್ನದವಳು. ಆದರೆ ಈ ತಿಮ್ಮೇಶಿ ಮೃದು ಸ್ವಭಾವದ ಯುವಕ. ಊರಿನಲ್ಲಿ ಹೀಗೆ ನಮ್ಮಿಬ್ಬರ ಬಗ್ಗೆ ಜನ ಕೆಟ್ಟದಾಗಿ ಮಾತನಾಡಿಕೊಳ್ಳುತ್ತಿದ್ದಾರೆ ಎಂಬ ಮಾತು ಕಿವಿಗೆ ಬಿದ್ದ ಕ್ಷಣದಿಂದ ಅವನ ಕೈಕಾಲು ನಡುಗಲು ಶುರುವಾಗಿತ್ತು. ವಿಪರೀತ ಅನಿಸುವಷ್ಟು ಆಲೋಚಿಸಿ ಬೆವರುತ್ತಿದ್ದ. ಅದೊಂದು ದಿನ ತಿಮ್ಮೇಶಿಗೆ ಗಿರಿಜವ್ವ ತಾನು ಗರ್ಭಣಿಯಾಗಿರುವ ವಿಷಯ ಹೇಳುತ್ತಲೇ ಪ್ರಪಾತಕ್ಕೆ ಕುಸಿದಂತೆ ಮಾನಸಿಕವಾಗಿ ಕುಸಿದುಬಿಟ್ಟ.

‘ಗಿರ್ಜಾ ನಂಗೆ ಇದ್ಯಾಕೋ ಸರಿ ಅನಿಸ್ತಾ ಇಲ್ಲ, ನಾಳೆ ನಾವು ಎಲ್ರಿಗೂ ಉತ್ತರ ಕೊಟ್ಕೊಂಡು ಕೂರೋಕು ಆಗೋದಿಲ್ಲ, ಅಚಾತುರ್ಯದಿಂದ ನಡೆದ ಈ ಘಟನೆಯನ್ನು ಮರೆತು, ಹುಟ್ಟಲಿರುವ ಈ ಮಗುವನ್ನು ತೆಗೆಸಿ ಬಿಡೋಣ, ಇದರಿಂದ ಇಬ್ಬರಿಗೂ ಒಳ್ಳೆಯದು, ಮರ್ಯಾದೆನಾದ್ರು ಉಳಿಯುತ್ತದೆ’ ಎಂದ.

ಅದಕ್ಕೆ ಗಿರಿಜವ್ವ..
‘ಯೋ ಅದೇನು ಅಂತಾ ಮಾತಾಡಿಯೇ, ನನ್ನ್ ಹೊಟ್ಟೆನಾಗ ಇದುವರೆಗೂ ಒಂದ್ ಹುಳ ಕೂಡ ಹುಟ್ಟಿಲ್ಲ, ಇದು ನಂಗೆ ಖುಷಿ ಸಮಾಚಾರ, ಈ ಸಮಾಜ ಏನನ್ನತ್ತೋ ಅದು ನಂಗೆ ಬೇಕಾಗಿಲ್ಲ, ನಾನಂತು ಹುಟ್ಟಬೇಕಾಗಿರೋ ಈ ಮಗುನಾ, ಪಿಂಡ ಇರುವಾಗಲೇ ತಗ್ಸೋದಿಲ್ಲ’ ಎಂದು ಕಡ್ಡಿತುಂಡು ಮಾಡಿದಾಗೆ ಹೇಳಿಬಿಟ್ಟಳು. ಇನ್ನೂ ಇವಳನ್ನು ಒಪ್ಪಿಸುವುದು ಬಹಳ ಕಷ್ಟವಿದೆ ಎಂದಕೊಂಡ ತಿಮ್ಮೇಶಿ ಪರಿಚಯದ ಹಿತೈಷಿಗಳಿಂದ ಹೇಳಿಸಿದ್ರೂ ಗಿರಿಜವ್ವ ತುಟುಕ್ ಪಿಟುಕ್ ಕೂಡ ಅನ್ನಲಿಲ್ಲ. ತನ್ನ ಧೃಡವಾದ ನಿರ್ಧಾರದಿಂದ ಹಿಂದೆ ಸರಿಯದಾದಾಗ, ಊರಿನ ಹಿರಿಯರೆಲ್ಲಾ ಸೇರಿ ಒಂದು ದಿನ ಪಂಚಾಯತಿಗೆ ಬರುತ್ತಾರೆ.

ಬೆಂಗಳೂರಿನ ದೇವನಹಳ್ಳಿಯಲ್ಲಿ ಪಂಚಾಯತಿಗೆ ಪ್ರಸಿದ್ಧಿಯಂದರೆ ಅದು ಚೆನ್ನಮ್ಮ. ಈಕೆ ಆ ಭಾಗದ ಸುತ್ತಮುತ್ತಲಿನ ಹಳ್ಳಿಯಲ್ಲಿ ಪಂಚಾಯತಿ ಚೆನ್ನಮ್ಮಳೆಂದೆ ಜನಪ್ರಿಯಳಾಗಿದ್ದಳು. ಮುರಿದ ಮದುವೆ, ಹೊಲ ಗದ್ದೆಗಳ ವಿಷಯದಲ್ಲಿ ಆಗುವ ಜಗಳ ತಾಪತ್ರಯ, ಗಂಡ ಹೆಂಡಿರ ಜಗಳ ಹೀಗೆ ನಾನಾ ವಿಚಾರದ ಪಂಚಾಯತಿಯಲ್ಲಿ ಯಾರ ಪರ ವಿರೋಧವನ್ನು ಮಾತನಾಡದೆ ಎಲ್ಲರಿಗೂ ಸಮಾಧಾನ ಎನಿಸುವ ಪರಿಹಾರವನ್ನು ಸೂಚಿಸುತ್ತಿದ್ದಳು. ಇಂತಹ ಚೆನ್ನವ್ವ ಅಂದು ಪಂಚಾಯತಿಯ ಸಾರಥ್ಯ ವಹಿಸಿದ್ದಳು, ಅಂದು ಗಿರಿಜವ್ವನ ಮನೆಯಲ್ಲಿ ಊರಿನ ಕೆಲವು ಹಿರಿಯರು ಸೇರಿದಂತೆ ಒಟ್ಟು ಹದಿನೈದು ಜನ ಪಂಚಾಯತಿ ಮಾಡಲು ಸೇರಿದ್ದರು. ಬಂದವರಿಗೆಲ್ಲಾ ತಿಂಡಿ ಮತ್ತು ಚಹಾ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರೂ ತಿಂಡಿ ತಿಂದು ಚಹಾ ಕುಡಿಯುತ್ತಿರುವಾಗಲೇ ಚೆನ್ನವ್ವ ಮಾತನಾಡಲು ಆರಂಭಿಸಿದಳು.

‘ಊರಿನ ಹಿರಿಕರಿಂದ ವಿಷಯವನ್ನು ಚೆನ್ನಾಗಿ ಬಲ್ಲೆ, ನಂಗೆ ಇದೊಂದು ರೀತಿ ಹೊಸ ಸಮಸ್ಯೆ ಕೂಡ ಹೌದು, ಈ ಕಡೆ ಮದುವೆಯಾಗದ ತಿಮ್ಮೇಶಿ, ಆ ಕಡೆ ಬಸುರಿಯಾಗಿರೋ ಗಿರಿಜವ್ವ. ನಾನು ಯಾರ ಪರ ವಿರೋಧಾನು ಮಾತಾಡಲ್ಲ, ಸಮಸ್ಯೆಗೆ ಪರಿಹಾರ ಅನಿಸೋದನ್ನಷ್ಟೇ ಹೇಳ್ತೀನಿ. ಹೊಟ್ಟೆಗಿರೋ ಪಿಂಡಾನ ತಗ್ಸೋಕೆ ಹೇಳ್ತವ್ನೆ ಈ ತಿಮ್ಮೇಶಿ. ಅದನ್ನು ಒಪ್ಪೋಕೆ ತಯಾರಿಲ್ಲ ಗಿರಿಜವ್ವ’ ಪಂಚಾಯತಿಯ ನಿಯಮದಂತೆ ಇಬ್ರಿಗೂ ನಿಮ್ಮ ಅಭಿಪ್ರಾಯ ಹೇಳೋಕೆ ಅವಕಾಶ ಇದೆ, ಗಿರಿಜವ್ವ ನೀನ್ ಏನ್ ಹೇಳ್ತಿಯವ್ವ ಅನ್ನೋದು ಪಂಚಾಯತಿಗೆ ಮನವರಿಗೆ ಮಾಡಿಕೊಡವ್ವ ಎಂದು ಗಿರಿಜವ್ವಳಿಗೆ ಹೇಳಿದಳು.

‘ನೋಡವ್ವ ನಂಗೆ ಈಗ ನನ್ನವರು ಅಂತಾ ಹಿಂದೆ ಮುಂದೆ ಯಾರು ಇಲ್ಲ. ಇದ್ದ ಗಂಡ ಕೂಡ ಸತ್ತ, ನಾನು ಮುಪ್ಪಾದ ಕಾಲಕ್ಕೆ ನಂದು ಅಂತಾನು ಒಂದು ಇರಬೇಕಲ್ಲ. ಹಿಂಗಾಗಿ ನಾನು ಈ ಪಿಂಡಾನ ತಗ್ಸೋಕೆ ಸುತರಾಮ್ ಒಪ್ಪೋದಿಲ್ಲ’ ಎಂದು ತನ್ನ ದೃಢವಾದ ನಿಲುವನ್ನು ಮತ್ತೊಮ್ಮೆ ಗಟ್ಟಿಯಾಗಿ ಎಲ್ಲರ ಮುಂದೆ ಹೇಳಿದಳು ಗಿರಿಜವ್ವ. ಇದನ್ನು ಕೇಳುತ್ತಲೇ ಚೆನ್ನವ್ವಳಿಗೆ ಮನವರಿಕೆಯಾಗಿತ್ತು, ಈಕೆಯನ್ನು ಇನ್ನೂ ಯಾರು ಬಂದರು ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಮ್ಮೇಶಿಯ ಅಭಿಪ್ರಾಯವನ್ನು ಕೇಳಲು ಮುಂದಾಗುತ್ತಾಳೆ. ನೋಡಪ್ಪ ತಿಮ್ಮೇಶಿ ಈ ವಿಚಾರವಾಗಿ ನೀನು ಕೂಡ ನಿನ್ನ ಅಭಿಪ್ರಾಯವನ್ನು ಮಂಡಿಸಬಹುದು ಎನ್ನುತ್ತಲೇ ಗೋಡೆಗೆ ಒರಗಿ ಕೂತುಕೊಂಡಿದ್ದ ತಿಮ್ಮೇಶಿ ತನ್ನ ಬೆನ್ನನ್ನು ಮುಂದೆ ಮಾಡಿ ಮಾತನಾಡಲು ಶುರು ಮಾಡುತ್ತಾನೆ.

‘ನಡೆದ ಘಟನೆಯಲ್ಲಿ ಇಬ್ಬರ ತಪ್ಪು ಸಮವಾಗಿದೆ. ಹೀಗಾಗಿ ಒಂದು ಆಕೆ ಪಿಂಡ ತೆಗೆಸಬೇಕು, ಇಲ್ಲ ಆಕೆ ನನ್ನ ಮುಂದಿನ ಜೀವನಕ್ಕೆ ತೊಂದರೆ ಮಾಡಬಾರದು, ನಾನು ಯಾರನ್ನೇ ಮದುವೆಯಾದರು ಆಕೆ ನಮ್ಮ ಸಹವಾಸಕ್ಕೆ ಬರಬಾರದು ಎಂದು ಪಂಚಾಯತಿಯಲ್ಲಿ ತೀರ್ಮಾನವಾಗಬೇಕು’ ಎನ್ನುತ್ತಾನೆ.

ಇಬ್ಬರ ಅಭಿಪ್ರಾಯಗಳನ್ನು ಕೇಳಿಸಿಕೊಂಡ ಪಂಚಾಯತಿಯವರು ಹತ್ತು ನಿಮಿಷಗಳ ನಂತರ ಒಂದು ತೀರ್ಮಾನಕ್ಕೆ ಬರುತ್ತಾರೆ, ಅದರಂತೆ ಚೆನ್ನಮ್ಮ ಸಮಸ್ಯೆಗೆ ಪಂಚಾಯತಿಯ ತೀರ್ಮಾನವನ್ನು ಎಲ್ಲರ ಮುಂದೆ ಮಂಡಿಸುತ್ತಾಳೆ.

‘ನಡೆಯಬಾರದ ಘಟನೆ ಎರಡು ಕಡೆಯ ವ್ಯಕ್ತಿಗಳ ತಪ್ಪಿನಿಂದಾಗಿ ನಡೆದು ಹೋಗಿದೆ. ಅದಕ್ಕೆ ವಿಷಾದವಿದೆ. ಆದರೆ ಇದೇ ತಪ್ಪನ್ನು ಮತ್ತೆ ಮತ್ತೆ ನೆನಪು ಮಾಡಿಕೊಂಡು ಮನುಷ್ಯರು ಉಳಿದ ಜೀವಿತಕಾಲವನ್ನು ಹಾಳು ಮಾಡಿಕೊಳ್ಳದೆ ನೆಮ್ಮದಿಯಾಗಿ ಬದುಕಬೇಕು. ತೀರ್ಪಿನ ಸಾರಾಂಶ ಹೀಗಿದೆ, ಗಿರಿಜವ್ವ ಹುಟ್ಟಲಿರುವ ಮಗುವನ್ನು ತೆಗೆಸುವ ಅವಶ್ಯಕತೆ ಇಲ್ಲ, ಆದರೆ ನಿಮ್ಮಿಬ್ಬರ ಸಂಬಂಧ ಪಂಚಾಯತಿಯ ತೀರ್ಮಾನದಂತೆ ಇಂದಿಗೆ ಇಲ್ಲಿಯೇ ಕೊನೆಗೊಳ್ಳಲಿದೆ. ಪರಸ್ಪರ ಒಬ್ಬರಿಗೊಬ್ಬರು ತೊಂದರೆ ಮಾಡಿಕೊಳ್ಳಬಾರದು. ಹಾಗೆ ತಿಮ್ಮೇಶಿಯ ಮುಂದಿನ ಜೀವನಕ್ಕೆ ಗಿರಿಜವ್ವ ಕೂಡ ಯಾವುದೇ ರೀತಿ ತಕರಾರು ತೆಗೆಯದೆ ಆತನ ಮದುವೆಗೆ ಅನುಕೂಲ ಮಾಡಿಕೊಡಬೇಕು ಮತ್ತು ಇಂದಿನಿಂದಲೇ ತಿಮ್ಮೇಶಿ ಬೇರೊಂದು ಮನೆಗೆ ಹೋಗಿ ವಾಸಮಾಡಬೇಕು’. ಈ ತೀರ್ಪು ಹೇಳುತ್ತಲೇ ಗಿರಿಜವ್ವಳಿಗೆ ತಿಮ್ಮೇಶಿಯ ಬಿಟ್ಟು ಕೊಡಲು ಒಪ್ಪಿಗೆ ಇಲ್ಲದೆ ಹೋದರು ಪಂಚಾಯತಿಯ ತೀರ್ಮಾನಕ್ಕೆ ತಲೆಬಾಗಿ ಒಪ್ಪಿಕೊಳ್ಳುತ್ತಾಳೆ. ಪಂಚಾಯತಿಯ ತೀರ್ಮಾನದಂತೆ ತಿಮ್ಮೇಶಿ ತನ್ನ ವಾಸಸ್ಥಾನವನ್ನು ಬೆಂಗಳೂರು ನಗರದ ಮೆಡಿಕಲ್ ಕಾಲೇಜಿನ ಹಾಸ್ಟೆಲ್ಗೆ ವರ್ಗಾಯಿಸಿಕೊಳ್ಳುತ್ತಾನೆ.

****
‘ಒಳ್ಳೆವ್ನು ಒಳ್ಳೆವ್ನು ಅಂದ್ರೆ ಈ ನನ್ನ್ ಮಗ ಒಳ್ಕಲ್ಲಿನಾಗೆ ಉಚ್ಚೇ ಹೊಯ್ದು ಬಿಟ್ಟ, ಮನೆ ಮಾನ ಮರ್ವಾದೆನಾ ಮೂರ ಬಟ್ಟೆ ಮಾಡ್ಬುಟ್ಟ, ಕೊನೆ ಮಗ್ಳು ಲಕುಮಿನಾ ಯಾರ್ ಮದುವೆ ಆದಾರು, ನಮ್ಮನೆ ಪುರಾಣ ಕೇಳುದ್ರೆ’ ನೀನೇ ಹೇಳು ನರ್ಸವ್ವ ಅಂತಾ ಅವಳ ಮುಂದೇ ಗೊಳೋ ಅನ್ನೋಳು ಸಣ್ಣವ್ವ.

‘ಬಿಡತ್ಲಾಗೆ ನಿನ್ ಕೂಸ್ ಹಿಂಗ್ ಮಾಡಾತು ಅಂತಾ ನನ್ನ ಕನಸು ಮನಸ್ಸಿನಾಗು ಅಂದು ಕೊಂಡಿರಲಿಲ್ಲ, ಹೆಂಗ್ ಮಾಡ್ಬುಟ್ಟ ನೋಡು ಅಲ್ಲಾ ಇವ್ನಿಗೆ ಗಂಡ ಸತ್ತೋಳೆ ಬೇಕಾಗಿತ್ತ ಇಟ್ಕೊಳಾಕೆ’ ಏನ್ ಕಾಲ ಬಂತವ್ವ ಸಣ್ಣವ್ವ ಅಂದ್ಲು.

‘ಆ ಬ್ಯಾವರ್ಸಿ ನನ್ನ್ ಮನೆ ಮೆಟ್ಲು ತುಳಿಲಿ, ಅವನಿಗೆ ಈ ಸಣ್ಣವ್ವ ಏನು ಅನ್ನೋದು ಜಪ್ತಿ ಇರ್ಬೇಕು ಹಂಗ್ ಮಾಡ್ತಿನಿ ನೋಡ್ತೀರು ನರ್ಸಿ’

‘ಹೋಗತ್ಲಾಗೆ ಆ ಕೂಸಿಂದು ಸುದ್ದಿ ಬಿಟ್ಟು ಮೊದ್ಲು ಮನಿಯಾಗೆ ಇರೋ ಹೆಣ್ಣುನ್ನ ಮದುವೆ ಮಾಡೋದು ನೋಡವ್ವ ಸಣ್ಣವ್ವ, ನೀನ್ ಇರುವಾಗ್ಲೇ ಹಿಂಗೆ ಇನ್ನೂ ನೀನ್ ಹೋದ್ ಮೇಲೆ ಹೆಂಗೋ ಏನೋ ಮೊದ್ಲು ಹುಷರಾಗೆ ಸಣ್ಣಿ ಹುಷರಾಗು’ ಅಂದ್ಲು ನರಸವ್ವ.

ರಾಮಣ್ಣ ಗೌಡ್ರು ಮನಿಯಾಗೆ ಇದಾರೆ ಹೋಗಿ ಕಿವಿಗೆ ಒಂದು ಮಾತು ಹಾಕ್ಬರೋಣ ಅಂದವಳೇ ಸಣ್ಣಿಯನ್ನು ರಾಮಣ್ಣನ ಮನೆಯ ಕಡೆಗೆ ಕರೆದುಕೊಂಡು ಹೋದ್ಲು.

ರಾಮಣ್ಣಾರೆ ರಾಮಣ್ಣಾರೆ ಒಳಗೆ ಇದೀರಾ?

ಹೊರಗ್ಬನ್ನಿ ನಿಮ್ ಜೊತೆ ಮಾತಾಡೋದಿದೆ.

ನರ್ಸಿ ಮಾತು ಕೇಳುತ್ತಲೇ ಹೊರಗೆ ಬಂದ ರಾಮಣ್ಣ ಅದ್ಯಾಕ್ ಹಂಗೆ ಕಿರುಚ್ತಿಯೇ ನರ್ಸಿ, ಏನಾಯ್ತು ಅಂದ!

ನಿಮ್ ಕಡೆಯಿಂದ ನಮ್ಮ ಸಣ್ಣಿಗೆ ಒಂದು ಉಪ್ಕಾರ ಆಗ್ಬೇಕಿತ್ತು, ಎರಡು ವರ್ಷದಿಂದ ಅವ್ಳು ನಿಮ್ಗೆ ಅವ್ಳ ಮಗ್ಳು ಲಕುಮಿಗೆ ಗಂಡು ಹುಡ್ಕೋಕೆ ಹೇಳ್ತಾನೆ ಅವ್ಳೇ. ನೀವ್ ಮಾತ್ರ ಕಿವಿಗೆ ಹಾಕೋತಿಲ್ಲ. ಈಗ್ಲಾದ್ರು ಇದ್ನ ಕಿವಿಗೆ ಹಾಕ್ಕೊಂಡು ಗಂಡು ಹುಡ್ಕೊಡಿ ಬುದ್ಧಿ ಅಂದ್ಲು. ಯಾಕವ್ವ ಅಂತಾದು ಏನಾಯ್ತು? ಯಾಕಿಷ್ಟು ಅವಸರ ಅಂದಾಗ, ಸಣ್ಣವ್ವ ಮತ್ತೆ ಗೋಳೋ ಅಂತಾ ಅಳೋಕೆ ಶುರುಮಾಡಿದ್ಲು. ತಿಮ್ಮೇಶಿಗೆ ಉಗ್ದು ಉಗ್ದು ಇರೋ ಬರೋ ಪುರಾಣ ಎಲ್ಲಾ ಹೇಳಿ, ಹೆಂಗಾದ್ರು ಮಾಡಿ ಬೇಗ ಒಂದು ಗಂಡು ಹುಡ್ಕೊಡಿ ಬುದ್ಧಿ ಎಂದು ಗೋಗರೆದಳು. ಸರಿ ಕಣವ್ವ ಒಬ್ಬ ಹುಡ್ಗ ಇದಾನೆ ಆದರೆ ಅವನಿಗೆ ಅಪ್ಪ ಅಮ್ಮ ಬಂಧು ಬಳಗ ಅಂತಾ ಯಾರು ಇಲ್ಲ ಆಸ್ತಿನೂ ಇಲ್ಲ, ಆದರೆ ಬಡಿಗೆ ಕೆಲಸ ಮಾಡ್ಕೊಂಡು ಜೀವ್ನ ಸಾಗಿಸ್ತಾ ಅವ್ನೆ. ಮೇಲಾಗೆ ಆತ ನಿಮ್ಮ ಜಾತಿ ಕೂಡ ಅಲ್ಲಾ ನೀನು ಹು ಅಂದ್ರೆ ಒಂದು ಮಾತು ಕೇಳ್ತಿನಿ ಕಣವ್ವ, ಯಾವುದಕ್ಕು ಇವತ್ತು ರಾತ್ರಿ ಆಲೋಚ್ಸಿ ಯೋಳು ಎಂದ.

‘ಇದ್ರಾಗೆ ಆಲೋಚ್ನೆ ಮಾಡೋದು ಏನೂ ಇಲ್ಲ ಬುದ್ಧಿ, ಮುಂದೆ ಹೆಂಗೋ ಏನೋ, ನಾನು ಇದ್ದಂಗೆ ಇವ್ಳ ಮದುವೆಯೊಂದನ್ನ ಮಾಡಿ ಮುಗಿಸಿದ್ರೆ ಸಾಕು ನಂಗೂ ಸಮಾಧಾನ, ಇನ್ನೂ ಉಳಿದ ಎರಡು ಗಂಡೈಕ್ಳ ಬಗ್ಗೆ ನಂಗೇನೂ ಚಿಂತೆ ಇಲ್ಲ’ ಅಂದ್ಲು ಸಣ್ಣವ್ವ.

ಸರಿ ಕಣವ್ವ ನೀನ್ ಹೇಳಿದ್ ಮೇಲೆ ಆಯ್ತು, ನಾನು ನಾಳೇನೆ ಮದುವೆ ಬಗ್ಗೆ ಮಾತಾಡಿ ವತ್ತಾರೆ ಬಂದು ಸುದ್ದಿ ಮುಟ್ಟಿಸ್ತೀನಿ, ನೀವಿನ್ನೂ ಮನೆಗೆ ಹೊರಡಿ ಎಂದ, ಸಣ್ಣವ್ವ ಮತ್ತು ನರಸವ್ವ ಅಲ್ಲಿಂದ ಮನೆಯ ಹಾದಿ ಹಿಡಿದ್ರು. ಅವ್ರಿಗೆ ಮಾತು ಕೊಟ್ಟಂತೆ ರಾಮಣ್ಣ ಹುಡುಗನನ್ನು ನೋಡಲು ಬಂದ, ಯುವಕ ನಾಗಣ್ಣ ತಲ್ಲೀನತೆಯಿಂದ ಮೇಜು ಮಾಡುತ್ತಿದ್ದನು.

ರಾಮಣ್ಣನವರು ಬರುವುದ ಕಂಡ ನಾಗಣ್ಣ ತಿರುಗಿದವನೇ,

ಓ ರಾಮಣ್ಣಾರು ಬನ್ನಿ ಬನ್ನಿ ಒಳಗೆ ಬನ್ನಿ ಎಂದ,

ಒಳಗೆ ಬಂದ ರಾಮಣ್ಣನವರು,

ಇದು ಯಾವ ಮರದ ತುಂಡಿನಿಂದ ಮಾಡ್ತಿರೋದು ನಾಗಣ್ಣ?

ಎಂದು ಕೇಳಿದ್ರು,

ಇದು ಸಾಗುವಾನಿ ಮರದ್ದು, ಮೈಸೂರಿನ ಜಮೀನ್ದಾರರ ಮನೆತನದವರು ಮಾಡಿಸ್ತಾ ಇದಾರೆ ಎಂದು ಉತ್ತರ ಕೊಟ್ಟ.

‘ಹಾಗಿದ್ರೆ ನಿನ್ನ ವ್ಯಾಪಾರಕ್ಕೆ ಏನೂ ತೊಂದ್ರೆ ಇಲ್ಲ ಅನ್ನು ಮತ್ತೆ!

ದೇವರು ಸದಾಕಾಲವೂ ನಿಂಗೆ ಹಿಂಗೆ ಇಟ್ಟಿರ್ಲಿ ಮಗ

ಬೇಗ ಒಂದು ಮದುವೆ ಕೂಡ ಮಾಡ್ಕೊಂಡು ಬಿಡು,

ಎಷ್ಟು ದಿನ ಅಂತಾ ಎಲ್ಲಾ ಕೆಲಸವನ್ನು ಒಬ್ನೇ ಮಾಡ್ಕೋತಿಯ

ಇಬ್ರೂ ಹಚ್ಕೊಂಡು ಮನೆ ಕೆಲಸ ಮಾಡಿಕೊಂಡ್ರೆ ನಿಂಗೂ ಆಯಾಸ ಇರಾಕ್ಕಿಲ್ಲ’ ಎಂದ ರಾಮಣ್ಣ.

‘ನಂಗೆ ಹೆಣ್ಣು ಯಾರ್ ಕೊಟ್ಟಾರು ಬುದ್ಧಿ?

ಹಿಂದೆ ಇಲ್ಲ ಮುಂದೆ ಇಲ್ಲ,

ಸತ್ತ್ರೆ ಎತ್ತಾಕೋರೆ ಇಲ್ಲದಿರೋ ನನ್ನಂತ ಪರದೇಸಿಗೆ ಮದುವೆ ಎಲ್ಲಾ ಯಾಕ್ ಬುಡಿ ಬುದ್ಧಿಯಾರ’ ಅಂದ

ಹಂಗೆಲ್ಲಾ ಹೇಳ್ಬೇಡ ನಾಗಣ್ಣ ನಿಂಗೆ ಮದುವೆ ಮಾಡಿಸೋ ಜವಾಬ್ದಾರಿ ನಂದು. ನೀನು ಚಿಂತೆ ಮಾಡ್ಬೇಡ. ನಮ್ಮ ಕಡೆ ಒಬ್ಳು ಹುಡ್ಗಿ ಇದಾಳೆ, ಬಡವರ ಮನೆ ಹುಡುಗಿ, ನಿಂಗೆ ವರದಕ್ಷಿಣೆ ಅಂತಾ ಅವರ ಕೈನಲ್ಲಿ ನಯಾಪೈಸೆ ಕೂಡ ಕೊಡೋಕೆ ಆಗೋದಿಲ್ಲ, ಬೇಕಿದ್ದರೆ ಸರಳವಾಗಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಡ್ತಾರೆ ನೋಡು ಅಷ್ಟೇ, ಆಗ್ಬೋದ?

ಈ ಅಬ್ಬೆಪಾರಿಗೆ ಹೆಣ್ಣು ಕೊಡೋರೆ ದಿಕ್ಕಿಲ್ಲಾದಾಗ ದೇವ್ರು ರೀತಿ ಬಂದ್ರಿ ನೀವು, ಇದರಲ್ಲಿ ಮತ್ತೆ ನನ್ನ ಬಯ್ಕೆ ಏನೂ ಇಲ್ಲಾ ಎಲ್ಲಾ ನಿಮ್ಮ ಮಾತಿನಂತೆಯೇ ನಡೆಯಲಿ ಎಂದು ಮದುವೆಗೆ ಒಪ್ಪಿಗೆ ಕೊಟ್ಟು ಬಿಟ್ಟ. ಒಪ್ಪಿಗೆ ಕೊಟ್ಟ ಮೂರೇ ದಿನಕ್ಕೆ ಊರಿನ ಹಿರಿಕರೆಲ್ಲಾ ಸೇರಿ ಹಳ್ಳಿಯ ಗುಳ್ಳಮನ ದೇವಸ್ಥಾನದಲ್ಲಿ ಸರಳವಾಗಿ ಮದುವೆಯನ್ನು ನೇರವೇರಿಸಿದರು.

*****

ಅವ್ವ ನಂಗೊಂದು ಮಾತು ಕೂಡ ಹೇಳ್ದೆ ಅಕ್ಕನ ಮದುವೆ ಮಾಡಿದಾಳೆ, ಯಾಕೋ ಇದು ಸರಿ ಬರ್ತಾ ಇಲ್ಲ, ನಾನು ಬೇಡದವನಾಗಿಬಿಟ್ನ ಅಂದುಕೊಂಡವ್ನೇ ಊರಿನ ಕಡೆ ಮುಖ ಮಾಡಿದ ತಿಮ್ಮೇಶಿ. ಮನೆಗೆ ಬಂದವನಿಗೆ ಮನಸ್ಸಿಗೆ ಸಮಾಧಾನವಾಗುವಷ್ಟು ಬೈದಳು ಸಣ್ಣವ್ವ.

‘ಥೂ ಒಳ್ಳೆವ್ನು ಒಳ್ಳೆವ್ನು ಅಂದ್ರೆ, ಒಳ್ಕಲ್ಲಿನಾಗೆ ಉಚ್ಚೇ ಹೊಯ್ದುಬಿಟ್ಟಲ್ಲ, ಎಷ್ಟು ದಿನದಿಂದ ಹೊಂಚು ಹಾಕಿದ್ದೆ? ನನ್ನ ಮರ್ವಾದೆ ತೆಗಿಯೋಕೆ. ನಮ್ನ ಸಾಕು, ಹಿಟ್ಟಾಕು ಅಂತಾ ನಿನ್ನ ಹಿಂದೆ ಬಿದ್ದಿದ್ವ? ನಿನ್ ಪಾಡಿಗೆ ನಿಂಗೆ ಓದ್ಕಳಾಕೆ ಬಿಟ್ಟಿರಲಿಲ್ವ, ನಿಂಗೆ ಆ ಲೌಡೀ ಮುಂಡೇನೇ ಆಗ್ಬೇಕಿತ್ತಾ ಅಯೋಗ್ಯ ಅಯೋಗ್ಯ’ ಅಂತಾ ಅವತ್ತೆಲ್ಲಾ ಸಮಾಧಾನ ಆಗೋವರ್ಗೂ ಸಣ್ಣವ್ವ ಬಯ್ಯೋ ಕೆಲಸಾನೇ ಮಾಡಿದ್ಲು. ವತ್ತಾರೆ ಎದ್ದು ಇನ್ನೇನು ಬಯ್ಯೋಕೆ ಶುರು ಮಾಡ್ಬೇಕು ಅಷ್ಟ್ಹೊತ್ತಿಗೆ ಸರಿಯಾಗಿ ನರಸವ್ವ ಬಂದ್ಲು.

‘ಅದೇನ್ ನಿನ್ನೆಯಿಂದ ಬಯ್ಯೋದೆ ಮಾಡಿದ್ಯೆ. ಆಗೋದ್ ಆಗೋಯ್ತು ಮುಂದಿನ್ ಕೆಲ್ಸ ನೋಡು, ಇವ್ನಿಗೂ ಒಂದು ಗಂಟು ಹಾಕ್ಬಿಸ್ಬಿಡು ಬೇಗ, ಹೆಂಗಿದ್ರು ಮೊದಲನೆಯವ್ನು ನಿನ್ನ ಕೈಗೆ ಸಿಗೋದಿಲ್ಲ, ಇವುಂದಾದ್ರು ಮದ್ವೆ ಮಾಡೇ ಸಣ್ಣಿ’ ಅಂದ್ಲು. ‘ಅಯ್ಯೋ ಈ ಮುಂಡೇಮಗ ಮೊದ್ಲು ಡಾಕುಟ್ರು ಓದೋದ್ ಮುಗಿಸ್ಕಂಡ್ ಬರ್ಲಿ ತಡಿಯೇ, ಆಮೇಲೆ ನೋಡೋಣ, ಇಲ್ಲ ಯಾರಿಗೊತ್ತವ್ವ ಓದ್ದೋರ ಪಿತೂರಿಯ, ಯಾರಾದ್ರೂ ಹುಡ್ಗಿನಾ ಲವ್ವೋ ಪವ್ವೋ ಮಾಡಿದ್ರೆ, ಆಮೇಲೆ ನಾವು ಇಲ್ಲಿ ಮಾತುಕತೆ ಮಾಡಿ ತಲೆ ಕೊಡೋರು ಯಾರು ಸಮ್ನಿರೇ’ ಎಂದು ಕಿರುಚಿದಳು ಸಣ್ಣವ್ವ.

ಸಣ್ಣವ್ವನ ಊಹೆ ನಿಜವೇ ಆಗಿತ್ತು, ತಿಮ್ಮೇಶಿ ಬೆಂಗಳೂರಿನಲ್ಲಿ ಶ್ರೀಮಂತರ ಮನೆಯ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇಬ್ಬರಿಗೂ ಗೆಳೆಯರ ಮೂಲಕ ಪರಸ್ಪರ ಪರಿಚಯವಾಗಿದ್ದ ಸ್ನೇಹ ಪ್ರೀತಿಯಾಗಿ ತಿರುಗಿತ್ತು. ತಿಮ್ಮೇಶಿ ಪ್ರೀತಿಸುತ್ತಿದ್ದ ಯುವತಿಯ ಹೆಸರು ರೂಪ. ಹೆಸರಿಗೆ ತಕ್ಕಂತೆ ರೂಪವತಿಯಾಗಿದ್ದ ಅವಳು ತನ್ನ ಸೌಂದರ್ಯದ ಬಗ್ಗೆ ಕೊಂಚ ಹೆಚ್ಚೇ ಅನಿಸುವಷ್ಟು ಗಮನ ಕೊಡುತ್ತಿದ್ಲು. ತನ್ನ ಸ್ಕಿನ್ ಕಳೆಗುಂದಿದಂತೆ ಕಾಣಿಸುವುದು ಆಕೆಗೆ ಇಷ್ಟವೇ ಇರಲಿಲ್ಲ. ಹೀಗಾಗಿ ನಿಯಮಿತವಾಗಿ ತಿಂಗಳಿಗೊಮ್ಮೆ ಚರ್ಮದ ಡಾಕ್ಟರ್ ಅವರನ್ನು ಭೇಟಿ ಮಾಡುತ್ತಿದ್ದಳು. ಚರ್ಮ ಕಾಂತಿಯುಕ್ತವಾಗಿ ಇಡಲು ಏನೆಲ್ಲಾ ಉಪಾಯವಿದೆ ಎಂದು ಕೇಳಿ ತಿಳಿದುಕೊಳ್ಳುತ್ತಿದ್ದಳು. ಬಿ.ಎಸ್ಸಿ. ಓದಿಕೊಂಡಿದ್ದ ರೂಪಾಳಿಗೆ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳುವುದೇ ನಿತ್ಯದ ಕೆಲಸವಾಗಿತ್ತು. ದೇವರು ಧರ್ಮದಲ್ಲಿ ಆಸಕ್ತಿ ಇದ್ದ ಆಕೆ ತಪ್ಪದೆ ಮಹಿಳೆಯರ ಸೌಂದರ್ಯ ಲಹರಿ ಪಾರಾಯಣಕ್ಕೆ ಹೋಗುತ್ತಿದ್ದಳು. ಮೊದಲಿನಿಂದಲೂ ನಾನು ಮದುವೆಯಾದರೆ ಡಾಕ್ಟರ್ ಓದಿರುವ ಹುಡುಗನನ್ನೇ ಆಗುವುದು ಇಲ್ಲದೇ ಹೋದರೆ ಮದುವೆಯೆ ಆಗುವುದಿಲ್ಲ ಎಂದು ಬಂದ ವರಗಳನ್ನೆಲ್ಲಾ ಅವರ ಉದ್ಯೋಗದ ಕಾರಣಕ್ಕಾಗಿ ಒಪ್ಪಿಕೊಳ್ಳದೆ ವಾಪಾಸು ಕಳಿಸುತ್ತಿದ್ದಳು. ಹುಟ್ಟುವಾಗಲೇ ಅಮ್ಮನನ್ನು ಕಳೆದುಕೊಂಡಿದ್ದ ರೂಪ ಬೆಳೆದದ್ದು ಅಪ್ಪ ವಾಸುದೇವರ ಆಸರೆಯಲ್ಲಿ. ಅಮ್ಮ ಇಲ್ಲದ ಮಗಳನ್ನು ತಂದೆ ವಾಸುದೇವ ರಾಯರು ಬಹಳ ಮುದ್ದು ಮುದ್ದಾಗಿ ಸಾಕಿದ್ದರು. ಅವಳು ಬೇಕೆಂದ ಯಾವೊಂದು ವಸ್ತುವನ್ನು ಕೊಡಿಸದೆ ಇರುತ್ತಿರಲಿಲ್ಲ. ಮದುವೆಯ ವಿಷಯದಲ್ಲಿ ಕೂಡ ಅವಳ ಆಯ್ಕೆಯನ್ನೇ ಒಪ್ಪುವುದಾಗಿ ಅವರ ಅಪ್ಪ ತಿಳಿಸಿದ್ದ ಕಾರಣ ಇವರಿಬ್ಬರ ಪ್ರೀತಿಗೆ ಅಡ್ಡ ಬರುವವರು ಯಾರೆಂದರೆ ಯಾರು ಇರಲಿಲ್ಲ!

ಹೊರಗೆ ಧೋ ಎಂದು ಮಳೆ ಸುರಿಯುತ್ತಿದೆ, ಊರಿಗೆ ಬಂದಿದ್ದ ತಿಮ್ಮೇಶಿ ತನ್ನ ಪ್ರೀತಿಯ ವಿಷಯವನ್ನೆಲ್ಲಾ ಸಮಯ ನೋಡಿ ಸಣ್ಣವ್ವಳಿಗೆ ಹೇಳುತ್ತಾನೆ. ಮೂತಿ ಸಿಡುಕಿದ ಸಣ್ಣವ್ವ ‘ಈ ಮಳೆ ಬಿಡೋ ಹಂಗೆ ಕಾಣ್ತಾ ಇಲ್ಲ ಮನೆ ಹೆಂಚೆಲ್ಲಾ ತೂತಾದ್ವು, ಯಾರಾದ್ರು ಬರೀ ಮೂಕ್ಳಿನಾಗ ಹೋಗಿ ಹೊರಗೆ ಕೆಂಡ ಸುರಿರೋ’ ಎಂದು ಒಂದೇ ಸಮನೆ ಇವನ ಸಿಟ್ಟನ್ನು ಮಳೆಯ ಮೇಲೆ ತೋರಿಸುತ್ತಾಳೆ. ಈ ಮಲೆನಾಡಿನ ಕಡೆ ವಿಪರೀತ ಮಳೆಯಾದರೆ ಕೆಲವು ಭಾಗದಲ್ಲಿ ಹಿರಿಕರು ಹೀಗೆ ಹೇಳುವುದುಂಟು, ಹಾಗೆ ಮಾಡಿದರೆ ಮಳೆ ಕಡಿಮೆಯಾಗುತ್ತದೆ ಅನ್ನೋದು ಅವರ ಬಾಯಿಂದ ಬಾಯಿಗೆ ಹರಿದಾಡುವ ನಂಬಿಕೆ. ನಾನೊಂತು ಹಿಂಗೆ ಹೇಳೋರ್ನ ನೋಡುದ್ನೆ ವಿನಃ ಬರೀ ಮೂಕ್ಳಿನಾಗ ಹೊರಗೆ ಹೋಗಿ ಕೆಂಡ ಸುರಿಯೋರ್ನ ಎಲ್ಲೂ ನೋಡ್ಲು ಇಲ್ಲ ಮಳೆ ಬರೋದನ್ನು ನಿಲ್ಲಿಸಲು ಇಲ್ಲ!

ಐದು ವರ್ಷಗಳ ಮೆಡಿಕಲ್ ಕೋರ್ಸ್ ಮುಗಿಯುತ್ತಲೇ ತಿಮ್ಮೇಶಿಗೆ ಸರಕಾರಿ ಕೆಲಸವಾಗಿತ್ತು. ಈಗ ತಿಮ್ಮೇಶಿ ಡಾಕ್ಟರ್ ತಿಮ್ಮೇಶಿಯಾಗಿದ್ದ. ಮದುವೆಯಾಗುವ ರೂಪಳಿಗೂ ಇದನ್ನು ಕೇಳಿ ಖುಷಿಯ ಕಾರಣಕ್ಕಾಗಿ ತನ್ನ ಗೆಳತಿಯರಿಗೆಲ್ಲಾ ಸಿಹಿ ಹಂಚಿದ್ದಳಾದರೂ, ಆಕೆಗೆ ಬೆಂಗಳೂರು ಬಿಟ್ಟು ದೂರದ ಯಾವುದೋ ಹಳ್ಳಿಗೆ ಹೋಗಲು ಇಷ್ಟ ಇರಲಿಲ್ಲ. ತಿಮ್ಮೇಶಿಗೆ ಮೈಸೂರಿನ ಅಬ್ಬೂರಿಗೆ ವರ್ಗವಾಗಿತ್ತು. ಇನ್ನೇನು ಒಂದು ವಾರದಲ್ಲಿ ಹೋಗಿ ಕೆಲಸಕ್ಕೆ ವರದಿ ಮಾಡಿಕೊಳ್ಳಬೇಕಾಗಿತ್ತು. ಈ ಕಡೆ ವಾಸುದೇವ ರಾಯರು ಹೋಗುವುದಾದರೆ ಮದುವೆ ಮಾಡಿಕೊಂಡೆ ಹೋಗಬೇಕು ಎಂದು ಷರತ್ತು ಹಾಕಿಬಿಟ್ಟರು. ಒಂದು ವಾರದಲ್ಲಿ ತರಾತುರಿಯಲ್ಲಿ ಮದುವೆ ಸಾಧ್ಯವೇ ಇಲ್ಲ ಎಂದನು ತಿಮ್ಮೇಶಿ. ಅದರ ಸಿದ್ಧತೆಯ ಬಗ್ಗೆ ನಿಮಗೆ ಚಿಂತೆ ಬೇಕಾಗಿಲ್ಲ, ನಮ್ಮ ಜನ ಇದ್ದಾರೆ ಮಾಡುತ್ತಾರೆ. ನೀವು ನಿಮ್ಮ ನೆಂಟರಿಗೆ ಹೇಳಿ ಬೆಂಗಳೂರಿಗೆ ಕರೆಸಿಕೊಳ್ಳಿ ಎಂದರು ವಾಸುದೇವರಾಯರು. ಒಂದು ವಾರದೊಳಗೆ ಊರಿಗೆ ಸುದ್ದಿ ಮುಟ್ಟಿಸಿ ಹೇಗೋ ಅಮ್ಮ ಮತ್ತು ಅಕ್ಕಂದಿರನ್ನು ಮದುವೆಗೆ ಕರೆಸಿಕೊಂಡ. ಮದುವೆಯು ಅಚ್ಚು ಕಟ್ಟಾಗಿ ಸರಳವಾಗಿ ಬೆಂಗಳೂರಿನ ಬಸವನ ಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮದುವೆ ಮುಗಿದ ನಂತರ ಎಲ್ಲರೂ ಅವರವರ ಊರಿನ ಕಡೆಗೆ ಮುಖಮಾಡಿದರೆ, ಯಾವುದೇ ಶಾಸ್ತ್ರ ಸಂಪ್ರದಾಯವನ್ನು ನೋಡದ ಜೋಡಿ ಮೈಸೂರಿನ ಅಬ್ಬೂರಿನ ಕಡೆ ಪ್ರಯಾಣ ಬೆಳೆಸಿತ್ತು.

******

ಅಬ್ಬೂರಿಗೆ ಬಂದು ಕೆಲಸಕ್ಕೆ ವರದಿ ಮಾಡಿಕೊಂಡ ರೂಪ ದಂಪತಿ, ಸರಕಾರದ ಕ್ವಾಟ್ರಸ್ನಲ್ಲಿ ಉಳಿದುಕೊಂಡರು. ತೀರ ದೊಡ್ಡ ಮನೆಯಲ್ಲದೆ ಹೋದರೂ ಡಾಕ್ಟರ್ಗಳಿಗಾಗಿಯೇ ಮೀಸಲಿಟ್ಟ ಅಚ್ಚುಕಟ್ಟಾದ ಮನೆ ಅದು.

ಗ್ರಾಮ ಪಂಚಾಯತಿ ಅಧ್ಯಕ್ಷನಿಂದ ಹಿಡಿದು ಹಳ್ಳಿಯ ಹಿರಿಕರೆಲ್ಲಾ ಬಂದು ತಿಮ್ಮೇಶಿನಾ ಪರಿಚಯ ಮಾಡಿಕೊಂಡರು. ಏನಾದರು ಬೇಕಾದರೆ ಮುಜುಗರವಿಲ್ಲದಂತೆ ಕೇಳಿ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜು ನಾಯಕ ತಿಮ್ಮೇಶಿಗೆ ಹೇಳಿದನು. ಖಂಡಿತವಾಗಿ ಹೇಳುವೆನು, ನೀವೆಲ್ಲಾ ಖುದ್ದಾಗಿ ಬಂದು ಪರಿಚಯ ಮಾಡಿಕೊಂಡದ್ದು ನನಗೂ ಖುಷಿಯಾಗಿದೆ, ತುಂಬಾ ತುಂಬಾ ಧನ್ಯವಾದಗಳು ಎಂದನು. ‘ನಾವಿನ್ನು ಬರುತ್ತೇವೆ’ ಎಂದು ಹಳ್ಳಿಯ ಹಿರಿಕರೆಲ್ಲಾ ಅವರವರ ಮನೆಯ ದಾರಿ ಹಿಡಿದರು.

ಹಳ್ಳಿಗೆ ಬಂದ ನಂತರ ತಿಮ್ಮೇಶಿ ಏನೋ ಬಹಳ ಬೇಗ ಹೊಂದಿಕೊಂಡನು. ಕಾರಣ ಅವನು ಹಳ್ಳಿಯಲ್ಲಿಯೇ ಆಡಿ ಬೆಳೆದವನು, ಆದರೆ ಸಮಸ್ಯೆ ಬಂದದ್ದು ರೂಪಾಳಿಗೆ, ಸಿಟಿಯಲ್ಲಿ ದಿನದ ಬಹುತೇಕ ಸಮಯ ವಿದ್ಯುತ್ ಇರುವುದು ಕಂಡಿದ್ದ ಅವಳಿಗೆ ಇಲ್ಲಿ ಮಾತ್ರ ಸಿಂಗಲ್ ಫೇಸ್ ಅಥವಾ ಬಹುತೇಕ ಸಮಯ ಕರೆಂಟೇ ಇರುವುದಿಲ್ಲ ಎಂಬ ಮಾತನ್ನು ಕೇಳಿದಾಗ ಹೇಗಪ್ಪ ಕಾಲ ಕಳಿಯೋದು ಅನಿಸೋಕೆ ಶುರುವಾಗಿತ್ತು. ಆರಂಭದಲ್ಲಿ ಮನೆಯ ಕೆಲಸವನ್ನು ಸ್ವತಃ ಮಾಡಿಕೊಂಡಳಾದರು ಬರ ಬರುತ್ತಾ ಅದು ಕೂಡ ಬೇಸರವಾಗಿ ಕೊನೆಗೆ ಗಂಗವ್ವಳನ್ನು ಕೆಲಸಕ್ಕೆ ಇಟ್ಟುಕೊಂಡಳು. ಮನೆಯ ನೆಲ ಸಾರಿಸುವುದು, ಪಾತ್ರೆ ತೊಳೆಯುವುದು ಮತ್ತು ಬಟ್ಟೆ ಒಗೆಯುವ ಕೆಲಸವನ್ನು ಮಾಡುವಾಗ ರೂಪಳನ್ನು ಗಂಗಮ್ಮ ಗಮನಿಸೋಳು.

‘ಅವ್ವಾರೆ ಮೊನ್ನೆ ಅದ್ಯಾವುದೋ ಕ್ರಿಮ್ ಹಚ್ಕೋತ ಇದ್ರಲ್ಲ ಯಾವುದ್ರವ್ವ ಅದು? ವಸಿ ನಂಗೂ ಕೊಡಿ ನಾನು ಹಚ್ಕೊಂಡು ಬೆಳ್ಳುಗಾಯ್ತೀನಿ ಅಂದ್ಲು’

ಓ ಪರವಾಗಿಲ್ಲ ಬಿಡೇ ಗಂಗಿ ನೀನು ಎಲ್ಲಾ ಗಮನಿಸ್ತಿಯಾ, ಅದು ಫಾರಿನ್ನಿಂದ ನನ್ನ ಫ್ರೆಂಡ್ ಕಳಿಸಿರೋ ಕ್ರಿಮ್ ತುಂಬಾ ದುಬಾರಿ ಹಣದ್ದು, ಚರ್ಮ ಒಣಗೊಗತ್ತೆ ನೋಡು ಅದಕ್ಕೆ ಹಚ್ಕೋತೀನಿ, ಅದು ನಿಂಗ್ಯಾಕೆ ಬಿಡೆ ನಿನ್ನ ಚರ್ಮ ಏನ್ ಒಣಗಿಲ್ಲ ಅಂದಾಗ ಗಂಗಿ ಮುಖ ಆ ಕಡೆ ತಿರುಗಿಸಿಕೊಂಡು, ‘ಆಹಾ ಏನ್ ಜಿಪುಣಿ ಇದಾಳೆ ನೋಡು ಇವ್ಳು’ ಅಂತಾ ಒಳಗೊಳಗೆ ಅಂದುಕೊಂಡು ನೆಲ ಸಾರಿಸಿದ್ದು ಮುಗ್ಸಿ, ನಾನಿನ್ನೂ ಬರ್ತೀನಿ ಕಣ್ರವ್ವ ಅಂತಾ ಬಗಲಿನಲ್ಲಿ ರೂಪ ಕೊಟ್ಟ ತಿಂಡಿಗಳನ್ನು ತನ್ನ ಮಕ್ಕಳಿಗಾಗಿ ಜೋಪಾನ ಮಾಡಿಕೊಂಡು ಮನೆ ಕಡೆ ಹೊರಟ್ಳು.

ವಾತಾವರಣ ಬದಲಾದ ಕಾರಣವೋ ಏನೋ ರೂಪಾಳ ಚರ್ಮ ಸ್ವಲ್ಪ ಒಣಗಿ ಕಳೆಗುಂದಿದಂತೆ ಅವಳಿಗೆ ಭಾಸವಾಗ ತೊಡಗಿತ್ತು. ಅಲ್ಲಿರುವಾಗ ತಿಂಗಳಿಗೊಮ್ಮೆ ಬ್ಯೂಟಿಪಾರ್ಲರ್, ಡಾಕ್ಟರ್ ಅಂತಾ ಭೇಟಿ ಮಾಡೋಳು, ಆರೈಕೆ ಮಾಡಿಕೊಳ್ಳೋಳು. ಇಲ್ಲಿ ಅದ್ಯಾವುದು ಸಿಗದೆ ಅಕ್ಷರಶಃ ಆಕೆಗೆ ಪಂಜರದಲ್ಲಿರುವೆ ಎಂದು ಅನಿಸತೊಡಗಿತ್ತು. ಇಲ್ಲ ಇದಕ್ಕೆ ಏನಾದರು ಪರಿಹಾರ ಹುಡುಕಲೇ ಬೇಕೆಂದುಕೊಂಡ ಆಕೆ ತನ್ನ ಎಲ್ಲಾ ಗೆಳತಿಯರಿಗೂ ಫೋನ್ ಮಾಡಿ ಮಾಹಿತಿ ಪಡೆಯಲು ಶುರು ಮಾಡಿದ್ದಳು. ಅದರಲ್ಲಿ ಆಕೆಯ ಗೆಳತಿ ಶೈಲಜಾ ಅನ್ನುವವಳು ‘ರೆಡ್ ವೈನ್’ ಅರ್ಥಾತ್ ‘ಕೆಂಪು ಷರಾಬು’ ಉಪಯೋಗದ ಬಗ್ಗೆ ನಾನು ಇಂಟರ್ನೆಟ್ನಲ್ಲಿ ನೋಡಿರುವೆ. ಒಂದೆರಡು ಬಾರಿ ಬಳಕೆ ಕೂಡ ಮಾಡಿರುವೆ. ನಿನಗೂ ಯಾವುದೇ ಅಲರ್ಜಿ ಇಲ್ಲದೆ ಇದ್ದರೆ ಬಳಕೆ ಮಾಡಿ ನೋಡು ಎಂದಳು. ಇದನ್ನು ಕೇಳಿದ ರೂಪ ಹೌದ ಇದನ್ನು ಹೇಗೆ ಬಳಬೇಕು ಎಂದಾಗ ಏನಿಲ್ಲ ಸ್ನಾನ ಮಾಡುವ ಸಮಯದಲ್ಲಿ ಒಂದೆರಡು ಮುಚ್ಚುಳದಷ್ಟು ರೆಡ್ ವೈನನ್ನು ನೀರಿಗೆ ಸೇರಿಸಿ ಸ್ನಾನ ಮಾಡಬೇಕು, ಇವುಗಳು ಬಹುತೇಕ ಹಣ್ಣುಗಳಿಂದಲೇ ಮಾಡಿರುವುದರಿಂದ ಚರ್ಮದ ಜೀವಕೋಶಗಳ ಬೆಳವಣಿಗೆಗೆ ಸಹಾಯವಾಗುತ್ತವೆ ಎಂದು ಎಲ್ಲೋ ಓದಿದ ನೆನಪು. ಒಂದು ಬಾಟಲಿ ವೈನ್ ಒಂದು ಇಪ್ಪತ್ತು ದಿನವಾದರು ಬರುತ್ತದೆ ತೊಂದರೆ ಇಲ್ಲ ಎಂದಳು. ಅದಕ್ಕೆ ರೂಪ ಅಯ್ಯೋ ಈ ರೆಡ್ ವೈನ್ ತರಿಸಿಕೊಳ್ಳುವುದಾದರು ಹೇಗೆ ಅದು ಹಳ್ಳಿಯಲ್ಲಿ ಜನ ಏನಂದುಕೊಂಡಾರು ಬೇಡಪ್ಪ ಬೇಡ ಎಂದಾಗ ನಾನು ನಮ್ಮ ಮನೆಯ ಕೆಲಸದವನಿಂದ ತರಿಸಿಕೊಳ್ಳುತ್ತೇನೆ ರೂಪ ನೀನು ಹಾಗೆ ಮಾಡಬಹುದು ನಿನಗೆ ಬಿಟ್ಟದ್ದು ಎಂದಾಗ ಒಳ್ಳೆಯ ಐಡಿಯಾ ಕೊಟ್ಟೆ ಶೈಲಜಾ ಎಂದು ಹೇಳಿ ಫೋನ್ ಇಟ್ಟಳು.

ಮನೆಯ ಕೆಲಸದವಳು ಗಂಗಿಗೆ ಹೇಳಿದರೆ ಕೆಲಸ ಕೆಡುತ್ತದೆ. ಆಕೆ ನಾನೇ ಕುಡಿತೀನಿ ಅಂತಾ ಹಳ್ಳಿಗೆಲ್ಲಾ ಟಾಮ್ ಟಾಮ್ ಮಾಡಿದರೆ ಕಷ್ಟ ಎಂದುಕೊಂಡವಳೇ ಆಸ್ಪತ್ರೆ ಕಾಂಪೌಂಡರ್ ಯೋಗೇಶಪ್ಪನಿಗೆ ಹೇಳಿ ಕಳುಹಿಸಿದಳು. ಮನೆಗೆ ಬಂದ ಯೋಗೇಶಪ್ಪ ಏನವ್ವಾರೆ ಹೇಳಿ ಕಳಿಸಿದ್ದು, ಏನಾದ್ರು ಕೆಲಸ ಆಗ್ಬೇಕಿತ್ತ ಎಂದ. ಅಂತಾದ್ದೇನು ದೊಡ್ಡ ಕೆಲಸ ಅಲ್ಲಾ ನೋಡ್ ಮತ್ತೆ, ನಂಗೆ ತಿಂಗಳಿಗೆ ಒಂದು ಎರಡರಿಂದ ಮೂರು ಬಾಟಲ್ ರೆಡ್ ವೈನ್ ಹೆಂಡದ ಅಂಗಡಿಯಿಂದ ತಂದುಕೊಡಬೇಕು ಅಷ್ಟೇ ಎಂದಳು. ಯೋಗೇಶಪ್ಪ ಅವಳ ಮುಖವನ್ನೇ ಪಿಳಪಿಳನೇ ಕಣ್ಣು ಬಿಡುತ್ತಾ ನೋಡುತ್ತಿದ್ದನು. ಮತ್ತೆ ಏನಾದರು ಕೇಳಿದರೆ ಬೈದಾರು ಅಂದುಕೊಂಡು, ಸರಿ ಕಣ್ರವ್ವ ನೀವು ಹೇಳಿದಂಗೆ ತಂದುಕೊಡ್ತಿನಿ, ನಂಗೆ ಏನ್ ಕೊಟ್ಟಿರಿ ಅಂದ. ಅದಕ್ಕೆ ರೂಪ, ನೀನೊಂದು ಇಪ್ಪತ್ತು ರೂಪಾಯಿ ತಗೋ ಮಾರಾಯ ಆದರೆ ವಿಷಯಾನ ಮಾತ್ರ ಯಾರಿಗೂ ಬಾಯ್ಬಿಡಬಾರದು ಎಂದು ಕಟ್ಟಪ್ಪಣೆ ಹೊರಡಿಸಿದಳು. ಮಾರನೆಯ ದಿನ ಬೆಳಿಗ್ಗೆ ಡಾಕ್ಟರ್ ಮನೆಯಲ್ಲಿ ಮೂರು ಬಾಟಲಿ ರೆಡ್ ವೈನ್ ಹಾಜರಾಗಿತ್ತು.

ಹಿಂಗೆ ನಾಲ್ಕು ತಿಂಗಳು ಹೇಗೋ ಸಂಭಾಳಿಸಿದಳು ರೂಪ, ಐದನೇಯ ತಿಂಗಳಿಗಾಗಲೇ ಊರಿನಲ್ಲಿ ಗುಸು ಗುಸು ಪಿಸು ಪಿಸು ಮಾತು ಶುರುವಾಗಿತ್ತು,

‘ಈ ಡಾಕುಟ್ರು ಹೆಂಡ್ತಿ ರೂಪವ್ವ ಇದಾಳಲ್ಲ ಅವ್ಳು ಕುಡಿತಾಳಂತೆ ದಿನಕ್ಕೆ ಎರಡು ಮೂರು ಬಾಟಲಿನೇ ಬೇಕಂತೆ, ಅವಳಿಗೆ ಈ ಯೋಗೇಶಪ್ಪಾನೇ ಸರಬರಾಜು ಮಾಡೋದಂತೆ, ಅಯ್ಯೋ ಇನ್ನೂ ಏನೇನೂ ಇದೇಯೋ ನಮಗ್ಯಾಕೆ ಬೇಕು ಬಿಡಿ ದೊಡ್ಡವರ ಮನೆಯ ವಿಷಯ ಎಂದು’ ಮಾತನಾಡೋದೆಲ್ಲಾ ಮಾತನಾಡಿ ಜನಗಳು ಕೊನೆಗೆ ಹೀಗೆ ಹೇಳೋರು.

ಆಧುನಿಕ ಕಾಲದಲ್ಲಿ ಹೆಣ್ಣೊಬ್ಬಳು ವೈನನ್ನು ಯಾವ ಕಾರಣಕ್ಕಾಗಿ ತರಲು ಹೇಳಿರಬಹುದು ಎಂದು ಕನಿಷ್ಠ ಆಲೋಚನೆಯು ಇಲ್ಲದೆ ಬೇಕಾದ್ದದ್ದನ್ನು ಮಾತನಾಡುವಲ್ಲಿಗೆ ಬಂದಿತ್ತು ನಮ್ಮ ಸ್ವಾತಂತ್ರ್ಯ. ಊರಿನಲ್ಲಿ ಈ ಸುದ್ದಿ ದಿನೇ ದಿನೇ ಬಾಯಿಂದ ಬಾಯಿಗೆ ಹರಿದಾಡುವಾಗ ತಪ್ಪಿ ತಿಮ್ಮೇಶಿಯ ಕಿವಿಗೂ ಬಿದ್ದು ಬಿಟ್ಟಿತು. ಕ್ರಮೇಣ ತಿಮ್ಮೇಶಿಗೆ ರೂಪಾಳ ಮೇಲೆ ಅನುಮಾನ ಶುರುವಾಗಿತ್ತು. ಇತ್ತ ರೂಪ ಪ್ರತಿದಿನ ಸ್ನಾನ ಮಾಡುವಾಗ ತಪ್ಪದೆ ಕೆಂಪು ಷರಾಬನ್ನು ಬಳಸುತ್ತಿದ್ದಳು, ಅವಳಿಗೆ ಅದರಿಂದ ಉಪಯೋಗವಾಗುತ್ತಿದೆ ಎಂದು ಅನಿಸೋಕೆ ಶುರುವಾಗಿತ್ತು. ಡಾಕ್ಟರ್ ಮನೆಯ ಹಿತ್ತಲಿನಲ್ಲಿ ರೆಡ್ ವೈನ್ ಬಾಟಲ್ಗಳು ಶೇಖರಣೆಯಾಗುತ್ತಿದ್ದವು, ಗಂಡನಿಗೆ ಈ ವಿಷಯವನ್ನು ತಿಳಿಸದೆ ರೂಪ ಗೌಪ್ಯವಾಗಿಯೇ ಇರಿಸಿದ್ದಳು. ಎಲ್ಲಿಯವರೆಗೂ ಸುದ್ದಿ ದಾರಿ ತಪ್ಪಿತ್ತೆಂದರೆ ‘ಡಾಕುಟ್ರು ಹೆಂಡ್ತಿ ರೂಪವ್ವಂಗೂ ಕಾಪೌಂಡ್ರು ಯೋಗೇಸಪ್ಪಂಗೂ ಕಳ್ ಸಂಬಂಧವಂತೆ, ಅದುಕ್ಕೆ ಅವ್ನು ಇಲ್ಲಿ ವೈನ್ ತಗಂಡಾಗೆಲ್ಲಾ ಕದ್ದು ಮುಚ್ಚಿ ಡಾಕುಟ್ರು ಮನೆತಾಕ ಹೋಗೋದಂತೆ’ ಅಂತೆ ಕಂತೆಗಳ ಸಂತೆಯಾಗಿತ್ತು ಹಳ್ಳಿ.

ಡಾಕ್ಟರ್ ಮನೆಯಲ್ಲಿ ಸಣ್ಣದಾಗಿ ಜಗಳ ಆರಂಭವಾಗಿತ್ತು, ಇಷ್ಟಾದರೂ ರೂಪಾಳಿಗೆ ಊರಿನಲ್ಲಿ ನಡೆಯುತ್ತಿರುವ ಗಾಳಿ ಸುದ್ದಿಯ ಬಗ್ಗೆ ಒಂದು ಸಣ್ಣ ಸುಳಿವು ಸಿಕ್ಕಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಯೋಗೇಶಪ್ಪ ನಾನು ಇನ್ಮುಂದೆ ನಿಮ್ಗೆ ರೆಡ್ ವೈನ್ ತಂದು ಕೊಡಲ್ಲ ಕಣವ್ವ, ನಂಗೆ ನಿಮ್ಮ ಇಪ್ಪತ್ತು ರೂಪಾಯಿನು ಬೇಡ ಈ ಜನಗಳ ಮಾತು ಕೇಳೋದು ಬೇಡ ಎಂದು ಸಣ್ಣದಾಗಿ ಸುಳಿವು ಕೊಟ್ಟಿದ್ದ. ಓಹೋ ವಿಷಯ ಇಲ್ಲಿದೆ ಎಂದವಳೇ ಇದನ್ನು ಬಿಟ್ಟರೇ ಎಲ್ಲಿಗೋ ಹೋಗಿ ಮುಟ್ಟುವುದರಲ್ಲಿ ಅನುಮಾನ ಇಲ್ಲ ಎಂದವಳೇ ಇಂದು ರಾತ್ರಿ ಗಂಡ ತಿಮ್ಮೇಶಿಗೆ ವಿಷಯ ಮುಟ್ಟಿಸಬೇಕೆಂದು ಮಾನಸಿಕವಾಗಿ ಸಿದ್ಧಳಾಗಿರುತ್ತಾಳೆ. ಮನೆಗೆ ಬಂದ ತಿಮ್ಮೇಶಿ ಊಟ ಮಾಡಿ ಬೇರೆ ಕೋಣೆಗೆ ಮಲಗಲು ಹೋಗುತ್ತಿರುವಾಗ ತಡೆದು ಇರುವ ವಿಚಾರವನ್ನು ಹೇಳುತ್ತಾಳೆ ಮತ್ತು ತಿಮ್ಮೇಶಿಗೂ ಇವಳ ಸೌಂದರ್ಯದ ಕಾಳಜಿಯ ಬಗ್ಗೆ ಅವಳಿಗಿರುವ ಅತೀವ ಆಸಕ್ತಿಯ ಈ ಮೊದಲೇ ಮನವರಿಕೆಯಾಗಿದ್ದರು, ಈ ವಿಷಯ ಈಗಾಗಲೇ ಹಳ್ಳಿಯಲ್ಲಿ ಹರಿದಾಡುತ್ತಿರುವುದರಿಂದ ಇದಕ್ಕೆ ಮುಲಾಮು ಹಚ್ಚಬೇಕಾದರೆ ಪಂಚಾಯತಿ ಕರೆದು ನಾಲ್ಕು ಜನರ ಮುಂದೆ ತೀರ್ಮಾನವಾಗಬೇಕು ಎಂದು ಊರಿನ ಗೌಡರು ಮತ್ತು ಹಿರಿಕರಿಗೆ ಪಂಚಾಯತಿಗೆ ಹೇಳಿ ಕಳಿಸುತ್ತಾನೆ. ಪಂಚಾಯತಿಯ ಮುಂದೇ ನೀವಿಬ್ಬರು ಹೇಳಿದರೆ ನಿಮ್ಮ ಮಾತನ್ನು ಯಾರು ನಂಬುತ್ತಾರೆ ರೂಪ, ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಅಂದಂಗೆ ಅಂತಾರೆ. ಬೇರೆ ಏನಾದರು ಉಪಾಯ ಮಾಡು ಎಂದು ಹೇಳುತ್ತಲೇ ಈ ರೆಡ್ ವೈನ್ ಐಡಿಯಾ ನಂಗೆ ಕೊಟ್ಟಿದ್ದು ನನ್ನ ಫ್ರೆಂಡ್ ಶೈಲಜಾ ಅವಳ ಕಡೆಯಿಂದಾನೆ ಪಂಚಾಯತಿಯ ಮುಂದೆ ಹೇಳಿಸೋಣ ಎಂದವಳೇ ಶೈಲಜಾಗೆ ಫೋನ್ ಮಾಡಿ, ನಡೆದ ಘಟನೆಗಳನ್ನೆಲ್ಲಾ ಸವಿವರವಾಗಿ ಆಕೆಗೆ ತಿಳಿಸುತ್ತಾಳೆ. ಇದನ್ನು ಕೇಳಿದ ಆಕೆ ಏನೇ ರೂಪ ಇಷ್ಟೆಲ್ಲಾ ರಂಪಾ ಆಗಿದೆಯ? ಅಯ್ಯೋ ಕರ್ಮವೇ ಎಂದು ರಾಗ ಎಳೆಯುತ್ತಾಳೆ. ಪಂಚಾಯತಿಯವರು ಸಭೆ ಸೇರುವ ದಿನ ನಿನಗೆ ಫೋನ್ ಮಾಡುವೆ ಅವರಿಗೆ ನೀನೇ ಐಡಿಯಾ ಕೊಟ್ಟಿದ್ದು ಎಂದು ಹೇಳಿ ನನ್ನನ್ನು ಈ ಅಪಪ್ರಚಾರದಿಂದ ಮೊದಲು ಪಾರು ಮಾಡಮ್ಮ ಎಂದು ಕೇಳಿಕೊಳ್ಳುತ್ತಾಳೆ. ಇದಕ್ಕೆ ಒಪ್ಪಿಗೆ ಸೂಚಿಸುವ ಶೈಲಜಾ, ಸರಿ ಕಣೆ ಆ ದಿನಕ್ಕಾಗಿ ಕಾಯುತ್ತಿರುತ್ತೇನೆ, ಯೋಚಿಸಬೇಡ ಆರಾಮವಾಗಿರು ಎಂದು ಹೇಳಿ ಫೋನ್ ಇಡುತ್ತಾಳೆ.

ಹಳ್ಳಿಯ ಮಾರವ್ವನ ಜಾತ್ರೆಯ ಮಾರನೆಯ ದಿನ ಕಾಪೌಂಡರ್ ಯೋಗೇಶಪ್ಪನನ್ನು ಸೇರಿದಂತೆ ಊರಿನ ಹಿರಿಕರೆಲ್ಲರು ಡಾಕ್ಟರ್ ಮನೆಯಲ್ಲಿ ಪಂಚಾಯತಿಗಾಗಿ ಸಭೆ ಸೇರುತ್ತಾರೆ. ಜಾತ್ರೆಗಾಗಿ ಮಗನ ಮನೆಗೆ ಬಂದಿದ್ದ ಸಣ್ಣವ್ವಳಿಗೆ ಇದನ್ನೆಲ್ಲಾ ನೋಡಿ, ‘ಇದ್ಯಾಕ್ ಹಿಂಗೆ ಹಾದಿ ಬೀದಿಯಾಗೆ ಹೋಗೋ ಮನೆಹಾಳ್ರೆಲ್ಲಾ ನಮ್ಮನಿ ಕಡೆಗೆ ಬರಕತ್ತಾರೆ’ ಎಂದು ಮನಸ್ಸಿನೊಳಗೆ ಅಂದುಕೊಳ್ತಾಳೆ. ಪಂಚಾಯತಿಯ ಸಭೆ ಆರಂಭವಾದಗಲೇ ಅವಳಿಗೂ ಅಸಲಿ ವಿಷಯ ಗೊತ್ತಾಗಿದ್ದು. ಪಂಚಾಯತಿಯ ಸಮ್ಮುಖದಲ್ಲಿ ಫೋನ್ ಮಾಡಿ ಇರುವ ವಿಷಯವನ್ನೆಲ್ಲಾ ಶೈಲಜಾ ಹೇಳಿದ ನಂತರ ಅಸಲಿ ವಿಷಯ ತಿಳಿದು ಹುಬ್ಬೇರಿಸುತ್ತಾರೆ, ಪಂಚಾಯತಿಯವರು ‘ಮತ್ತೆ ಈ ಯೋಗೇಸಪ್ಪನಿಗೆ ಯಾಕ್ ಹೇಳ್ತಾ ಇದ್ರಿ ವೈನ್ ತರೋಕೆ’ ಅಂದಾಗ ‘ಅವ ಏನೂ ಹಾಗೆ ತರ್ತಾ ಇರಲಿಲ್ಲ ಅವಂಗೆ ಇಪ್ಪತ್ತು ರೂಪಾಯಿ ಕೊಡ್ತಾ ಇದ್ದೆ ಅದಕ್ಕೆ ತಂದು ಕೊಡ್ತಾ ಇದ್ದ ಪಾಪ ಅಷ್ಟೇ’ ಎಂದು ಮಾತು ಮುಗಿಸುತ್ತಾಳೆ. ಪಂಚಾಯತಿಯ ತೀರ್ಮಾನದ ನಂತರ ಹಳ್ಳಿ ಹೆಂಗಸರ ಬಾಯಿಂದ ಬಾಯಿಗೆ ಅಸಲಿ ವಿಷಯ ಮುಟ್ಟಿ ‘ತಗುಳ್ರವ್ವ ಡಾಕುಟ್ರು ಹೆಂಡ್ತಿನು ಕುಡಿತ್ತಿದ್ಲಂತೆ ಏನ್ ಕಾಲ ಬಂತು ಹೋಗತ್ಲಾಗೆ’ ಎನ್ನುವಲ್ಲಿಗೆ ಅವರ ಅಂದಿನ ಹರಟೆಕಟ್ಟೆಯ ಮಾತುಕತೆ ಕೊನೆಯಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT