ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಕರೆ ಮಾಡಿದೆ

Last Updated 2 ಅಕ್ಟೋಬರ್ 2021, 19:31 IST
ಅಕ್ಷರ ಗಾತ್ರ

ಏಕೋ ಏನೂ ಆಗುತ್ತಿಲ್ಲವೆಂದೊ ಅಥವಾ ಹೀಗಾಯಿತ್ತಲ್ಲವೆಂಬ ಬೇಸರಿಕೆಯಾದಾಗಲೊ ಮೊಬೈಲ್‍ನಲ್ಲಿ ಶೇಖರಣೆಯಾದ ಸಂಪರ್ಕಕ್ಕೆಬಂದವರ ನಂಬರ್‌ಗಳನ್ನು ನೋಡುತ್ತಾ ಕುಳಿತುಕೊಳ್ಳುತ್ತೇನೆ! ಯಾವುದೋ ಕೋಡ್‍ನಲ್ಲಿ ಹೆಸರಿಸಿರುವಂತೆ ಕಾಣಿಸುವ ನಂಬರ್‌ಗಳನ್ನು ನೋಡುವಾಗ ಅದು ಬಹಳ ವರುಷಗಳ ಹಿಂದೆ ಉತ್ತರ- ದಕ್ಷಿಣಭಾರತ, ಅಂಡಮಾನ್‌ ತಿರುಗಾಡಲಿಕ್ಕೆ ಹೋಗಿದ್ದಾಗ ‘ನಿಮ್ಮದೆಲ್ಲಾ ಆದ ಮೇಲೆ ಪೋನ್ ಮಾಡಿ, ಸರ್.’ ಎಂದು ಟೂರ್ ಕಂಡಕ್ಟ್ ಮಾಡಿದ್ದವರೊ, ಟ್ಯಾಕ್ಸಿ ಡ್ರೈವರ್‍ರೊ ಕೊಡುವ ನಂಬರ್‌ಗಳ ಮುಂದೆ ಸರಳವಾಗಿ ಒಂದೆರಡು ಆಂಗ್ಲ ಅಕ್ಷರಗಳಲ್ಲಿ ಗುರುತಿಸಿಕೊಂಡಿದ್ದೆಂದು ನೆನಪಾಗಿ ಸ್ಮೃತಿಪಟಲದಲ್ಲಿ ಆ ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳು ಬಿಚ್ಚಿಕೊಳ್ಳುವುದು ಹಾಯೆನಿಸುತ್ತದೆ!

ಕೆಲವರದು ವಾಟ್ಸ್‌ಆ್ಯಪ್‌ನಲ್ಲೂ ಕಾಣಬರುವುದರಿಂದ ಡಿಸ್‍ಪ್ಲೇ ಪಿಕ್ಚರ್‌ನಲ್ಲಿ ಅವರ ಮುಖ ಗೊತ್ತಾಗಿ ಇವರಾ ಎಂದೆನಿಸುತ್ತದೆ! ಅವತ್ತೂ ಹೀಗೆ, ಅಮ್ಮ ಮಂಚದ ಮೇಲೆ ಕುಳಿತಲ್ಲಿದಲೇ ಎರಡು ದಿನದ ಹಿಂದಷ್ಟೆ ಅವಳ ಅಕ್ಕ ತೀರಿಕೊಂಡಿದ್ದನ್ನು ನೆನೆ ನೆನೆದು ‘ನಿದ್ದೆನೆ ಬರಲ್ವೊ ಪಾಂಡು..ಎಂತಹ ಕಾಯಿಲೆ ಬಂತ್ತಪ್ಪ ಜಗತ್ತಿಗೆ.’ ಎಂದಿದ್ದಳು.

ಕಳೆದ ವಿಕಾರಿ ಸಂವತ್ಸರದ ಡಿಸೆಂಬರ್‌ನಲ್ಲಿ ತನ್ನಕ್ಕನ ಮೊಮ್ಮಗಳ ಮದುವೆಗೆ ನೀನು ಹೋಗದಿದ್ದರೂ ಹೋಗುವವರ ಜತೆಗಾದರೂ ತನ್ನನ್ನು ಕಳುಹಿಸಿಕೊಡಲ್ಲಿಲ್ಲವೆಂದು, ಅವತ್ತು ಹೋಗಿದ್ದರೆ ಅವಳನ್ನು ಹಾಗೂ ಸಂಬಂಧಿಕರನ್ನು ನೋಡಬಹುದಾಗಿತ್ತು ಎಂದು ಹಳಹಳಿಸಿದ್ದಳು. ಅಮ್ಮನದು ಬಹಳ ಸೂಕ್ಷ್ಮ ಶರೀರ. ಬೇಸರವಾಗಿ ಮೊಬೈಲ್ ಹಿಡಿದು ಕೂರಬೇಕೆಂದಿರುವಾಗ ಅದೇ ರಿಂಗಣಗುಟ್ಟಿತ್ತು! ‘ಹೇಗಿದ್ದಿರಾ, ಸರ್..’ ಎಂದ ದನಿಗೆ ತಬ್ಬಿಬ್ಬಾಗಿ ‘ಓಹ್ ..ರಂಗಣ್ಣ..ಹೇಗಿದ್ದಿರಿ’ ಎಂದಿದ್ದೆ. ‘ಏನೆಲ್ಲಾ ಆಗೋಗ್ತಾ ಇದೆ, ಸರ್. ನಿಮ್ಮ ಕಡೆ ಹೇಗೆ?’ ಎಂದಿದ್ದ. ‘ಏನಾಯ್ತು ರಂಗಣ್ಣ.. ಆರೋಗ್ಯನಾ’ ಎಂದಿದ್ದೆ. ಗಾಬರಿಯಾಗಿ. ‘ಎಲ್ಲಾ ಆರೋಗ್ಯನೆ..ಹ್ಞಾ, ಯಾರದೊ ಪೋನ್ ಬಂತು. ಆಮೇಲೆ ಮಾತಾಡ್ತೀನಿ..’ ಎಂದು ಅವಸರಿಸಿ ಕರೆ ಕತ್ತರಿಸಿಯೆ ಬಿಟ್ಟಿದ್ದ!

ಐದು ವರ್ಷವೇ ಆಗಿತ್ತು, ರಂಗಣ್ಣ ಪೋನ್ ಮಾಡಿ. ನಾನೂ ಮಾಡಿರಲಿಲ್ಲ! ಸ್ಮಾರ್ಟ್‌ಪೋನ್ ಇದ್ದಿರಬಹುದು-ವಾಟ್ಸ್‌ಆ್ಯಪ್‌ನಲ್ಲಿ ಆ ನಂಬರ್ ಇರುವುದು ಕಂಡಿದ್ದು ಡಿಸ್‍ಪ್ಲೇ ಪೋಟೋದಲ್ಲಿ ವೃದ್ಧರೊಬ್ಬರು ಮಗುವೊಂದನ್ನು ಎತ್ತಿಕೊಂಡ ಚಿತ್ರವಿತ್ತು. ಆರೇಳು ವರ್ಷಗಳ ಹಿಂದೆ ರಂಗಣ್ಣನ ಮಗಳ ಮದ್ವೆಗೆ ಹೋಗಿದ್ದು ನೆನಪಾಗಿ ಇದು ಅವಳದೇ ಮಗುವಿದ್ದಿರಬಹುದೆಂದು, ಅವರಪ್ಪ ಎತ್ತಿಕೊಂಡಿದ್ದಿರಬಹುದು ಎನಿಸಿತ್ತು.

ರಂಗಣ್ಣ ಹೊಸಕೋಟೆಯವನು. ಒಂದಿಷ್ಟು ಹೊಲ ಗದ್ದೆ ಇದೆ. ಅಕೌಂಟೆಂಟ್‍ ಆಗಿ ನನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ದಿನವೂ ಹೊಸಕೋಟೆಯಿಂದ ಬರುತ್ತಿದ್ದು ಕೆಲವು ಸಾರಿ, ಮಾರ್ಕೆಟ್‌, ಎಪಿಎಂಸಿಯಲ್ಲಿ ಕೆಲಸವಿದ್ದರೆ ಜೀಪನ್ನೊ ಕಾರನ್ನೊ ಡ್ರೈವ್ ಮಾಡಿಕೊಂಡು ಬರುತ್ತಿದ್ದ. ಅವನ ಹತ್ತಿರ ಪುಟ್ಟ ಮೊಬೈಲ್ ಇರುತ್ತಿತ್ತು. ಅದರಲ್ಲಿ ಯಾವಾಗಲೂ ‘ನಿಮ್ಮ ಕಡೆ ಮಳೆ ಹೇಗೆ.’ ಎಂತಲೊ, ‘ಆಲೂಗಡ್ಡೆ ಎಷ್ಟು ಬಂತು.’ ಅಂತಲೊ ಮಾತಾಡುತ್ತಿರುತ್ತಿದ್ದ. ಮಾತು ಒರಟಾದರೂ ಒಳ್ಳೆಯ ಹೃದಯವಂತ. ಒಂದು ಸಾರಿ ಹಾವು ಕಚ್ಚಿದೆಯೆಂದು ಯಾರನ್ನೊ ಜೀಪ್‍ನಲ್ಲಿ ಹಾಸ್ಪಿಟಲ್‍ಗೆ ಕರೆದುಕೊಂಡು ಬಂದು ಜೀವ ಕಾಪಾಡಿದ್ದ. ಹಾಗೆಯೆ, ಅಸ್ಪತ್ರೆಯಲ್ಲಿ ತೀರಿಕೊಂಡ ಇನ್ನೊಬ್ಬರ ಬಿಲ್ ಪೂರ್ತಿ ಪಾವತಿಸದ ಹೊರತು ಶವ ಕೊಡುವುದಿಲ್ಲವೆಂದುದಕ್ಕೆ ‘ಬೇಕಾಬಿಟ್ಟಿ ಟ್ರೀಟ್‍ಮೆಂಟ್ ಮಾಡಿ ಸಾಯಿಸಿದ್ದೀರಿ.. ಇಷ್ಟೇ ಕೊಡೋದು. ಬೇಡಾ ಅಂದ್ರೆ ..ಬಾಡಿನ ನೀವೆ ಇಟ್ಟುಕೊಳ್ರಿ.’ ಎಂದು ಗಲಾಟೆ ಮಾಡಿ ಶವವನ್ನು ಕೊಡುವ ಹಾಗೆ ಮಾಡಿದ್ದ.

ಮಗಳ ಮದುವೆ ಆಗುತ್ತಿದ್ದಂತೆ ದಾಂಡೇಲಿಗೆ ವರ್ಗಾವಣೆ ಮಾಡಿದ್ದಕ್ಕೆ ಅಲ್ಲಿಗೆ ಹೋಗದೆ ವಾಲಂಟರಿ ನಿವೃತ್ತಿಯನ್ನೆ ತೆಗೆದುಕೊಂಡಿದ್ದ. ಆ ಬಾರಿಯೂ ಅವನ ವರ್ಗಾವಣೆಯನ್ನು ರದ್ದುಪಡಿಸಿದ್ದಿದ್ದರೆ ಆಪೀಸರ್‌ ಮೇಲೆ ಕ್ರಮ ತೆಗೆದುಕೊಳ್ಳುವ ಸಂಭವವಿದ್ದಿತ್ತು. ನಾನು ಅವನ ವರ್ಗಾವಣೆ ವಿರುದ್ಧ ಆಪೀಸರ್ ಹತ್ತಿರ ಮಾತಾಡಲಿಲ್ಲವೆಂದು ಸಿಟ್ಟಾಗಿದ್ದ. ಆಗಾಗ ರಸ್ತೆಯಲ್ಲಿ ಚಕ್ಕನೆ ಎದುರಾಗುತ್ತಿದ್ದ, ನನಗಾಗಿಯೆ ಕಾಯುತ್ತಿರುವಂತೆ ಅದು ಇರುತ್ತಿದ್ದರೂ ‘ಇಲ್ಲೇ ಬಂದಿದ್ದೆ.. ಹೇಗಿದ್ದಿರೀ.’ ಎಂದು ಕೇಳುತ್ತಿದ್ದ. ಹಾಗೆ ಕೇಳುವಾಗ ನೀವೆಲ್ಲಾ ಅದು ಹೇಗೆ ಚೆನ್ನಾಗಿರುತ್ತೀರಿ. ತನಗೆ ಕಚೇರಿ ಬಿಟ್ಟುಹೋಗುವಂತೆ ಮಾಡಿ ಎಂಬ ಭಾವವಿದ್ದಿತ್ತೋ ಏನೋ ಎಂದೆನಿಸುತ್ತಿತ್ತು! ಇದು ನಿಜವೆ ಅನ್ನುವಂತೆ ಅದೊಂದು ದಿನ ಹೀಗೆ ಎದುರಾಗಿದ್ದಾಗ ಇತ್ತೀಚೆಗಷ್ಟೆ ಅವನ ವರ್ಗಾವಣೆ ಮಾಡಿಸಿದ್ದ ಆ ಆಪೀಸರ್ ಆಸ್ಪತ್ರೆಗೆ ಅಡ್ಮಿಟ್‍ ಆಗಿದ್ದರೆಂದು ಹೇಳಿದಕ್ಕೆ ‘ದೊಡ್ಡವರು.. ದೇವರು ಒಳ್ಳೆಯದು ಮಾಡಲಿ’ ಎಂದಿದ್ದ, ಅವರಿಗೆ ಹೀಗಾಗಿದ್ದ ವಿಚಾರ ಅದಾಗಲೆ ಗೊತ್ತಿದ್ದರೂ ನನ್ನಿಂದ ಕೇಳಬೇಕೆಂದೆ ಎದುರಾಗಿದ್ದನೆಂಬುದು ಅವನ ಚಹರೆಯಲ್ಲಿ ಕಾಣುತ್ತಿತ್ತು!.

‘ಹ್ಞಾ..ಹ್ಞಾ.’ ಎಂದಿದ್ದೆನಾದರೂ ‘ನೀನು ಹೇಗಿದ್ದಿಯಾ.. ಮಗ ಏನು..’ ಎಂದು ಕೇಳಲು ಮಾತುಗಳು ಬಂದಿರಲಿಲ್ಲ! ಏಕೆಂದರೆ, ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಮಗ ಎರಡೇ ವರ್ಷಕ್ಕೆ ತನಗೆ ಓದಲು ಆಗುವುದಿಲ್ಲವೆಂದು ಇವನ ಇಚ್ಛೆಗೆ ವಿರುದ್ಧವಾಗಿ ಮನೆಯಲ್ಲೆ ಇದ್ದುಬಿಟ್ಟಿರುವ ವಿಚಾರ ಯಾರಿಂದಲೊ ತಿಳಿದಿದ್ದೆ.

ರಂಗಣ್ಣ ಮತ್ತೆ ಪೋನ್ ಮಾಡಲಿಲ್ಲ, ಅದು ಅವಶ್ಯಕತೆಯೆ ಇಲ್ಲವೆಂಬಂತೆ. ನಾನಾದರೂ ಏಕೆ ಮಾಡಬೇಕೆನಿಸಿತು, ನನ್ನ ಮೇಲೆ ಮೊದಲಿನಿಂದಲೂ ಅವನಿಗೆ ಸಿಟ್ಟಿದೆಯೆಂದು!. ಇತ್ತ ನನ್ನ ಅಮ್ಮನೊ ದೊಡ್ಡಮ್ಮ ಸತ್ತಿದಕ್ಕೆ, ಅವಳ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿಲಾಗದಿದ್ದುದಕ್ಕೆ ಅವಳೊಡನೆ ಕಳೆದ ಕ್ಷಣಗಳನ್ನು ನೆನೆಯುತ್ತಾ ದುಃಖಿಸುತ್ತಲೆ ಇದ್ದಳು!

ಸಮಾವೇಶ, ಪ್ರತಿಭಟನೆ, ಸಭೆ, ಸಮಾರಂಭ, ರೇವ್ ಪಾರ್ಟಿ ಅದು ಇದು ಅಂತಾ ಸಂತೆ ಸೇರಿದ್ದ ಜನ ಸಾಮಾಜಿಕ ಅಂತರ ಮರೆತುಬಿಡುತ್ತಿದ್ದಂತೆ ಕೊರೊನಾ ಎರಡನೆ ಅಲೆ ಎದ್ದೇ ಬಿಟ್ಟಿತ್ತು. ವ್ಯಾಕ್ಸಿನೇಷನ್‍ಗೆ ಸನ್ನದವಾಗುತ್ತಿರುವಾಗಲೆ! ಉಸಿರಾಟದ ತೊಂದರೆಯಿಂದ ಏದುಸಿರುಬಿಡುತ್ತಿದ್ದವರನ್ನು ಹೊತ್ತು ಹಿತೈಷಿಗಳು ಆಸ್ಪತ್ರೆ ಬೆಡ್‍ಗಾಗಿ ಪರದಾಡುತ್ತಿರುವಾಗ ಏಪ್ರಿಲ್ ತಿಂಗಳ ಮಧ್ಯ ಭಾಗದಲ್ಲಿ ನಮ್ಮ ಮನೆಗೂ ವಕ್ಕರಿಸಿತು ಕೊರೊನಾ. ಇವಳಿಗೆ ನೆಗಡಿ ಜ್ವರವಾದರೆ ನನಗೆ ತಲೆಭಾರ, ವಾಂತಿ ಒಳಗೊಳಗೆ ಜ್ವರವಿದೆಯೆನಿಸುವ ಹಾಗೆ, ಇಬ್ಬರಿಗೂ ನಾಲಿಗೆ ರುಚಿಯೆ ಇಲ್ಲ; ಒಣಕೆಮ್ಮು ಬೇರೆ. ನೋಡುನೋಡುತ್ತಿದ್ದಂತೆ ಅಮ್ಮ ಏದುಸಿರುಬಿಡುತ್ತಾ ಕಾಲಲ್ಲಿ ಸೆಳೆತವೆಂದು ಬೀಳತೊಡಗಿದಳು, ಊಟ ಹಿಡಿಸದು; ಬಿದ್ದ ನೋವು, ಸಂಕಟ; ಆಕ್ಸಿಜನ್ ಲೆವಲ್ ಎಂಬತ್ತೊಂಬತ್ತಕ್ಕೆ ಕುಸಿದಿತ್ತು! ಅವರಿವರನ್ನು ಕಾಡಿಬೇಡಿ ಹೇಗೊ ಅಸ್ಪತ್ರೆಯೊಂದರಲ್ಲಿ ಅಮ್ಮನಿಗೆ ಬಿ.ಯು ನಂಬರ್ ಒದಗಿಸಿಕೊಂಡು ಬೆಡ್ ದೊರಕಿಸಿಕೊಳ್ಳುವುದರೊಳಗೆ ನನಗೆ ಏದುಸಿರು! ಆಸ್ಪತ್ರೆಗೆ ಕೊಂಡೊಯ್ಯುವ ಮುನ್ನ ‘ಕೊರೊನಾ ಬಂತಾ..ಇನ್ನು ನಾ ಬದುಕುವುದು ಉಂಟೇನೊ.’ ಎಂದು ಬೀರುವಿನ ಬಟ್ಟೆ ಸಂಧಿಯಲ್ಲಿದ್ದ ತನ್ನ ಪುಡಿ ಒಡವೆ ಹಾಗು ಪುಟ್ಟ ಹಣದ ಗಂಟನ್ನು ಹಂಚಿಕೊಳ್ಳಿಯೆಂದು ತೋರಿಸಿದಳು.

ಸಣ್ಣ ಚೀಲದಲ್ಲಿ ಒಂದು ಸೀರೆ ಲಂಗ ರವಿಕೆ ಮೊಬೈಲ್, ಅದರ ಚಾರ್ಜರ್ ಹಾಗು ಹಲ್ಲು ಸೆಟ್‌ ಇಡಲು ಡಬ್ಬಿಯ ಜತೆ ಚಿಕ್ಕ ನೀರಿನ ಬಾಟಲಿಯ ಹಿಡಿದು ಅಂಬುಲೆನ್ಸ್‌ ಕಡೆಗೆ ನಡೆದುಕೊಂಡೆ ಹೋಗಿ ಹತ್ತಿದ್ದಳು, ಅಮ್ಮ. ಆಮೇಲೆ ಆಸ್ಪತ್ರೆಯಲ್ಲಿ ತನ್ನ ಅಕ್ಕಪಕ್ಕ ಆರಾರಡಿ ದೂರಕ್ಕೆ ಮಂಚದಲ್ಲಿ ಮಲಗಿದ್ದವರು ಮೊಬೈಲ್ ನೋಡಿಕೊಂಡಿರುವುದನ್ನು ಕಂಡು ‘ನನಗೇನು ಆಗಿಲ್ಲವೊ..ನಾಳೆ ನಾಲ್ಕು ಸೀರೆ, ಬ್ಲೌಸ್ಸು ಹಾಗು ಲೋಟ ಒಂದನ್ನು ತೆಗೆದುಕೊಂಡು ಬಾ. ಹಾಗೆ ಮೊಬೈಲ್‍ಗೆ ಅನ್‍ಲಿಮಿಟೆಡ್ ಚಾರ್ಜು ಮಾಡಿಸು.’ ಎಂದು ಮೊಬೈಲ್ ಕರೆ ಮಾಡಿದ್ದಾಗ ದಿಗಿಲಾಗಿತ್ತು, ಇವಳೇನಾದರೂ ತೀರಿಕೊಂಡೇ ಬಿಟ್ಟರೆ ಎಂದು! ಡಾಕ್ಟರರು ಇನ್ನೊಂದು ಮೂರು ದಿನದಲ್ಲಿ ಸರಿಹೋಗಬಹುದು, ಆಕ್ಷಿಜನ್ ಕೊಡುತ್ತಿದ್ದೇವೆ ಎಂದಿದ್ದರು.

ಡಾಕ್ಟರ್‌ಗೆ ನಾನು ಪೋನ್ ಕರೆ ಮಾಡಿ, ನನಗೂ ನನ್ನ ಹೆಂಡತಿಗೂ ಅದಾಗಲೆ ಪಾಸಿಟಿವ್ ಬಂದಿರುವುದನ್ನು ತಿಳಿಸಿದೆ. ಕಷ್ಟಪಟ್ಟು ಊಟ ಮಾಡುತ್ತಿದ್ದೆ; ಮೇಲುಸಿರು ಬರುವ ಹಾಗಾಗುತ್ತಿತ್ತು. ‘ಹೌದಾ..ಉಸಿರಾಟದ ತೊಂದರೆ ಇಲ್ಲದಿದ್ದರೆ ಮನೆಯಲ್ಲೆ ಇರಿ..ವರಿಮಾಡಬೇಡಿ..ನಿಮ್ಮಮ್ಮನ ಆರೋಗ್ಯದ ಅಪ್‍ಡೇಟ್‍ನ್ನು ತಿಳಿಸಲು ಯಾರನ್ನಾದ್ರೂ ನಿಯೋಜಿಸಿ.’ ಎಂದರು. ಆ ಕ್ಷಣಕ್ಕೆ ಧೀರಜ್ ನೆನಪಾಗಿ ‘ನನ್ನ ತಮ್ಮ ಧೀರಜ್‍ಗೆ ಅಪ್‍ಡೇಟ್ ಮಾಡಿ ಡಾಕ್ಟ್ರೆ.’ ಎಂದು ಅವನ ಪೋನ್ ನಂಬರ್ ಕೊಟ್ಟೆ.

ಧೀರಜ್ ನನ್ನ ಚಿಕ್ಕಪ್ಪನ ಮಗ. ಆರನೇ ಕ್ರಾಸ್‍ನಲ್ಲಿ ಅವನ ಕಿರಾಣಿ ಅಂಗಡಿ ಇದೆ. ಅದರ ಹಿಂದೆಯೆ ಅವನ ಮನೆ ಇರುವುದು. ನನ್ನ ಮನೆಗೆ ತಾಗಿದಂತೆ ಹಿಂಬಾಗದಲ್ಲೆ ಪಕ್ಕದ ರಸ್ತೆಗೆ ಮುಖ ಮಾಡಿಕೊಂಡು ಚಿಕ್ಕಪ್ಪನ ಮನೆ. ಈಗ ನನ್ನಪ್ಪನು ಇಲ್ಲ, ಚಿಕ್ಕಪ್ಪನೂ ಇಲ್ಲ. ನನ್ನ ತಾತನ ಮನೆ ಅವರ ಕಾಲದಲ್ಲೆ ಹೀಗೆ ಇಬ್ಬರಿಗೂ ಪಾಲಾಗಿತ್ತು. ತಾತ ಸತ್ತ ಎರಡು ವಾರಕ್ಕೆ ಹಿಂದಿನ ಮೂರಡಿ ಕಾಂಪೌಂಡ್ ಗೋಡೆನ ಏಳಡಿಗೆ ಎತ್ತರಿಸಲು ಚಿಕ್ಕಪ್ಪ ಕೆಲಸ ಶುರುಮಾಡಿದ್ದಾಗ ಅಪ್ಪ ‘ಅದ್ಯಾಗೆ ನನ್ನ ಪರ್ಮಿಷನ್ ಇಲ್ಲದೆ ಗೋಡೆ ಕಟ್ಟುತ್ತಾನೆ.. ಅದು ಇಬ್ಬರಿಗೂ ಸೇರಿದ ಗೋಡೆ.’ ಎಂದು ತಕರಾರು ಎತ್ತಿದ್ದರು. ಕೋರ್ಟ್‌ನಿಂದ ಸ್ಟೇ ತಂದಿದ್ದರು!. ಕಡೆಗೆ ಅಮ್ಮನೆ ತನ್ನ ಮಕ್ಕಳಿಗೆ ವಿಷ ಹಾಕ್ಕಿದ್ದವಳೆಂದು; ಮಾಟ ಮಾಡಿಸಿದ್ದವಳೆಂದು ಚಿಕ್ಕಮ್ಮನನ್ನು ದೂಷಿಸುತ್ತಾ ‘ಆ ಹಾಳು ಮುಸುಡಿಗಳನ್ನು ದಿನವೂ ನೋಡುವುದೆ ತಪ್ಪುತ್ತೆ, ಕಟ್ಟಿಕೊಳ್ಳಲಿ ಬಿಡಿ.’ ಎಂದು ಹೇಳಿ ಅಪ್ಪನಿಗೆ ಸ್ಟೇಯನ್ನು ವಾಪಸ್‌ ತೆಗೆದುಕೊಳ್ಳುವಂತೆ ಮಾಡಿದ್ದರು!

ನನ್ನ ತಾತನೊ ಅವರ ಮಗಳೊಬ್ಬಳಿಗೆ ತಾವು ತೋರಿಸಿದ ಹುಡುಗನನ್ನು ಮದುವೆಯಾಗಲಿಲ್ಲವೆಂದು ‘ನೀನು ನನ್ನ ಮಗಳೇ ಅಲ್ಲ; ನಾ ಸತ್ತರೆ ನನ್ನ ಹೆಣ ಕೂಡ ನೋಡಲಿಕ್ಕೆ ಬರಬಾರದು’ ಎಂದು ಹೇಳಿದ್ದು ಅವರು ಸತ್ತಾಗ ಆ ನನ್ನತ್ತೆ ಗಂಡನ ಮನೆಯಿಂದ ಬಂದಿರಲಿಲ್ಲ! ಧೀರಜ್‍ನೊಂದಿಗೆ ತನಗೆ ಪಿತ್ರಾರ್ಜಿತ ಪಾಲು ಸಮರ್ಪಕವಾಗಿ ಆಗಿಲ್ಲವೆಂದು ಕೋರ್ಟ್‌ನಲ್ಲಿ ಕೇಸ್ ಹಾಕಿದ್ದಾನೆ. ಇವನು ನನ್ನ ಜತೆ ಸ್ನೇಹದಿಂದ ಇರುವುದು ಚಿಕ್ಕಮ್ಮನಿಗಾಗಲಿ ಅವರ ಇನ್ನಿಬ್ಬರು ಮಕ್ಕಳಿಗಾಗಲಿ ಇಷ್ಟವಿಲ್ಲ. ನಾನೇ ಹೇಳಿಕೊಟ್ಟು ಧೀರಜ್ ಹೀಗೆಲ್ಲ ಕೇಸ್ ಹಾಕಿದ್ದಾನೆಂದು ಇವರಿಗೆ ಅನ್ನಿಸಿದೆ!

ನಾವು ಕೊರೊನಾದಿಂದ ಸುಸ್ತಾಗಿದ್ದನ್ನು ಕಂಡು ತನ್ನ ಮನೆಯಿಂದ ತಿಂಡಿ ಕಾಫಿ ಊಟ ತಂದು ಕೊಡುತ್ತಿದ್ದ ಧೀರಜ್, ‘ಆಯ್ತು ಅಣ್ಣ..ನಾನು ನೋಡಿಕೊಳ್ಳುತ್ತೇನೆ..ಚಿಕ್ಕಮ್ಮನನ್ನು ಗುಣ ಮಾಡಿಸಿಕೊಂಡು ಕರೆದುಕೊಂಡು ಬರುತ್ತೀನಿ..ನನ್ನ ಹೆಂಡ್ತಿ ಅಂಗಡಿನ ನೋಡಿಕೊಳ್ಳುತ್ತಾಳೆ..ನೀವು ಹುಷಾರಾಗ್ರಿ.’ ಎಂದ. ಅಮ್ಮ ಹೇಳಿದವುಗಳನ್ನೆಲ್ಲಾ ಧೀರಜ್‍ನ ಕೈಯಲ್ಲಿ ಕೊಟ್ಟು ಕಳುಹಿಸಿದೆ. ಹಾಗೆ ಅಮ್ಮನಿಗೆ ‘ನಾ ಅಲ್ಲೆಲ್ಲ ಬರುವ ಹಾಗಿಲ್ಲಮ್ಮ..ಧೀರಜ್ ತೆಗೆದುಕೊಂಡು ಬರುತ್ತಾನೆ.. ಅವನೂ ವಾರ್ಡ್‌ನ ಹೊರಗೇ ದೂರದಲ್ಲಿ ನಿಂತು ತಂದಿದ್ದನ್ನು ನಿನಗೆ ರವಾನಿಸಬೇಕು.’ ಎಂದೆ.

ಕೆಮ್ಮುತ್ತಾ. ಅಮ್ಮ ಮಾತಾಡಿಲಿಲ್ಲ. ಬಹುಶಃ ಅಳುತ್ತಿರಬಹುದೆನಿಸಿತು! ಮಾರನೆ ದಿನ ಡಾಕ್ಟರ್ ಕರೆ ಮಾಡಿ ಅಮ್ಮ ಊಟ ಮಾಡುತ್ತಿಲ್ಲವೆಂದು; ಔಷಧಿ ಇಂಜೆಕ್ಷನ್ ಕೊಡಲಿಕ್ಕೆ ಹೋದರೆ ನರ್ಸ್‌ಗಳಿಗೆ ಕಚ್ಚುತ್ತಾರೆಂದು ಹಾಗು ಅಳವಡಿಸಿದ ರಕ್ತದೊತ್ತಡದ, ಹೃದಯಕಂಪನ, ಆಕ್ಸಿಮೀಟರ್ ಇತ್ಯಾದಿಗಳನ್ನು ಕಿತ್ತು ಹಾಕುತ್ತಿದ್ದರಿಂದ ಕೈಗಳನ್ನು ಕಟ್ಟಿ ಹಾಕಿದ್ದೇವೆಂದು ಹೇಳಿದ್ದರೆಂದು ಧೀರಜ್ ಹೇಳಿದ. ಬೇಸರವಾಯ್ತು. ಅಮ್ಮನಿಗೆ ಕರೆ ಮಾಡಿದರೆ ಮೊಬೈಲ್ ನಿಷ್ಕ್ರಿಯವಾಗಿತ್ತು!

ನಾನು ಅನಾರೋಗ್ಯದಿಂದ ಇರುವುದನ್ನು ಕೇಳಿದರೆ ಸಹಿಸಲು ಆಗುವುದಿಲ್ಲವೆಂದೊ; ತನ್ನಿಂದ ಮಗನಿಗೆ ಖರ್ಚಾಗುತ್ತಿದೆಯೆಂದೊ ಅಥವಾ ತನಗೆ ಹೀಗಾಯಿತ್ತಲ್ಲವೆಂಬ ಆಘಾತಕ್ಕೊ ಆಮೇಲಿನಿಂದ ಅಮ್ಮ ಪೋನನ್ನೇ ಮಾಡಲಿಲ್ಲ! ಎರಡು ದಿನ ಹಾಗೆ ಕಳೆದು ಹೋಯಿತು. ಅಮ್ಮನ ಆರೋಗ್ಯ ಬಿಗಡಾಯಿಸಿದೆಯೆಂದು; ಪಾಂಡು, ಪಾರ್ವತಿ ಭಾಗ್ಯ ಎಂದು ಕನವರಿಸುತ್ತಿದ್ದಾರೆಂದು ಡಾಕ್ಟರ್‌ ಹೇಳಿದ್ದನ್ನು ತಿಳಿಸಿದ ಧೀರಜ್ ‘ನೀನು ಕಾಳಜಿ ಮಾಡ್ತಾ ಆರೋಗ್ಯನ ಕೆಡಿಸಿಕೊಳ್ಳಬೇಡವೊ.. ನಾನೆಲ್ಲಾ ನೋಡಿಕೊಳ್ಳುತ್ತೇನೆ.’ ಎಂದ. ಪಾರ್ವತಿ, ಭಾಗ್ಯ ನನ್ನ ಅಕ್ಕಂದಿರು. ಮದುವೆಯಾಗಿ ಚೆನ್ನೈ ಹಾಗೂ ಮಂಗಳೂರಿನಲ್ಲಿದ್ದಾರೆ. ಕಠಿಣ ಲಾಕ್‍ಡೌನ್‍ನಿಂದ ಬರವುದಕ್ಕೆ ಆಗುವುದಿಲ್ಲ. ಬಂದರೂ ಅಮ್ಮನನ್ನು ನೋಡಲಿಕ್ಕಾಗುವುದಿಲ್ಲ. ಮಲಗಿದ್ದಲ್ಲೆ ಗೊತ್ತಾಗದಂತೆ ಸತ್ತುಹೋಗಬೇಕೆಂದು ಆಶಿಸುತ್ತಿದ್ದ ಅಮ್ಮನಿಗೆ ಹೀಗಾಯಿತ್ತಲ್ಲವೆಂದು ಬೇಸರವಾಯಿತು.

ಅಮ್ಮನಿಗೆ ದಿನವೂ ಕೊಡುತ್ತಿದ್ದ ಇನ್ಸುಲಿನ್ ಇಂಜೆಕ್ಷನ್ ಹಾಗೂ ಔಷಧಿಗಳು ಅವಳ ಇಲ್ಲದಿರುವುದನ್ನು ಕಾಡಿದವು! ನಾಳೆ ನಿಮ್ಮಲ್ಲೊಬ್ಬರು ಪಿ.ಪಿ.ಇ ಧಿರಿಸು ತೊಟ್ಟು ಅಮ್ಮನನ್ನು ಮಾತಾಡಿಸಿಕೊಂಡು ಹೋಗಲೇಬೇಕೆಂದು ಡಾಕ್ಟರ್ ತಿಳಿಸಿದ್ದನ್ನು ಧೀರಜ್ ಹೇಳಿದ್ದಾಗ ಜೀರಿಗೆ ನೀರು ಕುಡಿದು ಕುಡಿದು, ಗಾಗಲ್ಸ್ ಮಾಡಿಮಾಡಿ ಹಾಗು ಅದು ಇದು ಹಾಕಿಕೊಂಡು ನೀರಿನ ಹಬೆಯನ್ನು ಇನ್‍ಹೇಲ್ ಮಾಡಿ ಮಾಡಿ ದಣಿದು; ಗೊತ್ತುಗುರಿಯಿಲ್ಲದೆ ನುಂಗಿದ ಮಾತ್ರೆಗಳಿಗೆ ನಾಲಿಗೆ ಒಣಗಿ ಒಣಗಿ, ಉಸಿರು ತೆಗದುಕೊಳ್ಳುವಾಗ ಅಚಾನಕ್ ಶಿಳ್ಳೆ ಹಾಕಿದಂತಾ ದನಿ ಹೊರಡುತ್ತಿದ್ದು, ಭಯಕ್ಕೆ ಹೈರಾಣಾಗಿ ಹೋಗಿದ್ದ ನನಗೆ ಕಣ್ಣು ಮಂಜಾಯಿತು! ಮಾರನೆ ದಿನ ಆ ಧಿರಿಸು ತೊಟ್ಟು ಹೋದ ಧೀರಜ್ ತಾನು ಧೀರಜ್‍ನೆಂದು ಹೇಳಿಕೊಳ್ಳುತ್ತಿದ್ದಂತೆ ‘ಆರೋಗ್ಯವಾಗಿದ್ದಿಯಾ.. ಹೆಂಡತಿ ಮಕ್ಕಳು ಅಮ್ಮ ಹೇಗಿದ್ದಾರೆ.. ಅಣ್ಣಂದಿರು.’ ಎಂದು ವಿಚಾರಿಸಿಕೊಂಡ ಅಮ್ಮ ‘ಪಾಂಡು ಮೀನಾ ಹುಷಾರಾಗಲಿ.’ ಎಂದು ನನ್ನನ್ನು ನನ್ನ ಹೆಂಡತಿಯನ್ನು ಹರಸಿದ್ದರೆಂಬುದನ್ನು ಕೇಳಿ ಉಮ್ಮಳಿಕೆ ಬಂದಿತು!

ಇದಾಗಿ ಎರಡೇ ದಿನಕ್ಕೆ ಅಮ್ಮ ತೀರಿಕೊಂಡರು. ಧೀರಜ್‍ನೇ ಆಸ್ಪತ್ರೆಯ ಶಿಷ್ಟಾಚಾರವನ್ನು ಪಾಲಿಸಿ ಡೆತ್ ಸಮ್ಮ್ಮರಿ ರಿಪೋರ್ಟಗೆ ಸಹಿಮಾಡಿ ಶವ ಪಡೆದುದನ್ನು ವೀಡಿಯೊ ಮಾಡಿಕೊಂಡ. ಅಮ್ಮ ತನ್ನ ಶವವನ್ನು ಸರತಿಯಲ್ಲಿ ತಾನೆ ಕಾಯುತ್ತಾ ಸರಿ ರಾತ್ರಿ ಅದೆಷ್ಟೋ ಹೊತ್ತಿಗೆ ಚಿತಾಗಾರದಲ್ಲಿ ಭಷ್ಮವಾದಳು. ‘ಕೊನೆಗೂ ನನ್ನ ಮಗನೆ ಬೇಕಾಯ್ತು.’ ಎಂದು ಚಿಕ್ಕಮ್ಮ ಅಮ್ಮನ ಬಗ್ಗೆ ಆಡಿಕೊಂಡಳೆಂಬುದ ಕೇಳಿ ಮನಸ್ಸು ಕ್ಷೋಭೆಗೊಂಡಿರುವಾಗ ಹಳೆ ಸ್ನೇಹಿತರೊಬ್ಬರು ಸಂತೈಸುವ ಮಾತಾಡುತ್ತಾ ‘ಶವವನ್ನೆ ಕೊಡಲಿಲ್ವಾ..ಏನು ಕರ್ಮಾನಪ್ಪ.’ ಎಂದು ಲೊಚಗುಟ್ಟಿದರು. ಆಗ ಅಮ್ಮನ ಸಾವಿನ ಬಗ್ಗೆ ಹೇಳಿಕೊಂಡಿದ್ದೇ ತಪ್ಪೆನಿಸಿತು!

ಅಷ್ಟರಲ್ಲಿ ರಂಗಣ್ಣ ಕರೆ ಮಾಡಿದ. ‘ಏನ್ ಸಾರ್, ಹೀಗಾಗೋಯ್ತು.’ ಎಂದ. ಇವನಿಗು ಎಲ್ಲಾ ಗೊತ್ತಾಗಿರಬಹುದೆ-ನನ್ನ ಮೊಬೈಲ್ ನಂಬರ್‌ನ ಅದ್ಯಾವುದೊ ಲಿಂಕ್‍ನಲ್ಲಿ ಹಾಕಿ ನನ್ನದೆಲ್ಲಾ ತಿಳಿದುಕೊಂಡು ಹೀಗೆ ಕೇಳುತ್ತಿದ್ದಾನೇನೊ ಅನ್ನಿಸಿತು! ಬಿಟ್ಟುಕೊಡಬಾರದೆಂದು ‘ಏನಾಯ್ತು ರಂಗಣ್ಣ.. ಆರೋಗ್ಯನಾ..ನಾವೆಲ್ಲ ಚೆನ್ನಾಗಿದ್ದೇವೆ.’ ಎಂದುಬಿಟ್ಟೆ! ‘ಹೌದಾ..ನಾವೂ ಚೆನ್ನಾಗಿದ್ದೇವೆ ಬಿಡಿ..ಯಾರದೊ ಪೋನ್ ಬರುತ್ತಾ ಇದೆ.. ಆಮೇಲೆ ನಾನೆ ಮಾತಾಡುತ್ತೇನೆ.’ ಎಂದು ಅಂದಿನಂತೆ ಅವಸರದಲ್ಲಿ ಕರೆ ಕತ್ತರಿಸಿದ! ಮೊಬೈಲ್‍ನಲ್ಲಿ ಯಾವುದೇ ಕರೆ ಬಂದರೂ ಅಳುಕು - ಯಾರದಾದರೂ ‘ಕೊರೊನಾ ಬಂದಿತ್ತಂತೆ..’ ಎಂದು ಕೇಳಿಬಿಡಬಹುದೆಂದು!

ಎಲ್ಲಿಂದ ಬಂತು ಈ ಕೊರೊನಾ? ಮನೆಗೆ- ದಿನಸಿ ಹಾಲು ತರುವಾಗಲೊ, ತರಕಾರಿ ಕೊಳ್ಳುವಾಗಲೊ, ನೋಟು ಏಣಿಸಿಕೊಳ್ಳುವಾಗಲೊ ಅಥವಾ ಲಸಿಕೆಗಾಗಿ ಮುಗಿಬಿದ್ದ ಜನರ ನಡುವೆ ಸಿಕ್ಕಿಕೊಂಡಾಗಲೊ ಎಂದು ಯಾಚಿಸಿದ್ದೇ ಯೋಚಿಸಿದ್ದು, ಗೋಜಲಾಯಿತು. ಎಲ್ಲೆಲ್ಲಿಂದಲೂ ಬಂದಿದ್ದಿರಬಹುದೆಂದು! ಇವರಲ್ಲಿ ನೆನಪಿಗೆ ಬಂದ ಕೆಲವರಲ್ಲಿ ಸೀನು ಕೆಮ್ಮು ಜ್ವರ ಇತ್ಯಾದಿ ಇದ್ದಿದ್ದರೂ ಕಣ್ಣಿಗೆ ಕಾಣುತ್ತಿದ್ದ ಇವರ ಸಂಪರ್ಕಕ್ಕೆ ಬಂದಿದ್ದವರಿಗೆ ಅಂತಹ ಲಕ್ಷಣಗಳೇ ಇಲ್ಲದಿದ್ದುದಕ್ಕೆ ಇವರಿಂದಲೇ ಬಂದಿದೆ ಎಂಬುದಕ್ಕೆ ಗ್ಯಾರಂಟಿ ಇಲ್ಲವೆಂದೆನಿಸಿ ಸುಮ್ಮನಾದೆ. ಅಷ್ಟಕ್ಕೂ ಈಗ ಅದರಿಂದ ಏನೂ ಮಾಡಲು ಇರುವುದಿಲ್ಲವೆಂದೆನಿಸಿ! ಆದರೆ, ತಮ್ಮಿಂದಲೇ ನಮಗೆ ಅದಾಗಿರುಬಹುದೆಂದು ಆಪ್ತರಾಗಿದ್ದಿದ್ದ ಇವರುಗಳು, ಕೊರೊನಾ ಟೆಸ್ಟ್ ಮಾಡಿಸಿಕೊಂಡಿಲ್ಲದಿದ್ದರೂ, ದೂರ ಇರತೊಡಗಿದರು! ಹಾಗೆಯೆ, ನಮ್ಮಿಂದ ಇತರರಿಗೆ ಇದಾಗಬಾರದೆಂದು ತೋರುವ ನಮ್ಮ ಎಚ್ಚರಿಕೆಯು ತುಸು ಹೆಚ್ಚೇ ಆಯಿತು, ಇತರರಿಗೆ ಕಿರಿಕಿರಿಯಾಗುವಷ್ಟು!

ಅವತ್ತು, ಹೀಗೆ ಬಿಡಿಎ ಕಾಂಪ್ಲೆಕ್ಸ್ ಹತ್ತಿರ ಹೊಗುತ್ತಿರುವಾಗ ಅವನು ಇದ್ದಕ್ಕಿದ್ದಂತೆ ಎದುರಾಗಿ ‘ನಮಸ್ತೆ, ಸರ್.’ ಎಂದ. ಚಕ್ಕನೆ ನಾಲ್ಕಡಿ ಹಿಂದೆ ಸರಿದು ಎವೆ ಅಲ್ಲಾಡಿಸದೆ ನೋಡಿದೆ! ಮುಖಕವಚ ಹಾಕಿದ್ದಕ್ಕೆ ವಿಚಿತ್ರವಾಗಿ ಕಾಣುತ್ತಿದ್ದ. ‘ನಾನು ರಂಗಣ್ಣನ ಪ್ರೆಂಡು..ರಂಗಣ್ಣ ನಿಮ್ಮ ಆಪೀಸಿನಲ್ಲಿದ್ದಾಗ ಆಗಾಗ ಬರುತ್ತಿದೆ.’ ಎಂದಾಗ ನೆನಪಾಗಿ ಹೌದೆನಿಸಿತು. ಹಾಗೆಯೆ, ಒಂದು ಚಣ ರಂಗಣ್ಣನೆ ಕಳುಹಿಸಿದ್ದಾನೊ ಎಂದೆನಿಸಿ ಬಿಟ್ಟಿತು! ‘ಹ್ಞಾ..ಇಲ್ಲೇನು’ ಎಂದೆ. ‘ಸೆಕ್ಯೂರಿಟಿ ಗಾರ್ಡ ಆಗಿದ್ದೀನಿ. ಬಹಳ ದಿನದಿಂದ ಮಾತಾಡಿಸಬೇಕೆಂದಿದ್ದೆ.’ ಎಂದ. ‘ನೀವು ಸೆಕ್ಯೂರಿಟಿ ಗಾರ್ಡಾ’ ಎಂದೆ. ಅವನು ವಯಸ್ಸಾದವನಂತೆ ಕಾಣುತ್ತಿದ್ದುದಕ್ಕೆ. ‘ಹೌದು..ಜನರಿಗೆ ಯಾರೋ ನೊಡುತ್ತಿದ್ದಾರೆನಿಸಿದರೆ ಸಾಕು ಹೆದರುತ್ತಾರೆ.. ಹ್ಞಾ.. ನಾನು ಒಂದು ರೀತಿ ಬೆದರುಬೊಂಬೆ ತರ ಇದ್ದ ಹಾಗೆ..’ ಎಂದು ನಕ್ಕ. ತಕ್ಷಣ ಗಂಭೀರ ವದನನಾಗಿ ‘ಎಲ್ಲಾ ವಿಧಿಯ ಆಟ ಅಲ್ವಾ, ಸರ್. ಎಂಟು ತಿಂಗಳ ಹಿಂದೆ ರಂಗಣ್ಣ ತಂದೆನ ಕಳಕೊಂಡ.. ಇಪ್ಪತ್ತು ದಿನದ ಹಿಂದೆ ಅಣ್ಣನನ್ನು ಕಳಕೊಂಡ ಕೊರೊನಾಗೆ.’ ಎಂದ. ಒಂದು ಚಣ ಶಾಕ್ ಹೊಡೆದ ಹಾಗಾಯ್ತು! ಅದಕ್ಕಾಗಿಯೆ ಪೋನ್ ಮಾಡಿದ್ದನೊ ಎಂದೆನಿಸಿ ಸಾವರಿಸಿಕೊಂಡು ಗೊತ್ತಿದೆಯೆಂಬಂತೆ ದುಃಖ ವ್ಯಕ್ತಪಡಿಸಿದೆ!

ಸೀದಾ ಮನೆ ಕಡೆ ನಡೆದೆ. ಒಂದು ಸಾರಿ ಅಮ್ಮನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿದ್ದಾಗ ‘ಏನೂ ಆಗಲ್ಲ ಸುಮ್ಮನಿರಿ.’ ಎಂದು ಹೇಳುತ್ತಲೆ ಅವತ್ತು ಕಾರು ತಂದಿದ್ದ ರಂಗಣ್ಣ ಅದರಲ್ಲೆ ಕರೆದುಕೊಂಡು ಹೋಗಿದ್ದು; ಹಾಗೆಯೆ, ಅದೊಂದು ದಿನ ಆಪ್ತ ಸಹೋದ್ಯೋಗಿಯೊಬ್ಬರು ತೀರಿಕೊಂಡಿದ್ದು ಅವರ ಶವ ನೋಡುವಾಗ ಸಂಕಟವಾಗಿ ಏನನ್ನಾದರೂ ತಿನ್ನಬೇಕೆನಿಸಿ, ಜತೆಗೆ ಬಂದಿದ್ದ ಇನ್ನಿಬ್ಬರು ‘ಶವ ಎತ್ತುವವರೆಗೂ ಏನನ್ನು ತೆಗೆದುಕೊಳ್ಳುವ ಹಾಗಿಲ್ಲ.’ ಎಂಬಂತೆ ಕಾಫಿಗೆಂದು ಕರೆದರೂ ಬಾರದಿದ್ದಾಗ, ಚಡಪಡಿಸುತ್ತಿದ್ದುದ್ದನ್ನ ಗಮನಿಸಿ ಮೆಲ್ಲಗೆ ‘ಬನ್ನಿ ಸರ್, ಏನನ್ನಾದ್ರು ತಿಂದುಕೊಂಡು ಬರೋಣ.’ ಎಂದು ರಂಗಣ್ಣ ಕರೆದುಕೊಂಡು ಹೋಗುತ್ತಾ ‘ಸರ್, ಸಂಕಟವಾಗುತ್ತಿದೆಯೆಂದ್ರೆ ದುಃಖದಲ್ಲಿದ್ದೀರ ಎಂದೇ ಅರ್ಥ.. ತಿನ್ನಲ್ಲವೆಂದರೆ ಇವರುಗಳಿಗೆ ಸಂಕಟವೇ ಆಗುತ್ತಿಲ್ಲವೆಂದೆನಿಸುತ್ತೆ.. ನನಗಂತೂ ಆಪ್ತರಿಷ್ಟರು ಸತ್ತರೆಂದರೆ ಹಸಿವು ಇನ್ನೂ ಜಾಸ್ತಿಯಾಗಿರುತ್ತೆ.’ ಎಂದಿದ್ದು ನೆನಪಾಯಿತು! ಹೌದು..ಪೋನ್ ಮಾಡಿದಾಗ ರಂಗಣ್ಣ ಹೇಳೇ ಹೇಳುತ್ತಾನೆ- ‘ಜಗತ್ತಿನಲ್ಲಿ ನಡೆಯುತ್ತಿರುವುದೆಲ್ಲಾ ಆಟ..ನಾವೆಲ್ಲಾ ಆಟಗಾರರಷ್ಟೆ.. ಆದರೆ ಆಟ ನಮ್ಮದಲ್ಲ ಅಂತ’. ನಾನು ‘ಹ್ಞೂ ಅನ್ನುತ್ತೇನೆ. ಅನ್ನಲೇಬೇಕು ಅಲ್ವಾ.

ಬದುಕಿರುವಾಗ ಗೌರವದಿಂದ ನಡೆಸಿಕೊಳ್ಳದೆ ಸತ್ತಾಗ ಧಾವಿಸಿ ಬಂದು ಹೆಗಲು ಕೊಟ್ಟರೆ ಪಿತೃಗಳು ಸಂತುಷ್ಟರಾಗುತ್ತಾರಾ? ಇದರ ನಡುವೆ ಎಲ್ಲಿಂದಲೊ ಹಾರಿಬಂದು ಹೂಹಾರ ಹಾಕಿ ಮೊಸಳೆ ಕಣ್ಣೀರು ಸುರಿಸುವ ಎಂದೂ ಕಾಣದಿದ್ದ ಪಾಲಿಟೀಷಿಯನ್ಸ್ ಬೇರೆ- ಎಂದು ಹೇಳಿಯೆ ಹೇಳುತ್ತಾನೆ, ರಂಗಣ್ಣ. ಇಂತವರಿಗೆಲ್ಲಾ ಕೊರೊನಾ ಪಾಠ ಕಲಿಸಿತು ಬಿಡಿ, ಸರ್ –ಎಂದೂ ಹೇಳಿಬಿಡಬಹುದು. ನಾನು ‘ಹ್ಞೂ’ ಅನ್ನುತ್ತೇನೆ. ಅನ್ನಲೇ ಬೇಕು! ಪಿತೃಗಳು ತಮ್ಮ ಗುಣ ಸ್ವಭಾವಗಳ ನಮ್ಮಲ್ಲಿ ಉಳಿಸಿಯೆ ಹೋಗಿರುತ್ತಾರಲ್ವ.. ಹೀಗಿದ್ದು ಅವರ ಬೂದಿನ ನದಿಯಲ್ಲಿ ವಿಸರ್ಜನೆ ಮಾಡಿಬಿಟ್ಟಿದ್ದರೆ ಮೋಕ್ಷ ಸಿಕ್ಕಿಬಿಡುತ್ತಾ, ಸರ್ – ಎಂದೂ ಹೇಳಿಬಿಡಬಹುದು. ಆಗ ‘ಹ್ಲೂ’ ಅನ್ನುತ್ತೇನೆ, ಅದೂ ಸರಿಯಾಗಬಹುದೆಂದು! ಸಾವು ಹುಟ್ಟು ಹಾಕುವ ಪಾಪಪ್ರಜ್ಞೆಯು ಸಹಜವಾದುದೆ; ಅದು ಕೇವಲ ಆತ್ಮಸ್ಥೈರ್ಯವನ್ನ ಅಲ್ಲಾಡಿಸುವ ಫೀಲಿಂಗ್ ಅಷ್ಟೇ, ಸರ್- ಎಂದು ಹೇಳಿಯೆ ಹೇಳುತ್ತಾನೆ. ನಾ ‘ಹ್ಞೂ’ ಅನ್ನುತ್ತೇನೆ.

ತಾಸು ಗಟ್ಟಲೆ ಮಾತಾಡುತ್ತೇನೆ.. ಮಗ ಎಂಜಿನಿಯರ್ ಆಗಿಬಿಟ್ಟಿದ್ದಾನೆ; ವರ್ಕ್ ಪ್ರಂ ಹೋಂ ಮಾಡಿಕೊಂಡು ಜಮೀನು ಕೆಲಸವನ್ನೂ ನೋಡಿಕೊಳ್ಳುತ್ತಾನೆಂದು ಹೇಳುವುದನ್ನು ಕೇಳುತ್ತೇನೆ.. ಲಾಕ್‍ಡೌನ್‍ನಿಂದ ಸರ್ಕಾರವೇ ಸಾವಿರಾರು ಮೃತರ ಚಿತಾಭಸ್ಮನ ಕಾವೇರಿಯಲ್ಲಿ ವಿಸರ್ಜನೆ ಮಾಡಿದ್ದುದರಲ್ಲಿ ಅಮ್ಮನದೂ ಸೇರಿರಬಹುದೆಂದೂ ಹೇಳಿಕೊಳ್ಳುತ್ತೇನೆ. ಮಗ ಅಮೆರಿಕಾಗೆ ಹಾರಿ ಹೋದವ ನಮಗ್ಯಾರಿಗೂ ಹೇಳದೆ ಮದ್ವೆಯಾಗಿರುವುದನ್ನೂ ಹೇಳಿಕೊಳ್ಳುತ್ತೇನೆ. ಹೀಗೆ ನನ್ನದೆಲ್ಲವನ್ನೂ ಹೇಳಿಕೊಳ್ಳುತ್ತಾ ಹಗೂರವಾಗುತ್ತೇನೆ..ಎಂದುಕೊಳ್ಳುತ್ತಾ ಮನೆಗೆ ಬಂದವನೆ ಬಾಲ್ಕನಿಯಲ್ಲಿ ಸವಾಕಾಶ ಕೂತು ರಂಗಣ್ಣನಿಗೆ ಮೊಬೈಲ್ ಕರೆ ಮಾಡಿದೆ. ಅಲ್ಲಿ ನೆಟ್‍ವರ್ಕ ತೊಂದರೆ ಆಗುವುದಿಲ್ಲವೆಂದು! ರಿಂಗಣ್ಣಗುಟ್ಟಿತು ಮೊಬೈಲ್. ಇನ್ನೇನು ಮಾತಾಡುತ್ತಾನೆ, ರಂಗಣ್ಣ...!
***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT