ಬುಧವಾರ, ಜೂನ್ 16, 2021
22 °C

ಕಥೆ: ಗರ್ದಿಯಲ್ಲಿ ಗೋದಾವರಿ

ಹೇಮಾ ಸದಾನಂದ್ ಅಮೀನ್ Updated:

ಅಕ್ಷರ ಗಾತ್ರ : | |

Prajavani

ಜನಸಂದಣಿಯಲ್ಲಿ ಗರ್ದಿ ಗಮ್ಮತ್ತು ನೋಡುವಂತ ಚಕಮಕಿ ಕಣ್ಣುಗಳಿಂದ ಮಾಧೋ ಒಮ್ಮೆ ಸುತ್ತ ತಿರುಗಿ ನೋಡಿದ. ಕೆನ್ನೆಯ ಎಡಭಾಗದಲ್ಲಿ ನಿಂಬೆಹಣ್ಣಿನ ಗಾತ್ರದ ತಂಬಾಕು ಚೂರ್ಣ ಮಗುಮ್ಮಾಗಿ ಕೂತು ಶೋಧಿಸುತ್ತಿರುವ ರಸ ಅವನ ಆತ್ಮವನ್ನು ತಂಪೇರಿಸುವಂತೆ ಸುದ್ದಿಯಿಲ್ಲದೆ ಕಳೆದು ಹೋಗಿದ್ದವನ ದಿವ್ಯ ಶಾಂತಿ ಕದಡಿ ತಂಬಾಕು ರಸ ನೆತ್ತಿಗೇರಿ ಕೆಮ್ಮುತ್ತಾ ವಾಸ್ತವಕ್ಕೆ ಬಂದಿಳಿದನು. ಇದೇನು ಈ ಹೀರಾಳ ತಲೆಗಿಲೆ ಏನಾದ್ರೂ ಕೆಟ್ಟಿದಿಯೋ ಏನೋ? ಎಂದು ಕೈ ಬಾಯಿ ಕಣ್ಣುಗಳ ಹಾವ ಭಾವಗಳಾಯುಧಗಳಿಗೆ ಸಾಣೆ ಹಿಡಿದವನಂತೆ, ‘ಏ ಹೀರಾ... ಇಷ್ಟು ದಿನ ರಸ್ತೆಯಾಚೆ ಗಾಡಿ ನಿಲ್ಲಿಸುತ್ತಿದ್ದ ನೀನು, ಇಂದು ಏಕಾಏಕಿ ಬಂದು ಗೋದಾವರಿಯ ಪಕ್ಕದಲ್ಲಿ ಬಂದು ಬಿಡಾರ ಹೂಡಿದ್ದಿಯಲ್ಲ? ಸ್ವಲ್ಪಾದ್ರೂ ಬುದ್ಧಿಗಿದ್ದಿ ಇದೆಯಾ ನಿನಗೆ ಎಂದು ಒಂದೇ ಸಮನೆ ಗೋಳು ಹೊಯ್ಯುತ್ತಿರುವುದನ್ನು ನೋಡುತ್ತಾ ನಿಂತಿದ್ದ ಹೀರಾಳಿಗೆ ಇದೇನಪ್ಪ ಇವನ ಅವತಾರ? ಈ ಕಣ್ಣಿಗೆ ಕಾಣದ ಭೂತ ಇವನೊಳಗೇನಾದ್ರು ಹೊಕ್ಕಿದೆಯೋ ಏನು? ಇಲ್ಲಾಂದ್ರೆ, ಇಡೀ ಮಾರ್ಕೆಟಿನಲ್ಲಿ ಎಲ್ಲರಿಗೂ ಎಲ್ಲಾ ರೀತಿಯಲ್ಲಿ ನೆರವಾಗುವವನು ಇಂದು ನನಗೆ ಎದುರಾಡ್ತಿದ್ದಾನಲ್ಲ ಎಂದು ಆಶ್ಚರ್ಯ ಪಟ್ಟಿದ್ದಳು. ತಾನೂ ತನ್ನ ರಾಮಲೀಲೆ ಶೈಲಿಯಲ್ಲಿ ಹೆಗಲಿಗೆ ಇಳಿಬಿಟ್ಟ ಶಾಲನ್ನು ಸೊಂಟಕ್ಕೆ ಕಟ್ಟುತ್ತಾ, ‘ಕ್ಯಾರೇ ಭಾವು ತೇರ ಪಿರಾಬ್ಲಮ್ ಕ್ಯಾ ಹೈ’ ಎನ್ನುತ್ತಾ ಎದುರು ಬಂದಳು.

ಪಿರಾಬ್ಲಮ್ ನನ್ನದ್ದಲ್ಲ. ನಿನ್ನದೇ. ನಾನಿಲ್ಲಿ ಮೆಂತೆ ಸೊಪ್ಪು ಮಾರ್ತಿರ್ಬೇಕಾದ್ರೆ ನೀನೂ ಹಠ ಹಿಡಿದು ಅದನ್ನೇ ಮಾರ್ತಿದ್ದೀಯಲ್ಲ. ಕೊರೊನದ ಈ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ಬೇಕು ಅನ್ನೋದು ನಿನಗೆ ಗೊತ್ತಿಲ್ವ? ಹೀಗೆ ಪಕ್ಕದಲ್ಲೇ ಬಂದು ಒಂದೇ ರೀತಿಯ ತರಕಾರಿಗಳನ್ನು ಮಾರಿದರೆ ಮಂದಿ ಗಲಿಬಿಲಿಯಾಗೋದು ಸಹಜ.

ಹೀರಾಳ ನಾಲಗೆ ತುದಿಯಲ್ಲಿ, ಇದೇನು ನಿನ್ನ ಅಪ್ಪನ ಆಸ್ತಿಯೇ? ಎಂದು ಬಂದರೂ, ನಾಲಗೆ ತುದಿಯನ್ನು ಹಲ್ಲಿನಿಂದ ಬಿಗಿದಿಡಿದು ಕಣ್ಣರಳಿಸಿ ಇರಲಿ ಭಾವು ಖಾಲಿ ಪೀಲಿ ಜಗಳ ತೆಗೆಬೇಡ. ಜನರಿಗೆ ಯಾವುದು ಇಷ್ಟ ಆಗುತ್ತೋ ಅದನ್ನೇ ಕೊಂಡುಕೊಳ್ತಾರೆ. ಬೋಣಿಯ (ಮೊದಲ ಬಿಕ್ರಿಯ) ಸಮಯದಲ್ಲಿ ಜಗಳಾಡುವ ಉಮೇದಿಗೆ ಬೀಳದೇ ಮಾತನ್ನು ಮೊಟಕುಗೊಳಿಸಿದ್ದಳು.

ಘಾಟ್ಕೋಪರ್ ಅಸಲ್ಫಾ ಮಾರ್ಕೆಟಿನ ಮೊದಲ ಸಾಲಿನಲ್ಲಿ ಬೆಳಿಗ್ಗೆ ಒಂಬತ್ತು ಗಂಟೆಯಿಂದ ಮಧ್ಯಾಹ್ನದ ಒಂದು ಗಂಟೆಯವರೆಗೆ ಮತ್ತೆ ಪುನಃ ಸಂಜೆ ಐದರಿಂದ ರಾತ್ರಿ ಎಂಟು ಗಂಟೆಯವರೆಗೆ ಇಡೀ ಬ್ರಹ್ಮಾಂಡವನ್ನೇ ಹೊರೆದಂತೆ ಗೋದಾವರಿ ತರಕಾರಿಯ ಪುಟ್ಟ ಕೈತೋಟವನ್ನೇ ಹೊರೆದು ನಿಂತಿರುತ್ತಾಳೆ. ಮೈ ತುಂಬಿಕೊಂಡಿರುವ ಟೊಮ್ಯಾಟೋ, ಗಜ್ಜರಿ, ತಾಜಾ ಸೊಪ್ಪು, ಬದನೆಕಾಯಿ ಬೆಂಡೆಕಾಯಿ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಕರಿಬೇವಿನ ಸೊಪ್ಪು, ಹಸಿ ಮೆಣಸು, ಶುಂಠಿ ಆಹಹ್ಹಾ   ತರಕಾರಿಗಳಿಂದ ತುಂಬಿಕೊಂಡಿರುವ ಗೋದಾವರಿ ನಿತ್ಯ ತುಂಬು ಗರ್ಭಿಣಿ!

ಮಾಧೋ ತನ್ನ ಹೆಂಡ್ತಿ ಗೋದಾವರಿಯನ್ನು ಅವಳ ಹೆಸರಿನಿಂದ ಎಂದೂ ಕರೆಯುತ್ತಿರಲಿಲ್ಲ. ಮದುವೆ ಆಗಿ ನಾಲ್ಕು ಮಕ್ಕಳ ತಾಯಿಯಾದರೂ ಇಂದಿಗೂ ‘ದುಲ್ಹನ್’ ಎಂದೇ ಕರೆಸಿಕೊಳ್ಳುತ್ತಿದ್ದಳು. ಹೆಂಡ್ತಿಯಲ್ಲಿ ಅದ್ಯಾವ ಚೆಲುವಿನ ಗಣಿಯನ್ನು ಕಂಡಿದ್ದನೋ ಗೊತ್ತಿಲ್ಲ. ನೋಡಲು ಸಾಧಾರಣವಾಗಿದ್ದರೂ ದಿನಾ ಹೆಂಡ್ತಿಯ ಮುಖ ನೋಡಿಯೇ ಮನೆಯಿಂದ ಹೊರಬೀಳುತ್ತಿದ್ದ. ಅವಳ ಮುಖ ಅವನಿಗೆ ಅದೃಷ್ಟದ ಕೀಲಿಕೈ ಇದ್ದಂತೆ. ಅವನ ತರಕಾರಿಯ ಗಾಡಿಯನ್ನು ಅಕ್ಕರೆಯಿಂದ ‘ನನ್ನ ಗೋದಾವರಿ’ ಎನ್ನುತ್ತಿದ್ದ. ಬೆಳಿಗ್ಗೆ ಆರೂವರೆಯ ದಾದರ್ ಲೋಕಲಿನಲ್ಲಿ ದಿನದ ಮಟ್ಟಿಗೆ ಬೇಕಾದಷ್ಟು ತರಕಾರಿಗಳನ್ನು ತಂದು ಮನೆಯ ಮುಂದೆಯೇ ಅವೆಲ್ಲವನ್ನು  ಸ್ವಚ್ಛಗೊಳಿಸಿ ಜೋಡಿಸಿ ನೀರು ಚಿಮುಕಿಸಿದನೆಂದರೆ ‘ಗೋದಾವರಿ’ ನಿತ್ಯ ಗರ್ಭಿಣಿ. ಅವಳ ಆ ಚೆಲುವನ್ನು ಕಣ್ತುಂಬ ನೋಡುವುದೇ ಮಧೋನಿಗೆ ಒಂದು ಬಗೆಯ ಸಂತೃಪ್ತಿ .  

ಗೋದಾವರಿಗೆ ದೃಷ್ಟಿ ತಾಕಿತೆಂದು ಮಾರುತಿ ಮಂದಿರದ ಹೊರಗಡೆ ಕಾಯಿಮೆಣಸು ಲಿಂಬೆ ಮಾರುವ ಚೋಟುನಿಗೆ ಪ್ರತಿ ಶನಿವಾರ ಕಾಯಂ ಆಗಿ ಗೋದಾವರಿಯ ಸೊಂಟಕ್ಕೆ ಲಿಂಬೆ ಹಣ್ಣು ಕಟ್ಟಬೇಕೆಂದು ಅಡ್ವಾನ್ಸ್ ಹಣ ಕೊಟ್ಟಿಟ್ಟಿದ್ದ. ಮೊದಲಿನ ಎಲ್ಲಾ  ತರಕಾರಿಗಳು ಮುಗಿದಂತೆ ಮನೆಗೆ ಬಂದು ಊಟ ಮಾಡಿ ಸ್ವಲ್ಪ ಅಡ್ಡ ಬೀಳುವಾಗ ಬದಿಯಲ್ಲಿ ದುಲ್ಹನ್ ಬೇಕೇ ಬೇಕು. ಮಕ್ಕಳು ಮಲಗಿದ್ದರೆ ಸರಿ, ಇಲ್ಲಾಂದ್ರೆ ಹೊಸ ಹೊಸ ನೆಪಹೂಡಿ ಅವರನ್ನು ಬೇರೆ ಕೋಣೆಯಲ್ಲೋ, ಪಕ್ಕದ ಮನೆಗೋ  ರವಾನಿಸುತ್ತಿದ್ದನು. 

ದುಲ್ಹನಳ ಮೈ ಸವರುತ್ತಾ ಅಪ್ಪಟ ಚೆಲುವಂದ್ರೆ ಇದು ತಾಜಾ ಸೌತೆಕಾಯಿ ತರಹ ನಿನ್ನ ಮೈಕಟ್ಟು, ಕೆಂಪು ಕೆಂಪು ಟ್ಯಾಮ್ಯಾಟೋ ತರಹ ನಿನ್ನೀ ಕೆನ್ನೆಗಳು, ಬೀಟರೂಟಿನ ಗಾಢ ನಿನ್ನ ತುಟಿಗಳ ಮುಂದೆ ಸೋತವು ನೋಡು. ಎಂದು ಇಂಚಿಂಚೇ ಕೆಳಗಿಳಿಯುತ್ತಿರುವಾಗ ತಡೆದು, ‘ತರಕಾರಿ ಕವಿಗಳೇ ನಿಲ್ಲಿಸಿ ನಿಮ್ಮ ಕಾವ್ಯವಾಚನ ಮಕ್ಕಳು ಬಂದು ಬಿಟ್ರೇ ರಸಭಂಗವಾದಿತು ಜೋಕೆ’ ಎಂದು ಕಿಚಾಯಿಸುತ್ತಿದ್ದಳು.

ಹದಿನೈದು ವರುಷಗಳಿಂದ ಮುಂಬಯಿಯಲ್ಲಿ ನೆಲೆನಿಂತ ಮಧೋನಿಗೆ ಈ ನಗರ ಇಲ್ಲಿಯ ಗಾಳಿ, ಬೆಳಕು ನೀರಿನ ಜೊತೆಗೆ ಇಲ್ಲಿಯ ಜನರು, ಇಲ್ಲಿಯ ಗದ್ದಲ ಎಲ್ಲವೂ ತನ್ನತನದ  ಬಾಹುಗಳಲ್ಲಿ ಬೆಚ್ಚಗೆ ಅಪ್ಪಿಕೊಂಡಂತಿತ್ತು. ಅದೋ ಬಂತು ಇದೋ ಬಂತು ಎನ್ನುವ ಕಣ್ಣಿಗೆ ಕಾಣದ ಕೋವಿಡ್ ಭೂತ ಇದ್ದಕ್ಕಿದ್ದಂತೆ ಎದುರು ಪ್ರತ್ಯಕ್ಷವಾದಾಗ ತತ್ತರಿಸಿ ಹೋದ ಮಾಧೋ. ಹತ್ತಿಪ್ಪತ್ತು ದಿನ ಚಿಂತೆಯ ಮಡುವಿನಲ್ಲಿ ದಿನ ಕಳೆದಾಗ ಸಹ ಅಂಗಳದ ಬಾಜುಗೆ ಮಗುಮ್ಮಾಗಿ ನಿಂತ ಗೋದಾವರಿಯನ್ನು ಸ್ಯಾನಿಟೈಜರ್ ಹಚ್ಚಿ ಸ್ವಚ್ಛ ಮಾಡಿ ಒಂದಿಷ್ಟು ಸಮಯ ಅದರೊಂದಿಗೆ ಕಳವಳದಿಂದಲೇ ಮೂಕ ಸಂಭಾಷಣೆ ನಡೆಸಿ ಅದಕ್ಕೆ ಸೋಂಕು ತಗಲದಿರಲೆಂದು ಮೈ ಪೂರ್ತಿ ಮುಚ್ಚಿಡುತ್ತಿದ್ದ.  

ಮನೆಯಲ್ಲಿ ಕೂತು ಕೈಯಲ್ಲಿದ್ದ ಚೂರು ಪಾರು ದುಡ್ಡಿನಿಂದ ಸ್ವಲ್ಪ ದಿನವೇನು ಆರಾಮಾಗಿ ಕಳೆಯಿತು . ಮುಂದೆ ಏನೆಂಬುದೇ ದೊಡ್ಡ ಪ್ರಶ್ನೆಯಾಗಿ ಕಾಡಿತು. ತನ್ನ ಜೊತೆಗಿರುವ ಬುಧಿಯಾ, ಪರಶುರಾಮ್, ದಿವಾಕರ್, ಒಬ್ಬೊಬರಾಗಿ ಕಾಲ್ನಡಿಗೆಯಲ್ಲೋ, ಟ್ರಕ್‌ನಲ್ಲಿಯೇ ತನ್ನ ಹುಟ್ಟೂರಿಗೆ ಹೋಗುವ ಮೊದಲು ಮಾಧೋನಲ್ಲಿ ಬಂದು, ‘ಭಯ್ಯಾ ನಡಿ ಇನ್ನು ನಮ್ಮೂರೇ ನಮಗೆ ಗತಿ. ಈ ಶಹರದ ದಾನ ಪಾನಿ(ಅನ್ನ-ನೀರು) ಇಲ್ಲಿಗೆ ಮುಗಿಯಿತು’ ಎಂದಾಗ, ‘ಮುಂಬೈ ಅಪನ್ ಲೋಗೋಂಕ ಮೈಯಾ ಹೈ. ನಮಗೆ ಆಸರೆ ಕೊಟ್ಟ ಈ ತಾಯಿಗೆ ಕುತ್ತು ಬಂದಾಗ ನಾವೇ ಮುಖ ತಿರುಗುಸುವುದು ಎಲ್ಲಿಯ ನ್ಯಾಯ?’ ಇನ್ನು ತನಗಾಗಿ ಜೀವ ತೇಯುವ ಗೋದಾವರಿಯ ಅಗಲಿಕೆ ಸಾಧ್ಯವಿಲ್ಲ. ಎಲ್ಲರೂ ಅನುಭವಿಸುವಂತೆ ನಾನೂ ಇರ್ತೇನೆ ಎಂದು ಖಡಾಖಡಿಯಾಗಿ ಹೇಳಿಬಿಟ್ಟ.

ಜನರ ಅಸಹಾಯಕತೆಯಲ್ಲಿ ಕೊಚ್ಚಿಕೊಂಡ ಆತ್ಮಗಳ ಬಿಕ್ಕಳಿಕೆಗಳು ಈಗಾಗಲೇ ಮೂಲೆ ಸೇರಿಕೊಂಡಿದ್ದವು. ನಿಧಾನವಾಗಿ ಅವಶ್ಯಕ ವಸ್ತುಗಳ ಅನುಕೂಲಕ್ಕೆ ಸಡಿಲುಗೊಂಡ ಲಾಕ್‌ಡೌನ್‌ನಿಂದಾಗಿ ಅಸಲ್ಫೆಯ ಜನರ ಬೇಡಿಕೆಗಳನ್ನು ಪೂರೈಸುವ ಆತ್ಮಸ್ಥೈರ್ಯದಿಂದ ಗೋದಾವರಿ ಮತ್ತೆ ಗಂಧವತಿಯಾಗಿ ತುಂಬಿಕೊಂಡಿದ್ದಳು. ಎಂದಿಲ್ಲದ ಆಸ್ಥೆಯಿಂದ ತನ್ನ ಖಾಯಂ ಜಾಗದಲ್ಲಿ ನಿಂತ ಗೋದಾವರಿಯನ್ನು ಕಣ್ತುಂಬ ನೋಡತೊಡಗಿದ. ತನ್ನದೇ ದೃಷ್ಟಿ ತಾಕೀತೆಂದು ಗಡಿಬಿಡಿಯಿಂದ ಮಂದಿರದತ್ತ ಕಣ್ಣಾಡಿಸಿದ. ಮಂದಿರ ಕಳೆದ ಒಂದು ವಾರದಿಂದ ತೆರೆದೇ ಇಲ್ಲ. ದೇವರಿಗೂ ಲಾಕ್‌ಡೌನ್ ನಿಯಮ ಬಿಟ್ಟಿದ್ದಲ್ಲ. ಚೋಟು ಸಹ ಕಾಣಿಸಲಿಲ್ಲ. ಮನದಲ್ಲೇ ತನಗೆ ತಾನೇ ಶಪಿಸುತ್ತಾ, ಹೇ ಮಮ್ಮಾ ದೇವಿ ಈ ಮೂರ್ಖನನ್ನು ಕ್ಷಮಿಸಿ ಬಿಡಬೇಕೆಂದು ಕೆನ್ನೆಗೆ ಬಡಿದು ನೆಟಿಗೆ  ಮುರಿದುಕೊಂಡ. ತರಕಾರಿ ಕೊಳ್ಳುಗರಲ್ಲಿ ಅಂತರ ಪಾಲಿಸುವ ನಿಯಮವನ್ನು ಪಾಲಿಸುತ್ತಾ ತರಕಾರಿಗಳನ್ನು ಮಾರಿದ. ಮಂತ್ರ ದಂಡ ತಿರುಗಿಸಿದಂತೆ ಒಂದೇ ತಾಸಿನಲ್ಲಿ ತಂದ ಇಷ್ಟೂ ತರಕಾರಿಗಳು ಖಾಲಿಯಾಗಿದ್ದವು.

ತನ್ನೆಲ್ಲಾ ಭಾರ ಇಳಿಸಿ ನಿರಾಳಳಾದ ಗೋದಾವರಿಯನ್ನು ಒಮ್ಮೆ ಸಂತಸದಿಂದ ನೋಡಿ ಹೆಗಲಲ್ಲಿಯ ಬೈರಾಸಿನಿಂದ ಒರೆಸಿ ಯಾವುದೋ ಉತ್ಸಾಹದಿಂದ ಮನೆ ಸೇರಿದ. ದುಲ್ಹನ್ ಕಾಣಲಿಲ್ಲ. ಬಚ್ಚಲು ಮನೆಗೆ ಹೋಗಿ ಕೈ ಕಾಲು ತೊಳೆದು, ಮುರಿದ  ಗೊಂಬೆಯ ಕೈಯನ್ನು ಜೋಡಿಸುವ ಪ್ರಯತ್ನದಲ್ಲಿ ಸೋತ ಕಿರಿಯ ಮಗಳು ಅಪ್ಪನನ್ನು ಕಂಡಂತೆ ಅಪ್ಪ ನನಗೆ ಹೊಸ ಗೊಂಬೆ ಕೊಡಿಸೂ ಎಂದು ರಾಗ ಎಳೆದಳು. ಮಗಳ ಈ ಬೇಡಿಕೆ ಮಧೋನ ಮನ ಯಾವ ರೀತಿಯಲ್ಲಿ ಮುಟ್ಟಿತ್ತೋ ಏನೋ? ಒಂದು ತುಂಟ ನಗುವಿನಿಂದ ನಿಮ್ಮ ಅಮ್ಮ ಎಲ್ಲಿ ಎಂದು ಕೇಳಿದ.

ಮಾಳಿಗೆಯಲ್ಲಿ ಬಟ್ಟೆ ಜೋಡಿಸುತ್ತಿದ್ದಾಳೆ ಎಂಬ ಉತ್ತರವೂ ಅವನ ಮನದ ಖುಷಿಗೆ ಪೂರಕವಾಯಿತ್ತೆನ್ನುವಂತೆ ಸೀದಾ ಮಾಳಿಗೆ ಹತ್ತಿದ. ಹೊತ್ತಲ್ಲದ  ಹೊತ್ತಲ್ಲಿ ಬಂದ ಮಧೋನನ್ನು ನೋಡಿ ಗಾಬರಿಗೊಂಡ ದುಲ್ಹನ ಏನೂ ವಿಚಾರಿಸವೆನ್ನುವಷ್ಟರಲ್ಲಿಯೇ ಅವಳ ಕೆಂಪಾದ ತುಟಿಗಳು ಬಂಧಿಯಾಗಿದ್ದವು. ಹುಸಿ ಮುನಿಸೂ ಬಿಡಿಸಿಕೊಳ್ಳುವ ಹುಸಿ ಸಾಹಸಗಳೂ ಸೋತು ಮಧೋನ  ತುಂಟತನದಲ್ಲಿ ಕರಗಿ ಹೋದವು.

ಕೊರೋನಾ ಮಹಾಮಾರಿಯ ರಾಕ್ಷಸ ಭೀತಿಯ ಹಿಡಿತದಲ್ಲಿ ಕ್ಷೀಣವಾದ ದನಿಗಳೊಳಗೆ ಅನೂಹ್ಯ ಭೋರ್ಗರೆತಗಳು. ಈ ವಿಕ್ಷಿಪ್ತ ಪರಿಸ್ಥಿಯಲ್ಲೂ ತನ್ನ ಬೇಳೆ ಬೇಯಿಸಿಕೊಳ್ಳುವ ಮಂದಿಗಳು. ಕಿಲೋ ಲೆಕ್ಕದಲ್ಲಿ ಕೊಂಡುಕೊಳ್ಳುವ ವಸ್ತುಗಳು ಅರ್ಧ, ಕಾಲು ಕಿಲೋಗೆ ಬಂದು ನಿಂತಿರುವುದು. ಈಗ ಬೇಡಿಕೆಗಳಿಗೆ ಬೆಲೆಯಿಲ್ಲ. ಇದ್ದದ್ದನ್ನೇ ಸಿಕ್ಕಿದ್ದೆ ಪುಣ್ಯವೆನ್ನುವಂತೆ ಕೊಂಡುಕೊಳ್ಳಬೇಕೇ  ಹೊರತು ಬೇರೆ ದಾರಿಯಿಲ್ಲ. ಇನ್ನು ಪೆನ್ಸಿಲ್ಲು ಪೆನ್ನು ಸರಿಯಾಗಿ ಹಿಡಿಯಲು ಬಾರದ ಪುಟ್ಟ ಪುಟ್ಟ ಮಕ್ಕಳು, ಪಚ್ಚಾಸ್ಕ ಜೋಡಿ  ಮಾಸ್ಕ್, ತೀಸ್ಕಾ ಹ್ಯಾಂಡ್ ಗ್ಲಾವುಸ್, ಬೀಸ್ ಕ ಹರಾ ಮಸಾಲಾ ಎಂದು ಹರಳು ಹುರಿದಂತೆ ಸಂತೆಯಿಡಿ ಸುತ್ತಿ ಸದ್ದು ಮಾಡಿ ಅಂದಿನ ಊಟಕ್ಕೆ ಅಪ್ಪ ಅಮ್ಮನಿಗೆ ನೆರವಾಗುವ ಪ್ರೌಢತೆ ಅದ್ಯಾವ ಶಾಲೆಯಲ್ಲಿ ಕಲಿತರಪ್ಪಾ! ಯಾಕೆ ಇವರು ಹತ್ತು ವರುಷದೊಳಗಿನ ಮಕ್ಕಳಲ್ಲವೇ?  ವೈರಾಣುವಿನ ಜೊತೆ ಯಾವುದಾದ್ರೂ ಒಪ್ಪಂದವನ್ನಾದರೂ ಮಾಡಿಲ್ಲ ತಾನೇ! ಸಾವಿನ ಬೆದರಿಕೆ ಬಿಸಿ ಬಿಸಿ ಚಹಾ ಕುಡಿದು ತಾಜಾವಾಗಿ ಮಂದಿಗಳನ್ನು ಮಟ್ಟಗೊಳಿಸುತ್ತಿವೆ.   

ಒಂದೊಮ್ಮೆ ಮುಂಬಯಿ ಹೆಸರಿನಿಂದ ಅರಳುವ ಕಣ್ಣು ಕಿವಿಗಳಲ್ಲಿ  ಭಯ ಆವರಿಸಿಕೊಂಡಿವೆ. ಅದೆಷ್ಟು ತಿರಸ್ಕಾರಗಳು, ಒಣ ಅನುಕಂಪಗಳು, ಎಲ್ಲರ ನಾಲಿಗೆಯಲ್ಲಿ ನಲಿದಾಡುತ್ತಿರುವ ನಗರ ಇಂದು ಶಾಪಗ್ರಸ್ತ ನಗರವಾಗಿದೆ. ಇದಕ್ಕೆಲ್ಲಾ ದೂರುವುದಾದರೂ ಯಾರನ್ನು? ವ್ಯವಸ್ಥೆಯನ್ನೇ ಅಲ್ಲ? ಏನೇ ಆಗಲಿ ಮುಂಬಯಿ ನಮಗೆ ಒಂದು ಹೊತ್ತಿನ ಅನ್ನವನ್ನಾದರೂ ಕೊಟ್ಟು ಮಲಗಿಸುತ್ತಾಳೆ ಎಂದು ನಂಬಿರುವ ಈ ಬಡಪಾಯಿ ಜನರನ್ನ?  ಸದ್ಯ ಸತ್ಯವೆಂಬುವುದು ಮಾಸ್ಕಿನಾಚೆ ಮರೆಯಾಗಿವೆ ಎಂದು ಮಾತ್ರ ಹೇಳಬಹುದು.

ಕುರ್ಲಾದಿಂದ ಮಾಣಿಕ್ಲಾಲ್‌ವರೆಗೆ ಎಲ್ ವಾರ್ಡಿನ  ಮೇಲ್ವಿಚಾರಣೆ ಮಾಡುತ್ತಿರುವ ನಿರೀಕ್ಷಣಾಧಿಕಾರಿ ಪವಾರ್. ಅವನ ಪವರ್ ಈಗ ತುಸು ಜಾಸ್ತಿನೇ ಆಗಿತ್ತು. ತನ್ನ ಬಜಾಜ್ ಅವೆಂಜರ್ ಮೇಲೆ ಕೂತು ಲಾಕ್‌ಡೌನ್‌ ನಿರೀಕ್ಷಣೆಗೆಂದು ಹೊರಟರೆ ಥೇಟ್ ಯಮನೇ ಕೋಣದ ಮೇಲೆ ಕೂತು ಬರುತ್ತಿರುವಂತೆ ಗೋಚರಿಸುತ್ತಿತ್ತು. ಅವನ ಬೈಕಿನ ಸದ್ದು ಕೇಳಿದ್ರೆ ಸಾಕು ವ್ಯಾಪಾರಿಗಳು  ತಂತಮ್ಮ ಅಂಗಡಿಗಳ ಶಟರ್ ಮುಚ್ಚಿ ಪವರ್ ಕ ವಾರ್ ಸೆ ಅಚ್ಚಾ ಹೈ ಘರ್ಪೆ ಪಡೆ ರಹನಾ (ಪವರನ ಹೊಡೆತಕ್ಕಿಂತ ಮನೆಯಲ್ಲಿ ಬಿದ್ಕೊಂಡಿರೋದು ವಾಸಿ) ಎನ್ನುತ್ತಿದ್ದರು.

****

ಸೋಮವಾರ ಮಧೋ ಮತ್ತು ಹೀರಾಳ ಮಧ್ಯ ಜಗಳ ನಡೆದದ್ದು. ಮಂಗಳವಾರ ಮಾಧೋ ಸ್ವಲ್ಪ ಬೇಗನೆ ಎದ್ದು ಮಾರ್ಕೆಟ್ಟಿಗೆ ಹೋಗಿ ತರಕಾರಿಗಳನ್ನು ತಂದಿದ್ದ. ತನ್ನ ಸಾಮಾನ್ಯ ಸ್ಥಳದಲ್ಲಿಯೇ ನಿಲ್ಲಿಸಿ ಕಣ್ಣಿನಿಂದಲೇ ದೃಷ್ಟಿ ತೆಗೆದವನಂತೆ ಕಣ್ಣುಗಳನ್ನು  ತಿರುಗಿಸಿದ. ಸ್ವಲ್ಪ ಹೊತ್ತಲ್ಲಿ ಹೀರಾ ಡುಗು ಡುಗು ಎಂದು ತನ್ನ ತಳ್ಳು ಗಾಡಿಯನ್ನು ಗೋದಾವರಿಯ ಪಕ್ಕದಲ್ಲಿಯೇ ತಂದು ನಿಲ್ಲಿಸಿದಳು. ಒಂದು ಬಾರಿ ಇತ್ತ ದೃಷ್ಟಿ ಹಾಯಿಸಿದರೆ ಸನ್ನೆ ಮಾಡಿ ಆಚೆ ನಿಲ್ಲಿಸುವಂತೆ ಹೇಳಿಬಿಡಬೇಕೆಂದು ಮಾಧೋ ಅವಳನ್ನೇ ನೋಡಲಾರಂಭಿಸಿದ. ಚತುರೆ ಹೀರಾಳಿಗೂ ಮಾಧೋ ಅವಳನ್ನೇ ನೋಡುತ್ತಿದ್ದಾನೆ ನಿನ್ನೆಯ ಕಹಿ ಇನ್ನೂ ಕರಗಿಲ್ಲ, ಮುಖ ನೋಡಿದ್ರೆ ಏನಾದರೂ ರಾದ್ಧಾಂತ ಮಾಡಿಯೇ ಮಾಡ್ತಾನೆ ಎಂದು ತನ್ನಷಕ್ಕೆ ಒಂದೊಂದೇ ಮೆಂತೆ ಸೊಪ್ಪುಗಳ ಕೊಡವುತ್ತಾ ಕೊಳ್ಳುಗರೊಂದಿಗೆ ಮಾತನಾಡುತ್ತಿದ್ದಳು.

ಮಾಧೋ, ಇವತ್ತು ಒಂದು ಕೈ ನೋಡಿಯೇ ಬಿಡ್ತೇನೆ ಎಂದು ‘ಹೇ ಹೀರಾ ಸಾಲಿ ... ಸಮಜ್‌ತಾ ನಹಿ ಹಾಯ್ ಕ್ಯಾರೇ? ನಿನ್ನೆ ಇಷ್ಟು ಅರ್ಥ್ ಮಾಡಿ ಹೇಳಿದ್ದು ನಿನ್ನ ಮೆದುಳಿಗೆ ಇಳಿಯಲಿಲ್ವಾ’ ಎಂದು ತೀವ್ರವಾಗಿ ಎಗರಾಡಲಾರಂಭಿಸಿದವನಿಗೆ ಹಿಂದೆ ಮುನ್ಸಿಪಾಲಿಟಿ ಗಾಡಿ ಬಂದಿರುವುದು ಗೊತ್ತೇ ಆಗಲಿಲ್ಲ. ಆಗಲೇ ಎಲ್ಲರೂ ತಂತಮ್ಮ ಗಾಡಿಗಳನ್ನು ಅತ್ತ ಇತ್ತ ಎಂದು ನುಸುಕಿ ಕಾಣೆಯಾದರು. ಹೀರಾ ಸಹ ಮಂಡೆ ಖರ್ಚು ಮಾಡಿ ಸುಮ್ಮನೆ ತನ್ನ ಗಾಡಿಯನ್ನುಳಿಸುವುದರಲ್ಲಿ ತೊಡಗಿದ್ದಳು. ಅನಾಥೆಯಾಗಿ ಗೋದಾವರಿಯನ್ನು ಹದ್ದಿನ ವೇಗದಲ್ಲಿ ಮುನ್ಸಿಪಲ್ ವ್ಯಾನ್ ತನ್ನ ಬಾಹು ಬಂಧನದಲ್ಲಿ ಸಿಲುಕಿಸಿ ಹಾರಿಹೋಯಿತು.

ಮಧೋನಿಗೆ ತಾನೇನೋ ಹೇಳಬೇಕ್ಕೆನ್ನುವಷ್ಟರಲ್ಲಿ ವ್ಯಾನ್ ರಸ್ತೆಯಲ್ಲಿ ಕಾಣೆಯಾಯಿತು. ಕಣ್ಣ ಮುಂದೆ ಕತ್ತಲು ಆವರಿಸಿತು. ಹೃದಯಬಡಿತ ನಿಂತು ಹೋಯಿತು ಎನ್ನುವಂತೆ ಅಲ್ಲೇ ಕುಸಿದು ಬಿದ್ದ. ಸಿಕಂದರ, ಬಬ್ಲು ಸಾವರಿಸುವ ಬದಲಿಗೆ ಅವನಿಗೇ ಬುದ್ಧಿ ಹೇಳಲಾರಂಭಿಸಿದರು. ‘ಬೈಯಾಜಿ ನೀವು ತಪ್ಪು ಮಾಡಿದ್ದೀರಿ. ಗೋದಾವರಿಯನ್ನು ಬಿಟ್ಟು ಬೆಳಿಗ್ಗೆ ಬೆಳಿಗ್ಗೆ ಅವರಲ್ಲಿ ಯಾಕೆ ವಾದಕ್ಕಿಳಿದಿರಿ? ಅವಳ ಬಾಯಿಗೆ ಬಿದ್ದವರ ಉದ್ಧಾರವಾದದುಂಟೆ?

ವ್ಯಾನ್ ಹೋದ ವೇಗದಲ್ಲಿ ಹೀರಾ, ಹೇ, ಮೋಸಂಬಿ, ಸ್ವಲ್ಪ ನನ್ನ ದಂಧಾ ನೋಡು. ನಾನೀಗ ಬರ್ತೇನೆಂದು ಕಂಬದಂತೆ ನಿಂತಿರುವ ಮಧೋನನ್ನು ರಿಕ್ಷಾದೊಳಗೆ ತಳ್ಳಿ ತಾನೂ ಕುಳಿತು ಎಲ್ ವಾರ್ಡ್ ಮುನ್ಸಿಪಲ್ ಅಫೀಸ್ ಅಂದಳು. ರಿಕ್ಷಾದವನಿಗೆ ಕಾಯಲು ಹೇಳಿ ಮುಂದೆ ನಡೆದಳು. ಅವಳೊಳಗೆ ವಿನಾಕಾರಣ ತುಳಿತಕ್ಕೊಳಗಾದ ಸಿಟ್ಟು, ಹತಾಶೆ, ವಿವಶತೆಗಳೆಲ್ಲವೂ ಯುದ್ಧ ಹೂಡಿದಂತೆ ಹೀರಾ ಸೆಟೆದು ಮುಖವೆಲ್ಲ ಕೆಂಪಾಗಿತ್ತು. ಸಂವೇದನೆಯಿಲ್ಲದ ಭಾವಗಳನ್ನು ಅಗೆದು ನೋಡಿದರೆ ಅದೆಷ್ಟೋ ನೋವುಗಳು ದುತ್ತನೆ ಎದ್ದು ನಿಲ್ಲುತ್ತಿತ್ತೋ ಏನೋ? ಅವೆಲ್ಲವೂಗಳನ್ನೂ ಇದು ಸರಿಯಾದ ಸಮಯವಲ್ಲವೆನ್ನುವಂತೆ ಅವ್ಯಕ್ತಭಾವದ ಮಾಸ್ಕ್‌ಅನ್ನು ಅಲುಗಾಡಿಸದೆ ಒಳಗೆ ಮುನ್ಸಿಪಲ್ ಅಧಿಕಾರಿ ಎದುರಿಗೆ ತಲೆ ತಗ್ಗಿಸಿಯೇ ನಿಂತ. ಮಾರುಕಟ್ಟೆಯಲ್ಲಿ  ತಡೆ ಹಿಡಿದ ಮಾತುಗಳು ಬಂಡೆಯೊಡೆದು ಬಂದಂತೆ ಹೀರಾ ಮೊದಲು, ಸಾಮ,  ಭೇದದಿಂದ ಕೊನೆಗೆ ದಂಡಕಟ್ಟಲೂ ಒಪ್ಪಿ, ಗೋದಾವರಿಯನ್ನು ಬಿಡಿಸಿಕೊಂಡು ಹೋಗಲು ಅನುಮತಿ ಪಡೆದುಕೊಂಡರು.

ತರಕಾರಿಗಳ ಖರೀದಿ ಬೆಲೆ 5000 ರೂಪಾಯಿ. 4000 ರೂಪಾಯಿ ದಂಡಕಟ್ಟಬೇಕಾದ ಫರ್ಮಾನು. ಗಾಡಿಯಲ್ಲಿದ್ದ ತರಕಾರಿಗಳು ಆಗಲೇ ಚೆಲ್ಲಾಪಿಲ್ಲಿಯಾಗಿ ಮಿಕ್ಕಿದ್ದೆಲ್ಲಾ ಪೊಲೀಸ್ ಸಿಬ್ಬಂದಿಯಲ್ಲಿ ಪಾಲುಗೊಂಡಿದ್ದವು. ಮಾಧೋ ಜೇಬಿಗೆ ಕೈಹಾಕಿ ಹೊರತೆಗೆದ ಮಡುಚಿಟ್ಟ ನೋಟುಗಳ ಮೇಲೆ ಕಣ್ಣಾದಾಡಿಸಿದ. ಇವುಗಳಿಂದ ತನ್ನ ಗೋದಾವರಿಯನ್ನು ಮತ್ತೆ ಪಡೆಯಬಹುದೆನ್ನುವ ನಂಬಿಕೆ ಮಿದುವೆನಿಸಿತು. ಹಿಂತಿರುಗುವಾಗ ಮಾತ್ರ ಮಧೋನಿಗೆ ಗೋದಾವರಿ ಹಾಗೂ ಹೀರಾಳ ಕಣ್ಣಿನ ನೇರದಲ್ಲಿ ಮಾತನಾಡಲಾಗದ ಪಾಪಪ್ರಜ್ಞೆ ಮುಖದಲ್ಲಿ ಸ್ಪಷ್ಟವಾಗಿ ಕಂಡಿತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.