ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಉಣಕಲ್ ತಂತ್ರ ಸೀಳಿದ ರಾಕೆಟ್ 

Last Updated 24 ಜನವರಿ 2021, 2:42 IST
ಅಕ್ಷರ ಗಾತ್ರ

ಆ ಹೂಬಿಸಿಲಿನ ಮಧ್ಯಾಹ್ನ, ಸ್ವಲ್ಪ ಸಭ್ಯತನ ಮುರಿದುಕೊಂಡೇ ಅರೆತೆರೆದ ಕಿಟಕಿ ಇಣುಕಿದೆ. ಲೋಬಾನಿನ ಪರಿಮಳ ಪುಟ್ಟ ನಯೀಮ ನಿದ್ದೆ ಹೋಗಿದ್ದನ್ನು ಸೂಚಿಸುತ್ತಿತ್ತು. ಅಡುಗೆಮನೆಯ ಗೋಡೆಗೆ ಮುಖಮಾಡಿ ಮಂಡಿಯೂರಿದ್ದ ಸೀಮಾ ಪ್ರಾರ್ಥನೆಯಲ್ಲಿ ಮಗ್ನಳಾಗಿದ್ದಳು. ಕಿಟಕಿ ಸರಳುಗಳ ಮಧ್ಯೆ ಮೆಲ್ಲಗೆ ಮ್ಯಾಗಝೀನು ಇಟ್ಟು ಹೊರಡುವಾಗ ಲಕ್ಷ್ಯ ಆಕೆ ಕುಳಿತ ನೆಲಹಾಸುವಿನೆಡೆ ಹೊರಳಿತು.

‘ಮಾತಿಗೆ ಚೆನ್ನಾಗಿದೆ ಅನಬೇಡಿ ದೀ, ಒಮ್ಮೆ ಮುಟ್ಟಿನೋಡಿ ಕಾಶ್ಮೀರದಿಂದ ತರಿಸಿದ್ದು ಅಪ್ಪಟ ರೇಷ್ಮೆಯದು’ ಕಳೆದ ತಿಂಗಳು ಆಕೆ ನನ್ನ ಮುಂಗೈ ಹಿಡಿದು ಅದರ ನವಿರನ್ನು ಸವರಿಸಿ ತನ್ನ ಖುಷಿ ಇಮ್ಮಡಿಗೊಳಿಸಿಕೊಂಡಿದ್ದಳು.

ಇದು ಹೀಗಿಲ್ಲಿ ಮೃದುತ್ವದ ಅನುಭವ ಕರುಣಿಸುತ್ತಿದೆಯೆಂದರೆ ಅದು ಎಂತೆಂಥ ಪದರಗಳನ್ನು ದಾಟಿ ಬಂದಿರಬಹುದು?

‘ನಿಜ ನಿಜ’

ಆದರೆ, ನಿನ್ನ ಖುದಾ ನೆಲದ ಮೇಲೆ ಕುಳಿತರೆ ಪ್ರಾರ್ಥನೆಯನ್ನು ಸ್ವೀಕರಿಸುವುದಿಲ್ಲ ಅನ್ನುತ್ತಾನೇನು?

ಆಟವಾಡುತ್ತಿದ್ದ ನಯೀಮನ ಕೈ ತಾಕಿ ತುಂಬಿದ ಗ್ಲಾಸು ಉರುಳಿತು.

ಸೀಮಾ, ನನ್ನ ಮಾತುಗಳ ಇರಿತದ ಅಂದಾಜು ನನಗಾಗುತ್ತಿದ್ದರೂ ಅವುಗಳನ್ನು ತಡೆಯಲಾರೆ, ಅವು ನನ್ನಿಂದ ಬಿಡಿಸಿಕೊಂಡು ಹೋಗುವಾಗ ಸಿಗುವ ಆನಂದವನ್ನು ಒಂದು ಸಣ್ಣ ನಶೆಯಂತೆ ಅನುಭವಿಸುವುದು ಇತ್ತೀಚೆಗೆ ರೂಢಿಯಾಗಿಬಿಟ್ಟಿದೆ, ಕ್ಷಮಿಸು.

***

ತಡರಾತ್ರಿ ಆಟೋ ಬಂದುನಿಂತಾಗ, ಮರುದಿನ ಹೊಲಿಯಬೇಕಾಗಿದ್ದ ಫಾಲ್‌ಗಳನ್ನು ಇಸ್ತ್ರೀ ಮಾಡುತ್ತಿದ್ದೆ. ಮಲಗಿದ ಮಗುವನ್ನು ಭುಜದ ಮೇಲೆ ಹಾಕಿಕೊಂಡು ಸೂಟ್ಕೇಸಿನೊಂದಿಗೆ ಸೀಮಾ- ಅನ್ವರ್ ಪಕ್ಕದ ಜಿಗಜಿಣಗಿಯವರ ಗೇಟಿನೊಳಗೆ ಹೊಕ್ಕಾಗ ಜಿಟಿಜಿಟಿ ಮಳೆಯೂ ಶುರುವಾಗಿತ್ತು. ಒಳಗಿನಿಂದ ರೂಮಿಗೆ ಚಿಲಕ ಹಾಕಿ ಹೊರಬದಿಯಿಂದ ಇನ್ನೊಂದು ಬಾಗಿಲು ಕೂರಿಸಿ ಬಾಡಿಗೆ ಕೊಡಲೆಂದೇ ಪ್ರತ್ಯೇಕ ಮನೆಯಂತಾಗಿಸಲಾದ ಮನೆಯದು. ನಾಲ್ಕು ಜನ ಮಲಗುವಷ್ಟೇ ಪುಟ್ಟ ಕೋಣೆ, ಅದಕ್ಕೆ ಹೊಂದಿಕೊಂಡಂಥ ಇನ್ನೊಂದು ಕೋಣೆಯಲ್ಲೇ ಅಡುಗೆ, ಮತ್ತದರ ಮೂಲೆಯಲ್ಲೇ ಬಚ್ಚಲುಮನೆ. ಅದು ಅವಶ್ಯಕ ಸಾಮಾನುಗಳನ್ನು ವಾರದೊಪ್ಪತ್ತಿನಲ್ಲೇ ತುಂಬಿಕೊಂಡು ಸ್ವತಂತ್ರ ಮನೆಯಂತೆ ಉಸಿರಾಡುವ ಲಕ್ಷಣ ಪಡೆದುಕೊಳ್ಳುತ್ತಿದ್ದಂತೆ ಒಬ್ಬೊಬ್ಬರೇ ಸ್ನೇಹಿತರು ಬರಲಾರಂಭಿಸಿದರು ಹಾಗೇ ಅಪರೂಪಕ್ಕೆ ಸಂಬಂಧಿಕರೂ. ಸಣ್ಣಪುಟ್ಟ ಉಸಿರು ಕಟ್ಟಿದಂತಾದಾಗೆಲ್ಲ ಸೀಮಾ ನಮ್ಮ ಮನೆಗೆ ಬಂದು ಮ್ಯಾಗಝೀನುಗಳಲ್ಲಿ ಆಮ್ಲಜನಕ ಹುಡುಕುತ್ತಿದ್ದಳು.

ಹೀಗೇ ಒಂದು ಮಂಗಳವಾರದ ಮಧ್ಯಾಹ್ನ ದೊಡ್ಡ ಬಟ್ಟೆಗಂಟಿನೊಂದಿಗೆ ಬುರ್ಖಾ ಧರಿಸಿದ ನಡು ವಯಸ್ಸಿನ ಹೆಣ್ಣುಮಕ್ಕಳು ಆಟೋದಿಂದ ಇಳಿದರು. ಸೀಮಾಳ ನಾದಿನಿ, ವಾರಗಿತ್ತಿಯರಾದ ಅವರು ಉಣಕಲ್ ಕೆರೆಯಲ್ಲಿ ಹಾಸಿಗೆಗಳನ್ನು ನೆನೆಸಿ ಎತ್ತಿ ಕುಕ್ಕಿ ಹಿಂಡಿ ಜಾಡಿಸಿ ಒಣಗಿಸಿ ವಾಪಸ್ ಮನೆಗೆ ಹೋಗುವಾಗ ಪ್ರತೀ ವಾರ ಸೀಮಾಳ ಮನೆಗೆ ಬಂದು ಬೇಕಾದ್ದು ತಿಂದುಂಡು ತಾಸು ಅಡ್ಡಾಗಿ ಕಪ್ ಚಹಾ ಹೀರಿ ವಾಪಸ್ ಮನೆಗೆ ಹೋಗುತ್ತಿದ್ದರು. ಪ್ರತೀ ವಾರ ನಡೆಯುವ ಈ ಉಣಕಲ್ ವಿಹಾರ ಕಾರ್ಯಕ್ರಮವನ್ನು ಸೀಮಾ-ಅನ್ವರ್ ಹೃದಯ ತಮಗೆ ಬೇಕಾದಂತೆ ಅರ್ಥೈಸಿಕೊಳ್ಳುತ್ತಿತ್ತು. ಅಲ್ಲಿಂದ ಬರುವ ಯಾರಿಗೂ ನಮ್ಮ ಮನಸ್ಸು ಅರ್ಥವಾಗಿದೆ ನಮ್ಮನ್ನು ಸ್ವೀಕರಿಸುತ್ತಿರುವುದರ ಸಂಕೇತವೇ ಇದೆಲ್ಲ ಎಂದು. ಈ ಖುಷಿಯಲ್ಲಿ ಅವ ತನ್ನ ಅಣ್ಣಂದಿರ, ಅಕ್ಕತಂಗಿಯರ ಮಕ್ಕಳಿಗೆಲ್ಲ ಬೆಲೆಬಾಳುವ ಆಟಿಗೆ, ಬಟ್ಟೆಬರೆಯನ್ನೆಲ್ಲ ತಂದು ಸುರಿಯುತ್ತಿದ್ದ. ಹಾಗಾಗಿಯೇ ಅವರು ಬರುವ ದಿನ ಮಾತ್ರ ಮಧ್ಯಾಹ್ನ ಮನೆಗೆ ಊಟಕ್ಕೆ ಬರುತ್ತಿದ್ದ. ಸುಮಾರು ಎರಡು ತಿಂಗಳುಗಳ ತನಕ ಈ ಕಾರ್ಯಕ್ರಮ ಸಾಂಘವಾಗಿ ಸಾಗಿ ಇದ್ದಕ್ಕಿದ್ದಂತೆ ಒಂದು ಮಂಗಳವಾರ ಭರ್ತಿ ಮೋಡ ಕಟ್ಟಿಕೊಂಡುಬಿಟ್ಟಿತು. ಥಣ್ಣಗೆ ಗಾಳಿಯೂ ಕೊರೆಯುತ್ತಿದ್ದುದರಿಂದ ಕಿಟಕಿ ಮುಚ್ಚಿಕೊಂಡು ಖಾಲಿಯಾದ ಬಾಬೀನುಗಳಿಗೆ ದಾರ ಸುತ್ತುತ್ತ ಕುಳಿತಿದ್ದೆ. ಹೊರಗೆ ಬಾಗಿಲು ತೆರೆದೇ ಇತ್ತು. ಬಗಲಿಗೊಂದು ಚೀಲ ಹಾಕಿಕೊಂಡು ನಯೀಮನನ್ನೂ ಎತ್ತಿಕೊಂಡು ಸೀಮಾ ಒಳಬಂದಳು.

ನಿರಂತರವಾಗಿ ಏಕಾಗ್ರತೆ ಬಯಸುವ ಹೊಲಿಗೆಯ ಸೂಕ್ಷ್ಮ ಕೆಲಸದ ಮಧ್ಯೆ ಯಾವಾಗಲೂ ಕಣ್ಣಿಗೆ ಕಣ್ಣು ಕೊಟ್ಟು ಮಾತನಾಡಲಾಗದು ಎಂಬುದನ್ನು ಆಕೆ ಅರ್ಥ ಮಾಡಿಕೊಂಡಿದ್ದಳು ಎನ್ನುವುದಕ್ಕಿಂತ ನಮ್ಮಿಬ್ಬರ ಮಧ್ಯೆ ಔಪಚಾರಿಕತೆ ಬಲು ಬೇಗ ಕರಗಿತ್ತು. ನೀಲಿ, ಬಿಳಿ, ಬೂದು, ಗುಲಾಬಿ ಬಣ್ಣಗಳು ಮುಗಿದರೂ ಯಂತ್ರಕ್ಕಂಟಿಕೊಂಡು ಸುಮ್ಮನೇ ನಿಂತಿದ್ದಳು. ಆಕೆಯ ಅಂತರಂಗದಲ್ಲಿ ಹೊಯ್ದಾಡುತ್ತಿದ್ದ ಅಲೆಗಳು ತಾಕುತ್ತಿದ್ದರೂ ನನ್ನ ಬೆರಳುಗಳು ಬಾಬೀನು ಮತ್ತೆ ರೀಲಿನ ಮಧ್ಯೆ ಚಲಿಸುತ್ತಿದ್ದ ದಾರವನ್ನು ನಿಯಂತ್ರಿಸುತ್ತಿದ್ದವು. ಕಪ್ಪು ದಾರ ಬಾಬೀನು ತುಂಬುತ್ತಿದ್ದಂತೆ ನನ್ನ ಕೈಮೇಲೆ ಪಳಕ್ಕೆಂದು ಬೆಚ್ಚನೆಯ ಹನಿಗಳುರುಳಿದವು.

ಚಕ್ರ ಗಕ್ಕನೆ ನಿಂತಿತು.

ಬೆನ್ನಹಿಂದಿನಿಂದ ಅಸಡಬಸಡ ಧ್ವನಿ… ಬರುಬರುತ್ತ ಮಳೆಗಾಲದಲ್ಲಿ ಸದಾ ಕಟ್ಟೆಯ ಮೇಲೆ ಆರಾಕಿಸಿಕೊಂಡಿರುವ ತಟ್ಟಿನಂತೆ ಕಾಣುತ್ತಿದ್ದ ನನ್ನಮ್ಮ, ಸೀಮಾಳೆಡೆ ಕೈಚಾಚಿ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದಳು. ದವಡೆಗಳು ಜೀರ್ಣಗೊಂಡು ಹಲ್ಲಿನ ಸೆಟ್ಟೂ ಹಿಡಿತ ಕಳೆದುಕೊಂಡಿದ್ದರಿಂದ ಏನು ಮಾತನಾಡಲು ಹೋದರೂ ಡಬ್ಬಿಯೊಳಗೆ ಸಣ್ಣಸಣ್ಣ ಕಲ್ಲುಗಳನ್ನು ಹಾಕಿ ಅಲುಗಾಡಿಸಿದಂತೆ. ಕಣ್ಣುಗಳ ಚಲನೆಯೂ ತೀಕ್ಷ್ಮತೆ ಕಳೆದುಕೊಂಡಿದ್ದರಿಂದ, ಸುಕ್ಕುಗಳು ಆಕೆಯ ಮುಖವನ್ನು ಕಿವುಚಿಟ್ಟಿದ್ದರಿಂದ ಬರುಬರುತ್ತ ಆಕೆ ತನ್ನೊಳಗಿನದನ್ನು ಹೇಳುತ್ತಿದ್ದಾಳೋ, ನಮ್ಮೊಳಗಿನದನ್ನು ಕೇಳಲಿಚ್ಛಿಸುತ್ತಿದ್ದಾಳೋ? ಅರ್ಥವಾಗದೆ ನಾನೇ ಸುಮ್ಮನುಳಿಯುತ್ತ ಬಂದುಬಿಟ್ಟಿದ್ದೆ. ಬಹುಶಃ ಆಕೆ ಮಾತಾಡಿದ್ದು ಯುಗಾದಿಗೇ ಕೊನೆ. ಮತ್ತೀಗ…

ಹತ್ತಿರ ಹೋದ ಸೀಮಾ ಚಪ್ಪಟೆಗೊಂಡ ಮುಂಗೈ ನರಗಳನ್ನು ತೀಡುತ್ತ ಆ ಶಬ್ದಗಳನ್ನು ಬಿಡಿಸಿ ಸೋಸಿ ಅರ್ಥ ಹೆಕ್ಕಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಅಮ್ಮ ಆಕೆಯ ಕೈಗಳನ್ನು ತನ್ನೆದೆಯ ಮೇಲೆ ಇರಿಸಿಕೊಂಡು ಪುಸ್ತಕಗಳತ್ತ ನೋಡುತ್ತ ಮತ್ತೂ ಏನೋ ಹೇಳಲು ಹವಣಿಸುತ್ತಿದ್ದಳು.

ತುತ್ತು ಬಾಯಿಗಿಡುವಾಗ ಸಾಕು-ಬೇಕು ಎನ್ನಲಾದರೂ ಆಕೆಯ ಕೈಗಳಲ್ಲಿನ್ನೂ ತ್ರಾಣವಿದೆ ಎನ್ನುವುದೇ ಸಮಾಧಾನ. ಆದರೂ ಈ ಹಂತದಲ್ಲಿ ಬೇಕಾಗಿರುವುದೇನು ಬೇಡವಾಗಿರುವುದೇನು ಸಾಕಾಗಿರುವುದೇನು? ಸೂಜಿಯಂಥ ಸೂಜಿಯ ಕಣ್ಣಿನಲ್ಲಿ ಹಾಯುವ ದಾರಕ್ಕೆ ಮತ್ತದು ಪ್ರಾರ್ಥಿಸುವ ಮೌನಕ್ಕೆ ಸ್ಪಷ್ಟ ಗುರಿ, ಅರ್ಥ ಎರಡೂ ಇರುತ್ತದೆ. …ಆದರೆ ಮನುಷ್ಯನಿಗೆ?’

‘ದೀ, ಜೀವಂತ ಅಂಗಿಗಳನ್ನು ಹೊಲಿಯುವಾಗ ಆ ಖುದಾ, ಕೆಲವೊಂದಕ್ಕೆ ಪುಟ್ಟ ಬಟನ್ನುಗಳನ್ನಿಟ್ಟು ದೊಡ್ಡ ಕಾಜಿಗಳನ್ನು ಮಾಡಿಬಿಡುತ್ತಾನೆ. ಸದಾ ತೆರೆದುಕೊಂಡೇ ಇರುವ ನಿಮ್ಮ ಅಮ್ಮನ ಹೆಪ್ಪುಗಣ್ಣುಗಳನ್ನು ನೋಡಿದಾಗೆಲ್ಲಾ ನನ್ನಮ್ಮ ನೆನಪಾಗುತ್ತಾಳೆ’.

‘ನನ್ನಪ್ಪ ಸರ್ಕಾರಿ ಇಲಾಖೆಯಲ್ಲಿ ಎಂಜಿನಿಯರ್ ಆಗಿದ್ದ. ಹಾಗಾಗಿ ಮೀಟಿಂಗಿನ ನೆಪದಲ್ಲಿ ಒಬ್ಬರಿಲ್ಲಾ ಒಬ್ಬರು ಪರಊರಿನವರು ಬಂದಿದ್ದು ಹೋಗುತ್ತಿದ್ದರು. ಕೆಲವೊಮ್ಮೆ ಹೆಣ್ಣುಮಕ್ಕಳೂ ಇರುತ್ತಿದ್ದರು. ಬಂದ ಯಾರಿಗೂ ಅಮ್ಮ ಉಪಚರಿಸುತ್ತಿದ್ದಳು. ಒಬ್ಬ ಹೆಣ್ಣುಮಗಳು ಮಾತ್ರ ವಾರವಾದರೂ ನಮ್ಮ ಮನೆಯಲ್ಲೇ ಇದ್ದಳು. ಆಕೆಗೆ ನಿಮ್ಮ ಆಫೀಸಿಗೇ ವರ್ಗವಾಗಿದೆಯೋ ಹೇಗೆ? ಅಮ್ಮ ಸಹಜವಾಗಿ ಕೇಳಿದ್ದಷ್ಟೇ, ಅಪ್ಪ ಅಂದಿನಿಂದ ಕೋಪವನ್ನೇ ಉಸಿರಾಡಲು ಶುರುಮಾಡಿಬಿಟ್ಟ. ಆ ಜಳದಿಂದ ಆಗಾಗ ಜಗಳವಾಗಿ ನನಗೊಮ್ಮೆ ಜ್ವರವೂ ನೆತ್ತಿಗೇರಿ ವಾರಗಟ್ಟಲೆ ಹಾಸಿಗೆ ಹಿಡಿದೆ. ಅದೇ ಕೊನೆ ಅಮ್ಮ ಅಪ್ಪನನ್ನು ಪ್ರಶ್ನಿಸುವುದು ಹೋಗಲಿ ಪೂರ್ತಿ ಮಾತೇ ನಿಲ್ಲಿಸಿಬಿಟ್ಟಳು. ನಮ್ಮ ಮನೆಯಲ್ಲಿ ಒಂದು ಕಪ್ಪುಹಲಗೆಯಿತ್ತು. ಅಲ್ಲಿ ನನಗೆ ಅಕ್ಷರಗಳನ್ನು ಕಲಿಸುತ್ತ ಶಬ್ದಗಳನ್ನು ಪೋಣಿಸುವುದನ್ನು ಹೇಳಿಕೊಡುತ್ತಿದ್ದಳು. ಕೆಲವೊಮ್ಮೆ ಚೆಂದದ ಚಿತ್ರಗಳನ್ನು ಬಿಡಿಸುತ್ತ ಆ ಮೂಲಕ ಕಥೆ ಕಟ್ಟುತ್ತಿದ್ದಳು. ಕೆಲವೊಮ್ಮೆ ಪುಟ್ಟಪುಟ್ಟ ಕವಿತೆಗಳನ್ನೂ. ಆದರೆ ಅಪರೂಪಕ್ಕೆ ಬಹಳ ಉದ್ದುದ್ದ ಸಾಲುಗಳನ್ನು ಬರೆಯುತ್ತಿದ್ದಳು. ಅದೇನೆಂದು ಕೇಳಿದಾಗ ಪಟ್ಟನೆ ಅಳಿಸುತ್ತಿದ್ದಳು. ಆದರೆ ನಾನು ಅವಳ ಧ್ವನಿಗಾಗಿ ಅದೆಷ್ಟು ಹಂಬಲಿಸುತ್ತಿದ್ದೆ. ಅಡುಗೆ-ಮನೆಗೆಲಸಗಳನ್ನೆಲ್ಲ ಮುಗಿಸಿ ರಾತ್ರಿಹಗಲೂ ದೇವರಮನೆಯಲ್ಲಿ ತನ್ನ ಅಗಲುಗಣ್ಣುಗಳಿಂದ ದೀಪ ದಿಟ್ಟಿಸುತ್ತ ಕುಳಿತುಬಿಡುತ್ತಿದ್ದಳು. ಮಲಗಿದ ಹಾಸಿಗೆ ಒರಟೆನ್ನಿಸಿ ಮಧ್ಯರಾತ್ರಿ ಎದ್ದು ದೇವರಮನೆಗೆ ಹೋಗುತ್ತಿದ್ದೆ. ಅವಳ ತೊಡೆಗೆ ತಲೆಯಿಡುತ್ತಿದ್ದಂತೆ ನಿದ್ದೆಬಂದುಬಿಡುತ್ತಿತ್ತು. ಬೆಳಗ್ಗೆ ಎಚ್ಚರಾದಾಗ ಅವಳ ಸೆರಗು ನನ್ನನ್ನು ಪೂರ್ತಿ ಹೊದ್ದುಕೊಂಡಿರುತ್ತಿತ್ತು.’

‘ಹಿತ್ತಲಿನ ಅಬ್ಬಲಿಗೆ, ಮಲ್ಲಿಗೆ ಉದುರಿ ಒಣಗಿದರೂ, ಡಬ್ಬಿಯೊಳಗಿನ ಕುಂಕುಮ ಅರಿಶಿಣ ಹಕಳೆಗಟ್ಟಿದರೂ, ಇಲಿಬೆಕ್ಕುಗಳ ಚೆಲ್ಲಾಟದಲ್ಲಿ ಸರಬಳೆಗಳು ಮೂಲೆಗೆ ಬಿದ್ದರೂ, ರೇಷಿಮೆ ಸೀರೆಗಳು ಮಡಿಕೆ ಕತ್ತರಿಸಿಕೊಂಡರೂ ಆಕೆ ತಿರುಗಿ ನೋಡುತ್ತಿರಲಿಲ್ಲ. ಆ ಡಿಸೆಂಬರಿನ ಕೊನೇ ಶನಿವಾರ ಇಡೀ ರಾತ್ರಿ ನಾನು ಐಸುಗಡ್ಡೆಯ ಮೇಲೆ ಮಲಗಿದ ಹಾಗಿತ್ತು. ನಸುಕಿನ ಜಾವ ಎಷ್ಟು ಅಗಲ ಕಣ್ಣುಬಿಟ್ಟರೂ ದೇವರ ವಿಗ್ರಹಗಳು, ಫೋಟೋಗಳು ಕಾಣಲೇ ಇಲ್ಲ. ಕಾಲುಗಳನ್ನು ಮತ್ತಷ್ಟು ಎದೆಗಂಟಿಸಿಕೊಂಡು ಸೆರಗಿನ ಅಂಚು ಹುಡುಕುತ್ತಲೇ ಇದ್ದೆ.’

ಮಲಗಿಸಿದರೆ ಕಣ್ಣುಮುಚ್ಚುವ, ಕೂರಿಸಿದರೆ ನಿಲ್ಲಿಸುವ ಗೊಂಬೆಯೊಂದಿಗೆ ಆಟವಾಡುತ್ತಿದ್ದ ನಯೀಮ್, ತೊಡೆಮೇಲೆ ಅದನ್ನು ಮಲಗಿಸಿಕೊಂಡು ರೆಪ್ಪೆಗಳನ್ನು ತೆಗೆಯಲು ನೋಡುತ್ತಿದ್ದ.

‘ದೀ, ಗೊಂಬೆಗಳು ಯಾಕೆ ನಗುತ್ತಲೇ ಇರುತ್ತವೆ?’

ಅವುಗಳೂ ಅತ್ತರೆ ಸಮಾಧಾನಿಸುವವರು ಯಾರು?

‘ಅಂದರೆ ಅವು ಎಲ್ಲವನ್ನೂ ನುಂಗಿಕೊಂಡೇ ಗೊಂಬೆಗಳಾಗಿರುತ್ತಾವಾ?

ನಿನಗೂ ಈಗ ಗೊಂಬೆಯಾಗುವ ಆಸೆಯೇನು?

ಬಗಲಿನ ಚೀಲ ಅವಳಿಗರಿವಿಲ್ಲದೆಯೇ ಟೀಪಾಯಿಯ ಮೇಲೆ ತನ್ನ ತಾ ಇಳಿಸಿಕೊಂಡಿತು. ಅಲ್ಲೇ ಇದ್ದ ಮ್ಯಾಗಝೀನನ್ನು ಎಂದಿನಂತೆ ಎತ್ತಿಕೊಳ್ಳದೆ ಪುಸ್ತಕದ ಶೆಲ್ಫಿನ ಬಳಿ ಹೋಗಿ ನಿಂತಳು. ನಯೀಮ್ ಆ ಚೀಲವನ್ನು ಎಳೆದಾಡಿದ ಅದರೊಳಗಿಂದ ಕಪ್ಪು ಬುರ್ಖಾ ನೆಲಕ್ಕೆ ಬಿದ್ದಿತು. ಅಮ್ಮ ಖಾಲೀ ಗ್ಲಾಸನ್ನು ಸ್ಟೂಲಿಗೆ ಕುಟ್ಟಿದಳು.

ಆ ಪುಸ್ತಕ ತೆಗೆದುಕೋ ಈ ಪುಸ್ತಕ ತೆಗೆದುಕೋ ಅಂತೆಲ್ಲ ಸನ್ನೆ ಮಾಡಿ ಹೇಳುತ್ತಿದ್ದ ಆಕೆಯಲ್ಲಿ ಎಂದಿಲ್ಲದ ಉಮೇದಿ ಪುಟಿಯುತ್ತಿತ್ತು.

ಟೀಪಾಯಿ ಮೇಲೆ ಗೊಂಬೆಯನ್ನು ಡಬ್ಬು ಮಲಗಿಸಿದ ನಯೀಮ್ ಅದರ ಅಂಗಿಯ ಝಿಪ್ಪು ಬಿಚ್ಚಿ ಬೆನ್ನೊಳಗಿನಿಂದ ಸೆಲ್ಲುಗಳನ್ನು ಹೆಕ್ಕಿತೆಗೆದು ಉರುಳಿಸಿದ. ಅವನನ್ನು, ಕಥೆಯ ಪುಸ್ತಕಗಳನ್ನೂ ಎತ್ತಿಕೊಂಡು ಮನೆಗೆ ಹೋದಳು. ಪುಸ್ತಕದ ಶೆಲ್ಫು ಮೊದಲ ಸಲ ಹಾಲುಹಲ್ಲು ಉದುರಿಸಿಕೊಂಡ ಬಾಯಿಯಂತೆ ಕಾಣುತ್ತಿತ್ತು.

ಮರುದಿನ ಬೆಳಗ್ಗೆ ಕರೆಂಟು ಹೋಗಿದ್ದರಿಂದ ಕಿಟಕಿಬಾಗಿಲುಗಳನ್ನೆಲ್ಲಾ ತೆರೆದು ಪಿಕೋ ಮಾಡುತ್ತ ಕುಳಿತಿದ್ದೆ. ಇದ್ದಕ್ಕಿದ್ದಂತೆ ಯಂತ್ರ ತುತ್ತು ಸಿಕ್ಕಿಸಿಕೊಂಡವರಂತೆ ಮಾಡಿತು. ಅದರ ಗಂಟಲಿಗೆ ಕೈಹಾಕಿ ಬಾಬೀನು ನುಂಗಿದ ರೀಲಿನ ದಾರವನ್ನು ಬಿಡಿಸುತ್ತಿರುವಾಗ ಹೊರಗೆ ಆಟೋ ಸದ್ದಾಯಿತು. ಈ ಸಲ ನಾದಿನಿಯೊಂದಿಗೆ ಇನ್ನಿಬ್ಬರು ವಾರಗಿತ್ತಿಯರೂ ಬಂದಿದ್ದರು. ಒಬ್ಬಾಕೆ ಒಳಹೋಗಿ ಒಂದು ದೊಡ್ಡ ಬೆಡ್ಶೀಟ್ ತಂದು ಬಾಗಿಲಿನ ಮುಂದೆ ಹಾಸಿ ಸೀಮಾಳ ಮನೆಯ ಹಾಸಿಗೆಗಳನ್ನು ಒಂದೊಂದೇ ತಂದು ಗುಪ್ಪೆ ಹಾಕುತ್ತಿದ್ದಳು. ಬಹುಶಃ ಆಕೆಯನ್ನೂ ಉಣಕಲ್ ವಿಹಾರ ಕಾರ್ಯಕ್ರಮಕ್ಕೆ ಬರುವಂತೆ ಒತ್ತಾಯಿಸುತ್ತಿದ್ದರೇನೋ. ಕೊನೆಗೆ ಅವರಷ್ಟೇ ಆಟೋ ಹತ್ತಿದರು. ಆದರೆ ಅದು ಮುಂದೆ ಹೋಗಲು ಕಿರಿಕಿರಿ ಮಾಡಿದಾಗ ಡ್ರೈವರ್ ಪಾನಾ ಪಕ್ಕಡ್ ಹಿಡಿದು ಕುಳಿತ.

‘ಭಾಭೀಜಿ, ನಿಮಗೆ ಈ ಸುದ್ದಿ ಹೇಳಿದೆನಾ? ಚಿಕ್ಕಂದಿನಲ್ಲಿ ಬಚ್ಚಲು ನೋಡಿದರೆ ಸಾಕು ರಗಳೆ ಮಾಡುತ್ತಿದ್ದೆನಂತೆ. ಆಮೇಲೆ ನಮ್ಮಜ್ಜಿ ಒಮ್ಮೆ ಜ್ಯೋತಿಷಿಗೆ ಕೇಳಿದರಂತೆ. ಆಕೆಗೆ ಜಲಕಂಟಕವಿದ್ದು, ದೇವರೇ ಅವಳನ್ನು ಹಾಗೆ ಆಡಿಸುತ್ತಿದ್ದಾನೆ ಅಂದನಂತೆ. ನಿಮ್ಮೊಂದಿಗೆ ನಾನೀಗ ಕೆರೆಗೆ ಬಂದರೆ ನನ್ನ ಕಥೆ ಹೋಗಲಿ ನಿಮ್ಮ ಮೈದುನ ಮತ್ತು ಮಗುವಿನ ಕಥೆಯೇನು?’

ಬಾಬೀನಿಗೆ ಸುತ್ತಿದ ರೀಲುದಾರದ ಗುಂಜು ಕತ್ತರಿಸಲು ಕತ್ತರಿ ಹುಡುಕಹತ್ತಿದೆ.

‘ಹೌದಾ?! ಸರಿ ಹಾಗಿದ್ದರೆ ನೀನು ಕೆರೆಯ ದಡದಲ್ಲೇ ಕುಳಿತಿರು. ನಾವೇ ನಿನ್ನ ಹಾಸಿಗೆಗಳನ್ನೂ ಒಗೆದುಕೊಡುತ್ತೇವೆ.’ ನಾದಿನಿ ತಲೆ ಓಡಿಸಿದಳು.

‘ಹಾಯ್ ರೇ! ಹಾಗೇನಾದರೂ ಮಾಡಿದರೆ ನನ್ನ ಕಥೆ ಹೋಗಿ ಕಾದಂಬರಿಯೇ. ಬೇಕಿದ್ದರೆ ಕೆರೆಗೆ ಇಳಿದು ಪ್ರಾಣ ಕಳೆದುಕೊಂಡೇನು, ಆದರೆ ನಿಮ್ಮೆಲ್ಲರಿಗೆ ಹೊರೆಯಾಗಿರುವುದನ್ನು ಆ ಖುದಾ ಖಂಡಿತ ಕ್ಷಮಿಸಲಾರ. ಕಪ್ಪೆಗಳ ವಟಗುಡುವಿಕೆ ಕೇಳಿದ ದಿನವೇ ನಾನು ಕಿವುಡಿಯಾಗುವೆನೆಂದೂ, ಹಾರುವ ಹದ್ದುಗಳ ನೆರಳು ಸೋಕಿದ ದಿನವೇ ರಟ್ಟೆಗಳ ಬಲ ಕಳೆದುಕೊಳ್ಳುವೆನೆಂದು ಆ ಜ್ಯೋತಿಷಿ ನುಡಿದಿದ್ದಾನಂತೆ. ಈ ಕಾಲದವಳಾದ ನನಗೂ ಇದನ್ನೆಲ್ಲ ನಂಬಲು ತುಸು ಕಷ್ಟವೇ ಬಿಡಿ. ನಿಮ್ಮಂತೆ ವಾರಕ್ಕೊಮ್ಮೆಯಾದರೂ ಗಂಡುಗಚ್ಚೆ ಹಾಕಿ ಕೆರೆಗೆ ಇಳಿದು ತೊಡೆಗಳನ್ನು ನೀರಲ್ಲಿ ಮುಳುಗಿಸಿಕೊಳ್ಳಬೇಕು. ರಟ್ಟೆ ಸೋಲುವ ತನಕ ಬಟ್ಟೆಗಳನ್ನು ಕುಕ್ಕಬೇಕು. ದಡದಲ್ಲಿ ಕುಳಿತು ಬಿರುಕು ಬಿಟ್ಟ ಹಿಂಬಡಗಳನ್ನು ಉಜ್ಜಬೇಕು, ಕೈಕಾಲುಗಳ ಕೊಳೆ ತಿಕ್ಕಿತಿಕ್ಕಿ ಅವುಗಳ ನಿಜಬಣ್ಣ ನೋಡಬೇಕು ಅಂತೆಲ್ಲಾ ಎಷ್ಟು ಅನ್ನಿಸುತ್ತದೆ. ಅಷ್ಟೇ ಯಾಕೆ? ನೀವು ನಿಮ್ಮ ಗಂಡಂದಿರೊಂದಿಗೆ ಹನಿಮೂನಿಗೆ ಹೋದಾಗ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ನೀವಿಬ್ಬರೂ ಕೈಜೋಡಿಸಿ ಬೊಗಸೆಯಲ್ಲಿ ಹಿಡಿದ ಫೋಟೋ ನೋಡಿದಾಗಲಂತೂ! ನೀವು ನಿಜಕ್ಕೂ ಭಾಗ್ಯಶಾಲಿಗಳು.’

ಆಟೋ ತುಸು ಜೋರಾಗಿಯೇ ಹೊಗೆ ಬಿಡುತ್ತ ತಿರುವು ದಾಟಿಕೊಂಡಿತು.

ದಿನಕಳೆದಂತೆ ನನ್ನ ಪುಸ್ತಕದ ಶೆಲ್ಫು ಒಂದೊಂದೇ ಹಲ್ಲುಗಳನ್ನು ಕಳೆದುಕೊಳ್ಳುತ್ತಿತ್ತು. ಹೊಸ ಹಲ್ಲು ಬಂದಾಗ ಇನ್ನೂ ಕಳೆಕಳೆಯಾಗಿ ಕಾಣುತ್ತಿತ್ತು. ಈಗೀಗ ಸೀಮಾಳ ಮನೆ ಬಾಗಿಲುಗಳು ಮಧ್ಹಾಹ್ನವೂ ತೆರೆದುಕೊಂಡೇ ಇರುತ್ತಿದ್ದವು.

ಅನ್ವರ್ ಯಾವ ದಿನಗಳಲ್ಲೂ ಗಾಣದೆತ್ತಿನಂತೆ ಅಣ್ಣಂದಿರ ಕೈಕೆಳಗೆ ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದುದರಿಂದ ಭಾನುವಾರವೂ ಅವನಿಗೆ ಬಿಡುವಿರುತ್ತಿರಲಿಲ್ಲ. ಆದರೆ ಯಾವಾಗ ಉಣಕಲ್ ವಿಹಾರ ನಿಂತಿತೋ ಆಗಿನಿಂದ ನಡುರಾತ್ರಿಯೂ ಕಿಟಕಿಯಿಂದ ಪಾಪ್ ಕಾರ್ನ್ಗಳು ಸಿಡಿಯಹತ್ತಿದವು. ಹೀಗಾದಾಗೆಲ್ಲಾ ಕಾಂಪೌಂಡಿನ ಮೂಲೆಯಲ್ಲಿದ್ದ ಪಾಯಖಾನೆಯಲ್ಲಿ ಗಂಟೆಗಟ್ಟಲೆ ಲೈಟು ಉರಿಯಲು ಶುರುವಾಯಿತು. ಕೆಲವೊಮ್ಮೆ ಅದು ಬೆಳಗಿನ ಜಾವದ ತನಕವೂ ಉರಿಯುತ್ತಿತ್ತು.

ಈ ಸಲ ಭಾನುವಾರವೇ ಆಟೋ ಬಂದು ನಿಂತಿತು. ಆದರೆ ಇಳಿದಿದ್ದು ಸಾಧಾರಣ ಮೈಕಟ್ಟಿನ ತುಸು ಎತ್ತರವೆನ್ನಿಸುವ ಸೀಮಾಳ ವಯಸ್ಸಿನ ಆಸುಪಾಸಿನವಳು. ಕೂದಲನ್ನು ಭುಜದ ತನಕ ಇಳಿಬಿಟ್ಟು ಹೈಹೀಲ್ಡ್ ಚಪ್ಪಲಿ ಧರಿಸಿದ್ದಳು. ತಿಳಿನೀಲಿ ಬಣ್ಣದ ಸೆಲ್ವಾರ್ನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದಳು. ಕಾಲೇಜು ಮುಗಿಸಿ ಯಾವುದೋ ನೌಕರಿಗೆ ಸೇರಿರಬಹುದೆಂದು ಅವಳ ನಡೆಯಿಂದ ಅಂದಾಜಿಸಬಹುದಾಗಿತ್ತು. ಕೈಯಲ್ಲಿ ತಿಂಡಿತಿನಿಸು, ಆಟಿಕೆಯ ಪೊಟ್ಟಣಗಳಿದ್ದವು. ಸುಮಾರು ಎರಡು ತಾಸುಗಳ ನಂತರ ಅವರಿಬ್ಬರೂ ಹೊರಬಂದರು. ಗೇಟಿನ ಬಳಿ ಬೀಳ್ಕೊಡುವಾಗ ಒಂದು ಲಕೋಟೆಯನ್ನು ಸೀಮಾ ಆಕೆಗೆ ಕೊಟ್ಟಳು.

ಒಣಹಾಕಿದ ಫಾಲುಗಳಲ್ಲಿ ಒಂದು ಹಾರಿ ರಸ್ತೆಮಧ್ಯೆ ಬಿದ್ದಿದ್ದರಿಂದ ಗೇಟಿನೊಳಗೆ ಆಟವಾಡಿಕೊಳ್ಳುತ್ತಿದ್ದ ನಯೀಮ್, ಹೊರಬಂದು ಅದನ್ನೆತ್ತಿಕೊಂಡು ಓಡಾಡಹತ್ತಿದ. ಗಾಳಿ ಅದರ ಬೆನ್ನಿಗೆ ಒತ್ತುಕೊಡುತ್ತಿದ್ದಂತೆ ಮೆಲ್ಲಗೆ ಹಾರುವ ಆಸೆ ಚಿಗುರಿಸಿಕೊಳ್ಳುತ್ತಿತ್ತು.

ಆ ರಾತ್ರಿ ಕೂಡ ಪಾಪ್ಕಾರ್ನ್ ರೋಡಿಗೂ ಬಂದು ಬೀಳುತ್ತಿದ್ದವು. ಅವು ಬೀದಿದೀಪದ ಬೆಳಕಿನಲ್ಲಿ ಹಾರಿಕೊಂಡು ಹೋದಷ್ಟೂ ಪಾಯಖಾನೆಯ ಲೈಟು ಪ್ರಜ್ವಲವಾಗಿ ಉರಿಯುತ್ತಿತ್ತು.

ಮರುದಿನ ಬೆಳಿಗ್ಗೆ ಅನ್ವರ್ ಫ್ಯಾಕ್ಟರಿಗೆ ಹೋಗದೆ ನಯೀಮನನ್ನು ಕಾಂಪೌಂಡ್ ಮೇಲೆ ಕೂರಿಸಿಕೊಂಡು ಆಟವಾಡಿಸುತ್ತಿದ್ದ. ನೋಟಬುಕ್ಕಿನ ಒಂದೊಂದೇ ಹಾಳೆಗಳನ್ನು ರಾಕೆಟ್ ಮಾಡಿ ತೂರಿಬಿಡುತ್ತಿದ್ದ. ಅದರಲ್ಲೊಂದು ನನ್ನ ಕಿಟಕಿ ದಾಟಿಕೊಂಡು ಬಂದಿತು.

ಚಿಟ್ಟೆಯ ಹಾರುವಿಕೆ ನನ್ನನ್ನು ಈ ತನಕ ಯಾಕೆ ಸೆಳೆಯಲಿಲ್ಲ?

ಅದರ ರೆಕ್ಕೆಯ ಬಣ್ಣದಹುಡಿ ನನ್ನ ಬೆರಳುಗಂಟಿದ್ದರಲ್ಲೇ ಉತ್ತರವಿತ್ತು;

ಬಾಲ್ಯದ ಪ್ರಶ್ನೆಗಳಿಗೆ ದೇವರು ಹೀಗೆಲ್ಲ

ಉತ್ತರ ಕಂಡುಕೊಳ್ಳುವಂತೆ ಮಾಡುತ್ತಾನೆ.

-ಸೀತಾ

ಮತ್ತಷ್ಟು ರಾಕೆಟ್‌ಗಳು ತೂರಿಬರಲೆಂದು ಕಿಟಕಿಯ ಎಲ್ಲ ಬಾಗಿಲುಗಳನ್ನೂ ತೆರೆದೆ. ಆದರೆ ಆಟ ಮುಗಿಸಿದ ಅಪ್ಪ ಮಗ ಒಳಹೋದರು. ಸ್ವಲ್ಪ ಹೊತ್ತಿಗೆ ಮಿನಿ ಟ್ರಕ್ಕೊಂದು ಬಂದು, ತಾಸಿನಲ್ಲೇ ಸಾಮಾನುಗಳನ್ನೆಲ್ಲ ತುಂಬಿಕೊಂಡು ಹೊರಟಿತು. ಅನ್ವರ್ ಬೈಕು ನಿಲ್ಲಿಸಿ, ಬೇರೆ ಮನೆಗೆ ಶಿಫ್ಟ್ ಆಗುತ್ತಿದ್ದೇವೆ. ನಂತರ ವಿಳಾಸ ತಿಳಿಸುತ್ತೇವೆ, ಆಗಾಗ ಬರುತ್ತಿರಿ ಎಂದು ಕೈಬೀಸಿದ. ಕಥೆಯ ಪುಸ್ತಕಗಳನ್ನು ಹಿಂದಿರುಗಿಸಲು ಬಂದ ಸೀಮಾಳ ಕಣ್ಣಲ್ಲಿ ನದಿ ಹೆಪ್ಪುಗಟ್ಟಿದಂತಿತ್ತು. ಹಿಂದಿಂದೆ ಓಡಿಬಂದ ನಯೀಮ್ ಗೊಂಬೆಯೊಂದಿಗೆ ಆಟವಾಡುತ್ತ, ಅದನ್ನು ಡಬ್ಬು ಮಲಗಿಸಿ ಝಿಪ್ಪು ಎಳೆದು ಅಂಗಿ ಬಿಚ್ಚಿದ.

ಅವರು ಹೋದ ನಂತರ ಕಾಂಪೌಂಡಿನೊಳಗೆ ಬಿದ್ದ ರಾಕೆಟ್‌ಗಳನ್ನೆತ್ತಿಕೊಂಡು ಒಳಬಂದೆ.

ಹದಿನೈದು ದಿನಗಳಾದರೂ ಅವರು ನಮ್ಮ ಮನೆಗೆ ಒಮ್ಮೆಯೂ ಹಾದು ಹೋಗಲಿಲ್ಲ, ತಾವಿರುವ ವಿಳಾಸವನ್ನೂ ಕೊಡಲಿಲ್ಲ. ಹೊಸ ಜಾಗ ಹೊಸ ಜನರೊಂದಿಗೆ ಮರೆತುಹೋಗಿರಬಹುದು ಎಂದೆಲ್ಲ ಎಳಸಾದ ಸಬೂಬುಗಳನ್ನು ಮನಸ್ಸಿಗೆ ಕೊಟ್ಟುಕೊಳ್ಳಲು ರಾಕೆಟ್ನೊಳಗಿನ ಸಾಲುಗಳು ಬಿಡಲಿಲ್ಲ. ಹೊರಗೆ ಧೋ ಮಳೆ, ರಾತ್ರಿ ಹನ್ನೊಂದು. ಒಂದೊಂದನ್ನೇ ಬಿಚ್ಚಿ ಓದುತ್ತಿರುವಾಗ ಲ್ಯಾಂಡ್ಲೈನ್ ರಿಂಗ್. ‘ದೀದಿ, ಸೀಮಾ ನಿಮ್ಮ ಮನೆಗೇನಾದರೂ ಬಂದಿದ್ದಾಳಾ?’ ಅನ್ವರ್‌ನ ಧ್ವನಿ ನಡುಗುತ್ತಿತ್ತು.

ಈ ಕ್ಷಣದಿಂದಲೇ ನೀನು

ಒಂದೊಂದು ಹೆಜ್ಜೆ ಊರುವಾಗಲೂ

ಯಾರೋ ಹಿಂಬಾಲಿಸುತ್ತಿದ್ದಾರೆ ಎನ್ನಿಸಬಹುದು

ತಿರುಗಿ ನೋಡಬೇಡ;

ನಿನ್ನ ಪಾದಗಳಿಂದ ಬಿಡುಗಡೆ ಪಡೆದ

ಒಂದೊಂದು ನೋವಿನ ಕಣವನ್ನೂ

ದೇವರು ಹೀರಿಕೊಳ್ಳುತ್ತಿರುತ್ತಾನೆ.

-ಸೀತಾ

ಸೀಮಾಳ ಕನವರಿಕೆಯಲ್ಲೇ ಮರುದಿನ ಮಧ್ಯಾಹ್ನ ಪೋಸ್ಟ್‌ಮ್ಯಾನ್ ಎಸೆದು ಹೋದ ಮ್ಯಾಗಝೀನ್ ಎತ್ತಿಕೊಂಡೆ. ಕಥೆಯ ಪುಟವೊಂದು ತೆರೆದು ಬ್ಲರ್ಬ್ ಓದಿಸಿಕೊಳ್ಳಹತ್ತಿತು.

‘ನನ್ನಮ್ಮನ ಅಸ್ಥಿಗೆ ಸಾಕ್ಷಿಯಾದ ಕಾಳಿಯೇ ಇಲ್ಲಿಯೂ ಹರಿದು ಬಂದಿದ್ದಾಳೆ ಎಂಬುದು ಗೊತ್ತಾದ ದಿನವೇ ನಾನು ಆಗಾಗ ಕ್ಲಾಸಿನಲ್ಲಿ ಟೀಚರ್, ಹಾಸ್ಟೆಲಿನಲ್ಲಿ ವಾರ್ಡನ್ ಕಣ್ಣು ತಪ್ಪಿಸಿ ಓಡೋಡಿ ಬರಲು ಶುರುಮಾಡಿದೆ. ತಾಸುಗಟ್ಟಲೆ ಹರಿವಿನಲ್ಲಿ ಕಾಲಿಳಿಬಿಟ್ಟು ಕೂತರೂ ಸಮಾಧಾನವೆನ್ನಿಸದಿದ್ದಾಗ ನಟ್ಟನಡುವಿನ ಕಲ್ಲಿನ ಮೇಲೆ ಸ್ವಲ್ಪ ಹೊತ್ತು ಮಲಗೆದ್ದು ಬರುತ್ತಿದ್ದೆ. ನನ್ನ ಪಾಲಿಗದು ಜಗತ್ತಿನ ಅತೀ ಮೃದುವಸ್ತುಗಳಲ್ಲೊಂದು ಅನ್ನಿಸುತ್ತಿತ್ತು.

ಒಂದು ದಿನವೂ ಕಾಡುಪ್ರಾಣಿಗಳ ಬಾಯಿಗೆ ಸಿಕ್ಕಿಹಾಕಿಕೊಳ್ಳದಿದ್ದರೂ ಪಟಗುಡಿಯ ಭತ್ತದಗದ್ದೆಗಳ ಜಿಗುಟಿನಿಂದ ಮಾತ್ರ ನನ್ನ ಚಪ್ಪಲಿಗಳನ್ನು ರಕ್ಷಿಸಿಕೊಳ್ಳಲಾಗುತ್ತಿರಲೇ ಇಲ್ಲ. ಪ್ರತೀ ವಾರವೂ ಪತ್ರದಲ್ಲಿ ಒಂದು ಜೊತೆ ಹೊಸ ಚಪ್ಪಲಿಗಳ ಬೇಡಿಕೆ ಇಡುತ್ತಿದ್ದೆ, ಕಳಿಸುತ್ತಿದ್ದರು. ಆದರೆ ಅಪ್ಪನಿಗೆ ಈ ಬಗ್ಗೆ ಒಂದು ಸಲವೂ ಪ್ರಶ್ನೆಯೇ ಹುಟ್ಟಲಿಲ್ಲವೆ?

-ಸೀಮಾ ತಾಳಿಕೋಟಿ (ಸೀತಾ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT