ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Asian Games ವಾಲಿಬಾಲ್‌: ಎಂಟರ ಘಟ್ಟಕ್ಕೆ ಭಾರತ

ತೈಪೆ ವಿರುದ್ಧ ನೇರ ಸೆಟ್‌ಗಳ ಜಯ
Published 22 ಸೆಪ್ಟೆಂಬರ್ 2023, 11:28 IST
Last Updated 22 ಸೆಪ್ಟೆಂಬರ್ 2023, 11:28 IST
ಅಕ್ಷರ ಗಾತ್ರ

ಹಾಂಗ್‌ಝೌ: ಸ್ಫೂರ್ತಿಯುತ ಪ್ರದರ್ಶನ ಮುಂದುವರಿಸಿದ ಭಾರತ ವಾಲಿಬಾಲ್‌ ಪುರುಷರ ತಂಡ ಶುಕ್ರವಾರ 3–0 ಯಿಂದ ಚೀನಾ ತೈಪೆ ತಂಡವನ್ನು ಸೋಲಿಸಿ ಏಷ್ಯನ್ ಗೇಮ್ಸ್‌ ಸ್ಪರ್ಧೆಯ ಕ್ವಾರ್ಟರ್‌ಫೈನಲ್ ತಲುಪಿತು. ಭಾರತ ಭಾನುವಾರ ನಡೆಯುವ ಪಂದ್ಯದಲ್ಲಿ ಜಪಾನ್ ಅಥವಾ ಕಜಕಸ್ತಾನ ತಂಡವನ್ನು ಎದುರಿಸಲಿದೆ.

ಭಾರತ ಒಂದು ಗಂಟೆ 25 ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ 25–22, 25–22, 25–21 ರಿಂದ ತೈಪೆ ತಂಡವನ್ನು ಸೋಲಿಸಿತು.

‘ಅವರದು (ತೈಪೆ) ಅನುಭವಿ ತಂಡ. ವೇಗವಾಗಿ ಆಡುತ್ತಾರೆ. ಮೊದಲ ಎರಡು ಸೆಟ್‌ಗಳಲ್ಲಿ ಮುನ್ನಡೆಯನ್ನೂ ಪಡೆದಿದ್ದರು. ಆದರೆ ನಾವು ಸಕಾಲದಲ್ಲಿ ಅವರನ್ನು ಹಿಂದೆಹಾಕಿ ಮತ್ತೆ ಮುನ್ನಡೆ ಪಡೆದೆವು’ ಎಂದು ತಂಡದ ನಾಯಕ ವಿನೀತ್ ಪಂದ್ಯದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಮೊದಲ ಸೆಟ್‌ನ ಬಹುತೇಕ ಸಮಯ ಹಿಂದಿದ್ದ ಭಾರತ ಕೊನೆಗೂ 21–21ರಲ್ಲಿ ಸಮ ಮಾಡಿಕೊಂಡಿತು. ಈ ಹಂತದಲ್ಲಿ ಎರಿನ್ ವರ್ಗಿಸ್ ಮತ್ತು ಅಶ್ವಲ್ ರೈ ಮುನ್ನಡೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಎರಡನೇ ಸೆಟ್‌ನಲ್ಲೂ ಉತ್ತಮ ಹೋರಾಟ ಕಂಡುಬಂದು ಸ್ಕೋರ್ ಒಂದು ಹಂತದಲ್ಲಿ 17–17 ಸಮನಾಗಿತ್ತು. ಆದರೆ ನಿರ್ಣಾಯಕ ಸಂದರ್ಭದಲ್ಲಿ ಭಾರತ ಬೆನ್ನುಬೆನ್ನಿಗೆ ಪಾಯಿಂಟ್‌ ಕಲೆಹಾಕಿತು. ಮೂರನೇ ಸೆಟ್‌ನಲ್ಲಿ ಭಾರತ ಸಕಾರಾತ್ಮಕ ಆರಂಭ ಮಾಡಿ 10–4ರಲ್ಲಿ ಉತ್ತಮ ಮುನ್ನಡೆ ಹೊಂದಿತ್ತು. ಆದರೆ ತೈಪೆ ಆಟಗಾರರು ಪ್ರತಿಹೋರಾಟ ನೀಡಿ ಹಿನ್ನಡೆಯನ್ನು 10–12ಕ್ಕೆ ಇಳಿಸಿದರು. ಸ್ಕೋರ್ ಒಂದು ಹಂತದಲ್ಲಿ 14–14ರಲ್ಲಿ ಸಮನಾಗಿತ್ತು. ಆದರೆ ಭಾರತ ಮತ್ತೆ 21–18ರಲ್ಲಿ ಮುನ್ನಡೆ ಸಾಧಿಸಿತಲ್ಲದೇ, ಅಂತಿಮವಾಗಿ 25–21ರಲ್ಲಿ ಮೂರನೇ ಸೆಟ್‌ನಲ್ಲೂ ಜಯಗಳಿಸಿತು.

‘ಪಾಕಿಸ್ತಾನವೂ ಅವರನ್ನು (ತೈಪೆ) 3–0ಯಿಂದ ಸೋಲಿಸಿತ್ತು. ಹೀಗಾಗಿ ನಾವು ಅವರನ್ನು ಸೋಲಿಸಲೇಬೇಕಾದ ಒತ್ತಡದಲ್ಲಿದ್ದೆವು’ ಎಂದು ಸಹಾಯಕ ಕೋಚ್‌ ಜೈದೀಪ್ ಸರ್ಕಾರ್ ಹೇಳಿದರು.

‘ಕೊರಿಯಾ ಮತ್ತು ಚೀನಾ ತೈಪೆ ತಂಡಗಳ ಮೇಲೆ ಬೆನ್ನುಬೆನ್ನಿಗೆ ಗಳಿಸಿದ ಜಯಗಳಿಂದ ಭಾರತ ಈಗ ಜಪಾನ್ ತಂಡವನ್ನು ವಿಶ್ವಾಸದಿಂದ ಎದುರಿಸಲು ಸಜ್ಜಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT