ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾವಸ್ತುಗಳ ದರ ಏರಿಕೆ: ಕೇಂದ್ರದ ವಿರುದ್ಧ ಉದ್ಯಮಿಗಳ ಆಕ್ರೋಶ, ₹500 ಕೋಟಿ ನಷ್ಟ

Last Updated 20 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ಉಕ್ಕು ಹಾಗೂ ಇತರ ಕಚ್ಚಾವಸ್ತುಗಳ ದರ ಏರಿಕೆಯನ್ನು ಖಂಡಿಸಿ ವಿವಿಧ ಸಂಘಟನೆಗಳು ಪೀಣ್ಯ ಕೈಗಾರಿಕಾ ‍ಪ್ರದೇಶದಲ್ಲಿನ ಸಣ್ಣ ಕೈಗಾರಿಕೆಗಳನ್ನು ಬಂದ್‌ ಮಾಡಿ ಸೋಮವಾರ ಮೌನ ಪ್ರತಿಭಟನೆ ನಡೆಸಿದವು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ), ಪೀಣ್ಯ ಕೈಗಾರಿಕಾ ಸಂಘ, ಬೆಂಗಳೂರು ಸಣ್ಣ ಕೈಗಾರಿಕೆಗಳ ಸಂಘ (ಬಾನ್ಸಿಯಾ), ರಾಜಾಜಿನಗರ ಕೈಗಾರಿಕೆಗಳ ಸಂಘ, ಬೆಂಗಳೂರು ಉತ್ತರ ಸಣ್ಣ ಕೈಗಾರಿಕೆಗಳ ಸಂಘ, ಬೆಂಗಳೂರು ಕೇಂದ್ರ ಸಣ್ಣ ಕೈಗಾರಿಕೆಗಳ ಸಂಘ, ಬೊಮ್ಮನಹಳ್ಳಿ ಕೈಗಾರಿಕಾ ಸಂಘ ಸೇರಿದಂತೆ ಇತರ ಸಂಘಗಳ ಸದಸ್ಯರು ‘ಕಚ್ಚಾವಸ್ತುಗಳ ಮೇಲಿನ ರಫ್ತು ಸುಂಕ ಇಳಿಸಿ’, ‘ದೇಶದಾದ್ಯಂತ ಏಕ ರೀತಿಯ ಕಚ್ಚಾ ವಸ್ತು ದರ ನಿಗದಿಪಡಿಸಿ’ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ ಮೆರವಣಿಗೆಯಲ್ಲಿ ಸಾಗಿದರು.

‘ಉಕ್ಕು ಮತ್ತು ಇತರ ಕಚ್ಚಾ ವಸ್ತುಗಳ ಬೆಲೆಗಳನ್ನು ತಕ್ಷಣವೇ ಇಳಿಸಬೇಕು. ಇಂಧನ ದರವನ್ನೂ ಕಡಿಮೆ ಮಾಡಬೇಕು. ಜಿಎಸ್‌ಟಿ ಶೀಘ್ರ ಮರುಪಾವತಿ ವ್ಯವಸ್ಥೆ ಜಾರಿಗೊಳಿಸಬೇಕು. ತೆರಿಗೆ ದರ ಕಡಿತಗೊಳಿಸುವ ಜೊತೆಗೆ ಇಡೀ ಪ್ರಕ್ರಿಯೆಯನ್ನು ಸರಳೀಕರಿಸಬೇಕು’ ಎಂದು ಆಗ್ರಹಿಸಿದರು.

‘ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವ ಪ್ರಕ್ರಿಯೆಯನ್ನೂ ಸರಳಗೊಳಿಸಬೇಕು. ಕೃಷಿಕರಿಗೆ ನೀಡುವ ಬಡ್ಡಿದರದಲ್ಲೇ ಸಣ್ಣ ಕೈಗಾರಿಕೆಯವರಿಗೂ ಸಾಲ ನೀಡಬೇಕು. ಇಎಸ್‌ಐ ಹಾಗೂ ಪಿಎಫ್‌ ಇಲಾಖೆಗಳನ್ನು ವಿಲೀನಗೊಳಿಸಬೇಕು. ರಫ್ತುದಾರರ ಕಂಟೈನರ್‌ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು’ ಎಂದೂ ಒತ್ತಾಯಿಸಿದರು.

ಕಾಸಿಯಾ ಮಾಜಿ ಅಧ್ಯಕ್ಷ ಆರ್‌.ರಾಜು, ‘ಇಂಧನ ದರ ದಿನೇ ದಿನೇ ಹೆಚ್ಚುತ್ತಿದೆ. ಪ್ಲಾಸ್ಟಿಕ್‌, ಕಬ್ಬಿಣ, ಅಲ್ಯುಮಿನಿಯಂ ಸೇರಿ ಎಲ್ಲಾ ಕಚ್ಚಾವಸ್ತುಗಳ ಬೆಲೆಯೂ ದ್ವಿಗುಣಗೊಂಡಿದೆ. ಇದರಿಂದ ಸಣ್ಣ ಕೈಗಾರಿಕೆಗಳನ್ನೇ ಅವಲಂಬಿಸಿದ್ದವರ ಬದುಕು ಬೀದಿಗೆ ಬಂದಿದೆ’ ಎಂದರು.

‘ದೇಶದಲ್ಲಿ ತಯಾರಾಗುವ ಉಕ್ಕನ್ನು ಸ್ಥಳೀಯ ಮಾರುಕಟ್ಟೆಗೆ ಒದಗಿಸಬೇಕು. ವಿದೇಶಗಳಿಗೆ ಯಥೇಚ್ಛವಾಗಿ ರಫ್ತು ಮಾಡುವುದನ್ನು ನಿಲ್ಲಿಸಬೇಕು. ಕೋವಿಡ್‌ನಿಂದ ಅನೇಕ ಸಣ್ಣ ಕೈಗಾರಿಕೆಗಳಿಗೆ ಬೀಗ ಬಿದ್ದಿದೆ. ಸರ್ಕಾರ ತನ್ನ ಧೋರಣೆ ಬದಲಿಸದಿದ್ದರೆ ಉಳಿದ ಕೈಗಾರಿಕೆಗಳೂ ಅಳಿವಿನ ಅಂಚಿಗೆ ನೂಕಲ್ಪಡುತ್ತವೆ. ಬರುವ ಆದಾಯ ಬ್ಯಾಂಕ್‌ ಸಾಲ ತೀರಿಸುವುದಕ್ಕೆ ಸರಿಹೋಗುತ್ತಿದೆ. ಕಾರ್ಮಿಕರ ವೇತನಕ್ಕಾಗಿ ಮತ್ತೆ ಸಾಲ ಮಾಡಬೇಕಾದ ಅನಿವಾರ್ಯವಾಗಿದೆ. ಹೀಗಾಗಿ ಕೈಗಾರಿಕೆಗಳ ಮಾಲೀಕರ ಬದುಕು ಶೋಚನೀಯವಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದೇ ದಿನದಲ್ಲಿ ₹500 ಕೋಟಿ ನಷ್ಟ
‘ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ದಿನದ ಮಟ್ಟಿಗೆ ಕೈಗಾರಿಕೆಗಳನ್ನು ಬಂದ್‌ ಮಾಡಲಾಗಿತ್ತು. ಇದರಿಂದ ಸರ್ಕಾರಕ್ಕೆ ಸುಮಾರು ₹500 ಕೋಟಿ ನಷ್ಟವಾಗಿದೆ. ಜಿಎಸ್‌ಟಿ ಮೂಲಕವೇ ಪ್ರತಿವರ್ಷ ಸುಮಾರು ₹700 ಕೋಟಿ ಸರ್ಕಾರದ ಬೊಕ್ಕಸ ಸೇರುತ್ತದೆ. ಬೆಸ್ಕಾಂಗೆ ₹500 ಕೋಟಿ ಆದಾಯ ಸಿಗುತ್ತದೆ. ನಮ್ಮ ಬೇಡಿಕೆ ಈಡೇರದಿದ್ದರೆ ಹೋರಾಟದ ಸ್ವರೂಪ ಬದಲಾಗಲಿದೆ. ಹೋರಾಟ ತೀವ್ರಗೊಂಡರೆ ಸರ್ಕಾರಕ್ಕೇ ನಷ್ಟ’ ಎಂದುಪೀಣ್ಯ ಕೈಗಾರಿಕೆ ಸಂಘದ ಅಧ್ಯಕ್ಷ ಬಿ.ಮುರಳಿಕೃಷ್ಣ ಹೇಳಿದರು.

‘ಪೀಣ್ಯದಲ್ಲಿ ಒಟ್ಟು 16 ಸಾವಿರ ಕೈಗಾರಿಕೆಗಳಿವೆ. ಇವುಗಳಲ್ಲಿ 10 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. 5 ಲಕ್ಷ ಮಂದಿ ಮಹಿಳಾ ನೌಕರರೇ ಇದ್ದಾರೆ. ಎರಡು ವರ್ಷದಿಂದ ಕಚ್ಚಾವಸ್ತುಗಳ ಬೆಲೆ ಏರುತ್ತಲೇ ಇದೆ. ಇದರಿಂದ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ ದೊಡ್ಡ ಪೆಟ್ಟು ಬೀಳುತ್ತಿದೆ’ ಎಂದರು.

*
ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದಾಗಿ ಹೇಳುವ ಸರ್ಕಾರ, ಕಚ್ಚಾವಸ್ತುಗಳ ಬೆಲೆ ಏರಿಸುತ್ತಲೇ ಇದೆ. ಕಾರ್ಮಿಕರ ಬದುಕು ಬೀದಿಗೆ ಬೀಳುತ್ತಿದೆ
–ಆರ್‌.ರಾಜು, ಕಾಸಿಯಾ ಮಾಜಿ ಅಧ್ಯಕ್ಷ

*
ಕೋವಿಡ್‌ನಿಂದ ತತ್ತರಿಸಿದ್ದ ಕೈಗಾರಿಕೆಗಗಳನ್ನು ಕಚ್ಚಾವಸ್ತುಗಳ ದರ ಏರಿಕೆಯು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಸರ್ಕಾರ ಕೂಡಲೇ ತೆರಿಗೆ, ಇಂಧನ ದರ ಇಳಿಸಲಿ.
–ಜೈಕುಮಾರ್‌, ಬೆಂಗಳೂರು ಸಣ್ಣ ಕೈಗಾರಿಕೆಗಳ ಸಂಘದ (ಬಾನ್ಸಿಯಾ) ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT