ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ಕುಸಿತ: ಮ್ಯೂಚುವಲ್ ಫಂಡ್‌ಗಳಲ್ಲಿ ‘ಎಸ್‌ಐಪಿ’ ನಿಲ್ಲಿಸಬೇಡಿ

Last Updated 15 ಮಾರ್ಚ್ 2020, 19:52 IST
ಅಕ್ಷರ ಗಾತ್ರ

ಷೇರುಪೇಟೆ ಸಂವೇದಿ ಸೂಚ್ಯಂಕವು ಒಂದೇ ತಿಂಗಳಲ್ಲಿ ಸುಮಾರು 8 ಸಾವಿರ ಅಂಶಗಳ ಕುಸಿತ ಕಂಡಿದೆ. ‘ಕೊರೊನಾ–2’ ವೈರಸ್‌ ವ್ಯಾಪಕವಾಗಿ ಹರಡುತ್ತಿರುವುದರಿಂದ ಮುಂದೇನಾಗುತ್ತೋ ಎನ್ನುವ ಆಂತಕ ಮನೆ ಮಾಡಿದೆ. ಪರಿಸ್ಥಿತಿ ಹೀಗಿರುವಾಗ ಮ್ಯೂಚುವಲ್ ಫಂಡ್ ಹೂಡಿಕೆದಾರರು ಎಸ್ಐಪಿ ( ವ್ಯವಸ್ಥಿತ ಹೂಡಿಕೆ ಯೋಜನೆ) ಸ್ಥಗಿತಗೊಳಿಸಬೇಕೆ ಅಥವಾ ಮುಂದುವರಿಸಬೇಕೆ ಎಂಬ ಗೊಂದಲದಲ್ಲಿದ್ದಾರೆ. ಹೂಡಿಕೆದಾರರ ಅನುಮಾನ ದೂರ ಮಾಡುವ ಪೂರಕ ಮಾಹಿತಿ ಇಲ್ಲಿದೆ.

ಎಸ್‌ಐಪಿ ಯಾಕೆ ನಿಲ್ಲಿಸಬಾರದು: ಮ್ಯೂಚುವಲ್ ಫಂಡ್ ಗಳ ಮೇಲೆ ಷೇರು ಮಾರುಕಟ್ಟೆಯ ಏರಿಳಿತ ಮತ್ತು ಅರ್ಥ ವ್ಯವಸ್ಥೆಯ ಸ್ಥಿತಿಗಳು ಪ್ರಭಾವ ಬೀರುತ್ತವೆ. ಒಮ್ಮೆಲೆ ಮಾರುಕಟ್ಟೆ ಕುಸಿದಾಗ ಮ್ಯೂಚುವಲ್ ಫಂಡ್ ಹೂಡಿಕೆದಾರರು ತಾತ್ಕಾಲಿಕ ನಷ್ಟ ಅನುಭವಿಸುವಂತಾಗುತ್ತದೆ. ಮ್ಯೂಚುವಲ್ ಫಂಡ್‌ನ ‘ಎನ್‌ಎವಿ’ (ನಿವ್ವಳ ಆಸ್ತಿ ಮೌಲ್ಯ) ತಗ್ಗುತ್ತಾ ಹೋದಂತೆ ಹೂಡಿಕೆದಾರರು ಚಿಂತೆಗೀಡಾಗುತ್ತಾರೆ. ಆದರೆ, ಮಾರುಕಟ್ಟೆ ಕುಸಿದ ತಕ್ಷಣ ಮ್ಯೂಚುವಲ್ ಫಂಡ್ ಹೂಡಿಕೆಯಿಂದ ಹೊರಬರಲು ಪ್ರಯತ್ನಿಸಿದರೆ ನಿಮ್ಮ ನಷ್ಟದ ಪ್ರಮಾಣ ಮತ್ತಷ್ಟು ಜಾಸ್ತಿಯಾಗುತ್ತದೆ.

ಉದಾಹರಣೆ: ನೀವು ತಿಂಗಳಿಗೆ ₹ 2 ಸಾವಿರದಂತೆ ಕಳೆದ 12 ತಿಂಗಳ ಅವಧಿಯಲ್ಲಿ ಎಸ್‌ಐಪಿ ಮೂಲಕ ಮ್ಯೂಚುವಲ್ ಫಂಡ್ಸ್‌ಗಳಲ್ಲಿ ಒಟ್ಟು ₹ 24 ಸಾವಿರ ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳೋಣ. ಮೇಲಿಂದ ಮೇಲೆ ಷೇರು ಮಾರುಕಟ್ಟೆ ಕುಸಿದ ತಕ್ಷಣ ನಿಮ್ಮ ಹೂಡಿಕೆ ₹ 19 ಸಾವಿರಕ್ಕೆ ಬರುತ್ತದೆ ಎಂದು ಭಾವಿಸೋಣ. ಹೀಗಾದಾಗ ನೀವು ಮ್ಯೂಚುವಲ್ ಫಂಡ್ ಹೂಡಿಕೆ ಹಿಂಪಡೆದರೆ ನಿಮಗೆ ಒಂದೇ ಬಾರಿ 5 ಸಾವಿರ ನಷ್ಟವಾಗುತ್ತದೆ. ಹೂಡಿಕೆ ಹೊರತೆಗೆಯುವ ಬದಲು ಎಸ್‌ಐಪಿ ಹೂಡಿಕೆ ಮುಂದುವರಿಸಿ ಮಾರುಕಟ್ಟೆ ಉತ್ತಮ ಸ್ಥಿತಿಯಲ್ಲಿದ್ದಾಗ ಹೂಡಿಕೆಯಿಂದ ಹೊರಬಂದರೆ ಹೆಚ್ಚು ಲಾಭ ಸಿಗುತ್ತದೆ. ಬಹುತೇಕರು ಈ ಮುಂದಾಲೋಚನೆ ಮಾಡದೆ ಷೇರು ಮಾರುಕಟ್ಟೆ ಹೂಡಿಕೆಯಿಂದ ದಿಢೀರ್ ಹೊರಬಂದು ನಷ್ಟ ಅನುಭವಿಸುತ್ತಾರೆ.

ಕ್ಲಿಯೋನ್ ಡಿಸೋಜ

ಮಾರುಕಟ್ಟೆ ಕುಸಿದಾಗ ಕಡಿಮೆ ಬೆಲೆಗೆ ಹೆಚ್ಚು ಯುನಿಟ್: ಮಾರುಕಟ್ಟೆ ಕುಸಿದಾಗ ಮ್ಯೂಚುವಲ್ ಫಂಡ್ ಗಳ ‘ಎನ್ ಎವಿ’ (ನಿವ್ವಳ ಆಸ್ತಿ ಮೌಲ್ಯ) ತಗ್ಗುತ್ತದೆ. ಈ ಸ್ಥಿತಿಯಲ್ಲಿ ನೀವು ಎಸ್‌ಐಪಿ ಮೂಲಕ ಹೆಚ್ಚು ಮ್ಯೂಚುವಲ್ ಫಂಡ್ ಯುನಿಟ್‌ಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಬಳಿ ಹೆಚ್ಚು ಯುನಿಟ್‌ಗಳು ಇದ್ದರೆ ಮಾರುಕಟ್ಟೆ ಪುಟಿದೆದ್ದಾಗ ನಿಮಗೆ ಹೆಚ್ಚು ಲಾಭಾಂಶ ಸಿಗುತ್ತದೆ. ಹೀಗಾಗಿ ಸಾಧ್ಯವಾದರೆ ಇನ್ನಷ್ಟು ಹೂಡಿಕೆ ಮಾಡಲು ಪ್ರಯತ್ನಿಸಬೇಕೇ ಹೊರತು ಎಸ್‌ಐಪಿಗಳನ್ನು ಸ್ಥಗಿತಗೊಳಿಸಬಾರದು.

ಎಸ್‌ಐಪಿಯಲ್ಲಿ ಪ್ರತಿ ತಿಂಗಳು ತೊಡಗಿಸಿದ ಹಣ ಆಯಾ ತಿಂಗಳಲ್ಲಿ ಕಟ್ಟಿದ ತಾರೀಕಿಗೆ ಅನುಗುಣವಾಗಿ ವಾರ್ಷಿಕ ಸರಾಸರಿ ಲೆಕ್ಕಕ್ಕೆ ಒಳಪಡುವುದರಿಂದ ನಷ್ಟ ಸಂಭವಿಸುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಎಸ್ಐಪಿ ನಿಲ್ಲಿಸ ಬಾರದು ಎನ್ನುವುದಕ್ಕೆ ಇದು ಕೂಡ ಒಂದು ಪ್ರಮುಖ ಕಾರಣ.

ಈ ಸಂಗತಿಗಳು ನೆನಪಿನಲ್ಲಿರಲಿ: ಮಾರುಕಟ್ಟೆ ಏರಿಳಿತ ಮ್ಯೂಚುವಲ್ ಫಂಡ್ ಹೂಡಿಕೆಯ ಭಾಗ ಎನ್ನುವುದು ಗೊತ್ತಿರಲಿ. ಮಾರುಕಟ್ಟೆ ಕುಸಿದ ತಕ್ಷಣ ನಿಮ್ಮ ಮ್ಯೂಚುವಲ್ ಫಂಡ್ ಹೂಡಿಕೆ ಸಂಪೂರ್ಣ ನಷ್ಟವಾಗುವುದಿಲ್ಲ. ಮಾರುಕಟ್ಟೆ ಕುಸಿಯುವಾಗ ಎಸ್‌ಐಪಿ ಯಿಂದ ಹೊರಬಂದರೆ ಒಳ್ಳೆಯ ಅವಕಾಶ ಕಳೆದುಕೊಂಡಂತೆ. ಮಾರುಕಟ್ಟೆ ಕುಸಿದಾಗ ಮ್ಯೂಚುವಲ್ ಫಂಡ್ಸ್‌ಗಳಿಂದ ಹೊರಬರುವುದು ಅತಿ ದೊಡ್ಡ ಹೂಡಿಕೆ ತಪ್ಪು. ದೀರ್ಘಾವಧಿಯಲ್ಲಿ ಮ್ಯೂಚುವಲ್ ಫಂಡ್‌ಗಳು ಶೇ 12 ರಿಂದ ಶೇ 16 ರ ವರೆಗೆ ಲಾಭಾಂಶ ಕೊಟ್ಟಿವೆ.

ಎಣಿಕೆಗೆ ಸಿಗದ ಷೇರುಪೇಟೆ ವಹಿವಾಟು

ಜನವರಿ 2008 ರಲ್ಲಿ ಸೆನ್ಸೆಕ್ಸ್ 21,000 ಅಂಶಗಳ ಗುರಿ ಮುಟ್ಟಿತ್ತು. ಆದರೆ, ಅಕ್ಟೋಬರ್ 24, 2008 ರ ವೇಳೆಗೆ ಸೆನ್ಸೆಕ್ಸ್ 8,701 ಕ್ಕೆ ಕುಸಿದಿತ್ತು. ಇದೀಗ ಅದೇ ರೀತಿಯ ಕುಸಿತವನ್ನು ಷೇರು ಪೇಟೆಯಲ್ಲಿ ಕಾಣುತ್ತಿದ್ದೇವೆ. ತಿಂಗಳ ಹಿಂದೆ 42,000 ಅಂಶಗಳಲ್ಲಿದ್ದ ಸೆನ್ಸೆಕ್ಸ್ ಈಗ ಸುಮಾರು 8,000 ಅಂಶಗಳನ್ನು ಕಳೆದುಕೊಂಡಿರುವುದು 2008ರ ಆ ಮಹಾ ಕುಸಿತವನ್ನು ನೆನಪಿಸುತ್ತಿದೆ.

ಸದ್ಯದ ಸ್ಥಿತಿಯನ್ನು ನೋಡುವುದಾದರೆ 34,103 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ 3,473 ಅಂಶಗಳನ್ನು ಕಳೆದುಕೊಂಡು ಶೇ 9.2 ರಷ್ಟು ಕುಸಿದಿದೆ. ವಾರದ ಅಂತ್ಯಕ್ಕೆ 9,955 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ 1,034 ಅಂಶಗಳ ಕುಸಿತ ದಾಖಲಿಸಿ ಶೇ 9.4 ರಷ್ಟು ಹಿನ್ನಡೆ ಅನುಭವಿಸಿದೆ. ‘ಕೊರೊನಾ–2’ ವೈರಸ್‌ ವ್ಯಾಪಕವಾಗಿ ಹರಡುತ್ತಿರುವುದರಿಂದ ಷೇರುಪೇಟೆ ಮಾರಾಟದ ಒತ್ತಡಕ್ಕೆ ಸಿಲುಕಿದೆ. ಮುಂದೆ ಸೂಚ್ಯಂಕಗಳು ಎತ್ತ ಸಾಗಬಹುದು ಎನ್ನುವುದನ್ನು ಅಂದಾಜು ಮಾಡುವುದೇ ಕಷ್ಟವಾಗಿದೆ.

ವಲಯವಾರು: ವಲಯವಾರು ಪ್ರಗತಿ ನೋಡುವುದಾದರೆ ಎಲ್ಲ ವಲಯಗಳು ಈಗ ನಕಾರಾತ್ಮಕತೆಯ ಹಾದಿ ಹಿಡಿದಿವೆ. ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮತ್ತು ನಿಫ್ಟಿ ಲೋಹ ಸುಮಾರು ಶೇ 12 ರಷ್ಟು ಕುಸಿದಿವೆ. ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 13.5 ರಷ್ಟು ತಗ್ಗಿದೆ. ಬ್ಯಾಂಕ್ ಮತ್ತು ವಾಹನ ತಯಾರಿಕಾ ವಲಯ ಶೇ 9 ರಿಂದ ಶೇ 10 ರಷ್ಟು ಹಿನ್ನಡೆ ಕಂಡಿವೆ. ಫಾರ್ಮಾ ವಲಯ ಮತ್ತು ಎಫ್‌ಎಂಸಿಜಿ ವಲಯ ಸುಮಾರು ಶೇ 9 ರಷ್ಟು ಕುಸಿತ ಕಂಡಿವೆ.

ಗಳಿಕೆ: ನಿಫ್ಟಿ 50 ಸೂಚ್ಯಂಕದಲ್ಲಿ ಯೆಸ್ ಬ್ಯಾಂಕ್, ಭಾರ್ತಿ ಇನ್ಫ್ರಾಟೆಲ್ ಮತ್ತು ಐಷರ್ ಮೋಟರ್ಸ್ ಮಾತ್ರ ಗಳಿಸಿಕೊಂಡಿವೆ.

ಯೆಸ್ ಬ್ಯಾಂಕ್ ಅನ್ನು ಬಿಕ್ಕಟ್ಟಿನಿಂದ ಹೊರತರಲು ಎಸ್‌ಬಿಐ ಮತ್ತು ಎಲ್‌ಐಸಿ ಹೂಡಿಕೆಗೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಯೆಸ್ ಬ್ಯಾಂಕ್ ಷೇರುಗಳು ಶೇ 57 ರಷ್ಟು ಜಿಗಿದಿವೆ. ಭಾರ್ತಿ ಇನ್ಫ್ರಾಟೆಲ್ ಮತ್ತು ಐಷರ್ ಮೋಟರ್ಸ್ ಕ್ರಮವಾಗಿ ಶೇ 13 ಮತ್ತು ಷೇ 0.04 ರಷ್ಟು ಹೆಚ್ಚಳ ಕಂಡಿವೆ.

ಇಳಿಕೆ: ಒಎನ್‌ಜಿಸಿ, ವೇದಾಂತ, ಗೇಲ್, ಇಂಡಸ್ ಇಂಡ್ ಬ್ಯಾಂಕ್, ಟಾಟಾ ಮೋಟರ್ಸ್ ಶೇ 20 ರಿಂದ ಶೇ 25 ರಷ್ಟು ಕುಸಿತ ದಾಖಲಿಸಿವೆ. ಇದಲ್ಲದೆ ಯುಪಿಎಲ್ , ಜೀ, ಹಿಂಡಾಲ್ಕೊ, ಅದಾನಿ ಪೋರ್ಟ್ಸ್ ಮತ್ತು ಟಿಸಿಎಸ್ ಸಹ ಕುಸಿತ ಕಂಡಿವೆ.

ಮುನ್ನೋಟ: ಆರಂಭಿಕ ಸಾರ್ವಜನಿಕ ಹೂಡಿಕೆ ಮೂಲಕ ಷೇರುಪೇಟೆ ಪ್ರವೇಶಿಸಿರುವ ಎಸ್‌ಬಿಐ ಕಾರ್ಡ್ಸ್, ಈ ವಾರ ವಹಿವಾಟಿಗೆ ಸೇರ್ಪಡೆಗೊಳ್ಳಲಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್‌ನ ಮುಕ್ತ ಮಾರುಕಟ್ಟೆ ಸಮಿತಿಯು (ಎಫ್‌ಒಎಂಸಿ) ಬಡ್ಡಿ ದರಗಳ ಬಗ್ಗೆ ನಿರ್ಧರಿಸಲಿದೆ. ಇವೆಲ್ಲ ಬೆಳವಣಿಗೆಗಳ ಮಧ್ಯೆ ‘ಕೊರೊನಾ–2’ ವೈರಸ್‌ ಎಷ್ಟರ ಮಟ್ಟಿಗೆ ನಿಯಂತ್ರಣಕ್ಕೆ ಬರಲಿದೆ ಎನ್ನುವುದು ಮಾರುಕಟ್ಟೆಯ ದಿಕ್ಕು ನಿರ್ಧರಿಸಲಿದೆ. ಸದ್ಯದ ಮಟ್ಟಿಗೆ ಮಾರುಕಟ್ಟೆಯಲ್ಲಿ ಅನಿಶ್ಚಿತ ಪರಿಸ್ಥಿತಿಯೇ ಮುಂದುವರಿಯುವ ಸಾಧ್ಯತೆ ನಿಚ್ಚಳವಾಗಿದೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT