ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಪ್ಯಾಕೇಜ್‌ 2: ಒಂದು ರಾಷ್ಟ್ರ, ಒಂದು ರೇಷನ್‌ ಕಾರ್ಡ್–ನಿರ್ಮಲಾ ಸೀತಾರಾಮನ್

ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ ಸೋಂಕಿನಿಂದಾಗಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದ ತತ್ತರಿಸಿರುವ ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಸರ್ಕಾರ ₹20 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್‌ ಒದಗಿಸುವುದಾಗಿ ಪ್ರಕಟಿಸಿದ್ದು, ನಿರ್ಮಲಾ ಸೀತಾರಾಮನ್‌ ಬುಧವಾರದಿಂದ ಆರ್ಥಿಕ ಪ್ಯಾಕೇಜ್‌ಗಳ ಘೋಷಣೆ ಮಾಡುತ್ತಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ ಸಣ್ಣ ಉದ್ಯಮಗಳಿಗೆ ಖಾತರಿರಹಿತ ಸಾಲ, ಎಂಎಸ್‌ಎಂಇಗಳ ಚೇತರಿಕೆ, ಪಿಎಫ್‌ ಹಾಗೂ ತೆರಿಗೆ ಪಾವತಿದಾರರಿಗೆ ವಿನಾಯಿತಿ ಸೇರಿದಂತೆ ಹಲವು ವಲಯಗಳಿಗಾಗಿ ₹6 ಲಕ್ಷ ಕೋಟಿ ಪ್ಯಾಕೇಜ್‌ ಘೋಷಿಸಿದರು. ಇಂದು ರೈತರು ಹಾಗೂ ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ಪರಿಹಾರ ಪ್ಯಾಕೇಜ್‌ ಪ್ರಕಟಿಸಿದ್ದಾರೆ.

ವಲಸೆ ಕಾರ್ಮಿಕರು, ಬೀದಿಬದಿಯ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ಸ್ವ–ಉದ್ಯೋಗಿಗಳು ಹಾಗೂ ಸಣ್ಣ ರೈತರಿಗೆ ಉಪಯುಕ್ತವಾಗುವ ಪ್ಯಾಕೇಜ್‌ಗಳನ್ನು ಘೋಷಿಸಲಾಗಿದೆ.

* 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಕೆಲಸ ಮಾಡುವವರಿಗೆ ಕನಿಷ್ಠ ವೇತನ ₹182ರಿಂದ ₹202 ಹೆಚ್ಚಳ ಮಾಡಲಾಗಿದೆ.

* ರೇಷನ್‌ ಕಾರ್ಡ್‌ ಹೊಂದಿರದ ವಲಸೆ ಕಾರ್ಮಿಕರಿಗೆ 5 ಕೆ.ಜಿ ಅಕ್ಕಿ ಅಥವಾ ಗೋದಿ ಹಾಗೂ 1 ಕೆ.ಜಿ. ಬೇಳೆ–ಕಾಳು ಸಿಗಲಿದೆ. ರಾಜ್ಯ ಸರ್ಕಾರಗಳು ಇದರ ಕಡೆಗೆ ಗಮನ ಹರಿಸಲಿದೆ. ವಲಸೆ ಕಾರ್ಮಿಕರನ್ನು ಗುರುತಿಸಿ, ಅವರಿಗೆ ಆಹಾರ ಪದಾರ್ಥಗಳು ತಲುಪಿಸುವ ಜವಾಬ್ದಾರಿ ವಹಿಸಲಿವೆ. ಸುಮಾರು 8 ಕೋಟಿ ವಲಸೆ ಕಾರ್ಮಿಕರಿದ್ದಾರೆ.

* ಒಂದು ರಾಷ್ಟ್ರ, ಒಂದು ರೇಷನ್‌ ಕಾರ್ಡ್: ಇರುವ ರೇಷನ್‌ ಕಾರ್ಡ್‌ ಬಳಸಿ ದೇಶದ ಯಾವುದೇ ಭಾಗದಲ್ಲಿ ಬಳಸಬಹುದು. ಅದರಿಂದ ಆಹಾರ ಪದಾರ್ಥಗಳನ್ನು ಪಡೆಯಬಹುದು. 2020ರ ಆಗಸ್ಟ್‌ ಹೊತ್ತಿಗೆ ಶೇ 83ರಷ್ಟು ರೇಷನ್‌ ಕಾರ್ಡ್‌ಗಳು ಅನ್ವಯಗೊಳ್ಳಲಿವೆ. ಶೇ 100ರಷ್ಟು ಮಾರ್ಚ್‌ 2021ಕ್ಕೆ ಪೂರ್ಣಗೊಳ್ಳಲಿದೆ. ದೇಶದ ಯಾವುದೇ ರಾಜ್ಯದಿಂದರೇಷನ್‌ ಕಾರ್ಡ್‌ ಪಡೆದಿರುವವರು, ಇನ್ನಾವುದೇ ರಾಜ್ಯದಲ್ಲಿ ಅಕ್ಕಿ, ಗೋಧಿ, ಬೇಳೆ ಪಡೆಯಬಹುದು.

ರೇಷನ್‌ ಕಾರ್ಡ್‌ಗೆತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಿರುವುದರಿಂದಯಾವುದೇ ಸ್ಥಳದಲ್ಲಿ ಆಹಾರ ಪದಾರ್ಥ ಪಡೆಯಬಹುದು. ವಲಸೆ ಹೋಗಿರುವವರು ಬೇರೆ ಸ್ಥಳದಲ್ಲಿ ಎಷ್ಟು ಪ್ರಮಾಣದ ಅಕ್ಕಿ/ಗೋದಿ ಪಡೆದಿದ್ದಾರೆ ಹಾಗೂ ಅವರ ಊರಿನಲ್ಲಿರುವ ಮನೆಯವರು ಎಷ್ಟು ಪಡೆದಿದ್ದಾರೆ ಎಂಬ ಮಾಹಿತಿ ಸಂಗ್ರಹವಾಗಿರುತ್ತದೆ. ನಿಗದಿತ ಪ್ರಮಾಣದ ಆಹಾರ ಪದಾರ್ಥ‌ವನ್ನು ಯಾವುದೇ ಸ್ಥಳದಿಂದ ಪಡೆಯಬಹುದು.

* ಕಳೆದ 2 ತಿಂಗಳಲ್ಲಿ 25 ಲಕ್ಷ ಹೊಸ ಕಿಸಾನ್‌ ಕಾರ್ಡ್‌ಗಳನ್ನು ನೀಡಲಾಗಿದೆ.

*ಕಿಸಾನ್‌ ಕ್ರೆಡಿಟ್ ಕಾರ್ಡ್‌ಗಳಲ್ಲಿ ಮೀನುಗಾರರು ಹಾಗೂ ಪಶು ಸಂಗೋಪನೆ ನಡೆಸುತ್ತಿರುವವರನ್ನೂ ಸೇರ್ಪಡೆಗೊಳಿಸಲಾಗಿದೆ. ಈ ಮೂಲಕ 2.5 ಕೋಟಿ ರೈತರಿಗೆ ಅನುಕೂಲವಾಗಲಿದೆ.

* ಪಿಪಿಪಿ ಆಧಾರದಲ್ಲಿ ಕೈಗೆಟುವ ದರದ ಮನೆ ನಿರ್ಮಾಣ: ಪಿಎಂ ಅವಾಸ್‌ ಯೋಜನೆ: ಸಂಘ, ಸಂಸ್ಥೆಗಳು ಅವರ ಜಾಗಗಳಲ್ಲಿ ಕೈಗೆಟುಕುವ ದರದ ಬಾಡಿಗೆ ಮನೆಗಳನ್ನು ನಿರ್ಮಿಸುವಂತೆ ಕೇಳಲಾಗುತ್ತಿದೆ. ಸರ್ಕಾರವು ನಗರದ ಬಡವರಿಗೆ, ಕಾರ್ಮಿಕರು ಹಾಗೂ ವಲಸಿಗರಿಗಾಗಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೈಗೆಟುಕುವ ಬೆಲೆಯ ಮನೆಗಳನ್ನು ನಿರ್ಮಿಸಲಿದೆ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದ (ಪಿಪಿಪಿ) ಆಧಾರದಲ್ಲಿ ನಿರ್ಮಾಣ ಕಾರ್ಯ ನಡೆಯಲಿದೆ. ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.

* ದೇಶದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬೀದಿ ವ್ಯಾಪಾರಿಗಳಿಗಾಗಿ ₹5,000 ಕೋಟಿವಿಶೇಷ ಕ್ರೆಡಿಟ್‌ ಸೌಲಭ್ಯ. ₹10,000ದವರೆಗೂ ಆರಂಭಿಕ ಬಂಡವಾಳ ಒದಗಿಸಲಾಗುತ್ತದೆ.ಒಂದು ತಿಂಗಳಲ್ಲಿ ಈ ಯೋಜನೆಗೆ ಚಾಲನೆ ಸಿಗಲಿದೆ. ಇದರಿಂದಾಗಿ ದೇಶದ 50 ಲಕ್ಷ ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.

* ಮುದ್ರಾ ಶಿಶು ವರ್ಗದಡಿ 3 ಕೋಟಿ ಜನರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ. ಗರಿಷ್ಠ ₹50,000 ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಸಾಲ ಸೌಲಭ್ಯ ಹಾಗೂ ಶೇ 2ರಷ್ಟು ಬಡ್ಡಿದರದಲ್ಲಿ ಸಿಗಲಿದೆ.

* ಮಧ್ಯಮ ಆದಾಯ ವರ್ಗಕ್ಕೆ ಮನೆ: ಮನೆ ನಿರ್ಮಾಣಕ್ಕೆ ಸಬ್ಸಿಡಿ ಮಾರ್ಚ್‌ 2020ರಿಂದ ಮಾರ್ಚ್‌ 2021ರ ವರೆಗೂ ಒಂದು ವರ್ಷ ವಿಸ್ತರಣೆ. ₹6 ಲಕ್ಷದಿಂದ ₹18 ಲಕ್ಷ ಆದಾಯ ಹೊಂದಿರುವವರಿಗೆ ಮನೆ ನಿರ್ಮಾಣದಲ್ಲಿ ಸಾಲದ ಮೇಲೆ ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ. ₹70,000 ಕೋಟಿ ಯೋಜನೆ ವೆಚ್ಚ. ಈಗಾಗಲೇ 3.3 ಲಕ್ಷ ಕುಟುಂಬಗಳು ಯೋಜನೆಯ ಲಾಭ ಪಡೆದಿವೆ ಹಾಗೂ 1 ವರ್ಷದ ವಿಸ್ತರಣೆಯಿಂದಾಗಿ ಇನ್ನೂ 2.5 ಲಕ್ಷ ಮಧ್ಯಮ ಆದಾಯದ ಕುಟುಂಬಗಳಿಗೆ ಅನುಕೂಲವಾಗಲಿದೆ. ಇದರಿಂದಾಗಿ ವಸತಿ ವಲಯದಲ್ಲಿ ತಕ್ಷಣ ಬೇಡಿಕೆ ಉಂಟಾಗಲಿದೆ ಎಂದರು.

* ಬುಡಕಟ್ಟು ವರ್ಗದ ಕಾರ್ಯಗಳಿಗೆ ಚೇತರಿಕೆ ನೀಡಲು ₹600 ಕೋಟಿ ಮೀಸಲು

* ಸಣ್ಣ ಮತ್ತು ಅಂಚಿನಲ್ಲಿರುವ ರೈತರಿಗೆ ಅನುಕೂಲವಾಗಲು ನಬಾರ್ಡ್‌ನ ಅಡಿಯಲ್ಲಿ ಪ್ರಸ್ತುತ ಇರುವ ₹90,000 ಕೋಟಿಯೊಂದಿಗೆ ಹೆಚ್ಚುವರಿಯಾಗಿ ₹30,000 ಕೋಟಿ ಒದಗಿಸಲಾಗುತ್ತಿದೆ. ರಾಬಿ ಕಾಲದಲ್ಲಿ ಇದು ರೈತರಿಗೆ ಉಪಯುಕ್ತವಾಗಲಿದೆ ಹಾಗೂ ಇದರಿಂದ 3 ಕೋಟಿ ರೈತರಿಗೆ ಅನುಕೂಲವಾಗಲಿದೆ.

* ಕೋವಿಡ್‌–19 ಅವಧಿಯಲ್ಲಿ ಕಳೆದ ಎರಡು ತಿಂಗಳಲ್ಲಿ ನಗರದ ಬಡವರಿಗಾಗಿ ಕೇಂದ್ರಗಳನ್ನು ಸ್ಥಾಪಿಸಿದ್ದು, ಕೇಂದ್ರದಿಂದ ರಾಜ್ಯಗಳಿಗೆ ₹11,000 ಕೋಟಿ ನೀಡಲಾಗಿದೆ. ತಾತ್ಕಾಲಿಕ ವಾಸ ಸ್ಥಳಗಳನ್ನು ನಿರ್ಮಿಸಿ ಮೂರು ಹೊತ್ತಿನ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. 12,000 ಸ್ವ–ಸಹಾಯಕ ತಂಡಗಳು ಸುಮಾರು 3 ಕೋಟಿ ಮಾಸ್ಕ್‌ಗಳನ್ನು ಸಿದ್ಧಪಡಿಸಿವೆ ಹಾಗೂ 1,20,000 ಲೀಟರ್‌ ಹ್ಯಾಂಡ್‌ ಸ್ಯಾನಿಟೈಸರ್‌ ತಯಾರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT