ಮಂಗಳವಾರ, ಮೇ 24, 2022
27 °C

ಬೆಂಗಳೂರಿನಲ್ಲಿ ₹110ರ ಗಡಿ ದಾಟಿದ ಪೆಟ್ರೋಲ್‌; ಹಲವು ನಗರಗಳಲ್ಲಿ ಡೀಸೆಲ್‌ ₹100

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಮಂಗಳವಾರವೂ ದೇಶದಾದ್ಯಂತ ಇಂಧನ ದರದಲ್ಲಿ ಹೆಚ್ಚಳ ಮಾಡಿವೆ. ಕಳೆದ 15 ದಿನಗಳಲ್ಲಿ 13ನೇ ಬಾರಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರಿಗೆ 84 ಪೈಸೆಯಷ್ಟು ಹೆಚ್ಚಾಗಿದ್ದು ₹110.25ಕ್ಕೆ ಏರಿಕೆ ಆಗಿದೆ. ಡೀಸೆಲ್‌ ದರ ಲೀಟರಿಗೆ 78 ಪೈಸೆ ಹೆಚ್ಚಾಗಿದ್ದು ₹94.01ಕ್ಕೆ ತಲುಪಿದೆ. ಮಾರ್ಚ್‌ 22ರಿಂದ ಏಪ್ರಿಲ್‌ 5ರವರೆಗೆ ಬೆಂಗಳೂರಿನಲ್ಲಿ ಪೆಟ್ರೋಲ್‌ ದರವು ಲೀಟರಿಗೆ ₹9.59ರಷ್ಟು ಮತ್ತು ಡೀಸೆಲ್‌ ದರ ₹8.98ರಷ್ಟು ಹೆಚ್ಚಳ ಆಗಿದೆ.

ಸ್ಥಳೀಯ ಮಾರಾಟ ತೆರಿಗೆ ಮತ್ತು ಸಾಗಣೆ ವೆಚ್ಚಕ್ಕೆ ಅನುಗುಣವಾಗಿ ಮಾರಾಟ ದರವು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಆಗುತ್ತದೆ. ದೆಹಲಿಯಲ್ಲಿ ಇಂಧನ ದರ 80 ಪೈಸೆ ಹೆಚ್ಚಳವಾಗಿದ್ದು, ಪೆಟ್ರೋಲ್‌ ದರ ಲೀಟರಿಗೆ ₹104.61 ಮತ್ತು ಡೀಸೆಲ್‌ ದರ ಲೀಟರಿಗೆ ₹95.87ಕ್ಕೆ ಏರಿಕೆ ಆಗಿದೆ.

ಮುಂಬೈನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 84 ಪೈಸೆ ಹೆಚ್ಚಳವಾಗಿ ₹119.67 ಮತ್ತು ಡೀಸೆಲ್‌ಗೆ 85 ಪೈಸೆ ಏರಿಕೆಯಾಗಿ ₹103.92 ತಲುಪಿದೆ.

ಇದನ್ನೂ ಓದಿ–

ಶ್ರೀನಗರದಿಂದ ಕೊಚ್ಚಿವರೆಗೂ ಬಹುತೇಕ ನಗರಗಳಲ್ಲಿ ಲೀಟರ್‌ ಪೆಟ್ರೋಲ್‌ ದರ ₹110 ಸಮೀಪಿಸುತ್ತಿದೆ. ಹೈದರಾಬಾದ್‌, ಪಾಟ್ನಾ, ಭುವನೇಶ್ವರ, ತಿರುವಂತಪುರಂ, ಮುಂಬೈ, ರಾಯ್‌ಪುರ್‌ ಹಾಗೂ ರಾಜಸ್ಥಾನ, ಮಧ್ಯ ಪ್ರದೇಶ, ತೆಲಂಗಾಣ ರಾಜ್ಯಗಳ ಹಲವು ನಗರಗಳಲ್ಲಿ ಪ್ರತಿ ಲೀಟರ್‌ ಡೀಸೆಲ್‌ ದರ ₹100ರ ಗಡಿ ದಾಟಿದೆ.

ಆಂಧ್ರ ಪ್ರದೇಶದ ಚಿತ್ತೂರ್‌ನಲ್ಲಿ ಪ್ರತಿ ಲೀಟರ್‌ ಡೀಸೆಲ್‌ ದರ ದೇಶದಲ್ಲೇ ದುಬಾರಿ (₹105.52) ಆಗಿದೆ. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹120.65ಕ್ಕೆ ಮುಟ್ಟಿದೆ.

ಇದನ್ನೂ ಓದಿ–

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು