ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ದಶಕಗಳ ಬಳಿಕ ಮರಳಿ ಟಾಟಾ ಮಡಿಲಿಗೆ ಏರ್‌ ಇಂಡಿಯಾ

Last Updated 8 ಅಕ್ಟೋಬರ್ 2021, 13:44 IST
ಅಕ್ಷರ ಗಾತ್ರ

ದೆಹಲಿ:ಸರಿಸುಮಾರು ಏಳು ದಶಕಗಳ ನಂತರ ಟಾಟಾ ಸಮೂಹವು ಏರ್‌ ಇಂಡಿಯಾ ಕಂಪನಿಯನ್ನು ಮತ್ತೆ ತನ್ನದಾಗಿಸಿಕೊಂಡಿದೆ.

‘ಏರ್‌ ಇಂಡಿಯಾ’ ಮಾರಾಟಕ್ಕೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ₹18,000 ಕೋಟಿಗೆ ಬಿಡ್‌ ಸಲ್ಲಿಸುವ ಮೂಲಕ ಟಾಟಾ ಸಮೂಹ ಸಂಸ್ಥೆಗಳ ಪ್ರವರ್ತಕ ಕಂಪನಿಯಾದ ‘ಟಾಟಾ ಸನ್ಸ್‌’ ಸರ್ಕಾರಿ ಸ್ವಾಮ್ಯದ ವಿಮಾನ ಯಾನ ಸಂಸ್ಥೆಯನ್ನು ತನ್ನದಾಗಿಸಿಕೊಂಡಿತು.

ಕೋಟ್ಯಂತರ ರೂಪಾಯಿಗಳ ನಷ್ಟದಲ್ಲಿ ನಡೆಯುತ್ತಿರುವ ನಾಗರಿಕವಿಮಾನಯಾನ ಸಂಸ್ಥೆ ಏರ್‌ ಇಂಡಿಯಾವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ 2018ರಲ್ಲಿ ಮಹತ್ವದ ನಿರ್ಧಾರ ಕೈಗೊಂಡಿತ್ತು.

ಸ್ಥಾಪಕರು ಯಾರು?

ಟಾಟಾ ಸನ್ಸ್‌ನ ಉದ್ಯಮಿ ಜೆಆರ್‌ಡಿ ಟಾಟಾ ಅವರು 1932ರಲ್ಲಿ ಟಾಟಾ ಏರ್‌ಲೈನ್ಸ್‌ ಸ್ಥಾಪಿಸಿದ್ದರು. ಇವರು ದೇಶದ ಮೊದಲ ಪೈಲಟ್‌ ಕೂಡ ಹೌದು. ಕರಾಚಿಯಿಂದ ಮುಂಬೈವರೆಗೆ ದೇಶದ ಮೊದಲ ವಿಮಾನ ಹಾರಾಟ ನಡೆಸಿದ ಹೆಗ್ಗಳಿಕೆ ಅವರದ್ದು. ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಟಾಟಾ ಏರ್‌ಲೈನ್ಸ್‌, ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಪಬ್ಲಿಕ್‌ ಲಿಮಿಟೆಡ್‌ ಕಂಪನಿಯಾಗಿ ಇದನ್ನು ಪರಿವರ್ತಿಸಿತ್ತು. ಆ ನಂತರ ಸಂಸ್ಥೆಯ ಹೆಸರನ್ನು ‘ಏರ್‌ ಇಂಡಿಯಾ’ ಎಂದು ಬದಲಿಸಿತ್ತು.

ರಾಷ್ಟ್ರೀಕರಣ

ಕೇಂದ್ರ ಸರ್ಕಾರವು 1953ರಲ್ಲಿ ಟಾಟಾ ಸನ್ಸ್‌ನಿಂದ ಗರಿಷ್ಠ ಷೇರುಗಳನ್ನು ಖರೀದಿಸಿ ಸಂಸ್ಥೆಯನ್ನು ತನ್ನ ಒಡೆತನಕ್ಕೆ ಪಡೆದಿತ್ತು. ಜೆಆರ್‌ಡಿ ಟಾಟಾ ಅವರು 1977ರವರೆಗೂ ‘ಏರ್‌ ಇಂಡಿಯಾ’ದ ಅಧ್ಯಕ್ಷರಾಗಿ ಮುಂದುವರೆದಿದ್ದರು. 2018ರಲ್ಲಿ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ದೊರೆಯಿತು. ಈ ಪ್ರಕ್ರಿಯೆ ಅಂತಿಮಗೊಳಿಸಲು ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು.

ನಷ್ಟದ ಕಾರಣ?

2007ರಲ್ಲಿ ಇಂಡಿಯನ್‌ ಏರ್‌ಲೈನ್ಸ್‌ ಮತ್ತು ಏರ್‌ ಇಂಡಿಯಾ ವಿಲೀನಗೊಳಿಸಲಾಗಿತ್ತು. ಬೇಕಾಬಿಟ್ಟಿಯಾಗಿ ವಿಮಾನಗಳನ್ನು ಖರೀದಿಸಲಾಗಿತ್ತು. ಅಲ್ಲಿಂದಾಚೆಗೆ ಸಂಸ್ಥೆಯು ಯಾವತ್ತೂ ಲಾಭದ ಹಾದಿಗೆ ಮರಳಿರಲಿಲ್ಲ. ಸರ್ಕಾರದ ಪಾಲಿಗೆ ಇದೊಂದು ಬಿಳಿಯಾನೆಯಾಗಿತ್ತು. ಸಂಸ್ಥೆಗೆ ಯಾವತ್ತೂ ಪ್ರಯಾಣಿಕರ ಕೊರತೆ ಎದುರಾಗಿಲ್ಲ. ಸಿಬ್ಬಂದಿಯನ್ನು ದಕ್ಷ ರೀತಿಯಲ್ಲಿ ಬಳಕೆ ಮಾಡಿಕೊಳ್ಳದ ಕಾರಣಕ್ಕೆ ಪ್ರಯಾಣಿಕರಿಂದ ಬರುವ ವರಮಾನವೂ ಹೆಚ್ಚಳಗೊಂಡಿರಲಿಲ್ಲ. ಲಾಭದಾಯಕವಲ್ಲದ ಮಾರ್ಗದಲ್ಲಿನ ವಿಮಾನಗಳ ಹಾರಾಟವೂ ನಷ್ಟಕ್ಕೆ ಕೊಡುಗೆ ನೀಡಿದೆ. ಶೇ 86ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ಖಾಸಗಿ ವಿಮಾನಯಾನ ಸಂಸ್ಥೆಗಳು ಲಾಭದಲ್ಲಿ ಮುನ್ನಡೆದಿರುವಾಗ, ಏರ್‌ ಇಂಡಿಯಾ ಮಾತ್ರ ಸತತವಾಗಿ ನಷ್ಟದಲ್ಲಿ ಸಾಗುತ್ತಿದೆ.

ಸಿಬ್ಬಂದಿಯಲ್ಲಿ ಕಾಣದ ವೃತ್ತಿಪರತೆ, ಸರ್ಕಾರದ ಹಸ್ತಕ್ಷೇಪ, ಸಕಾಲದಲ್ಲಿ ವಿಮಾನಗಳು ಹಾರಾಟ ನಡೆಸದಿರುವುದೂ ನಷ್ಟದ ಬಾಬತ್ತು ಹೆಚ್ಚಿಸಿದ್ದವು. ಸ್ವಾಧೀನ ಪ್ರಕ್ರಿಯೆ ನಂತರವೂ ಸಮನ್ವಯ ಕಂಡುಬರದಿದ್ದರೆ ಈ ಖಾಸಗೀಕರಣ ಪ್ರಯತ್ನವೂ ನಿರೀಕ್ಷಿತ ಫಲ ನೀಡದೇ ಹೋದೀತು ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.

ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿತ್ತೇ?

2012ರಲ್ಲಿ ಯುಪಿಎ ಸರ್ಕಾರ ₹ 32 ಸಾವಿರ ಕೋಟಿಗಳ ಪರಿಹಾರ ಕೊಡುಗೆ ನೀಡಿತ್ತು. ಈ ನೆರವಿನ ಬಳಿಕವೂ ಸಂಸ್ಥೆಯು ನಷ್ಟದ ನಂಟು ಕಳಚಿಕೊಳ್ಳಲು ವಿಫಲವಾಗಿತ್ತು. ಪ್ರತಿವರ್ಷ ಸಾಲದ ಹೊರೆ ಬೆಟ್ಟದಂತೆ ಬೆಳೆಯುತ್ತಲೇ ಸಾಗಿತ್ತು.

ಏರ್‌ ಇಂಡಿಯಾಕ್ಕೆ ಸ್ವಾಗತ: ಟಾಟಾ

ಅಂತಿಮವಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆ ಈಗ ಖಾಸಗೀಕರಣದ ಮೂಲಕ ಟಾಟಾ ಮಡಿಲಿಗೆ ಬಂದಿದೆ. ‘ಏರ್‌ ಇಂಡಿಯಾಕ್ಕೆ ಸ್ವಾಗತ’ ಎಂದು ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷ ರತನ್‌ ಟಾಟಾ ಅವರು ಭಾವುಕ ಪತ್ರವೊಂದನ್ನು ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT