ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಮ್ಯೂಚುವಲ್ ಫಂಡ್‌ ಹೂಡಿಕೆಯು ₹ 95 ಸಾವಿರ ಕುಸಿದಿದೆ, ಏನು ಮಾಡಲಿ?

ಅಕ್ಷರ ಗಾತ್ರ

* ಪ್ರಶ್ನೆ: ನಾನು ಒಟ್ಟು ₹ 6 ಲಕ್ಷವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸಿದ್ದೇನೆ. ₹ 4 ಲಕ್ಷವನ್ನು ತಂತ್ರಜ್ಞಾನ ಆಧಾರಿತ ಕಂಪನಿಗಳಲ್ಲಿ ತೊಡಗಿಸುವ ಫಂಡ್‌ನಲ್ಲಿ, ₹ 2 ಲಕ್ಷವನ್ನು ಬ್ಲೂಚಿಪ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದೇನೆ. ಈಗ ನನ್ನ ಹೂಡಿಕೆಯು ₹ 95 ಸಾವಿರದಷ್ಟು ಕುಸಿದಿದೆ. ನಾನು ಈಗ ಏನು ಮಾಡಲಿ? ಹೂಡಿಕೆ ಹಿಂಪಡೆಯಲೇ ಅಥವಾ ದೀರ್ಘಾವಧಿಗೆ ಮುಂದುವರಿಸಲೇ?

–ಗೋವಿಂದರಾಜ್ ಕಟ್ಟಿ

ಉತ್ತರ: ನೀವು ಹೂಡಿಕೆ ಮಾಡಿರುವುದು ವ್ಯವಸ್ಥಿತ ಹೂಡಿಕೆ ಯೋಜನೆಗಳಲ್ಲೋ (ಎಸ್ಐಪಿ) ಅಥವಾ ಒಂದೇ ಕಂತಿನಲ್ಲೋ ಎಂಬ ಮಾಹಿತಿ ಇಲ್ಲ. ಒಂದೇ ಕಂತಿನ ಹೂಡಿಕೆ ಎಂದು ತಿಳಿಯುವುದಾದರೆ, ನಿಮ್ಮ ಹೂಡಿಕೆಗಳು (portfolio) ಅಸಲು ಮೊತ್ತಕ್ಕಿಂತ ಅಂದಾಜು ಶೇಕಡ 16ರಷ್ಟು ಕುಸಿದಿದೆ. ಯಾವುದೇ ಮ್ಯೂಚುವಲ್ ಫಂಡ್‌ಗಳಲ್ಲಿ ಹಿಂದಿನ ಹಲವು ವರ್ಷಗಳ ಲಾಭಗಳಿಕೆ ಉತ್ತಮವಾಗಿದ್ದರೂ ಒಂದೇ ಕಂತಿನಲ್ಲಿ ಹೂಡಿಕೆ ಮಾಡುವ ಮೊದಲು ಹೂಡಿಕೆಯನ್ನು ಹೋಲಿಸಿ ನೋಡುವ ಬೆಂಚ್‌ಮಾರ್ಕ್ ಸೂಚ್ಯಂಕ ಹಾಗೂ ಒಟ್ಟಾರೆ ಮಾರುಕಟ್ಟೆ ಸೂಚ್ಯಂಕ (ನಿಪ್ಟಿ/ಸೆನ್ಸೆಕ್ಸ್) ಯಾವ ಹಂತದಲ್ಲಿದೆ ಎನ್ನುವುದು ಮುಖ್ಯ.

ನೀವು ದೀರ್ಘಾವಧಿಗೆ ಹೂಡಿಕೆ ಮಾಡಿದ್ದರೆ ಇಲ್ಲಿ ನಷ್ಟ ಆಗಿರುವುದು ಗೌಣ. ಇಂದಿನ ಪರಿಸ್ಥಿತಿಯಲ್ಲಿ ಕಳೆದ ಐದಾರು ತಿಂಗಳಿನಿಂದ ಹಲವು ಹೂಡಿಕೆಗಳು ನಷ್ಟದಲ್ಲೇ ಮುಂದುವರಿಯುತ್ತಿವೆ. ನೀವು ಹೂಡಿಕೆ ಮಾಡಿದ್ದ ಹಂತಕ್ಕೆ ಮಾರುಕಟ್ಟೆ ಚೇತರಿಸಿಕೊಂಡಾಗ ಲಾಭಕ್ಕೆ ಮರಳುವ ಸಾಧ್ಯತೆ ಇದೆ. ಕಳೆದ ಕೆಲವು ತಿಂಗಳುಗಳಿಂದ ಮಾರುಕಟ್ಟೆ ಅಸ್ಥಿರವಾಗಿದೆ. ಮಾರುಕಟ್ಟೆ ಯಾವ ಹಂತಕ್ಕೆ ಕುಸಿಯಬಹುದು ಹಾಗೂ ಚೇತರಿಕೆ ಕಾಣಲು ಎಷ್ಟು ತಿಂಗಳು ಬೇಕಾಗಬಹುದು ಎಂದು ಖಚಿತವಾಗಿ ಹೇಳಲಾಗದು. ನಿಮ್ಮ ಒಟ್ಟು ಉದ್ದೇಶ, ಹೂಡಿಕೆಯ ಸಮಯ, ನಷ್ಟ ತಡೆಯುವ ಶಕ್ತಿ, ಹಣದ ಅನಿರೀಕ್ಷಿತ ಅಡಚಣೆ ಇತ್ಯಾದಿಗಳನ್ನು ಪರಿಗಣಿಸಿ ಹೂಡಿಕೆಯಲ್ಲಿ ಮುಂದುವರಿಯಬೇಕೆ ಅಥವಾ ಇರುವ ಹಂತದಿಂದ ಹೊರಬರಬೇಕೇ ಎಂಬ ನಿರ್ಧಾರ ಕೈಗೊಳ್ಳಿ. ನೀವು ದೀರ್ಘಾವಧಿ (3-5 ವರ್ಷ) ಹೂಡಿಕೆದಾರರಾಗಿದ್ದರೆ ನಿಮಗೆ ಈ ಕುಸಿತದಿಂದ ತೊಂದರೆಯಾಗದು.

ಮಾರುಕಟ್ಟೆ ಏರುಗತಿಯಲ್ಲಿದೆ ಎನ್ನುವುದನ್ನು ಖಚಿತಪಡಿಸಿಕೊಂಡು ಅಂತಹ ಸಂದರ್ಭದಲ್ಲಷ್ಟೇ ಒಂದೇ ಬಾರಿಯ ಹೂಡಿಕೆಗಳನ್ನು ಮಾಡಬೇಕು. ಮಾರುಕಟ್ಟೆ ಕೆಳ ಹಂತಕ್ಕೆ ಕುಸಿಯುವ ಸಾಧ್ಯತೆ ಇದ್ದಾಗ ಹೂಡಿಕೆಯನ್ನು ಹಂತ ಹಂತವಾಗಿ ಸ್ವಿಚ್ ಮಾಡುವ ಅಥವಾ ಹಿಂಪಡೆಯುವ ನಿರ್ಧಾರ ಕೈಗೊಳ್ಳಬೇಕು. ಹೂಡಿಕೆ ಮಾಡಿದ ನಂತರ ಪಡೆಯುವ ಸಲಹೆಗಳಿಗಿಂತ ಹೂಡಿಕೆ ಮಾಡುವ ಮುನ್ನ ಆಯಾ ವಿಷಯ ಪರಿಣತರಿಂದ ಅಥವಾ ವೈಯಕ್ತಿಕ ಹೂಡಿಕೆ ಸಲಹೆಗಾರರಿಂದ ಮಾಹಿತಿ ಪಡೆದು ಹೂಡಿಕೆ ನಿರ್ಧಾರ ಕೈಗೊಳ್ಳುವುದು ಪ್ರಶಸ್ತ. ಮಾರುಕಟ್ಟೆ ಒಂದು ವೇಳೆ ಕೆಳಹಂತಕ್ಕೆ ಕುಸಿದರೂ ಯಾವ ಹಂತದವರೆಗೆ ನಷ್ಟ ತಡೆದುಕೊಳ್ಳಬಹುದು ಎಂಬ ಯೋಚನೆಯೂ ಮೊದಲೇ ಇರಬೇಕು. ನಿಮ್ಮ ಹೂಡಿಕೆ ಎಷ್ಟೇ ಉತ್ತಮವಾಗಿದ್ದರೂ ಪರಿಸ್ಥಿತಿ ಒಂದೇ ತೆರನಾಗಿರುವುದಿಲ್ಲ ಎನ್ನುವುದು ತಿಳಿದಿರಲಿ. ಎಸ್ಐಪಿ ಹೂಡಿಕೆಗೆ ಏಕಾಏಕಿ ಕುಸಿತಕ್ಕೆ ಪ್ರತಿರೋಧ ಒಡ್ಡುವ ಶಕ್ತಿ ಇರುತ್ತದೆ ಹಾಗೂ ನಿಧಾನವಾಗಿಯಾದರೂ ಅದು ಲಾಭ ನೀಡುತ್ತದೆ.

* ಪ್ರಶ್ನೆ: ನಾನು ಸುಮಾರು ₹ 5 ಲಕ್ಷ ವೈಯಕ್ತಿಕ ಸಾಲ ಪಡೆಯಬೇಕಿದೆ. ಇದಕ್ಕೆ ಜೀವ ವಿಮಾ ಪಾಲಿಸಿ, ಅಂಚೆ ಜೀವ ವಿಮೆ ಆಧಾರ ನೀಡಿ ಸಾಲ ಪಡೆಯುವುದು ಸೂಕ್ತವೇ ಅಥವಾ ಬ್ಯಾಂಕ್ ಸಾಲ ಪಡೆಯುವುದು ಸೂಕ್ತವೇ?

–ಅಭಿಷೇಕ್ ಗೌಡ ಕೆ

ಉತ್ತರ: ವೈಯಕ್ತಿಕ ಸಾಲ ಎನ್ನುವುದು ತಕ್ಷಣದ ಆರ್ಥಿಕ ಅಗತ್ಯಕ್ಕೆ ಬ್ಯಾಂಕ್‌ಗಳು ಒದಗಿಸುವ ಸಾಲ. ಕಡಿಮೆ ಅವಧಿಯಲ್ಲಿ ಒದಗಿಸಲಾಗುವ ಸಾಲ ಸೌಲಭ್ಯ ಇದು. ಇಂತಹ ಸಾಲಗಳನ್ನು ಸಾಲ ಪಡೆಯುವವರು ನೀಡುವ ಭದ್ರತೆಗಿಂತ ಕ್ರೆಡಿಟ್ ರೇಟಿಂಗ್ ಮತ್ತು ಆದಾಯ-ವ್ಯವಹಾರದ ಮೇಲೆ ಭರವಸೆ ಇಟ್ಟು ನೀಡಲಾಗುತ್ತದೆ. ನೀವು ಬ್ಯಾಂಕಿನ ದೀರ್ಘಕಾಲದ ಗ್ರಾಹಕರಾಗಿದ್ದರೆ, ನಿಮ್ಮ ವೇತನ ಜಮಾ ಆಗುವ ಬ್ಯಾಂಕ್ ಖಾತೆಯಿಂದ ಈ ಸಾಲ ಪಡೆಯುವುದು ಸುಲಭ. ನೀವು ಹೆಚ್ಚಿನ ಕ್ರೆಡಿಟ್ ರೇಟಿಂಗ್ ಹೊಂದಿದ್ದರೆ, ಅನುಕೂಲಕರ ನಿಯಮಗಳ ಅಡಿ ವೈಯಕ್ತಿಕ ಸಾಲ ಪಡೆಯುವ ಸಾಧ್ಯತೆಯಿದೆ. ಇದು ನಿಮ್ಮ ಸಾಲದ ಬಡ್ಡಿ ದರ ನಿರ್ಣಯಿಸುವಲ್ಲೂ ಪಾತ್ರವಹಿಸುತ್ತದೆ. ಹೀಗಾಗಿ ಬ್ಯಾಂಕ್‌ಗಳು ನೀಡುವ ವೈಯಕ್ತಿಕ ಸಾಲಗಳು ಜೀವ ವಿಮಾ ಪಾಲಿಸಿಗಳ ಮೇಲೆ ನೀಡುವ ಸಾಲಕ್ಕಿಂತ ತುಸು ಭಿನ್ನ.

ನಿಮಗೆ ಅಗತ್ಯವಿರುವ ಸಾಲದ ಮೊತ್ತಕ್ಕೆ ಸರಿದೂಗುವ ಯಾವುದೇ ಸಾಂಪ್ರದಾಯಿಕ ಜೀವ ವಿಮಾ ಪಾಲಿಸಿಯ ಪಾವತಿಯಾದ ಮೊತ್ತದ ಶೇಕಡಾ 80ರಿಂದ ಶೇ 90ರಷ್ಟು ಮೊತ್ತವನ್ನು ಸಾಲದ ರೂಪದಲ್ಲಿ ವಿಮಾ ಕಂಪನಿಗಳು ನೀಡುತ್ತವೆ. ನಿಮ್ಮ ಸಾಲದ ಮೊತ್ತಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಪಾಲಿಸಿ ಒಂದಿಷ್ಟು ವರ್ಷಗಳಿಂದ ಪಾವತಿಯಾಗುತ್ತಿದ್ದು ಸುಮಾರು ₹ 6 ಲಕ್ಷಕ್ಕಿಂತಲೂ ಅಧಿಕ ಮೊತ್ತ ಈವರೆಗೆ ಪಾವತಿಯಾಗಿದ್ದರೆ ನಿಮಗೆ ಬೇಕಿರುವ ಮೊತ್ತದ ಸಾಲ ಇಲ್ಲಿ ಸಿಗಬಹುದು. ಆದರೆ, ಇಂತಹ ಸಾಲಕ್ಕೆ ನಿಮ್ಮ ವಿಮಾ ಪಾಲಿಸಿಯ ಬಾಂಡ್ಅನ್ನು ಭದ್ರತೆಯ ರೂಪದಲ್ಲಿ ಅಂಚೆ ಅಥವಾ ಜೀವ ವಿಮಾ ಸಂಸ್ಥೆಗೆ ನೀಡಬೇಕಾಗುತ್ತದೆ. ಇದನ್ನು ಸುರಕ್ಷಿತ ಸಾಲವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಗ್ರಾಹಕರ ಕ್ರೆಡಿಟ್ ರೇಟಿಂಗ್ ಮುಖ್ಯ ಮಾನದಂಡವಲ್ಲ. ಇಲ್ಲಿ ಬಡ್ಡಿ ದರ ವೈಯಕ್ತಿಕ ಸಾಲಕ್ಕಿಂತ ತುಸು ಕಡಿಮೆ. ಅವಧಿಪೂರ್ವ ಸಾಲ ಮರುಪಾವತಿಗೂ ಶುಲ್ಕ ಇರಲಾರದು. ಬಡ್ಡಿ-ಅಸಲು ಪಾವತಿ ಅವಧಿಯಲ್ಲಿ ತುಸು ರಿಯಾಯಿತಿ ಪಡೆಯಬಹುದು. ಬ್ಯಾಂಕ್‌ಗಳಲ್ಲಿ ವೈಯಕ್ತಿಕ ಸಾಲವನ್ನು ಶುಲ್ಕವಿರದೆ ನೀಡುವ-ಮರುಪಾವತಿಸುವ ಅವಕಾಶವನ್ನು ಸಾಮಾನ್ಯವಾಗಿ ನೀಡುವುದಿಲ್ಲ.

ಬಡ್ಡಿದರ, ಶುಲ್ಕ, ಮರುಪಾವತಿಯ ಅವಧಿ ಇತ್ಯಾದಿ ತುಲನಾತ್ಮಕವಾಗಿ ಕಡಿಮೆ ಎಲ್ಲಿದೆ ಎಂಬ ವಿವರ ಪಡೆದು ನಿರ್ಧಾರ ಕೈಗೊಳ್ಳಿ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.

ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT