ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ನಿವೃತ್ತಿಯಿಂದ ಬರುವ ಹಣವನ್ನು ಠೇವಣಿ ಮಾಡಿದರೆ ತೆರಿಗೆ ಬರಬಹುದೇ?

Last Updated 31 ಆಗಸ್ಟ್ 2021, 20:00 IST
ಅಕ್ಷರ ಗಾತ್ರ

ಭಾಗ್ಯಲಕ್ಷ್ಮಿ, ಎಚ್‌ಆರ್‌ಬಿಆರ್‌ ಲೇಔಟ್‌, ಬೆಂಗಳೂರು

* ಪ್ರಶ್ನೆ: ನನ್ನ ಪತಿ 1985ರಲ್ಲಿ ಎಚ್‌ಆರ್‌ಬಿಆರ್‌ ಲೇಔಟ್‌ನಲ್ಲಿ 30X40 ಅಳತೆಯ ನಿವೇಶನ ₹ 28 ಸಾವಿರಕ್ಕೆ ಖರೀದಿಸಿದ್ದರು. ನಮ್ಮ ಮಕ್ಕಳ ಒತ್ತಾಯದ ಮೇಲೆ ಅದನ್ನು ಈಗ ಮಾರಾಟ ಮಾಡಬೇಕಾಗಿದೆ. ಈಗ ಈ ನಿವೇಶನದ ಬೆಲೆ ಸುಮಾರು ₹ 2 ಕೋಟಿ ಎನ್ನುತ್ತಾರೆ. ಮಾರಾಟ ಮಾಡಿ ಬಂದಿರುವ ಹಣವನ್ನು ಮಕ್ಕಳಿಗೆ ಹಂಚಬೇಕೆಂದಿದ್ದೇವೆ. ತೆರಿಗೆ ಉಳಿಸಲು ಸರಿಯಾದ ಮಾರ್ಗದರ್ಶನ ಮಾಡಿ.

ಉತ್ತರ: ನಿವೇಶನ 1985ರಲ್ಲಿ ಕೊಂಡರೂ ಹಣದುಬ್ಬರದ ಪರಿಣಾಮ ಕಂಡುಕೊಳ್ಳಲು 2001ರ ಏಪ್ರಿಲ್‌ 1ರಂದುನಿವೇಶನದ ಸರ್ಕಾರಿ ಬೆಲೆ ಎಷ್ಟಿತ್ತು ಎಂಬುದನ್ನು ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ತಿಳಿಯಬೇಕಾಗುತ್ತದೆ. 2001ರ ಏಪ್ರಿಲ್‌ 1ರಿಂದ 2021ರವರೆಗಿನ ಹಣದುಬ್ಬರದ ಲೆಕ್ಕಹಾಕಿ, ಅಲ್ಲಿ ಬರುವ ಮೊತ್ತಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಉಳಿದ ಮೊತ್ತದಲ್ಲಿ ಸೆಕ್ಷನ್‌ 54ಇಸಿ ಆಧಾರದ ಮೇಲೆ ಗರಿಷ್ಠ ₹ 50 ಸಾವಿರವನ್ನು ಎನ್‌ಎಚ್‌ಎಐ–ಆರ್‌ಇಸಿ ಬಾಂಡ್‌ಗಳಲ್ಲಿ ತೊಡಗಿಸಿ. ಉಳಿದ ಮೊತ್ತದಲ್ಲಿ ಮನೆ ಕಟ್ಟಬಹುದು ಅಥವಾ ಮನೆ ಕೊಳ್ಳಬಹುದು. ಇದರಿಂದ ಸಂಪೂರ್ಣವಾಗಿ ತೆರಿಗೆ ವಿನಾಯಿತಿ ಪಡೆಯಬಹುದು. ಈ ಮಾರ್ಗ ಹೊರತುಪಡಿಸಿ ತೆರಿಗೆ ಉಳಿಸಲು ಬೇರಾವ ಉಪಾಯಗಳಿಲ್ಲ. ಈ ಮಾರ್ಗ ಅನುಸರಿಸದೇ ಇದ್ದಲ್ಲಿ ಶೇಕಡ 20ರಷ್ಟು ತೆರಿಗೆ ಕೊಟ್ಟು ನಂತರವೇ ಉಳಿದ ಹಣ ಮಕ್ಕಳಿಗೆ ಹಂಚಬಹುದು. ಏನಾದರೂ ಗೊಂದಲ ಇದ್ದರೆ ನನಗೆ ಕರೆ ಮಾಡಿ.

**
ಸಾವಿತ್ರಿ, ಊರುಬೇಡ

* ಪ್ರಶ್ನೆ: ನಾನು ಇಲ್ಲಿಯವರೆಗೆ ನೀವು ಕೊಡುವ ಸಲಹೆಯ ಮೇರೆಗೆ ಆರ್‌.ಡಿ. ಮಾಡುತ್ತಾ ಬಂದು ಸುಮರು ₹ 35 ಲಕ್ಷ ಬ್ಯಾಂಕ್‌ ಠೇವಣಿ ಮಾಡಿದ್ದೇನೆ. ವೃತ್ತಿಯಲ್ಲಿ ನಾನು ಸರ್ಕಾರಿ ಹೈಸ್ಕೂಲ್‌ ಮುಖ್ಯೋಪಾಧ್ಯಾಯಿನಿ. ಇದೇ ಡಿಸೆಂಬರ್‌ನಲ್ಲಿ ನನಗೆ ನಿವೃತ್ತಿಯಾಗಲಿದೆ. ನಿವೃತ್ತಿಯಿಂದ ಕನಿಷ್ಠ ₹ 65 ಲಕ್ಷ ಬರಬಹುದು. ನನಗೆ ಇಬ್ಬರು ಮಕ್ಕಳು. ಇಬ್ಬರಿಗೂ ಮದುವೆಯಾಗಿದೆ, ನಮ್ಮೊಡನಿದ್ದಾರೆ. ನಿವೃತ್ತಿಯಿಂದ ಬರುವ ಹಣವನ್ನು ಮಕ್ಕಳ ಹೆಸರಿನಲ್ಲಿ ಠೇವಣಿ ಮಾಡಿದರೆ ನನಗಾಗಲಿ, ಮಕ್ಕಳಿಗಾಗಲಿ ತೆರಿಗೆ ಬರಬಹುದೇ? ಉಳಿತಾಯವನ್ನು ಸಮರ್ಪಕವಾಗಿ, ಭದ್ರತೆಯೊಂದಿಗೆ ಹೇಗೆ ಹೂಡಿಕೆ ಮಾಡಲಿ?

ಉತ್ತರ: ನೀವು ಈಗಾಗಲೇ ಒಗ್ಗೂಡಿಸಿದ ₹ 35 ಲಕ್ಷ ಹಾಗೂ ನಿಮಗೆ ಬರಲಿರುವ ₹ 65 ಲಕ್ಷ ಇವೆರಡರಿಂದ ₹ 1 ಕೋಟಿ ನಿಮ್ಮೊಡನಿರುತ್ತದೆ. ಕ್ರಮಬದ್ಧವಾಗಿ ಹೂಡಿಕೆ ಮಾಡುತ್ತಾ ಬಂದು ₹ 35 ಲಕ್ಷ ಠೇವಣಿ ಮಾಡಿದ ನಿಮಗೆ ಅಭಿನಂದನೆ. ನಿಮಗೆ ಕನಿಷ್ಠ ₹ 50 ಸಾವಿರ ತಿಂಗಳಿಗೆ ಪಿಂಚಣಿ ಬರಬಹುದು. ಮಕ್ಕಳಿಗೆ ಮದುವೆ ಆಗಿರುವುದರಿಂದ ನಿಮಗೆ ಅಷ್ಟೊಂದು ಜವಾಬ್ದಾರಿ ಇರುವುದಿಲ್ಲ. ನೀವು ನಿವೃತ್ತಿಯಿಂದ ಬರುವ ಅಥವಾ ನಿಮ್ಮೊಡನಿರುವ ಹಣವನ್ನು ಮಕ್ಕಳ ಹೆಸರಿಗೆ ವರ್ಗಾಯಿಸಿದ ನಂತರ ಆ ಹಣದ ಮೇಲಿನ ಹಕ್ಕು ನಿಮಗಿರುವುದಿಲ್ಲ. ಬಡ್ಡಿ ಆದಾಯದಿಂದ ಬರುವ ತೆರಿಗೆ ಉಳಿಸಲು ಕೆಲವರು ಈ ಮಾರ್ಗ ಅನುಸರಿಸುತ್ತಾರೆ. ಸಾಧ್ಯವಾದರೆ ಎರಡು ನಿವೇಶನ ನಿಮ್ಮ ಹೆಸರಿನಲ್ಲಿ ಕೊಂಡು ಇಬ್ಬರೂ ಮಕ್ಕಳಿಗೆ ಅನುಕೂಲ ಆಗುವಂತೆ ಉಯಿಲು ಬರೆದಿಡಿ. ನಿವೃತ್ತಿಯಿಂದ ಬರುವ ಹಣದಲ್ಲಿ ₹ 15 ಲಕ್ಷ ಅಂಚೆ ಕಚೇರಿ ಹಿರಿಯ ನಾಗರಿಕರ ಠೇವಣಿ ಹಾಗೂ ಇನ್ನು ₹ 15 ಲಕ್ಷ ಎಲ್‌ಐಸಿ ವಯೋವಂದನಾ ಯೋಜನೆಯಲ್ಲಿ ತೊಡಗಿಸಿ. ಇನ್ನುಳಿದ ಹಣ ಪಿಂಚಣಿ ಪಡೆಯುವ ಬ್ಯಾಂಕ್‌ನಲ್ಲಿ ಒಮ್ಮೆಗೇ ಬಡ್ಡಿಬರುವ ಠೇವಣಿಯಲ್ಲಿ 5 ವರ್ಷಗಳ ಅವಧಿಗೆ ಇರಿಸಿ. ನಿಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇನೆ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT