ನಾನು ಪ್ರತಿ ವರ್ಷ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿದ್ದೇನೆ. ಈಗಾಗಲೇ, ನನ್ನ ವೇತನ ಆದಾಯವು ನಮ್ಮ ತೆರಿಗೆ ಖಾತೆಯಲ್ಲಿ ದಾಖಲಾಗಿದೆ. ಆದರೆ, ನಾನು ಕೆಲವು ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿದ್ದೇನೆ. ಬ್ಯಾಂಕ್ ತೆರಿಗೆ ಕಡಿತ ಮಾಡಿಲ್ಲ. ಈ ಆದಾಯವು ಕಳೆದ ವರ್ಷ ಸುಮಾರು ₹50 ಸಾವಿರ ಆಗಿರಬಹುದು. ನನ್ನ ಯಾವುದೇ ತೆರಿಗೆ ಖಾತೆ, ಎಐಎಸ್ ಖಾತೆ ಇತ್ಯಾದಿಯಲ್ಲಿ ಈ ತೆರಿಗೆ ಕಡಿತಗೊಳಿಸದೆ ಪಾವತಿಸಿರುವ ಬಡ್ಡಿ ಆದಾಯದ ಮಾಹಿತಿ ಇಲ್ಲದ ಕಾರಣ ಅಂತಹ ಆದಾಯವನ್ನು ಘೋಷಿಸುವ ಅಗತ್ಯ ಇದೆಯೇ?
ಬಡ್ಡಿ ಆದಾಯದ ಮೇಲೆ ತೆರಿಗೆ ಕಡಿತ ಆಗದೆ ಇದ್ದರೂ ತೆರಿಗೆ ಪಾವತಿದಾರ ತನ್ನ ಎಲ್ಲಾ ಆದಾಯವನ್ನು (ಅದು ಬ್ಯಾಂಕ್‌ಗಳಿಂದ ಬಂದಿರಲಿ ಅಥವಾ ಬೇರೆ ಮೂಲಗಳಿಂದ ಬಂದಿರಲಿ) ಸ್ವಯಂ ಘೋಷಿಸಿ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ವಿವರಿಸಬೇಕಿದೆ. ವಾರ್ಷಿಕ ಮಾಹಿತಿಗಳ ವರದಿ (ಎಐಎಸ್) ಅಥವಾ ಫಾರ್ಮ್ 26ಎ ಎಸ್‌ನಲ್ಲಿ ತೋರಿಸಲ್ಪಟ್ಟಿಲ್ಲವೆಂಬ ಕಾರಣಕ್ಕಾಗಿ ಆದಾಯವನ್ನು ವಿವರಿಸದಿರುವುದು ಸರಿಯಲ್ಲ.
ಆದಾಯ ತೆರಿಗೆ ಕಾಯ್ದೆ ಪ್ರಕಾರ ಹಣಕಾಸು ಸಂಸ್ಥೆಯು ಕೆಲವೊಮ್ಮೆ ಸರಿಯಾದ ಪೂರ್ಣ ಮಾಹಿತಿಯನ್ನು ವರದಿ ಮಾಡದೆ ಇದ್ದಿರಬಹುದು. ಆದರೆ, ತೆರಿಗೆದಾರ ಆದಾಯವನ್ನು ಸರಿಯಾಗಿ ಘೋಷಿಸುವುದು ಅನಿವಾರ್ಯ. ಇದರಿಂದ ದಂಡ, ಬಡ್ಡಿ ಅಥವಾ ಮುಂದಿನ ತಗಾದೆಗಳನ್ನು ತಪ್ಪಿಸಲು ಸಾಧ್ಯವಾಲಿದೆ.
2024-25ನೇ ಆರ್ಥಿಕ ವರ್ಷಕ್ಕೆ ನನ್ನ ಒಟ್ಟು ಆದಾಯ ₹10 ಲಕ್ಷ ಆಗಿದೆ. ವಯೋವೃದ್ಧರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಅಡಿ ಉಳಿತಾಯ ₹1.50 ಲಕ್ಷ ಮತ್ತು ಆರೋಗ್ಯ ವಿಮಾ ಪ್ರೀಮಿಯಂ ₹75 ಸಾವಿರ ಪಾವತಿಸಿದ್ದೇನೆ. ಪಿಂಚಣಿ, ಠೇವಣಿ ಬಡ್ಡಿ ಮತ್ತು ವೃತ್ತಿಪರ ಸೇವೆಗಳಿಗೆ ಪಡೆಯುವ ಸಲಹಾ ಶುಲ್ಕಗಳು ನನ್ನ ಆದಾಯದ ಮೂಲಗಳಾಗಿವೆ.
ಅಲ್ಲದೆ, ನನ್ನ ಪತ್ನಿಯ ಒಟ್ಟು ಆದಾಯ ₹8 ಲಕ್ಷ ಇದೆ. ಎಸ್‌ಸಿಎಸ್‌ಎಸ್ ಅಡಿ ಉಳಿತಾಯ ₹1.50 ಲಕ್ಷ ಮತ್ತು ಆರೋಗ್ಯ ವಿಮಾ ಪ್ರೀಮಿಯಂ ₹15 ಸಾವಿರ ಇದೆ. ಅವರ ಆದಾಯದ ಮೂಲ- ಠೇವಣಿ ಮೇಲಿನ ಬಡ್ಡಿ ಮಾತ್ರ ಇರುತ್ತದೆ. ಜುಲೈ ಅಂತ್ಯದೊಳಗೆ ತೆರಿಗೆ ರಿಟರ್ನ್ಸ್ ಸಲ್ಲಿಸಲು ನನಗೆ ಮತ್ತು ನನ್ನ ಪತ್ನಿಗೆ ಯಾವ ತೆರಿಗೆ ಪದ್ಧತಿ ಸೂಕ್ತ ಎಂಬ ಬಗ್ಗೆ ತಿಳಿಸಿ.
2025-26ನೇ ಆರ್ಥಿಕ ವರ್ಷದಿಂದ ಜಾರಿಗೆ ಬರುವ ಹೊಸ ತೆರಿಗೆ ಪದ್ಧತಿಯು ಸಂಬಳ ಪಡೆಯುವ ವರ್ಗಕ್ಕೆ (ಪಿಂಚಣಿ ಆದಾಯ) ಈ ಹಿಂದಿನಂತೆ ಕಡಿತಗಳಿಗೆ ಸಾಮಾನ್ಯ ವಿನಾಯಿತಿಗಳು ಮತ್ತು ಮನೆ ಬಾಡಿಗೆ ಆದಾಯಕ್ಕೆ ಸಂಬಂಧಿಸಿ ದುರಸ್ತಿ ಮತ್ತು ನಿರ್ವಹಣೆಗಾಗಿ ಬಾಡಿಗೆ ಆದಾಯದಿಂದ ಶೇ 30ರಷ್ಟು ಕಡಿತವನ್ನು ಅನುಮತಿಸುತ್ತದೆಯೇ?
ಪ್ರಸಕ್ತ ಆರ್ಥಿಕ ವರ್ಷದಿಂದ ನಾನು ನನ್ನ ಮನೆಯ ಒಂದು ಭಾಗವನ್ನು ಬಾಡಿಗೆಗೆ ನೀಡಿದ್ದು, ಬಾಡಿಗೆ ಹಣವನ್ನು ನನ್ನ ಪತ್ನಿಯ ಖಾತೆಗೆ ಜಮಾ ಮಾಡಲಾಗುತ್ತಿದೆ. ದಯವಿಟ್ಟು ನಾವು ಬಾಡಿಗೆ ಆದಾಯವನ್ನು ನನ್ನ ಪತ್ನಿ ಹೆಸರಿನಲ್ಲಿ ಘೋಷಿಸಬಹುದೇ ಎಂಬ ಬಗ್ಗೆ ಪರಾಮರ್ಶಿಸಿ ತಿಳಿಸಿ.
2024–25ನೇ ಆರ್ಥಿಕ ವರ್ಷಕ್ಕೆ ನೀವು ಮತ್ತು ನಿಮ್ಮ ಪತ್ನಿ ನಿಮ್ಮದೇ ಪ್ರತ್ಯೇಕವಾದ ದುಡಿಮೆ ಹಾಗೂ ಉಳಿತಾಯದ ಮೂಲಗಳಿಂದ ಆದಾಯ ಗಳಿಸುತ್ತಿದ್ದೀರಿ. ನೀವು ಪ್ರಸ್ತುತ ಹಳೆಯ ತೆರಿಗೆ ಪದ್ಧತಿಯಡಿ ಎಸ್‌ಸಿಎಸ್‌ಎಸ್ ಅಡಿ ₹1.50 ಲಕ್ಷ ಮತ್ತು ಆರೋಗ್ಯ ವಿಮಾ ಪ್ರೀಮಿಯಂ ₹75 ಸಾವಿರ ಪಾವತಿಸಿರುತ್ತೀರಿ. ಇಲ್ಲಿ ಇರುವ ಮೊದಲ ಪ್ರಶ್ನೆಯೆಂದರೆ ಈ ಎಸ್‌ಸಿಎಸ್‌ಎಸ್‌ನಲ್ಲಿ ಮಾಡಿರುವ ಹೂಡಿಕೆಯನ್ನು ತೆರಿಗೆ ಕಡಿತ ಪಡೆಯಲು ಮಾಡಿದ್ದೀರೆ ಅಥವಾ ಉಳಿತಾಯಕ್ಕಾಗಿ ಮಾಡಿದ್ದೀರಾ ಎಂಬುದಾಗಿದೆ. ಒಂದು ವೇಳೆ ಉಳಿತಾಯಕ್ಕಾಗಿ ಮಾಡಿರುವ ಹೂಡಿಕೆಯಾಗಿದ್ದರೆ ಅದನ್ನು ಮುಂದುವರಿಸಿ.
ಆದರೆ, ಕೇವಲ ತೆರಿಗೆ ಉಳಿತಾಯಕ್ಕಾಗಿ ಮಾಡಿರುವ ಹೂಡಿಕೆಯಾಗಿದ್ದರೆ ನಿಮಗೆ ಹೊಸ ತೆರಿಗೆ ಪದ್ಧತಿಯು ಈ ಎಲ್ಲಾ ರಿಯಾಯಿತಿ ಇಲ್ಲದೆಯೇ ಹೆಚ್ಚಿನ ತೆರಿಗೆ ಉಳಿತಾಯಕ್ಕೆ ಅನುವು ಮಾಡಿಕೊಡುತ್ತದೆ. ಹಾಗಾಗಿ, ನಿಮ್ಮ ನಿರ್ಧಾರವನ್ನು ಪರಾಮರ್ಶಿಸಿ. ಆರೋಗ್ಯ ವಿಮಾ ಪ್ರೀಮಿಯಂ ಹೇಗಿದ್ದರೂ ಆರೋಗ್ಯದ ವೆಚ್ಚದ ಸಂದರ್ಭದಲ್ಲಿ ಪ್ರಯೋಜನವಾಗುವ ಕಾರಣ ಅನಿವಾರ್ಯವಾಗಿ ಮಾಡಬೇಕಾದ ನಿಶ್ಚಿತ ಪಾವತಿಯಾಗುದೆ. ಹೀಗಾಗಿ, ಇಲ್ಲಿ ಹೋಲಿಕೆಯ ಪ್ರಶ್ನೆ ಬರುವುದಿಲ್ಲ.
ನಿಮ್ಮ ತೆರಿಗೆ ಪದ್ಧತಿ ಆಯ್ಕೆ ಬಗ್ಗೆ ಹೇಳುವುದಾದರೆ ಹೊಸ ತೆರಿಗೆ ಪದ್ಧತಿಯಡಿ ನೀವು ಉಲ್ಲೇಖಿಸಿದ ಪಾವತಿಗಳಿಗೆ ಯಾವುದೇ ತೆರಿಗೆ ರಿಯಾಯಿತಿ ಇರುವುದಿಲ್ಲ. ಆದರೆ, ತೆರಿಗೆ ದರ ಕಡಿಮೆ ಇದೆ. ಹೀಗಾಗಿ, ಹೊಸ ತೆರಿಗೆ ಪದ್ಧತಿ ಆಯ್ಕೆಯು ಉತ್ತಮವಾಗಿದೆ. 2025-26ನೇ ಆರ್ಥಿಕ ವರ್ಷದ ತೆರಿಗೆ ವಿಚಾರವಾಗಿ ಹೇಳುವುದಾದರೆ ನಿಮಗೆ ಪಿಂಚಣಿ ವೇತನ ಇರುವ ಕಾರಣ ಸ್ಟ್ಯಾಂಡರ್ಡ್ ಡಿಡಕ್ಷನ್ ಸಹಿತ ₹12.75 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. ಇದನ್ನು ರಿಟರ್ನ್ಸ್ ಸಲ್ಲಿಸಿ ಪಡೆಯಬೇಕಾಗಿರುತ್ತದೆ.
ಇನ್ನು ಬಾಡಿಗೆ ಆದಾಯ ಇರುವ ತೆರಿಗೆದಾರರಿಗೆ, ಆಸ್ತಿ ತೆರಿಗೆ ಪಾವತಿ ಆದ ಮೇಲೆ ಉಳಿಯುವ ಬಾಡಿಗೆ ಆದಾಯದ ಮೇಲೆ ಶೇ 30ರಷ್ಟು ನಿಶ್ಚಿತ ವೆಚ್ಚ- ನಿರ್ವಹಣಾ ಕಡಿತಗಳಿಗೆ ಅವಕಾಶ ಇದೆ. ನೀವು ನಿಮ್ಮ ಮಾಲೀಕತ್ವದ ಮನೆಯ ಭಾಗವನ್ನು ಬಾಡಿಗೆಗೆ ನೀಡಿದ್ದು ಅದರ ಆದಾಯವನ್ನು ನಿಮ್ಮ ಪತ್ನಿಯ ಹೆಸರಿನಲ್ಲಿ ಗಳಿಸುತ್ತಿದ್ದೀರಿ. ಇಲ್ಲಿ ಕಾನೂನಾತ್ಮಕವಾಗಿ ನೋಡುವುದಾದರೆ ಮಾಲೀಕತ್ವ ಬದಲಾಗದೆ ಅದಕ್ಕೆ ಸಂಬಂಧಿತ ಆದಾಯ ಮಾತ್ರ ಅವರ ಹೆಸರಲ್ಲಿ ಸ್ವೀಕರಿಸುವುದಕ್ಕೆ ಅವಕಾಶವನ್ನು ನೀವು ಪರಸ್ಪರ ಮಾಡಿ ಕೊಟ್ಟಿದ್ದರೂ, ಬಾಡಿಗೆ ಆದಾಯವು ನಿಮ್ಮ ತೆರಿಗೆ ರಿಟರ್ನ್ಸ್‌ನಲ್ಲೇ ಸಲ್ಲಿಕೆ ಆಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.