ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

Published : 31 ಜುಲೈ 2024, 0:30 IST
Last Updated : 31 ಜುಲೈ 2024, 0:30 IST
ಫಾಲೋ ಮಾಡಿ
Comments
ಪ್ರ

ನನ್ನ ಪತ್ನಿಯ ಹೆಸರಲ್ಲಿ ಕೆಲವು ಉಳಿತಾಯ ಖಾತೆಗಳಿದ್ದವು. ಇದರಲ್ಲಿ ಅಂಚೆ ಕಚೇರಿಯಲ್ಲಿ ತೆರೆದಿರುವ ಎನ್‌ಎಸ್‌‌ಸಿ ಹಾಗೂ ಉಳಿತಾಯ ಖಾತೆ ಸೇರಿವೆ. ಅವರು ನಿಧನರಾಗಿರುವುದರಿಂದ ಒಟ್ಟಾರೆ ₹6.08 ಲಕ್ಷ ಮೊತ್ತವು ನನ್ನ ಖಾತೆಗೆ ಪ್ರಸಕ್ತ ವರ್ಷದ ಜನವರಿಯಲ್ಲಿ ಜಮೆ ಆಗಿದೆ. ಇದರ ಮೇಲೆ ಆದಾಯ ತೆರಿಗೆ ಬಂದಿರುವುದು ನನ್ನ ಖಾತೆಯಲ್ಲಿ ಗೋಚರಿಸುತ್ತಿದೆ. ಈ ವರ್ಗಾವಣೆಗೆ ತೆರಿಗೆ ಅನ್ವಯವಾಗುತ್ತದೆಯೇ? ಎಂಬ ಬಗ್ಗೆ ತಿಳಿಸಿ.

ನೀವು ನೀಡಿರುವ ಮಾಹಿತಿಯಂತೆ ಪತ್ನಿಯ ಖಾತೆಗೆ ನೀವು ನಾಮಿನಿ ಆಗಿರುವುದರಿಂದ ಉಲ್ಲೇಖಿಸಿರುವ ಮೊತ್ತ ಬಂದಿದೆ. ಮೊದಲ ಹಂತದಲ್ಲಿ ಈ ಮೊತ್ತವು ನಿಮಗೆ ಯಾವುದೇ ಆದಾಯವಲ್ಲ. ಮೃತರ ಸಂಬಂಧಿಯಾಗಿರುವ ಕಾರಣಕ್ಕೆ ಈ ಹಣ ನಿಮ್ಮ ಖಾತೆಗೆ ಜಮೆ ಆಗಿರುತ್ತದೆ. ಒಂದು ವೇಳೆ ಈ ಮೊತ್ತದ ಮೇಲೆ ಬಡ್ಡಿ ಜಮೆ ಆಗಿ ತೆರಿಗೆ ಕಡಿತಗೊಳಿಸುವ ಹಂತ ಮೀರಿದ್ದರೆ ಮಾತ್ರ ತೆರಿಗೆ ಕಡಿತಗೊಳಿಸಬಹುದು. ಬರಬಹುದಾದ ಬಡ್ಡಿ ಮೊತ್ತ ₹40 ಸಾವಿರಕ್ಕೂ (ಹಿರಿಯ ನಾಗರಿಕರಿಗೆ ₹50,000) ಕಡಿಮೆ ಇದ್ದರೆ, ತೆರಿಗೆ ಕಡಿತಗೊಳಿಸುವ ಅಗತ್ಯವಿರುವುದಿಲ್ಲ.  

ಆದಾಯ ತೆರಿಗೆಯ ನಿಯಮ 114ಇ ಅಡಿ ಯಾವುದೇ ಅಂಚೆ ಖಾತೆಗೆ ಒಂದು ಆರ್ಥಿಕ ವರ್ಷದಲ್ಲಿ ₹10 ಲಕ್ಷ ನಗದು ಮೊತ್ತಕ್ಕಿಂತ ಅಧಿಕ ಜಮೆ ಮಾಡಿದಾಗ ಅಥವಾ ಆ ಮೊತ್ತಕ್ಕಿಂತ ಅಧಿಕ ಮೊತ್ತದ ಠೇವಣಿ ಪಡೆದಾಗ ಮಾತ್ರ ಅಂತಹ ಮೊತ್ತವನ್ನು ಅಂಚೆ ಇಲಾಖೆ ಪ್ರತ್ಯೇಕವಾಗಿ ಆದಾಯ ತೆರಿಗೆ ಇಲಾಖೆಗೆ ವರದಿ ಸಲ್ಲಿಸುವ ಮೂಲಕ ಮಾಹಿತಿ ನೀಡಬೇಕಾಗುತ್ತದೆ. ನೀವು ಕೊಟ್ಟಿರುವ ಮಾಹಿತಿಯಂತೆ ಈ ಮೇಲಿನ ಯಾವುದೇ ವರ್ಗದಲ್ಲಿ ನಿಮ್ಮ ವರ್ಗಾವಣೆ ಬರದ ಕಾರಣ ನಿಮ್ಮ ಖಾತೆಯಲ್ಲಿ ಯಾವುದೇ ವರ್ಗಾವಣೆ ಮೊತ್ತ ಕಂಡುಬರುವ ಅಗತ್ಯವಿಲ್ಲ. ಜೊತೆಗೆ, ತೆರಿಗೆಯು ಅನ್ವಯವಾಗುವುದಿಲ್ಲ.  

ಪ್ರ

ನಾನು 2023ರ ಡಿಸೆಂಬರ್‌ನಲ್ಲಿ ಮೈಸೂರಿನಲ್ಲಿದ್ದ ನನ್ನ ನಿವೇಶನವನ್ನು ₹80 ಲಕ್ಷಕ್ಕೆ ಮಾರಾಟ ಮಾಡಿದ್ದೇನೆ. ಆ ಹಣ ನನ್ನ ಬ್ಯಾ೦ಕ್ ಖಾತೆಯಲ್ಲಿದೆ. ಖರೀದಿದಾರರು ಶೇ 1ರ ದರದಲ್ಲಿ ಟಿಡಿಎಸ್ ಮಾಡಿರುತ್ತಾರೆ. ಈಗ ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್ ಖರೀದಿಸುವ ಬಗ್ಗೆ ನಾನು ಮಾತುಕತೆ ನಡೆಸಿದ್ದೇನೆ. ಇದರ ಮೌಲ್ಯ ₹58 ಲಕ್ಷ. ಈ ಆಸ್ತಿಯನ್ನು ನಾನು ಅನಿವಾಸಿ ಭಾರತೀಯರೊಬ್ಬರಿಂದ ಖರೀದಿ ಮಾಡಬೇಕಾಗಿದೆ. ಇದರಿಂದ ನಾನು ಶೇ 20ರಷ್ಟು ಟಿಡಿಎಸ್ ಪಾವತಿ ಮಾಡಬೇಕೆಂದು ತಿಳಿಯಿತು. ಈ ವ್ಯವಹಾರವನ್ನು ನಾನು ತ್ವರಿತವಾಗಿ ಮಾಡಬೇಕಾಗಿರುವುದರಿಂದ ದಯವಿಟ್ಟು ಉತ್ತರಿಸಿ.

ನೀವು ನೀಡಿರುವ ಮಾಹಿತಿಯಂತೆ ಈಗಾಗಲೇ ನಿಮ್ಮ ಮೈಸೂರಿನ ನಿವೇಶನ ಮಾರಾಟ ಮಾಡಿದ್ದೀರಿ. ಇದಕ್ಕೆ ಖರೀದಿದಾರರು ಕಡಿತ ಮಾಡಬೇಕಾದ ಟಿಡಿಎಸ್ ಅನ್ನು ಈಗಾಗಲೇ ಕಡಿತ ಮಾಡಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿ ನಿಮಗೆ ಯಾವ ವರ್ಗದಲ್ಲಿ ತೆರಿಗೆ ಅನ್ವಯಿಸುತ್ತದೆ ಎಂಬುದನ್ನು ಪರಿಶೀಲಿಸಿ. ಒಂದು ವೇಳೆ ಈ ನಿವೇಶನವು ನೀವು ಹೊಂದಿರುವ ಅವಧಿ 24 ತಿಂಗಳಿಗಿಂತ ಹೆಚ್ಚಿದ್ದರೆ ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ ಅನ್ವಯಿಸುತ್ತದೆ.

ಇದಕ್ಕಿಂತ ಕಡಿಮೆ ಅವಧಿಯ ಹೂಡಿಕೆಯಾಗಿದ್ದರೆ, ಅಲ್ಪಾವಧಿ ಬಂಡವಾಳ ಗಳಿಕೆ ಮೇಲಿನ ತೆರಿಗೆ ಅನ್ವಯಿಸುತ್ತದೆ. ಇದಕ್ಕೆ ಕ್ರಮವಾಗಿ ಶೇ 20ರಷ್ಟು ತೆರಿಗೆ ಅಥವಾ ನಿಮಗೆ ಅನ್ವಯಿಸುವ ವಿವಿಧ ಸ್ಥರದ ದರ ಅನ್ವಯವಾಗುತ್ತದೆ. ನೀವು ಮನೆಯಲ್ಲಿ ಮರು ಹೂಡಿಕೆ ಮಾಡುವ ಕಾರಣ ನಿಮಗೆ ಸೆಕ್ಷನ್ 54ಎಫ್ ಅಡಿ ತೆರಿಗೆ ವಿನಾಯಿತಿ ಪಡೆಯಬಹುದು.

ಅನಿವಾಸಿ ಭಾರತೀಯರಿಂದ (ಎನ್‌ಆರ್‌ಐ) ನೀವು ಫ್ಲ್ಯಾಟ್‌ ಖರೀದಿಸುವಾಗ ಅನ್ವಯವಾಗುವ ಕೆಲವು ತೆರಿಗೆ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇದಕ್ಕೆ ಯಾವುದೇ ಮೌಲ್ಯದ ಮಿತಿ ಇಲ್ಲ. ಹೀಗಾಗಿ, ಮೊದಲ ಹಂತದಲ್ಲಿ ತೆರಿಗೆ ಕಡಿತಕ್ಕಾಗಿ ನೀವು ಟ್ಯಾನ್ ಸಂಖ್ಯೆ ಹೊಂದಿರಬೇಕು. ಇದಕ್ಕಾಗಿ ಖರೀದಿದಾರರಾದ ನೀವು ಟ್ಯಾನ್ ಸಂಖ್ಯೆಯನ್ನು ಆದಾಯ ತೆರಿಗೆ ಇಲಾಖೆಯಿಂದ ಪಡೆಯಲು ಅರ್ಜಿ ಸಲ್ಲಿಸಬೇಕು. ತದನಂತರ ಅನ್ವಯವಾಗುವ ತೆರಿಗೆ ದರದಂತೆ (ಶೇ 22.88ರಷ್ಟು) ತೆರಿಗೆ ಕಡಿತಗೊಳಿಸಬೇಕು.

ಮೇಲೆ ಉಲ್ಲೇಖಿಸಿದ ಟಿಡಿಎಸ್ ಮೊತ್ತ ಕಡಿತಗೊಳಿಸಿ ನಂತರದ ತಿಂಗಳ 7ನೇ ದಿನಾಂಕದೊಳಗೆ ಆದಾಯ ತೆರಿಗೆ ಇಲಾಖೆಗೆ ಪಾವತಿಸಬೇಕು. ಜಮೆ ಮಾಡಿದ ನಂತರ ನೀವು ಟಿಡಿಎಸ್ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ. ಈ ರಿಟರ್ನ್ಸ್ ಅನ್ನು ಟಿಡಿಎಸ್ ಕಡಿತಗೊಳಿಸಿದ ಆಯಾ ತ್ರೈಮಾಸಿಕದ ಒಂದು ತಿಂಗಳೊಳಗೆ ಸಲ್ಲಿಸಬೇಕಾಗುತ್ತದೆ. ಕೊನೆಯ ಹಂತವಾಗಿ ಖರೀದಿದಾರರಾದ ನೀವು ಆಸ್ತಿ ಮಾರಾಟ ಮಾಡಿದವರಿಗೆ ‘ಫಾರ್ಮ್ 16ಎ’ ಅನ್ನು ಒದಗಿಸಬೇಕಾಗುತ್ತದೆ.

ಒಂದು ವೇಳೆ ಮಾರಾಟ ಮಾಡುವವರಿಗೆ ಇಲ್ಲಿನ ಆದಾಯದ ಮೇಲೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ ಅಥವಾ ನೀವು ಕಡಿತಗೊಳಿಸುವ ತೆರಿಗೆ ಅವರ ಒಟ್ಟಾರೆ ಆದಾಯಕ್ಕೆ ಸಂಬಂಧಿಸಿದಂತೆ ಹೆಚ್ಚಾಗುವುದಿದ್ದರೆ, ಅವರು ಸ್ಥಳೀಯ ಆದಾಯ ತೆರಿಗೆ ಇಲಾಖೆಯಿಂದ ‘ಫಾರ್ಮ್ 13’ ಪಡೆದುಕೊಳ್ಳಬಹುದು. ಇದರ ಆಧಾರದ ಮೇಲೆ ನೀವು ಶೂನ್ಯ ಅಥವಾ ಅದರಲ್ಲಿ ಉಲ್ಲೇಖಿಸಿಸುವ ತೆರಿಗೆ ದರದಂತೆ ಕಡಿಮೆ ಮೊತ್ತ ಕಡಿತಗೊಳಿಸಲು ಅವಕಾಶವಿದೆ.

ನಿಮ್ಮ ಖರೀದಿ ಹಾಗೂ ಹಣ ಸಂದಾಯವಾದ ನಂತರ ಟ್ಯಾನ್ ಸಂಖ್ಯೆಯನ್ನು ರದ್ದುಗೊಳಿಸಲು ತೆರಿಗೆ ಇಲಾಖೆಗೆ ಮನವಿ ಸಲ್ಲಿಸಿ. ಇದಕ್ಕಾಗಿ ಸ್ಥಳೀಯ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ ಅಗತ್ಯವಿರುವ ನೆರವು ಪಡೆದುಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT