ಮಂಗಳವಾರ, ನವೆಂಬರ್ 24, 2020
19 °C

Pv Web Exclusive| ಗೃಹೋದ್ದಿಮೆಗೆ ಮನವೊಲಿಸಿದ ಕೋವಿಡ್‌

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

Prajavani

ಕೊರೊನಾ – ಲಾಕ್‌ಡೌನ್‌ನಿಂದಾಗಿ ಆರೇಳು ತಿಂಗಳುಗಳಿಂದ ಮನೆಯಲಿದ್ದ ಕೊಡಗಿನ ಶಿಕ್ಷಕಿ ಶೈಲಾ ನರೇಶ್‌ಗೆ ತಮ್ಮ ತೋಟದಲ್ಲಿದ್ದ ಎಳೆ ಹಲಸು, ಬಾಳೆಯ ದಿಂಡು ಮತ್ತು ಬಿದಿರಿನ ಕಳಲೆಯಂತಹ ಕೃಷಿ ಉತ್ಪನ್ನಗಳು ಸ್ವಾವಲಂಬಿ ಉದ್ಯೋಗದ ಪಾಠ ಹೇಳಿಕೊಟ್ಟಿವೆ. ಈ ಸ್ಥಳೀಯ ಕೃಷಿ ಉತ್ಪನ್ನಗಳನ್ನು ಬಳಸಿಕೊಂಡು ಕಲಿತ ಮೌಲ್ಯವರ್ಧನೆಯ ಪಾಠಗಳು, ಶಿಕ್ಷಕಿ ವೃತ್ತಿಯ ಜತೆಗೆ ಒಂದು ಹೊಸ ಉದ್ಯೋಗವನ್ನೂ ಕಲ್ಪಿಸಿದೆ !

ಮಾರ್ಚ್‌ನಲ್ಲಿ ಲಾಕ್‌ಡೌನ್‌ ಘೋಷಣೆಯಾದ ನಂತರ ಮನೆಯಲ್ಲೇ ಉಳಿದಿದ್ದ ಶೈಲಾ ಅವರು ಪ್ರಾಯೋಗಿಕವಾಗಿ ತಮ್ಮ ತೋಟದಲ್ಲಿದ್ದ ಎಳೆಯ ಹಲಸು(ಎಳೆ ಗುಜ್ಜೆ), ಬಾಳೆದಿಂಡು ಮತ್ತು ಬಿದಿರಿನ ಕಳಲೆಯನ್ನು ಉಪ್ಪು ದ್ರಾವಣದೊಂದಿಗೆ ಸಂಸ್ಕರಿಸಿ, ರುಚಿಕಟ್ಟಾದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿದರು. ಹೀಗೆ ಪ್ರಾಯೋಗಿಕವಾಗಿ ಆರಂಭವಾಗಿದ್ದು ಈಗ ಅವರಿಗೆ ಕಾಯಂ ಆದಾಯದ ಮೂಲವಾಗಿದೆ.


ಉತ್ಪನ್ನಗಳೊಂದಿಗೆ ಪಲ್ಲವಿ ಮತ್ತು ಶೈಲಾ ನರೇಶ್

ಶೈಲಾ ಅವರಷ್ಟೇ ಅಲ್ಲ, ಖಾಸಗಿ ಕಾಲೇಜೊಂದರಲ್ಲಿ ಕೆಲಸ ಮಾಡುವ ಅಜ್ಜಿಕುಟ್ಟಿರಾ ಪಲ್ಲವಿ ಗಿರೀಶ್ ಕೂಡ ಲಾಕ್‌ಡೌನ್‌ ಅವಧಿಯಲ್ಲಿ ಇಂಥ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿದ್ದಾರೆ. ಕೃತಕ ಪದಾರ್ಥಗಳಿಲ್ಲದೇ (Arificial Preservatives) ತಯಾರಿಸಿದ ಈ ಉತ್ಪನ್ನಗಳನ್ನು ಉಪ್ಪಿನಕಾಯಿಯಿಂದ ಹಿಡಿದು ಕಟ್ಲೆಟ್‌ವರೆಗೆ ಬಳಸುತ್ತಾರೆ.  ಕೊಡಗಿನ ಶೈಲಾ, ಪಲ್ಲವಿಯರಂತಹ ಹತ್ತಾರು ಮಹಿಳೆಯರನ್ನು ಪ್ರೋತ್ಸಾಹಿಸುತ್ತಿರುವವರು ಕೊಡುಗು ನೇಚರ್ಸ್‌ ಬೆಸ್ಟ್‌ ಫುಡ್‌ ಕ್ಲಸ್ಟರ್‌ ಸಂಸ್ಥೆಯ ಮುಖ್ಯಸ್ಥೆ ಫ್ಯಾನ್ಸಿ ಗಣಪತಿ.

ಗೃಹ ಉದ್ಯಮಕ್ಕೆ ಪ್ರೋತ್ಸಾಹ

ಕೊಡಗು ನೇಚರ್ಸ್‌ ಬೆಸ್ಟ್‌ ಫುಡ್‌ ಕ್ಲಸ್ಟರ್‌, ಮಡಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕು ಸಾವಯವ ಕೃಷಿ ಸಹಕಾರಿ ನಿಮಿಯಮಿತ ಸಂಘದ ಅಂಗಸಂಸ್ಥೆಯು ಸ್ಥಳೀಯವಾಗಿ ದೊರೆಯುವ ಹಣ್ಣು, ತರಕಾರಿ, ಸಂಬಾರು ಪದಾರ್ಥಗಳನ್ನು ಬಳಸಿಕೊಂಡು ಮನೆಯಲ್ಲೇ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡುವ ಮಹಿಳಾ ಉದ್ಯಮಿಗಳನ್ನು ಬೆಂಬಲಿಸುತ್ತಿದೆ. ಅವರಿಗೆ ಉತ್ಪನ್ನಗಳ ತಯಾರಿಕೆಗೆ ಬೇಕಾದ ಐಡಿಯಾ, ತಂತ್ರಜ್ಞಾನ, ಮೌಲ್ಯವರ್ಧನೆಯ ತರಬೇತಿ ಹಾಗೂ ಮಾರುಕಟ್ಟೆಯ ಮಾರ್ಗದರ್ಶನದ ಮೂಲಕ ಉತ್ತೇಜನ ನೀಡುತ್ತಿದೆ. ಉದ್ಯಮದ ಎಲ್ಲ ಹಂತಗಳಲ್ಲೂ ಅವರಿಗೆ ಬೆನ್ನೆಲುಬಾಗಿ ನಿಲ್ಲುತ್ತಿದೆ.


ಚಿಲ್ಲಿ ಜಾಮ್

ಹತ್ತು ವರ್ಷಗಳ ಹಿಂದೆ ಶುರುವಾದ ಈ ಫುಡ್‌ ಕ್ಲಸ್ಟರ್‌ನಲ್ಲಿ ಆರಂಭದಲ್ಲಿ 50ರಿಂದ 60 ಸದಸ್ಯರಿದ್ದರು. ಈಗ ಕೊರೊನಾ ಕಾಲದಲ್ಲಿ ಈ ತಂಡಕ್ಕೆ ಸೇರುವ ಸದಸ್ಯರ ಸಂಖ್ಯೆ 160ಕ್ಕೆ ಏರಿದೆ. ಹೊಸ ಸದಸ್ಯರು ಹೊಸ ಆಲೋಚನೆ, ಐಡಿಯಾಗಳು, ರೆಸಿಪಿ (ಪಾಕವಿಧಾನಗಳು)ಗಳೊಂದಿಗೆ ತಂಡ ಸೇರುತ್ತಿದ್ದಾರೆ.

ಶೈಲಾ ನರೇಶ್ ಅವರು ಲಾಕ್‌ಡೌನ್ ಶುರುವಾದಾಗ ಎಳೆ ಗುಜ್ಜೆ ಉತ್ಪನ್ನಗಳು, ಬಾಳೆದಿಂಡಿನ ಪದಾರ್ಥಗಳ ತಯಾರಿಕೆ, ಪುದೀನ ಮತ್ತು ಶುಂಠಿಯಿಂದ ಸ್ಕ್ವಾಷ್‌ ಮಾಡುವುದನ್ನು ಕಲಿತಿದ್ದಾರೆ. ಈ ಅವಧಿಯಲ್ಲಿ 300 ಶೀಷೆಯಷ್ಟು ಹಲಸಿನ ಎಳೆ ಗುಜ್ಜೆಯದ್ದು, ಅಷ್ಟೇ ಪ್ರಮಾಣದ ಬಾಳೆ ದಿಂಡಿನ ಉತ್ಪನ್ನಗಳನ್ನು ಮಾರಾಟ ಮಾಡಿದ್ದಾರೆ. ‘ಮನೆಯಲ್ಲೇ ಬಾಳೆ ತೋಟ ಇದೆ. ಬಾಳೆ ದಿಂಡನ್ನು ಬಳಸಿಕೊಂಡು ಮನೆಯಲ್ಲೇ ಉತ್ಪನ್ನ ತಯಾರಿಸಿದೆ. ಫ್ಯಾನ್ಸಿ ಗಣಪತಿಯವರು ಮಾರ್ಗದರ್ಶನ ನೀಡಿದರು‘ ಎಂದು ಹೇಳಿದರು ಶೈಲಾ. 

ಫುಡ್ ಕ್ಲಸ್ಟರ್‌ನಲ್ಲಿ ಸದಸ್ಯರು ವೈವಿಧ್ಯಮಯ ಉಪ್ಪಿನಕಾಯಿ, ಜಾಮ್‌ಗಳಿಂದ ಹಿಡಿದು, ತರಕಾರಿಗಳನ್ನು ಉಪ್ಪು ನೀರಿನಲ್ಲಿ ಸಂಸ್ಕರಿಸಿಡುವಂತಹ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಸದ್ಯ ಈ ಸಂಸ್ಥೆ ಅಡಿ 70ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಲಾಕ್‌ಡೌನ್ ಕಾಲದಲ್ಲಿ ಫುಡ್‌ ಕ್ಲಸ್ಟರ್‌ ತಂಡ 50ರಿಂದ 60 ಕುಟುಂಬಗಳಿಗೆ ಪರ್ಯಾಯ ಜೀವನೋಪಾಯದ ದಾರಿ ತೋರಿದೆ.


ಫ್ಯಾಷನ್ ಫ್ರೂಟ್ ಜಾಮ್

ಮಹಿಳಾ ಸದಸ್ಯರೇ ಹೆಚ್ಚು

ಈ ಸಂಸ್ಥೆಯ ಸದಸ್ಯರಲ್ಲಿ ಮುಕ್ಕಾಲುಪಾಲು ಮಹಿಳೆಯರು. ಇವರೆಲ್ಲ ಬಿಡುವಿನ ಅವಧಿಯಲ್ಲಿ ಮನೆಯಲ್ಲೇ ಕುಳಿತು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುತ್ತಾರೆ. ಕೊಡಗಿನಲ್ಲೇ ಸಿಗುವ ನೈಸರ್ಗಿಕ ಉತ್ಪನ್ನಗಳ ಮೌಲ್ಯವರ್ಧಿಸುತ್ತಾರೆ. ಕೊಯ್ದು ಬಿಸಾಡುವ ಎಳೆ ಹಲಸಿನ ಕಾಯಿಯನ್ನು ಮೌಲ್ಯವರ್ಧನೆ ಮಾಡುತ್ತಾರೆ. ವಿವಿಧ ಹಣ್ಣುಗಳಿಂದ ಜಾಮ್‌, ತಂಪು ಪಾನೀಯಗಳು, ಚಾಕೊಲೇಟ್‌, ಉಪ್ಪಿನಕಾಯಿ, ಕಟ್ಲೆಟ್‌.. ಹೀಗೆ ಹಲವು ಉತ್ಪನ್ನಗಳನ್ನು ತಯಾರಿಸಿ, ವಿರಾಜಪೇಟೆಯಲ್ಲಿರುವ ಕ್ಲಸ್ಟರ್ ಸ್ಟೋರ್‌ನಲ್ಲಿಟ್ಟು ಮಾರಾಟ ಮಾಡುತ್ತಾರೆ.

ಈ ಸಂಘಟನೆಯ ಮೂಲ ಸಂಸ್ಥೆ ಸಾವಯವ ಕೃಷಿ ಸಹಕಾರಿ ಸಮಿತಿ ನಿಯಮಿತದಿಂದ ಹೈನುಗಾರಿಕೆಗೆ ಉತ್ತೇಜನ ನೀಡಿದ್ದು, ಸುಮಾರು 140 ರೈತರು ಹಸುಗಳನ್ನು ಸಾಕುತ್ತಿದ್ದಾರೆ. ಆ ರೈತರು ತುಪ್ಪ ತಂದು ಕೊಡುತ್ತಾರೆ. ಅದನ್ನು ಫ್ಲೇವರ್‌ಗಳೊಂದಿಗೆ ಮಾರಾಟ ಮಾಡುವ ಮೂಲಕ ರೈತರಿಗೂ ಈ ಸಂಸ್ಥೆ ನೆರವಾಗುತ್ತಿದೆ.

ಆನ್‌ಲೈನ್ ಮಾರುಕಟ್ಟೆಯತ್ತ

ಫ್ಯಾನ್ಸಿ ಮತ್ತು ಅವರ ತಂಡ ತಯಾರಿಸುವ ಉತ್ಪನ್ನಗಳಿಗೆ ಹೋಮ್‌ಸ್ಟೇ, ರೆಸಾರ್ಟ್, ಹೋಟೆಲ್‌ಗಳೇ ಮಾರುಕಟ್ಟೆಯ ತಾಣ. ಆದರೆ, ಕೊರೊನಾ ಲಾಕ್‌ಡೌನ್‌ನಿಂದಾಗಿ ಇವೆಲ್ಲ ಬಂದ್ ಆದವು. ಆದರೆ ಧೃತಿಗೆಡದ ಈ ತಂಡ, ‘ಆನ್‌ಲೈನ್ ಮಾರುಕಟ್ಟೆ‘ಯತ್ತ ಹೊರಳಿತು. ಹೋಮ್‌ ಮೇಡ್‌ ಉತ್ಪನ್ನಗಳಾದ್ದರಿಂದ ಆನ್‌ಲೈನ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

‘ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಸಂಘಟನೆಗೆ ಪರಿಚಯವಿರುವವರು ಇವರ ಉತ್ಪನ್ನಗಳನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡಲು ನೆರವಾಗಿದ್ದಾರೆ. ‘ಕಾಮರ್ಸ್ ಅಂಡ್ ಟ್ರೇಡ್ ಕೊಡಗು‘ ಎಂಬ ಸಂಸ್ಥೆ ಇವರ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ಬ್ರಾಂಡಿಂಗ್‌ ಒದಗಿಸಲು ಸಹಾಯ ಮಾಡಿದೆ‘ ಎಂದು ಸ್ಮರಿಸುತ್ತಾರೆ ಫ್ಯಾನ್ಸಿ.

‘ನಾವು ನಮ್ಮ ಉತ್ಪನ್ನಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇಟ್ಟು ಮಾರಾಟ ಮಾಡುತ್ತಿದ್ದೇವೆ. ಯಾವುದೇ ಕೃತಕ ಪದಾರ್ಥಗಳನ್ನು ಬಳಸದೇ ನೈಸರ್ಗಿಕ ಉತ್ಪನ್ನಗಳನ್ನು ಮನೆಯಲ್ಲೇ ಮೌಲ್ಯವರ್ಧಿಸಿದ ಉತ್ಪನ್ನಗಳಾದ್ದರಿಂದ (ಹೋಮ್‌ ಮೇಡ್‌) ಉತ್ತಮ ಬೇಡಿಕೆಯೂ ಇದೆ. ಆನ್‌ಲೈನ್ ಮಾರುಕಟ್ಟೆಯಿಂದ ದೊರೆತ ಉತ್ತಮ ಪ್ರತಿಕ್ರಿಯೆಯಿಂದಾಗಿ, ನಮಗೆ ಯಾವುದೇ ಉತ್ಪನ್ನವನ್ನೂ ತಯಾರಿಸಿ ಮಾರಾಟ ಮಾಡುವ ವಿಶ್ವಾಸ ಬಂದಿದೆ‘ ಎನ್ನುತ್ತಾರೆ ಫ್ಯಾನ್ಸಿ ಗಣಪತಿ.


ಕೊಡಗಿನಲ್ಲೇ ಸಿಗುವ ವಿವಿಧ ಹಣ್ಣುಗಳ ಜಾಮ್‌ಗಳು

ಜೀವನೋಪಾಯದ ಮಾರ್ಗ

‘ಈ ಲಾಕ್‌ಡೌನ್ ಅವಧಿಯಲ್ಲಿ ಬಹಳ ಮಂದಿಗೆ ನಮ್ಮ ಸಂಘಟನೆಯ ಚಟುವಟಿಕೆಗಳು ಆಸರೆ ನೀಡಿವೆ‘ ಎನ್ನುತ್ತಾರೆ ತಂಡದ ಸದಸ್ಯರು. ಮೊದಲು ಹತ್ತು ಶೀಶೆಗಳಷ್ಟು ಜಾಮ್ ತಯಾರಿಸುತ್ತಿದ್ದವರು ಲಾಕ್‌ಡೌನ್‌ನಲ್ಲಿ ನೂರು ಶೀಶೆ ಜಾಮ್‌ ತಯಾರಿಸಿ ಮಾರಾಟ ಮಾಡಿದ್ದಾರೆ. ‘ಬೇಡಿಕೆ ಬಂದ ಹಾಗೆ ಉತ್ಪನ್ನಗಳನ್ನು ತಯಾರಿಸಿಕೊಡುತ್ತೇವೆ‘ ಎನ್ನುತ್ತಾರೆ ಶೈಲಾ ತಿಮ್ಮಯ್ಯ, ಪಲ್ಲವಿ.

ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ತಂಡದ ಸದಸ್ಯರಿಗೆ ಸಿಎಫ್‌ಟಿಆರ್‌ಐ, ಕಾಬ್‌ಸೆಟ್, ಎಂಎಸ್‌ಎಂಇ ಸೇರಿ ಬೇರೆ ಬೇರೆ ಸಂಸ್ಥೆಗಳಲ್ಲಿ ತಾಂತ್ರಿಕ ತರಬೇತಿಯನ್ನು ಕೊಡಿಸಿದ್ದಾರೆ. ಹೀಗಾಗಿ, ಮೌಲ್ಯವರ್ಧಿತ ಉತ್ಪನ್ನ ತಯಾರಿಕೆ ಅನೇಕ ಕುಟುಂಬಗಳಿಗೆ ಜೀವನೋಪಾಯ ಕಲ್ಪಿಸುವ ಉದ್ಯೋಗವಾಗಿದೆ.

ಲಾಕ್‌ಡೌನ್‌ ವೇಳೆಯಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಈ ಸಂಸ್ಥೆ ಮನೆ ಬಾಗಿಲಲ್ಲೇ ಪರ್ಯಾಯ ದುಡಿಮೆಯ ಮಾರ್ಗ ತೋರಿದೆ. ಈ ಅವಧಿಯಲ್ಲಿ ಪ್ರಾಯೋಗಿಕವಾಗಿ ಉತ್ಪನ್ನಗಳನ್ನು ತಯಾರು ಮಾಡಿದವರಿಗೆ, ಮುಂದೆಯೂ ತಮ್ಮ ಉದ್ಯೋಗದ ಜತೆ ಈ ಉದ್ಯಮವನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸ ಬಂದಿದೆ. ‘ಶಾಲಾ ಕೆಲಸದ ಬಿಡುವಿನ ವೇಳೆಯಲ್ಲಿ ಖಂಡಿತ ಈ ಕಿರು ಉದ್ಯಮವನ್ನು ಮುಂದುವರಿಸಬಹುದು‘ ಎಂದು ಹೇಳುತ್ತಾರೆ ಶೈಲಾ ಮತ್ತು ಪಲ್ಲವಿ.

ವಿವಿಧ ಕಡೆಗಳಿಂದ ಬೇಡಿಕೆ

ಫ್ಯಾನ್ಸಿ ಅವರ ತಂಡದಲ್ಲಿರುವ ಕೆಲವು ಸದಸ್ಯರು ಪ್ರತಿ ಬಾರಿ ಹೊಸ ಹೊಸ ರೆಸಿಪಿಗಳೊಂದಿಗೆ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತಾರೆ. ಹೀಗಾಗಿ ವೈವಿಧ್ಯಮಯ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ. ಈ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಗುರುತಿಸಿದ ನಬಾರ್ಡ್‌ ‘ರೂರಲ್ ಮಾರ್ಟ್‘ ಯೋಜನೆಯಡಿ ₹2.25 ಲಕ್ಷ ಹಣ ನೀಡಿದೆ.

ಕೊಡಗು ಬೆಸ್ಟ್‌ ನೇಚರ್ಸ್‌ ಸ್ಟೋರ್ಸ್‌ ಕೊಡಗಿನ ಉತ್ಪನ್ನಗಳನ್ನಷ್ಟೇ ಮಾರಾಟ ಮಾಡುತ್ತಿದೆ. ಪ್ರತಿ ತಿಂಗಳ 25ನೇ ತಾರೀಖಿನಂದು ಉತ್ಪನ್ನಗಳ ತಯಾರಿಸುವ ಸದಸ್ಯರಿಗೆ ಹಣ ಸಂದಾಯವಾಗುತ್ತದೆ. ಸದ್ಯ ಕೆಲವೊಂದು ಹೋಮ್‌ಸ್ಟೇಗಳು ಈ ಸಂಸ್ಥೆಯ ಉತ್ಪನ್ನಗಳನ್ನು ಇಟ್ಟು ಮಾರಾಟ ಮಾಡಲು ಅನುಮತಿ ನೀಡಿವೆ. ಹಾಗಾಗಿ ಈ ತಂಡದ ಸದಸ್ಯರಿಗೆ ಮಾರುಕಟ್ಟೆಯ ಚಿಂತೆ ಇಲ್ಲ.

‘ನಮ್ಮ ಸಂಘಟನೆಯ ಕೆಲಸ ಗಮನಿಸಿ ಹೊರಗಿನ ಅನೇಕ ಕಂಪನಿಗಳು ನಮ್ಮಿಂದ ಉತ್ಪನ್ನಗಳನ್ನು ಖರೀದಿಸುತ್ತಿವೆ. ಇತ್ತೀಚೆಗೆ ಉಡುಪಿಯ ಕಂಪನಿಯೊಂದಕ್ಕೆ ₹2 ಲಕ್ಷ ಮೌಲ್ಯದ ವಸ್ತುಗಳನ್ನು ಕಳುಹಿಸಿದ್ದೇವೆ‘ ಎನ್ನುತ್ತಾ ಸಂಸ್ಥೆಯ ಶಕ್ತಿಯನ್ನು ಘಟನೆಗಳ ಸಮೇತ ಉಲ್ಲೇಖಿಸುತ್ತಾರೆ ಫ್ಯಾನ್ಸಿ ಗಣಪತಿ.

ಈಗಾಗಲೇ ಕ್ಲಸ್ಟರ್ ಫುಡ್‌ ಸ್ಟೋರ್ಸ್‌ಗೆ ಕೇಂದ್ರ ಸರ್ಕಾರ ‘ಕಾಮನ್ ಫೆಸಿಲಿಟಿ ಸೆಂಟರ್‘ ಮಂಜೂರು ಮಾಡಿದೆ. ಒಮ್ಮೆ ಈ ಕೇಂದ್ರ ಆರಂಭವಾದರೆ, ಎಲ್ಲ ಸದಸ್ಯರು ಇದೇ ಕೇಂದ್ರಕ್ಕೆ ಬಂದು ತಮ್ಮ ಉತ್ಪನ್ನಗಳನ್ನು ಸಿದ್ಧಪಡಿಸಿ, ಮಾರಾಟ ಮಾಡಲು ಮಳಿಗೆಯಲ್ಲಿ ಜೋಡಿಸಿ ಹೋಗಬಹುದು‘ ಎನ್ನುತ್ತಾ ಭವಿಷ್ಯದ ಯೋಜನೆಯನ್ನೂ ಅವರು ತೆರೆದಿಟ್ಟರು.

ಕೊಡಗು ನೇಚರ್ಸ್‌ ಫುಡ್‌ ಕ್ಲಸ್ಟರ್ ಕುರಿತ ಹೆಚ್ಚಿನ ಮಾಹಿತಿಗೆ +91 97413 19799 ಸಂಪರ್ಕಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು