ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಲಿಂಕಿಟ್‌ಗೆ ಸಾವಿರ ಕೋಟಿ ಸಾಲ, 'ಮುಕುಂದ'ದಲ್ಲಿ ಹೂಡಿಕೆ; ಕುಸಿದ ಜೊಮ್ಯಾಟೊ ಷೇರು

Last Updated 16 ಮಾರ್ಚ್ 2022, 10:04 IST
ಅಕ್ಷರ ಗಾತ್ರ

ಮುಂಬೈ: ತಿಂಡಿ ತಿನಿಸುಗಳನ್ನು ಮನೆಯ ಬಾಗಿಲಿಗೆ ತಲುಪಿಸುವ 'ಜೊಮ್ಯಾಟೊ' ಕಂಪನಿಯ ಷೇರು ಬೆಲೆ ಈ ವರೆಗಿನ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಬುಧವಾರ ಜೊಮ್ಯಾಟೊದ ಷೇರು ಶೇಕಡ 1.4ರಷ್ಟು ಕುಸಿದು, ಪ್ರತಿ ಷೇರು ₹75.55ರಲ್ಲಿ ವಹಿವಾಟು ನಡೆಯಿತು.

ಇಂದು ದೇಶದ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದ್ದರೂ ಜೊಮ್ಯಾಟೊ ಷೇರು ಕುಸಿತಕ್ಕೆ ಒಳಗಾಗಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 1,060 ಅಂಶ ಏರಿಕೆಯಾಗಿ 56,837 ಅಂಶ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 314 ಅಂಶ ಚೇತರಿಕೆ ಕಂಡು 16,977 ಅಂಶಗಳಲ್ಲಿ ವಹಿವಾಟು ನಡೆದಿದೆ.

ಆನ್‌ಲೈನ್‌ ವಹಿವಾಟಿನ ಮೂಲಕ ದಿನಸಿ ಪೂರೈಕೆ ಮಾಡುವ 'ಬ್ಲಿಂಕಿಟ್‌' (ಗ್ರೂಫರ್ಸ್‌ ಇಂಡಿಯಾ ಪ್ರೈ.ಲಿ.,) ಮತ್ತು ಜೊಮ್ಯಾಟೊ ಜೊತೆಗಿನ ಒಪ್ಪಂದದ ಕುರಿತು ಮಾತುಕತೆ ನಡೆದಿರುವುದಾಗಿ ವರದಿಯಾಗಿದೆ. ಅದರ ಬೆನ್ನಲ್ಲೇ ಹೂಡಿಕೆದಾರರು ಜೊಮ್ಯಾಟೊ ಷೇರು ಮಾರಾಟಕ್ಕೆ ಮುಂದಾದರು. ದಿನದ ವಹಿವಾಟು ಮುಕ್ತಾಯಕ್ಕೂ ಮುನ್ನ ಜೊಮ್ಯಾಟೊ ಷೇರು ಶೇಕಡ 0.85ರಷ್ಟು ಕಡಿಮೆಯಾಗಿ ಪ್ರತಿ ಷೇರು ಬೆಲೆ ₹75.90 ತಲುಪಿದೆ.

2021ರ ನವೆಂಬರ್‌ 16ರಂದು ಸಾರ್ವಕಾಲಿಕ ಗರಿಷ್ಠ ₹169.10ಕ್ಕೆ ತಲುಪಿದ್ದ ಜೊಮ್ಯಾಟೊ ಷೇರು ಬೆಲೆ ಈವರೆಗೂ ಶೇಕಡ 55ರಷ್ಟು ಇಳಿಕೆ ಕಂಡಿದೆ.

ವರದಿಗಳ ಪ್ರಕಾರ, ಗ್ರೂಫರ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ಗೆ 150 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಸುಮಾರು ₹1,145 ಕೋಟಿ) ಸಾಲ ಮಂಜೂರು ಮಾಡಲು ಜೊಮ್ಯಾಟೊ ಆಡಳಿತ ಮಂಡಳಿಯು ಸಮ್ಮತಿಸಿದೆ. ಇದರೊಂದಿಗೆ ಫುಡ್‌ ರೊಬೊಟಿಕ್ಸ್‌ ಮತ್ತು ಆಟೊಮೇಷನ್‌ ಘಟಕಗಳನ್ನು ಹೊಂದಿರುವ 'ಮುಕುಂದ ಫುಡ್ಸ್‌ ಪ್ರೈ.ಲಿ.,'ನಲ್ಲಿ ಶೇಕಡ 16.66ರಷ್ಟು ಪಾಲುದಾರಿಕೆ ಪಡೆಯಲು 5 ಮಿಲಿಯನ್‌ ಡಾಲರ್‌ (ಸುಮಾರು ₹38 ಕೋಟಿ) ಒಟ್ಟುಗೂಡಿಸಲು ನಿರ್ಧರಿಸಲಾಗಿದೆ.

ಕಳೆದ ವರ್ಷ ಗ್ರೂಫರ್ಸ್‌ನಲ್ಲಿ ಶೇಕಡ 9ರಷ್ಟು ಪಾಲುದಾರಿಕೆಗಾಗಿ ಜೊಮ್ಯಾಟೊ ₹745 ಕೋಟಿ ಹೂಡಿಕೆ ಮಾಡಿತ್ತು.

'ಮುಕುಂದ ಫುಡ್ಸ್‌ನಲ್ಲಿ ನಮ್ಮ ಹೂಡಿಕೆಯಿಂದಾಗಿ ರೆಸ್ಟೊರೆಂಟ್‌ಗಳಿಗೆ ಆಹಾರ ತಯಾರಿಸುವ ಆಟೊಮೇಟೆಡ್‌ ಸ್ಮಾರ್ಟ್ ರೊಬೊಟಿಕ್‌ ಸಲಕರಣೆಗಳನ್ನು ಪೂರೈಸಲು ಅನುವಾಗುತ್ತದೆ. ಅದರಿಂದಾಗಿ ರೆಸ್ಟೊರೆಂಟ್‌ಗಳು ಆಹಾರ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಸಾಧ್ಯವಾಗುವ ಜೊತೆಗೆ ತಯಾರಿಕೆ ಪ್ರಮಾಣದಲ್ಲೂ ಹೆಚ್ಚಳವಾಗಲಿದೆ. ಇದು ಆಹಾರದ ಬೆಲೆಯನ್ನು ಕಡಿಮೆ ಮಾಡಲು ಅನುವಾಗುತ್ತದೆ...' ಎಂದು ಜೊಮ್ಯಾಟೊ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT