ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಮ್ಯೂಚುವಲ್ ಫಂಡ್‌ ಮುಕ್ತಾಯಗೊಳಿಸಿದ ಫ್ರಾಂಕ್ಲಿನ್‌: ₹30,800 ಕೋಟಿ ಹೂಡಿಕೆ ಹಣ

Last Updated 24 ಏಪ್ರಿಲ್ 2020, 10:14 IST
ಅಕ್ಷರ ಗಾತ್ರ

ಬೆಂಗಳೂರು: ಅಮೆರಿಕ ಮೂಲದ ಫ್ರಾಂಕ್ಲಿನ್‌ ಟೆಂಪ್ಲೆಟನ್‌ ಮ್ಯೂಚುವಲ್‌ ಫಂಡ್‌ ಭಾರತದಲ್ಲಿ ತನ್ನ ಆರು ಫಂಡ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿರುವುದಾಗಿ ಶುಕ್ರವಾರ ಪ್ರಕಟಿಸಿದೆ. ಏಪ್ರಿಲ್‌ 23ರಿಂದಲೇ ಫಂಡ್‌ ಕಾರ್ಯಾಚರಣೆ ಸ್ಥಗಿತ ಅನ್ವಯವಾಗಲಿದ್ದು, ಹೂಡಿಕೆದಾರರ ಸುಮಾರು ₹30,800 ಕೋಟಿ ಸಿಲುಕಿದಂತಾಗಿದೆ.

ಕೊರೊನಾ ವೈರಸ್‌ ಸಾಂಕ್ರಾಮಿಕದಿಂದ ಷೇರುಪೇಟೆಗಳಲ್ಲಿ ಉಂಟಾಗಿರುವ ವಿಪರೀತ ಮಾರಾಟದ ಒತ್ತಡ ಹಾಗೂ ಫಂಡ್‌ ಮಾರಾಟ ಮಾಡಲು (ಅಥವಾ ನಗದೀಕರಿಸಿಕೊಳ್ಳಲು) ಅನುವಾಗದಂತಹ ಪರಿಸ್ಥಿತಿ ಎದುರಾಗಿದೆ. ಸೂಕ್ತ ನಿರ್ವಹಣೆಯೊಂದಿಗೆ ಪೋರ್ಟ್‌ಫೋಲಿಯೊ ಮಾರಾಟ ಮಾಡುವ ಮೂಲಕ ಹೂಡಿಕೆದಾರರ ಸಂಪತ್ತು ರಕ್ಷಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಫ್ರಾಂಕ್ಲಿನ್‌ ಟೆಂಪ್ಲೆಟನ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಮಾರುಕಟ್ಟೆಯ ಏರಿಳಿತಗಳಿಗೆ ತೀವ್ರವಾಗಿ ಸ್ಪಂದಿಸುವ ಅಧಿಕ ಲಾಭದಾಯಕ ಫಂಡ್‌ಗಳು ಹಾಗೂ ಕಡಿಮೆ ರೇಟಿಂಗ್‌ ಹೊಂದಿರುವ ಭಾರತದಲ್ಲಿನ ಸಾಲ ಪತ್ರಗಳು ಪ್ರಸ್ತುತ ಬಿಕ್ಕಟ್ಟಿನ ಪ್ರಭಾವಕ್ಕೆ ಒಳಗಾಗಿವೆ. ಅಂತಹಫಂಡ್‌ಗಳನ್ನು ಮುಂದಿನ ದಿನಗಳಲ್ಲಿ ಮಾರಾಟ ಮಾಡಿ ಹಂತ ಹಂತವಾಗಿ ಹೂಡಿಕೆದಾರರಿಗೆ ಹಣ ಸಂದಾಯ ಮಾಡಲಾಗುತ್ತದೆ ಎಂದು ಹೇಳಿದೆ.

ನಿಗದಿತ ಆದಾಯ ತರುವ ಹಾಗೂ ಅಧಿಕ ಏರಿಳಿತಕ್ಕೆ ಒಳಗಾಗಿರುವ ಆರು ಫಂಡ್‌ಗಳನ್ನು ಮುಕ್ತಾಯಗೊಳಿಸಲಾಗುತ್ತಿದ್ದು, ಹೂಡಿಕೆದಾರರ ₹30,800 ಕೋಟಿ ಹಣ ಸಿಲುಕಿದಂತಾಗಿದೆ. ಹೂಡಿಕೆದಾರರು ತಾವಾಗಿಯೇ ಫಂಡ್‌ ಮಾರಾಟ ಮಾಡಲು ಆಗುವುದಿಲ್ಲ, ಹಾಗೇ ಫಂಡ್‌ಗಳ ಆಧಾರದ ಮೇಲೆ ಒಂದು ವರ್ಷದಿಂದ 3 ವರ್ಷಗಳ ವರೆಗೂ ಹೂಡಿಕೆದಾರರು ಹಣ ಹಿಂಪಡೆಯಲು ಕಾಯಬೇಕಾಗುತ್ತದೆ. ಮಾಸಿಕ ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ ಪ್ಲಾನ್‌ (ಸಿಪ್‌) ಹೂಡಿಕೆಯಾಗುತ್ತಿರುವುದು ನಿಲ್ಲಲಿದೆ.

'ಮ್ಯೂಚುವಲ್‌ ಫಂಡ್‌ಗಳನ್ನು ಮಾರಾಟ ಮಾಡಿ ನಗದೀಕರಿಸಲು ಬಹಳಷ್ಟು ಮನವಿ ಬರುತ್ತಿವೆ, ಮಾರುಕಟ್ಟೆಯಲ್ಲಿ ತೀವ್ರ ಏರಿಳಿತ ಎದುರಾಗಿದೆ. ಹಾಗಾಗಿ, ಕೆಲವು ಫಂಡ್‌ಗಳನ್ನು ಮುಕ್ತಾಯಗೊಳಿಸುವುದು ಸೂಕ್ತವೆಂದು ತೋರಿದೆ. ಆ ಮೂಲಕ ಹೂಡಿಕೆದಾರರಿಗೆ ಹಣ ಹಿಂದಿರುಗಿಸಲಾಗುತ್ತದೆ' ಎಂದು ಫ್ರಾಂಕ್ಲಿನ್‌ ಟೆಂಪ್ಲೆಟನ್‌ ಇಂಡಿಯಾದ ಅಧ್ಯಕ್ಷ ಸಂಜಯ್‌ ಸಪ್ರೆ ಹೇಳಿದ್ದಾರೆ.

ನಿಗದಿಯಾಗಿರುವ ಆರು ಫಂಡ್‌ಗಳು:

* ಫ್ರಾಂಕ್ಲಿನ್‌ ಇಂಡಿಯಾ ಲೊ ಡ್ಯುರೇಷನ್‌ ಫಂಡ್‌
* ಫ್ರಾಂಕ್ಲಿನ್‌ ಇಂಡಿಯಾ ಡೈನಾಮಿಕ್‌ ಆಕ್ಯುರಲ್‌ ಫಂಡ್‌
* ಫ್ರಾಂಕ್ಲಿನ್‌ ಇಂಡಿಯಾ ಕ್ರೆಡಿಟ್‌ ರಿಸ್ಕ್‌ ಫಂಡ್‌
* ಫ್ರಾಂಕ್ಲಿನ್‌ ಇಂಡಿಯಾ ಶಾರ್ಟ್‌ ಟರ್ಮ್‌ ಇನ್‌ಕಮ್‌ ಪ್ಲ್ಯಾನ್‌
* ಫ್ರಾಂಕ್ಲಿನ್‌ ಇಂಡಿಯಾ ಅಲ್ಟ್ರಾ ಶಾರ್ಟ್‌ ಬಾಂಡ್‌ ಫಂಡ್‌
* ಫ್ರಾಂಕ್ಲಿನ್‌ ಇಂಡಿಯಾ ಇನ್‌ಕಮ್‌ ಆಪರ್ಚ್ಯುನಿಟೀಸ್‌ ಫಂಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT