ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ ಷೇರು ಬೆಲೆ ಕುಸಿತ: ಮುಕೇಶ್‌ ಅಂಬಾನಿಗೆ ₹37,200 ಕೋಟಿ ನಷ್ಟ

ಕಳೆದ ತ್ರೈಮಾಸಿಕದಲ್ಲಿ ಕಂಪನಿ ಲಾಭಾಂಶ ಇಳಿಕೆ
Last Updated 2 ನವೆಂಬರ್ 2020, 11:38 IST
ಅಕ್ಷರ ಗಾತ್ರ

ಬ್ಲೂಮ್‌ಬರ್ಗ್‌: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ತ್ರೈಮಾಸಿಕ ಲಾಭಾಂಶದಲ್ಲಿ ಇಳಿಕೆ ದಾಖಲಾಗಿರುವುದರಿಂದ ಷೇರು ಮಾರಾಟ ಉಂಟಾಗಿದ್ದು, ಷೇರು ಬೆಲೆ ಮೂರು ತಿಂಗಳ ಹಿಂದಿನ ಕನಿಷ್ಠ ಮಟ್ಟ ತಲುಪಿದೆ. ಇದರಿಂದಾಗಿ ಏಷ್ಯಾದ ಸಿರಿವಂತ ವ್ಯಕ್ತಿ ಮುಕೇಶ್‌ ಅಂಬಾನಿ ಅವರ ಸಂಪತ್ತಿನಲ್ಲಿ 5 ಬಿಲಿಯನ್‌ ಡಾಲರ್‌ಗಳಷ್ಟು (ಸುಮಾರು ₹37,200 ಕೋಟಿ) ಉಂಟಾಗಿದೆ.

ಸೋಮವಾರ ಷೇರುಪೇಟೆ ವಹಿವಾಟಿನಲ್ಲಿ ರಿಲಯನ್ಸ್ ಕಂಪನಿಯ ಷೇರು ಬೆಲೆ ಶೇ 8ಕ್ಕಿಂತಲೂ ಹೆಚ್ಚು ಕುಸಿದಿದೆ. ಮೇ 12ರ ನಂತರ ಇದೇ ಮೊದಲ ಬಾರಿಗೆ ಕಂಪನಿಯ ಷೇರು ಬೆಲೆ ತೀವ್ರ ಕುಸಿತ ಕಂಡಿದೆ ಹಾಗೂ ಜುಲೈ 20ರ ಕನಿಷ್ಠ ಬೆಲೆ ತಲುಪಿದೆ. ಮಧ್ಯಾಹ್ನದ ವರೆಗೂ ಶೇ 0.7ರಷ್ಟು ಇಳಿಕೆ ಕಂಡಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ವಹಿವಾಟು ಅಂತ್ಯದ ವೇಳೆಗೆ ಸಕಾರಾತ್ಮಕ ಅಂಶ ದಾಖಲಿಸಿದೆ. ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್‌ ಇಂಡೆಕ್ಸ್‌ ಪ್ರಕಾರ, ರಿಲಯನ್ಸ್‌ ಷೇರು ಕುಸಿತದಿಂದಾಗಿ ಮಾರ್ಚ್‌ ಬಳಿಕ ಮೊದಲ ಬಾರಿಗೆ ಮುಕೇಶ್‌ ಅಂಬಾನಿ ಅವರ ಸಂಪತ್ತು ಕಡಿಮೆಯಾಗಿ 73 ಬಿಲಿಯನ್‌ ಡಾಲರ್‌ಗಳಿಗೆ ತಲುಪಿದೆ.

ಕೊರೊನಾ ವೈರಸ್‌ ಸಾಂಕ್ರಾಮಿಕದ ಪರಿಣಾಮ ಅನುಸರಿಸಲಾದ ಲಾಕ್‌ಡೌನ್‌ನಿಂದ ಇಂಧನ ಬೇಡಿಕೆ ತೀವ್ರ ಇಳಿಮುಖವಾಯಿತು. ಹಾಗಾಗಿ ಕಳೆದ ತ್ರೈಮಾಸಿಕದಲ್ಲಿ ಕಂಪನಿಯ ಲಾಭಾಂಶ ಶೇ 15ರಷ್ಟು ಕಡಿಮೆಯಾಗಿ ₹9,570 ಕೋಟಿ (1.3 ಬಿಲಿಯನ್ ಡಾಲರ್‌ಗಳು) ದಾಖಲಾಗಿದೆ. ಒಟ್ಟು ಆದಾಯದಲ್ಲಿ ಶೇ 24ರಷ್ಟು ಕಡಿಮೆಯಾಗಿ ₹1.16 ಲಕ್ಷ ಕೋಟಿಯಾಗಿದೆ.

ಕೋವಿಡ್–19 ನಿಯಂತ್ರಿಸುವ ನಿಟ್ಟಿನಲ್ಲಿ ಜನರು ಮನೆಯಲ್ಲಿಯೇ ಉಳಿದ ಕಾರಣ ಸಾರಿಗೆಗಾಗಿ ತೈಲದ ಬಳಕೆ ಕನಿಷ್ಠ ಮಟ್ಟ ತಲುಪಿತು. ಇದರಿಂದ ರಿಲಯನ್ಸ್‌ ತೈಲ ಸಂಸ್ಕರಣ ಘಟಕದಲ್ಲಿ ಬೇಡಿಕೆ ಕುಸಿಯಿತು. ಹಲವು ಉದ್ಯಮಗಳನ್ನು ನಡೆಸುತ್ತಿರುವ ರಿಲಯನ್ಸ್‌ ಲಾಕ್‌ಡೌನ್‌ ಅವಧಿಯಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲ್‌ ಸೇವೆಗಳಲ್ಲಿ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಪ್ರಯತ್ನ ನಡೆಸಿತು. ವಿದೇಶಿ ಸಂಸ್ಥೆಗಳಿಂದ ಹೂಡಿಕೆ ಪಡೆದು ಹೊಸ ದಿಕ್ಕಿನಲ್ಲಿ ಪ್ರಯಾಣ ಬೆಳೆಸಿದೆ.

ಇಂಧನ ಕ್ಷೇತ್ರದಲ್ಲಿ ಅವಲಂಬನೆಯನ್ನು ಕಡಿಮೆ ಮಾಡಿ ಟೆಲಿಕಾಂ ಮತ್ತು ಇ–ಕಾಮರ್ಸ್‌ ಕ್ಷೇತ್ರಗಳಲ್ಲಿ ಉದ್ಯಮ ಬಲಗೊಳಿಸುವ ತಂತ್ರವನ್ನು ಅಂಬಾನಿ ಅನುಸರಿಸಿದ್ದಾರೆ. ಕಳೆದ ತ್ರೈಮಾಸಿಕದಲ್ಲಿ ಕಚ್ಚಾ ತೈಲದಿಂದ ಬಳಕೆಯ ಇಂಧನದ ಸಂಸ್ಕರಣೆಯಿಂದ ಪ್ರತಿ ಬ್ಯಾರೆಲ್‌ಗೆ ಸಿಗಬಹುದಾದ ಲಾಭಾಂಶ 5.7 ಡಾಲರ್‌ಗೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಪ್ರತಿ ಬ್ಯಾರೆಲ್‌ಗೆ 9.4 ಡಾಲರ್‌ಗಳಷ್ಟು ಲಾಭ ದಾಖಲಾಗಿತ್ತು ಎಂದು ಕಂಪನಿ ತಿಳಿಸಿರುವುದಾಗಿ ವರದಿಯಾಗಿದೆ. ಇದೇ ಅವಧಿಯಲ್ಲಿ ರಿಲಯನ್ಸ್‌ ಜಿಯೊ ಇನ್ಫೊಕಾಮ್‌ ಲಿಮಿಟೆಡ್‌ ಅಡಿಯಲ್ಲಿ ದೂರಸಂಪರ್ಕ ಉದ್ಯಮದಲ್ಲಿ ಲಾಭಾಂಶ ಮೂರು ಪಟ್ಟು ಹೆಚ್ಚಿದೆ.

ಕಂಪನಿಯ ಡಿಜಿಟಲ್‌ ಮತ್ತು ರಿಟೇಲ್‌ ಉದ್ಯಮದ ಪಾಲುದಾರಿಕೆ ಮಾರಾಟದಿಂದ ಈ ವರ್ಷ 25 ಬಿಲಿಯನ್‌ ಡಾಲರ್‌ ಹೂಡಿಕೆ ಸಂಗ್ರಹಿಸಲಾಗಿದ್ದು, ಷೇರುಪೇಟೆ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಶೇ 4ರಷ್ಟು ಇಳಿಕೆಯಾದರೂ ಹೂಡಿಕೆದಾರರು ರಿಲಯನ್ಸ್‌ ಷೇರುಗಳ ಖರೀದಿಗೆ ಒಲವು ತೋರಿದ್ದರಿಂದ ಷೇರು ಬೆಲೆ ಶೇ 29ರಷ್ಟು ಹೆಚ್ಚಳ ಕಂಡಿದೆ. 2020ರಲ್ಲಿ ಮುಕೇಶ್‌ ಅಂಬಾನಿ 19.1 ಬಿಲಿಯನ್‌ ಡಾಲರ್‌ ಸಂಗ್ರಹಿಸುವ ಮೂಲಕ ಸಂಪತ್ತಿನಲ್ಲಿ ಭಾರಿ ಏರಿಕೆಯಾಗಿದೆ. ಬ್ಲೂಮ್‌ಬರ್ಗ್‌ ಬಿಲಿಯನೇರ್ಸ್‌ ಇಂಡೆಕ್ಸ್‌ ಪ್ರಕಾರ, ಅಂಬಾನಿ ಜಗತ್ತಿನ 6ನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT