ಬುಧವಾರ, ಜನವರಿ 26, 2022
26 °C

ತಗ್ಗಿದ ಓಮೈಕ್ರಾನ್ ಭೀತಿ: ಆರ್‌ಬಿಐ ಕ್ರಮ ಸ್ವಾಗತಿಸಿದ ಷೇರುಪೇಟೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು ಹೊಂದಾಣಿಕೆಯ ಹಣಕಾಸು ನೀತಿಯನ್ನು ಮುಂದುವರಿಸುವ ತೀರ್ಮಾನ ಕೈಗೊಂಡಿದ್ದು ಹಾಗೂ ಕೊರೊನಾದ ಓಮೈಕ್ರಾನ್ ರೂಪಾಂತರಿ ತಳಿ ಕುರಿತ ಆತಂಕ ತಗ್ಗಿದ್ದು ದೇಶದ ಷೇರುಪೇಟೆಗಳಲ್ಲಿ ತೇಜಿ ವಹಿವಾಟಿಗೆ ಕಾರಣವಾದವು.

ಬುಧವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,016 ಅಂಶ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 293 ಅಂಶ ಏರಿಕೆ ಕಂಡವು.

ಓಮೈಕ್ರಾನ್ ತಳಿಯು ಡೆಲ್ಟಾ ತಳಿಗಿಂತ ಹೆಚ್ಚಿನ ಪರಿಣಾಮವನ್ನೇನೂ ಉಂಟುಮಾಡಲಿಕ್ಕಿಲ್ಲ ಎಂಬ ವರದಿಗಳು ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಏರುಗತಿಯ ವಹಿವಾಟಿಗೆ ಕಾರಣವಾದವು. ಇದರಿಂದಾಗಿ ದೇಶಿ ಮಾರುಕಟ್ಟೆಗಳಲ್ಲಿ ಕೂಡ ಉತ್ಸಾಹದ ವಹಿವಾಟು ನಡೆಯಿತು.

ದಿನದ ಕೊನೆಯಲ್ಲಿ ಸೆನ್ಸೆಕ್ಸ್ 58,649 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ನಿಫ್ಟಿ 17,469 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿದೆ. ಮಾರ್ಚ್‌ 30ರ ನಂತರ ಸೆನ್ಸೆಕ್ಸ್‌ ಒಂದು ದಿನದಲ್ಲಿ ಕಂಡ ಅತಿದೊಡ್ಡ ಜಿಗಿತ ಇದು.

‘ಆರ್‌ಬಿಐ ಹೊಂದಾಣಿಕೆಯ ಹಣಕಾಸು ನಿಲುವನ್ನು ಮುಂದುವರಿಸಿದ್ದರಿಂದ ಬಂಡವಾಳ ಮಾರುಕಟ್ಟೆಗಳಲ್ಲಿ ಒಳ್ಳೆಯ ವಹಿವಾಟು ನಡೆಯಿತು. ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿ‍ಪಿ ಬೆಳವಣಿಗೆ ದರವು ಶೇ 9.5ರಷ್ಟು ಇರಲಿದೆ ಎಂದು ಆರ್‌ಬಿಐ ಮತ್ತೆ ಹೇಳಿರುವುದು, ಆರ್ಥಿಕ ಪುನಶ್ಚೇತನದ ಬಗ್ಗೆ ಅದಕ್ಕೆ ಇರುವ ವಿಶ್ವಾಸವನ್ನು ತೋರಿಸುವಂತಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 0.60ರಷ್ಟು ಹೆಚ್ಚಾಗಿದ್ದು, ಪ್ರತಿ ಬ್ಯಾರೆಲ್‌ಗೆ 75.89 ಡಾಲರ್‌ಗೆ ತಲುಪಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು 2 ಪೈಸೆ ತಗ್ಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು