ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿಸೌಧಕ್ಕೆ ‘ಮಂಗನ ಕಾಯಿಲೆ’!

ಮತದಾರರು ತಮ್ಮ ಕೆನ್ನೆಗೆ ತಾವೇ ಬಾರಿಸಿಕೊಳ್ಳುವಂತಹ ಸ್ಥಿತಿ...
Last Updated 17 ಜನವರಿ 2019, 19:47 IST
ಅಕ್ಷರ ಗಾತ್ರ

ರಾಜಕಾರಣಿಗಳಲ್ಲಿ ಮೂರು ವಿಧ. ಮೊದಲನೆಯವರು, ಸದಾ ರಾಜಕಾರಣಿಗಳು. ಇವರಿಗೆ ಚಿಂತೆ ಹೆಚ್ಚು, ಚಿಂತನೆ ಕಡಿಮೆ. ಅಧಿಕಾರವೇ ಇವರ ಏಕಮಾತ್ರ ಗುರಿ. ಅಧಿಕಾರವನ್ನು ಹೇಗೆ ಗಳಿಸಬೇಕು, ಹೇಗೆ ಉಳಿಸಿಕೊಳ್ಳಬೇಕು ಮತ್ತು ಸ್ವಾರ್ಥಕ್ಕಾಗಿ ಅದನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದೇ ಅವರ ಚಿಂತೆ. ಅಧಿಕಾರವೇ ಸರ್ವಸ್ವ. ಅದು ಕೈತಪ್ಪಿ ಹೋದಾಗ ಮತಿಭ್ರಮಣೆಗೆ ಒಳಗಾಗುತ್ತಾರೆ. ತತ್ವ–ಸಿದ್ಧಾಂತ, ಪಕ್ಷ, ಜನರ ಹಿತ, ರಾಜ್ಯ ಅಥವಾ ದೇಶದ ಹಿತ ಯಾವುದೂ ಅವರಿಗೆ ಮುಖ್ಯವಾಗುವುದಿಲ್ಲ. ಅಧಿಕಾರಕ್ಕಾಗಿ ಹಾಗೂ ಅದು ತಂದುಕೊಡುವ ಹಣಕ್ಕಾಗಿ ಅವರು ಎಲ್ಲಿಗೆ ಬೇಕಾದರೂ, ಯಾವಾಗ ಬೇಕಾದರೂ ನೆಗೆಯುತ್ತಾರೆ. ತಮ್ಮ ಕಾರ್ಯಕ್ಕೆ ಏನಾದರೊಂದು ಸಬೂಬು ಹೇಳುತ್ತಾರೆ.

ಎರಡನೆಯವರು, ಧ್ಯೇಯವಾದಿ ರಾಜಕಾರಣಿಗಳು. ತಮ್ಮ ಧ್ಯೇಯವನ್ನು ಸಾಧಿಸಲು ರಾಜಕಾರಣ ಒಂದು ಸಾಧನ ಎಂದು ತಿಳಿದವರು. ಅಧಿಕಾರವೇ ಇವರ ಧ್ಯೇಯವಲ್ಲ. ಸಮಾಜದಲ್ಲಿ ಬದಲಾವಣೆ ತರಲು ಅದೊಂದು ಅಸ್ತ್ರ ಎಂದು ನಂಬಿದವರು. ಚಿಂತನಶೀಲರು. ಸಿದ್ಧಾಂತ ಹಾಗೂ ಮೌಲ್ಯ ಪಾಲನೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುವವರು. ಈಗ ಇಂತಹ ರಾಜಕಾರಣಿಗಳು ಕಡಿಮೆ.

ಮೂರನೆಯವರು, ಸುಸಂಸ್ಕೃತ ರಾಜಕಾರಣಿಗಳು. ಜೀವನದಲ್ಲಿ ರಾಜಕೀಯ ಮುಖ್ಯ ಎಂದು ನಂಬಿದವರು. ಅದರ ಜೊತೆ ಇತರ ವಿಷಯಗಳೂ ಇವರಿಗೆ ಮುಖ್ಯ. ಅಧಿಕಾರ ಬೇಕು. ಆದರೆ ಅಧಿಕಾರವೇ ಸರ್ವಸ್ವವಲ್ಲ. ನಂಬಿದ ಆದರ್ಶಗಳಿಗೆ, ತತ್ವಗಳಿಗೆ ಬದ್ಧತೆ ಇರುವವರು. ಶುಷ್ಕ ರಾಜಕಾರಣವನ್ನೂ ರಸಭರಿತ, ವರ್ಣರಂಜಿತ ಮಾಡಬಲ್ಲವರು. ಇವರ ಸಂಖ್ಯೆಯೂ ಈಗ ಕಡಿಮೆ.

ನಮ್ಮ ರಾಜ್ಯದ ಇತಿಹಾಸದಲ್ಲಿ ನಾವು ಈ ಮೂರೂ ರೀತಿಯ ರಾಜಕಾರಣಿಗಳನ್ನು ಕಂಡಿದ್ದೇವೆ. ಆದರೆ ಈಗ ನಮಗೆ ಕಾಣುತ್ತಿರುವುದು ಮೊದಲ ವರ್ಗದ ರಾಜಕಾರಣಿಗಳು ಮಾತ್ರ. ಅವರಿಗೆ ತತ್ವ– ಸಿದ್ಧಾಂತ, ಚಿಂತನೆ ಏನೇನೂ ಇಲ್ಲ. ಅಧಿಕಾರಕ್ಕಾಗಿ ಹಾಗೂ ಅದರಿಂದ ಸಿಗುವ ಹಣಕ್ಕಾಗಿ ಹಪಹಪಿಯಲ್ಲಿ ತೊಡಗಿರುವವರು ಇವರು. ಮೂರು ಕೊಟ್ಟರೆ ಈ ಕಡೆ, ಆರು ಕೊಟ್ಟರೆ ಆ ಕಡೆ ಎನ್ನುವ ರೀತಿಯವರೇ ಹೆಚ್ಚು.

ಸದ್ಯದ ರಾಜಕೀಯ ಪರಿಸ್ಥಿತಿಯನ್ನು ನೋಡಿ. ಹೇಗಾದರೂ ಮಾಡಿ ಸರ್ಕಾರವನ್ನು ಕೆಳಕ್ಕೆ ಇಳಿಸುತ್ತೇವೆ ಎಂದು ಬಿಜೆಪಿ ನಾಯಕರು ಓಡಾಡುತ್ತಿದ್ದಾರೆ, ಅದೇ ರೀತಿ ಹೇಗಾದರೂ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳುತ್ತೇವೆ ಎಂದು ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟ ಮುಖಂಡರು ಒದ್ದಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸುತ್ತೇವೆ ಎನ್ನುವುದು ಬಿಜೆಪಿ ಹಟ. ‘ನೀವು ಹಾಗೆ ಮಾಡಿದರೆ, ನಾವು ಬಿಜೆಪಿ ಶಾಸಕರನ್ನು ಸೆಳೆಯುತ್ತೇವೆ’ ಎಂಬುದು ಕಾಂಗ್ರೆಸ್–ಜೆಡಿಎಸ್ ಮುಖಂಡರ ಹ್ಞೂಂಕಾರ. ಇದು ಮಂಗನಾಟ ಎಂದು ಹೇಳಿದರೆ ಕೆಲವರಿಗೆ ಸಿಟ್ಟು ಬರಬಹುದು. ಆದರೆ ಇದನ್ನು ಹಾಗೆ ಕರೆಯದೆ ಬೇರೆ ವಿಧಿ ಇಲ್ಲ.

‘60 ಕೋಟಿ ರೂಪಾಯಿ ಮತ್ತು ಮಂತ್ರಿ ಸ್ಥಾನ ನೀಡಿದರೆ ಯಾವ ಶಾಸಕ ಬರುವುದಿಲ್ಲ ಹೇಳಿ’ ಎನ್ನುವುದು ಬಿಜೆಪಿ ನಂಬಿಕೆ. ‘ಅದಕ್ಕಿಂತ ಜಾಸ್ತಿ ಕೊಟ್ಟು ನಾವೇ ಉಳಿಸಿಕೊಳ್ಳುತ್ತೇವೆ’ ಎಂಬುದು ಆಡಳಿತ ಪಕ್ಷಗಳ ಪ್ರತಿ ಏಟು. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಖರೀದಿ ಮಾಡುತ್ತೇವೆ. ರಾಜೀನಾಮೆ ಕೊಡಿಸುತ್ತೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಲ್ಪಮತಕ್ಕೆ ತಳ್ಳುತ್ತೇವೆ ಎನ್ನುವ ಬಿಜೆಪಿ ಮುಖಂಡರು ತಮ್ಮ ಪಕ್ಷದ ಶಾಸಕರನ್ನು ದೂರದ ಗುರುಗ್ರಾಮದ ರೆಸಾರ್ಟ್‌ನಲ್ಲಿ ಬಚ್ಚಿಟ್ಟಿದ್ದಾರೆ. ಖರೀದಿಗೆ ಸಿಗುವವರು ಮಾರುಕಟ್ಟೆಯಲ್ಲಿದ್ದಾರೆ. ಖರೀದಿ ಮಾಡುವ ವ್ಯಾಪಾರಿಗಳು ಸಪ್ತ ತಾರಾ ಹೋಟೆಲ್‌ನಲ್ಲಿದ್ದಾರೆ! ಅದೇ ಈಗಿನ ಮಜಬೂತು.

ಜನ ಈಗ ಯಾರ ಮಾತನ್ನೂ ನಂಬುವ ಸ್ಥಿತಿಯಲ್ಲಿ ಇಲ್ಲ. ‘ಯಾರೂ ಸುಮ್ಮಸುಮ್ಮನೆ ಇನ್ನೊಂದು ಪಕ್ಷಕ್ಕೆ ಹೋಗಲ್ಲ. ಮುಂಗಡ ಇಸ್ಕೊಂಡೇ ಅವರ ಜೊತೆಗೆ ಮುಂಬೈಗೋ, ಗೋವಾಕ್ಕೋ ಹೋಗಿರ್ತಾರೆ, ಈಗ ಜಾಸ್ತಿ ಕೊಡ್ತೀವಿ ಎಂದು ಹೇಳಿದ ಮೇಲೆ ವಾಪಸು ಬಂದಿದ್ದಾರೆ ಅಷ್ಟೆ, ಇವರಲ್ಲಿ ಯಾರಿಗೂ ಕ್ಷೇತ್ರದ ಜನರ ಬಗ್ಗೆ ಕಾಳಜಿ ಇಲ್ಲ. ಕ್ಷೇತ್ರದ ಬಗ್ಗೆ ಅಥವಾ ರಾಜ್ಯದ ಬಗ್ಗೆ ಕಾಳಜಿ ಇಲ್ಲ’ ಎಂದು ಜನರು ಭಾವಿಸಿದ್ದಾರೆ. ಹಾಗೆ ಭಾವಿಸಿದರೆ ಅದು ತಪ್ಪೂ ಅಲ್ಲ. ಅವರು ಹೇಳುವುದರಲ್ಲಿ ಸುಳ್ಳೂ ಇರಲಿಕ್ಕಿಲ್ಲ.

ಸಾಗರ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಮಂಗನ ಕಾಯಿಲೆ ವಿಪರೀತವಾಗಿದೆ. ಈಗಾಗಲೇ 11 ಮಂದಿ ಸತ್ತಿದ್ದಾರೆ. ಆದರೆ ಅಲ್ಲಿನ ಶಾಸಕರು ಗುರುಗ್ರಾಮದ ರೆಸಾರ್ಟ್‌ನಲ್ಲಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಬೆಳೆಗಳು ಒಣಗಿ ರೈತರು ಕಂಗಾಲಾಗಿದ್ದಾರೆ. ಕುಡಿಯುವ ನೀರು ಇಲ್ಲದೆ ಜನರು ಕಷ್ಟಪಡುತ್ತಿದ್ದಾರೆ. ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಆದರೆ ಈಗ ರಾಜಕಾರಣಿಗಳು ಮಾತ್ರ ಸರ್ಕಾರ ಉರುಳಿಸುವ ಅಥವಾ ಉಳಿಸುವ ಯತ್ನದಲ್ಲಿ ತೊಡಗಿದ್ದಾರೆ. ಇದನ್ನೆಲ್ಲಾ ನೋಡಿದರೆ ಮಂಗನ ಕಾಯಿಲೆ ನಿಜವಾಗಿ ಬಂದಿರುವುದು ವಿಧಾನಸೌಧಕ್ಕೆ ಮತ್ತು ಅಲ್ಲಿ ಇರುವ ರಾಜಕಾರಣಿಗಳಿಗೆ. ಇದರ ಲಾಭವನ್ನು ಅಧಿಕಾರಿಗಳು ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅತಂತ್ರ ಸ್ಥಿತಿ ಇದ್ದಾಗಲೆಲ್ಲಾ ಅಧಿಕಾರಿಗಳೇ ಹೆಚ್ಚು ಲಾಭ ಮಾಡಿಕೊಂಡಿದ್ದಾರೆ. ಈಗಲೂ ಅಂತಹದೇ ಸ್ಥಿತಿ ನಿರ್ಮಾಣವಾಗಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 104 ಸ್ಥಾನ ಬಂತು. ಆದರೆ ಬಹುಮತಕ್ಕೆ ಅಗತ್ಯವಾದ ಸಂಖ್ಯೆ ಇರಲಿಲ್ಲ. 2008ರ ಚುನಾವಣೆಯಂತೆ ಈ ಬಾರಿ ಪಕ್ಷೇತರರ ಸಂಖ್ಯೆಯೂ ಹೆಚ್ಚು ಇರಲಿಲ್ಲ. ಇದರಿಂದಾಗಿ ಸರ್ಕಾರ ರಚಿಸುವ ಆಸೆ ಕೈಗೂಡಲಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. 2008ರಲ್ಲಿ ನಡೆಸಿದ ಆಪರೇಷನ್ ಕಮಲದಿಂದಲೇ ಬಿಜೆಪಿ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಆಗ ಇಂತಹ ಆಪರೇಷನ್ ಹೊಸತಾಗಿತ್ತು. ಆದರೆ ಈಗ ಬಿಜೆಪಿಯ ತಂತ್ರ ಇತರರಿಗೂ ಗೊತ್ತಾಗಿದ್ದರಿಂದ ಅದೇ ತಂತ್ರ ನಡೆಯುವುದು ಕಷ್ಟ. ಅಲ್ಲದೆ ಮಾಡಿದ ತಪ್ಪನ್ನೇ ಪದೇ ಪದೇ ಮಾಡುವುದು ಬುದ್ಧಿವಂತರ ಲಕ್ಷಣ ಅಲ್ಲ.

ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಮತ್ತು ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಇಬ್ಬರೂ ಏಕವಚನದ ಸ್ನೇಹಿತರು. ಪಟೇಲ್ ಅವರು ಮುಖ್ಯಮಂತ್ರಿಯಾದಾಗ ಅನಂತಮೂರ್ತಿ ದೂರದರ್ಶನಕ್ಕಾಗಿ ಅವರ ಸಂದರ್ಶನ ನಡೆಸಿದರು. ಸಂದರ್ಶನ ಎಲ್ಲ ಮುಗಿದ ನಂತರ ಪಟೇಲರು ‘ಏನಯ್ಯಾ ಅನಂತು, ಎಲ್ಲ ಪ್ರಶ್ನೆಗಳನ್ನೂ ಕೇಳಿದೆಯಾ’ ಎಂದು ಪ್ರಶ್ನಿಸಿದರು. ಅದಕ್ಕೆ ಅನಂತಮೂರ್ತಿ ‘ಹೌದು’ ಎಂದು ಉತ್ತರಿಸಿದರು. ‘ಇಲ್ಲಕಣಯ್ಯಾ, ಚುನಾವಣೆಯಲ್ಲಿ ಹೇಗೆ ಹಣ ಸಂಗ್ರಹ ಮಾಡಿದೆ, ಹೇಗೆ ಖರ್ಚು ಮಾಡಿದೆ ಎನ್ನುವುದನ್ನು ನೀನು ಕೇಳಲೇ ಇಲ್ಲ’ ಎಂದರು. ‘ಹೌದಯ್ಯ, ನಾನು ಆ ಪ್ರಶ್ನೆಗಳನ್ನು ಕೇಳಿದ್ದರೆ ನೀನು ಉತ್ತರ ಕೊಡುತ್ತಿದ್ದೆಯಾ? ಒಂದೊಮ್ಮೆ ಕೊಟ್ಟೆ ಅಂತಾನೇ ಇಟ್ಟುಕೊ. ಆಗ ನಿನ್ನ ಪರಿಸ್ಥಿತಿ ಏನಾಗುತ್ತಿತ್ತು. ನಿನ್ನ ಕುರ್ಚಿಗೇ ಸಂಚಕಾರ ಬರುತ್ತಿತ್ತು’ ಎಂದು ಅನಂತಮೂರ್ತಿ ಹೇಳಿದರು. ‘ನನ್ನ ಕುರ್ಚಿಗೆ ಸಂಚಕಾರ ಬಂದರೆ ಬರಲಿ ಬಿಡೋ ಮಾರಾಯ, ಇದೆಲ್ಲ ಹೇಸಿಗೆ ತರಿಸಿಬಿಟ್ಟಿದೆ’ ಎಂದು ಪಟೇಲರು ಉತ್ತರಿಸಿದ್ದರಂತೆ. ಈಗ ಯಾರಿಗೂ ಹೇಸಿಗೆಯಾಗುವುದಿಲ್ಲ. ರಾಜಕಾರಣಿಗಳಿಗೂ ಹೇಸಿಗೆಯಾಗಲ್ಲ. ಮತದಾರರಿಗೂ ಹೇಸಿಗೆಯಾಗಲ್ಲ. ಮತದಾರರಿಗೆ ಹೇಸಿಗೆಯಾಗಿದ್ದರೆ ರಾಜ್ಯದಲ್ಲಿ ಇಂತಹ ಸ್ಥಿತಿ ಬರುತ್ತಲೂ ಇರಲಿಲ್ಲ. ನಿಜವಾಗಿ ಈಗ ಮತದಾರರು ತಮ್ಮ ಕೆನ್ನೆಗೆ ತಾವೇ ಹೊಡೆದುಕೊಳ್ಳಬೇಕು ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT