ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ: ಬೇಕೆನ್ನ ಹೃದಯಕ್ಕೆ ಗಾಂಧಿ ರಾಮ!

ನನ್ನ ಕಲ್ಪನೆಯ ರಾಮನಿಗೆ ಹುಟ್ಟಿಲ್ಲ, ಸಾವಿಲ್ಲ, ಅವನು ಶಾಶ್ವತ ಎಂದಿದ್ದರು ಬಾಪೂ
Published 29 ಜನವರಿ 2024, 23:30 IST
Last Updated 29 ಜನವರಿ 2024, 23:30 IST
ಅಕ್ಷರ ಗಾತ್ರ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಿದೆ. ದೇಶದಾದ್ಯಂತ ರಾಮನ ಸಮೂಹ ಸನ್ನಿ ಭುಗಿಲೆದ್ದಿದೆ. ದಶದಿಕ್ಕುಗಳಲ್ಲಿಯೂ ಜೈಶ್ರೀರಾಮ್‌ ಘೋಷಣೆ ಮೊಳಗುತ್ತಿದೆ. ರಾಮನನ್ನು ಒಪ್ಪಿದವರು, ಒಪ್ಪದವರೂ ಘೋಷಣೆ ಕೂಗುತ್ತಿದ್ದಾರೆ. ಆಕ್ಷೇಪದ ಧ್ವನಿಗೆ ‘ದೇಶದ್ರೋಹ’ದ ಪಟ್ಟ ಕಟ್ಟುವ ಕೆಲಸ ನಡೆದಿದೆ. ದೇವರು, ಧರ್ಮ ಎನ್ನುವುದು ವೈಯಕ್ತಿಕ ನಂಬಿಕೆಯ ವಿಷಯ ಎಂದರೂ ಅದನ್ನು ಕೇಳುವ ಸ್ಥಿತಿ ಇಲ್ಲ. ಅದಕ್ಕಾಗಿಯೇ, ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ಆ ಮಟ್ಟಿಗೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಎಲ್ಲರ ಹೃದಯದಲ್ಲಿಯೂ ಆಗಿದೆ.

ಉತ್ತರ ಕನ್ನಡ ಲೋಕಸಭಾ ಸದಸ್ಯ ಅನಂತಕುಮಾರ ಹೆಗಡೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ‘ಭಟ್ಕಳದ ಚಿನ್ನದಪಳ್ಳಿ ಮಸೀದಿ, ಶಿರಸಿಯ ಸಿ.ಪಿ. ಬಜಾರ್‌ನಲ್ಲಿರುವ ಮಸೀದಿ, ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಸೇರಿದಂತೆ ಹಿಂದೂ ಧಾರ್ಮಿಕ ಮಂದಿರಗಳನ್ನು ಅಪಮಾನಗೊಳಿಸಿ ನಿರ್ಮಿಸಿರುವ ಎಲ್ಲ ಸಂಕೇತಗಳನ್ನು ಧ್ವಂಸಗೊಳಿಸುತ್ತೇವೆ’ ಎಂದು ಹೇಳಿದ್ದಾರೆ. ಐದು ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳುವುದಾಗಿ ಹ್ಞೂಂಕರಿಸಿದ್ದಾರೆ. ಹಿಂದೂ ರಾಜ್ಯ ಸ್ಥಾಪನೆಗೆ ನರೇಂದ್ರ ಮೋದಿ ಅವರನ್ನು ಮತ್ತೆ ಗೆಲ್ಲಿಸುವಂತೆ ಮನವಿಯನ್ನೂ ಮಾಡಿದ್ದಾರೆ. ಇನ್ನೊಂದೆಡೆ, ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ‘ಅಯೋಧ್ಯೆಯಲ್ಲಿ ಸ್ಥಾಪನೆಯಾಗಿರುವುದು ಬಿಜೆಪಿಯ ರಾಮ. ನಾವು ಗಾಂಧಿ ರಾಮನನ್ನು ಬೆಂಬಲಿಸುತ್ತೇವೆ’ ಎಂದು ಹೇಳಿದ್ದಾರೆ. ಹಾಗಾದರೆ ಗಾಂಧಿ ರಾಮ ಯಾರು? ಹೇಗಿದ್ದ?

1929ರಲ್ಲಿಯೇ ಮಹಾತ್ಮ ಗಾಂಧಿ ಅವರು ‘ಹಿಂದ್ ಸ್ವರಾಜ್’ನಲ್ಲಿ ಬರೆದ ಲೇಖನದಲ್ಲಿ ತಮ್ಮ ಕಲ್ಪನೆಯ ರಾಮ ಮತ್ತು ರಾಮರಾಜ್ಯದ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ‘ನನ್ನ ಕಲ್ಪನೆಯ ರಾಮ ಈ ಭೂಮಿಯ ಮೇಲೆ ಬದುಕಿದ್ದ ಅಥವಾ ಇಲ್ಲ ಎನ್ನುವುದು ಮುಖ್ಯವಲ್ಲ. ನನಗೆ ರಾಮ ಮತ್ತು ರಹೀಮ ಇಬ್ಬರೂ ಪೂಜ್ಯರು. ರಾಮರಾಜ್ಯ ಎಂದರೆ ಹಿಂದೂರಾಜ್ಯ ಅಲ್ಲ. ಅದೊಂದು ಪವಿತ್ರ ರಾಜ್ಯ. ಸತ್ಯ ಮತ್ತು ಸದಾಚಾರವೇ ಅಲ್ಲಿ ದೇವರು. ಇದನ್ನಲ್ಲದೆ ಬೇರೆ ಯಾವುದೇ ದೇವರನ್ನು ನಾನು ಒಪ್ಪುವುದಿಲ್ಲ’ ಎಂದು ಹೇಳಿದ್ದರು.

1946ರ ಏಪ್ರಿಲ್ 4ರಂದು ದೆಹಲಿಯ ಪ್ರಾರ್ಥನಾ ಸಭೆಯಲ್ಲಿ ಮಾತನಾಡಿದ ಅವರು, ‘ನನ್ನ ರಾಮ, ನನ್ನ ಪ್ರಾರ್ಥನೆಯ ರಾಮ ಅಯೋಧ್ಯೆಯ ರಾಜ ದಶರಥನ ಮಗನಲ್ಲ. ಐತಿಹಾಸಿಕ ಅಥವಾ ಪುರಾಣದ ರಾಮನೂ ಅಲ್ಲ. ಅವನು ಶಾಶ್ವತ. ಹುಟ್ಟಿಲ್ಲದವನು. ಸಾವಿಲ್ಲದವನು’ ಎಂದಿದ್ದರು.

1934ರಲ್ಲಿ ಅವರು ‘ನನ್ನ ಕನಸಿನ ರಾಮರಾಜ್ಯದಲ್ಲಿ ರಾಜಕುಮಾರ ಮತ್ತು ಬಡ ಗಮಾರ ಇಬ್ಬರಿಗೂ ಸಮಾನ ಹಕ್ಕು ಇರುತ್ತದೆ. ಶುದ್ಧ ನೈತಿಕತೆಯ ಆಧಾರದಲ್ಲಿ ಜನರ ಸಾರ್ವಭೌಮತ್ವ ಇರುತ್ತದೆ. ರಾಮರಾಜ್ಯದ ರೂಪದಲ್ಲಿ ದೇವರನ್ನು ಕಾಣಬೇಕು ಎಂದರೆ ಮೊದಲು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ತಪ್ಪುಗಳನ್ನು ಸೂಕ್ಷ್ಮ ಕಣ್ಣುಗಳಿಂದ ನೋಡಬೇಕು. ಪಕ್ಕದವರ ತಪ್ಪುಗಳ ಬಗ್ಗೆ ಕೊಂಚ ಕುರುಡಾಗಿರಬೇಕು. ನಿಜವಾದ ಪ್ರಗತಿಗೆ ಇದೊಂದೇ ದಾರಿ’ ಎಂದು ಹೇಳಿದ್ದರು. ಈಗ ನಮಗೆ ನಮ್ಮ ತಪ್ಪುಗಳು ಕಾಣುತ್ತಿಲ್ಲ. ಪರರ ತಪ್ಪುಗಳು ದೊಡ್ಡದಾಗಿ ಕಾಣುತ್ತಿವೆ. ಇತರರ ತಪ್ಪುಗಳನ್ನು ಸರಿಮಾಡುವ ಉಮೇದು ಕಾಣುತ್ತಿದೆ. ಅಂದರೆ, ಗಾಂಧೀಜಿ ದೃಷ್ಟಿಯಲ್ಲಿ ನಾವೀಗ ಪ್ರಗತಿಯ ಹಾದಿಯಲ್ಲಿ ಇಲ್ಲ. ಹೀಗೆ ಸಾಗಿದರೆ ನಾವು ಪ್ರಗತಿ ಕಾಣುವುದಿಲ್ಲ ಎಂದೇ ಗಾಂಧಿ ನಂಬಿದ್ದರು.

ಗಾಂಧೀಜಿ ತಮ್ಮನ್ನು ಸನಾತನ ಹಿಂದೂ ಎಂದು ಕರೆದುಕೊಂಡಿದ್ದರು. ಆದರೆ ‘ನನ್ನ ಹಿಂದೂ ಧರ್ಮ, ರಾಮಾಯಣ, ಮಹಾಭಾರತ, ವೇದ, ಪುರಾಣಗಳು ನನಗೆ ನಾನು ಪರಿಪೂರ್ಣ ಹಿಂದೂ ಆಗುವುದನ್ನು ಕಲಿಸಿವೆ. ಜೊತೆಗೆ ಇತರ ಧರ್ಮಗಳನ್ನು ಸಮಾನವಾಗಿ ನೋಡುವ ಗುಣವನ್ನೂ ಕಲಿಸಿವೆ’ ಎಂದು ಅವರು ಹೇಳುತ್ತಿದ್ದರು. ದೇಶದ ಇಂದಿನ ವಿದ್ಯಮಾನವನ್ನು ನೋಡಿದರೆ, ನಾವು ಪರಿಪೂರ್ಣ ಹಿಂದೂಗಳ ಹಾಗೆ ಕಾಣುತ್ತಿಲ್ಲ. ಪರಿಪೂರ್ಣ ಮುಸ್ಲಿಮರೂ ಕಾಣಸಿಗುತ್ತಿಲ್ಲ.

ತಮ್ಮ ಪ್ರಾರ್ಥನಾ ಸಭೆಗಳಲ್ಲಿ ಸರ್ವ ಧರ್ಮ ಪ್ರಾರ್ಥನೆಗೆ ಒತ್ತು ನೀಡುತ್ತಿದ್ದ ಗಾಂಧೀಜಿ, ತುಲಸಿದಾಸರ ‘ರಘುಪತಿ ರಾಘವ ರಾಜಾರಾಂ, ಪತಿತ ಪಾವನ ಸೀತಾರಾಂ’ ಪದ್ಯಕ್ಕೆ ‘ಈಶ್ವರ ಅಲ್ಲಾ ತೇರೆ ನಾಮ್’ ಎಂಬ ಸಾಲನ್ನು ಸೇರಿಸಿ ಹಾಡುತ್ತಿದ್ದರು. ಆದರೆ ಈಗ ಆ ಸಾಲನ್ನು ತೆಗೆಯಲಾಗಿದೆ. ಈಶ್ವರ ಮತ್ತು ಅಲ್ಲಾನನ್ನು ಬೇರೆ ಮಾಡಲಾಗಿದೆ. ಗಾಂಧೀಜಿ ಅವರು ಹಿಂದೂ ಮುಸ್ಲಿಮ್ ಏಕತೆಯ ಬಗ್ಗೆ ಬಹಳಷ್ಟು ಬರೆದಿದ್ದಾರೆ. ಅಲ್ಲದೆ ತಮ್ಮ ಭಾಷಣದಲ್ಲಿಯೂ ಈ ಬಗ್ಗೆ ಪದೇಪದೇ ಹೇಳಿದ್ದಾರೆ. ಹಿಂದೂ–ಮುಸ್ಲಿಮ್ ಏಕತೆ ಇಲ್ಲದೆ ಈ ದೇಶ ಉದ್ಧಾರವಾಗದು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

1930ರಲ್ಲಿ ಸಾಬರಮತಿ ಆಶ್ರಮದಲ್ಲಿ ಒಂದು ಘಟನೆ ನಡೆಯಿತು. ಆಶ್ರಮದ ಕೆಲವು ವಾಸಿಗಳು ‘ಆಶ್ರಮದಲ್ಲಿ ಪೂಜೆ ಸಲ್ಲಿಸಲು ಮಂದಿರ ಮತ್ತು ಮೂರ್ತಿ ಬೇಕು’ ಎಂಬ ಬೇಡಿಕೆ ಇಟ್ಟರು. ಗಾಂಧೀಜಿ ಅದನ್ನು ಸಾರಾಸಗಟಾಗಿ ತಿರಸ್ಕರಿಸಿದರು. ‘ಆಶ್ರಮದ ಅಂಗಳವೇ ಪ್ರಾರ್ಥನಾ ಮಂದಿರ. ಪ್ರಾರ್ಥನೆಗೆ ಯಾವುದೇ ಆವರಣ ಅಥವಾ ಮಂದಿರದ ಅಗತ್ಯವಿಲ್ಲ. ಅಂತಹ ಪ್ರಾರ್ಥನಾ ಮಂದಿರದ ಮೇಲ್ಚಾವಣಿ ಆಕಾಶವೇ ಆಗಿರುತ್ತದೆ. ನಾಲ್ಕು ದಿಕ್ಕುಗಳೇ ಗೋಡೆಗಳು. ಮಿತಿ ಇಲ್ಲದ ಸಭಾಂಗಣದಲ್ಲಿ ಪ್ರಾರ್ಥನೆ ಮಾಡುವುದು ಧರ್ಮ, ರಾಷ್ಟ್ರೀಯತೆ ಎಂಬ ಸಂಕುಚಿತ ಭಾವವನ್ನು ಬೆಳೆಸುವ ಎಲ್ಲ ಮಿತಿಗಳನ್ನೂ ಮೀರಿದೆ’ ಎಂದು ಹೇಳಿದ್ದರು.

ಈಗ ದೇಶದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳೂ ಗಾಂಧಿ ಮಾರ್ಗಕ್ಕೆ ವಿರುದ್ಧವಾಗಿಯೇ ಇವೆ. ರಾಮ ಮಂದಿರ ಕಟ್ಟಿಯಾಯಿತು, ಮುಂದೇನು ಎಂದು ಕೇಳಿದರೆ, ‘ನಮ್ಮ ಮುಂದಿನ ದಾರಿ ಮಥುರಾ, ಕೃಷ್ಣ ಮಂದಿರ’ ಎಂದು ನಾವು ಎದೆಯುಬ್ಬಿಸಿ ಹೇಳುತ್ತಿದ್ದೇವೆ. ಇಂತಹ ಹೇಳಿಕೆಗಳು ಯಾರ ಮೇಲೆ ಯಾವ ಬಗೆಯ ಪರಿಣಾಮ ಬೀರುತ್ತವೆ ಎನ್ನುವುದನ್ನೂ ನಾವು ಲೆಕ್ಕಿಸುತ್ತಿಲ್ಲ. ಇದಕ್ಕಾಗಿಯೇ ಒಮ್ಮೆ ಗಾಂಧೀಜಿ ‘ಈ ಕ್ಷಣದ ಅವಶ್ಯಕತೆ ಒಂದು ಧರ್ಮವಲ್ಲ, ವಿವಿಧ ಧರ್ಮದ ಭಕ್ತರ ನಡುವೆ ಪರಸ್ಪರ ಗೌರವ ಮತ್ತು ಸಹಿಷ್ಣುತೆ. ಈಗ ನಾವು ವಿವಿಧತೆಯಲ್ಲಿ ಏಕತೆ ಸಾಧಿಸಬೇಕು’ ಎಂದು ಹೇಳಿದ್ದರು. ಅದನ್ನು ಕೇಳಿಸಿಕೊಳ್ಳುವ ಕಿವಿಗಳಿಗೆ ನಾವೀಗ ಹುಡುಕಾಟ ನಡೆಸಬೇಕಾಗಿದೆ.

1935ರ ಜನವರಿಯಲ್ಲಿ ಡಾ. ಎಸ್.ರಾಧಾಕೃಷ್ಣನ್ ಅವರು ಗಾಂಧೀಜಿ ಅವರಿಗೆ ‘ನಿಮ್ಮ ಧರ್ಮ ಯಾವುದು?’ ಎಂದು ಕೇಳಿದಾಗ, ‘ನನ್ನ ಧರ್ಮ ಹಿಂದೂ. ನನ್ನ ಧರ್ಮ ಹಿಂದೂವೊಬ್ಬ ಮಾನವೀಯ ಹಿಂದೂ ಆಗಲು, ಮುಸ್ಲಿಮನೊಬ್ಬ ಮಾನವೀಯ ಮುಸ್ಲಿಂ ಆಗಲು, ಕ್ರಿಶ್ಚಿಯನ್ನನೊಬ್ಬ ನಿಜ ಕ್ರಿಶ್ಚಿಯನ್ ಆಗಲು ಪ್ರೇರೇಪಿಸುತ್ತದೆ. ನಾನು ನನ್ನ ಧರ್ಮದ ಮೇಲೆ ಪ್ರಮಾಣ ಮಾಡುತ್ತೇನೆ. ಅದಕ್ಕಾಗಿ ಸಾಯುತ್ತೇನೆ. ಆದರೆ ಅದು ನನ್ನ ವೈಯಕ್ತಿಕ ವಿಚಾರ. ರಾಜ್ಯಕ್ಕೂ ರಾಜಕೀಯಕ್ಕೂ ಅದಕ್ಕೂ ಸಂಬಂಧವಿಲ್ಲ’ ಎಂದು ಹೇಳಿದ್ದರು.

‘ದೇವರ ಅನುಗ್ರಹ, ದೇವರ ಸಾಕ್ಷಾತ್ಕಾರವು ಯಾವ ಜಾತಿಗೂ ಯಾವ ರಾಷ್ಟ್ರಕ್ಕೂ ಗುತ್ತಿಗೆಯಲ್ಲ. ದೇವರಲ್ಲಿ ಶ್ರದ್ಧೆ ಇಟ್ಟು ಅವನ ಬಾಗಿಲಿನಲ್ಲಿ ಕಾಯುವ ಎಲ್ಲರಿಗೂ ಅದು ಸಮಾನವಾಗಿ ಲಭಿಸುತ್ತದೆ. ಯಾವ ರಾಷ್ಟ್ರ, ಯಾವ ಮತ ಅನ್ಯಾಯಕ್ಕೆ, ಅಸತ್ಯಕ್ಕೆ, ಹಿಂಸೆಗೆ ಮಡಿಲು ಕಟ್ಟುತ್ತದೆಯೋ ಅದು ಈ ಭೂಮಿಯಿಂದ ಮಾಯವಾಗುತ್ತದೆ’ ಎಂದು ಗಾಂಧೀಜಿ ಹೇಳಿದ್ದರು. ಈ ಮಾತನ್ನಾದರೂ ನಾವು ಕೇಳಿಸಿಕೊಳ್ಳಬೇಕಲ್ಲವೇ? 

ಈಗ ದೇಶದಲ್ಲಿ ರಾಜಕೀಯಕ್ಕೂ ಧರ್ಮಕ್ಕೂ ನಡುವಿನ ಗೆರೆ ಅಳಿಸಿಹೋಗಿದೆ. ನಿಜ ಹಿಂದೂವನ್ನು, ನಿಜ ಮುಸ್ಲಿಮನನ್ನು ದುರ್ಬೀನು ಹಾಕಿ ಹುಡುಕಬೇಕಿದೆ. ಪ್ರಭುಗಳು ಅಮಲಿನಲ್ಲಿದ್ದಾರೆ. ಪ್ರಜೆಗಳು ಮಾತ್ರ ಕಂಗಾಲಾಗಿದ್ದಾರೆ. ಭವ್ಯ ರಾಮ ಮಂದಿರದ ಮುಂದೆ ನಿಂತು ‘ಸಬ್ ಕೊ ಸನ್ಮತಿ ದೇ ಭಗವಾನ್’ ಎಂದು ಬೇಡುವ ಸ್ಥಿತಿ ಅವರಿಗೆ ಬಂದಿದೆ. ರಾಮ ರಾಮ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT