ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮಕ್ಕಳ ದಾನ

Last Updated 26 ಜುಲೈ 2021, 19:30 IST
ಅಕ್ಷರ ಗಾತ್ರ

ಮುದುಕ ಹತ್ತಿರ ಬಂದಾಗ ವೆಸ್ಸಂತರ ಬೋಧಿಸತ್ವ, ವಿನಯದಿಂದ ಮೇಲೆದ್ದು ಅವನನ್ನು ಆದರಿಸಿದ, ಸ್ವಾಗತಿಸಿದ. ತನ್ನ ಮಗ ಜಾಲಿಕುಮಾರನಿಗೆ ಹೇಳಿದ, ‘ಮಗೂ, ಜಾಲಿ, ನಮ್ಮ ಕುಟೀರಕ್ಕೆ ಬ್ರಾಹ್ಮಣರೊಬ್ಬರು ಬರುತ್ತಿದ್ದಾರೆ. ಅವರನ್ನು ಸ್ವಾಗತಿಸು, ಅವರ ವಸ್ತುಗಳನ್ನು ಎತ್ತಿಕೊಂಡು ಬಾ’. ಜಾಲಿಕುಮಾರ, ‘ಅಪ್ಪಾ, ಆ ವಯಸ್ಸಾದ ಬ್ರಾಹ್ಮಣರು ನನಗೆ ಯಾಚಕರಂತೆ ಕಾಣುತ್ತಾರೆ. ಅವರಿಗೆ ಏನೋ ಅಪೇಕ್ಷೆ ಇರಬೇಕು’ ಎಂದು ಅತಿಥಿಯನ್ನು ಸ್ವಾಗತಿಸಲು ಮುಂದಾದ. ಬ್ರಾಹ್ಮಣನ ಹತ್ತಿರ ಹೋಗಿ, ಅವನಿಗೆ ನಮಸ್ಕಾರ ಮಾಡಿ, ಆತ ಹೊತ್ತುಕೊಂಡಿದ್ದ ಸಾಮಾನುಗಳನ್ನು ಎತ್ತಿಕೊಳ್ಳಲು ಹೋದ. ಈ ಬಾಲಕನನ್ನು ನೋಡುತ್ತಲೇ, ಈತ ವೆಸ್ಸಂತರನ ಮಗ ಜಾಲಿಕುಮಾರನಿರಬೇಕು ಎಂದು ಬ್ರಾಹ್ಮಣ ತಿಳಿದ. ಮುಂದೆ ದಾಸನಾಗುವ ಹುಡುಗನ ಹತ್ತಿರ ಈಗಿನಿಂದಲೇ ಕಠಿಣವಾಗಿರಬೇಕು ಎಂದುಕೊಂಡು, ‘ಹೇ, ದೂರ ಇರು. ನನ್ನನ್ನು ಮುಟ್ಟಬೇಡ ಮೂರ್ಖಾ’ ಎಂದು ಅಬ್ಬರಿಸಿದ. ಹುಡುಗ ಗಾಬರಿಯಾಗಿ, ಯಾಕೋ ಅತಿಥಿ ಕಠೋರವಾಗಿದ್ದಾನೆ ಎಂದು ದೂರ ಸರಿದ. ಬ್ರಾಹ್ಮಣನನ್ನು ಸೂಕ್ಷ್ಮವಾಗಿ ಗಮನಿಸಿದ ಬಾಲಕನಿಗೆ, ಅವನ ದೇಹದಲ್ಲಿ ಹದಿನೆಂಟು ದೋಷಗಳು ಕಂಡವು. ಈತನೊಬ್ಬ ಅಪಾಯಕಾರಿ ಮನುಷ್ಯ ಎಂಬುದು ಖಾತ್ರಿಯಾಯಿತು. ವೆಸ್ಸಂತರ ಮಾತ್ರ ತನ್ನ ಎಂದಿನ ಸಮಸ್ಥಿತಿಯಲ್ಲಿ, ಮುಗುಳುನಗೆ ನಗುತ್ತ, ಬ್ರಾಹ್ಮಣನನ್ನು ಆದರಿಸಿ,ಕುಶಲವನ್ನು ಕೇಳಿದ. ಅವನಿಗೆ ಕಾಲು ತೊಳೆಯಲು ನೀರು ಕೊಟ್ಟು. ಅವನ ಮುಂದೆ ಒಳ್ಳೆಯ ಹಣ್ಣುಗಳನ್ನಿಟ್ಟು ಸ್ವೀಕರಿಸುವಂತೆ ಬೇಡಿದ.

ಮತ್ತೆ ಹೇಳಿದ, ‘ನಾವು ಈ ಕಾಡಿಗೆ ಬಂದು ಏಳು ತಿಂಗಳಾದವು. ಇದುವರೆಗೂ ಮತ್ತೊಬ್ಬ ಮನುಷ್ಯನ ಮುಖ ಕಂಡಿಲ್ಲ. ಬಿಲ್ಪದಂಡ, ಅಗ್ನಿಹೋಮದ ವಸ್ತುಗಳು, ಕಮಂಡಲು ಹಿಡಿದ ಬ್ರಾಹ್ಮಣನ ದರ್ಶನವಾದದ್ದು ಇದೇ ಮೊದಲು’. ಮನಸ್ಸಿನಲ್ಲಿಯೇ, ‘ಈ ಬ್ರಾಹ್ಮಣ ಭಯಂಕರವಾದ ಕಾಡಿಗೆ ವ್ಯರ್ಥವಾಗಿ ಬಂದಿರುವುದು ಸಾಧ್ಯವಿಲ್ಲ. ಆದ್ದರಿಂದ ನಾನೇ ಅವನ ಅಪೇಕ್ಷೆಯನ್ನು ಬೇಗನೇ ಕೇಳಿಬಿಡುತ್ತೇನೆ’ ಎಂದುಕೊಂಡ. ನಂತರ, ‘ಹೇ ಬ್ರಾಹ್ಮಣ, ನೀನು ಯಾವ ಉದ್ದೇಶದಿಂದ ಈ ಭಯಂಕರವಾದ ಕಾಡಿಗೆ ಬಂದಿದ್ದೀ? ನಿನ್ನ ಮನಸ್ಸಿನಲ್ಲಿ ಯಾವ ಅಪೇಕ್ಷೆ ಇದೆಯೋ, ಅದನ್ನು ಸ್ಪಷ್ಟವಾಗಿ ಹೇಳಿಬಿಡು’ ಎಂದ. ಬ್ರಾಹ್ಮಣ ಸಂತೋಷದಿಂದ ಹೇಳಿದ, ‘ಹೇ ಮಹಾತ್ಮ, ತುಂಬಿದ ನದಿ ಎಂದಿಗೂ ಸೊರಗುವುದಿಲ್ಲ. ಅದು ಎಂದಿಗೂ ನೀಡುವುದರಲ್ಲೇ ಸಂತೋಷಪಡುವಂಥದ್ದು. ನೀನೂ ಹಾಗೆಯೇ. ನಾನು ಇಲ್ಲಿಗೆ ಬಂದದ್ದೇ ನಿನ್ನನ್ನು ಯಾಚಿಸಲು. ನನ್ನ ಹೆಂಡತಿಗೆ ದಾಸರು ಬೇಕಾಗಿದ್ದಾರೆ. ನಿನ್ನ ಮಕ್ಕಳನ್ನು ನನಗೆ ದಾಸರನ್ನಾಗಿ ಕೊಡು’. ಇದನ್ನು ಕೇಳಿ ವೆಸ್ಸಂತರ ಬೋಧಿಸತ್ವನ ಮುಖದಲ್ಲಿ ಯಾವ ಬದಲಾವಣೆಯೂ ಕಾಣಲಿಲ್ಲ. ‘ನಾನು ದುಃಖಪಡುವುದಿಲ್ಲ. ದಾನ ಕೊಡುವುದು ನನ್ನ ಕರ್ತವ್ಯ. ಇನ್ನು ಮೇಲೆ ನೀನು ಈ ಮಕ್ಕಳ ಒಡೆಯ. ಇವರನ್ನು ಕರೆದುಕೊಂಡು ಹೋಗು. ನನ್ನ ಪತ್ನಿ ಮಾದ್ರಿದೇವಿ ಹೂವು, ಹಣ್ಣು ತರಲು ಹೊರಗೆ ಹೋಗಿದ್ದಾಳೆ. ಸಂಜೆಗೆ ಮರಳಿ ಬರುತ್ತಾಳೆ. ನೀನು ಇಂದು ರಾತ್ರಿ ತಂಗಿದ್ದು, ಬೆಳಿಗ್ಗೆ ಮಕ್ಕಳನ್ನು ಕರೆದುಕೊಂಡು ಹೋಗಬಹುದು. ಆಕೆ ಮಕ್ಕಳಿಗೆ ಕೊನೆಯ ಬಾರಿ ಸ್ನಾನಮಾಡಿಸಿ, ಮಾಲೆ ತೊಡಿಸಿ, ಅಲಂಕರಿಸಿ ಕಳುಹಿಸುತ್ತಾಳೆ’ ಎಂದು ವಿನಂತಿಸಿಕೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT