ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಹಗುರದ ಬಾಳು

ಗುರುರಾಜ ಕರಜಗಿ
Last Updated 12 ಮೇ 2022, 17:15 IST
ಅಕ್ಷರ ಗಾತ್ರ

ಕುಸುಮಸಖನೇಂ ನೀನು? ಹಿಸುಕದೆಯೆ ಮೂಸದನು |
ಹಿಸುಕೆ ಕಟುಕಂಪು, ನರಲೋಕವದರವೊಲೇ ||
ಗಸಿಯ ಕಲಕದೆ ಕೊಳದ ಮೇಲ್ತಿಳಿಯ ಕುಡಿದು ನಡೆ |
ಹಸನು ಹಗುರದ ಬಾಳು – ಮಂಕುತಿಮ್ಮ || 626 ||

ಪದ-ಅರ್ಥ: ಕುಸುಮಸಖ=ಹೂವುಗಳನ್ನು ಪ್ರೀತಿಸುವವ, ನರಲೋಕವದರವೊಲೇ= ನರಲೋಕವು+ಅದರವೊಲೇ(ಅದರಂತೆಯೇ), ಗಸಿ=ಗಟ್ಟಿಯಾದ ಕೊಳೆ, ರಾಡಿ, ಮೇಲ್ತಿಳಿಯ=ಮೇಲಿನ ತಿಳಿಯ.

ವಾಚ್ಯಾರ್ಥ: ಪುಷ್ಟ ಪ್ರೇಮಿಯೇ ನೀನು? ಹಾಗಾದರೆ ಹೂವನ್ನು ಹಿಸುಕದೆಯೆ ಮೂಸು. ಅದನ್ನು ಹಿಸುಕಿದರೆ ಪರಿಮಳದ ಬದಲು ಕಟುವಾದ ವಾಸನೆ ಬರುತ್ತದೆ. ಮನುಷ್ಯಲೋಕವೂ ಹಾಗೆಯೇ. ಜಗತ್ತಿನ ರಾಡಿಯನ್ನು ಕಲಕದೆ ಹಾಗೆಯೇ ಬಿಟ್ಟು ಕೊಳದ ಮೇಲಿದ್ದ ತಿಳಿನೀರನ್ನು ಕುಡಿದು ನಡೆ. ಹಗುರವಾದ ಬಾಳು ಯಾವಾಗಲೂ ಸ್ವಚ್ಛ.

ವಿವರಣೆ: ಭಗವಾನ್ ಬುದ್ಧ ತನ್ನ ಆಪ್ತಶಿಷ್ಯರೊಡನೆ ವೈಶಾಲಿಯ ಕುಶಿನಾರದ ಬಳಿಯ ಕಾಡಿನಲ್ಲಿ ನಡೆದು ಹೋಗುತ್ತಿದ್ದ. ದಾರಿಯಲ್ಲಿ ಆಯಾಸ ಕಳೆಯಲು ಒಂದು ಮರದ ಕೆಳಗೆ ಕುಳಿತ. ಆನಂದನಿಗೆ ಹೇಳಿದ, ‘ಹತ್ತಿರದಲ್ಲೆಲ್ಲೋ ನೀರು ಹರಿಯುವ ಸದ್ದು ಕೇಳುತ್ತಿದೆ. ಸ್ವಲ್ಪ ಕುಡಿಯಲು ನೀರು ತರುತ್ತೀಯಾ?’ ಆನಂದ ಅಲ್ಲಿಗೆ ಹೋದ. ನೀರಿನ ಹಳ್ಳವೇನೋ ಇದೆ. ಆದರೆ ಹತ್ತಾರು ಎತ್ತಿನಬಂಡಿಗಳು ಹಾಯ್ದು ಹೋದದ್ದರಿಂದ ನೀರೆಲ್ಲ ಕೊಳೆಯಾಗಿದೆ. ಬಂದು ಅದನ್ನೇ ಬುದ್ಧನಿಗೆ ಹೇಳಿದ. ಹತ್ತು ನಿಮಿಷಗಳ ನಂತರ ಬುದ್ಧ ಮತ್ತೆ ನೀರು ತರಲು ಹೇಳಿದ, ಆನಂದ ಹೋದಾಗ ಮತ್ತೆ ಅದೇ ಸ್ಥಿತಿ ಇತ್ತು. ಮರಳಿ ಬಂದ. ಅರ್ಧಗಂಟೆ ಬಿಟ್ಟು ‘ಈಗ ಹೋಗಿ ನೀರು ತಾ’ ಎಂದ ಬುದ್ಧ. ಈ ಬಾರಿ ಶುದ್ಧ ನೀರಿನೊಂದಿಗೆ ಬಂದ ಆನಂದ. ‘ಆನಂದ, ನೀರು ಶುದ್ಧವಾಗಿಸಲು ನೀನು ಏನು ಮಾಡಿದೆ?’. ‘ಭಗವಾನ್, ನಾನು ಏನೂ ಮಾಡಲಿಲ್ಲ. ರಾಡಿ ಕೆಳಗೆ ಕುಳಿತು, ಮೇಲಿನ ನೀರು ತಿಳಿಯಾಯಿತು. ನಾನು ಏನಾದರೂ ಮಾಡಲು ಹೋಗಿದ್ದರೆ ನೀರು ಕೊಳಕಾಗುತ್ತಿತ್ತು’ ಎಂದ ಆನಂದ. ಬುದ್ಧ ನಕ್ಕ ‘ಬದುಕೂ ಹೀಗೆಯೇ ಅಲ್ಲವೇ ಆನಂದ? ನಾವು ಎಷ್ಟು ಆಳಕ್ಕಿಳಿದು, ಅದನ್ನು ಕೆದಕುತ್ತ ಹೋಗುತ್ತೇವೆಯೋ, ಅದು ಅಷ್ಟು ಕೊಳಕಾಗುತ್ತದೆ. ಕಲಕದೆ ಬಿಟ್ಟರೆ, ರಾಡಿ ನೆಲಕ್ಕಿಳಿದು, ನೀರು ಶುದ್ಧವಾಗುವಂತೆ, ಮನಸ್ಸನ್ನು ಶಾಂತವಾಗಿಟ್ಟುಕೊಂಡು, ಬಾಳಲ್ಲಿ ಬದುಕಿದರೆ, ಅದು ಹಗುರವಾಗುತ್ತದೆ’.

ಕಗ್ಗ ಈ ಮಾತನ್ನು ಒಂದು ಸುಂದರ ಉದಾಹರಣೆಯೊಂದಿಗೆ ತಿಳಿಸುತ್ತದೆ. ಪಾರಿಜಾತದಂತಹ ಅತ್ಯಂತ ಕೋಮಲವಾದ ಹೂವಿನ ಪರಿಮಳ ಬೇಕಾದರೆ ಅದನ್ನು ಅತ್ಯಂತ ಹಗುರವಾಗಿ, ಮೃದುವಾಗಿ ಬೆರಳತುದಿಯಲ್ಲಿ ಹಿಡಿಯಬೇಕು. ಹೂವನ್ನು ಬೆರಳುಗಳಿಂದ ಒತ್ತಿದರೆ, ಬಿಗಿಯಾಗಿ ಹಿಡಿದರೆ ಅದು ಮುದ್ದೆಯಾಗುತ್ತದೆ. ಅದರ ವಾಸನೆ ಕಟುವಾಗುತ್ತದೆ. ನಮ್ಮ ಮನುಷ್ಯ ಲೋಕದ ಬದುಕೂ ಒಂದು ಹೂವಿದ್ದಂತೆ. ಅದನ್ನು ಎಷ್ಟು ಹಗುರಾಗಿ, ತಳಮಳಗೊಳ್ಳದೆ, ಗೌರವದಿಂದ ಕಾಣುತ್ತೇವೋ, ಅದರಿಂದ ಅಷ್ಟೇ ಸಂತೋಷವನ್ನು ಪಡೆಯುತ್ತೇವೆ. ಭಾವಾವೇಶದಿಂದ, ಉದ್ವಿಗ್ನರಾಗಿ ಪ್ರಪಂಚದ ಆಗುಹೋಗುಗಳಲ್ಲಿ ಪಾಲುಗೊಂಡರೆ ಅಷ್ಟೇ ಪ್ರಮಾಣದ ನೋವು, ತಲ್ಲಣಗಳನ್ನು ಅನುಭವಿಸುತ್ತೇವೆ. ಬದುಕೆಂಬ ಕೊಳದಲ್ಲಿ, ಗದ್ದಲ ಮಾಡಿ ಕೆಳಗಿದ್ದ ಕಸ ಮೇಲೆ ಬರುವಂತೆ ಮಾಡುವುದರ ಬದಲು, ಅದರ ನೀರನ್ನು ಕಲಕದೆ, ರಾಡಿ ನೆಲಕ್ಕೆ ಕುಳಿತ ಮೇಲೆ, ತಿಳಿಯಾದ ನೀರು ಮೇಲಕ್ಕೆ ಬರುತ್ತದೆ. ಅದನ್ನು ಕುಡಿದು ಆನಂದದಿಂದ ನಡೆ. ನಾವು ಎಷ್ಟು ಹಗುರವಾಗಿ, ನಿರ್ಮಲವಾಗಿ, ಶಾಂತವಾಗಿ ಬದುಕುತ್ತೇವೋ, ನಮ್ಮ ಬದುಕೂ ಅಷ್ಟೆ ಸ್ವಚ್ಛವಾಗಿ, ನಿರಾತಂಕವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT