ಸೋಮವಾರ, ಜುಲೈ 4, 2022
23 °C

ಹಣಕಾಸು ಸಾಕ್ಷರತೆ: ನಿಮ್ಮ ನಿದ್ದೆ ಹಾಳು ಮಾಡದಿರಲಿ ಹೂಡಿಕೆ

ಪ್ರಮೋದ್ ಬಿ.ಪಿ. Updated:

ಅಕ್ಷರ ಗಾತ್ರ : | |

ಮೊದಲ ಬಾರಿಗೆ ಷೇರು ಹೂಡಿಕೆ ಮಾಡುವವರು ನಿಂತಲ್ಲಿ, ಕೂತಲ್ಲಿ ಸೂಚ್ಯಂಕಗಳನ್ನೇ ಗಮನಿಸುತ್ತಿರುತ್ತಾರೆ. ಹೂಡಿಕೆ ಮಾಡಿದ್ದ ಯಾವ ಕಂಪನಿಯ ಷೇರಿನ ಬೆಲೆ ಏರಿಕೆಯಾಗಿದೆ, ಎಷ್ಟು ಲಾಭವಾಯಿತು – ಎಷ್ಟು ನಷ್ಟವಾಯಿತು ಎಂಬ ಲೆಕ್ಕಾಚಾರದಲ್ಲಿ ತೊಡಗಿರುತ್ತಾರೆ. ಈ ಚಡಪಡಿಕೆಯಲ್ಲಿ ಮಾನಸಿಕ ನೆಮ್ಮದಿ ಹಾಳು ಮಾಡಿಕೊಳ್ಳುತ್ತಾರೆ. ಷೇರು ಹೂಡಿಕೆ ಮಾಡಿ ನಿಶ್ಚಿಂತೆಯಿಂದ ಇರಲು ಏನು ಮಾಡಬೇಕು ಎನ್ನುವುದನ್ನು ಒಮ್ಮೆ ಕಲಿಯೋಣ!

1. ಶಕ್ತಿಮೀರಿದ ಹೂಡಿಕೆ ಬೇಡವೇಬೇಡ: ‘ನಾನು ದೀರ್ಘಾವಧಿಗೆ ಹೂಡಿಕೆ ಮಾಡುತ್ತೇನೆ, ಅಲ್ಪಾವಧಿಯಲ್ಲಿ ಯಾರೂ ಹಣ ಗಳಿಸಿಲ್ಲ’ ಎನ್ನುವ ಮನಃಸ್ಥಿತಿಯಲ್ಲಿ ಅನೇಕರು ಷೇರು ಮಾರುಕಟ್ಟೆ ಪ್ರವೇಶಿಸುತ್ತಾರೆ. ಆರಂಭಿಕ ಹಂತದಲ್ಲಿ ದೊಡ್ಡ ಮೊತ್ತದ ಹಣವನ್ನು ವಿವಿಧ ಷೇರುಗಳ ಮೇಲೆ ಹಾಕಿ ಒಂದಷ್ಟು ಲಾಭವನ್ನು ಗಳಿಸುತ್ತಾರೆ. ಆದರೆ, ಮಾರುಕಟ್ಟೆ ಬೀಳಲು ಆರಂಭಿಸಿದಂತೆ ಪೂರ್ವಾಪರ ಯೋಚಿಸದೆ ಷೇರುಗಳ ಮಾರಾಟಕ್ಕೆ ನಿಲ್ಲುತ್ತಾರೆ. ಹೀಗೆ ಮಾಡುವುದರಿಂದ ಷೇರು ಮಾರುಕಟ್ಟೆಯಲ್ಲಿ ಲಾಭ ಗಳಿಸಲು ಸಾಧ್ಯವಿಲ್ಲ. ರಿಸ್ಕ್ ತೆಗೆದುಕೊಳ್ಳಬಹುದು ಎನ್ನುವಷ್ಟು ಹಣವನ್ನು ಮಾತ್ರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ. ಷೇರು ಹೂಡಿಕೆ ನಿಮ್ಮ ನಿದ್ದೆ ಕೆಡಿಸುತ್ತಿದೆ ಎಂದಾದರೆ ನೀವು ನಿಮ್ಮ ಆರ್ಥಿಕ ಶಕ್ತಿಯನ್ನು ಮೀರಿ ಹೂಡಿಕೆ ಮಾಡಿದ್ದೀರಿ ಎಂದು ಅರ್ಥ.

2. ಎಚ್ಚರಿಕೆಯ ಹೂಡಿಕೆ ಇರಲಿ: ಒಂದಷ್ಟು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದರೆ ಬೀಳುವ ಮಾರುಕಟ್ಟೆಯಲ್ಲಿ ಎಚ್ಚರಿಕೆಯ ಹೂಡಿಕೆ ಮಾಡುವುದು ಉತ್ತಮ. ಮಾರುಕಟ್ಟೆ ಕುಸಿತ ಕಂಡಿರುವಾಗ ಉತ್ತಮ ಕಂಪನಿಗಳ ಷೇರುಗಳು ಕಡಿಮೆ ಬೆಲೆಗೆ ಸಿಗುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ನಿಮ್ಮ ಬಳಿ ಷೇರು ಹೂಡಿಕೆಗೆ ₹ 50 ಸಾವಿರ ಇದೆ ಎಂದು ಭಾವಿಸಿ. ಆ ಹಣವನ್ನು 10 ಭಾಗಗಳಾಗಿ ಮಾಡಿ ಒಂದೊಂದು ಬಾರಿಗೆ ಮಾರುಕಟ್ಟೆ ಕುಸಿತ ಆಧರಿಸಿ ತಲಾ ಐದು ಸಾವಿರ ಹೂಡಿಕೆ ಮಾಡುತ್ತ ಬನ್ನಿ. ಇದರಿಂದ ಷೇರುಗಳ ಖರೀದಿ ದರದ ಸರಾಸರಿಯಲ್ಲಿ ಇಳಿಕೆಯಾಗುತ್ತದೆ. ಹೀಗೆ ಮಾಡಿದಾಗ ಷೇರು ಸೂಚ್ಯಂಕಗಳು ಜಿಗಿತ ಕಂಡಾಗ ನಿಮಗೆ ಹೆಚ್ಚು ಲಾಭವಾಗುತ್ತದೆ.

3. ಅತಿಯಾದ ಏರಿಳಿತವಿದ್ದಾಗ ಏನೂ ಮಾಡಬೇಡಿ: ನೀವು ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ ಎಂದಾದರೆ ಷೇರು ಮಾರುಕಟ್ಟೆಯಲ್ಲಿ ಅತಿಯಾದ ಏರಿಳಿತ ಕಂಡುಬಂದಾಗ ಏನೂ ಮಾಡದೆ ಸುಮ್ಮನಿರುವುದು ಒಳಿತು. ಅನಿಶ್ಚಿತತೆಯ ಸೂಚ್ಯಂಕ (VOLATALITY INDEX) ಆಧರಿಸಿ ಷೇರು ಮಾರುಕಟ್ಟೆ ಯಾವ ಪ್ರಮಾಣದಲ್ಲಿ ಏರಿಳಿತ ಕಾಣುತ್ತಿದೆ ಎನ್ನುವುದನ್ನು ಅಂದಾಜಿಸಬಹುದು. ಏರಿಳಿತದ ಪ್ರಮಾಣ ಶೇಕಡ 20 ಅಂಶಗಳಿಗಿಂತ ಹೆಚ್ಚಿಗೆ ಇದ್ದರೆ ಹೂಡಿಕೆ ಮಾಡದಿರುವುದೇ ಒಳಿತು. ಭಾರತಕ್ಕೆ ಅನ್ವಯವಾಗುವ ಅನಿಶ್ಚಿತತೆಯ ಸೂಚ್ಯಂಕವನ್ನು ಗೂಗಲ್‌ನ ನೆರವಿಂದ ಕಂಡುಕೊಳ್ಳಬಹುದು.

4. ಕಡಿಮೆ ಬೆಲೆಗೆ ಖರೀದಿ, ಗರಿಷ್ಠ ಬೆಲೆಗೆ ಮಾರಾಟದ ಕನಸು: ಷೇರುಗಳ ಬೆಲೆ ಕನಿಷ್ಠ ಮಟ್ಟಕ್ಕೆ ಕುಸಿದಾಗ ಹೆಚ್ಚು ಹೂಡಿಕೆ ಮಾಡುವುದು, ಬೆಲೆ ಗರಿಷ್ಠ ಮಟ್ಟಕ್ಕೆ ತಲುಪಿದಾಗ ಮಾರಾಟ ಮಾಡುವುದು ಎಂಬ ಅರ್ಥವಿಲ್ಲದ ಲೆಕ್ಕಾಚಾರ ಮಾಡಬೇಡಿ. ಈ ಲೆಕ್ಕಾಚಾರ ಮಾಡಿ ಗೆದ್ದವರು ಇಲ್ಲ. ‘ಷೇರುಗಳನ್ನು ಕನಿಷ್ಠ ಬೆಲೆಗೆ ಖರೀದಿಸಿ ಗರಿಷ್ಠ ಬೆಲೆಗೆ ಮಾರಾಟ ಮಾಡಲು ಇಬ್ಬರಿಂದ ಮಾತ್ರ ಸಾಧ್ಯ: ಒಬ್ಬ ಭಗವಂತ, ಮತ್ತೊಬ್ಬ ಸುಳ್ಳುಗಾರ’ ಎಂದು ಖ್ಯಾತ ಹೂಡಿಕೆದಾರ ವಿಜಯ್ ಕೇಡಿಯಾ ಹೇಳುತ್ತಾರೆ. ಹಾಗಾಗಿ ನಿಯಮಿತವಾಗಿ, ಕ್ರಮಬದ್ಧವಾಗಿ ಅಧ್ಯಯನ ಮಾಡಿ ಉತ್ತಮ ಕಂಪನಿಗಳಲ್ಲಿ ಹೂಡಿಕೆ ಮುಂದುವರಿಸಿ, ಇದರಿಂದ ಷೇರುಪೇಟೆಯಲ್ಲಿ ಸಂಪತ್ತು ಸೃಷ್ಟಿಸುವ ನಿಮ್ಮ ಕನಸು ನನಸಾಗುತ್ತದೆ.

ಸತತ ಎರಡನೇ ವಾರ ಜಿಗಿದ ಷೇರುಪೇಟೆ
ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರ ಜಿಗಿದಿವೆ. ಮಾರ್ಚ್ 17ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಉತ್ತಮ ಗಳಿಕೆ ಕಂಡಿವೆ. 57,863 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 4.16ರಷ್ಟು ಚೇತರಿಸಿಕೊಂಡಿದೆ.

17,287 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 3.95ರಷ್ಟು ಹೆಚ್ಚಳವಾಗಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸಕಾರಾತ್ಮಕತೆ ದೇಶಿ ಮಾರುಕಟ್ಟೆಯಲ್ಲೂ ಗೋಚರಿಸಿದ ಪರಿಣಾಮ ಷೇರುಪೇಟೆ ಉತ್ತಮ ಗಳಿಕೆ ಕಾಣಲು ಸಾಧ್ಯವಾಯಿತು. ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರವನ್ನು 25 ಮೂಲಾಂಶಗಳಷ್ಟು ಹೆಚ್ಚಳ ಮಾಡಿದ್ದು ಸೂಚ್ಯಂಕಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿಲ್ಲ. ಅಮೆರಿಕದ ಅರ್ಥ ವ್ಯವಸ್ಥೆ ಉತ್ತಮ ರೀತಿಯಲ್ಲಿ ಸಾಗಲಿದೆ ಎನ್ನುವ ಹೇಳಿಕೆ ಸಹ ಷೇರುಪೇಟೆ ಪುಟಿದೇಳಲು ಕಾರಣವಾಯಿತು.

ಮಾರ್ಚ್ 7ರಂದು ಗಣನೀಯ ಕುಸಿತ ಕಂಡಿದ್ದ ಸೂಚ್ಯಂಕಗಳು ಇದೀಗ ಮತ್ತೆ ಚೇತರಿಕೆಯ ಹಾದಿಗೆ ಮರಳಿವೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸಕಾರಾತ್ಮಕತೆಯ ಕಾರಣ ಕಳೆದ 8 ವಹಿವಾಟಿನ ದಿನಗಳಲ್ಲಿ ಸೆನ್ಸೆಕ್ಸ್ 4000ಕ್ಕೂ ಹೆಚ್ಚು ಅಂಶಗಳನ್ನು ಗಳಿಸಿಕೊಂಡಿದೆ. ಇನ್ನು ನಿಫ್ಟಿ (50) ಸೂಚ್ಯಂಕ ಸಹ 1,400 ಅಂಶಗಳ ಜಿಗಿತ ಕಂಡಿದೆ. ಮಾರ್ಚ್ 16ರಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶಿಯ ಮಾರುಕಟ್ಟೆಯಲ್ಲಿ ₹ 312 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಫೆಬ್ರುವರಿ 11ರ ಬಳಿಕ ಇದೇ ಮೊದಲ ಬಾರಿಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈ ಪ್ರಮಾಣದಲ್ಲಿ ಖರೀದಿಗೆ ಮುಂದಾಗಿರುವುದು ಅಶಾದಾಯಕವಾಗಿ ಕಂಡುಬಂದಿದೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಮಾರುತಿ, ಟೈಟನ್, ಎಚ್‌ಡಿಎಫ್‌ಸಿ, ಮಹೀಂದ್ರ ತಲಾ ಶೇ 8ರಷ್ಟು ಜಿಗಿದಿವೆ. ಕೋಲ್ ಇಂಡಿಯಾ ಶೇ 3ರಷ್ಟು, ಒಎನ್‌ಜಿಸಿ ಶೇ 3ರಷ್ಟು, ಹಿಂಡಾಲ್ಕೊ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಲಾ ಶೇ 2ರಷ್ಟು ಕುಸಿದಿವೆ.

ಮುನ್ನೋಟ: ಸೂಚ್ಯಂಕಗಳು ಸಕಾರಾತ್ಮಕವಾಗಿ ಕಂಡುಬಂದಿವೆ ಎಂದಾಕ್ಷಣ ಎಲ್ಲವೂ ಸರಿಯಾಗಿದೆ ಎಂದಲ್ಲ. ಜಾಗತಿಕ ಮಾರುಕಟ್ಟೆಗಳು ಉತ್ತಮ ಓಟ ಕಂಡ ಪರಿಣಾಮ ಅದರ ಅನುಕೂಲ ದೇಶಿ ಮಾರುಕಟ್ಟೆಗೂ ಸಿಕ್ಕಿದೆ. ಸೂಚ್ಯಂಕಗಳಲ್ಲಿ ಅನಿಶ್ಚಿತತೆ ಮುಂದುವರಿಯಲಿದೆ. ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟವಿದೆ ಎಂದುಕೊಂಡು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡುವ ಸಮಯ ಇದಲ್ಲ ಎನ್ನುವ ಎಚ್ಚರಿಕೆ ಅಗತ್ಯ. ರಷ್ಯಾ-ಉಕ್ರೇನ್ ನಡುವಿನ ಬಿಕ್ಕಟ್ಟು, ತೈಲ ಬೆಲೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎನ್ನುವ ಅಂಶ ಸೇರಿ ಹಲವು ಜಾಗತಿಕ ವಿದ್ಯಮಾನಗಳು ಸೂಚ್ಯಂಕಗಳ ಗತಿ ನಿರ್ಧರಿಸಲಿವೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ., ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು