ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಸುಖ ಮತ್ತು ದುಃಖ

Last Updated 19 ಮಾರ್ಚ್ 2021, 5:58 IST
ಅಕ್ಷರ ಗಾತ್ರ

ಸುಖಮಾಪತಿತಂ ಸೇವ್ಯಂ ದುಃಖಮಾಪತಿತಂ ತಥಾ ।
ಚಕ್ರವತ್ಪರಿವರ್ತಂತೇ ದುಃಖಾನಿ ಚ ಸುಖಾನಿ ಚ ।।

ಇದರ ತಾತ್ಪರ್ಯ ಹೀಗೆ:‘ನಮಗೆ ಬಂದೊದಗಿದ ಸುಖವನ್ನೂ ಅಂತೆಯೇ ದುಃಖವನ್ನೂ ಅನುಭವಿಸಲೇ ಬೇಕು. ದುಃಖಗಳೂ ಸುಖಗಳೂ ಒಂದಾದಮೇಲೊಂದರಂತೆ ಚಕ್ರದ ಹಾಗೆ ಸುತ್ತುತ್ತಿರುತ್ತವೆ.’

ಕಳೆದ ವರ್ಷ ಸುಮಾರು ಇದೇ ಸಮಯದಲ್ಲಿ ನಮ್ಮ ಮೇಲೆ ಕೊರೊನಾ ದಾಳಿ ಆರಂಭವಾಯಿತು. ಹಲವು ತಿಂಗಳು ನಮ್ಮನ್ನು ತುಂಬ ಕಾಡಿತು. ಇನ್ನೇನು ಅದರ ಹಾವಳಿ ಕಡಿಮೆ ಆಯಿತು; ಮೊದಲಿನಂತೆಯೇ ನೆಮ್ಮದಿಯಾಗಿ ಬಾಳಬಹುದು ಎಂದು ಅಂದುಕೊಳ್ಳುವಷ್ಟರಲ್ಲೇ ಮತ್ತೆ ಕೊರೊನಾ ಅಲೆ ನಮ್ಮ ಮೇಲೆ ಎರಗುತ್ತಿರುವಂತಿದೆ. ಸುಖವಾಗಿದ್ದಾಗ ದುಃಖ ಬಂದೊದಗಿತು; ಹೀಗೆಂದು ದುಃಖವೊಂದೇ ಉಳಿಯಲಿಲ್ಲ, ಅದರ ಜೊತೆಗೆ ಸುಖವೂ ಬಂದಿತು; ಆದರೆ ಸುಖವಷ್ಟೆ ನೆಲೆ ನಿಲ್ಲಲಿಲ್ಲ; ದುಃಖವೂ ಅದರ ಜೊತೆಯಾಗಿದೆ. ಎಂದರೆ ಸುಖ–ದುಃಖ – ಒಂದಾದಮೇಲೊಂದರಂತೆ ನಿರಂತರವಾಗಿ ಸುತ್ತುತ್ತಲೇ ಇರುತ್ತದೆ ಎಂಬುದು ಸ್ಪಷ್ಟವಾಗಿ ನಮ್ಮ ಅನುಭವಕ್ಕೇ ಬರುತ್ತಿರುತ್ತದೆ. ಇದನ್ನೇ ಸುಭಾಷಿತ ಹೇಳುತ್ತಿರುವುದು.

ಹೀಗೆಂದು ನಾವು ಸುಖ ಮಾತ್ರವೇ ಇರಲಿ ಎಂದು ಆಶಿಸಲೂ ಆಗದು, ದುಃಖ ಮಾತ್ರವೇ ಇರುತ್ತದೆ ಎಂಬ ಆತಂಕವೂ ಸಲ್ಲದು; ಎರಡೂ ಚಕ್ರದಂತೆ ಸುತ್ತುತ್ತಲೇ ಇರುತ್ತವೆ. ಈ ವಾಸ್ತವವನ್ನು ನಾವು ತಿಳಿದುಕೊಂಡರೆ ಆಗ ಜೀವನವನ್ನು ನಾವು ತುಂಬ ವಿವೇಕದಿಂದ ನಿರ್ವಹಿಸಬಹುದು.

ಇನ್ನೊಂದು ಸುಭಾಷಿತವನ್ನು ನೋಡಿ:

ಸುಖಮಧ್ಯೇ ಸ್ಥಿತಂ ದುಃಖಂ ದುಃಖಮಧ್ಯೇ ಸ್ಥಿತಂ ಸುಖಮ್‌ ।
ದ್ವಯಮನ್ಯೋನ್ಯಸಂಯುಕ್ತಂ ಪ್ರೋಚ್ಯತೇ ಜಲಪಂಕವತ್‌ ।।

ಎಂದರೆ ‘ಸುಖದ ಮಧ್ಯೆ ದುಃಖವಿದೆ; ದುಃಖದ ಮಧ್ಯೆ ಸುಖವಿದೆ. ನೀರು ಮತ್ತು ಕೆಸರು ಹೇಗೆ ಕೂಡಿಕೊಂಡಿರುತ್ತವೆಯೋ ಹಾಗೆಯೇ ಸುಖ ಮತ್ತು ದುಃಖ ಎರಡೂ ಕೂಡಿಕೊಂಡಿರುತ್ತವೆ.’

ಸುಖ ಮತ್ತು ದುಃಖ ಒಂದು ಇನ್ನೊಂದನ್ನು ಬಿಟ್ಟು ಇರುವುದಿಲ್ಲ; ಹೇಗೆ ಹಗಲು ಮತ್ತು ರಾತ್ರಿಗಳು ಜೊತೆಯಾಗಿರುತ್ತವೆಯೋ ಹಾಗೆಯೇ ಇವೆರಡು ಕೂಡ ಸಂಗಾತಿಗಳಂತೆಯೇ ಇರುತ್ತವೆ.

ಜೀವನದ ಸಣ್ಣ ಸಣ್ಣ ಸಂಗತಿಗಳಲ್ಲೂ ಈ ಸತ್ಯವನ್ನು ನಾವು ಕಾಣಬಹುದು.

ಕಷ್ಟಪಟ್ಟು ಓದಿದರೆ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು. ಹೌದು, ಓದುವಾಗ ತುಂಬ ಕಷ್ಟಪಡಬೇಕಾಗುತ್ತದೆ; ಆದರೆ ಆ ಕಷ್ಟದಲ್ಲಿಯೇ ಪರೀಕ್ಷೆಯನ್ನು ಸುಲಭವಾಗಿಸುವ ಸುಖದ ಗುಟ್ಟು ಕೂಡ ಅಡಗಿರುತ್ತದೆ. ಹೀಗೆಯೇ ಕಷ್ಟಪಟ್ಟು ದುಡಿದು ಜೀವನವನ್ನು ರೂಪಿಸಿಕೊಂಡರೆ ಆಗ ಜೀವನದ ಸುಖವನ್ನು ಸವಿಯಬಹುದು.

ಸುಖದಲ್ಲಿ ಕರಗಿಹೋಗದೆ, ದುಃಖದಲ್ಲಿ ಕೊಚ್ಚಿಹೋಗದೆ ಜೀವನವನ್ನು ಸಮತೋಲನದಿಂದ ರೂಪಿಸಿಕೊಳ್ಳಬಲ್ಲ ಜಾಣ್ಮೆ ನಮಗೆ ದಕ್ಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT