ಗುರುವಾರ , ಜನವರಿ 28, 2021
15 °C

ದಿನದ ಸೂಕ್ತಿ: ವೀರಸನ್ಯಾಸಿಯ ಶಾಂತಿ ಸಂದೇಶ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣವಮಿತಿ
ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ |
ರುಚೀನಾಂ ವೈಚಿತ್ರ್ಯಾದೃಜುಕುಟಿಲ ನಾನಾಪಥಜುಷಾಂ
ನೃಣಾಮೇಕೋ ಗಮ್ಯಸ್ತ್ವಮಸಿ ಪಯಸಾಮರ್ಣವ ಇವ ||

ಇದು ಶಿವಮಹಿಮ್ನಃಸ್ತೋತ್ರದ ಒಂದು ಪದ್ಯ; ಸ್ವಾಮಿ ವಿವೇಕಾನಂದರಿಗೆ ತುಂಬ ಪ್ರಿಯವಾಗಿದ್ದ ಸ್ತೋತ್ರ.

ಆಧುನಿಕ ಕಾಲದಲ್ಲಿ ಭಾರತೀಯತೆಯ ಅಸ್ಮಿತೆಯನ್ನು ಒದಗಿಸಿದ ಪ್ರಮುಖರಲ್ಲಿ ಒಬ್ಬರು ಸ್ವಾಮಿ ವಿವೇಕಾನಂದರು. ಅವರ ಜನ್ಮದಿನವನ್ನು ‘ರಾಷ್ಟ್ರೀಯ ಯುವದಿನ’ವನ್ನಾಗಿ ಆಚರಿಸುತ್ತಿದ್ದೇವೆ. ಅವರು ಒದಗಿಸಿದ ಭಾರತೀಯತೆಯ ಸತ್ವ ಎಂಥದ್ದು ಎಂಬುದನ್ನು ಅವರ ಜನ್ಮದಿನದ ಆಚರಣೆಯೂ ಧ್ವನಿಸುವಂತಿದೆ.

ಮೊದಲ ಬಾರಿಗೆ ಜಗತ್ತಿನ ಎದುರಿನಲ್ಲಿ ಸ್ವಾಮಿ ವಿವೇಕಾನಂದರು ಭಾರತೀಯತೆಯನ್ನು ವ್ಯಾಖ್ಯಾನಿಸಿದ ಪರಿಯೇ ಅಪೂರ್ವವಾದುದು. ಸರ್ವಧರ್ಮ ಸಮ್ಮೇಳನದಲ್ಲಿ ಅವರು ಪಲುಕಿದ ಮೊದಲ ಪದಗಳೇ ಭಾರತದ ವಿಶ್ವಕುಟುಂಬದ ಕಲ್ಪನೆಯನ್ನು ಎತ್ತಿಹಿಡಿದವು ಎಂಬುದು ಗಮನಾರ್ಹ. ಭಾರತೀಯತೆಯಲ್ಲಿ ನೆಲೆನಿಂತು ಅವರು ಕಂಡರಿಸಿದ್ದು ವಿಶ್ವಾತ್ಮಭಾವವನ್ನೇ; ವಿಶ್ವ ಭ್ರಾತೃತ್ವವನ್ನೇ. ಅವರು ಜಗತ್ತಿನ ಮುಂದೆ ತಮ್ಮನ್ನು ಗುರುತಿಸಿಕೊಂಡದ್ದು ಮತ್ತು ಜಗತ್ತಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದು ಮೂರು ನೆಲೆಗಳಲ್ಲಿ: ಪ್ರಾಚೀನ ಸನ್ಯಾಸ ಪರಂಪರೆಗೆ ಸೇರಿದವರಾಗಿ; ಎಲ್ಲ ಧರ್ಮಗಳ ತಾಯಿಯ ಹೆಸರಿನಲ್ಲಿ; ನಾನಾ ಜಾತಿ–ವರ್ಗಗಳ ಧರ್ಮವಾದ ಹಿಂದೂ ಧರ್ಮದ ಕೋಟ್ಯಂತರ ಜನರ ಹೆಸರಿನಲ್ಲಿ.

ಸ್ವಾಮಿ ವಿವೇಕಾನಂದರು ತಮ್ಮನ್ನು ಗುರುತಿಸಿಕೊಳ್ಳುವುದು ಕೂಡ ಇಲ್ಲಿ ಗಮನೀಯ. ಅದೂ ಅವರು ಹೆಮ್ಮೆಯಿಂದಲೇ ಗುರುತಿಸಿಕೊಳ್ಳುತ್ತಾರೆ; ಅದನ್ನೂ ಮರೆಯುವಂತಿಲ್ಲ. ‘ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ – ಎರಡನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನು ಎಂಬ ಹೆಮ್ಮೆಯಿದೆ’ ಎಂದು ಘೋಷಿಸುತ್ತಾರೆ  ಅವರು. ಇನ್ನೊಂದು ಅತ್ಯಂತ ಮುಖ್ಯವಾದ ವಿಷಯವನ್ನು ಒತ್ತಿ ಹೇಳುವುದನ್ನೂ ಅವರು ಮರೆಯಲಿಲ್ಲ. ‘ವೈಶ್ವಿಕ ಸಹಿಷ್ಣುತೆಯಲ್ಲಿ ಮಾತ್ರವೇ ನಮಗೆ ನಂಬಿಕೆ ಇದೆ ಎಂದಲ್ಲ, ಎಲ್ಲ ಧರ್ಮಗಳೂ ಸತ್ಯ ಎಂಬುದರಲ್ಲೂ ನಮಗೆ ನಂಬಿಕೆ ಇದೆ’ ಎಂದೂ ಅವರು ಹೇಳುತ್ತಾರೆ. ಎಷ್ಟೆಲ್ಲ ಧರ್ಮಗಳಿಗೆ ಭಾರತ ಆಶ್ರಯ ಕೊಟ್ಟಿದೆ ಎಂಬುದನ್ನು ಹೇಳಲು ಕೂಡ ಅವರು ಮರೆಯುವುದಿಲ್ಲ. 

ಅಷ್ಟೇ ಅಲ್ಲ, ಸ್ವಾಮೀಜಿ ಅವರಿಗೆ ಬಾಲ್ಯದಿಂದಲೂ ಪ್ರಿಯವಾಗಿದ್ದ ‘ಶಿವಮಹಿಮ್ನಃಸ್ತೋತ್ರ’ದ ತಾತ್ಪರ್ಯವನ್ನೂ ಈ ಸಂದರ್ಭದಲ್ಲಿ ಹೇಳಿದ್ದಾರೆ; ಇದನ್ನು ಮುಂದೆಯೂ ಹಲವು ಸಲ ಅವರು ಉಲ್ಲೇಖಿಸಿದ್ದಾರೆ ಕೂಡ. ಅದರ ತಾತ್ಪರ್ಯ ಹೀಗೆ:

’ಹಲವು ನದಿಗಳು ಬೇರೆ ಬೇರೆ ಬೆಟ್ಟದಲ್ಲಿ ಹುಟ್ಟಿ ನೇರವಾಗಿಯೋ ಡೊಂಕಾಗಿಯೋ ಹರಿದು ಕೊನೆಗೆ ಸಾಗರಕ್ಕೆ ಸೇರುವಂತೆ, ಹೇ ಪ್ರಭು, ಜನರು ತಮ್ಮ ಸಂಸ್ಕಾರಕ್ಕೆ ತಕ್ಕಂತೆ ನಡೆಯುವ ಬೇರೆ ಬೇರೆ ಪಥಗಳೆಲ್ಲ ಕೊನೆಗೆ ನಿನ್ನೆಡೆಗೆ ಒಯ್ಯುವುವು. ದಾರಿ ಬೇರೆ ಆದರೂ ಎಲ್ಲ ಒಂದೇ ಗುರಿಯೆಡೆಗೆ ಹೋಗುತ್ತಿರುವುವು. ಕೆಲವು ವಕ್ರಮಾರ್ಗದಲ್ಲಿ ಹರಿಯಬಹುದು, ಕೆಲವು ನೇರವಾಗಿಯೇ ಹರಿಯಬಹುದು. ಆದರೆ ಕೊನೆಗೆ ಎಲ್ಲವೂ ಈಶ್ವರನೆಡೆಗೆ ಬರಲೇಬೇಕು.’

ಇದೇ ಧ್ವನಿಯಿರುವ ಭಗವದ್ಗೀತೆಯ ಶ್ಲೋಕಗಳ ತಾತ್ಪರ್ಯವನ್ನೂ ಸ್ವಾಮೀಜಿ ಸ್ಮರಿಸಿಕೊಳ್ಳುತ್ತ, ಜಗತ್ತಿನಲ್ಲಿ ಹರಡಿರುವ ಪ್ರತ್ಯೇಕತಾಬುದ್ಧಿ, ಮತಾಂಧತೆ, ದುರಭಿಮಾನಗಳು ಈ ಸುಂದರ ಸೃಷ್ಟಿಯನ್ನು ನಾಶ ಮಾಡುತ್ತಿರುವುದರ ಬಗ್ಗೆಯೂ ಅವರು ಖೇದದಿಂದಲೇ ಮಾತನಾಡಿದ್ದಾರೆ. ಹಿಂಸೆ–ದ್ವೇಷಗಳು ಮಾನವನ ಏಳಿಗೆಗೆ ಮಾರಕವಾಗಿವೆ ಎಂದೂ ಅಭಿಪ್ರಾಯಿಸಿದ್ದಾರೆ.

ಅಲ್ಪಾವಧಿಯ ಭಾಷಣದಲ್ಲಿ ಸ್ವಾಮಿ ವಿವೇಕಾನಂದರು ಎಷ್ಟೊಂದು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ  ಎನ್ನುವುದನ್ನು ಗಮನಿಸಿದರೆ ನಮಗೆ ಅಚ್ಚರಿಯಾಗದಿರದು. ಅವರ ಮಾತಿನಲ್ಲಿ ಸ್ಪಷ್ಟತೆ ಇದೆ; ಗುರಿ ಇದೆ; ಹಿಂದೆ ಗುರುವೂ ಇದ್ದಾನೆ; ಹೊಣೆಗಾರಿಕೆಯ ಗುರುತ್ವವೂ ಇದೆ. ಆದರೆ ನಾವಿಂದು ಸ್ವಾಮೀಜಿ ಅವರ ಉಪದೇಶಗಳನ್ನು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದೇವೆ? ಇದರ ಬಗ್ಗೆ ಆತ್ಮಾವಲೋಕನ ನಡೆಯಬೇಕಾಗಿದೆಯಲ್ಲವೆ?

ಸನ್ಯಾಸಿಯೊಬ್ಬರ ಜನ್ಮದಿನವನ್ನು ಯುವದಿನವನ್ನಾಗಿ ಆಚರಿಸುವುದೇ ಸ್ವಾರಸ್ಯಕರವಾಗಿದೆ. ಯೌವನ ಎಂದರೆ ಶಕ್ತಿಯ ಅಪರಿಮಿತ ಪ್ರವಾಹ. ಆದರೆ ಸನ್ಯಾಸ ಎನ್ನುವುದು ಇದಕ್ಕೆ ತದ್ವಿರುದ್ಧವಾದ ಸ್ಥಿತಿ; ಶಕ್ತಿಯ ಎಲ್ಲ ಮೂಲಗಳನ್ನೂ ಸಂಯಮದಲ್ಲಿ, ನಿಗ್ರಹದಲ್ಲಿ, ನಿಲ್ಲಿಸಿಕೊಳ್ಳುವ ಸಾಧನಮಾರ್ಗವೇ ಸನ್ಯಾಸ.

ಆದರೆ ಶಕ್ತಿಪ್ರದರ್ಶನವೇ ಇಂದಿನ ದೊಡ್ಡ ಸಿದ್ಧಾಂತವಾಗಿದೆ. ಯಾರು ಮೌನವಾಗಿದ್ದರೋ ಅವರಿಗೆ ಸಹಿಷ್ಣುತೆಯ ಪಾಠವನ್ನು ಬೋಧಿಸುತ್ತೇವೆ; ಅನ್ಯಧರ್ಮಗಳನ್ನು ನಾಶಮಾಡಲು ಹೊರಟವರ ಮುಂದೆ ಕೈಕಟ್ಟಿ ನಿಲ್ಲುತ್ತೇವೆ. ಹೀಗೆ ಮಾಡಲು ವಿವೇಕಾನಂದರ ಮಾತುಗಳನ್ನೇ ನಮಗೆ ಬೇಕಾದಂತೆ ಬಳಸಿಕೊಳ್ಳುತ್ತೇವೆ! 

ಸ್ವಾಮಿ ವಿವೇಕಾನಂದರು ವೇದಗಳನ್ನೇ ಭಾರತೀಯ ಪ್ರಜ್ಞೆಯ ಮೂಲ ಎಂದು ಸಾರಿದರು. ಆದರೆ ವೇದಮಾರ್ಗದಲ್ಲಿರುವ ವೈರುದ್ಧ್ಯಗಳನ್ನೂ ಅವರು ಖಂಡಿಸಿದರು. ಶಂಕರಾಚಾರ್ಯರನ್ನು ಒಪ್ಪಿಕೊಂಡರು; ಜೊತೆಗೆ ವಿಮರ್ಶಿಸಿದರು ಕೂಡ. ಬುದ್ಧ ಮತ್ತು ಶಂಕರ – ಇಬ್ಬರೂ ನಮಗೆ ಬೇಕೆಂದು ತೋರಿಸಿದರು. ಪ್ರಾಚೀನ ಆಧ್ಯಾತ್ಮಿಕತೆಯ ವಾರಸಿಕೆಯಲ್ಲಿಯೇ ಸನ್ಯಾಸವನ್ನು ಸ್ವಿಕರಿಸಿದರು; ಆದರೆ ಸನ್ಯಾಸದ ಪರಿಕಲ್ಪನೆಗೇ ಹೊಸದಾದ ಹೊಳಪನ್ನು ನೀಡಿದರು.

ಹೌದು, ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಹಾಡಿ ಹೊಗಳಿದರು. ಆದರೆ ಅದರಲ್ಲಿರುವ ದೋಷಗಳನ್ನು ಟೀಕಿಸುವುದರಲ್ಲೂ ತಿದ್ದುವುದರಲ್ಲೂ ಅವರು ಕ್ರಿಯಾಶೀಲರಾದರು. ತನ್ನ ಮನೆಯ ಹಿರಿಮೆ–ಗರಿಮೆಗಳನ್ನೂ ದೋಷ–ದೌರ್ಬಲ್ಯಗಳನ್ನೂ ಚೆನ್ನಾಗಿ ತಿಳಿದ ಕರ್ತವ್ಯಶೀಲ ಮಗನೊಬ್ಬ ತನ್ನ ಕುಟುಂಬದ ಹಿತಕ್ಕಾಗಿ ಶ್ರಮಿಸುವಂತೆ ಸ್ವಾಮಿ ವಿವೇಕಾನಂದ ಕೂಡ ಹಗಲಿರುಳು ದುಡಿದರು. ಅವರ ಈ ಸಮತೋಲನದ, ಸಾಮರಸ್ಯದ, ಸಮಚಿತ್ತದ ಸಮಾಜ ಮುಖೀಯ ತತ್ತ್ವಗಳು ಸಾರ್ವಕಾಲಿಕ ಸಂದೇಶಗಳು ಎಂಬುದನ್ನು ನಾವಿಂದು ಅರಿತುಕೊಳ್ಳಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು