ಅಲ್ಪಾಕ್ಷರಮಸಂದಿಗ್ಧಂ ಸಾರವದ್ವಿಶ್ವತೋಮುಖಮ್ ।
ಅಸ್ತೋಭಮನವದ್ಯಂ ಚ ಸೂತ್ರಂ ಸೂತ್ರವಿದೋ ವಿದುಃ ||
ಈ ಶ್ಲೋಕದ ತಾತ್ಪರ್ಯವನ್ನು ಡಿವಿಜಿ ಅವರು ಹೀಗೆ ಒದಗಿಸಿದ್ದಾರೆ:
‘ಯಾವ ವಾಕ್ಯದಲ್ಲಿ ಅದರ ಉದ್ದೇಶಕ್ಕೆ ಅವಶ್ಯವಾದ ಮಾತನ್ನೊಂದನ್ನೂ ಬಿಟ್ಟಿಲ್ಲವೋ, ಮತ್ತು ಅನಶ್ಯಕವಾದ ಮಾತನ್ನೊಂದನ್ನೂ ಸೇರಿಸಿಲ್ಲವೋ ಮತ್ತು ಯಾವುದಕ್ಕೆ ಒಂದು ಹೊಸ ಅಕ್ಷರವನ್ನು ಸೇರಿಸಿದರಾಗಲಿ ಇರುವ ಅಕ್ಷರವನ್ನು ತೆಗೆದುಹಾಕಿದರಾಗಲಿ ಅಥವಾ ಅಕ್ಷರಗಳನ್ನು ಸ್ಥಾನಾಂತರಮಾಡಿದರಾಗಲಿ ಅರ್ಥವು ಉದ್ದೇಶಕ್ಕಿಂತ ಹೆಚ್ಚಿನದೋ ಕಡಮೆಯೋ ಬೇರೆಯದೋ ಆದೀತೋ ಆ ಮಿತಪದಯೋಜನೆಗೆ ಸೂತ್ರ ಎಂದು ಹೆಸರು.’
ನಮ್ಮಲ್ಲಿ ಸೂತ್ರಸಾಹಿತ್ಯ ಎನ್ನುವಂಥದ್ದು ಹೇರಳವಾಗಿದೆ. ಪ್ರಾಚೀನ ಭಾರತೀಯ ವಿದ್ಯಾಪರಂಪರೆಯೇ ಈ ಸೂತ್ರಸಾಹಿತ್ಯದಲ್ಲಿ ಪ್ರಕಟವಾಗಿದೆ ಎನ್ನಬಹುದು. ಪಾಣಿನಿಯ ವ್ಯಾಕರಣಸೂತ್ರಗಳು, ಬಾದರಾಯಣರ ಬ್ರಹ್ಮಸೂತ್ರಗಳು – ಇವು ಎರಡು ಉದಾಹರಣೆಗಳಷ್ಟೆ.
ವಿಷಯವನ್ನು ಸುಲಭವಾಗಿ ಬರಹರೂಪದಲ್ಲಿ ತರುವುದು ಹಿಂದಿನ ಕಾಲದಲ್ಲಿ ಈಗಿನಷ್ಟು ಸುಲಭವಾಗಿರಲಿಲ್ಲ. ಹೀಗಾಗಿ ಮೌಖಿಕವಾಗಿಯೇ ಎಲ್ಲ ಜ್ಞಾನಕೋಶವನ್ನೂ ಹಿಡಿಟ್ಟುಕೊಳ್ಳಬೇಕಿತ್ತು. ಇಂಥ ಅನಿವಾರ್ಯತೆಯೂ ಈ ಸೂತ್ರವಾಙ್ಮಯಕ್ಕೆ ಒಂದು ಕಾರಣವಾಗಿರಬಹುದು. ಆದರೆ ಇದೊಂದೇ ಕಾರಣ ಎನ್ನುವಂತಿಲ್ಲ.
ಇಲ್ಲಿ ನಾವು ಗಮನಿಸಬೇಕಾದ್ದು ಕೆಲವೇ ಮಾತುಗಳಲ್ಲಿ ಈ ಸೂತ್ರಗಳು ಎಷ್ಟೊಂದು ಅರ್ಥವನ್ನು ಅವುಗಳ ಗರ್ಭದಲ್ಲಿರಿಸಿಕೊಂಡಿದೆ ಎನ್ನುವುದನ್ನು.
ನಾವು ಮಾತನ್ನು ಎಷ್ಟು ಕಡಿಮೆ ಉಪಯೋಗಿಸಿಯೂ ವಿಶಾಲಾರ್ಥದಲ್ಲಿ ಬಳಸಬೇಕು ಎಂಬುದಕ್ಕೆ ಸೂತ್ರಸಾಹಿತ್ಯ ನಮಗೆ ಮಾರ್ಗದರ್ಶನ ಮಾಡುತ್ತಿವೆ. ದಿಟ, ಈ ಸೂತ್ರಗಳಲ್ಲಿ ಕೆಲವೊಂದು ಕಡೆ ಸಂದಿಗ್ಧತೆ ಉಂಟಾಗುತ್ತದೆ. ಆದರೆ ಅರ್ಥದ ವ್ಯಾಪಕತೆಯ ದೃಷ್ಟಿಯಿಂದಲೇ ಇದು ಉಂಟಾಗುತ್ತದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.
ಈಗ ಎಲ್ಲೆಲ್ಲೂ ಮಾತಿನ ಪ್ರವಾಹವೇ ಉಂಟಾಗುತ್ತಿದೆ. ಒಂದು ಮಾತನಾಡುವ ಜಾಗದಲ್ಲಿ ನೂರು ಮಾತುಗಳನ್ನು ಆಡಿರುತ್ತೇವೆ. ಆದರೆ ಅಷ್ಟು ಮಾತುಗಳನ್ನು ಆಡಿಯೂ ಉಚಿತವಾದ ಸಂವಹನವನ್ನು ಮಾಡಿರುತ್ತೇವೆ ಎನ್ನುವಂತಿಲ್ಲ. ಸಾರ್ವಜನಿಕ ಜೀವನದಲ್ಲಂತೂ ಮಾತಿನ ಸಂತೆಯೇ ನಡೆಯುತ್ತಿರುತ್ತದೆ. ಆದರೆ ಮಾತು ಕಟ್ಟಿಕೊಡಬೇಕಾಗಿರುವ ಅರ್ಥಪ್ರಪಂಚವನ್ನೇ ನಾವು ಅಲ್ಲಿ ಕಾಣಲಾರೆವು. ಎಲ್ಲ ಸಂನ್ಮೂಲಗಳಂತೆಯೇ ಮಾತನ್ನೂ ಅಪವ್ಯಯ ಮಾಡುತ್ತಿದ್ದೇವೆ.
ಮಾತು ತುಂಬ ಪವಿತ್ರವಾದುದು ಎಂಬ ನಂಬಿಕೆಯೂ ನಮ್ಮಲ್ಲಿ ಇದೆ. ಹೀಗಾಗಿಯೇ ಮಾತಿನ ಮೂಲವನ್ನು ಕೂಡ ನಾವು ದೇವರಲ್ಲಿಯೇ ಕಾಣುತ್ತೇವೆ. ಇಂಥ ಮಾತನ್ನು ನಾವು ವ್ಯರ್ಥವಾಗಿಯೂ ಆಡಬಾರದು; ಅಪ್ರಾಮಾಣಿಕವಾಗಿಯೂ ಆಡಬಾರದು. ಮಾತು ಎಂಬುದೇ ಒಂದು ವಿಧದಲ್ಲಿ ಪೂಜೆ, ಯಜ್ಞ, ಆರಾಧನೆ ಎನ್ನುವುದನ್ನು ನಾವು ಮರೆಯದಿರೋಣ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.