ಶುಕ್ರವಾರ, ನವೆಂಬರ್ 27, 2020
18 °C

ದಿನದ ಸೂಕ್ತಿ: ಪ್ರಾಮಾಣಿಕ ಜೀವನ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ದಾನೇನ ಪಾಣಿರ್ನ ತು ಕಂಕಣೇನ

ಸ್ನಾನೇನ ಶುದ್ಧಿರ್ನ ಚ ಚಂದನೇನ ।

ಮಾನೇನ ತೃಪ್ತಿರ್ನ ತು ಭೋಜನೇನ

ಜ್ಞಾನೇನ ಮುಕ್ತಿರ್ನ ತು ಮಂಡನೇನ ।।

ಇದರ ತಾತ್ಪರ್ಯ ಹೀಗೆ:

’ಕೈಗಳಿಗೆ ಶುದ್ಧಿ ದಾನದಿಂದಲೇ ವಿನಾ ಕಂಕಣದಿಂದಲ್ಲ; ಶರೀರಕ್ಕೆ ಸ್ನಾನದಿಂದ ಶುದ್ಧಿಯೇ ವಿನಾ ಚಂದನಲೇಪದಿಂದ ಅಲ್ಲ; ಮನುಷ್ಯನಿಗೆ ಸನ್ಮಾನದಿಂದ ತೃಪ್ತಿಯೇ ವಿನಾ ಭೋಜನದಿಂದ ಅಲ್ಲ; ಜ್ಞಾನದಿಂದ ಮೋಕ್ಷವೇ ವಿನಾ ವಸ್ತ್ರ–ಭೂಷಣಗಳಿಂದ ಅಲ್ಲ.’

ಜೀವನದಲ್ಲಿ ಕೆಲವೊಂದು ವಿಷಯಗಳನ್ನು ತಪ್ಪಾಗಿ ತಿಳಿದುಕೊಂಡಿರುತ್ತೇವೆ. ಇದರಿಂದ ನಾವು ನಮಗೇ ತೊಂದರೆಗಳನ್ನು ಸೃಷ್ಟಿಸಿಕೊಳ್ಳುತ್ತಿರುತ್ತೇವೆ ; ಮಾತ್ರವಲ್ಲ, ಅದರಿಂದ ನಮ್ಮ ಜೀವನದ ದಿಕ್ಕೇ ಬದಲಾಗಬಹುದು. ಅಂಥ ಕೆಲವೊಂದು ಸಂಗತಿಗಳ ಬಗ್ಗೆ ಸುಭಾಷಿತ ಇಲ್ಲಿ ಹೇಳುತ್ತಿದೆ.

ಯಾವುದಾದರೂ ಧಾರ್ಮಿಕ ಕಲಾಪಗಳ ಆರಂಭದ ಮೊದಲು ಕೈಗಳಿಗೆ ಕಂಕಣವನ್ನು ಕಟ್ಟಿಕೊಳ್ಳುವುದುಂಟು. ಇದರಿಂದ ರಕ್ಷಣೆ ದೊರೆಯುತ್ತದೆ; ಆ ಕಲಾಪ ಮಾಡಲು ಪಾವಿತ್ರ್ಯವೂ ದಕ್ಕುತ್ತದೆ ಎನ್ನುವುದು ಇದರ ಉದ್ದೇಶ. ಆದರೆ ಸುಭಾಷಿತ ಹೇಳುತ್ತಿದೆ: ಕಂಕಣದಿಂದ ಅಲ್ಲ, ದಾನಗುಣದಿಂದ ನಮಗೆ ಪಾವಿತ್ರ್ಯ, ಶುದ್ಧಿಗಳು ಒದಗುತ್ತದೆ ಎಂದು. ದಾನ ಎಂದರೆ ವಿತರಣಶೀಲತೆ; ಸಂಗ್ರಹಬುದ್ಧಿಗೆ ವಿರುದ್ಧವಾದುದು.

ಶರೀರ ಶುದ್ಧವಾಗಬೇಕು ಎಂದರೆ ಚೆನ್ನಾಗಿ ಸ್ನಾನ ಮಾಡಬೇಕು. ಹೀಗಲ್ಲದೆ  ನಾವು ಚಂದನಾದಿಗಳನ್ನು, ಎಂದರೆ ಸುಗಂಧದ್ರವ್ಯಗಳನ್ನು ಪೂಸಿಕೊಂಡರೆ ಅದು ಸ್ನಾನ ಆಗಲಾರದಲ್ಲವೆ? ಕೊಳೆ ನಮ್ಮ ಮೈಮೇಲೆ ಹಾಗೇ ಉಳಿಯುತ್ತದೆ; ನಮ್ಮ ದುರ್ಗಂಧವನ್ನು ಮರೆಮಾಡಿ ಜನರಿಗೆ ಮೋಸ ಮಾಡಬಹುದು; ಆದರೆ ನಮಗಂತೂ ನಮ್ಮ ಕೊಳೆಯ ಭಾರ ತಿಳಿಯುತ್ತಲೇ ಇರುತ್ತದೆಯಲ್ಲವೆ?

ಮನುಷ್ಯನಿಗೆ ಸನ್ಮಾನದಿಂದ ತೃಪ್ತಿ, ಭೋಜನದಿಂದ ಅಲ್ಲ ಎಂದು ಸುಭಾಷಿತ ಹೇಳಿದೆ. ಭೋಜನ ಎಂದರೆ ಶರೀರದ ಭೋಗ; ಯಾವುದೇ ಉದಾತ್ತ ಉದ್ದೇಶಗಳಿಲ್ಲದ ಜೀವನವಿಧಾನ. ಸನ್ಮಾನ ಎಂದರೆ ನಾಲ್ಕು ಜನರು ಒಪ್ಪುವಂಥ ಕೆಲಸ. ನಾಲ್ಕು ಜನರಿಗೆ ಪ್ರಯೋಜನ ಆಗುವಂಥ ಕೆಲಸದಿಂದಲೇ ನಾಲ್ಕು ಜನರು ನಮ್ಮನ್ನು ಗುರುತಿಸುತ್ತಾರಷ್ಟೆ. ಹೀಗಾಗಿ ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು.

ತೋರಿಕೆಯಿಂದ ಮೋಕ್ಷ ಸಿಗುವುದಿಲ್ಲ; ಅರಿವಿನಿಂದಲೇ ಮೋಕ್ಷ ಎನ್ನುವುದು ಸುಭಾಷಿತ ಮುಂದಿನ ಮಾತು. ವಸ್ತ್ರ–ಭೂಷಣಗಳು ಹೊರಗಿನ ಅಲಂಕಾರಗಳು, ತೋರಿಕೆಗಳು; ಆದರೆ ಜ್ಞಾನ ಎನ್ನುವುದು ಅಂತರಂಗದ ಪಾಕ, ನಮ್ಮ ವ್ಯಕ್ತಿತ್ವದ ಭಾಗ.

ಸುಭಾಷಿತ ಒಟ್ಟು ತಾತ್ಪರ್ಯ ಎಂದರೆ ನಮ್ಮ ಜೀವನವನ್ನು ಪ್ರಾಮಾಣಿಕವಾಗಿ ಬದುಕಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.