ಸೋಮವಾರ, ಮೇ 23, 2022
21 °C

ದಿನದ ಸೂಕ್ತಿ: ಅಹಿಂಸೆಯೇ ಧರ್ಮ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ತೀರ್ಥಾನಿ ದೀರ್ಘಾಧ್ವಪರಿಶ್ರಮಾಣಿ

ಬಹುವ್ಯಯಾನಿ ಕ್ರತುಡಂಬರಾಣಿ ।

ತಪಾಂಸಿ ಮುಕ್ತ್ವಾ ತನುಶೋಷಣಾನಿ

ಹಿಂಸಾವಿರಾಮೇ ರಮತಾಂ ಮತಿರ್ವಃ ।।

ಇದರ ತಾತ್ಪರ್ಯ ಹೀಗೆ:

‘ತೀರ್ಥಕ್ಷೇತ್ರಗಳಿಗೆ ದೂರದ ಹಾದಿಯಲ್ಲಿ ನಡೆದು ಆಯಾಸಪಟ್ಟು ಹೋಗಬೇಕಾಗುತ್ತದೆ. ಯಜ್ಞಯಾಗಾದಿಗಳನ್ನು ತುಂಬ ಖರ್ಚುಮಾಡಿ ಮಾಡಬೇಕಾಗುತ್ತದೆ. ತಪಸ್ಸನ್ನು ದೇಹವನ್ನು ದಂಡಿಸಿ ಮಾಡಬೇಕಾಗುತ್ತದೆ. ಇವೆಲ್ಲ ಏಕೆ? ನಿಮ್ಮ ಬುದ್ಧಿಯು ಅಹಿಂಸೆಯಲ್ಲಿ ನೆಲೆಯಾಗಿರಲಿ.’

ನಿಜವಾದ ಪುಣ್ಯದ ಫಲ ಏನು ಎಂಬುದನ್ನು ಸುಭಾಷಿತ ಹೇಳುತ್ತಿದೆ.

ಪುಣ್ಯವನ್ನು ಸಂಪಾದಿಸಲು ನಾವು ಹಲವು ವಿಧದ ಧಾರ್ಮಿಕ, ಆಧ್ಯಾತ್ಮಿಕ ಕಲಾಪಗಳಲ್ಲಿ ತೊಡಗುತ್ತೇವೆ. ಅವುಗಳಲ್ಲಿ ಶ್ರೇಷ್ಠವಾದುದು ಯಾವುದು ಎಂಬುದನ್ನು ಸುಭಾಷಿತ ಹೇಳುತ್ತಿದೆ.

ತೀರ್ಥಕ್ಷೇತ್ರಗಳಿಗೆ ಸಂದರ್ಶಿಸಿ, ಅಲ್ಲಿ ಸೇವೆ ಮಾಡುವುದರಿಂದ ಪುಣ್ಯವನ್ನು ಸಂಪಾದಿಸಬಹುದು ಎಂಬುದು ನಮ್ಮ ಶ್ರದ್ಧೆ. ಆದರೆ ತೀರ್ಥಕ್ಷೇತ್ರಗಳಿಗೆ ಹೋಗುವುದು ಸುಲಭವಾದ ಕೆಲಸವಲ್ಲ; ಅದಕ್ಕಾಗಿ ನಾವು ತುಂಬ ಪ್ರಯಾಸವನ್ನು ಪಡಬೇಕಾಗುತ್ತದೆ. ಹಿಂದಿನ ಕಾಲದಲ್ಲಂತೂ ಪ್ರಯಾಣವೇ ತುಂಬ ಕಷ್ಟದ ಕೆಲಸ. ಇಷ್ಟೆಲ್ಲ ಕಷ್ಟ ಪಡುವುದಾದರೂ ಏಕೆ? ಪುಣ್ಯವನ್ನು ಸಂಪಾದಿಸಲು ತಾನೆ? ಹೀಗಾಗಿ ನಾವು ಪಡುವ ಕಷ್ಟಕ್ಕೆ ಅರ್ಥವಿರುತ್ತದೆ.

ಯಜ್ಞಯಾಗಾದಿಗಳ ಮೂಲಕ ಕೂಡ ಪುಣ್ಯವನ್ನು ಸಂಪಾದಿಸಬಹುದು. ಆದರೆ ಯಜ್ಞಯಾಗಗಳನ್ನು ಮಾಡುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ತುಂಬ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಕಾರಣ, ಅದಕ್ಕೆ ಬೇಕಾಗುವ ಸಲಕರಣೆಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಒಬ್ಬರಿಂದಲೇ ಅವನ್ನು ಮಾಡುವುದಕ್ಕೂ ಆಗುವುದಿಲ್ಲ. ಆದರೆ ಇಷ್ಟೆಲ್ಲ ಖರ್ಚುಮಾಡಿ ಯಜ್ಞವನ್ನು ಮಾಡಿದರೂ ಅದು ವ್ಯರ್ಥವಾಗದು; ಅದರಿಂದ ಪುಣ್ಯಸಂಪಾದನೆ ಸಾಧ್ಯವಾಗುತ್ತದೆ.

ಇನ್ನು ತಪಸ್ಸು; ನಮ್ಮ ದೇಹವನ್ನೇ ಸಾಧನವನ್ನಾಗಿಸಿ ನಡೆಸುವ ತೀವ್ರತರವಾದ ಸಾಧನೆ. ಅನ್ನ–ನಿದ್ರಾದಿಗಳನ್ನೂ ಲೆಕ್ಕಿಸದೆ ದೇಹವನ್ನು ದಂಡಿಸಿ ತಪಸ್ಸನ್ನು ಆಚರಿಸಬೇಕಾಗುತ್ತದೆ. 

ತೀರ್ಥಕ್ಷೇತ್ರಗಳ ಸಂದರ್ಶನ ಎಲ್ಲರಿಗೂ ಸಾಧ್ಯವಿಲ್ಲ; ಇದನ್ನೂ ಮಾಡಬಹುದು, ಆದರೆ ಯಜ್ಞಯಾಗಾದಿಗಳನ್ನು ಮಾಡುವುದು ಇದಕ್ಕಿಂತಲೂ ಕಷ್ಟ. ಯಜ್ಞಗಳನ್ನಾದರೂ ಮಾಡಬಹುದು; ಅದಕ್ಕಿಂತಲೂ ಕಷ್ಟಕರವಾದುದು ತಪಸ್ಸು.

ಸುಬಾಷಿತ ಹೇಳುತ್ತಿದೆ, ಇಷ್ಟೆಲ್ಲ ಕಷ್ಟಗಳನ್ನು ಪಡಬೇಕಾಗಿಲ್ಲ; ಸುಲಭದ ದಾರಿಯೊಂದಿದೆ, ಪುಣ್ಯವನ್ನು ಸಂಪಾದಿಸಲು. ಅದೇ ಅಹಿಂಸೆ. 

ಅಹಿಂಸೆ ಎಂದರೆ ಏನು? ಮಾತಿನಿಂದಾಗಲಿ, ದೇಹದಿಂದಾಗಲಿ, ಕ್ರಿಯೆಯಿಂದಾಗಲಿ ಯಾರಿಗೂ ತೊಂದರೆ ನೀಡದಿರುವುದು, ಹಿಂಸೆಯನ್ನು ನೀಡದಿರುವುದು. ಎಲ್ಲ ಸಾಧನೆಗಳಿಗಿಂತಲೂ ದೊಡ್ಡ ಸಾಧನೆ, ಶ್ರೇಷ್ಠ ಸಾಧನೆ ಎಂದರೆ ಅಹಿಂಸೆಯೇ. ಮಾತ್ರವಲ್ಲ, ಎಲ್ಲ ಸಾಧನೆಗಳಿಗಿಂತಲೂ ಕಷ್ಟಕರವಾದ ಸಾಧನೆಯೆಂದರೂ ಅಹಿಂಸೆಯೇ. ಅಹಿಂಸೆ ಎಂಬುದು ನಮ್ಮ ಬುದ್ಧಿಯಲ್ಲಿ ನೆಲೆಗೊಳ್ಳಬೇಕು ಎಂದು ಸುಭಾಷಿತ ಹೇಳಿರುವುದನ್ನೂ ಗಮನಿಸಬೇಕು. ಎಂದರೆ ಅದು ಸದಾ ನಮ್ಮೊಂದಿಗೆ ಇರಬೇಕು; ಅದರ ಬೆಳಕಿನಲ್ಲಿಯೇ ನಮ್ಮ ಜೀವನಯಾನ ಸಾಗಬೇಕು ಎಂಬುದು ಅದರ ಉದ್ದೇಶ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು