ಸೋಮವಾರ, ಡಿಸೆಂಬರ್ 6, 2021
25 °C

ಆಳ-ಅಗಲ | ಸಂಗ್ರಹಾಗಾರದ ತೈಲ ಬಳಸಿದರೆ ಇಂಧನ ಬೆಲೆ ತಗ್ಗುತ್ತದೆಯೇ?

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರವು ತನ್ನ ತುರ್ತು ಬಳಕೆ ತೈಲ ಸಂಗ್ರಹಾಗಾರಗಳಲ್ಲಿ ಸಂಗ್ರಹಿಸಿ ಇರಿಸಿಕೊಂಡಿರುವ ಕಚ್ಚಾ ತೈಲವನ್ನು ದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರೆ, ದೇಶಿ ಮಾರುಕಟ್ಟೆಯಲ್ಲಿ ‍ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಕೆ ಆಗುತ್ತದೆಯೇ? ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಬೇಕು ಎಂದಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಾವು ವಿಧಿಸುತ್ತಿರುವ ತೆರಿಗೆ, ಸುಂಕವನ್ನು ಕಡಿಮೆ ಮಾಡಬೇಕೇ ಅಥವಾ ಸಂಗ್ರಹಾಗಾರಗಳಲ್ಲಿ ಇರುವ ತೈಲವನ್ನು ಮಾರುಕಟ್ಟೆಗೆ ತರಬೇಕೇ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ 19 ಡಾಲರ್ ಇದ್ದಾಗ ಖರೀದಿಸಿದ್ದ ಕಚ್ಚಾ ತೈಲವನ್ನು ಕೇಂದ್ರ ಸರ್ಕಾರವು ಅಕ್ಟೋಬರ್‌ ತಿಂಗಳಿನಲ್ಲಿ ದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಆಗ ಅದನ್ನು ತೈಲ ಸಂಸ್ಕರಣಾ ಕಂಪನಿಗಳಿಗೆ ಅಂದಿನ ಮಾರುಕಟ್ಟೆ ದರಕ್ಕೆ, ಅಂದರೆ ಬ್ಯಾರೆಲ್‌ಗೆ ಸರಿಸುಮಾರು 80 ಡಾಲರ್‌ನಂತೆ, ಮಾರಾಟದ ಮಾಡಿದ್ದು ವರದಿಯಾಗಿತ್ತು. ಆಗ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದರವು ಗರಿಷ್ಠ ಮಟ್ಟದಲ್ಲಿ ಇತ್ತು. ಕೇಂದ್ರದ ನಡೆಯ ಬಗ್ಗೆ ಒಂದು ವರ್ಗದಿಂದ ಆಕ್ರೋಶ ವ್ಯಕ್ತವಾಗಿತ್ತು. ‘ಕಡಿಮೆ ಬೆಲೆಗೆ ಖರೀದಿಸಿದ್ದ ಕಚ್ಚಾ ತೈಲವನ್ನು ಬಳಸಿ, ದೇಶಿ ಮಾರುಕಟ್ಟೆಯಲ್ಲಿ ‍ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಕೆಗೆ ಯತ್ನಿಸಬಹುದಿತ್ತು’ ಎಂದು ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ವಾದಿಸಿದ್ದರು.

ಆದರೆ, ಇದು ಕಾರ್ಯಸಾಧುವೇ? ದೇಶಿ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ತಗ್ಗಿಸಬೇಕು ಎಂದಾದರೆ ಸುಂಕ ಹಾಗೂ ತೆರಿಗೆ ಕಡಿಮೆ ಮಾಡುವುದೇ ಅತ್ಯಂತ ಸೂಕ್ತವಾದ ಮಾರ್ಗ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. 

ಅಮೆರಿಕದ ಅತ್ಯಂತ ಅಪರೂಪದ ಹಾಗೂ ಅಸಾಧಾರಣ ಮನವಿಗೆ ಸ್ಪಂದಿಸಿರುವ ಭಾರತವು ಈಗ ಮತ್ತೆ ಐವತ್ತು ಲಕ್ಷ ಬ್ಯಾರೆಲ್‌ ಕಚ್ಚಾ ತೈಲವನ್ನು ತನ್ನ ಸಂಗ್ರಹಾಗಾರಗಳಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಇದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಸ್ಥಿರವಾಗಬೇಕು ಎಂಬ ಉದ್ದೇಶವನ್ನು ಹೊಂದಿದೆ. 

‘ನಮ್ಮಲ್ಲಿನ ತೈಲ ಸಂಗ್ರಹಾಗಾರಗಳಲ್ಲಿನ ಕಚ್ಚಾ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ, ದೇಶಿ ಮಾರುಕಟ್ಟೆಯಲ್ಲಿ ತೈಲ ಬೆಲೆ ತಗ್ಗಿಸಲು ದೀರ್ಘಾವಧಿಯಲ್ಲಿ ಆಗದು. ಅಲ್ಪಾವಧಿಯಲ್ಲಿ ಆ ರೀತಿ ಮಾಡಬಹುದಾದರೂ, ಅದು ಸೂಕ್ತ ಕ್ರಮ ಆಗುವುದಿಲ್ಲ. ಸಂಗ್ರಹಾಗಾರಗಳಲ್ಲಿನ ಕಚ್ಚಾ ತೈಲವನ್ನು ಬಳಸಿ ದೇಶಿ ಮಾರುಕಟ್ಟೆಯ ಹತ್ತು ಅಥವಾ ಹದಿನೈದು ದಿನಗಳ ತೈಲ ಅಗತ್ಯವನ್ನು ಪೂರೈಸಬಹುದು. ಅಂದರೆ, ಅಷ್ಟು ದಿನಗಳವರೆಗೆ (10 ಅಥವಾ 15 ದಿನ) ದೇಶಿ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಕಡಿಮೆ ಆಗುವಂತೆ ಮಾಡಬಹುದು.

ಆದರೆ, ನಂತರದಲ್ಲಿ ತೈಲೋತ್ಪನ್ನಗಳ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಗೆ ಅನುಗುಣವಾಗಿ ಮತ್ತೆ ಹೆಚ್ಚು (ಅಥವಾ ಕಡಿಮೆ) ಆಗಲೇಬೇಕು. ತೈಲೋತ್ಪನ್ನಗಳನ್ನು 10–15 ದಿನ ಕಡಿಮೆ ಬೆಲೆಗೆ ಕೊಟ್ಟರೂ, ನಂತರದಲ್ಲಿ ಅವುಗಳ ಬೆಲೆಯನ್ನು ದಿಢೀರ್ ಹೆಚ್ಚಿಸಬೇಕಾಗುತ್ತದೆ. ಹಾಗಾಗಿ, ಸಂಗ್ರಹಾಗಾರಗಳಲ್ಲಿನ ಕಚ್ಚಾ ತೈಲವನ್ನು ನೆಚ್ಚಿಕೊಂಡು ದೇಶಿ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣ ಆಗದ ಕೆಲಸ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಪದಾಧಿಕಾರಿಯೊಬ್ಬರು ‘‍ಪ್ರಜಾವಾಣಿ’ಗೆ ಹೇಳಿದ್ದಾರೆ. 

ತೈಲೋತ್ಪನ್ನಗಳ ಬೆಲೆಯನ್ನು ತಗ್ಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವುದು ಸೂಕ್ತ ಕ್ರಮ ಎಂಬುದು ಬ್ರಿಕ್‌ವರ್ಕ್ ರೇಟಿಂಗ್ಸ್‌ ಸಂಸ್ಥೆಯ ಮುಖ್ಯ ಆರ್ಥಿಕ ಸಲಹೆಗಾರ ಡಾ.ಎಂ. ಗೋವಿಂದ ರಾವ್ ಅವರ ಅಭಿಪ್ರಾಯ. ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು, ರಾಜ್ಯ ಸರ್ಕಾರಗಳು ಮೌಲ್ಯವರ್ಧಿತ ತೆರಿಗೆಯನ್ನು ಈಚೆಗೆ ತಗ್ಗಿಸಿವೆ.

ದೇಶಿ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಇಳಿಕೆ ಆಗಬೇಕು ಎಂದಾದಲ್ಲಿ, ತೆರಿಗೆ ಹಾಗೂ ಸುಂಕವನ್ನು ತಗ್ಗಿಸುವುದೇ ಸರಿಯಾದ ಮಾರ್ಗ ಎಂದು ರೇಟಿಂಗ್ಸ್‌ ಸಂಸ್ಥೆ ಕ್ರಿಸಿಲ್‌ ಕೂಡ ಹೇಳಿದೆ. ‘ಕಚ್ಚಾ ತೈಲ ಬೆಲೆ ಏರಿಕೆಯ ಪರಿಣಾಮವು ಜನಸಾಮಾನ್ಯರ ಮೇಲೆ ಹೆಚ್ಚಿನ ಮಟ್ಟದಲ್ಲಿ ಆಗದಂತೆ ನೋಡಿಕೊಳ್ಳುವ ಮಾರ್ಗವೆಂದರೆ ತೆರಿಗೆ, ಸುಂಕವನ್ನು ತಗ್ಗಿಸುವುದು’ ಎಂದು ಕ್ರಿಸಿಲ್‌ನ ಪ್ರಧಾನ ಅರ್ಥಶಾಸ್ತ್ರಜ್ಞೆ ದೀಪ್ತಿ ದೇಶಪಾಂಡೆ ಅವರು ‘ಪ್ರಜಾವಾಣಿ’ ಜೊತೆ ಈ ಹಿಂದೆ ಅಭಿಪ್ರಾಯ ಹಂಚಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು