ಗುರುವಾರ , ಮೇ 6, 2021
25 °C

ಆಳ-ಅಗಲ| ನೆಲದೊಡಲು ಬಗೆವವರಿಗೆ ‘ನೆರವು’

ವಿ.ಎಸ್‌. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಟ್ಟಡ ಕಲ್ಲು, ಜಲ್ಲಿ ಮತ್ತು ಎಂ. ಸ್ಯಾಂಡ್‌ ಬೇಡಿಕೆ ಹೆಚ್ಚುತ್ತಿದ್ದಂತೆ ‘ಅಕ್ರಮ ಕಲ್ಲು ಗಣಿಗಾರಿಕೆ ಮಾಫಿಯಾ’ ರಾಜ್ಯದ ಉದ್ದಗಲಕ್ಕೆ ತನ್ನ ಕಬಂಧಬಾಹುಗಳನ್ನು ಚಾಚಿಕೊಂಡಿದೆ.  ರಾಜ್ಯದ ರಾಜಕೀಯವನ್ನೇ ತನ್ನ ಇಚ್ಛೆಗೆ ತಕ್ಕಂತೆ ಕುಣಿಸಬಲ್ಲಷ್ಟು ಪ್ರಬಲವಾಗುತ್ತಿರುವ ಈ ಮಾಫಿಯಾ, ‘ರಾಜಕೀಯ ಪ್ರಭಾವ’ದ ನೆರಳಿನಲ್ಲೇ ಕರ್ನಾಟಕದ ಒಡಲನ್ನು ಬಗೆದು ಬರಿದುಗೊಳಿಸುತ್ತಿದೆ.

ಕಟ್ಟಡ ಕಲ್ಲು, ಗ್ರಾನೈಟ್‌, ಕೆಂಪು ಕಲ್ಲಿನ ಗಣಿಗಾರಿಕೆಯ ವ್ಯೂಹ ಬಹುತೇಕ ಇಡೀ ರಾಜ್ಯವನ್ನೇ ವ್ಯಾಪಿಸಿಕೊಂಡಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿರುವ ಕಲ್ಲು ಗಣಿ ಗುತ್ತಿಗೆಗಳಿಗೂ ವಾಸ್ತವಿಕವಾಗಿ ನಡೆಯುತ್ತಿರುವ ಗಣಿಗಾರಿಕೆಗೂ ತಾಳಮೇಳವೇ ಇಲ್ಲ ದಂತಹ ಪರಿಸ್ಥಿತಿ ಇದೆ. 2015–16 ರಿಂದ 2019–20ರ ನಡುವಿನ ಐದು ವರ್ಷಗಳ ಅವಧಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ, ಸಾಗಣೆ ಮತ್ತು ದಾಸ್ತಾನು ಆರೋಪದ ಮೇಲೆ 9,476 ಪ್ರಕರಣ ಗಳು ದಾಖಲಾಗಿರುವುದು ಇದಕ್ಕೆ ಸಾಕ್ಷಿ.

ವರ್ಷಕ್ಕೆ ಹತ್ತಾರು ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಮಾಫಿಯಾಕ್ಕೆ ಗ್ರಾಮ ಪಂಚಾಯಿತಿ ಸದಸ್ಯರಿಂದ ಆರಂಭವಾಗಿ ಶಾಸಕರು, ಸಚಿವರು, ಸಂಸದರು, ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳವರೆಗೆ ಎಲ್ಲ ಹಂತದ ರಾಜಕಾರಣಿಗಳೂ ನೆರಳಾಗಿದ್ದಾರೆ. ಮಾಜಿ ಪ್ರಧಾನಿಯನ್ನೂ ಈ ಜಾಲ ತಮ್ಮ ಕೃತ್ಯಕ್ಕೆ ನೆರಳಾಗಿ ಬಳಸಿಕೊಂಡ ಉದಾಹರಣೆ ಇದೆ ಎಂಬುದು ‘ಕಲ್ಲು ಗಣಿ ಮಾಫಿಯಾ’ದ ಹಿಂದಿರುವ ರಾಜಕೀಯ ಹಿತಾಸಕ್ತಿಗಳಿಗೆ ಭರಪೂರ ಸಾಕ್ಷ್ಯ ಒದಗಿಸುತ್ತದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ 2,353.06 ಎಕರೆ ವಿಸ್ತೀರ್ಣದ 517 ಗ್ರಾನೈಟ್‌ ಮತ್ತು ಆಲಂಕಾರಿಕ ಶಿಲೆಗಳ ಗಣಿ ಗುತ್ತಿಗೆಗಳನ್ನು ನೀಡಲಾಗಿದೆ. ಕಟ್ಟಡ ಕಲ್ಲು, ಕೆಂಪು ಕಲ್ಲು ಗಣಿಗಾರಿಕೆಗೆ 2,493 ಗುತ್ತಿಗೆಗಳನ್ನು ನೀಡಲಾಗಿದೆ. 10,567 ಎಕರೆ 31 ಗುಂಟೆ ವಿಸ್ತೀರ್ಣದಲ್ಲಿ ಈ ಕಲ್ಲು ಗಣಿ ಗಳು ವ್ಯಾ‍ಪಿಸಿಕೊಂಡಿವೆ. ಆದರೆ, ವಾಸ್ತವದಲ್ಲಿ ಹಲವು ಪಟ್ಟು ಹೆಚ್ಚಿನ ವಿಸ್ತೀರ್ಣದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂಬುದನ್ನು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

ನಿಕಟ ನಂಟು: ರಾಜಕೀಯಕ್ಕೂ ಕಲ್ಲು ಗಣಿಗಾರಿಕೆಗೂ ರಾಜ್ಯದಲ್ಲಿ ನಿಕಟ ನಂಟು ಇದೆ. ಹೆಚ್ಚಿನ ಜಿಲ್ಲೆಗಳಲ್ಲಿ ಶಾಸಕರು, ಸಚಿವರು, ಸಂಸದರು ಸೇರಿದಂತೆ ಪ್ರಭಾವಿ ರಾಜಕಾರಣಿಗಳು ಬೇನಾಮಿ ಹೆಸರಿನಲ್ಲಿ ಬೆಂಬಲಿಗರ ಮೂಲಕ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಶಾಸಕರು, ಸಚಿವರು, ಸಂಸದರು ನೇರವಾಗಿ ಅಥವಾ ಕುಟುಂಬದ ಸದಸ್ಯರ ಹೆಸರಿನಲ್ಲಿ ಗಣಿಗಾರಿಕೆಯಲ್ಲಿ ನಿರತರಾಗಿದ್ದಾರೆ.

ವ್ಯಾಪಕವಾದ ಕಲ್ಲು ಗಣಿಗಾರಿಕೆ ನಡೆಸಿರುವ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ‘ಕನಕಪುರದ ಬಂಡೆ’ ಎಂಬ ಅಡ್ಡ ಹೆಸರು ಅಂಟಿಕೊಂಡಿರುವುದು ಕಲ್ಲು ಗಣಿ ಜತೆಗಿನ ರಾಜಕೀಯ ನಂಟಿಗೆ ಪ್ರಮುಖ ಉದಾಹರಣೆ. ಸಂಸದರೂ ಆಗಿರುವ ಅವರ ಸಹೋದರ ಡಿ.ಕೆ. ಸುರೇಶ್‌ ವಿರುದ್ಧವೂ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ ಆರೋಪಗಳಿವೆ. ಮಾಲೂರು ಶಾಸಕ ಕೆ.ವೈ. ನಂಜೇಗೌಡ ವಿರುದ್ಧವೂ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಭಾಗಿಯಾದ ಆರೋಪವಿದೆ.

ಮೇಲುಕೋಟೆ ಶಾಸಕ ಸಿ.ಎಸ್‌. ಪುಟ್ಟರಾಜು, ಚಾಮರಾಜನಗರದಲ್ಲಿ ಶಾಸಕ ಸಿ. ಪುಟ್ಟರಂಗ ಶೆಟ್ಟಿ ಅವರ ಮಗ, ಮಾಜಿ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್ ಅವರ ಕುಟುಂಬದ ಸದಸ್ಯರು, ಅರಸೀಕೆರೆಯಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ, ರಾಯಚೂರು ಜಿಲ್ಲೆಯಲ್ಲಿ ಶಾಸಕರಾದ ಡಿ.ಎಸ್‌. ಹೂಲಗೇರಿ, ದೊಡ್ಡನಗೌಡ ಪಾಟೀಲ, ಸತೀಶ ಜಾರಕಿಹೊಳಿ, ಶಾಸಕ ಅಮರೇಗೌಡ ಬಯ್ಯಾಪುರ ಅವರ ಅಣ್ಣನ ಮಗ ಶರಣಗೌಡ ಪಾಟೀಲ, ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರ ಮಗ ಅಮರೇಶ ಕರಡಿ, ಶಾಸಕರಾದ ಹಾಲಪ್ಪ ಆಚಾರ್, ರಾಘವೇಂದ್ರ ಹಿಟ್ನಾಳ್, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸೇರಿದಂತೆ ಹಲವು ರಾಜಕಾರಣಿಗಳು ಕಲ್ಲು ಗಣಿ ಗುತ್ತಿಗೆ ಹೊಂದಿದ್ದಾರೆ.

ತುಮಕೂರು, ಶಿವಮೊಗ್ಗ, ಬಳ್ಳಾರಿ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಪ್ರಭಾವಿ ರಾಜಕಾರಣಿಗಳು ತೆರೆಮರೆಯಲ್ಲಿ ನಿಯಂತ್ರಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂಬುದನ್ನು ಗಣಿ ಇಲಾಖೆಯ ವರದಿಗಳೇ ದೃಢಪಡಿಸುತ್ತಿವೆ.

ಕ್ರಷರ್‌ ಮಾಲೀಕರ ಹಿಡಿತ: ರಾಜ್ಯದಲ್ಲಿ 120ಕ್ಕೂ ಹೆಚ್ಚು ಕ್ರಷರ್‌ಗಳಿವೆ. 100ಕ್ಕೂ ಹೆಚ್ಚು ಎಂ– ಸ್ಯಾಂಡ್‌ ಉತ್ಪಾದನಾ ಘಟಕಗಳಿವೆ. ಕೆಲವು ಕಡೆ ರಾಜಕಾರಣಿಗಳು ನೇರವಾಗಿ ಈ ಘಟಕಗಳನ್ನು ನಡೆಸುತ್ತಿದ್ದರೆ, ಹೆಚ್ಚಿನ ಕಡೆ ಬೇನಾಮಿ ಹೆಸರಿನಲ್ಲಿವೆ. ಕ್ರಷರ್‌ ಮತ್ತು ಎಂ– ಸ್ಯಾಂಡ್‌ ಘಟಕಗಳ ಬೇಡಿಕೆ ಪೂರೈಸುವುದಕ್ಕಾಗಿಯೇ ಅರಣ್ಯ, ಸಂರಕ್ಷಿತ ಪ್ರದೇಶ, ಜನವಸತಿ, ಜಲಾಶಯ ಯಾವುದನ್ನೂ ಲೆಕ್ಕಿಸದೆ ಕಲ್ಲು ಬಂಡೆಗಳನ್ನು ಛಿದ್ರಗೊಳಿಸಲಾಗುತ್ತಿದೆ ಎಂಬ ಆರೋಪವಿದೆ.

‘ಕ್ರಷರ್‌ ಮತ್ತು ಎಂ– ಸ್ಯಾಂಡ್‌ ಘಟಕಗಳಿಗೆ ಪರವಾನಗಿ ನೀಡುವಾಗ ಗುತ್ತಿಗೆ ನೀಡಿರುವ ಕಲ್ಲು ಗಣಿಗಳಲ್ಲಿನ ಕಲ್ಲಿನ ಲಭ್ಯತೆಯನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಈ ಘಟಕಗಳನ್ನು ಆರಂಭಿಸಿರುವವರು ರಾಜಕೀಯವೂ ಸೇರಿದಂತೆ ಎಲ್ಲ ರೀತಿಯ ಬಲವನ್ನೂ ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ’ ಎನ್ನುತ್ತಾರೆ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಡಾ.ಯು.ವಿ. ಸಿಂಗ್‌.

ಧರಣಿಗೆ ಮುಂದಾಗಿದ್ದ ದೇವೇಗೌಡರು

ಜೆಡಿಎಸ್‌ ಮುಖಂಡ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಟಿ. ಮಂಜು ಮೇಲುಕೋಟೆ ವನ್ಯಜೀವಿ ವಲಯದಲ್ಲಿ ನಡೆಸುತ್ತಿರುವ ಕ್ರಷರ್‌ ಸ್ಥಗಿತಕ್ಕೆ ಕಳೆದ ವರ್ಷ ಮಂಡ್ಯ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಈಗ ಸಚಿವರಾಗಿರುವ ಕೆ.ಸಿ. ನಾರಾಯಣಗೌಡ ಇದಕ್ಕೆ ಕಾರಣ ಎಂದು ಆರೋಪಿಸಿದ್ದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಂಜು ಬೆಂಬಲಿಸಿ ಮುಖ್ಯಮಂತ್ರಿ ಮನೆ ಎದುರು ಧರಣಿ ನಡೆಸುವುದಾಗಿಯೂ ಪತ್ರ ಬರೆದಿದ್ದರು.

ಧರಣಿಗೆ ಮುಂದಾಗಿದ್ದ ದೇವೇಗೌಡರು

ಜೆಡಿಎಸ್‌ ಮುಖಂಡ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಟಿ. ಮಂಜು ಮೇಲುಕೋಟೆ ವನ್ಯಜೀವಿ ವಲಯದಲ್ಲಿ ನಡೆಸುತ್ತಿರುವ ಕ್ರಷರ್‌ ಸ್ಥಗಿತಕ್ಕೆ ಕಳೆದ ವರ್ಷ ಮಂಡ್ಯ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಈಗ ಸಚಿವರಾಗಿರುವ ಕೆ.ಸಿ. ನಾರಾಯಣಗೌಡ ಇದಕ್ಕೆ ಕಾರಣ ಎಂದು ಆರೋಪಿಸಿದ್ದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಂಜು ಬೆಂಬಲಿಸಿ ಮುಖ್ಯಮಂತ್ರಿ ಮನೆ ಎದುರು ಧರಣಿ ನಡೆಸುವುದಾಗಿಯೂ ಪತ್ರ ಬರೆದಿದ್ದರು.

ಇವುಗಳನ್ನೂ ಓದಿ

ಕಲ್ಲುಗಣಿಗಾರಿಕೆಯಿಂದ ಸರ್ಕಾರಕ್ಕೆ ಸಿಗಬೇಕಿದ್ದ ರಾಜಧನವನ್ನೇ ಮನ್ನಾ ಮಾಡಿದರು!

ಚಾಮರಾಜನಗರ: ಕರಿ ಕಲ್ಲಿನ ಗಡಿ ಜಿಲ್ಲೆಯಲ್ಲಿ ಬೇನಾಮಿ ಗಣಿಗಳು

ಕರಾವಳಿಯಲ್ಲೂ ಕಲ್ಲು ಗಣಿಗಾರಿಕೆ ಸದ್ದು

ಕಲ್ಲುಗಣಿಗಾರಿಕೆ| ರಾಮನಗರದಲ್ಲಿ ಪ್ರಭಾವಿಗಳದ್ದೇ ಕಾರುಬಾರು

ಆಳ ಅಗಲ| ಬಂಡೆ ಸೀಳುವ ಬಡವರ ಬದುಕೇ ಬರಡು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು