ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಪೆಗಾಸಸ್‌ ಕುತಂತ್ರಾಂಶ ಇಸ್ರೇಲ್‌ನ ರಾಜತಾಂತ್ರಿಕ ಅಸ್ತ್ರ

Last Updated 30 ಜನವರಿ 2022, 19:31 IST
ಅಕ್ಷರ ಗಾತ್ರ

ಇಸ್ರೇಲ್‌ನ ಪೆಗಾಸಸ್ ಕುತಂತ್ರಾಂಶವು ವಿಶ್ವದ ಅತ್ಯಂತ ಪ್ರಬಲ ಸ್ಪೈವೇರ್ (ಬೇಹುಗಾರಿಕೆ ತಂತ್ರಾಂಶ) ಎಂದು ಪರಿಗಣಿಸಲ್ಪಟ್ಟಿದೆ. ಐಫೋನ್ ಮತ್ತು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಎನ್‌ಕ್ರಿಪ್ಟ್ ಮಾಡಲಾದ ಸಂವಹನಗಳನ್ನು ಅತ್ಯಂತ ಸಮರ್ಥವಾಗಿ ಭೇದಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.ಇಸ್ರೇಲ್ ಕಂಪನಿ ಎನ್‌ಎಸ್‌ಒ ಗ್ರೂಪ್ ಇದನ್ನು ಅಭಿವೃದ್ಧಿಪಡಿಸಿದೆ. ಭಯೋತ್ಪಾದಕರು ಮತ್ತು ಮಾದಕವಸ್ತು ಜಾಲದವರನ್ನು ಪತ್ತೆಹಚ್ಚಲುಪೆಗಾಸಸ್ಸಾಫ್ಟ್‌ವೇರ್ ಅನ್ನು ಅಭಿವೃದ್ಧಿ ಮಾಡಲಾಗಿತ್ತು. ನಂತರ ಮಾನವ ಹಕ್ಕುಗಳ ಕಾರ್ಯಕರ್ತರು, ಪತ್ರಕರ್ತರು ಮತ್ತು ಭಿನ್ನಮತೀಯರ ವಿರುದ್ಧ ಬೇಹುಗಾರಿಕೆಗೆ ಇದನ್ನು ಬಳಸಲಾಯಿತು. ಇದೀಗ ಇಸ್ರೇಲ್ ದೇಶವು ತನ್ನ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸುವ ನಿಟ್ಟಿನಲ್ಲಿ ಈ ಕುತಂತ್ರಾಂಶವನ್ನು ಮುಖ್ಯವಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಜಾಗತಿಕವಾಗಿ ತನ್ನ ರಾಜತಾಂತ್ರಿಕ ಕೆಲಸಗಳನ್ನು ಸುಲಭ ಮಾಡಿಕೊಳ್ಳಲು ಇಸ್ರೇಲ್ ಇದನ್ನು ಬಳಸುತ್ತಿದೆ.

ಮೊಬೈಲ್ ಸಾಧನಗಳಿಂದ ಮಹತ್ವದ ದತ್ತಾಂಶಗಳನ್ನು ಹೊರತೆಗೆಯುವ ಮತ್ತು ಮೇಲ್ವಿಚಾರಣೆ ಮಾಡುವ ಮೂಲಕ ಇದು ಬೇಹುಗಾರಿಕೆಗೆ ನೆರವಾಗುತ್ತದೆ. ಇದೊಂದು ಸ್ವತಂತ್ರ ಕಾರ್ಯಾಚರಣೆಯಾಗಿದ್ದು, ಗೂಗಲ್ ಅಥವಾ ಆ್ಯಪಲ್‌ನಿಂದ ಪೂರ್ವಾನುಮತಿ ಅನಗತ್ಯ. ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಏಜೆನ್ಸಿಗೆ ಸಮಾನವಾದ ‘ಯುನಿಟ್ 8200’ ಘಟಕದ ತಂತ್ರಜ್ಞರು ಸೇರಿಕೊಂಡು ಖಾಸಗಿ ವಲಯದಲ್ಲಿ ರಹಸ್ಯ ನವೋದ್ಯಮ ಶುರು ಮಾಡಿದರು.

ತನಿಖಾ ಸಂಸ್ಥೆಗಳು ಮಾತ್ರ ಕೋಡಿಂಗ್ ರೂಪದ ಸಂವಹನಗಳನ್ನು ನಿರ್ವಹಿಸುತ್ತಿದ್ದವು. ಆದರೆ ಎನ್‌ಕ್ರಿಪ್ಶನ್ ವ್ಯಾಪಕವಾಗಿ ಲಭ್ಯವಾದ ಬಳಿಕ ಕೋಡಿಂಗ್ ಸಂವಹನವನ್ನು ಪ್ರತಿಬಂಧಿಸಬಹುದಾಗಿತ್ತೇ ವಿನಾ, ಅದು ಏನು ಹೇಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅದು ಸಾಧ್ಯವಾಗಬೇಕಾದರೆ, ಎನ್‌ಕ್ರಿಪ್ಟ್ ಮಾಡುವ ಮೊದಲು ದತ್ತಾಂಶವನ್ನು ಸಂಗ್ರಹಿಸಬೇಕಿತ್ತು. ಈ ಅವಕಾಶವನ್ನು ಬಳಸಿಕೊಂಡು ಹುಟ್ಟಿದ್ದೇ ಎನ್‌ಎಸ್‌ಒ.

ಶಾಲೆವ್ ಹುಲಿಯೊ ಹಾಗೂ ಆತನ ಸ್ನೇಹಿತ ಒಮ್ರಿ ಲವೀ ಪಾಲುದಾರಿಕೆಯಲ್ಲಿ ಕೋಡಿಂಗ್ ನವೋದ್ಯಮ ತೆರೆದರು.ಇಸ್ರೇಲ್ ಸೇನೆ ಹಾಗೂ ಗುಪ್ತಚರ ಸಂಸ್ಥೆಯಾದ ಮೊಸ್ಸಾದ್‌ನಲ್ಲಿ ಕೆಲಸ ಮಾಡುತ್ತಿದ್ದ ನಿವ್ ಕರ್ಮಿಗುತ್ತಿಗೆ ತಂದುಕೊಡುವ ಕೆಲಸವನ್ನು ಮಾಡಿದರು. ಈ ಮೂವರ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ ‘ಎನ್‌ಎಸ್‌ಒ’ (ನಿವ್, ಶಾಲೆವ್, ಒಮ್ರಿ) ಕಂಪನಿ ಹುಟ್ಟಿತು. 2011ರಲ್ಲಿ ಪೆಗಾಸಸ್‌ನ ಮೊದಲ ಕೋಡಿಂಗ್ ಯಶಸ್ವಿಯಾಯಿತು.

ಕಂಪನಿಯ ವಿವಿಧ ದೇಶಗಳ ಶಾಖೆಗಳಲ್ಲಿ ಈಗ 700 ಜನ ಕೆಲಸ ಮಾಡುತ್ತಿದ್ದಾರೆ. ಹರ್ಜಿಲಿಯಾದಲ್ಲಿ ಕೇಂದ್ರ ಕಚೇರಿಯಿದೆ. ಇಸ್ರೇಲ್‌ನ ಸೇನಾ ಗುಪ್ತಚರ ನಿರ್ದೇಶನಾಲಯ ‘ಎಎಂಎಎನ್‌’ 8200 ಹೆಸರಿನ ಘಟಕದಲ್ಲಿ ಕೆಲಸ ಮಾಡಿದ ಬಹುತೇಕ ಹಿರಿಯರೇ ಈ ಸಂಸ್ಥೆಯ ತಂತ್ರಜ್ಞರಾಗಿದ್ದಾರೆ. ಇವರಿಗೆ ಸೈಬರ್‌ವೆಪನ್ಸ್ ಪ್ರೋಗ್ರಾಮಿಂಗ್‌ನ ಅತ್ಯಾಧುನಿಕ ವಿಧಾನಗಳಲ್ಲಿ ತರಬೇತಿ ನೀಡಲಾಗುತ್ತದೆ. ಫೋನ್ ಸಾಫ್ಟ್‌ವೇರ್‌ನಲ್ಲಿನ ದೋಷಗಳನ್ನು ಪತ್ತಹಚ್ಚಿ, ಅದರಲ್ಲಿ ಪೆಗಾಸಸ್ ಅಳವಡಿಸುವ ವಿಧಾನವನ್ನು ಅವರು ನಿರಂತರವಾಗಿ ಶೋಧಿಸುತ್ತಾರೆ.

ಆರಂಭದಲ್ಲಿ ಪೆಗಾಸಸ್ ಖರೀದಿಗೆ ಹಲವು ದೇಶಗಳು ಹಿಂದೆ ಮುಂದೆ ನೋಡಿದವು. ಹುಲಿಯೊ ಅವರು ಸರ್ಕಾರಗಳ ಈ ಆತಂಕವನ್ನು ದೂರ ಮಾಡಿದರು. ಸರ್ಕಾರಗಳಿಗೆ ಮಾತ್ರವಲ್ಲದೇ, ಕಂಪನಿಗಳು ಹಾಗೂ ವ್ಯಕ್ತಿಗಳಿಗೆ ಅದನ್ನು ಮಾರುವುದಿಲ್ಲ ಎಂಬುದನ್ನು ಅವರು ಮನವರಿಕೆ ಮಾಡಿಕೊಟ್ಟರು.

------

ಅಮೆರಿಕದ ಫ್ಯಾಂಟಮ್

‌ದೇಶದ ಜನರ ದೂರವಾಣಿಗಳನ್ನು ಕದ್ದಾಲಿಸುವ ಉದ್ದೇಶದಿಂದ ಅಮೆರಿಕದ ತನಿಖಾ ಸಂಸ್ಥೆಯಾದ ಎಫ್‌ಬಿಐ ಸಾಧಕ ಬಾಧಕಗಳನ್ನು ಪರಿಶೀಲಿಸಿ, 2019ರಲ್ಲಿ ಕುತಂತ್ರಾಂಶವನ್ನು ಖರೀದಿಸಿತು. ಆದರೆ, ಅದನ್ನು ಸ್ಥಳೀಯವಾಗಿ ಬಳಸಿಕೊಳ್ಳಲು ನಿರ್ಧರಿಸಿತು. ಅಮೆರಿಕಕ್ಕಾಗಿ ಫ್ಯಾಂಟಮ್ಹೆಸರಿನ ಪ್ರತ್ಯೇಕ ಕುತಂತ್ರಾಂಶವನ್ನು ಸೈಬರ್ ಕಂಪನಿ ರೂಪಿಸಿಕೊಟ್ಟಿತು. ಅಮೆರಿಕದ ಯಾವುದೇ ದೂರವಾಣಿಯನ್ನು ಗುರಿಯಾಗಿಸಲು ಎಫ್‌ಬಿಐ ನಿರ್ಧರಿಸಿದರೆ, ಅದನ್ನು ಕ್ಷಣಾರ್ಥದಲ್ಲಿ ಫ್ಯಾಂಟಮ್ ಸಾಧ್ಯವಾಗಿಸಲಿದೆ. ಬೇಹುಗಾರಿಕೆಗೆ ಒಳಪಡುವ ವ್ಯಕ್ತಿಯ ಸ್ಮಾರ್ಟ್‌ಫೋನ್, ಗೂಢಚರ್ಯೆ ನಡೆಸುವ ಅಧಿಕಾರಿಗಳಿಗೆ ಮಾಹಿತಿಯ ಚಿನ್ನದ ಗಣಿಯಾಗಿ ಮಾರ್ಪಾಡಾಗುತ್ತದೆ.

-------

ಸರ್ಕಾರ–ಎನ್‌ಎಸ್‌ಒ ಜುಗಲ್‌ಬಂದಿ

ಇಸ್ರೇಲ್‌ನ ವಿದೇಶಾಂಗ ನೀತಿಯಲ್ಲಿ ಎನ್‌ಎಸ್‌ಒ ಗ್ರೂಪ್‌ ಮತ್ತು ಅದು ಅಭಿವೃದ್ಧಿಪಡಿಸಿರುವ ಪೆಗಾಸಸ್‌ ಕುತಂತ್ರಾಂಶಕ್ಕೆ ಮಹತ್ವದ ಪಾತ್ರ ಇದೆ ಎಂಬುದಕ್ಕೆ ಹಲವು ಪುರಾವೆಗಳು ಸಿಗುತ್ತವೆ. ಇಸ್ರೇಲ್‌ ಸರ್ಕಾರ ಮತ್ತು ಎನ್‌ಎಸ್ಒ ಮಧ್ಯೆ ಯಾವ ರೀತಿಯ ಸಂಬಂಧ ಇರಬೇಕು ಎಂಬುದನ್ನು ಬಹಳ ಮೊದಲೇ ಅತ್ಯಂತ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿತ್ತು. ಪೆಗಾಸಸ್‌ ಒಂದು ಅಸ್ತ್ರವಾಗಿ ಅಲ್ಲದಿದ್ದರೂ ಇಸ್ರೇಲ್‌ ವಿದೇಶಾಂಗ ನೀತಿಯ ಆಪ್ತಮಿತ್ರನ ರೀತಿಯಲ್ಲಿ ಇರಬೇಕು ಎಂದು ಮೊದಲೇ ನಿರ್ಧರಿಸಲಾಗಿತ್ತು ಎಂಬುದನ್ನು ‘ದ ನ್ಯೂಯಾರ್ಕ್‌ ಟೈಮ್ಸ್‌’ನ (ಎನ್‌ವೈಟಿ) ತನಿಖಾ ವರದಿ ಸ್ಪಷ್ಟವಾಗಿ ಹೇಳುತ್ತದೆ.

ಹಾಲೊಕಾಸ್ಟ್‌ನಲ್ಲಿ ಬದುಕುಳಿದ, ಇಸ್ರೇಲ್‌ನ ಅತ್ಯಂತ ಗೌರವಾನ್ವಿತ ಸೇನಾ ಅಧಿಕಾರಿ ಮೇ. ಜ. ಅವಿಗ್ಡರ್‌ ಬೆನ್‌ ಗಾಲ್‌ ಅವರನ್ನು ಎನ್‌ಎಸ್ಒ ಗ್ರೂಪ್‌ನ ಅಧ್ಯಕ್ಷನನ್ನಾಗಿ ಮಾಡುವುದರ ಹಿಂದೆಯೂ ಹಲವು ಲೆಕ್ಕಾಚಾರಗಳು ಇದ್ದವು. ಸರ್ಕಾರದ ಜತೆಗೆ ನಿಕಟವಾಗಿ ಕೆಲಸ ಮಾಡುವುದು ಎನ್ಎಸ್‌ಒ ಪ್ರಗತಿಗೆ ನಿರ್ಣಾಯಕ ಎಂಬುದು ಬೆನ್‌ ಗಾಲ್‌ ಅವರ ನಿಲುವು ಕೂಡ ಆಗಿತ್ತು. ಸರ್ಕಾರದ ಜತೆಗೆ ನಿಕಟವಾಗಿ ಕೆಲಸ ಮಾಡುವುದರಿಂದ ಪೆಗಾಸಸ್‌ ಕುತಂತ್ರಾಂಶವನ್ನು ಯಾವ ದೇಶಕ್ಕೆ ಮಾರಾಟ ಮಾಡಬಹುದು ಎಂಬುದರ ಮೇಲೆ ಹಲವು ನಿರ್ಬಂಧಗಳು ಉಂಟಾಗಬಹುದು. ಆದರೆ, ಬೇಹುಗಾರಿಕೆಗೆ ಸಂಬಂಧಿಸಿ ಜನರು ಕಂಪನಿಯ ಮೇಲೆ ಮೊಕದ್ದಮೆ ಹೂಡುವುದರಿಂದ ರಕ್ಷಣೆ ದೊರೆಯಬಹುದು ಎಂದು ಬೆನ್‌ ಗಾಲ್‌ ಭಾವಿಸಿದ್ದರು.

ಸರ್ಕಾರದ ಜತೆಗಿನ ಸಂಬಂಧದ ಫಲವಾಗಿ ಕೆಲವು ನಿರ್ಬಂಧಗಳನ್ನು ಎನ್‌ಎಸ್‌ಒ ಹಾಕಿಕೊಂಡಿದೆ. ವ್ಯಕ್ತಿಗಳು ಅಥವಾ ಕಂಪನಿಗಳಿಗೆ ಕುತಂತ್ರಾಂಶ ಮಾರಾಟ ಇಲ್ಲ; ಸರ್ಕಾರಗಳಿಗೆ ಮಾತ್ರ ಇವು ಲಭ್ಯ ಎಂಬುದು ಅಂತ ನಿರ್ಬಂಧಗಳಲ್ಲಿ ಒಂದು. ಯಾವುದೇ ಸರ್ಕಾರದ ಪರವಾಗಿ ಎನ್‌ಎಸ್‌ಒ ಕಂಪನಿಯು ಕುತಂತ್ರಾಂಶವನ್ನು ಬಳಸುವುದಿಲ್ಲ. ಇಸ್ರೇಲ್‌ನ ರಕ್ಷಣಾ ರಫ್ತು ನಿಯಂತ್ರಣ ಸಂಸ್ಥೆಯು (ಡಿಇಸಿಎ) ಹೇಳಿದಂತೆ ಎನ್ಎಸ್‌ಒ ಕೇಳುತ್ತದೆ. ಪ್ರತಿಯೊಂದು ಮಾರಾಟಕ್ಕೂ ಡಿಇಸಿಎ ಪರವಾನಗಿಯನ್ನು ಕಂಪನಿ ಪಡೆದುಕೊಳ್ಳುತ್ತದೆ. ಹೀಗಾಗಿ, ಎನ್‌ಎಸ್‌ಒ, ಇಸ್ರೇಲ್‌ ಸರ್ಕಾರದ ಒಂದು ಅಂಗದ ರೀತಿಯಲ್ಲಿಯೇ ಕೆಲಸ ಮಾಡುತ್ತದೆ.

ಇಸ್ರೇಲ್‌ ಪ್ರಧಾನಿಯಾಗಿದ್ದ ಬೆಂಜಮಿನ್‌ ನೆತಾನ್ಯಾಹು ಅವರ ಸೇನಾ ಸಲಹೆಗಾರರೊಬ್ಬರು ಪೆಗಾಸಸ್‌ನ ಪ್ರಯೋಜನವನ್ನು ಬಹಳ ಸ್ಪಷ್ಟವಾಗಿಯೇ ವಿವರಿಸಿದ್ದರು ಎಂಬ ವಿವರ ಎನ್‌ವೈಟಿ ವರದಿಯಲ್ಲಿ ಇದೆ. ‘ಈ ವ್ಯವಸ್ಥೆಗಳು ಜಗತ್ತಿನಲ್ಲಿ ಹೇಗೆ ಚಲಾವಣೆಗೊಳ್ಳಲಿವೆ ಎಂಬುದರ ನಿಯಂತ್ರಣವು ನಮ್ಮ ರಕ್ಷಣಾ ಸಚಿವಾಲಯದಲ್ಲಿಯೇ ಇದ್ದರೆ, ಅದರ ಪ್ರಯೋಜವನ್ನು ನಾವು ಪಡೆದುಕೊಳ್ಳಬಹುದು ಮತ್ತು ರಾಜತಾಂತ್ರಿಕ ಲಾಭವನ್ನೂ ಮಾಡಿಕೊಳ್ಳಬಹುದು’ ಎಂದು ಅವರು ಹೇಳಿದ್ದರು. ಮುಂದಿನ ದಿನಗಳಲ್ಲಿ ಈ ಮಾತು ಸತ್ಯವೇ ಆಯಿತು.

-------

ಪ್ರಭಾವ ವಿಸ್ತರಣೆ ತಂತ್ರ

ಮಾದಕ ಪದಾರ್ಥ ಮಾಫಿಯಾ ಹಾವಳಿಯಿಂದ ತತ್ತರಿಸಿದ್ದ ಮೆಕ್ಸಿಕೊ ದೇಶಕ್ಕೆ ಪೆಗಾಸಸ್‌ನಂತಹ ಕುತಂತ್ರಾಂಶದ ಅಗತ್ಯ ಇತ್ತು. ಆಗ ಪ್ರಚಲಿತದಲ್ಲಿದ್ದ ಬ್ಲ್ಯಾಕ್‌ಬೆರಿ ಫೋನ್‌ಗಳಿಂದ ಮಾಹಿತಿ ಕದಿಯುವ ಮೂಲಕ ಡ್ರಗ್ಸ್‌ ಮಾಫಿಯಾವನ್ನು ಮಟ್ಟಹಾಕಲು ಮೆಕ್ಸಿಕೊ ಬಯಸಿತ್ತು. ಆಗ ಮೆಕ್ಸಿಕೊ ಪ್ರಧಾನಿಯಾಗಿದ್ದ ಫಿಲಿಪ್‌ ಕಾಲ್ಡ್ರಾನ್‌ ಜತೆಗೆ ಇಸ್ರೇಲ್‌ನ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಸಭೆ ನಡೆಸಿದರು. ಮೆಕ್ಸಿಕೊ ದೇಶಕ್ಕೆ ಪೆಗಾಸಸ್‌ ಕುತಂತ್ರಾಂಶದ ಮಾರಾಟಕ್ಕೆ ರಕ್ಷಣಾ ಸಚಿವಾಲಯವು ಹಸಿರು ನಿಶಾನೆ ತೋರಿತು. ಡ್ರಗ್ಸ್‌ ಮಾಫಿಯಾವನ್ನು ದಮನ ಮಾಡುವಲ್ಲಿ ಮೆಕ್ಸಿಕೊಕ್ಕೆ ಇದು ನೆರವು ನೀಡಿತು.

ಲ್ಯಾಟಿನ್‌ ಅಮೆರಿಕ ಪ್ರದೇಶದಲ್ಲಿ ಮೆಕ್ಸಿಕೊ ಪ್ರಭಾವಿ ದೇಶ. ಈ ಭಾಗದಲ್ಲಿ, ಮಧ್ಯಪ್ರಾಚ್ಯ ದೇಶಗಳ ಬೆಂಬಲಿತ ಇಸ್ರೇಲ್‌ ವಿರೋಧಿ ಗುಂಪುಗಳು ಬಲವಾಗಿದ್ದವು. ಇಂತಹ ಗುಂಪುಗಳನ್ನು ಮಟ್ಟಹಾಕುವ ಅಗತ್ಯ ಇಸ್ರೇಲ್‌ಗೆ ಇತ್ತು. ಈ ದಿಸೆಯಲ್ಲಿ ಲಾಭ ಆಯಿತೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಮೆಕ್ಸಿಕೊದಲ್ಲಿ ಕಾಲೂರಲು ಇಸ್ರೇಲ್‌ಗೆ ಅವಕಾಶ ಸಿಕ್ಕಿತು. ವಿಶ್ವ ಸಂಸ್ಥೆಯಲ್ಲಿ ಮೆಕ್ಸಿಕೊ, ಇಸ್ರೇಲ್‌ ವಿರುದ್ಧವೇ ಮತ ಚಲಾಯಿಸುವ ಸುದೀರ್ಘ ಪರಂಪರೆ ಹೊಂದಿತ್ತು. ವಿರುದ್ಧ ಮತ ಹಾಕುತ್ತಿದ್ದ ಮೆಕ್ಸಿಕೊ, ಗೈರು ಹಾಜರಿಯ ಹೊಸ ಕಾರ್ಯತಂತ್ರವನ್ನು ಅನುಸರಿಸಲು ಆರಂಭಿಸಿತು. ಕಾಲ್ಡ್ರಾನ್‌ ಅವರ ಉತ್ತರಾಧಿಕಾರಿ ಎನ್ರಿಕ್‌ ಪೆನಾ ನೀಟೊ ಅವರು 2016ರಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದರು. 2000ದ ಬಳಿಕ ಇದೇ ಮೊದಲಿಗೆ ಮೆಕ್ಸಿಕೊ ಸರ್ಕಾರದ ಮುಖ್ಯಸ್ಥರು ಇಸ್ರೇಲ್‌ಗೆ ಹೋದರು.

2008–9ರ ಅವಧಿಯಲ್ಲಿ ಗಾಜಾದ ಮೇಲೆ ಇಸ್ರೇಲ್‌ ನಡೆಸಿದ ‘ಅತಿಕ್ರಮಣ’ದ ಬಗೆಗಿನ ಗೋಲ್ಡ್‌ಸ್ಟೋನ್‌ ಆಯೋಗದ ವರದಿಯ ಕುರಿತು ವಿಶ್ವಸಂಸ್ಥೆಯ ನಿರ್ಣಯದ ವಿರುದ್ಧ 2010ರಲ್ಲಿ ಪನಾಮಾ ಮತ ಹಾಕಿತು. ಅದರ ನಂತರದ ವಾರ, ಪನಾಮಾದ ಅಧ್ಯಕ್ಷರಾಗಿದ್ದ ರಿಕಾರ್ಡೊ ಮಾರ್ಟಿನೆಲ್ಲಿ ಅವರು ಇಸ್ರೇಲ್‌ಗೆ ಭೇಟಿ ನೀಡಿ ಬೇಹುಗಾರಿಕೆ ತಂತ್ರಾಂಶಗಳನ್ನು ಖರೀದಿಸಿದರು ಎಂದು ವರದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2017ರಲ್ಲಿ ಇಸ್ರೇಲ್‌ಗೆ ಭೇಟಿ ಕೊಟ್ಟರು. ‘ಪ್ಯಾಲೆಸ್ಟೀನ್‌ಗೆ ಬದ್ಧತೆ’ ಎಂಬುದು ಸುದೀರ್ಘ ಕಾಲ ಭಾರತದ ಘೋಷಿತ ನಿಲುವು ಆಗಿತ್ತು. ಆದರೆ, 2017ರ ಬಳಿಕ ಈ ನಿಲುವು ಬದಲಾಯಿತು ಎಂದು ಎನ್‌ವೈಟಿ ವರದಿ ವಿಶ್ಲೇಷಿಸಿದೆ. 2019ರ ಜೂನ್‌ನಲ್ಲಿ ವಿಶ್ವ ಸಂಸ್ಥೆಯಲ್ಲಿ ಭಾರತವು ಇಸ್ರೇಲ್‌ ಪರವಾಗಿ ಮತ ಹಾಕಿತು ಎಂಬುದನ್ನೂ ವರದಿಯು ಉಲ್ಲೇಖಿಸಿದೆ.

ನೆರೆಯ ಅರಬ್‌ ಸಂಯುಕ್ತ ಸಂಸ್ಥಾನದ (ಯುಎಇ) ಜತೆಗೆ ಮೈತ್ರಿಗೂ ಪೆಗಾಸಸ್‌ ನೆರವಾಗಿದೆ. ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ನ ಏಜೆಂಟರು ಹಮಾಸ್‌ ನಾಯಕನೊಬ್ಬನನ್ನು ದುಬೈನ ಹೋಟೆಲ್‌ನಲ್ಲಿ 2010ರಲ್ಲಿ ಹತ್ಯೆ ಮಾಡಿದರು. ಇದು ಯುಎಇ ಯುವರಾಜ ಮೊಹಮ್ಮದ್‌ ಬಿನ್‌ ಜಾಯೆದ್‌ ಅವರನ್ನು ಕೆರಳಿಸಿತ್ತು. ಇಸ್ರೇಲ್‌ ಜತೆಗಿನ ಎಲ್ಲ ಸಂಬಂಧ ಕಡಿದುಕೊಳ್ಳಲು ಅವರು ಆದೇಶಿಸಿದ್ದರು. ಆದರೆ, 2013ರಲ್ಲಿ ಯುಎಇಗೆ ಪೆಗಾಸಸ್‌ ಮಾರಾಟದ ಕೊಡುಗೆಯನ್ನು ಇಸ್ರೇಲ್‌ ನೀಡಿತು. ಜಾಯೆದ್‌ ತಕ್ಷಣವೇ ಒಪ್ಪಿಕೊಂಡರು. ಹೀಗೆ, ಪ್ರತಿಕೂಲ ಸನ್ನಿವೇಶವನ್ನು ಅನುಕೂಲಕರವಾಗಿಸಲು ಇಸ್ರೇಲ್‌ಗೆ ಪೆಗಾಸಸ್‌ ನೆರವಾಗುತ್ತಲೇ ಬಂದಿದೆ.

ಆಧಾರ: ದ ಬ್ಯಾಟಲ್‌ ಫಾರ್‌ ದ ವರ್ಲ್ಡ್ಸ್‌ ಮೋಸ್ಟ್‌ ಪವರ್‌ಫುಲ್‌ ಸೈಬರ್‌ ವೆಪನ್‌– ದ ನ್ಯೂಯಾರ್ಕ್‌ ಟೈಮ್ಸ್‌ನ ತನಿಖಾ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT