ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ – ಅಗಲ| ಗಗನಮುಖಿ ಚಿನ್ನ

Last Updated 20 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಚಿನ್ನದ ದರ ಈ ವಾರದಲ್ಲಿ ಸಾರ್ವತ್ರಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ. ತೊಟ್ಟವರ ಅಂದವನ್ನು ಹೆಚ್ಚಿಸುವ ಈ ಹಳದಿ ಲೋಹವು, ಹೂಡಿಕೆದಾರರ ನಂಬುಗೆಯ ಸ್ವತ್ತೂ ಹೌದು. ಒಡವೆಯಾಗಲೀ, ಹೂಡಿಕೆಯಾಗಲಿ ಚಿನ್ನದ ಮೇಲೆ ಹಣ ತೊಡಗಿಸಿದರೆ ಅದು ಭದ್ರ ಎಂಬ ವಿಶ್ವಾಸವೇ ಚಿನ್ನಕ್ಕೆ ಬೇಡಿಕೆ ಮತ್ತು ಬೆಲೆ ಎರಡೂ ಹೆಚ್ಚಲು ಪ್ರಮುಖ ಕಾರಣ. ಜಾಗತಿಕ ಮಾರುಕಟ್ಟೆಯ ಕಾರಣಗಳಿಂದಾಗಿ ಚಿನ್ನದ ಬೆಲೆ ಏರಲು ಅಗತ್ಯವಾಗಿರುವ ಎಲ್ಲಾ ಸಂದರ್ಭಗಳೂ ಈಗ ಬಂದೊದಗಿವೆ. ಚಿನ್ನದ ದರ ಮತ್ತಷ್ಟು ಏರಿಕೆಯಾಗುವ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿವೆ.

ಭಾರತದ ಸ್ಥಳೀಯ ಮಾರುಕಟ್ಟೆಯಲ್ಲಿ ಶನಿವಾರ ಹತ್ತು ಗ್ರಾಂ ಚಿನ್ನದ ದರ ₹60,920 ಮುಟ್ಟಿತ್ತು. ನಂತರ ಇಳಿಕೆಯಾಗಿತ್ತು. ಸೋಮವಾರ, ಹತ್ತು ಗ್ರಾಂ ಶುದ್ಧ ಚಿನ್ನದ ದರ ₹61,280ಕ್ಕೆ ಏರಿದೆ. ಒಂದು ವಾರದಿಂದ ಚಿನ್ನದ ದರ ಏರುಗತಿಯಲ್ಲೇ ಇದೆ. ಜಾಗತಿಕ ಹೂಡಿಕೆ ಮಾರುಕಟ್ಟೆಯ ದಿನದ ವಹಿವಾಟಿನಲ್ಲಿ ಚಿನ್ನದ ಬೆಲೆ ಭಾರಿ ಏರಿಳಿತ ಕಂಡಿದ್ದರೂ, ಅದು ದಾಖಲೆಯನ್ನು ಬರೆಯುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಮಾರ್ಚ್‌ ಎರಡನೇ ವಾರದಲ್ಲಿ ಪ್ರತಿ ಔನ್ಸ್‌ (28.34 ಗ್ರಾಂ) ಚಿನ್ನದ ದರ 1,930 ಡಾಲರ್‌ಗೆ (ಅಂದಾಜು ₹1.61 ಲಕ್ಷ) ಏರಿಕೆಯಾಗಿತ್ತು. ಮಾರ್ಚ್‌ ಮೂರನೇ ವಾರದಲ್ಲಿ ಪ್ರತಿ ಔನ್ಸ್‌ ದರ 2,000 ಡಾಲರ್‌ಗೆ (ಅಂದಾಜು ₹1.65 ಲಕ್ಷ) ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿತ್ತು.

ಆದರೆ, ಮಾರ್ಚ್‌ ಮೂರನೇ ವಾರದ ಮೊದಲ ದಿನದ (ಸೋಮವಾರ) ವಹಿವಾಟಿನಲ್ಲೇ ಪ್ರತಿ ಔನ್ಸ್‌ನ ದರವು 2,010.7 ಡಾಲರ್‌ಗೆ (ಅಂದಾಜು ₹1.66 ಲಕ್ಷ) ಮುಟ್ಟಿತ್ತು. ದಿನದ ವಹಿವಾಟು ಅಂತ್ಯವಾದಾಗ ದರ ಸ್ವಲ್ಪ ಇಳಿಕೆಯಾಗಿತ್ತಾದರೂ, ಇದು ಈವರೆಗಿನ ಗರಿಷ್ಠ ದರ. ಮುಂದಿನ ದಿನಗಳಲ್ಲಿ ಚಿನ್ನದ ದರವೂ ಇನ್ನಷ್ಟು ಏರಿಕೆಯಾಗಬಹುದು ಎಂಬುದನ್ನು ಸೋಮವಾರದ ವಹಿವಾಟು ಸೂಚಿಸುತ್ತದೆ.

ಜಾಗತಿಕ ಮಾರುಕಟ್ಟೆಗೆ ಹೋಲಿಸಿ ದರೆ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರವು ಸ್ವಲ್ಪ ಹೆಚ್ಚೇ ಇರುತ್ತದೆ. ದೇಶಿ ಮಾರುಕಟ್ಟೆಯಲ್ಲಿನ ಹೂಡಿಕೆ ಮತ್ತು ಒಡವೆ ಚಿನ್ನಕ್ಕೆ ಬೇಡಿಕೆಯು ಚಿನ್ನದ ದರವನ್ನು ನಿರ್ಧರಿಸುತ್ತದೆ. ಈಗ ಭಾರತದಲ್ಲಿ ಮದುವೆ ಋತು ನಡೆಯುತ್ತಿದ್ದು, ಚಿನ್ನಕ್ಕೆ ಬೇಡಿಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ಚಿನ್ನದ ದರವೂ ಏರಿಕೆಯಾಗುತ್ತಿದೆ.

ಹೂಡಿಕೆ ಏರಿಕೆಯೇ ಕಾರಣ

ಚಿನ್ನವು ಅತ್ಯಂತ ಸುರಕ್ಷಿತವಾದ ಹೂಡಿಕೆ ವಿಧಾನ ಎನ್ನುವುದು ತಜ್ಞರ ಮಾತು. ಬೇರೆ ಸ್ವರೂಪದ ಹೂಡಿಕೆಯಷ್ಟು ಕ್ಷಿಪ್ರ ಲಾಭವನ್ನು ತಂದುಕೊಡದೇ ಇದ್ದರೂ, ಚಿನ್ನದ ಮೇಲೆ ಹೂಡಿಕೆ ಮಾಡುವುದರಿಂದ ನಷ್ಟದ ಸಾಧ್ಯತೆ ಕಡಿಮೆ ಇರುತ್ತದೆ. ಬೇರೆಲ್ಲಾ ಸ್ವರೂಪದ ಹೂಡಿಕೆಗಳು ಅಸ್ಥಿರವಾಗಿದ್ದಾಗ, ಮಾರುಕಟ್ಟೆ ಕುಸಿತದ ಹಾದಿಯಲ್ಲಿ ಇದ್ದಾಗ, ಹಣದುಬ್ಬರ ಮತ್ತು ಆರ್ಥಿಕ ಹಿಂಜರಿಕೆಯ ಸ್ಥಿತಿ ಇದ್ದಾಗ ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುತ್ತದೆ. ಆಗ ಚಿನ್ನಕ್ಕೆ ಬೇಡಿಕೆ ಹೆಚ್ಚಿ, ಅದರ ದರವೂ ಹೆಚ್ಚಾಗುತ್ತದೆ.

ಜಾಗತಿಕ ಆರ್ಥಿಕತೆಯು ಈಗ ಹಿಂಜರಿತದ ಸ್ಥಿತಿಯಲ್ಲಿದೆ. ವಿಶ್ವದ ದೊಡ್ಡ ಆರ್ಥಿಕ ವ್ಯವಸ್ಥೆಗಳಾದ ಅಮೆರಿಕ, ಆಸ್ಟ್ರೇಲಿಯ ಮತ್ತು ಐರೋಪ್ಯ ದೇಶಗಳಲ್ಲಿ ಆರ್ಥಿಕ ಹಿಂಜರಿತ ಇದೆ. ಆಗ್ನೇಯ ಏಷ್ಯಾದ ಪ್ರಮುಖ ದೇಶಗಳಲ್ಲೂ ಇದೇ ಸ್ಥಿತಿ ಇದೆ. ಈ ಕಾರಣದಿಂದ ಜನರು ಷೇರು ಮಾರುಕಟ್ಟೆಯಲ್ಲಿನ ವಿವಿಧ ಸ್ವರೂಪದ ಹೂಡಿಕೆಗಳಲ್ಲಿನ ತಮ್ಮ ಹಣವನ್ನು ಹಿಂದೆಗೆಯುತ್ತಿದ್ದಾರೆ. ಇದರಿಂದಾಗಿ 2022–23ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿಯೇ ಚಿನ್ನದ ಮೇಲಿನ ಹೂಡಿಕೆ ಏರುಗತಿಯಲ್ಲಿತ್ತು.

2022–23ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ವಿಶ್ವದ ಹಲವು ಆರ್ಥಿಕತೆಗಳು ಸಂಕಷ್ಟಕ್ಕೆ ಸಿಲುಕಿದವು. ಇದು ಜಾಗತಿಕ ಮಾರುಕಟ್ಟೆಯಲ್ಲಿ ಕರೆನ್ಸಿಗಳ ಮೌಲ್ಯ ಕುಸಿಯುವಂತೆ ಮಾಡಿತು ಮತ್ತು ಷೇರು ಮಾರುಕಟ್ಟೆಯ ಅಸ್ಥಿರತೆಗೂ ಕಾರಣವಾಯಿತು. ಜನರು ಬೇರೆ ಸ್ವರೂಪದ ಹೂಡಿಕೆಗಳಿಂದ ಹಣ ಹೊರತೆಗೆಯುವ ಪ್ರಮಾಣ ಹೆಚ್ಚಾಯಿತು. ಅಮೆರಿಕ ಕೇಂದ್ರೀಯ ಬ್ಯಾಂಕ್‌ ಬಡ್ಡಿದರ ಏರಿಕೆ ಮಾಡಿದ ಕಾರಣ, ಬಾಂಡ್‌ಗಳ ಮೇಲಿನ ಹೂಡಿಕೆ ಹೆಚ್ಚಾಗಿತ್ತು. ಹೀಗಾಗಿ ಮೂರನೇ ತ್ರೈಮಾಸಿಕದಲ್ಲಿ ಚಿನ್ನದ ಮೇಲಿನ ಹೂಡಿಕೆ ಕಡಿಮೆಯಾಗಿತ್ತು. ಆದರೆ, ನಾಲ್ಕನೇ ತ್ರೈಮಾಸಿಕದಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಯಿತು.

ಅಮೆರಿಕದ ದೊಡ್ಡ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕಿದವು. ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ದಿವಾಳಿಯಾಗಿದ್ದು, ಬ್ಯಾಂಕಿಂಗ್‌ ವಲಯದಲ್ಲಿನ ಹೂಡಿಕೆಯ ಲಾಭವನ್ನು ಕರಗಿಸಿತು. ಪರಿಣಾಮವಾಗಿ ಜನರು ಬ್ಯಾಂಕಿಂಗ್‌ ವಲಯದಲ್ಲಿನ ಹೂಡಿಕೆಯನ್ನು ಹೊರತೆಗೆಯಲು ಆರಂಭಿಸಿದರು. ಇದರಿಂದಾಗಿ ಚಿನ್ನದ ಮೇಲಿನ ಹೂಡಿಕೆ ದಿಢೀರ್‌ ಏರಿಕೆಯಾಯಿತು. ಮೂರನೇ ತ್ರೈಮಾಸಿಕದಲ್ಲಿ ಹೂಡಿಕೆಗಾಗಿ 97 ಟನ್‌ಗಳಷ್ಟು ಚಿನ್ನಕ್ಕಷ್ಟೇ ಬೇಡಿಕೆ ಇತ್ತು. ಆದರೆ, ನಾಲ್ಕನೇ ತ್ರೈಮಾಸಿಕದಲ್ಲಿ ಈ ಬೇಡಿಕೆಯು 245 ಟನ್‌ಗಳಿಗೆ ಏರಿಕೆಯಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಏರಿಕೆಯಾಗಿದ್ದೇ, ಚಿನ್ನದ ಬೆಲೆ ಗಗನಮುಖಿಯಾಗಿದೆ. ಚಿನ್ನದ ದರ ಏರಿಕೆಯಾದಂತೆಲ್ಲಾ ಜನರು, ಅದರ ಮೇಲೆ ಹೂಡಿಕೆಗೆ ಮುಗಿಬೀಳುತ್ತಿದ್ದಾರೆ. ಮಾರುಕಟ್ಟೆಯಲ್ಲಿನ ಈ ಪರಿಸ್ಥಿತಿ ಇನ್ನೂ ಹಲವು ದಿನ ಮುಂದುವರಿಯುವ ನಿರೀಕ್ಷೆ ಇದೆ.

ಆಳ – ಅಗಲ|  ಗಗನಮುಖಿ ಚಿನ್ನ

ಒಡವೆ ಖರೀದಿ ಏರಿಕೆ

ಜಗತ್ತಿನಲ್ಲಿರುವ ಒಟ್ಟು ಚಿನ್ನದಲ್ಲಿ ಹೆಚ್ಚಿನ ಪ್ರಮಾಣ ಲಭ್ಯವಿರುವುದು ಒಡವೆ ರೂಪದಲ್ಲಿ. ಕೇಂದ್ರೀಯ ಬ್ಯಾಂಕ್‌ಗಳ ಚಿನ್ನದ ಮೀಸಲಿಗಿಂತಲೂ ಹೆಚ್ಚು ಚಿನ್ನ ಒಡವೆ ರೂಪದಲ್ಲಿ ಇದೆ. ಮಧ್ಯಮ ವರ್ಗವು ಒಡವೆ ರೂಪದ ಚಿನ್ನದ ಮೇಲೆ ಹೂಡಿಕೆ ಮಾಡುವ ಅತ್ಯಂತ ದೊಡ್ಡ ವರ್ಗವಾಗಿದೆ. ಒಡವೆ ಸ್ವರೂಪದಲ್ಲಿ ಚಿನ್ನದ ಮೇಲಿನ ಹೂಡಿಕೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗೆ ಬೇಡಿಕೆ ಹೆಚ್ಚಾಗಿರುವ ಕಾರಣದಿಂದಲೇ ದರವೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

2022–13ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಈ ಸ್ವರೂಪದ ಹೂಡಿಕೆಯಲ್ಲಿ ಚಿನ್ನಕ್ಕೆ ಇದ್ದ ಬೇಡಿಕೆ 490 ಟನ್‌ಗಳು. ಮೂರನೇ ತ್ರೈಮಾಸಿಕದಲ್ಲಿ ಬೇಡಿಕೆಯು 580 ಟನ್‌ಗಳಿಗೆ ಏರಿಕೆಯಾಗಿತ್ತು. ಈಗ ನಾಲ್ಕನೇ ತ್ರೈಮಾಸಿಕದ ಮೊದಲ ತಿಂಗಳಲ್ಲೇ ಈ ಬೇಡಿಕೆಯು 602 ಟನ್‌ಗಳಿಗೆ ಏರಿಕೆಯಾಗಿದೆ. ನಾಲ್ಕನೇ ತ್ರೈಮಾಸಿಕದ ಅಂತ್ಯದ ವೇಳೆಗೆ ಬೇಡಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಒಡವೆಯಲ್ಲೇ ಹೆಚ್ಚು ಚಿನ್ನ

ವಿಶ್ವದಲ್ಲಿ ಈವರೆಗೆ ಒಟ್ಟು 2.08 ಲಕ್ಷ ಟನ್‌ಗಳಷ್ಟು ಚಿನ್ನವನ್ನು ಹೊರತೆಗೆಯಲಾಗಿದೆ ಎನ್ನುತ್ತವೆ ದಾಖಲೆಗಳು. ಹೀಗೆ ಹೊರತೆಗೆಯಲಾದ ಚಿನ್ನದಲ್ಲಿ ಅತಿಹೆಚ್ಚು ಚಿನ್ನವು ಲಭ್ಯವಿರುವುದು ಒಡವೆ ರೂಪದಲ್ಲಿ. ಹೊರತೆಗೆಯಲಾದ ಒಟ್ಟು ಚಿನ್ನದಲ್ಲಿ, ಒಡವೆ ರೂಪದಲ್ಲಿರುವ ಚಿನ್ನದ ಪ್ರಮಾಣ ಶೇ 46ರಷ್ಟು.

ಹೂಡಿಕೆ ರೂಪದಲ್ಲಿ ಇರುವ ಚಿನ್ನದ ಪ್ರಮಾಣವು ಶೇ 22ರಷ್ಟು. ಗಟ್ಟಿ ಮತ್ತು ನಾಣ್ಯಗಳ ರೂಪದಲ್ಲಿರುವ ಈ ಚಿನ್ನದ ಶುದ್ಧತೆಯ ಪ್ರಮಾಣ ಶೇ 99.5ರಷ್ಟು. ವಿಶ್ವದ ಎಲ್ಲಾ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳಲ್ಲಿ ಮೀಸಲು ರೂಪದಲ್ಲಿ 35,715 ಟನ್‌ಗಳಷ್ಟು ಚಿನ್ನ ಇದೆ. ಈವರೆಗೆ ಹೊರತೆಗೆಯಲಾದ ಒಟ್ಟು ಚಿನ್ನದಲ್ಲಿ ಈ ಸ್ವರೂಪದ ಚಿನ್ನದ ಪ್ರಮಾಣ ಶೇ 17ರಷ್ಟಾಗುತ್ತದೆ. ಎಲೆಕ್ಟ್ರಾನಿಕ್‌ ಉಪಕರಣಗಳಲ್ಲಿ ಬಳಕೆಯಲ್ಲಿರುವ ಚಿನ್ನದ ಪ್ರಮಾಣವು ದೊಡ್ಡದೇ ಆಗಿದೆ. ಇಂತಹ ಉಪಕರಣಗಳಲ್ಲಿ ಈವರೆಗೆ ಬಳಸಲಾಗಿರುವ ಚಿನ್ನದ ಒಟ್ಟು ತೂಕ 31,096 ಟನ್‌. ಈವರೆಗೆ ಹೊರತೆಗೆಯಲಾದ ಒಟ್ಟು ಚಿನ್ನದಲ್ಲಿ, ಈ ರೂಪದಲ್ಲಿರುವ ಚಿನ್ನದ ಪ್ರಮಾಣವು ಶೇ 15ರಷ್ಟು. ಆದರೆ, ಇ–ತ್ಯಾಜ್ಯವೆಂದು ವಿಲೇವಾರಿ ಮಾಡಲಾದ ಚಿನ್ನವನ್ನು ಮರುಸಂಸ್ಕರಿಸುವ ಕೆಲಸ ಶೇ ನೂರರಷ್ಟಿಲ್ಲ. ಹೀಗಾಗಿ ಸ್ವಲ್ಪ ಪ್ರಮಾಣದ ಚಿನ್ನವು ಕಸದ ರೂಪದಲ್ಲೂ ಇದೆ.

ಆಳ – ಅಗಲ|  ಗಗನಮುಖಿ ಚಿನ್ನ

ಆಧಾರ: ವರ್ಲ್ಡ್‌ ಗೋಲ್ಡ್‌ ಫೋರಂ ವರದಿಗಳು, ಗೋಲ್ಡ್‌ ಹಬ್‌ ದತ್ತಾಂಶಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT