ಗುರುವಾರ , ಫೆಬ್ರವರಿ 9, 2023
30 °C

ಆಳ–ಅಗಲ | 800 ಕೋಟಿ ದಾಟಿದ ಜಾಗತಿಕ ಜನಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಗತ್ತಿನ ಜನಸಂಖ್ಯೆಯು 800 ಕೋಟಿಯ ಮೈಲುಗಲ್ಲು ದಾಟಿದೆ. ಜಗತ್ತಿನಾದ್ಯಂತ ಫಲವಂತಿಕೆ ಪ್ರಮಾಣವು ಕಡಿಮೆ ಆಗಿದ್ದರೂ ಜನರ ಜೀವಿತಾವಧಿ ಹೆಚ್ಚಳ ಮತ್ತು ಮರಣ ಪ್ರಮಾಣದಲ್ಲಿ ಇಳಿಕೆ ಆಗಿರುವುದರಿಂದ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಜನರ ನಿರೀಕ್ಷಿತ ಜೀವಿತಾವಧಿಯು 2019ರಲ್ಲಿ 72.8 ವರ್ಷ ಆಗಿತ್ತು. 1990ಕ್ಕೆ ಹೋಲಿಸಿದರೆ ಇದು 9 ವರ್ಷಗಳಷ್ಟು ಹೆಚ್ಚಳವಾಗಿದೆ. 2050ರ ಹೊತ್ತಿಗೆ ನಿರೀಕ್ಷಿತ ಜೀವಿತಾವಧಿಯು 77.2 ವರ್ಷಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ. 2030ರ ಹೊತ್ತಿಗೆ ಜನಸಂಖ್ಯೆಯು 850 ಕೋಟಿಗೆ, 2050ರ ಹೊತ್ತಿಗೆ 970 ಕೋಟಿಗೆ ಮತ್ತು 2100ರ ಹೊತ್ತಿಗೆ 1,040 ಕೋಟಿಗೆ ಏರಿಕೆ ಆಗಬಹುದು ಎಂದು ವಿಶ್ವಸಂಸ್ಥೆಯು ಅಂದಾಜಿಸಿದೆ. 

ನಿರೀಕ್ಷಿತ ಜೀವಿತಾವಧಿಯಲ್ಲಿ ಮಹಿಳೆಯರು ಮತ್ತು ಪುರುಷರ ನಡುವೆ ಗಣನೀಯವಾದ ವ್ಯತ್ಯಾಸ ಇದೆ. 2019ರ ಲೆಕ್ಕಾಚಾರ ಪ್ರಕಾರ, ಮಹಿಳೆಯರ ನಿರೀಕ್ಷಿತ ಜೀವಿತಾವಧಿಯು 73.8 ವರ್ಷಗಳಾಗಿದ್ದರೆ ಪುರುಷರ ನಿರೀಕ್ಷಿತ ಜೀವಿತಾವಧಿಯು 68.4 ವರ್ಷ. ಮಹಿಳೆ ಮತ್ತು ಪುರುಷರ ನಡುವೆ 5.4 ವರ್ಷಗಳ ವ್ಯತ್ಯಾಸ ಇದೆ. ಎಲ್ಲ ‍ಪ್ರದೇಶಗಳು ಮತ್ತು ದೇಶಗಳಲ್ಲಿಯೂ ಮಹಿಳೆಯರ ನಿರೀಕ್ಷಿತ ಜೀವಿತಾವಧಿಯು ಹೆಚ್ಚೇ ಆಗಿದೆ. 

ಸರಾಸರಿ ಫಲವಂತಿಕೆ ಪ್ರಮಾಣವು ಜಗತ್ತಿನಾದ್ಯಂತ ಇಳಿಕೆಯಾಗುತ್ತಲೇ ಇದೆ. 2021ರಲ್ಲಿ ಜಗತ್ತಿನ ಫಲವಂತಿಕೆಯು 2.3ರಷ್ಟು ಇತ್ತು. 1950ರಲ್ಲಿ ಇದು 5ರಷ್ಟು ಇತ್ತು. 2050ರ ಹೊತ್ತಿಗೆ ಫಲವಂತಿಕೆಯು 2.1ಕ್ಕೆ ಕುಸಿಯಬಹುದು ಎಂದು ಅಂದಾಜಿಸಲಾಗಿದೆ. ಫಲವಂತಿಕೆ ಕುಸಿತದ ಪರಿಣಾಮವಾಗಿ ಜನಸಂಖ್ಯೆ ಏರಿಕೆ ಪ್ರಮಾಣವು ಇಳಿದಿದೆ. 1950ರ ಬಳಿಕ ಇದೇ ಮೊದಲ ಬಾರಿಗೆ 2020ರಲ್ಲಿ ಜನಸಂಖ್ಯೆ ಏರಿಕೆ ಪ್ರಮಾಣವು ಶೇ 1ಕ್ಕಿಂತ ಕಡಿಮೆಗೆ ಇಳಿದಿದೆ. 2080ರ ಹೊತ್ತಿಗೆ ಜಗತ್ತಿನ ಜನಸಂಖ್ಯೆಯು ಗರಿಷ್ಠ ಮಟ್ಟಕ್ಕೆ ಅಂದರೆ 1,040 ಕೋಟಿಗೆ ಏರಲಿದೆ. 2100ರವರೆಗೂ ಜನಸಂಖ್ಯೆಯು ಇಷ್ಟೇ ಇರಲಿದೆ ಎಂದು ಅಂದಾಜಿಸಲಾಗಿದೆ. 

ಅತಿ ಹೆಚ್ಚು ಜನಸಂಖ್ಯೆ ಇರುವ ಎರಡೂ ಪ್ರದೇಶಗಳು ಏಷ್ಯಾ ಖಂಡದಲ್ಲಿಯೇ ಇವೆ. ಪೂರ್ವ ಮತ್ತು ಆಗ್ನೇಯ ಏಷ್ಯಾದ ಜನಸಂಖ್ಯೆಯು 230 ಕೋಟಿಯಷ್ಟಿದೆ. ಇದು ಜಗತ್ತಿನ ಒಟ್ಟು ಜನಸಂಖ್ಯೆಯ ಶೇ 29ರಷ್ಟಾಗುತ್ತದೆ. ಮಧ್ಯ ಮತ್ತು ದಕ್ಷಿಣ ಏಷ್ಯಾದ ಜನಸಂಖ್ಯೆಯು 210 ಕೋಟಿಯಷ್ಟಾಗುತ್ತದೆ. ಇದು ಜಗತ್ತಿನ ಒಟ್ಟು ಜನಸಂಖ್ಯೆಯ ಶೇ 26ರಷ್ಟಾಗುತ್ತದೆ. ಚೀನಾ ಮತ್ತು ಭಾರತವು ತಲಾ 140 ಕೋಟಿಗೂ ಹೆಚ್ಚು ಜನಸಂಖ್ಯೆಯೊಂದಿಗೆ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶಗಳು ಎನಿಸಿಕೊಂಡಿವೆ. 

2050ರವರೆಗೆ ಜಗತ್ತಿನ ಜನಸಂಖ್ಯೆಯಲ್ಲಿ ಆಗುವ ಹೆಚ್ಚಳದಲ್ಲಿ ಅರ್ಧಕ್ಕಿಂತ ಹೆಚ್ಚು ಎಂಟು ದೇಶಗಳಲ್ಲಿಯೇ ಆಗಲಿದೆ. ಆ ದೇಶಗಳೆಂದರೆ, ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್‌ ದಿ ಕಾಂಗೊ, ಈಜಿಪ್ಟ್‌, ಇಥಿಯೋಪಿಯಾ, ಭಾರತ, ನೈಜೀರಿಯಾ, ಪಾಕಿಸ್ತಾನ, ಫಿಲಿಪ್ಪೀನ್ಸ್‌ ಮತ್ತು ತಾಂಜಾನಿಯಾ. ಆಫ್ರಿಕಾದ ದೇಶಗಳ ಜನಸಂಖ್ಯೆಯು 2100ರವರೆಗೂ ಹೆಚ್ಚಳ ಆಗುತ್ತಲೇ ಇರಲಿದೆ. 2050ರ ಬಳಿಕ ಜಗತ್ತಿನ ಜನಸಂಖ್ಯೆ ಏರಿಕೆಗೆ ಅರ್ಧಕ್ಕಿಂತ ಹೆಚ್ಚಿನ ಕೊಡುಗೆಯು ಈ ದೇಶಗಳಿಂದಲೇ ಬರಲಿದೆ.

2023ರಲ್ಲಿ ಭಾರತಕ್ಕೆ ಮೊದಲ ಸ್ಥಾನ
ಭಾರತದ ಜನಸಂಖ್ಯೆಯು ಈಗ 141 ಕೋಟಿಯನ್ನು ದಾಟಿ ಮುಂದಕ್ಕೆ ಸಾಗಿದೆ. ಜಗತ್ತಿನ ಜನಸಂಖ್ಯೆಯಲ್ಲಿ ಭಾರತದ ಜನಸಂಖ್ಯೆಯ ಪ್ರಮಾಣವು ಶೇ 17.7ರಷ್ಟಿದೆ. ಅತಿ ಹೆಚ್ಚು ಜನಸಂಖ್ಯೆ ಇರುವ ಎರಡನೇ ದೇಶ ಭಾರತ. ಆದರೆ, 2023ರ ಹೊತ್ತಿಗೆ ಈಗ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾವನ್ನು ಹಿಂದಿಕ್ಕಿ ಭಾರತವು ಮೊದಲ ಸ್ಥಾನ ಪಡೆದುಕೊಳ್ಳಲಿದೆ.

ಭಾರತದಲ್ಲಿ ಜನಸಾಂದ್ರತೆಯೂ ಹೆಚ್ಚು. ಪ್ರತಿ ಚದರ ಕಿಲೋಮೀಟರ್‌ನಲ್ಲಿ ಇರುವ ಜನರ ಸಂಖ್ಯೆ 464. 2020ರ ಅಂದಾಜು ಪ್ರಕಾರ, ಶೇ 35ರಷ್ಟು ಜನರು ನಗರಗಳಲ್ಲಿ ನೆಲೆಸಿದ್ದಾರೆ. ಭಾರತದ ಜನರ ಸರಾಸರಿ ವಯಸ್ಸು 28.4 ವರ್ಷ.

ಹಿರಿಯರ ಸಂಖ್ಯೆ ಹೆಚ್ಚಳ
ಜನಸಂಖ್ಯೆ ಹೆಚ್ಚುವುದರೊಂದಿಗೆ ಹಿರಿಯ ನಾಗರಿಕರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. 2022ರಲ್ಲಿ ಜಗತ್ತಿನಲ್ಲಿ 65 ವರ್ಷ ದಾಟಿದ ವ್ಯಕ್ತಿಗಳ ಪ್ರಮಾಣವು ಶೇ 10ರಷ್ಟಿದ್ದರೆ, 2050ರ ಹೊತ್ತಿಗೆ ಅದು ಶೇ 16ಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ. 2050ರ ಹೊತ್ತಿಗೆ ಜಗತ್ತಿನಲ್ಲಿ ಇರುವ 65 ವರ್ಷ ದಾಟಿದ ವ್ಯಕ್ತಿಗಳ ಸಂಖ್ಯೆಯು 5 ವರ್ಷದೊಳಗಿನ ಮಕ್ಕಳ ಸಂಖ್ಯೆಯ ಎರಡರಷ್ಟಿರುತ್ತದೆ. 12 ವರ್ಷದೊಳಗಿನ ಮಕ್ಕಳ ಸಂಖ್ಯೆಗೆ 65 ದಾಟಿದವರ ಸಂಖ್ಯೆಯು ಸಮನಾಗಿರುತ್ತದೆ.

ಅಕಾಲ ಮರಣ ಪ್ರಮಾಣದಲ್ಲಿ ಗಮನಾರ್ಹವಾದ ಇಳಿಕೆ, ಫಲವಂತಿಕೆಯ ಕುಸಿತದ ಕಾರಣಕ್ಕೆ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಳವಾಗಿ, ಮಕ್ಕಳ ಸಂಖ್ಯೆ ಕಡಿಮೆ ಆಗುತ್ತದೆ.

ಹಿರಿಯ ನಾಗರಿಕರಲ್ಲಿ ಮಹಿಳೆಯರ ಪ್ರಮಾಣವು ಹೆಚ್ಚಳವಾಗಲಿದೆ. ಮಹಿಳೆಯರ ನಿರೀಕ್ಷಿತ ಜೀವಿತಾವಧಿಯು ಪುರುಷರಿಗಿಂತ ಹೆಚ್ಚು ಇರುವುದು ಇದಕ್ಕೆ ಕಾರಣ. 2022ರಲ್ಲಿ 65 ವರ್ಷ ಮೀರಿದವರಲ್ಲಿ ಮಹಿಳೆಯರ ಪ್ರಮಾಣವು ಶೇ 55.7ರಷ್ಟಿದೆ. ಆದರೆ, 2050ರ ಹೊತ್ತಿಗೆ ಇದು ಶೇ 54.5ರಷ್ಟಕ್ಕೆ ಕುಸಿಯಬಹುದು ಎಂದು ಅಂದಾಜಿಸಲಾಗಿದೆ.

ಉತ್ಪಾದಕತೆ ಹೆಚ್ಚಳ
ಆಫ್ರಿಕಾ, ಏಷ್ಯಾ, ಲ್ಯಾಟಿನ್‌ ಅಮೆರಿಕ ಮತ್ತು ಕೆರೀಬಿಯನ್‌ ದೇಶಗಳಲ್ಲಿ ದುಡಿಯುವ ವಯೋಮಾನದ (25ರಿಂದ 64 ವರ್ಷ) ಜನಸಂಖ್ಯೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಳ ಆಗಿದೆ. ಇದು ಒಂದಷ್ಟು ಕಾಲ ಆರ್ಥಿಕ ಪ್ರಗತಿ ಹೆಚ್ಚಳಕ್ಕೆ ಅನುಕೂಲ ಮಾಡಿಕೊಡಲಿದೆ. ಜನಸಂಖ್ಯೆಯಿಂದ ಆಗಬಹುದಾದ ಈ ಅನುಕೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸರ್ಕಾರಗಳು ಯೋಜನೆಗಳನ್ನು ರೂಪಿಸಬೇಕು. ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಹೆಚ್ಚಿನ ಹೂಡಿಕೆ ಮಾಡಬೇಕು.

ಜನಸಂಖ್ಯೆ ಬೆಳವಣಿಗೆಯಲ್ಲಿ ಏರಿಳಿತ
ಜಾಗತಿಕ ಜನಸಂಖ್ಯೆ 800 ಕೋಟಿಯ ಮೈಲುಗಲ್ಲು ಕ್ರಮಿಸುವ ಹಾದಿಯಲ್ಲಿ ಸಾಕಷ್ಟು ಏರುಪೇರು ದಾಖಲಾಗಿದೆ. 1,803ನೇ ಇಸ್ವಿ ವೇಳೆಗೆ ಜಗತ್ತಿನ ಜನಸಂಖ್ಯೆ 100 ಕೋಟಿ ಇತ್ತು ಎನ್ನಲಾಗಿದೆ. ಅದು 200 ಕೋಟಿಗೆ ಹೆಚ್ಚಳವಾಗಲು 124 ವರ್ಷಗಳು ಹಿಡಿದಿದ್ದವು. 300 ಕೋಟಿ ಜನಸಂಖ್ಯೆ ಆಗಲು ಅಲ್ಲಿಂದ 33 ವರ್ಷಗಳು ಮಾತ್ರ ಸಾಕಾದವು. ನಂತರದ ಪ್ರತಿ 100 ಕೋಟಿ ಜನಸಂಖ್ಯೆ ಹೆಚ್ಚಳಕ್ಕೆ 12ರಿಂದ 15 ವರ್ಷಗಳಷ್ಟೇ ಸಾಕಾಯಿತು. ಜನಸಂಖ್ಯೆಯು 400 ಕೋಟಿಯಿಂದ 800 ಕೋಟಿಗೆ ಹೆಚ್ಚಳವಾಗಲು, ಕೇವಲ 48 ವರ್ಷಗಳ ಅವಧಿ ಸಾಕಾಯಿತು. ಪ್ರತಿ 12 ವರ್ಷಕ್ಕೊಮ್ಮೆ 100 ಕೋಟಿ ಜನರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.

1975ರಿಂದ ಇಲ್ಲಿಯವರೆಗೆ ಜನಸಂಖ್ಯಾ ಬೆಳವಣಿಗೆ ಕ್ಷಿಪ್ರವಾಗಿ ಆಗಿರುವುದು ಕಂಡುಬಂದಿದೆ. ಆದರೆ, ಇಲ್ಲಿಂದ ಮುಂದಕ್ಕೆ ಸೇರ್ಪಡೆಯಾಗುವ ಪ್ರತಿ ನೂರು ಕೋಟಿ ಜನಸಂಖ್ಯೆಯ ಬೆಳವಣಿಗೆ ನಿಧಾನವಾಗಿ ಇರಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ, 800ರಿಂದ 900 ಕೋಟಿ ಆಗಲು 15 ವರ್ಷ ಬೇಕಾಗುತ್ತದೆ. ನಂತರದ ನೂರು ಕೋಟಿಗೆ 18 ವರ್ಷ ಹಾಗೂ ಬಳಿಕ 32 ವರ್ಷ ಬೇಕಾಗುತ್ತದೆ ಎಂದು ವರದಿ ಅಭಿಪ್ರಾಯಪಟ್ಟಿದೆ

ಕುಸಿಯುತ್ತಿದೆ ಬೆಳವಣಿಗೆ ದರ
ಜಾಗತಿಕ ಜನಸಂಖ್ಯೆ 800 ಕೋಟಿಗೆ ಬಂದು ತಲುಪಿದ್ದರೂ, ಅದರ ಬೆಳವಣಿಗೆ ದರ ಮಾತ್ರ ಕುಸಿಯುತ್ತಿದೆ ಎಂದು ದತ್ತಾಂಶಗಳು ಹೇಳುತ್ತಿವೆ. 1950ರಲ್ಲಿ ಶೇ 1.73ರ ದರದಲ್ಲಿ ಬೆಳವಣಿಗೆ ಕಾಣುತ್ತಿದ್ದ ಜನಸಂಖ್ಯೆಯು ಕಳೆದ ವರ್ಷ ಶೇ 0.82ಕ್ಕೆ ಇಳಿಕೆಯಾಗಿದೆ. ಜನಸಂಖ್ಯಾ ಬೆಳವಣಿಗೆ ವೇಗವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಪ್ರವೃತ್ತಿ ಕಂಡುಬರುತ್ತಿದ್ದು, ಇದು ಮುಂದುವರಿಯುವ ಸಾಧ್ಯತೆಗಳಿವೆ

ಭಾರತದಲ್ಲೂ ಇಳಿಮುಖ ಪ್ರವೃತ್ತಿ
ಭಾರತದ ಜನಸಂಖ್ಯೆ ಏರುತ್ತಿದ್ದರೂ, ಬೆಳವಣಿಗೆ ದರದಲ್ಲಿ ಇಳಿಮುಖ ಪ್ರವೃತ್ತಿ ಕಂಡುಬಂದಿದೆ. ಎಪ್ಪತ್ತು ವರ್ಷಗಳ ಹಿಂದೆ ಶೇ 1.61ರಷ್ಟು ದರದಲ್ಲಿ ಜನಸಂಖ್ಯೆ ಬೆಳವಣಿಗೆ ಕಾಣುತ್ತಿತ್ತು. 2020ರ ಹೊತ್ತಿಗೆ ಇದು ಶೇ 1ಕ್ಕಿಂತಲೂ ಕಡಿಮೆಯಾಗಿದೆ. ಮುಂದಿನ ವರ್ಷಗಳಲ್ಲಿ ಈ ದರ ಮತ್ತಷ್ಟು ಇಳಿಯುವ ಅಂದಾಜು ಮಾಡಲಾಗಿದೆ

ಆಧಾರ: ವಿಶ್ವಸಂಸ್ಥೆಯ ಜಾಗತಿಕ ಜನಸಂಖ್ಯೆ ಅಂದಾಜು ವರದಿ–2022, ವರ್ಲ್ಡೋಮೀಟರ್, ಅವರ್‌ ವರ್ಲ್ಡ್ ಇನ್ ಡಾಟಾ ಜಾಲತಾಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು