ರಬಕವಿ ಬನಹಟ್ಟಿ: ‘ಕಳೆದ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ನನ್ನನ್ನು, ಶಾಸಕ ಸಿದ್ದು ಸವದಿ ಹಾಗೂ ಮುಧೋಳದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ನೂರಾರು ಕೋಟಿ ಹಣ ಹಂಚಿದವರೆ ಚುನಾವಣೆಯಲ್ಲಿ ಬಿದ್ದು ಪರಾಭವಗೊಂಡರು’ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಈಚೇಗೆ ಸಮೀಪದ ನಾವಲಗಿ ಗ್ರಾಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪಂಚಮಸಾಲಿ ಸಮಾಜದ ಬಹು ವರ್ಷಗಳ ಮೀಸಲಾತಿ ಬೇಡಿಕೆಯನ್ನು ಈಡೇರಿಸಲು ನಮ್ಮದೇ ಸರ್ಕಾರವಿದ್ದರೂ ಹೋರಾಟ ಮಾಡಲಾಯಿತು. ಅದಕ್ಕಾಗಿ ನಮ್ಮದೆ ಮುಖ್ಯಮಂತ್ರಿ ಬೊಮ್ಮಾಯಿಯವರ ಮನೆಯ ಮುಂದೆ ನಿರಶನ ಮಾಡಲಾಯಿತು. ಸಮಾಜದ ಹಿತವನ್ನು ಕಾಯುವಲ್ಲಿ ಪ್ರಾಮಾಣಿಕವಾಗಿ ದೊರೆಯಬೇಕಾಗಿದ್ದ ಮೀಸಲಾತಿ ಸೌಲಭ್ಯವನ್ನು ಪಡೆದುಕೊಂಡಿರುವುದು ಅಭಿಮಾನದ ಸಂಗತಿ’ ಎಂದರು.
‘ನಾವು ಯಾವುದೇ ಬೇರೆ ಸಮಾಜದ ಮೀಸಲಾತಿಗೆ ಧಕ್ಕೆ ತರದೇ ಬಸವಜಯ ಮೃತ್ಯಂಜಯ ಸ್ವಾಮೀಜಿಯವರ ಹೋರಾಟಕ್ಕೆ ಬೆಂಬಲಿಸಿದ್ದೇನೆ. ಈ ಕುರಿತು ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಮನೆಯಲ್ಲಿ ಸುಧೀರ್ಘವಾದ ಚರ್ಚೆ ನಡೆಯಿತು. ಈ ಸಮಯದಲ್ಲಿ ನನ್ನ ವಿರುದ್ಧ ಸಾಕಷ್ಟು ಅಪಪ್ರಚಾರಗಳು ನಡೆದವು. ಈ ಬಾರಿ ಯತ್ನಾಳ ಅವರಿಗೆ ಟಿಕೆಟ್ ದೊರೆಯುವುದಿಲ್ಲ ಎಂದು ಮಾತನಾಡತೊಡಗಿದರು. ಹಿಂದೂ ಸಮಾಜದ ಪ್ರತಿಯೊಂದು ಸಭೆ ಸಮಾರಂಭಗಳಿಗೂ ನಾನು ಹಾಜರಾಗಿರುತ್ತೇನೆ. ನನಗೆ ವಿಜಯಪುರದ ಟಿಕೆಟ್ ದೊರೆತಾಗ ನನ್ನನ್ನು ಸೋಲಿಸಲು ಕೋಟ್ಯಾಂತರ ಹಣವನ್ನು ನಮ್ಮವರೇ ಖರ್ಚು ಮಾಡಿದರು’ ಎಂದರು.
‘ಆಡಳಿತ ಪಕ್ಷದಲ್ಲಿದ್ದರೂ ಮೀಸಲಾತಿ ಹೋರಾಟಕ್ಕಿಳಿದ ನನ್ನನ್ನು ಪಕ್ಷದಿಂದ ಉಚ್ಛಾಟಿಸಲಾಗುತ್ತದೆ ಎಂದು ಸುದ್ದಿ ಮಾಡಿದರು. ಯಾವುದಕ್ಕೂ ವಿಚಿಲತನಾಗಲಿಲ್ಲ. ನಮ್ಮ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ದೊರೆಯಿತು’ ಎಂದು ಶಾಸಕ ಬಸನಗೌಡ ಪಾಟೀಲಯತ್ನಾಳ ತಿಳಿಸಿದರು.
ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಸರ್ಕಾರ ಯಾವುದೇ ಇದ್ದರೂ ನಮ್ಮ ಸಮುದಾಯಕ್ಕೆ ನ್ಯಾಯಯುತವಾದ ದೊರೆಯಬೇಕಾದ ಸೌಲಭ್ಯಕ್ಕಾಗಿ ಎಂಥ ಹೋರಾಟಕ್ಕೂ ನಾನು ಬದ್ಧ’ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಬಾಬಾಗೌಡ ಪಾಟೀಲ, ಯಮನಪ್ಪ ಕಂಚು, ಭೀಮು ಹಿಪ್ಪರಗಿ, ಗಾಯತ್ರಿ ಅಡಬಸಪ್ಪಗೋಳ, ಮಹೇಶ ಚನ್ನಂಗಿ, ವಿದ್ಯಾಧರ ಸವದಿ, ಸಿದ್ದನಗೌಡ ಪಾಟೀಲ, ಬಾಲು ನಂದೆಪ್ಪನವರ, ಶೇಖರ ನೀಲಕಂಠ, ಸಿದ್ದು ಗುಂಡಿ, ಶಿವಯ್ಯ ಹಿರೇಮಠ ಈಶ್ವರ ಯಲ್ಲಟ್ಟಿ, ಯೋಗಪ್ಪ ಸವದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.