ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದಿಂದ ಜನತಂತ್ರದ ಆಶಯ ಉಳಿಯಲು ಸಾಧ್ಯ: ಮೋಹನಕುಮಾರಿ

Last Updated 26 ಜನವರಿ 2022, 3:08 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬಲ್ಲ ಆರಂಭಿಕ ಹಂತವೇ ಚುನಾವಣಾ ಪ್ರಕ್ರಿಯೆಯಾಗಿದೆ. ಯುವ ಮತದಾರರು ಪ್ರತಿ ಚುನಾವಣೆಯ ಮತದಾನದಲ್ಲಿ ತೊಡಗಿಸಿಕೊಂಡಾಗ ಮಾತ್ರ ಪ್ರಜಾಪ್ರಭುತ್ವದ ಆಶಯಗಳು ಅರ್ಥಪೂರ್ಣವಾಗಲಿವೆ ಎಂದು ತಹಶೀಲ್ದಾರ್ ಮೋಹನಕುಮಾರಿ ಹೇಳಿದರು.

ಭಾರತ ಚುನಾವಣಾ ಆಯೋಗ, ತಾಲ್ಲೂಕು ಆಡಳಿತದ ಸಹಯೋಗದಲ್ಲಿ ನಗರದ ಡಾ.ರಾಜ್‍ಕುಮಾರ್ ಕಲಾ ಮಂದಿರದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮತದಾನದ ಮಹತ್ವ ಹಾಗೂ ಭಾರತ ಚುನಾವಣಾ ಆಯೋಗ ಸ್ಥಾಪಿಸಿದ ನೆನಪಿಗಾಗಿ 2011ರಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಮಾಡಲಾಗುತ್ತಿದೆ. ಸಾರ್ವತ್ರಿಕ ಚುನಾವಣೆಗಳಲ್ಲಿ ಶೇ 100 ಮತದಾನವಾದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಲಿದೆ ಎಂದರು.

ಚುನಾವಣೆಗಳಲ್ಲಿ ಶೇ 65 ಮತದಾನವಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಹಲವಾರು ದೇಶಗಳಲ್ಲಿ ಮತದಾನವನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ನಮ್ಮ ದೇಶದಲ್ಲಿ ಮತದಾನ ಇನ್ನೂ ಕಡ್ಡಾಯವಾಗಿಲ್ಲ. ಮತದಾನ ಮಾಡಲು ಯಾವುದೇ ತಾರತಮ್ಯವಿಲ್ಲ. 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನಕ್ಕೆ ಅರ್ಹರು ಎಂದು ಹೇಳಿದರು.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದಷ್ಟೇ ಅಲ್ಲದೇ ಮತದಾನದ ಪ್ರಾಮುಖ್ಯವನ್ನು ಅರಿಯಬೇಕಿದೆ. ಮತದಾರರ ಹೆಸರುಗಳನ್ನು ನೋಂದಣಿ ಹಾಗೂ ಪರಿಷ್ಕರಣೆಯಲ್ಲಿ ಮತಗಟ್ಟೆ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಯಾವುದೇ ಲೋಪಗಳಾಗದಂತೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮತದಾರರ ಜಾಗೃತಿಗಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಿಗೆ ಪ್ರಶಂಸಾ ಪತ್ರ ನೀಡಲಾಯಿತು. ಚುನಾವಣಾ ಶಾಖೆಯ ಸಿಬ್ಬಂದಿ ವಿ. ರವಿಕುಮಾರ್ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ನೂತನವಾಗಿ ಹೆಸರು ನೋಂದಾಯಿಸಿದ ಮತದಾರರಿಗೆ ಗುರುತಿನ ಚೀಟಿ, ಮತದಾನದ ಕುರಿತಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಚುನಾವಣಾ ಶಿರಸ್ತೇದಾರ್ ಕೆ. ಕಿರಣ್‌ಕುಮಾರ್, ಕೊಂಗಾಡಿಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಿ.ಎನ್. ಬಾಬು, ಪ್ರಾಂಶುಪಾಲ ಆನಂದಮೂರ್ತಿ, ಸರ್ಕಲ್ ಇನ್‌ಸ್ಪೆಕ್ಟರ್‌ ಎಂ.ಬಿ. ನವೀನ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಸೋಮಶೇಖರ್, ಸಿಡಿಪಿಒ ಅನಿತಾಲಕ್ಷ್ಮೀ, ನಗರಸಭೆ ಚುನಾವಣಾ ಶಾಖೆಯ ಸುಲ್ತಾನ್, ನಗರ ಠಾಣೆ ಸಬ್ ಇನ್‌ಸ್ಪೆಕ್ಟರ್‌ ಗೋವಿಂದ್, ಪ್ರಾಧ್ಯಾಪಕ ಸದಾಶಿವರಾಮಚಂದ್ರಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT