ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರಕ್ಕಾಗಿ ಹೋರಾಟ; ಅದರಲ್ಲಿ ರಾಜಕೀಯ ಇಲ್ಲ: ಸಚಿವ ಕೆ.ಎಚ್‌. ಮುನಿಯಪ್ಪ

Published 26 ಮಾರ್ಚ್ 2024, 5:08 IST
Last Updated 26 ಮಾರ್ಚ್ 2024, 5:08 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ರಾಜ್ಯದ ಬರ ನಿವಾರಿಸುವ ನಿಟ್ಟಿನಲ್ಲಿ ನ್ಯಾಯಯುತವಾಗಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ  ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದೇವೆಯೇ ಹೊರತು ರಾಜಕೀಯ ಕಾರಣಕ್ಕಾಗಿ ಅಲ್ಲ ಎಂದು ಸಚಿವ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ. 

ಹೂವಿನ ಕರಗದ ಅಂಗವಾಗಿ ಇಲ್ಲಿಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಸೋಮವಾರ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ‘ರಾಜಕೀಯ ತಂತ್ರಗಾರಿಕೆ ಬಿಜೆಪಿಯವರಿಗೆ ಮಾತ್ರ ಗೊತ್ತಿದೆ. ನಾವು ನ್ಯಾಯ ಕೇಳುತ್ತಿದ್ದೇವೆ. ನ್ಯಾಯಾಂಗದ ವ್ಯವಸ್ಥೆಯಲ್ಲಿ ನಂಬಿಕೆ ಇದೆ’ ಎಂದರು.

ಬರ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಮತ್ತು ಸಚಿವರು ಹಲವು ಬಾರಿ ಕೇಂದ್ರಕ್ಕೆ ಮನವಿ ಸಲ್ಲಿಸಿದರೂ ಸ್ಪ‍ಂದನೆ ಸಿಗಲಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಪ್ರತಿನಿಧಿಗಳು ಸಿ.ಎಂ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು. ಇದಕ್ಕೂ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದೇವೆ ಎಂದು ತಿಳಿಸಿದರು.

ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಆಯಾ ರಾಜ್ಯಗಳಿಗೆ ಸೇರಬೇಕಾದ ಪರಿಹಾರ ಬಿಡುಗಡೆ ಮಾಡಬೇಕಿರುವುದು ಕೇಂದ್ರ ಸರ್ಕಾರದ ಹೊಣೆ. ಆದರೆ, ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದ್ದರೂ ಕೇಂದ್ರ ಸರ್ಕಾರ ರಾಜ್ಯದ ಕಡೆಗೆ ಗಮನಹರಿಸುತ್ತಿಲ್ಲ ಎಂದು ದೂರಿದರು.

ಕೋಲಾರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಗೊಂದಲ ಇನ್ನೆರಡು ದಿನಗಳಲ್ಲಿ ಬಗೆಹರಿಯಲಿದೆ ಎಂದು
ತಿಳಿಸಿದರು.

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಬಂಧನಕ್ಕೆ ತೀವ್ರ ವ್ಯಕ್ತಪಡಿಸಿದ ಅವರು, ‘ಸಂವಿಧಾನವನ್ನು ಅಣಕಿಸುವ ರೀತಿಯಲ್ಲಿ, ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಕೇಜ್ರಿವಾಲ್‌ ಬಂಧಿಸಿರುವುದು ಖಂಡನೀಯ. ಈ ಮೂಲಕ ತನ್ನ ಹಿಡಿತ ಸಾಧಿಸಲು ಬಿಜೆಪಿ ಹೊರಟಿದೆ. ಇಂತಹ ದಬ್ಬಾಳಿಕೆ ಸಹಿಸುವುದಿಲ್ಲ. ಕೇಂದ್ರದ ನಡೆಯ ವಿರುದ್ಧ ನಾವು ಹೋರಾಡುತ್ತೇವೆ’ ಎಂದು
ಹೇಳಿದರು.

‘ಕೈ’ ಹಿಡಿಯಲಿದೆ ‘ಗ್ಯಾರಂಟಿ’
‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಪಂಚಗ್ಯಾರಂಟಿ ಯೋಜನೆಗಳೇ ಲೋಕಸಭಾ ಚುನಾವಣೆಯಲ್ಲಿ ನಮ್ಮನ್ನು ಕೈ ಹಿಡಿಯಲಿದ್ದು 28 ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು. ‘ಸಮಾಜದ ಕಟ್ಟಕಡೆಯ ವ್ಯಕ್ತಿಗಳು ರೈತರಿಗೆ ಮಹಿಳೆಯರಿಗೆ ಯುವಕರಿಗೆ ಹಲವು ಕಾರ್ಯಕ್ರಮಗಳು ಕೊಟ್ಟಿದ್ದೇವೆ. ನಮ್ಮ ಕಾರ್ಯಕ್ರಮಗಳನ್ನು ಜನ ಮೆಚ್ಚಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT