ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ನಿಂದ ನೆಲಕಚ್ಚಿದ ಪುಷ್ಪಕೃಷಿ

ಬಂಡವಾಳವೂ ಕೈಗೆ ಬಾರದು; ಹೊಲದಲ್ಲೇ ಬೆಳೆ ಚೆಲ್ಲಿರುವ ರೈತರು
Last Updated 3 ಮೇ 2021, 3:54 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ಹಲವು ಗ್ರಾಮಗಳು ಪುಷ್ಪಕೃಷಿಗೆ ಪ್ರಸಿದ್ಧಿಯಾಗಿವೆ. ಹೂವಿನ ಬೆಳೆಗಳನ್ನು ಬೆಳೆದು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಂಡ ನೂರಾರು ಕುಟುಂಬಗಳು ಆನೇಕಲ್‌ ತಾಲ್ಲೂಕಿನಲ್ಲಿವೆ. ಆದರೆ ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಲೆಕುಸಿತದಿಂದಾಗಿ ಪುಷ್ಪಕೃಷಿಯನ್ನೇ ನಂಬಿದ್ದ ನೂರಾರು ಮಂದಿ ರೈತರು ಹಾಕಿದ್ದ ಬಂಡವಾಳವು ಕೈಗೆ ಬಾರದಂತಾಗಿರುವುದರಿಂದ ಕೈಚೆಲ್ಲಿ ಕುಳಿತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆನೇಕಲ್‌ ತಾಲ್ಲೂಕಿನ ಕರ್ಪೂರು, ಮಾಯಸಂದ್ರ, ಹಳೇಹಳ್ಳಿ, ದಾಸನಪುರ, ಭಕ್ತಿಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಚೆಂಡು ಹೂವು, ಗುಲಾಬಿ, ಸೇವಂತಿಗೆ ಹೂವುಗಳ ಬೆಳೆಗಳನ್ನು ರೈತರು ಬೆಳೆಯುತ್ತಿದ್ದರು. ಪ್ರತಿ ವರ್ಷ ಈ ಬೆಳೆಗಳಿಂದ ಉತ್ತಮ ಲಾಭವನ್ನು ಗಳಿಸುತ್ತಿದ್ದರು. ಆದರೆ ಕಳೆದ ವರ್ಷ ಮತ್ತು ಈ ವರ್ಷ ಎರಡು ವರ್ಷಗಳಲ್ಲೂ ಲಾಕ್‌ಡೌನ್‌ ಮತ್ತು ಕೊರೊನಾ ಹಾವಳಿಯಿಂದಾಗಿ ಹೂವುಗಳ ಬೆಲೆಗಳು ಪಾತಾಳ ಮುಟ್ಟಿದ್ದು ರೈತರು ಸಾಲಮಾಡಿ ಬೆಳೆದಿದ್ದಿ ಬೆಳೆಗಳು ಬೆಲೆಯಿಲ್ಲದೇ ತೋಟದಲ್ಲಿಯೇ ಕೊಳೆಯುವಂತಾಗಿವೆ.

‘ರೈತರು ಬೆಳೆಗಳನ್ನು ಬೆಳೆಯಬೇಕಾದರೆ ತಮ್ಮದೇ ಆದ ಲೆಕ್ಕಾಚಾರಗಳನ್ನು ಮಾಡಿರುತ್ತಾರೆ. ಹಬ್ಬಗಳು, ಮದುವೆ, ಜಾತ್ರೆಗಳ ದಿನಗಳನ್ನು ಗುರುತಿಸಿ ಆ ಅವಧಿಗೆ ಹೂವಿನ ಫಸಲು ಬರುವಂತೆ ಬೆಳೆಗಳನ್ನು ನಾಟಿ ಮಾಡಿರುತ್ತಾರೆ. ಸಾಮಾನ್ಯವಾಗಿ ಏಪ್ರಿಲ್‌, ಮೇ ತಿಂಗಳು ಹಬ್ಬ ಹರಿದಿನಗಳು, ಜಾತ್ರೆ, ಮದುವೆಗಳ ಸುಗ್ಗಿ. ಈ ದಿನಗಳಿಗನುಗುಣಮವಾಗಿ ಬೆಳೆಗಳನ್ನು ನಾಟಿ ಮಾಡಿದ್ದರು. ಅದರಂತೆ ಬೇಸಿಗೆ ಕಾಲದಲ್ಲಿ ನೀರಿನ ಅಭಾವದ ನಡುವೆಯೂ ಉತ್ತಮ ಬೆಳೆಗಳನ್ನು ಬೆಳೆದು ತೋಟದ ತುಂಬ ಹೂವು ತುಂಬಿಕೊಂಡಿದೆ. ಆದರೆ ಮಾರುಕಟ್ಟೆಯಲ್ಲಿ ಹೂವುಗಳನ್ನು ಕೇಳುವವರೇ ಇಲ್ಲ. ಹಾಗಾಗಿ ಚೆಂಡು ಹೂವಿನ ಬೆಳೆಗಳನ್ನು ಕೊಯ್ಲು ಮಾಡದೇ ತೋಟಗಳಲ್ಲಿಯೇ ಬಿಟ್ಟಿದ್ದಾರೆ. ಹೊಸದಾಗಿ ನಾಟಿ ಮಾಡಿರುವ ಮೊದಲ ಬೆಳೆ ಪಡೆಯುತ್ತಿರುವ ರೈತರು ಹೂವುಗಳನ್ನು ಕಿತ್ತು ರಸ್ತೆಗಳಲ್ಲಿ ಸುರಿಯುತ್ತಿದ್ದಾರೆ. ತಿಪ್ಪೆಗೆ ಎಸೆಯುತ್ತಿದ್ದಾರೆ. ಹೂವುಗಳನ್ನು ರಸ್ತೆಗೆಸೆಯಲೂ ಸಹ ಕೂಲಿ ನೀಡಬೇಕಾದ ಪರಿಸ್ಥಿತಿ ಬಂದಿರುವುದು ದುರಂತವಾಗಿದೆ’ ಎಂದು ರೈತ ಮುನಿರಾಜು ಅಲವತ್ತುಕೊಂಡರು.

ಬೇಸಿಗೆ ಕಾಲದಲ್ಲಿ ಭೂಮಿಯಿಂದ ಬೆಳೆ ತೆಗೆಯಬೇಕಾದರೆ ಹರಸಾಹಸ ಮಾಡಬೇಕು. ಮಗುವಿನಂತೆ ಬೆಳೆಗಳನ್ನು ನೋಡಿಕೊಳ್ಳಬೇಕು. ಇಷ್ಟೊಂದು ಕಷ್ಟ ಪಟ್ಟು ಬೆಳೆದ ಬೆಳೆಗಳಿಗೆ ಬೆಲೆಯಿಲ್ಲದಂತಾಗಿದೆ ಎಂದು ಕರ್ಪೂರಿನ ಸಂಪಂಗಿ ಹೇಳುತ್ತಾರೆ.

ಕೊರೊನಾ ಹಲವಾರು ಜನರ ಬದುಕನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದಂತೆ ರೈತರ ಬದುಕಿನಲ್ಲೂ ಸಂಕಷ್ಟವನ್ನು ತಂದೊಡ್ಡಿದೆ. ಬ್ಯಾಂಕ್‌ಗಳ ಮೂಲಕ ಸಾಲ ಮಾಡಿ ಬೆಳೆ ಬೆಳೆದು ಸಾಲ ತೀರಿಸಬೇಕೆಂಬ ರೈತರ ಆಸೆಗೆ ತಣ್ಣೀರೆರೆಚಿದೆ ಎಂದು ಭಕ್ತಿಪುರದ ರೈತ ಮೂರ್ತಿ ಅವರು ಮಾತಿನಲ್ಲಿನ ನೋವು ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT