ಬುಧವಾರ, ಏಪ್ರಿಲ್ 8, 2020
19 °C

ನಮ್ಮ ನಗರ - ನಮ್ಮ ಧ್ವನಿ: ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇಚ್ಛಾಸಕ್ತಿಯೇ ಕೊರತೆ

ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

prajavani

ದೊಡ್ಡಬಳ್ಳಾಪುರ: ‘ನಗರದಲ್ಲಿನ ಮುಖ್ಯರಸ್ತೆ ಸೇರಿದಂತೆ ಅತ್ಯಂತ ಹೆಚ್ಚು ಜನ ಸಂದಣಿ ಇರುವ ರಸ್ತೆಗಳ ವಿಸ್ತರಣೆ ನಡೆಯುತ್ತದೆ. ಸಂಚಾರ ದಟ್ಟಣೆ ಕೊಂಚವಾದರೂ ಕಡಿಮೆಯಾಗುತ್ತದೆ’ ಎನ್ನುವ ಮಾತುಗಳು ಸುಮಾರು ನಾಲ್ಕು ದಶಕಗಳಿಂದ ಬರೀ ಕೇಳಿಬರುತ್ತಿದೆ ಅಷ್ಟೆ.

ಜನಪ್ರತಿನಿಧಿಗಳ ‘ಮತ’ಗಳ ಲಾಭ-ನಷ್ಟದ ಲೆಕ್ಕಾಚಾರದ ಫಲವಾಗಿ ಟ್ರಾಫಿಕ್‌ ಜಾಮ್‌ನಿಂದ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಮಕ್ಕಳನ್ನು ಶಾಲೆಗಳಿಗೆ ಕರೆದುಕೊಂಡು ಹೋಗುವ ಪೋಷಕರ ಸಮಯ ರಸ್ತೆ ಮೇಲೆಯೇ ಕಳೆದು ಹೋಗುತ್ತಿದೆ.

ನಗರದ ಹೃದಯ ಭಾಗದಲ್ಲಿನ ಕೊಂಗಾಡಿಯಪ್ಪ ಮುಖ್ಯರಸ್ತೆ, ತಾಲ್ಲೂಕು ಕಚೇರಿಯಿಂದ ರುಮಾಲೆ ಛತ್ರದ ಮೂಲಕ ಡಿ.ಕ್ರಾಸ್‌ ರಸ್ತೆಯ ಗಗನಾರ್ಯಮಠದ ರಸ್ತೆ, ಮುಕ್ತಾಂಬಿಕ ರಸ್ತೆ ಇವುಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ನಿರ್ಮಾಣವಾಗಿರುವುದು ಒಂದು ಶತಮಾನಗಳ ಹಿಂದೆ. ಹೀಗಾಗಿ ಅಂದಿನ ಕಾಲದ ಜನ ಸಂಖ್ಯೆ, ವಾಹನಗಳ ಅಗತ್ಯಗಳಿಗೆ ಅನುಗುಣವಾಗಿ ರಸ್ತೆಗಳು ನಿರ್ಮಾಣವಾಗಿವೆ. ಇದೇ ರಸ್ತೆಗಳ ಬದಿಯಲ್ಲಿ ಅಂದಿನ ಕಾಲಕ್ಕೆ ವಾಣಿಜ್ಯ ಚಟುವಟಿಕೆಗಳಿಗಾಗಿ ಅಂಗಡಿ ಮಳಿಗೆಗಳು ತಲೆ ಎತ್ತಿವೆ. ಆದರೆ ಇಂದು ವಾಹನ, ವಾಣಿಜ್ಯ ಮಳಿಗೆ, ಜನ ಸಂಖ್ಯೆ ಎಲ್ಲವೂ ಸಹ ಸುಮಾರು 8 ರಿಂದ 10 ಪಟ್ಟು ಹೆಚ್ಚಾಗಿದೆ.

2011ರ ಜನ ಗಣತಿ ಪ್ರಕಾರ 98 ಸಾವಿರ ಜನಸಂಖ್ಯೆ ಇತ್ತು. ಈಗಿನ ಜನಸಂಖ್ಯೆ ಸುಮಾರು 1.5 ಲಕ್ಷ ಮುಟ್ಟಿದೆ. ಆದರೆ ರಸ್ತೆಗಳು ಮಾತ್ರ ಶತಮಾನಗಳ ಹಿಂದೆ ಇದ್ದಷ್ಟೇ ಇವೆ. ಹೀಗಾದರೆ ಜನರ ಓಡಾಟವಾದರೂ ಹೇಗೆ ಸಾಧ್ಯ ಎನ್ನುವ ಪ್ರಶ್ನೆಯೊಂದಿಗೆ ಪ್ರತಿ ನಿತ್ಯ ಸಾರ್ವಜನಿಕರು ಜನ ಪ್ರತಿನಿಧಿಗಳಿಗೆ ಹಿಡಿ ಶಾಪಹಾಕುತ್ತ ತಿರುಗಾಡುತ್ತಿದ್ದಾರೆ.

ಇನ್ನು ಸಾರ್ವಜನಿಕರ ದಿನ ನಿತ್ಯದ ಒಡಾಡುವ ಪ್ರಶ್ನೆ ಒಂದು ಕಡೆಯಾದರೆ, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಪಾಡಂತು ಹೇಳತೀರದು. ಸಂಜೆ 4ರಿಂದ ನಗರದಲ್ಲಿ ಆರಂಭವಾಗುವ ಸಂಚಾರ ದಟ್ಟಣೆ ಮತ್ತೆ ಕೊನೆಗೊಳ್ಳುವುದು ರಾತ್ರಿ 8ರ ನಂತರ. ನಗರದಲ್ಲಿನ ಸುಮಾರು 25ಕ್ಕೂ ಹೆಚ್ಚಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳ 20 ಸಾವಿರ ಜನ ವಿದ್ಯಾರ್ಥಿಗಳು ಸಂಜೆ 4 ಗಂಟೆಗೆ ಏಕ ಕಾಲಕ್ಕೆ ಶಾಲಾ, ಕಾಲೇಜುಗಳ ತರಗತಿಗಳಿಂದ ರಸ್ತೆಗೆ ಇಳಿಯುತ್ತಾರೆ.

ಸಾರ್ವಜನಿಕರ ಹಾಗೂ ವಾಹನಗಳ ಓಡಾಟಕ್ಕೆ ಕಷ್ಟವಾಗಿರುವ ರಸ್ತೆಗಳಿಗೆ ಸಂಜೆ ಒಮ್ಮೆಲೆಗೆ 20 ಸಾವಿರ ಜನ ವಿದ್ಯಾರ್ಥಿಗಳು, ಈ ವಿದ್ಯಾರ್ಥಿಗಳನ್ನು ಮನೆಗೆ ಕರೆದುಕೊಂಡು ಹೋಗಲು ಬರುವ ಪೋಷಕರ ಹಾಗೂ ಶಾಲಾ ವಾಹನಗಳು ರಸ್ತೆಗೆ ಬಂದರೆ ಅದೆಷ್ಟು ವಿಸ್ತಾರವಾದ ರಸ್ತೆಗಳು ಇದ್ದರು ಸಾಲದಾಗುತ್ತದೆ. ಇಂಥ ಸ್ಥಿತಿಯಲ್ಲಿ ಶತಮಾನಗಳ ಹಿಂದೆ ನಿರ್ಮಾಣವಾಗಿರುವ 10 ರಿಂದ 20 ಅಡಿಗಳಷ್ಟು ಅಗಲದ ರಸ್ತೆಗಳಲ್ಲಿ ಸಂಚರಿಸುವುದೇ ದೊಡ್ಡ ಸಾಹಸವಾಗಿದೆ. ಹೀಗಾಗಿಯೇ ‘ದೊಡ್ಡಬಳ್ಳಾಪುರ ನಗರದಲ್ಲಿ ದ್ವಿಚಕ್ರ ಅಥವಾ ಮತ್ಯಾವುದೇ ವಾಹನವನ್ನು ಯಾರಿಗೂ ತೊಂದರೆ ಇಲ್ಲದಂತೆ ಚಲಾಯಿಸಿದರೆ ಪ್ರಪಂಚದ ಯಾವುದೇ ಭಾಗದಲ್ಲೂ ವಾಹನ ಚಲಾಯಿಸುವ ಪರವಾನಿಗಿಯನ್ನು ಸುಲಭವಾಗಿ ಪಡೆಯಬಹುದು’ ಎನ್ನುವ ಮಾತು ಇದೆ.

ಸಂಚಾರ ದಟ್ಟಣೆಗೆ ಶಾಲಾ,ಕಾಲೇಜುಗಳು ಒಂದು ರೀತಿಯ ಕಾರಣವಾದರೆ, ಮತ್ತೊಂದೆಡೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕೈಗಾರಿಕಾ ಪ್ರದೇಶಕ್ಕೆ ಹೋಗಲು ಬರುವ ಕಾರ್ಮಿಕರ ಕೊಡುಗೆಯೂ ಇದೆ.

ಪರ್ಯಾಯಗಳು ಏನು?

ಇಚ್ಚಾಸಕ್ತಿ ಇಲ್ಲದ ಜನಪ್ರತಿನಿಧಿಗಳ ಮಾತುಗಳನ್ನು ಗಮನಿಸಿದರೆ ಸದ್ಯದ ಮಟ್ಟಿಗಂತು ನಗರದಲ್ಲಿ ಕಿರಿದಾಗಿರುವ ರಸ್ತೆಗಳ ವಿಸ್ತರಣೆ ಆಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಪೊಲೀಸರು ಹಾಗೂ ಅಧಿಕಾರಿಗಳಾದರೂ ಭಿನ್ನವಾಗಿ ಚಿಂತನೆ ನಡೆಸಿದರೆ ಇರುವ ರಸ್ತೆಗಳಲ್ಲೇ ಕನಿಷ್ಟ ಮಟ್ಟದಲ್ಲಾದರೂ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಹತ್ತಾರು ಪರ್ಯಾಯ ಮಾರ್ಗಗಳು ಇವೆ.

1.ನಗರದಲ್ಲಿನ ವಾಣಿಜ್ಯ ಮಳಿಗೆಗೆ ಸರಕುಗಳನ್ನು ಹೊತ್ತು ಬರುವ ಲಾರಿ ಸೇರಿದಂತೆ ಸರಕು ಸಾಗಾಣಿಕೆಯ ವಾಹನಗಳನ್ನು ಬೆಳಿಗ್ಗೆ 8 ಗಂಟೆಯ ಒಳಗೆ, ರಾತ್ರಿ 9ರ ನಂತರ ಮಾತ್ರ ನಗರದ ಒಳಗೆ ಅಂದರೆ ಕೃಷ್ಣರಾಜೇಂದ್ರ ಮಾರುಕಟ್ಟೆ ಪ್ರದೇಶ, ಮುಖ್ಯರಸ್ತೆಗಳಲ್ಲಿ ಪ್ರವೇಶ ಮಾಡುವುದನ್ನು ಈ ಹಿಂದೆ ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ದಿನವಿಡೀ ಸರಕು ಸಾಗಾಣಿಕೆ ವಾಹನಗಳು ನಗರದ ಒಳಗೆ ತಿರುಗಾಡುತ್ತಲೇ ಇರುತ್ತವೆ. ಇವುಗಳಿಗೆ ಕಡ್ಡಾಯವಾಗಿ ಕಡಿವಾಣ ಹಾಕಬೇಕು.

2. ನಗರದ ಪ್ರಮುಖ ವೃತ್ತಗಳಾದ ತೇರಿನಬೀದಿ, ಕೊಂಗಾಡಿಯಪ್ಪ ಮುಖ್ಯ ರಸ್ತೆಯ ಚೌಕದ ವೃತ್ತ, ರಂಗಪ್ಪ ವೃತ್ತ, ರೈಲ್ವೆ ಸ್ಟೇಷನ್‌ ವೃತ್ತ, ಮುಗುವಾಳಪ್ಪ ವೃತ್ತ. ಸೌಂದರ್ಯ ಮಹಲ್‌ ವೃತ್ತಗಳಲ್ಲಿಯೇ ಸಂಜೆ ವೇಳೆ ಅತಿ ಹೆಚ್ಚು ಶಾಲಾ, ಕಾಲೇಜು ವಿದ್ಯಾರ್ಥಿಗಳು ಓಡಾಡುವುದು. ಈ ವೃತ್ತಗಳಲ್ಲಿ ಸಂಜೆ ವೇಳೆ ಪೊಲೀಸ್‌ ಗಸ್ತು ಹಾಕಬೇಕು.

3. ಬೆಳಗಿನ ವೇಳೆ ಶಾಲಾ, ಕಾಲೇಜು ಆರಂಭವಾಗುವ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ಒಮ್ಮೆಲೆ ಬರುವುದಿಲ್ಲ. ಹೀಗಾಗಿ ಸಂಚಾರ ದಟ್ಟಣೆ ಕಡಿಮೆಯಾಗಿರುತ್ತದೆ. ಆದರೆ ಸಂಜೆ 4 ಗಂಟೆಗೆ ಎಲ್ಲಾ ಶಾಲೆಗಳು ಸಹ ಒಂದೇ ಸಮಯಕ್ಕೆ ಬಿಡುವುದರಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ಪೊಲೀಸ್‌ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಮುಂದಾಳತ್ವದಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳವರ ಒಂದು ಸಭೆ ನಡೆಸಿ ಸಂಜೆ 3.30ಕ್ಕೆ ಕೆಲವು ಶಾಲೆಗಳು, 4.30ರ ನಂತರ ಮತ್ತಷ್ಟು ಶಾಲೆಗಳ ತರಗತಿಗಳನ್ನು ಬಿಡುವಂತೆ ವೇಳೆ ನಿಗದಿಪಡಿಸಬೇಕು.

4. ನಗರದ ಪ್ರಮುಖ ರಸ್ತೆಗಳ ಒಂದೊಂದು ಬದಿಯಲ್ಲಿ ಒಂದೊಂದು ದಿನ ಬೈಕ್‌ಗಳ ನಿಲುಗಡೆ ಮಾಡುವಂತೆ ಕಡ್ಡಾಯ ಮಾಡಲಾಗಿತ್ತು. ಆದರೆ ಈ ಪದ್ದತಿ ಈಗ ಕಡ್ಡಾಯವಾಗಿ ಪಾಲನೆಯಾಗುತ್ತಿಲ್ಲ. ಇನ್ನು ಬಸ್‌ ನಿಲ್ದಾಣದಿಂದ ಸೌಂದರ್ಯ ಮಹಲ್‌ ವೃತ್ತದ ಮೂಲಕ ಮುಕ್ತಾಂಬಿಕಾ ರಸ್ತೆಯ ಕಡೆಗೆ, ಡಿ.ಕ್ರಾಸ್‌ ರಸ್ತೆಯ ರುಮಾಲೆ ಛತ್ರ ವೃತ್ತದ ಮೂಲಕ ತಾಲ್ಲೂಕು ಕಚೇರಿ ಕಡೆಗೆ ಆಟೋ ( ಬೈಕ್‌ ಹೊರತುಪಡಿಸಿ) ಸೇರಿದಂತೆ ಯಾವುದೇ ವಾಹನಗಳು ಬರದಂತೆ ಏಕ ಮುಖ ಸಂಚಾರವನ್ನು ಜಾರಿಗೆ ತರಲಾಗಿತ್ತು. ಆದರೆ ಈ ಯಾವ ನಿಯಮಗಳು ಕಟ್ಟು ನಿಟ್ಟಾಗಿ ಪಾಲನೆಯಾಗುತ್ತಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು