ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಮ್ಮನ ಕಿತ್ತೂರು: ಭುವಿಯಲ್ಲಿ ಮಳೆ ಎಳೆದ ಹಸಿರು ತೇರು...

ಚನ್ನಮ್ಮನ ಕಿತ್ತೂರು ತಾಲ್ಲೂಕಿನಲ್ಲಿ ಶೇ 90ರಷ್ಟು ಬಿತ್ತನೆ, ಕೃಷಿಕರ ಮೊಗದಲ್ಲಿ ಮಂದಹಾಸ
Published 15 ಜೂನ್ 2024, 5:04 IST
Last Updated 15 ಜೂನ್ 2024, 5:04 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಮೇ ಕೊನೆಯ ಮತ್ತು ಜೂನ್ ಮೊದಲ ವಾರದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಶೇ 90ರಷ್ಟು ಜಮೀನಿನಲ್ಲಿ ರೈತರು ವಿವಿಧ ಬೆಳೆಗಳನ್ನು ನಾಟಿ ಮಾಡಿದ್ದಾರೆ. ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆದಿವೆ. ಕಣ್ಣು ಹಾಯಿಸಿದಷ್ಟು ಹಚ್ಚ ಹಸಿರು ಪೈರು ಮನಸ್ಸಿಗೆ ಮುದ ನೀಡುವಂತಿದೆ.

‘ಪೈರಿನ ಗದ್ದೆಯಲ್ಲಿ ಬೆಳೆದಿರುವ ಕಸ ಕೀಳುವುದು, ನಾಟಿ ಮಾಡಿದ ಮತ್ತು ಕುಳೆ ಕಬ್ಬಿಗೆ ರಸಗೊಬ್ಬರ ಕಟ್ಟುವುದು, ಉಳಿದ ಭೂಮಿ ಬಿತ್ತನೆಗೆ ಸಿದ್ಧಪಡಿಸುವ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ’ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸುತ್ತವೆ.

ಸೋಯಾಬೀನ್, ಭತ್ತ, ಗೋವಿನಜೋಳ ಬಿತ್ತನೆ ಮಾಡಲಾಗಿದೆ. ಕಳೆದ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕಟಾವು ಮಾಡಿದ ಕುಳೆ ಕಬ್ಬು ಆಳೆತ್ತರ ಬೆಳೆದಿದ್ದನ್ನು ಬಹುತೇಕ ಕಡೆ ಕಾಣಬಹುದಾಗಿದೆ.

ಕೃಷಿ ಚಟುವಟಿಕೆಗೆ ಮಳೆರಾಯ ಈಗ ಸ್ವಲ್ಪ ಬಿಡುವು ನೀಡಿದ್ದಾನೆ. ಇದರಿಂದ ರೈತರಿಗೆ ಅನುಕೂಲವಾಗಿದೆ. ಬಿತ್ತನೆ ಮಾಡಿದ ಬೀಜಗಳು ನಿರೀಕ್ಷೆಗೆ ತಕ್ಕ ಹಾಗೆ ಮೊಳಕೆ ಒಡೆದು ಬೆಳೆಯುತ್ತಿರುವುದು ರೈತನ ಮೊಗದಲ್ಲಿ ಹೆಚ್ಚು ಖುಷಿ ತಂದಿದೆ.

ಶೇ 90ರಷ್ಟು ಬಿತ್ತನೆ: ‘ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಸುಮಾರು 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 6 ಸಾವಿರ ಹೆಕ್ಟೇರ್‌ನಲ್ಲಿ ಸೋಯಾಬೀನ್, 4 ಸಾವಿರ ಹೆಕ್ಟೇರ್‌ನಲ್ಲಿ ಗೋವಿನಜೋಳ, 2 ಸಾವಿರ ಹೆಕ್ಟೇರ್‌ನಲ್ಲಿ ಭತ್ತ, ಉಳಿದ ಪ್ರದೇಶದಲ್ಲಿ ಹತ್ತಿ, ಇತರೆ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತಿದೆ’ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಂಜುನಾಥ ಕೆಂಚರಾಹುತ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸೋಯಾಬೀನ್, ಗೋವಿನಜೋಳ ಬಿತ್ತನೆಗೆ ಡಿಎಪಿಗಿಂತ ನೈಟ್ರೋಜನ್, ಪಾಸ್ಪರಸ್, ಪೋಟ್ಯಾಸಿಯಂ ಒಳಗೊಂಡಿರುವ 10-26 ರಸಗೊಬ್ಬರವನ್ನು ರೈತರು ಬಳಸುವುದು ಉತ್ತಮ
ಮಂಜುನಾಥ ಕೆಂಚರಾಹುತ್ರೈತ ಸಂಪರ್ಕ ಕೇಂದ್ರದ ಅಧಿಕಾರಿ, ಕಿತ್ತೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT