ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಕಾಂಗ್ರೆಸ್ ಭಿಕ್ಷಾಟನೆ!

ರಾಜ್ಯ ಸರ್ಕಾರದ ವಿರುದ್ಧ ಮುಖಂಡರ ಆಕ್ರೋಶ
Last Updated 1 ಮಾರ್ಚ್ 2020, 11:41 IST
ಅಕ್ಷರ ಗಾತ್ರ

ಅಥಣಿ:ನೆರೆ ಸಂತ್ರಸ್ತರ ಕಣ್ಣೀರು ಒರೆಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದುಆರೋಪಿಸಿರುವ ಕಾಂಗ್ರೆಸ್ ಪ್ರವಾಹದಿಂದ ಬದುಕು ಕಳೆದುಕೊಂಡಿರುವವರ ನೆರವಿಗಾಗಿ‘ಭಿಕ್ಷಾಯಾತ್ರೆ ಅಭಿಯಾನ’ ಕಾರ್ಯಕ್ರಮ ಆರಂಭಿಸಿದೆ.

ಭಾನುವಾರ ಇಲ್ಲಿ ಸಂತ್ರಸ್ತರಿಗಾಗಿ ನಡೆದ ‘ಭಿಕ್ಷಾಯಾತ್ರೆ ಅಭಿಯಾನ’ ಕಾರ್ಯಕ್ರಮದಲ್ಲಿ ಮಾತನಾಡಿದಕ್ರಾಂಗೆಸ್‌ ಮುಖಂಡ ಗಜಾನನ ಮಂಗಸೂಳಿ, ನೆರೆ ಸಂತ್ರಸ್ತರ ಕಣ್ಣೀರು ಒರೆಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ತಾಲ್ಲೂಕಿನಲ್ಲಿ ಕೃಷ್ಣಾ ನದಿ ಮಹಾಪೂರದಿಂದ ಹಾನಿಗೆ ಒಳಗಾದ ಒಂದು ಗ್ರಾಮಕ್ಕೂ ಪರಿಹಾರ ಬಂದಿಲ್ಲ’ ಎಂದು ದೂರಿದರು.

‘ಹೋದ ವರ್ಷದ ಆಗಸ್ಟ್‌ ತಿಂಗಳಲ್ಲಿ ಉಂಟಾದ ಪ್ರವಾಹದಿಂದ ಜನರ ಬದುಕು ಬೀದಿಗೆ ಬಂದಿದೆ. ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಮೃತ ಕುಟುಂಬಗಳಿಗೆ ಪರಿಹಾರ ನೀಡಬೇಕು ಎನ್ನುವ ಕರುಣೆಯೂ ಸರ್ಕಾರಕ್ಕೆ ಇಲ್ಲ. ಹೀಗಾಗಿ, ನಾವು ಭಿಕ್ಷಾಟನೆ ಮಾಡಿ ಸಂತ್ರಸ್ತರಿಗೆ ನೆರವಾಗಲು ಮುಂದಾಗಿದ್ದೇವೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು, ಕೂಡಲೇ ಪರಿಹಾರ ಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಅಥಣಿ ಬ್ಲಾಕ್‌ ಅಧ್ಯಕ್ಷ ಸಿದ್ದಾರ್ಥ ಶಿಂಗೆ ಮಾತನಾಡಿ, ‘ಸರ್ಕಾರವು ಆರ್ಥಿಕವಾಗಿ ಮತ್ತು ನೈತಿಕವಾಗಿ ದಿವಾಳಿಯಾಗಿದೆ. ಅಧಿಕಾರದಲ್ಲಿರುವ ಈ ಸರ್ಕಾರಕ್ಕೆ ನೈತಿಕತೆ ಇಲ್ಲ. ಆಪರೇಷನ್‌ ಕಮಲದ ಮೂಲಕ ಕೆಲವು ಶಾಸಕರನ್ನು ತಮ್ಮತ್ತ ಸೆಳೆದುಕೊಂಡು, ಉಪ ಚುನಾವಣೆಯಲ್ಲಿ ಸುಳ್ಳು ಭರವಸೆ ಕೊಟ್ಟು ಜನರನ್ನು ನಂಬಿಸಿದರು. ಈಗ, ಆ ಯಾವುದೇ ಭರವಸೆ ಈಡೇರಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪೂರ್ಣ ವಿಫಲವಾಗಿದ್ದಾರೆ’ ಎಂದು ಆರೋಪಿಸಿದರು.

‘ಉಪಚುನಾವಣೆ ನಂತರ ಇಲ್ಲಿನ ಶಾಸಕರಾದ ಮಹೇಶ ಕುಮಠಳ್ಳಿ ಕ್ಷೇತ್ರದಲ್ಲಿ ಇರಲೇ ಇಲ್ಲ. ಸಚಿವ ಸ್ಥಾನ ಪಡೆಯುವುದಕ್ಕಾಗಿ ಬೆಂಗಳೂರು, ದೆಹಲಿ ಅಲೆದಾಡಿದರು. ಆದರೆ, ಮಂತ್ರಿಯಾಗಲು ಸಾಧ್ಯವಾಗದೇ ಅಸಮಾಧಾನದಿಂದ ತಿರುಗಾಡುತ್ತಿದ್ದಾರೆ. ರೈತರ ಬಗ್ಗೆ ಸಾಕಷ್ಟು ಮಾತನಾಡುವ ಉಪ ಮುಖ್ಯಮಂತ್ರಿ ಹಾಗೂ ಸಚಿವರು ರೈತರಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ‍ಕ್ಷದ ತೆಲಸಂಗ ಬ್ಲಾಕ್‌ ಅಧ್ಯಕ್ಷ ಶ್ರೀಕಾಂತ ಪೂಜಾರಿ, ಮುಖಂಡರಾದ ಸುನೀಲ ಸಂಕ, ರಮೇಶ ಸಿಂದಗಿ, ದರೇಪ್ಪ ಠಕ್ಕಣ್ಣವರ, ನಿಶಾಂತ ದಳವಾಯಿ, ಸಂಜಯ ಕಾಂಬಳೆ, ರೇಖಾ ಪಾಟೀಲ, ಸುನೀತಾ ಐಹೊಳೆ, ಅಪ್ಪಾಸಾಬ ಅಲಿಬಾದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT